ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ತಂದೆ, ಮಗ ಹಾಗು ಕತ್ತೆ
ತಂದೆ ಹಾಗು ಮಗ ತಮ್ಮ ಕತ್ತೆಯೊಂದಿಗೆ ನಡೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಅದೇ ದಾರಿಯಲ್ಲಿ ಹೋಗುತ್ತಿದ್ದ ಹಳ್ಳಿಯವನೊಬ್ಬ ಹೇಳಿದ, “ನೀವೆಂಥ ಮೂರ್ಖರು. ಕತ್ತೆ ಇರುವುದೇ ಸವಾರಿ ಮಾಡಲೋಸುಗವಲ್ಲವೆ?” ಇದನ್ನು ಕೇಳಿದ ತಂದೆ ಮಗನನ್ನು ಕತ್ತೆಯ ಮೇಲೆ ಕುಳ್ಳಿರಿಸಿದ. ಇಂತು ಅವರು ಪ್ರಯಾಣ ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಅವರು ಒಂದು ಗುಂಪಾಗಿ ಹೋಗುತ್ತಿದ್ದ ಕೆಲವರನ್ನು ಸಂಧಿಸಿದರು. ಅವರ ಪೈಕಿ ಒಬ್ಬ ಹೇಳಿದ, “ನೋಡಿ, ನೋಡಿ. ಆ ಯುವಕ ಎಷ್ಟು ಸೋಮಾರಿ! ತನ್ನ ತಂದೆ ನಡೆಯುತ್ತಿರುವಾಗ, ತಾನು ಸವಾರಿ ಮಾಡುತ್ತಿದ್ದಾನೆ.” ಇದನ್ನು ಕೇಳಿದ ತಂದೆ ಮಗನನ್ನು ಕೆಳಕ್ಕ ಇಳಿಸಿ ಅವನಿಗೆ ನಡೆಯುವಂತೆ ಆಜ್ಞಾಪಿಸಿ ತಾನು ಕತ್ತೆಯೇರಿ ಸವಾರಿ ಮಾಡತೊಡಗಿದ. ಇಂತು ಸ್ವಲ್ಪ ದೂರ ಹೋಗುವಷ್ಟರಲ್ಲಿ ಅವರು ಈರ್ವರು ಹೆಂಗಸರನ್ನು ಸಂಧಿಸಿದರು. ಅವರ ಪೈಕಿ ಒಬ್ಬಳು ಇನ್ನೊಬ್ಬಳಿಗೆ ಹೇಳಿದಳು, “ತನ್ನ ಮಗ ಕಷ್ಟದಿಂದ ನಡೆಯುತ್ತಿರುವಾಗ ತಾನು ಮಾತ್ರ ನಾಚಿಕೆ ಇಲ್ಲದೆ ಸವಾರಿ ಮಾಡುತ್ತಿರುವ ಸೋಮಾರಿ ಗಮಾರನನ್ನು ನೋಡು!” ಇದನ್ನು ಕೇಳಿದ ತಂದೆಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಕೊನೆಗೆ ಆತ ಕತ್ತೆಯ ಮೇಲೆ ತನ್ನ ಮುಂದೆ ಮಗನನ್ನೂ ಕೂರಿಸಿಕೊಂಡು ಪ್ರಯಾಣ ಮುಂದುವರಿಸಿದ. ಸ್ವಲ್ಪ ಸಮಯದಲ್ಲಿ ಅವರು ಪಟ್ಟಣವನ್ನು ತಲುಪಿದರು. ಅಲ್ಲಿ ಇವರನ್ನು ನೋಡಿದವರೆಲ್ಲರೂ ಮೂದಲಿಸುತ್ತಿದ್ದರು. ತಮ್ಮನ್ನು ಏಕೆ ಮೂದಲಿಸುತ್ತಿರುವಿರಿ ಎಂಬುದಾಗಿ ಒಬ್ಬನನ್ನು ಕೇಳಿದಾಗ ಅವನು ಕೇಳಿದ, “ಬಡಪಾಯಿ ಕತ್ತೆಯ ಮೇಲೆ ನಿಮ್ಮಿಬ್ಬರ ಭಾರವನ್ನೂ ಹೇರಿ ಅದನ್ನು ಹಿಂಸಿಸಲು ನಿಮಗೆ ನಾಚಿಕೆ ಆಗುವುದಿಲ್ಲವೇ?” ಇಬ್ಬರೂ ಕತ್ತೆಯಿಂದ ಕೆಳಕ್ಕಿಳಿದು ಬಹಳ ಹೊತ್ತು ಮುಂದೇನು ಮಾಡಬೇಕೆಂಬುದರ ಕುರಿತು ಆಲೋಚಿಸಿದರು. ಕೊನೆಗೆ ಮರದ ಗಣೆಯೊಂದನ್ನು ಕಡಿದು ತಂದು ಅದಕ್ಕೆ ಕತ್ತೆಯ ಕಾಲುಗಳನ್ನು ಕಟ್ಟಿ ತಾವೇ ಅದನ್ನು ಹೊತ್ತುಕೊಂಡು ನಡೆಯಲಾರಂಭಿಸಿದರು. ಇದನ್ನು ನೋಡಿದ ಎಲ್ಲರೂ ಜೋರಾಗಿ ನಗುತ್ತಿದ್ದರು. ಆದರೂ ಅವರು ಕತ್ತೆಯನ್ನು ಹೊತ್ತುಕೊಂಡು ನಡೆಯುತ್ತಲೇ ಇದ್ದರು. ಇಂತು ಅವರು ಸೇತುವೆಯೊಂದರ ಮೇಲೆ ಹೋಗುತ್ತಿರುವಾಗ ಕತ್ತೆಯ ಒಂದು ಹಿಂಗಾಲುಗಳನ್ನು ಕಟ್ಟಿದ್ದ ಹಗ್ಗದ ಗಂಟು ಸಡಿಲವಾಗಿ ಒಂದು ಕಾಲು ಹೊರಬಂದಿತು. ಕತ್ತೆ ಆ ಕಾಲಿನಿಂದ ಒದೆಯಲಾರಂಭಿಸಿದಾಗ ಮಗನ ಆಯತಪ್ಪಿ  ಆತ ತನ್ನ ತುದಿಯ ಗಣೆಯನ್ನು ಕೆಳಕ್ಕೆ ಹಾಕಿದ. ಈ ಗೊಂದಲದಲ್ಲಿ ಕತ್ತೆ ಗಣೆಯಿಂದ ಜಾರಿ ಉರುಳಿ ನದಿಗೆ ಬಿದ್ದಿತು. ಅದರ ಮುಂಗಾಲುಗಳನ್ನು ಕಟ್ಟಿದ್ದರಿಂದ ಈಜಲಾಗದೆ ಅದು ಮುಳುಗಿ ಸತ್ತು ಹೋಯಿತು. ಈ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದ ವೃದ್ಧನೊಬ್ಬ ಹೇಳಿದ, “ಈ ಅನುಭವ ನಿನಗೊಂದು ಒಳ್ಳೆಯ ಪಾಠ ಕಲಿಸಿತಲ್ಲವೆ? ಎಲ್ಲರನ್ನೂ ತೃಪ್ತಿ ಪಡೆಸಲು ಹೊರಟರೆ ಯಾರನ್ನೂ ತೃಪ್ತಿಪಡಿಸಲಾಗುವುದಿಲ್ಲ.”

*****

೨. ಸತ್ಯದ ನಾಡು
ಜಾಗೃತರಾಗಿರುವಾಗಿನ ಜೀವನ ಎಂಬುದಾಗಿ ಜನರು ಸಾಮಾನ್ಯವಾಗಿ ಯಾವುದನ್ನು ಉಲ್ಲೇಖಿಸುತ್ತಾರೋ ಅದು ಪರಿಪೂರ್ಣವಾಗಿರಲು ಸಾಧ್ಯವಿಲ್ಲ ಎಂಬ ನಂಬಿಕೆ ಉಳ್ಳವನೊಬ್ಬನಿದ್ದ. ಆ ಕಾಲದ ನಿಜವಾದ ಗುರುವನ್ನು ಆತ ಹುಡುಕುತ್ತಿದ್ದ. ಅವನು ಅನೇಕ ಪುಸ್ತಕಗಳನ್ನು ಓದಿದ, ಆಧ್ಯಾತ್ಮಿಕ ಚಿಂತಕರ ವಿಭಿನ್ನ ಗುಂಪುಗಳ ಸದಸ್ಯನಾದ, ಒಬ್ಬರಾದ ನಂತರ ಒಬ್ಬರಂತೆ ಅನೇಕ ಬೋಧಕರ ಸಾಧನೆಗಳನ್ನು ವೀಕ್ಷಿಸಿದ. ಆಕರ್ಷಕ ಅನ್ನಿಸಿದ ಅನೇಕ ಆಧ್ಯಾತ್ಮಿಕ ಕಸರತ್ತುಗಳನ್ನು ಮಾಡಿದ, ಆದೇಶಗಳನ್ನು ಪಾಲಿಸಿದ.

ಕೆಲವು ಅನುಭವಗಳಿಂದ ಆತ ಹಿಗ್ಗಿದ. ಕೆಲವು ಸಂದರ್ಭಗಳಲ್ಲಿ ಆತ ಗೊಂದಲಕ್ಕೀಡಾದ. ಆಧ್ಯಾತ್ಮಿಕ ವಿಕಾಸದ ಯಾವ ಹಂತದಲ್ಲಿ ತಾನಿದ್ದೇನೆಂಬುದರ ಕುರಿತು ಆತನಿಗೇನೂ ತಿಳಿದಿರಲಿಲ್ಲ. ತನ್ನ ಅನ್ವೇಷಣೆ ಯಾವಾಗ ಎಲ್ಲಿ ಅಂತ್ಯಗೊಳ್ಳುತ್ತದೆಂಬುದರ ಕುರಿತಾಗಿಯೂ ಅವನಿಗೆ ಏನೇನೂ ತಿಳಿದಿರಲಿಲ್ಲ.

ಒಂದು ದಿನ ಆತ ತನ್ನ ವರ್ತನೆಯನ್ನು ತಾನೇ ಪುನರ್ಪರಿಶಶೀಲಿಸುತ್ತಾ ಎಲ್ಲಿಗೋ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಅಂದಿನ ಕಾಲದ ಖ್ಯಾತ ಪ್ರಾಜ್ಞನೊಬ್ಬನ ಮನೆಯ ಸಮೀಪದಲ್ಲಿ ತಾನಿರುವುದನ್ನು ಗಮನಿಸಿದ. ಆ ಮನೆಯ ಕೈದೋಟದಲ್ಲಿ ಆತ ಸತ್ಯದತ್ತ ಹೋಗುವ ಸರಿಯಾದ ದಾರಿಯನ್ನು ತೋರಿಸಬಲ್ಲವನಾಗಿದ್ದ ಖಿದ್ರ್‌ನನ್ನು ಸಂಧಿಸಿದ.
ಬಲು ಸಂಕಟಪಡುತ್ತಿದ್ದ ಅನೇಕ ದುಃಖಿತರು ಇದ್ದ ತಾಣವೊಂದಕ್ಕೆ ಅವನನ್ನು ಖಿದ್ರ್ ಕರೆದೊಯ್ದ. ಅವರು ಯಾರು ಎಂಬುದನ್ನು ವಿಚಾರಿಸಿದಾಗ ಅವರು ಹೇಳಿದರು, “ನಾವು ನಿಜವಾದ ಬೋಧನೆಗಳನ್ನು ಅನುಸರಿಸದೇ ಇದ್ದವರು, ನಮ್ಮ ವಚನಗಳಿಗೆ ಬದ್ಧರಾಗಿರದೇ ಇದ್ದವರು, ಸ್ವಘೋಷಿತ ಗುರುಗಳನ್ನು ಗೌರವಿಸಿದವರು.”
 
ತದನಂತರ ಖಿದ್ರ್ ಅವರನ್ನು ಆಕರ್ಷಕ ರೂಪವಿದ್ದವರೂ ಹರ್ಷಚಿತ್ತರೂ ಇದ್ದ ತಾಣವೊಂದಕ್ಕೆ ಕರೆದೊಯ್ದ. ಅವರು ಯಾರು ಎಂಬುದನ್ನು ವಿಚಾರಿಸಿದಾಗ ಅವರು ಹೇಳಿದರು, “ವಿಶ್ವ ನಿಯಂತ್ರಕ ತತ್ವದ ನಿಜವಾದ ಸಂಕೇತಗಳನ್ನು ಅನುಸರಿಸದೇ ಇದ್ದವರು ನಾವು.” ಆತ ಕೇಳಿದ “ಅಂದ ಮೇಲೆ ನೀವು ಸಂತೋಷದಿಂದಿರಲು ಹೇಗೆ ಸಾಧ್ಯವಾಯಿತು?” ಆ ಪ್ರಶ್ನೆಗೆ ಅವರು ಇಂತು ಉತ್ತರಿಸಿದರು: “ನಾವು ಸತ್ಯಕ್ಕೆ ಬದಲಾಗಿ ಸಂತೋಷವನ್ನು ಆಯ್ಕೆ ಮಾಡಿಕೊಂಡದ್ದರಿಂದ. ಈಗಷ್ಟೇ ನೀನು ನೋಡಿದವರು ಸ್ವಘೋಷಿತ ಗುರುಗಳನ್ನೂ ದುಃಖವನ್ನೂ ಆಯ್ಕೆ ಮಾಡಿಕೊಂಡಂತೆಯೇ!”
“ಆದರೆ ಸಂತೋಷ ಎಂಬುದು ಮಾನವನ ಆದರ್ಶವಾಗಿದೆಯಲ್ಲವೇ?” ಕೇಳಿದನಾತ.

ಅವರು ಹೇಳಿದರು, “ಮಾನವನ ಅಂತಿಮ ಗುರಿ ಸತ್ಯ. ಸತ್ಯವು ಸಂತೋಷಕ್ಕಿಂತ ಶ್ರೇಷ್ಠವಾದದ್ದು. ಸತ್ಯ ದರ್ಶನವಾದವನು ತಾನು ಬಯಸಿದ ಚಿತ್ತಸ್ಥಿತಿಯನ್ನು ಪಡೆಯಬಹುದು ಅಥವ ಏನನ್ನೂ ಪಡೆಯದಿರಲೂಬಹುದು. ಸತ್ಯವೇ ಸಂತೋಷ, ಸಂತೋಷವೇ ಸತ್ಯ ಎಂಬುದಾಗಿ ನಾವು ನಟಿಸಿದೆವು. ಜನರು ಅದನ್ನು ನಂಬಿದರು. ನೀನೂ ಸಹ ಇಲ್ಲಿಯ ವರೆಗೆ ಸಂತೋಷ ಮತ್ತು ಸತ್ಯ ಎರಡೂ ಒಂದೇ ಎಂಬುದಾಗಿ ಕಲ್ಪಿಸಿಕೊಂಡಿದ್ದೆ. ಆದರೆ ಸಂತೋಷವು ನಿನ್ನನ್ನು ದುಃಖದಂತೆಯೇ ಬಂಧಿಯಾಗಿಸುತ್ತದೆ.”
ತದನಂತರ ಅವನು ಹಾಗು ಖಿದ್ರ್ ಇಬ್ಬರೂ ಮೊದಲು ಅವರಿದ್ದ ಕೈತೋಟಕ್ಕೆ ಒಯ್ಯಲ್ಪಟ್ಟರು.

“ನಿನ್ನ ಒಂದು ಆಸೆಯನ್ನು ನಾನು ಈಡೇರಿಸುತ್ತೇನೆ,” ಎಂಬುದಾಗಿ ಹೇಳಿದ ಖಿದ್ರ್.
ಅವನ ಕೋರಿಕೆ ಇಂತಿತ್ತು: “ನನ್ನ ಹುಡುಕಾಟದಲ್ಲಿ ನಾನೇಕೆ ಯಶಸ್ವಿಯಾಗಲಿಲ್ಲ ಹಾಗು ಅದರಲ್ಲಿ ಯಶಸ್ವಿಯಾಗುವುದು ಹೇಗೆ ಎಂಬುದನ್ನು ತಿಳಿಯಲಿಚ್ಛಿಸುತ್ತೇನೆ.”
ಖಿದ್ರ್ ಹೇಳಿದ, “ನೀನು ನಿನ್ನ ಜೀವನವನ್ನು ಹೆಚ್ಚುಕಮ್ಮಿ ವ್ಯರ್ಥಮಾಡಿರುವೆ. ಸತ್ಯ ದರ್ಶನ ನಿನ್ನ ನಿಜವಾದ ಗುರಿಯಾಗಿರಲೇ ಇಲ್ಲ, ನಿನ್ನ ಗುರಿ ವೈಯಕ್ತಿಕವಾಗಿ ಆನಂದಭರಿತ ಜೀವನ ಗಳಿಸುವುದಾಗಿತ್ತು.”
ಆತ ಪ್ರತಿಕ್ರಿಯಿಸಿದ, “ಆದರೂ ನಾನು ನಿನ್ನನ್ನು ಕಾಣುವಂತಾಯಿತು. ಎಲ್ಲರಿಗೂ ಇಂಥಾಗುವುದಿಲ್ಲ.”
ಖಿದ್ರ್ ಹೇಳಿದ, “ಅದೇಕೆಂದರೆ ಒಂದು ಕ್ಷಣ ಕಾಲ ನೀನು ಪ್ರಾಮಾಣಿಕವಾಗಿ ಬೇರೆ ಯಾವ ಉದ್ದೇಶವೂ ಇಲ್ಲದೆ ನಿಜವಾಗಿಯೂ ಸತ್ಯದರ್ಶನ ಮಾಡಲು ಬಯಸಿದೆ. ಆ ಒಂದು ಕ್ಷಣಕಾಲ ನೀನು ಪ್ರಾಮಾಣಿಕವಾಗಿ ಇದ್ದುದಕ್ಕಾಗಿ ನಾನು ನಿನಗೆ ಗೋಚರಿಸಿದೆ.”

ತಾನು ಅಳಿದರೂ ಪರವಾಗಿಲ್ಲ, ಸತ್ಯದರ್ಶನ ಮಾಡಲೇಬೇಕೆಂಬ ಉತ್ಕಟಾಕಾಂಕ್ಷೆ ಅವನ ಮನಸ್ಸಿನಲ್ಲಿ ಮೂಡಿತು.
ಇಂತಿದ್ದರೂ ಖಿದ್ರ್ ಅವನನ್ನು ಅಲ್ಲಿಯೇ ಬಿಟ್ಟು ಎಲ್ಲಿಗೋ ಹೋಗಲಾರಂಭಿಸಿದ, ಖಿದ್ರ್ನನ್ನು ಹಿಂಬಾಲಿಸಿ ಅವನು ಓಡಲಾರಂಭಿಸಿದ.
ಖಿದ್ರ್ ಅವನನ್ನು ಕುರಿತು ಹೇಳಿದ, “ನೀನು ನನ್ನನ್ನು ಹಿಂಬಾಲಿಸಬೇಡ. ನಾನೀಗ ಸುಳ್ಳುಗಳಿಂದ ತುಂಬಿರುವ ಸಾಧಾರಣ ಲೋಕಕ್ಕೆ ಹೋಗುತ್ತಿದ್ದೇನೆ. ನಾನು ಮಾಡಬೇಕಾದ ಕೆಲಸ ಮಾಡಲು ತಕ್ಕುದಾದ ಸ್ಥಳವೇ ಅದು.”
ಅಚ್ಚರಿಯಿಂದ ಆತ ಸುತ್ತಲೂ ನೋಡಿದ. ಅವನು ಪ್ರಾಜ್ಞ ಖಿದ್ರ್‌ನ ಕೈತೋಟದಲ್ಲಿ ಇರಲೇ ಇಲ್ಲ. ಆತನಿದ್ದದ್ದು ಸತ್ಯದ ನಾಡಿನಲ್ಲಿ!

*****

೩. ಹುಲಿಯೂ ನರಿಯೂ
ತನ್ನ ಮುಂಗಾಲುಗಳನ್ನು ಕಳೆದುಕೊಂಡಿದ್ದ ನರಿಯೊಂದು ಕಾಡಿನಲ್ಲಿ ವಾಸಿಸುತ್ತಿತ್ತು. ಅದು ಹೇಗೆ ಕಾಲುಗಳನ್ನು ಕಳೆದುಕೊಂಡಿತು ಎಂಬುದು ಯಾರಿಗೂ ತಿಳಿದಿರಲಿಲ್ಲ. ಬಹುಶಃ ಕಾಡುಪ್ರಾಣಿಗಳನ್ನು ಹಿಡಿಯಲೋಸುಗ ಯಾರೋ ಇಟ್ಟಿದ್ದ ಸಾಧನದಿಂದ ತಪ್ಪಿಸಿಕೊಳ್ಳುವಾಗ ಇಂತಾಗಿದ್ದಿರಬಹುದು. ಕಾಡಿನ ಅಂಚಿನಲ್ಲಿ ವಾಸಿಸುತ್ತಿದ್ದ ಒಬ್ಬನಿಗೆ ಆಗೊಮ್ಮೆ ಈಗೊಮ್ಮೆ ಈ ನರಿ ಗೋಚರಿಸುತ್ತಿತ್ತು. ಈ ನರಿ ಹೇಗೆ ಆಹಾರ ಸಂಪಾದಿಸುತ್ತದೆ ಎಂಬುದನ್ನು ತಿಳಿಯುವ ಕುತೂಹಲ ಅವನಲ್ಲಿ ಮೂಡಿತು. ಒಂದು ದಿನ ಅನತಿ ದೂರದಲ್ಲಿ ನರಿ ಇದ್ದಾಗ ಹುಲಿಯೊಂದು ಅವನಿದ್ದ ತಾಣದ ಸಮೀಪದಲ್ಲಿ ಹುಲಿಯೊಂದು ಹೋಗುತ್ತಿರುವದನ್ನು ಕಂಡು ಬಲು ತುರ್ತಾಗಿ ಅವನು ಅಡಗಿ ಕುಳಿತುಕೊಳ್ಳಬೇಕಾಯಿತು. ಆ ಹುಲಿ ಆಗ ತಾನೇ ಬೇಟೆಯಾಡಿದ ಪ್ರಾಣಿಯೊಂದನ್ನು ಕಚ್ಚಿ ಎಳೆದುಕೊಂಡು ಬರುತ್ತಿತ್ತು. ನರಿಗೆ ಕಾಣಿಸುಂತೆ ಹುಲಿ ಒಂದೆಡೆ ಕುಳಿತು ಹೊಟ್ಟೆ ತುಂಬುವಷ್ಟು ಮಾಂಸ ತಿಂದು ಉಳಿದದ್ದನ್ನು ಅಲ್ಲಿಯೇ ಬಿಟ್ಟು ಹೋಯಿತು. ಇಂತು ಹುಲಿ ಬಿಟ್ಟ ಆಹಾರವನ್ನು ನರಿ ತಿಂದಿತು.

ಮಾರನೆಯ ದಿನವೂ ಇಡೀ ಜಗತ್ತಿಗೆ ಆಹಾರ ಸರಬರಾಜು ಮಾಡುವಾತ ಅದೇ ಹುಲಿಯ ಮೂಲಕ ನರಿಗೆ ಆಹಾರದ ಸರಬರಾಜು ಮಾಡಿದ! ಆಗ ಆತ ಇಂತು ಆಲೋಚಿಸಿದ: “ಈ ನಿಗೂಢ ವಿದಾನದಲ್ಲಿ ನರಿಯ ಪೋಷಣೆ ಸಾಧ್ಯವಾಗುವುದಾದರೆ, ಅಗೋಚರ ಮಾನವಾತೀತ ಶಕ್ತಿಯೊಂದು ಆಹಾರ ಸರಬರಾಜು ಮಾಡುವುದಾದರೆ ನಾನೇಕೆ ಒಂದು ಮೂಲೆಯಲ್ಲಿ ಆರಾಮವಾಗಿ ಕುಳಿತುಕೊಳ್ಳಬಾರದು ಹಾಗು ಅಲ್ಲಿಯೇ ನನ್ನ ದೈನಂದಿನ ಆಹಾರ ನನಗೆ ಸರಬರಾಜು ಆಗಬಾರದು?”

ಇಂಥದ್ದೊಂದು ಪವಾಡವಾಗುವುದೆಂಬ ದೃಢವಾದ ನಂಬಿಕೆ ಅವನಲ್ಲಿ ಇದ್ದದ್ದರಿಂದ ಆಹಾರಕ್ಕಾಗಿ ಕಾಯುತ್ತಾ ಅಲ್ಲಿಯೇ ಕುಳಿತಿದ್ದ. ದಿನಗಳುರುಳಿದರೂ ಏನೂ ಆಗಲಿಲ್ಲ. ದಿನೇದಿನೇ ಅವನ ತೂಕ ಕಮ್ಮಿಯಾಗುತ್ತಿತ್ತು, ಅವನು ಬಲ ಕ್ಷೀಣಿಸುತ್ತಿತ್ತು, ಕೊನೆಗೊಮ್ಮೆ ಹೆಚ್ಚುಕಮ್ಮಿ ಅಸ್ಥಿಪಂಜರವೇ ಆದ. ಪ್ರಜ್ಞಾಹೀನನಾಗುವ ಸ್ಥಿತಿಯನ್ನು ಅವನು ತಲುಪಿದಾಗ ಅಶರೀರವಾಣಿಯೊಂದು ಆತನಿಗೆ ಕೇಳಿಸಿತು: “ಅಯ್ಯಾ ನೀನು ವಿಶ್ವನಿಯಂತ್ರಕ ತತ್ವವನ್ನು ತಪ್ಪಾಗಿ ಅರ್ಥೈಸಿರುವೆ. ಈಗ ಸತ್ಯ ಏನೆಂಬುದನ್ನು ತಿಳಿ. ವಿಕಲಾಂಗ ನರಿಯನ್ನು ಅನುಕರಿಸುವುದಕ್ಕೆ ಬದಲಾಗಿ ನೀನು ಹುಲಿಯ ವರ್ತನೆಯನ್ನು ಅನುಕರಿಸಬೇಕಿತ್ತು!”

*****

೪. ಸಂಯಮ ತಪ್ಪುವಂತೆ ಉದ್ರೇಕಿಸುವ ಸಾವು
ಹಿಂದೊಮ್ಮೆ ೬೦ ಮಂದಿ ಶಿಷ್ಯಂದಿರಿದ್ದ ಫಕೀರನೊಬ್ಬನಿದ್ದ. ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ತನಗೆ ತಿಳಿದಿದ್ದೆಲ್ಲವನ್ನೂ ಆತ ಶಿಷ್ಯರಿಗೆ ಕಲಿಸಿದ ನಂತರ ಅವರಿಗೆ ಹೊಸ ಅನುಭವಗಳನ್ನು ಒದಗಿಸಬೇಕೆಂದು ಅವನು ತೀರ್ಮಾನಿಸಿದ.  ಎಲ್ಲರೂ ಒಟ್ಟಾಗಿ ಒಂದು ಸುದೀರ್ಘ ಪ್ರಯಾಣ ಮಾಡಬೇಕೆಂಬುದಾಗಿಯೂ ಆ ಅವಧಿಯಲ್ಲಿ ತನಗು ತಿಳಿಯದ ಏನಾದರೊಂದು ವಿದ್ಯಮಾನ ಜರಗುವುದಾಗಿಯೂ ಆತ ತನ್ನ ಶಿಷ್ಯರಿಗೆ ಹೇಳಿದ. ವಿದ್ಯಾಭ್ಯಾಸದ ಈ ಹಂತವನ್ನು ತಲುಪಲು ತಾನು ಕಲಿಸಿದ್ದರಲ್ಲಿ ಎಷ್ಟು ಬೇಕೋ ಅಷ್ಟನ್ನು ಮನೋಗತ ಮಾಡಿಕೊಂಡವರು ಮಾತ್ರ ಈ ಪ್ರಯಾಣದಲ್ಲಿ ಕೊನೆಯ ವರೆಗೆ ತನ್ನೊಂದಿಗೆ ಇರಲು ಸಾಧ್ಯ ಎಂಬುದನ್ನೂ ಸ್ಪಷ್ಟಪಡಿಸಿದ. 

“ಫಕೀರನಿಗೆ ಬದಲಾಗಿ ನಾನು ಸಾಯಲೇ ಬೇಕು” ಎಂಬ ವಾಕ್ಯವನ್ನು ಕಂಠಸ್ಥ ಮಾಡಿಕೊಳ್ಳಲು ಅವರಿಗೆ ಹೇಳಿದ. ಅಷ್ಟೇ ಅಲ್ಲದೆ ತಾನು ಎರಡೂ ಕೈಗಳನ್ನು ಮೇಲೆತ್ತಿದಾಗಲೆಲ್ಲ ಗಟ್ಟಿಯಾಗಿ ಅದನ್ನು ಹೇಳಬೇಕೆಂಬುದಾಗಿಯೂ ತಿಳಿಸಿದ. ಇದನ್ನು ಕೇಳಿದ ತಕ್ಷಣ ಶಿಷ್ಯರಿಗೆ ಫಕೀರನ ಉದ್ದೇಶದ ಕುರಿತು ಸಂಶಯ ಮೂಡಿತು. ಅವರು ಈ ಕುರಿತು ಮೆಲುದನಿಯಲ್ಲಿ ಗೊಣಗಲಾರಂಭಿಸಿದರು.
೬೦ ಮಂದಿ ಶಿಷ್ಯರ ಪೈಕಿ ೫೯ ಮಂದಿ ಅವನನ್ನು ಬಿಟ್ಟುಹೋದರು. ಪ್ರಯಾಣದ ಅವಧಿಯಲ್ಲಿ ಎಲ್ಲಿಯೋ ಒಂದೆಡೆ ಫಕೀರ ಗಂಭೀರವಾದ ಗಂಡಾಂತರವೊಂದನ್ನು ಎದುರಿಸಬೇಕಾಗುತ್ತದೆಂದೂ ಆ ಸಂದರ್ಭದಲ್ಲಿ ತನ್ನ ಬದಲು ಶಿಷ್ಯರನ್ನು ಬಲಿ ಕೊಡುವ  ಇರಾದೆ ಅವನದ್ದು ಎಂಬದಾಗಿ ಅವರು ನಂಬಿದ್ದರು. ಅವನು ಕೊಲೆಯಂಥ ಗುರುತರವಾದ ಅಪರಾಧವೊಂದನ್ನು ಮಾಡುವ ಯೋಜನೆ ತಯಾರಿಸುತ್ತಿರಬೇಕೆಂಬುದಾಗಿ ತಾವು ನಂಬಿರುವುದರಿಂದ ಅವನು ಹಾಕಿಸ ಷರತ್ತಿಗೆ ಒಳಪಟ್ಟು ಅವನೊಂದಿಗೆ ಪ್ರಯಾಣ ಮಾಡಲು ಸಾಧ್ಯವಿಲ್ಲವೆಂಬುದಾಗಿಯೂ ಅವರು ಅವನಿಗೆ ಹೇಳಿದರು.

ಉಳಿದಿದ್ದ ಒಬ್ಬ ಶಿಷ್ಯನೊಂದಿಗೆ ಪ್ರಯಾಣ ಆರಂಭಿಸಿದ. ಸಮೀಪದ ನಗರವೊಂದನ್ನು ಅವರು ಪ್ರವೇಶಿಸುವ ಮುನ್ನವೇ ಅದನ್ನು ಒಬ್ಬ ಪ್ರಜಾಪೀಡಕ ದುಷ್ಟ ರಾಜ ತನ್ನ ವಶಕ್ಕೆ ತೆಗೆದುಕೊಂಡಿದ್ದ. ತನ್ನ ಶಕ್ತಿಯ ನಾಟಕೀಯ ಪ್ರದರ್ಶನದಿಂದ ನಗರದ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸುವ ಉದ್ದೇಶದಿಂದ ಸೈನಿಕರನ್ನು ಕರೆದು ನಗರದ ಮೂಲಕ ಹಾದುಹೋಗುತ್ತಿರುವ ಯಾರಾದರೊಬ್ಬ ಅಮಾಯಕನೊಬ್ಬನನ್ನು ‘ಇವನೊಬ್ಬ ಕಿಡಿಗೇಡಿ’ ಎಂಬುದಾಗಿ ಆಪಾದಿಸಿ ಹಿಡಿದು ತರುವಂತೆ ಆಜ್ಞಾಪಿಸಿದ. ಅವನ ಅಣತಿಯಂತೆ ಸೈನಿಕರು ಯುಕ್ತ ದಾರಿಹೋಕನಿಗಾಗಿ ಹುಡುಕಲಾರಂಬಿಸಿದರು.
ಅವರ ಕಣ್ಣಿಗೆ ಬಿದ್ದ ಮೊದಲನೇ ವ್ಯಕ್ತಿಯೇ ಫಕೀರನ ಶಿಷ್ಯ. ಅವನನ್ನು ಅವರು ದಸ್ತಗಿರಿ ಮಾಡಿ ವಧಾಸ್ಥಾನದ ಸಮೀಪದಲ್ಲಿ ಇದ್ದ ರಾಜನ ಸಮ್ಮುಖಕ್ಕೆ ಎಳೆದೊಯ್ದರು. ಯಾರನ್ನಾದರೂ ಗಲ್ಲಿಗೇರಿಸುವ ಮುನ್ನ ಬಾರಿಸುತ್ತದ್ದ ನಗಾರಿಯನ್ನು ಸೈನಿಕರು ಬಾರಿಸತೊಡಗಿದ್ದರಿಂದ ಭಯಭೀತರಾದ ಜನ ವಧಾಸ್ಥಾನದ ಸುತ್ತ ಸೇರಿದರು. ಕಿಡಿಗೇಡಿಗಳನ್ನೇ ಆಗಲಿ, ತನ್ನ ವಿರುದ್ಧ ಸೊಲ್ಲೆತ್ತುವವರನ್ನೇ ಆಗಲಿ, ತನ್ನಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸುವವರನ್ನೇ ಆಗಲಿ ತಾನು ಸಹಿಸಿಕೊಳ್ಳುವುದಿಲ್ಲ ಎಂಬುದಾಗಿ ಘೋಷಿಸಿದ ರಾಜ. ಇದು ಕೇವಲ ಹೆದರಿಸುವ ಘೋಷಣೆಯಲ್ಲ ಎಂಬುದನ್ನು ಸಾಬೀತು ಪಡಿಸಲೋಸುಗ ಫಕೀರನ ಶಿಷ್ಯನಿಗೆ ಗಲ್ಲುಶಿಕ್ಷೆ ವಿಧಿಸಿದ. 

ಇದನ್ನು ಕೇಳಿದ ತಕ್ಷಣವೇ ಶಿಷ್ಯನನ್ನು ಹಾದಿಹೋಕನಾಗುವಂತೆ ಪ್ರೇರೇಪಿಸಿದ ತನ್ನ ತಪ್ಪಿಗಾಗಿ ಶಿಷ್ಯನ ಬದಲು ತನ್ನನ್ನೇ ಗಲ್ಲಿಗೇರಿಸುವಂತೆ ರಾಜನನ್ನು ಕೋರಿಕೊಳ್ಳುತ್ತಾ ಫಕೀರ ತನ್ನೆರಡೂ ಕೈಗಳನ್ನು ಮೇಲೆತ್ತಿದ್ದ. ತಕ್ಷಣವೇ ಫಕೀರನಿಗೆ ಬದಲಾಗಿ ತನ್ನನ್ನೇ ಗಲ್ಲಿಗೇರಿಸುವಂತೆ ಶಿಷ್ಯ ರಾಜನಿಗೆ ಕೇಳಿಸುವಂತೆ ಗಟ್ಟಿಯಾಗಿ ಕಿರುಚಿದ.
ಇದನ್ನು ಕೇಳಿದ ರಾಜ ದಿಗ್ಭ್ರಾಂತನಾದ. ಸಾಯಲು ಪೈಪೋಟಿ ನಡೆಸುತ್ತಿರುವ ಫಕೀರ ಹಾಗು ಅವನ ಶಿಷ್ಯ ಯಾವ ರೀತಿಯ ಜನರಾಗಿರಬಹುದು ಎಂಬ ಚಿಂತೆ ಅವನನ್ನು ಕಾಡತೊಡಗಿತು. ಅವರ ವರ್ತನೆಯನ್ನು ಶೌರ್ಯದ ಲಕ್ಷಣ ಎಂಬುದಾಗಿ ಪರಿಗಣಿಸಿ ಜನತೆ ತನಗೆ ವಿರುದ್ಧವಾದರೇನು ಮಾಡುವುದು ಎಂಬ ಚಿಂತೆಯೂ ಅವನನ್ನು ಕಾಡತೊಡಗಿತು. ಮುಂದೇನು ಮಾಡಬೇಕೆಂಬುದರ ಕುರಿತಾಗಿ ಸಲಹೆ ನೀಡುವಂತೆ ತನ್ನ ಆಒತ ಸಮಾಲೋಚಕರಿಗೆ ಹೇಳಿದ.

ಅವರು ತಮ್ಮತಮ್ಮೊಳಗೆ ಚರ್ಚಿಸಿ ಫಕೀರ ಹಾಗು ಅವನ ಶಿಷ್ಯನ ವರ್ತನೆ ಶೌರ್ಯದ ಸೂಚಕವಾಗಿದ್ದರೆ ಸಾಯಲು ಇಷ್ಟೊಂದು ಕಾತುರವೇಕೆ ಎಂಬುದನ್ನು ಫಕೀರನಿಂದ ತಿಳಿದು ಇನ್ನೂ ಕ್ರೂರವಾಗಿ ಅವರೊಂದಿಗೆ ವ್ಯವಹರಿಸುವುದರ ಮೂಲಕ ಜನರಲ್ಲಿ ಭಯಮೂಡಿಸುವುದರ ಹೊರತಾಗಿ ಬೇರೇನೂ ಮಾಡಲು ಸಾಧ್ಯವಿಲ್ಲವೆಂಬುದಾಗಿ ರಾಜನಿಗೆ ತಿಳಿಸಿದರು. 
ಅಂತೆಯೇ ರಾಜ ಕೇಳಿದಾಗ ಆ ಸ್ಥಳದಲ್ಲಿ ಆ ಮುಹೂರ್ತದಲ್ಲಿ ಯಾರು ಸಾವನ್ನಪ್ಪುತ್ತಾರೋ ಅವರು ಪುನಃ ಎದ್ದುಬಂದು ಅಮರರಾಗುತ್ತಾರೆ ಎಂಬ ಭವಿಷ್ಯವಾಣಿ ಇರುವುದೇ ತಮ್ಮ ನಡುವಿನ ಪೈಪೋಟಿಗೆ ಕಾರಣ ಎಂಬುದಾಗಿ ಫಕೀರ ತಿಳಿಸಿದ.

ತಾನೇ ಅಮರತ್ವ ಗಳಿಸದೇ ಇರುವಾಗ ಬೇರೊಬ್ಬ ಅದನ್ನು ಗಳಿಸಲು ಅವಕಾಶ ಏಕೆ ನೀಡಬೇಕು ಎಂಬುದರ ಕುರಿತು ಕ್ಷಣಕಾಲ ಆಲೋಚಿಸಿದ ರಾಜ ಫಕೀರ ಹಾಗು ಅವನ ಶಿಷ್ಯನಿಗೆ ಬದಲಾಗಿ ತಕ್ಷಣ ತನ್ನನ್ನೇ ಗಲ್ಲಿಗೇರಿಸುವಂತೆ ಆಜ್ಞಾಪಿಸಿದ.
ಆ ಕೂಡಲೆ ರಾಜನ ಸಹಚರರಲ್ಲಿ ಅತ್ಯಂತ ದುಷ್ಟರಾಗಿದ್ದವರೂ ಅಮರತ್ವ ಬಯಸಿ ತಮ್ಮನ್ನು ತಾವೇ ಬಾಕುವಿನಿಂದ ಇರಿದುಕೊಂಡು ಸತ್ತರು. ಅವರಾಗಲೀ ರಾಜನಾಗಲೀ ಪುನಃ ಏಳಲಿಲ್ಲ. ತತ್ಪರಿಣಾಮವಾಗಿ ಉಂಟಾದ ಗೊಂದಲದ ನಡುವೆ ಫಕೀರ ಹಾಗು ಅವನ ಶಿಷ್ಯ ಅಲ್ಲಿಂದ ಸದ್ದಿಲ್ಲದೇ ಹೊರಟು ಹೋದರು.

*****

೫. ನಾಯಿಯೂ ದೊಣ್ಣೆಯೂ ಸೂಫಿಯೂ
ಒಂದು ದಿನ ಸೂಫಿ ಸಂತನಂತೆ ಉಡುಪು ಧರಿಸಿದಾತನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯೊಂದು ಅವನಿಗೆದುರಾಯಿತು. ತನ್ನ ಕೈನಲ್ಲಿದ್ದ ದೊಣ್ಣೆಯಿಂದ ಅವನು ಅದಕ್ಕೆ ಹೊಡೆದ. ನಾಯಿ ತೀವ್ರ ನೋವಿನಿಂದ ಗೋಳಿಡುತ್ತಾ ಮಹಾ ಪ್ರಾಜ್ಞ ಅಬು ಸಯ್ಯದ್‌ನ ಹತ್ತಿರಕ್ಕೆ ಓಡಿ ಅವನ ಕಾಲುಗಳ ಮೇಲೆ ಬಿದ್ದು ತನ್ನ ಗಾಯಗೊಂಡ ಮುಂಗಾಲನ್ನು ತೋರಿಸಿ ತನ್ನೊಂದಿಗೆ ಇಷ್ಟು ಕ್ರೂರವಾಗಿ ವರ್ತಿಸಿದ ಸೂಫಿಗೆ ತಕ್ಕ ಶಿಕ್ಷೆ ವಿಧಿಸಿ ತನಗಾದ ಅನ್ಯಾಯಕ್ಕೆ ತಕ್ಕುದಾದ ನ್ಯಾಯ ಒದಗಿಸಿ ಕೊಡಬೇಕಾಗಿ ಕೋರಿತು.

ಆ ವಿವೇಕಿಯು ಈರ್ವರನ್ನೂ ಒಟ್ಟಿಗೆ ಸೇರಿಸಿ ಸೂಫಿಗೆ ಹೇಳಿದ, “ಓ ಮತಿಹೀನನೇ, ಮೂಕಪ್ರಾಣಿಯೊಂದರ ಜೊತೆ ಇಷ್ಟು ಕ್ರೂರವಾಗಿ ವರ್ತಿಸಲು ನಿನಗೆ ಹೇಗೆ ಸಾಧ್ಯವಾಯಿತು? ನೀನೇನು ಮಾಡಿರುವೆ ಎಂಬುದನ್ನು ಒಮ್ಮೆ ಸರಿಯಾಗಿ ನೋಡು!”
ಸೂಫಿ ಉತ್ತರಿಸಿದ: “ಅದು ನನ್ನ ತಪ್ಪಲ್ಲ, ನಾಯಿಯದ್ದೇ ತಪ್ಪು. ನಾನು ಸ್ವಸಂತೋಷಕ್ಕಾಗಿ ನಾಯಿಗೆ ಹೊಡೆಯಲಿಲ್ಲ. ಅದು ನನ್ನ ಬಟ್ಟೆಯನ್ನು ಹೊಲಸು ಮಾಡಿದ್ದಕ್ಕಾಗಿ ಹೊಡೆದೆ.
ಆದರೂ ನಾಯಿ ತನ್ನ ಪಟ್ಟು ಬಿಡಲಿಲ್ಲ.

ಅದ್ವಿತೀಯ ಪ್ರಾಜ್ಞ ನಾಯಿಯನ್ನು ಉದ್ದೇಶಿಸಿ ಇಂತೆಂದ: “ಅತ್ಯುತ್ತಮ ಪರಿಹಾರ ದೊರೆಯುವ ವರೆಗೆ ಕಾಯುವುದಕ್ಕೆ ಬದಲಾಗಿ ನಿನ್ನ ನೋವಿಗೊಂದು ಪರಿಹಾರ ಒದಗಿಸಲು ನನಗೆ ಅನುಮತಿ ಕೊಡು.”
ನಾಯಿ ಹೇಳಿತು, “ಓ ಮಹಾನ್‌ ವಿವೇಕಿಯೇ, ಈತ ಸೂಫಿಯಂತೆ ಉಡುಪು ಧರಿಸಿದ್ದನ್ನು ನೋಡಿ ನನಗೇನು ಹಾನಿ ಉಂಟು ಮಾಡಲಾರ ಎಂಬ ನಂಬಿಕೆಯಿಂದ ಅವನ ಸನಿಹಕ್ಕೆ ಹೋದೆ. ಅವನೇನಾದರೂ ಬೇರೆ ಉಡುಪು ಧರಿಸಿದ್ದಿದ್ದರೆ ನಾನು ಅವನಿಂದ ಬಹು ದೂರದಲ್ಲಿಯೇ ಇರುತ್ತಿದ್ದೆ. ಹೊರನೋಟಕ್ಕೆ ಸತ್ಯದ ಹಾದಿಯಲ್ಲಿ ಇರುವವರಂತೆ ಗೋಚರಿಸುವವರಿಂದ ಅಪಾಯವಿಲ್ಲ ಎಂಬುದಾಗಿ ನಂಬಿದ್ದೇ ನನ್ನ ತಪ್ಪು. ಅವನಿಗೆ ಶಿಕ್ಷೆ ವಿಧಿಸಬೇಕು ಎಂಬುದು ನಿಮ್ಮ ಇಚ್ಛೆಯಾಗಿದ್ದರೆ ಆಯ್ದ ಕೆಲವರು ಮಾತ್ರ ಧರಿಸಬಹುದಾದ ಆ ಉಡುಪನ್ನು ಅವನಿಂದ ಕಿತ್ತುಕೊಳ್ಳಿ. ಸತ್ಯದ ಮಾರ್ಗದಲ್ಲಿ ನಡೆಯುವವರು ಧರಿಸಬೇಕಾದ ಉಡುಪನ್ನು ಅವನು ಧರಿಸದಂತೆ ಪ್ರತಿಬಂಧಿಸಿ….”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Yallappa
6 years ago

Nice super I like it…

1
0
Would love your thoughts, please comment.x
()
x