ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಹೊಸತಾಗಿ ಮತಾಂತರಗೊಂಡವನು
ಒಂದು ಊರಿನಲ್ಲಿ ಒಬ್ಬ ಮುಸಲ್ಮಾನ ಹಾಗು ಒಬ್ಬ ಕ್ರೈಸ್ತಮತೀಯ ಸ್ನೇಹಿತರು ನೆರೆಹೊರೆವಾಸಿಗಳಾಗಿದ್ದರು. ಇವರೀರ್ವರಲ್ಲಿ ಪ್ರತಿಯೊಬ್ಬನಿಗೂ ಇನ್ನೊಬ್ಬನ ಯೋಗಕ್ಷೆಮದ ಕಾಳಜಿ ಇದ್ದದ್ದರಿಂದ ಆರೋಗ್ಯದ ಹಾಗು ಇನ್ನಿತರ ಖಾಸಗಿ ವಿಷಯಗಳ ಕುರಿತು ಆಗಾಗ್ಗೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು. ಬಲು ಶ್ರದ್ಧೆಯಿಂದ ಇಸ್ಲಾಂ ಮತಾಚರಣೆಗಳನ್ನು ಮಾಡುತ್ತಿದ್ದ ಮುಸಲ್ಮಾನನು ತನ್ನ ಮತದ ಹಿರಿಮೆಯನ್ನು ಬಹುವಾಗಿ ಹೇಳುತ್ತಿದ್ದದ್ದರ ಪರಿಣಾಮವಾಗಿ ಕ್ರೈಸ್ತಮತೀಯನು ಇಸ್ಲಾಂ ಮತಕ್ಕೆ ಮಾತಾಂತರಗೊಂಡನು. 
ಮತಾಂತರಗೊಂಡ ಮಾರನೆಯ ದಿನ ಬೆಳಗಿನ ಜಾವದಲ್ಲಿ ಅವನ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿದ್ದದರಿಂದ ಅರೆನಿದ್ದೆಯಲ್ಲಿದ್ದ ಅವನು ಒಳಗಿನಿಂದಲೇ ಗಟ್ಟಿಯಾಗಿ ಕಿರುಚಿದ, “ಯಾರದು?”
“ನಾನು ನಿನ್ನ ಮುಸಲ್ಮಾನ ಮಿತ್ರ.”

“ಇನ್ನೂ ಸೂರ್ಯೋದಯವೇ ಆಗಿಲ್ಲ. ಇಷ್ಟು ಬೆಳಗ್ಗೆ ನಿನಗೇನು ಬೇಕು?”
“ಬೇಗನೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಬಟ್ಟೆ ಧರಿಸಿ ಶುದ್ಧಿಸ್ನಾನ ಮಾಡಿ ಬಾ. ಇಬ್ಬರೂ ಒಟ್ಟಿಗೆ ಮಸೀದಿಗೆ ಹೋಗೋಣ.”

ಜೀವನದಲ್ಲಿ ಮೊದಲ ಸಲ ಶುದ್ಧಿಸ್ನಾನ ಮಾಡಿದ ಹೊಸ ಮುಸಲ್ಮಾನ ತನ್ನ ಸ್ನೇಹಿತನೊಂದಿಗೆ ಮಸೀದಿಗೆ ಹೋದ. ಮೊದಲನೆಯ ಪ್ರಾರ್ಥನೆಗೆ ನಿಗದಿಯಾಗಿದ್ದ ಸಮಯಕ್ಕಿಂತ ಎಷ್ಠೋ ಮೊದಲು ಅವರು ಮಸೀದಿಯನ್ನು ತಲುಪಿದರು. ಮಧ್ಯರಾತ್ರಿಯ ನಂತರ (ಕಡ್ಡಾಯವಲ್ಲದ) ಪ್ರಾರ್ಥನೆ ಮಾಡಬಹುದಾದ ಸಮಯ ಎಂಬುದಾಗಿ ಶಿಫಾರಸ್ಸು ಮಾಡಲಾಗಿದ್ದ ಸಮಯ ಅದಾಗಿತ್ತು. ಬೆಳಗಿನ ಜಾವ ಕಡ್ಡಾಯವಾಗಿ ಮಾಡಲೇ ಬೇಕಾಗಿದ್ದ ಮೊದಲನೇ ಪ್ರಾರ್ಥನೆಯ ಸಮಯದ ವರೆಗೂ ಅವರೀರ್ವರೂ ಅಲ್ಲಿಯೇ ಪ್ರಾರ್ಥನೆ ಮಾಡುತ್ತಾ ಕಾಲ ಕಳೆದರು. ತದನಂತರ ಮೊದಲನೇ ಪ್ರಾರ್ಥನೆಯ ವಿಧಿವಿಧಾನಗಳು ಹೊಸ ಮುಸಲ್ಮಾನನಿಗೆ ಸ್ಪಷ್ಟವಾಗುವ ವರೆಗೂ ಅವರು ಪ್ರಾರ್ಥಿಸಿದರು. ಪ್ರಾರ್ಥನೆ ಮುಗಿದ ತಕ್ಷಣ ಹೊಸ ಮುಸಲ್ಮಾನ ಮಸೀದಿಯಿಂದ ಹೊರಹೋಗುವ ಬಾಗಿಲಿನತ್ತ ಹೊರಟಾಗ ಅವನ ಮಿತ್ರ ಅವನನ್ನು ತಡೆದು ಕೇಳಿದ, “ನೀನೆಲ್ಲಿಗೆ ಹೋಗುತ್ತಿರುವೆ?”

“ನಾನು ಬೆಳಗಿನ ಪ್ರಾರ್ಥನೆ ಮಾಡಿದ್ದಾಗಿದೆ. ಇಲ್ಲಿ ಮಾಡಬೇಕಾದದ್ದು ಏನೂ ಬಾಕಿ ಉಳಿದಿಲ್ಲ. ಎಂದೇ ನಾನೀಗ ಮನೆಗೆ ಹೋಗುತ್ತೇನೆ.”
“ಸ್ವಲ್ಪ ನಿಲ್ಲು. ಸೂರ್ಯೋದಯವಾಗುವ ವರೆಗೆ ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿರೋಣ.”
“ಹಾಗೆಯೇ ಆಗಲಿ.”

ಸೂರ್ಯೋದಯವಾಗುವ ವರೆಗೆ ಹೊಸ ಮುಸಲ್ಮಾನ ಮಿತ್ರನ ಸಲಹೆಯಂತೆ ನಡೆದುಕೊಂಡ. ತದನಂತರ ಮನೆಗೆ ಹೊರಟಾಗ ಮಿಯ್ರ ಅವನ ಕೈನಲ್ಲಿ ಕುರ್‌ಆನ್‌ ಗ್ರಂಥವನ್ನಿಟ್ಟು ಹೇಳಿದ, “ಆಕಾಶದಲ್ಲಿ ಸೂರ್ಯ ಇನ್ನೂ ಸ್ವಲ್ಪ ಮೇಲೇರುವ ವರೆಗೆ ಇದನ್ನು ಓದು. ಇಂದು ನೀನು ಉಪವಾಸ ಮಾಡುವುದು ಒಳಿತು ಎಂಬುದು ನನ್ನ ಅಭಿಮತ. ಉಪವಾಸ ಮಾಡುವುದರಿಂದ ಆಗುವ ಲಾಭಗಳೇನು ಎಂಬುದು ಎಂಬುದು ನಿನಗೆ ಗೊತ್ತಿದೆಯಲ್ಲವೆ?”

ಹೊಸ ಮುಸಲ್ಮಾನ ಮಧ್ಯಾಹ್ನದ ವರೆಗೂ ಅಂತೆಯೇ ಮಾಡಿದ. ಆಗ ಮಿತ್ರ ಹೇಳಿದ, “ಈಗ ಮಧ್ಯಾಹ್ನದ ವೇಳೆ. ಆದ್ದರಿಂದ ಮಸೀದಿಯಲ್ಲಿಯೇ ಮಧ್ಯಾಹ್ನದ ಪ್ರಾರ್ಥನೆಯನ್ನೂ ಮಾಡೋಣ.” ಇಬ್ಬರೂ ಮಧ್ಯಾಹ್ನಧ ಪ್ರಾರ್ಥನೆಯನ್ನೂ ಮಾಡಿದರು. ಮಿತ್ರ ಪುನಃ ಹೇಳಿದ, “ಇನ್ನು ಸ್ವಲ್ಪ ಕಾಲಾನಂತರ ಅಪರಾಹ್ನದ ಪ್ರಾರ್ಥನೆ ಮಾಡಬೇಕಾಗುತ್ತದೆ. ಅದನ್ನು ಸರಿಯಾದ ವೇಳೆಯಲ್ಲಿಯೇ ಮಾಡಬೇಕು.” ಆ ಪ್ರಾರ್ಥನೆಯನ್ನೂ ಮಾಡಿದ್ದಾಯಿತು. ತದನಂತರ “ಹೆಚ್ಚುಕಮ್ಮಿ ಸಂಜೆಯಾಗಿದೆ,” ಎಂಬುದಾಗಿ ಹೇಳಿದ ಆ ಮಿತ್ರ ಹೊಸ ಮುಸಲ್ಮಾನನನ್ನು ಸಂಜೆಯ ಪ್ರಾರ್ಥನೆಯ ಸಮಯವಾಗುವ ವರೆಗೆ ಅಲ್ಲಿಯೇ ನಿಲ್ಲಿಸಿಕೊಂಡ. ಆ ಪ್ರಾರ್ಥನೆಯನ್ನೂ ಮುಗಿಸಿದ ಹೊಸ ಮುಸಲ್ಮಾನ ಉಪವಾಸವನ್ನು ಮುಗಿಸುವ ಸಲುವಾಗಿ ಮನೆಗೆ ಹೊರಟಾಗ ಮಿತ್ರ ಹೇಳಿದ, “ಇನ್ನೊಂದೇ ಒಂದು ಪ್ರಾರ್ಥನೆ ಮಾಡುವುದಿದೆ. ಅದೇ ಮಲಗುವ ವೇಳೆಯಲ್ಲಿ ಮಲಗುವ ಮುನ್ನ ಮಾಡಬೇಕಾದ ಪ್ರಾರ್ಥನೆ.”  ಅದಕ್ಕಾಗಿ ಅವರು ಅಲ್ಲಿಯೇ ಇನ್ನೂ ಒಂದು ತಾಸು ಕಾದಿದ್ದು ಆ ಒರಾರ್ಥನೆಯನ್ನೂ ಮಾಡಿದರು. ತದನಂತರ ಹೊಸ ಮುಸಲ್ಮಾನ ತನ್ನ ಮನೆಗೆ ಹಿಂದಿರುಗಿದ. 
ಮರುದಿನ ರಾತ್ರಿಯೂ ಹಿಂದಿನ ರಾತ್ರಿಯಲ್ಲಿ ಜರಗಿದಂತೆಯೇ ಅದೇ ವೇಳೆಯಲ್ಲಿ ಬಾಗಿಲನ್ನು ತಟ್ಟುವ ಶಬ್ದ ಹೊಸ ಮುಸಲ್ಮಾನನಿಗೆ ಕೇಳಿಸಿತು.

“ಯಾರದು?”
“ನಾನು ನಿನ್ನ ಮಿತ್ರ. ಬೇಗ ತಯಾರಾಗು. ಒಟ್ಟಿಗೇ ಮಸೀದಿಗೆ ಹೋಗೋಣ.”
“ನಾನು ನಿನ್ನೆ ರಾತ್ರಿ ಮಸೀದಿಯಿಂದ ಹಿಂದಿರುಗಿದ ತಕ್ಷಣವೇ ನಿನ್ನ ಇಸ್ಲಾಂ ಮತಕ್ಕೆ ರಾಜೀನಾಮೆ ನೀಡಿದ್ದೇನೆ. ದಯವಿಟ್ಟು ಇಲ್ಲಿಂದ ಹೋಗು, ಮಾಡಲು ಏನೂ ಕೆಲಸವಿಲ್ಲದ ಸೋಮಾರಿಯೊಬ್ಬನನ್ನು ಹುಡುಕು. ಅವನಿಗೆ ಇಡೀ ದಿನ ಮಸೀದಿಯಲ್ಲಿಯೇ ಇರಲು ಸಾಧ್ಯವಾಗಬಹುದು. ನಾನಾದರೋ ಒಬ್ಬ ಬಡವ. ಆಹಾರಕ್ಕಾಗಿ ನನ್ನನ್ನೇ ನಂಬಿರುವ ಹೆಂಡತಿ ಮಕ್ಕಳು ನನಗಿದ್ದಾರೆ. ಆದ್ದರಿಂದ ನಾನು ದುಡಿದು ಸಂಪಾದಿಸಲೋಸುಗ ಸಮಯ ವಿನಿಯೋಗಿಸುವುದೇ ಒಳಿತು.”

ತನ್ನ ಮಿತ್ರರಿಗೆ ಮತ್ತು ಸಂಗಾತಿಗಳಿಗೆ ಈ ಕತೆಯನ್ನು ಹೇಳಿದ ನಂತರ ಇಮಾಮ್‌ ಜಾಫರ್‌ ಸಾದಿಕ್‌ ಅವರಿಗೆ ಇಂತು ಸಲಹೆ ಮಾಡಿದ, “ಈ ರೀತಿ ಇಸ್ಲಾಂನ ನಿಷ್ಠಾವಂತ ಅನುಯಾಯಿಯೊಬ್ಬ ಒಬ್ಬನನ್ನು ಇಸ್ಲಾಂಗೆ ಮತಾಂತರಗೊಳಿಸಿದ ನಂತರ ಅವನು ಅದನ್ನು ಬಿಟ್ಟು ಓಡಿಹೋಗುವಂತೆ ಮಾಡಿದ.  ಮತಾಚರಣೆಯ ಹೆಸರಿನಲ್ಲಿ ಜನರಿಗೆ ಅನಗತ್ಯವಾಗಿ ತೊಂದರೆ ಕೊಡಬಾರದೆಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ. ವ್ಯಕ್ತಿಯೊಬ್ಬನ ಬಲಾಬಲಗಳನ್ನೂ ಸಾಮರ್ಥ್ಯವನ್ನೂ ಅಂದಾಜು ಮಾಡಿದ ನಂತರ ಅವರು ಮತಕ್ಕೆ ಆಕರ್ಷಿತರಾಗಲು ಏನನ್ನು ಎಷ್ಟು ಪ್ರಮಾಣದಲ್ಲಿ ಮಾಡಬೇಕೋ ಅಷ್ಟನ್ನೇ ಮಾಡಬೇಕೇ ವಿನಾ ಅವರು ಅದನ್ನು ತೊರೆದು ಓಡಿಹೋಗುವಂತೆ ಮಾಡಬಾರದು. ಹಿಂಸೆ, ಬಲಾತ್ಕಾರ, ದಬ್ಬಾಳಿಕೆ, ಭಯೋತ್ಪಾದನೆ ಉಮ್ಮಯಾದ್‌ಗಳ ನೀತಿಯೇ ವಿನಾ ನಮ್ಮದಲ್ಲ ಎಂಬುದು ನಿಮಗೆ ತಿಳಿದಿಲ್ಲವೇ? ನಮ್ಮದು ಭ್ರಾತೃತ್ವ, ಮನವೊಲಿಸಿಕೆ, ದಯಾಪರತೆ, ತಾಳ್ಮೆ ಆಧಾರಿತ ನೀತಿ ಎಂಬುದು ನೆನಪಿರಲಿ.”

*****

೨. ಕಳ್ಳನೂ ಕಂಬಳಿಯೂ

ಕಳ್ಳನೊಬ್ಬ ಸದ್ದುಮಾಡದೆ ಸೂಫಿ ಫಕೀರನ ಮನೆಯ ಒಳಹೊಕ್ಕು ಅಲ್ಲಿ ಕದಿಯಬಹುದಾದದ್ದು ಏನೂ ಇಲ್ಲದ್ದರಿಂದ ನಿರಾಸೆಯಿಂದ ಹೊರಬರುತ್ತಿದ್ದ. ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿದ್ದ ಫಕೀರ ಕಳ್ಳ ನಿರಾಶನಾಗಿದ್ದನ್ನು ಗಮನಿಸಿ ಕಳ್ಳ ಬರಿಗೈನಲ್ಲಿ ಹಿಂದಿರುಗಬಾರದೆಂದು ತಾನು ಹೊದ್ದಿದ್ದ ಕಂಬಳಿಯನ್ನು ಅವನ ಮೇಲಕ್ಕೆಸೆದ. 

*****

೩. ದೇವರಲ್ಲಿ ನಂಬಿಕೆ ಇದ್ದರೂ ಒಂಟೆಯನ್ನು ಕಟ್ಟಿಹಾಕು

ಮಾರುಕಟ್ಟೆಯಿಂದ ತನ್ನ ಮನೆಗೆ ಹಿಂದಿರುಗುತ್ತಿದ್ದಾತನೊಬ್ಬ ಅಂದು ತನ್ನ ಕಾರ್ಯಗಳಲ್ಲೆವೂ ಯಶಸ್ವಿಯಾಗಿ ಜರಗಿದ್ದಕ್ಕಾಗಿ ದಾರಿಯ ಬದಿಯಲ್ಲಿದ್ದ ಮಸೀದಿಯಲ್ಲಿ ದೇವರಿಗೆ ಧನ್ಯವಾದಗಳನ್ನು ಅರ್ಪಿಸಲು ನಿರ್ಧರಿಸಿದ.
ಆತ ತನ್ನ ಒಂಟೆಯನ್ನು ಹೊರಗೆ ಬಿಟ್ಟು ಮಸೀದಿಯ ಒಳ ಹೋಗಿ ಅಲ್ಲಾನಿಗೆ ಧನ್ಯವಾಗಳನ್ನು ಅರ್ಪಿಸುತ್ತಾ ಅನೇಕ ತಾಸುಗಳನ್ನು ಕಳೆದ. ಇನ್ನು ಮುಂದೆ ತಾನೊಬ್ಬ ಒಳ್ಳೆಯ ಮುಸಲ್ಮಾನನಾಗಿ ಇರುವುದಾಗಿಯೂ ಬಡವರಿಗೆ ಸಹಾಯ ಮಾಡುವುದಾಗಿಯೂ ತನ್ನ ಸಮುದಾಯದ ಆಧಾರಸ್ತಂಭವಾಗಿಯೂ ಇರುವುದಾಗಿ ಭರವಸೆಯನ್ನೂ ನೀಡಿದ.

ಅವನು ಮಸೀದಿಯಿಂದ ಹೊರಬರುವಾಗ ಕತ್ತಲಾಗಿತ್ತು. ಅವನ ಒಂಟೆ ಎಲ್ಲಿಗೋ ಹೊರಟುಹೋಗಿತ್ತು.
ಕೋಪೋದ್ರಿಕ್ತನಾದ ಆತ ಆಕಾಶದತ್ತ ಮುಷ್ಟಿ ತೋರುತ್ತಾ ಅಬ್ಬರಿಸಿದ,, “ಅಲ್ಲಾ ನೀನೊಬ್ಬ ದ್ರೋಹಿ! ನೀನು ನನಗೆ ಹೀಗೆ ಮಾಡಬಹುದೇ? ನಾನು ನಿನ್ನನ್ನು ಸಂಪೂರ್ಣವಾಗಿ ನಂಬಿದ್ದೆ. ನೀನಾದರೋ ನನಗೆ ಹಿಂದಿನಿಂದ ಇರಿದಿರುವೆ!

ಸಮೀಪದಲ್ಲಿ ಹೋಗಿತ್ತಿದ್ದ ಸೂಫಿ ಫಕೀರ ಇದನ್ನು ಕೇಳಿ ಲೊಚಗುಟ್ಟುತ್ತಾ ಹೇಳಿದ, “ಇಲ್ಲಿ ಕೇಳು. ದೇವರಲ್ಲಿ ವಿಶ್ವಾಸವಿರಲಿ, ಆದರೆ ನಿನ್ನ ಒಂಟೆಯನ್ನು ಕಟ್ಟಿ ಹಾಕು.” 

*****

೪. ಹಾಡುಹಕ್ಕಿ

ಹಿಂದೊಂದು ಕಾಲದಲ್ಲಿ ಯಶಸ್ವೀ ವ್ಯಾಪಾರಿಯೊಬ್ಬನಿದ್ದ. ಅವನ ಹತ್ತಿರ ಎಲ್ಲವೂ – ಸುಂದರಿ ಹೆಂಡತಿ, ಅತ್ಯಂತ ಪ್ರಿಯರಾದ ಮಕ್ಕಳು, ಬಹು ದೊಡ್ಡ ಮನೆ – ಇತ್ತು. ಅವನೂ ಅವನ ಕುಟುಂಬದವರೂ ಬಲು ಆನಂದದಿಂದ ಬಾಳುತ್ತಿದ್ದರು. ವಿದೇಶೀಯ ಹಾಡುಹಕ್ಕಿಯೊಂದು ಅವನ ಅತೀ ಹೆಮ್ಮೆಯ ಸ್ವತ್ತಾಗಿತ್ತು. ಅವನು ಅದಕ್ಕೆ ರುಚಿಯಾದ ತಿನಿಸುಗಳನ್ನು ನೀಡುತ್ತಿದ್ದನಾದರೂ ಯಾವಾಗಲೂ ಅದನ್ನು ಪಂಜರದೊಳಗೇ ಇಡುತ್ತಿದ್ದ. ಅವನ ಅತಿಥಿಗಳನ್ನು ರಂಜಿಸುವುದು ಅದರ ಕಾಯಕವಾಗಿತ್ತು.
 
ವ್ಯಾಪರಿ ಒಮ್ಮೆ ದಕ್ಷಿಣ ದಿಕ್ಕಿನಲ್ಲಿದ್ದ ದೂರದ ದೇಶಗಳಿಗೆ ಪಯಣಿಸುವ ಸನ್ನಿವೇಶ ಉಂಟಾಯಿತು. ವಿದೇಶಗಳಿಂದ ಯಾರಿಗೆ ಏನೇನು ತರಬೇಕು ಎಂಬುದಾಗಿ ತನ್ನ ಹೆಂಡತಿ ಹಾಗು ಮಕ್ಕಳನ್ನು ಕೇಳಿದ. ಅವರು ರೇಷ್ಮೆಯ ಸುಂದರವಾದ ದಿರಿಸುಗಳು, ಜೇನು, ಕೀಲಿಕೊಡುವ ಆಟಿಕೆಗಳನ್‌ಉ ತರಲು ಹೇಳಿದರು. ತದನಂತರ ಹಾಡುಹಕ್ಕಿಯನ್ನೂ ಅದಕ್ಕೇನು ತರಬೇಕೆಂಬುದಾಗಿ ಕೇಳಿದ.

ಅದು ಉತ್ತರಿಸಿತು, “ನನಗೊಂದು ಸಣ್ಣ ಉಪಕಾರ ಮಾಡಬೇಕೆಂಬುದಾಗಿ ವಿನಂತಿಸುತ್ತೇನೆ.”
“ಏನು ಬೇಕಾದರೂ ಕೇಳು.” 
“ನೀನು ಹೋಗುವ ಊರುಗಳಲ್ಲಿ ಮರಗಳ ಮೇಲೆ ನನ್ನ ಸೋದರ ಸಂಬಂಧಿಗಳನ್ನು ನೋಡಿದರೆ ದಯವಿಟ್ಟು ಅವರಿಗೆ ನಾನು ಇಲ್ಲಿ ಯಾವ ಪರಿಸ್ಥಿತಿಯಲ್ಲಿ ಇದ್ದೇನೆಂಬುದನ್ನು ವಿವರಿಸು. ನನಗೆ ಬೇರೇನೂ ಬೇಡ.”
“ನಿಜವಾಗಿಯೂ ಅಷ್ಟೇನಾ? ಅನರ್ಘ್ಯಮಣಿಗಳಿರುವ ಸುಂದರವಾದ ಕನ್ನಡಿ ಅಥವ ಉಷ್ಣವಲಯದ ಯಾವುದಾದರೂ ಒಣಹಣ್ಣುಗಳನ್ನು ಬೇಕಾದರೆ ತರಬಲ್ಲೆ.”

“ಧನ್ಯವಾದಗಳು. ಅವೇನೂ ಬೇಡ.”
ಹಾಡುಹಕ್ಕಿಯ ಈ ಕೋರಿಕೆಯಿಂದ ತುಸು ವಿಚಲಿತನಾದರೂ ಅದನ್ನು ಈಡೇರಿಸುವ ದೃಢ ನಿಶ್ಚಯದೊಂದಿಗೆ ವ್ಯಾಪರಿಯು ಪಯಣಿಸಿದ.

ಉದ್ದೇಶಿತ ಊರುಗಳಿಗೆಲ್ಲ ಸುರಕ್ಷಿತವಾಗಿ ತಲುಪಿ ವ್ಯಾಪಾರದಿಂದ ತೃಪ್ತಿದಾಯಕ ಲಾಭ ಗಳಿಸಿದ ಆತ ತನ್ನ ಕುಟುಂಬದವರು ಹೇಳಿದ್ದ ವಸ್ತುಗಳನ್ನು ಖರೀದಿಸಲು ಸ್ವಲ್ಪ ಸಮಯವನ್ನು ವಿನಿಯೋಗಿಸಿದ. ಕೊನೆಗೆ ಉದ್ಯಾನವೊಂದಕ್ಕೆ ಹೋದಾಗ ಅಲ್ಲಿದ್ದ ಮರಗಳಲ್ಲಿ ತನ್ನ ಹತ್ತಿರವಿದ್ದ ಹಾಡುಹಕ್ಕಿಯನ್ನೇ ಹೋಲುತ್ತಿದ್ದ ಕೆಲವು ಪಕ್ಷಿಗಳನ್ನು ನೋಡಿದ. ಅವುಗಳ ಪೈಕಿ ಒಂದನ್ನು ಕರೆದು ತನ್ನ ಹತ್ತಿರವಿದ್ದ ಹಾಡುಹಕ್ಕಿ ಎಂತು ಪಂಜರದೊಳಗೆ ವಾಸಿಸುತ್ತಾ ಹಾಡು ಹೇಳಿ ತನ್ನನ್ನು ರಂಜಿಸುತ್ತದೆ ಎಂಬುದನ್ನು ವಿವರಿಸಿದ. 

ಅವನು ತನ್ನ ವಿವರಣೆಯನ್ನು ಮುಗಿಸಿದ ತಕ್ಷಣವೇ ಆ ಪಕ್ಷಿಗಳ ಪೈಕಿ ಒಂದು ತಾನು ಕುಳಿತಲ್ಲಿ ನಡುಗಲಾರಂಭಿಸಿತು. ಕೆಲವೇ ಕ್ಷಣಗಳ ನಂತರ ಅದು ನೆಲಕ್ಕೆ ಬಿದ್ದು ನಿಶ್ಚಲವಾಯಿತು. ಇದನ್ನು ನೋಡಿ ವ್ಯಾಪಾರಿಗೆ ಬಲು ದುಃಖವಾಯಿತು. ಅವನ ಪ್ರಯಾಣದ ಯಶಸ್ಸಿನ ಖುಷಿ ತುಸು ಕಮ್ಮಿ ಆಯಿತು.
ಮನೆಗೆ ಹಿಂದಿರುಗಿದ ವ್ಯಾಪಾರಿ ತಂದ ಉಡುಗೊರೆಗಳನ್ನು ನೋಡಿ ಹೆಂಡತಿ ಮಕ್ಕಳು ಬಲು ಸಂತೋಷ ಪಟ್ಟರು. ತಾನು ಹಾಡುಹಕ್ಕಿಗೆ ಹೇಳಬೇಕಾದದ್ದು ಸಂತೋಷದ ವಿಷಯವಲ್ಲದ್ದರಿಂದ ಅವರ ಖುಷಿಯಲ್ಲಿ ಭಾಗಿಯಾಗಲು ಅವನಿಗೆ ಸಾಧ್ಯವಾಗಲಿಲ್ಲ. ಕೊನೆಗೊಮ್ಮೆ ಹೇಳಬೇಕಾದ್ದನ್ನು ಹೇಳುವ ಧೈರ್ಯಮಾಡಿ ಅವನು ಹಾಡುಹಕ್ಕಿಯನ್ನು ಹುಡುಕಿಕೊಂಡು ಮನೆಯ ಉದ್ಯಾನಕ್ಕೆ ಹೋದ. 

ಹಾಡುಹಕ್ಕಿ ಕೇಳಿತು, “ನಾನು ಹೇಳಿದ್ದ ವಿಷಯ ಏನಾಯಿತು?” ಏನು ನಡೆಯಿತೆಂಬುದನ್ನು ಆತ ವಿವರಿಸಿದ. ಅದನ್ನು ಗಮನವಿಟ್ಟು ಕೇಳಿದ ನಂತರ ಹಾಡುಹಕ್ಕಿ ತಾನು ಕುಳಿತಲ್ಲೇ ನಡುಗಲಾರಂಭಿಸಿತು. ಕೆಲವೇ ಕ್ಷಣಗಳಲ್ಲಿ ಅದು ಸತ್ತು ಪಂಜರದ ತಳಭಾಗಕ್ಕೆ ಬಿದ್ದಿತು. 

ವ್ಯಾಪಾರಿಗೆ ತುಂಬಾ ದುಃಖವೂ ಆಯಿತು, ಗೊಂದಲವೂ ಆಯಿತು. ದೊಡ್ಡ ಧ್ವನಿಯಲ್ಲಿ ಅಳುತ್ತಾ ಅತ ಪಂಜರದ ಬಾಗಿಲನ್ನು ತೆರೆದು ತನ್ನ ಪ್ರೀತಿಯ ಹಾಡುಹಕ್ಕಿಯನ್ನು ಹೊರತೆಗೆದ. ಆ ತಕ್ಷಣವೇ ಹಾಡುಹಕ್ಕಿಗೆ ಜೀವ ಬಂದು ಹಾರಿ ಹೋಗಿ ಹತ್ತಿರದಲ್ಲಿದ್ದ ಮರದ ಕೊಂಬೆಯ ಮೇಲೆ ಕುಳಿತು ಸ್ವತಂತ್ವಾದ ಖುಷಿಯಿಂದ ಬಲು ಜೋರಾಗಿ ಕೀಚುಧ್ವನಿಯಲ್ಲಿ ತನ್ನ ಸಂತೋಷವನ್ನು ಪ್ರಕಟಿಸಿತು.

ವ್ಯಾಪರಿ ತಲೆ ಕೆರೆದುಕೊಳ್ಳುತ್ತಾ ಕೇಳಿದ, “ಸರಿ, ನೀನೇ ಗೆದ್ದೆ. ಆದರೆ ದಯವಿಟ್ಟು ಈ ಕಪಟೋಪಾಯದಲ್ಲಿ ಹುದುಗಿದ್ದ ಸಂದೇಶವೇನೆಂಬುದನ್ನು ತಿಳಿಸು.”

ಹಾಡುಹಕ್ಕಿಅವನಿಗೆ ಹೇಳಿತು, “ನನ್ನ ಸೌಂದರ್ಯ ಮತ್ತು ಹಾಡುಗಾರಿಕೆಯಿಂದಾಗಿ ನಾನು ಪಂಜರದೊಳಗೆ ಬಂಧಿತನಾಗಿದ್ದೇನೆ ಎಂಬುದನ್ನು ಆಫ್ರಿಕಾದ ನನ್ನ ಸೋದರ ಸಂಬಂಧಿ ಈ ರೀತಿಯಲ್ಲಿ ತಿಳಿಸಿದ. ಅವಿಲ್ಲದೇ ಹೋಗಿದ್ದರೆ ಬಲು ಹಿಂದೆಯೇ ನೀನು ನನ್ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದೆ. ನಾನು ಸ್ವತಂತ್ರವಾಗಲೋಸುಗ ಆ ಜೀವನದಿಂದ ಮುಕ್ತಿ ಪಡೆದಂತೆ ನಟಿಸಬೇಕಾಯಿತು.”

*****

೫. ಅತ್ಯಂತ ಪ್ರಿಯವಾದ ಕತ್ತೆ

ಟರ್ಕಿ ದೇಶದವನೊಬ್ಬ ತನಗೆ ಅತ್ಯಂತ ಪ್ರಿಯವಾಗಿಯೂ ಅನೇಕ ವರ್ಷಗಳಿಂದ ವಿಧೇಯ ಸಂಗಾತಿಯೂ ಆಗಿದ್ದ ಕತ್ತೆಯೊಂದಿಗೆ ಎಲ್ಲಿಗೋ ಪಯಣಿಸುತ್ತಿದ್ದ. ದಿನವಿಡೀ ತ್ರಾಸದಾಯಕ ಪ್ರಯಾಣ ಮಾಡುತ್ತಿದ್ದ ಅವನಿಗೆ ಸಂಜೆಯ ವೇಳೆಗೆ ಮಾರ್ಗದ ಬದಿಯಲ್ಲಿದ್ದ ಪ್ರವಾಸಿ ತಂಗುದಾಣವೊಂದು ಗೋಚರಿಸಿತು. ಅಂದಿನ ರಾತ್ರಿಯನ್ನು ಅಲ್ಲಿಯೇ ಕಳೆಯಲು ಅವನು ತೀರ್ಮಾನಿಸಿದ. ಕತ್ತೆಯ ಮೇಲಿಂದ ತಡಿಚೀಲಗಳನ್ನಾತ ತೆಗೆಯುತ್ತಿದ್ದಾಗ ಆ ತಂಗುದಾಣದ ಯುವ ಕೆಲಸಗಾರನೊಬ್ಬ ಓಡಿ ಬಂದು ಅವನನ್ನು ಸ್ವಾಗತಿಸಿದ. 

“ಸಲಾಂ ಆಲೈಕುಮ್‌, ಮಾನ್ಯರೆ, ನಮ್ಮ ಈ ಸಾಧಾರಣವಾದ ತಂಗುದಾಣಕ್ಕೆ ಸ್ವಾಗತ. ದಯವಿಟ್ಟು ಒಳಗೆ ಬನ್ನಿ. ಬೆಂಕಿಯ ಸಮೀಪದಲ್ಲಿ ಕುಳಿತು ತುಸು ಬಿಸಿಸೂಪ್ ಸೇವಿಸಿ.”

“ಖಂಡಿತ. ಆದರೆ ಅದಕ್ಕೂ ಮೊದಲು ಈ ನನ್ನ ಕತ್ತೆಯ ಆರೈಕೆ ಸರಿಯಾಗಿ ಆಗುವುದನ್ನು ನಾನು ಖಾತರಿ ಮಾಡಿಕೊಳ್ಳಬೇಕಾಗಿದೆ,” ಎಂಬುದಾಗಿ ತನ್ನ ಕತ್ತೆಯ ಬೆನ್ನನ್ನು ಮೃದುವಾಗಿ ತಟ್ಟುತ್ತಾ ಆತ ಹೇಳಿದ.
ಯುವ ಕೆಲಸಗಾರ ತುಂಬು ಹೃದಯದಿಂದ ನಗುತ್ತಾ ಹೇಳಿದ, “ಮಾನ್ಯರೆ, ಅಂಥ ವಿವರಗಳನ್ನು ಗಮನಿಸುವ ಕೆಲಸವನ್ನು ನೀವು ನನಗೆ ದಯವಿಟ್ಟು ಬಿಟ್ಟುಬಿಡಿ. ನೀವೀಗ ನಮ್ಮ ಗೌರವಾನ್ವಿತ ಅಥಿತಿ.”
“ಅದೆಲ್ಲ ಸರಿಯಪ್ಪಾ. ಆದರೆ ಇದೊಂದು ಮುದಿ ಕತ್ತೆ. ಅದಕ್ಕೆ ಮಲಗಲು ಒಣಹುಲ್ಲಿನ ಹಾಸಿಗೆಯ ಅಗತ್ಯವಿದೆ.”
“ಮಾನ್ಯರೇ, ಆ ಕುರಿತು ನೀವೇನೂ ಚಿಂತೆ ಮಾಡಬೇಡಿ. ಸಾಧ್ಯವಿರುವಷ್ಟು ಉತ್ತಮ ರೀತಿಯಲ್ಲಿ ಅದರ ಆರೈಕೆ ನಾವು ಮಾಡುತ್ತೇವೆ.”

“ಹಾಸಿಗೆ ಸಿದ್ಧಪಡಿಸುವ ಮೊದಲು ನೆಲ ಗುಡಿಸಿ ಅಲ್ಲಿ ಕಲ್ಲುಗಳು ಇಲ್ಲ ಎಂಬುದನ್ನು ಖಾತರಿ ಮಾಡಿಕೊಳ್ಳುತ್ತೀರಲ್ಲವೆ?”
“ಮಾನ್ಯರೆ, ನಮ್ಮನ್ನು ನಂಬಿ. ಇಲ್ಲಿ ಕೆಲಸಕ್ಕೆ ಇರುವವರೆಲ್ಲರೂ ತಮ್ಮ ತಮ್ಮ ವೃತ್ತಿಗಳಲ್ಲಿ ಪರಿಣತರು.”
“ಅಂದ ಹಾಗೆ ಅದಕ್ಕೆ ತಿನ್ನಲು ಕೊಡುವ ಹುಲ್ಲಿಗೆ ಸ್ವಲ್ಪ ನೀರು ಹಾಕುವಿರಷ್ಟೆ? ಏಕೆಂದರೆ ಈ ಕತ್ತೆಯ ಹಲ್ಲುಗಳು ತುಸು ಅಲುಗಾಡಲಾರಂಭಿಸಿವೆ. ಆರಂಭದಲ್ಲಿ ಅದು ತಾಜಾ ಹುಲ್ಲನ್ನು ತಿನ್ನಲು ಬಯಸುತ್ತದೆ.”
“ಮಾನ್ಯರೇ, ನೀವು ನನಗೆ ಮುಜುಗರ ಉಂಟುಮಾಡುತ್ತಿದ್ದೀರಿ.”
“ಇನ್ನೊಂದು ವಿಷಯ, ಅದರ ಬೆನ್ನುಹುರಿಯ ಗುಂಟ ತುಸು ಮಾಲೀಸು ಮಾಡಿ. ಅದಕ್ಕೆ ಆ ಮಾಲೀಸು ಮಾಡಿಸಿಕೊಳ್ಳುವುದೆಂದರೆ ಬಲು ಸಂತೋಷ.”

“ದಯವಿಟ್ಟು ಎಲ್ಲವನ್ನೂ ನನಗೆ ಬಿಟ್ಟು ನೀವು ನಿಶ್ಚಿಂತರಾಗಿರಿ.”
ಅಂತೂ ಇಂತೂ ಆ ಮನುಷ್ಯ ತಂಗುದಾಣದೊಳಕ್ಕೆ ಹೋಗಿ ಬೆಂಕಿಯ ಪಕ್ಕದಲ್ಲಿ ಕುಳಿತುಕೊಂಡು ಸ್ವಾದಿಷ್ಟ ಭೋಜನವೊಂದನ್ನು ಮಾಡಿ ಆರಾಮದಾಯಕ ಹಾಸಿಗೆಯೊಂದರ ಮೇಲೆ ಮಲಗಿದ. ಏತನ್ಮಧ್ಯೆ ಯುವ ಕೆಲಸಗಾರ ಒಂದೆರಡು ಬಾರಿ ಆಕಳಿಸಿ ಪಕ್ಕದಲ್ಲಿದ್ದ ಜೂಜುಕಟ್ಟೆಗೆ ಇಸ್ಪೀಟು ಆಡಲು ತೆರಳಿದ.
ಆದರೂ ಆತನಿಗೆ ಏಕೋ ಸುಲಭವಾಗಿ ನಿದ್ದೆ ಬರಲಿಲ್ಲ. ನಿದ್ದೆಯಲ್ಲಿ ಸರಪಣಿಯಿಂದ ಕಟ್ಟಲ್ಪಟ್ಟಿದ್ದ ಕತ್ತೆ ನೀರು, ಆಹಾರ ಇಲ್ಲದೆ ತಣ್ಣನೆಯ ಚಪ್ಪಡಿ ಕಲ್ಲಿನ ನೆಲದ ಮೇಲೆ ಮಲಗಿದ್ದಂತೆ ಬಾಯಾನಕ ಕನಸುಗಳು ಆತನಿಗೆ ಬೀಳತೊಡಗಿತು. ಇದರಂದ ಎಚ್ಚರಗೊಂಡ ಆತ ಲಾಯಕ್ಕೆ ಹೋಗಿ ನೋಡಿದ – ಕನಸಿನಲ್ಲಿ ಕಂಡಂತೆಯೇ ಕತ್ತ ನೀರು ಆಹಾರವಿಲ್ಲದೆ ಬಳಲಿ ತಣ್ಣನೆಯ ಕಲ್ಲಿನ ಮೇಲೆ ಮಲಗಿತ್ತು!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಲಗೋರಿಬಾಬಾ
ಲಗೋರಿಬಾಬಾ
8 years ago

ಎಲ್ಲವೂ ಚಂದವಾಗಿದೆ

1
0
Would love your thoughts, please comment.x
()
x