ಝೆನ್-ಸೂಫಿ ಕತೆಗಳು

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕೋಡಂಗಿ
ಒಬ್ಬಾತ ಮನೋವೈದ್ಯರನ್ನು ಭೇಟಿ ಮಾಡಿ ಹೇಳಿದ, “ ಡಾಕ್ಟರೇ, ನಾನು ಯಾವಾಗಲೂ ಮಂಕಾಗಿರುತ್ತೇನೆ. ನಾನೇನೇ ಮಾಡಿದರೂ ಮಂಕಾಗಿಯೇ ಇರುತ್ತೇನೆ. ಇದಕ್ಕೇನು ಪರಿಹಾರ ಎಂಬುದೇ ತಿಳಿಯುತ್ತಿಲ್ಲ.”
ಮನೋವೈದ್ಯರು ಅವನನ್ನು ನೇರವಾಗಿ ನೋಡುತ್ತಾ ಹೇಳಿದರು, “ನನ್ನ ಜೊತೆಯಲ್ಲಿ ಕಿಟಕಿಯ ಹತ್ತಿರ ಬಾ.”
ಇಬ್ಬರೂ ಕಿಟಕಿಯನ್ನು ಸಮೀಪಿಸಿದಾಗ ಮನೋವೈದ್ಯರು ಹೊರಗೆ ಒಂದು ದಿಕ್ಕಿನತ್ತ ತೋರಿಸುತ್ತಾ ಹೇಳಿದರು, “ಅಲ್ಲೊಂದು ಡೇರೆ ಕಾಣುತ್ತಿದೆಯಲ್ಲವೇ?. ಅದೊಂದು ಸರ್ಕಸ್ಸಿನ ಡೇರೆ. ಆ ಸರ್ಕಸ್‌ ನಿಜವಾಗಿಯೂ ಬಲು ಚೆನ್ನಾಗಿದೆ. ಅದರಲ್ಲೊಬ್ಬ ನಿಜವಾಗಿಯೂ ಜನಗಳನ್ನು ನಗಿಸಬಲ್ಲ ಕೋಡಂಗಿಯೊಬ್ಬನಿದ್ದಾನೆ. ತನ್ನ ವಿಲಕ್ಷಣ ಚಟುವಟಿಕೆಗಳಿಂದ ಆತ ನಿನ್ನನ್ನು ಬಿದ್ದುಬಿದ್ದು ನಗುವಂತೆ ಮಾಡಬಲ್ಲ. ಹೋಗಿ ಅವನನ್ನು ಭೇಟಿಮಾಡು. ನಿನ್ನನ್ನು ಕವಿದಿರುವ ಮಂಕು ಮಾಯವಾಗುವುದು ಮಾತ್ರವಲ್ಲ, ಮುಂದೆಂದೂ ನೀನು ಮಾಂಕಾಗುವುದಿಲ್ಲ ಎಂಬುದು ಖಾತರಿ!”
ಬಂದಾತ ವಿಷಣ್ಣವದನನಾಗಿ ವೈದ್ಯರತ್ತ ತಿರುಗಿ ಹೇಳಿದ, “ಡಾಕ್ಟರೇ, ನಾನೇ ಆ ಕೋಡಂಗಿ!”

*****

೨. ಸಾಲಬಾಧೆ
“ದಯವಿಟ್ಟು ನಿದ್ದೆ ಮಾಡಿ! ನಾಳೆ ತುಂಬಾ ಕೆಲಸವಿರುವ ದಿನ,” ಮುಲುಗಿದಳು ಶಹಾರಾಮನ ಹೆಂಡತಿ ಮೀನಾ, ಪತಿ ಸುದೀರ್ಘಕಾಲದಿಂದ ಅತ್ತಿಂದಿತ್ತ ಹೊರಳಾಡುತ್ತಿದ್ದದ್ದನ್ನು ಗಮನಿಸಿ. “ನೀವು ಇಂತು ಹೊರಳಾಡುತ್ತಿದ್ದರೆ ನನಗೂ ನಿದ್ದೆ ಬರುವುದಿಲ್ಲ,” ಎಂಬುದಾಗಿಯೂ ಹೇಳಿದಳು.

“ಹಂ, ನನಗಿರುವ ಸಮಸ್ಯೆಗಳು ನಿನಗೆ ಇದ್ದಿದ್ದರೆ ತಿಳಿಯುತ್ತಿತ್ತು!” ಗೊಣಗಿದ ಶಹಾರಾಮ ಹೇಳಿದ, “ಕೆಲವು ತಿಂಗಳುಗಳಷ್ಟು ಹಿಂದೆ ಸಾಲಪತ್ರ ಬರೆದು ಕೊಟ್ಟು ಸಾಲ ತೆಗೆದುಕೊಂಡಿದ್ದೆ. ನಾಳೆ ವಾಯಿದೆ ಮುಗಿಯುತ್ತದೆ. ನನ್ನ ಹತ್ತಿರ ಬಿಡಿಗಾಸೂ ಇಲ್ಲ ಎಂಬುದು ನಿನಗೆ ತಿಳಿದಿದೆ. ನಾನು ಸಾಲ ತೆಗೆದುಕೊಂಡದ್ದು ನಮ್ಮ ನೆರೆಮನೆಯವನಿಂದ. ಹಣದ ವಿಷಯಕ್ಕೆ ಬಂದಾಗ ಆತ ಚೇಳಿಗಿಂತಲೂ ಹೆಚ್ಚು ವಿಷವುಳ್ಳವನಾಗುತ್ತಾನೆ. ನನ್ನ ಗ್ರಹಚಾರ! ನಾನಾದರೂ ಹೇಗೆ ನಿದ್ದೆ ಮಾಡಲಿ?” ಗೊಣಗುತ್ತಾ ತನ್ನ ಹೊರಳಾಟ ಮುಂದುವರಿಸಿದ. ಅವನನ್ನು ಶಾಂತ ಸ್ಥಿತಿಗೆ ತರಲು ಮೀನಾ ಮಾಡಿದ ಪ್ರಯತ್ನಗಳು ವಿಫಲವಾದವು. “ಬೆಳಗಾಗಲಿ ನೋಡೋಣ. ಬಹುಶಃ ಹಣ ಹಿಂದಿರುಗಿಸಲು ಸಾಧ್ಯವಾಗಬಹುದಾದ ಉಪಾಯವೊಂದು ಹೊಳೆದೀತು,” ಸಮಾಧಾನಿಸಲು ಯತ್ನಿಸಿದಳು ಮೀನಾ.
“ಯಾವುದೂ ಪ್ರಯೋಜನವಾಗುವುದಿಲ್ಲ. ನಮ್ಮ ಕತೆ ಮುಗಿದಂತೆಯೇ,” ಹಲುಬಿದ ಶಹಾರಾಮ.

ಕೊನೆಗೊಮ್ಮೆ ಮೀನಾ ತಾಳ್ಮೆ ಕಳೆದುಕೊಂಡಳು. ಹಾಸಿಗೆಯಿಂದ ಮೇಲೆದ್ದು ತಾರಸಿಯ ಮೇಲಕ್ಕೆ ಹೋದಳು. ಅಲ್ಲಿಂದ ಗಟ್ಟಿಯಾಗಿ ನೆರೆಮನೆಯವನನ್ನು ಕುರಿತು ಇಂತು ಬೊಬ್ಬೆ ಹೊಡೆದಳು, “ಅಯ್ಯಾ ನೆರೆಮನೆಯಾತನೇ, ನನ್ನ ಗಂಡ ನಿನ್ನಿಂದ ಪಡೆದ ಸಾಲದ ಹಣ ಹಿಂದಿರುಗಿಸಬೇಕಾದ ದಿನ ನಾಳೆ ಎಂಬುದು ನಿನಗೆ ತಿಳಿದಿದೆಯಷ್ಟೆ! ನಿನಗೆ ತಿಳಿಯದಿರುವ ವಿಷಯವೊಂದನ್ನು ನಾನೀಗ ಹೇಳಬಯಸುತ್ತೇನೆ. ನನ್ನ ಗಂಡ ನಾಳೆ ಸಾಲದ ಹಣ ಹಿಂದಿರುಗಿಸಲು ಸಾಧ್ಯವಿಲ್ಲ.” 
ತದನಂತರ ಉತ್ತರಕ್ಕಾಗಿ ಕಾಯದೇ ಮಲಗುವಕೋಣೆಗೆ ಹಿಂದಿರುಗಿ ಓಡಿ ಹೇಳಿದಳು, “ನನಗೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲವಾದರೆ ನಮ್ಮ ನೆರೆಮನನೆಯಾತನಿಗೂ ಸಾಧ್ಯವಾಗಬಾರದು!” ಶಹಾರಾಮ ಮುಸುಕು ಹಾಕಿ ಚಿಂತೆ ಮಾಡುತ್ತಾ ಸದ್ದಿಲ್ಲದೇ ಮಲಗಿದ. ಕೆಲವೇ ಕ್ಷಣಗಳಲ್ಲಿ ಇಬ್ಬರು ಉಸಿರಾಡುವ ಶಬ್ದ ಬಿಟ್ಟರೆ ಅಲ್ಲಿ ಬೇರಾವ ಶಬ್ದವೂ ಕೇಳಿಸುತ್ತಿರಲಿಲ್ಲ.

*****

೩. ಹಕೀಮ ಮಾಡಿದ ರೋಗನಿದಾನ 
ತೀವ್ರವಾದ ರೋಗದಿಂದ ಬಳಲುತ್ತಿದ್ದ ಒಬ್ಬಾತ ಹಾಸಿಗೆ ಹಿಡಿದಿದ್ದ. ಅವನನ್ನು ನೋಡಿದವರಿಗೆ ಈತ ಹೆಚ್ಚು ದಿನ ಬದುಕಿರಲಾರ ಅನ್ನಿಸುತ್ತಿತ್ತು. ಆತನ ಭಯಗ್ರಸ್ಥ ಪತ್ನಿ ಸ್ಥಳೀಯ ಹಕೀಮನಿಗೆ ಹೇಳಿಕಳುಹಿಸಿದಳು. 
ತಕ್ಷಣವೇ ಅಲ್ಲಿಗೆ ಬಂದ ಹಕೀಮ ರೋಗಿಯ ಬೆನ್ನು ಮತ್ತು ಎದೆಯ ಮೇಲೆ ಅಲ್ಲಲ್ಲಿ ಸುಮಾರು ಅರ್ಧ ತಾಸು ಕಾಲ ಕುಟ್ಟಿ ತದೇಕಚಿತ್ತದಿಂದ ಆಗುವ ಸದ್ದು ಕೇಳಿದ. ನಾಡಿ ಪರೀಕ್ಷಿಸಿದ. ರೋಗಿಯ ಎದೆಯ ಮೇಲೆ ಕಿವಿಯಿಟ್ಟು ಆಲಿಸಿದ. ರೋಗಿಯನ್ನು ಆತನ ಕವುಚಿ ಹಾಕಿ ಪರೀಕ್ಷಿಸಿದ. ಕೈ ಕಾಲುಗಳನ್ನು ಒಂದೊಂದಾಗಿ ಎತ್ತಿ ಹಿಡಿದು ಪರೀಕ್ಷಿಸಿದ. ಕಣ್ಣುಗಳನ್ನು ದೊಡ್ಡದಾಗಿ ತೆರೆದು ನೋಡಿದ. ಬಾಯಿ ತೆರೆಯಿಸಿ ಇಣುಕಿದ. ಕೊನೆಗೊಂದು ನಿಶ್ಚಿತಾಭಿಪ್ರಾಯಕ್ಕೆ ಬಂದು ಹೇಳಿದ, “ಕ್ಷಮಿಸಿ ಅಮ್ಮಾ. ದುರದೃಷ್ಟವಶಾತ್ ನಿಮಗೊಂದು ಕೆಟ್ಟ ಸುದ್ದಿಯನ್ನು ಹೇಳಲೇ ಬೇಕಾಗಿದೆ. ನಿಮ್ಮ ಪತಿ ಸತ್ತು ಎರಡು ದಿನಗಳಾಗಿವೆ.”

ಇದನ್ನು ಕೇಳಿದ ತಕ್ಷಣ ರೋಗಿಗೆ ಆಘಾತವಾಗಿ ಮಲಗಿದಲ್ಲೇ ತಲೆ ಎತ್ತಿ ಗದ್ಗದಿಸಿದ, “ಇಲ್ಲ, ಪ್ರಿಯೆ. ನಾನಿನ್ನೂ ಬದುಕಿದ್ದೇನೆ!”
ಅವನ ತಲೆಯನ್ನು ತಲೆದಿಂಬಿಗೆ ಒತ್ತಿಹಿಡಿದು ಸಿಟ್ಟಿನಿಂದ ಹೇಳಿದಳು, “ಸುಮ್ಮನಿರಿ. ಇವರು ವೈದ್ಯರು, ತಜ್ಞರು. ಅವರಿಗೆ ನಿಜ ತಿಳಿದಿರಲೇ ಬೇಕು!”

*****

೪. ವಿವೇಕಿ ಹಕೀಮನ ಕತೆ

ಸುಲ್ತಾನ ಕಮಾಲ್‌ ತನ್ನ ಅತ್ಯುತ್ತಮ ಆಸ್ಥಾನಿಕರೊಂದಿಗೆ ನೌಕೆಯೊಂದರಲ್ಲಿ ಸಮುದ್ರದಲ್ಲಿ ವಿಹರಿಸುತ್ತಿದ್ದ. ಆಸ್ಥಾನಿಕರ ಪೈಕಿ ಒಬ್ಬ ಪರ್ವತ ಪ್ರದೇಶದಿಂದ ಬಂದವನಾಗಿದ್ದ. ಇದು ಅವನ ಮೊದಲನೇ ನೌಕಾಯಾನವಾಗಿತ್ತು. ಇಲ್ಲಯ ವರೆಗೆ ಸಮುದ್ರ ತೀರವನ್ನೇ ನೋಡಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ಆತ ನೌಕೆಯ ಮೂಲೆಯೊಂದರಲ್ಲಿ ಕುಳಿತು ಅಳುತ್ತಿದ್ದ. ಒಮ್ಮೊಮ್ಮೆ ಕಿರಿಚುತ್ತಿದ್ದ, ನಡುಗುತ್ತಿದ್ದ, ಗೋಳಾಡುತ್ತಿದ್ದ. ಎಲ್ಲರೂ ಅವನೊಂದಿಗೆ ಮೃದುವಾಗಿಯೇ ವ್ಯವಹರಿಸುತ್ತಿದ್ದರು, ಅವನ ಭಯವನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದರು. ಅವರ ಯಾವ ಪ್ರಯತ್ನವೂ ಅವನ ಕಿವಿಗಳ ಮೇಲೆ ಬೀಳುತ್ತಿದ್ದವೇ ವಿನಾ ಹೃದಯವನ್ನು ಮುಟ್ಟುತ್ತಿರಲಿಲ್ಲ.
 
ಕೊನೆಗೊಮ್ಮೆ ಸುಲ್ತಾನನಿಗೆ ಆ ಆಸ್ಥಾನಿಕನ ಗೋಳಾಟ ಅಸಹನೀಯವಾಗತೊಡಗಿತು. ಶುಭ್ರ ನೀಲ ವರ್ಣದ ಆಕಾಶದ ಕೆಳಗೆ ನೀಲವರ್ಣದ ಜಲರಾಶಿಯ ಮೇಲಿನ ವಿಹಾರದ ಆನಂದ ಸವಿಯುವುದು ಕಷ್ಟವಾಗತೊಡಗಿತು. ಆಗ  ತಂಡದಲ್ಲಿದ್ದ ವಿವೇಕಿ ಹಕೀಮ ಸುಲ್ತಾನನನ್ನು ಸಮೀಪಿಸಿ ಹೇಳಿದ, “ಮಹಾಪ್ರಭುಗಳೇ ನೀವು ಅನುಮತಿ ನೀಡಿದರೆ ಅವನು ಶಾಂತನಾಗುವಂತೆ ನಾನು ಮಾಡುತ್ತೇನೆ.”

ಆ ತಕ್ಷಣವೇ ಸುಲ್ತಾನ ಕಿಂಚಿತ್ತೂ ಯೋಚಿಸದೇ ಅನುಮತಿ ನೀಡಿದ. ಆಸ್ಥಾನಿಕನನ್ನು ಎತ್ತಿ ಸಮುದ್ರಕ್ಕೆ ಎಸೆಯುವಂತೆ ನಾವಿಕರಿಗೆ ಆಜ್ಞಾಪಿಸಿದ ಹಕೀಮ. ಬಲು ಸಂತೋಷದಿಂದ ಅವರು ಅಂತೆಯೇ ಮಾಡಿದರು. ತುಸುಕಾಲ ನೀರಿನಲ್ಲಿ ಅತ್ತಿತ್ತ ಹೊಯ್ದಾಡಿದ ಆಸ್ಥಾನಿಕ ಪುನಃ ತನ್ನನ್ನು ಮೇಲಕ್ಕೆ ಎತ್ತಿಕೊಳ್ಳುವಂತೆ ಗೋಗರೆಯತೊಡಗಿದ. ಹಕೀಮನ ಅನುಮತಿ ಪಡೆದು ನಾವಿಕರು ಅವನನ್ನು ನೀರಿನಿಂದ ಮೇಲೆತ್ತಿದರು. ಆನಂತರ ಆತ ನೌಕೆಯ ಮೂಲೆಯೊಂದರಲ್ಲಿ ಒಂದಿನಿತೂ ಸದ್ದು ಮಾಡದೆ ಕುಳಿತಿದ್ದ. ಅಂದಿನ ನಂತರ ಅವನು ಭಯಭೀತನಾದದ್ದನ್ನು ಯಾರೂ ನೋಡಲೇ ಇಲ್ಲ.

ಆಸ್ಥಾನಿಕನಲ್ಲಿ ಆದ ಬದಲಾವಣೆಯನ್ನು ನೋಡಿ ಆಶ್ಚರ್ಯಚಕಿತನಾದ ಸುಲ್ತಾನ ಹಕೀಮನನ್ನು ಕೇಳಿದ, “ನೀನು ಇಂತು ಮಾಡಿದ್ದರ ಹಿಂದಿನ ಮರ್ಮ ಏನು?” 
ಹಕೀಮ ಉತ್ತರಿಸಿದ, “ಅವನಿಗೆ ಸಮುದ್ರದ ಉಪ್ಪುನೀರಿನ ರುಚಿ ಹೇಗಿರುತ್ತದೆಂಬುದು ತಿಳಿದಿರಲೇ ಇಲ್ಲ. ಸಮುದ್ರದ ನೀರಿಗೆ ಬಿದ್ದರೆ ಎದುರಿಸಬೇಕಾದ ಅಪಾಯಗಳ ಅರಿವೂ ಅವನಿಗಿರಲಿಲ್ಲ. ನೌಕೆಯಲ್ಲಿ ಎಷ್ಟು ಸುರಕ್ಷಿತವಾಗಿ ಅವನು ಇದ್ದ ಎಂಬುದರ ಅರಿವೂ ಇರಲಿಲ್ಲ. ಅಪಾಯದ ಅರಿವು ಆದಾಗ ಮಾತ್ರ ಸುರಕ್ಷಿತತೆಯ ಮೌಲ್ಯದ ಅರಿವೂ ಆಗಲು ಸಾಧ್ಯ.”

*****

೫. ಎರಡು ದೀಪಗಳ ಕತೆ
ಒಂದಾನೊಂದು ಕಾಲದಲ್ಲಿ ಬಲು ದೂರದ ದೇಶವೊಂದರಲ್ಲಿ ನೇರು ಎಂಬ ಹೆಸರಿನ ಒಬ್ಬ ಹೆಂಗಸು ಇದ್ದಳು. ಒಂದು ದಿನ ಅವಳು ತನ್ನ ಮನೆಯಿಂದ ಅನೇಕ ಮೈಲುಗಳಷ್ಟು ದೂರದಲ್ಲಿ ಇದ್ದ ಹಳ್ಳಿಯೊಂದರಲ್ಲಿ ಇದ್ದ ಮಹಾ ಜ್ಞಾನಿ ಎಂಬುದಾಗಿ ಖ್ಯಾತನಾಗಿದ್ದ ಸೂಫಿ ಒಬ್ಬನನ್ನು ಭೇಟಿ ಆಗಲೋಸುಗ ಪಯಣಿಸಿದಳು. ಆ ಹಳ್ಳಿಯನ್ನು ಕ್ಷೇಮವಾಗಿ ತಲುಪಿದ ಅವಳಿಗೆ ಸೂಫಿ ಹತ್ತಿರದಲ್ಲಿಯೇ ಇದ್ದ ಪರ್ವತದ ಸಮೀಪದಲ್ಲಿ ಆತ ವಾಸವಾಗಿರುವ ವಿಷಯ ತಿಳಿಯಿತು. ಕತ್ತಲಾಗುತ್ತಿದ್ದರೂ ಪರ್ವತದ ಬುಡದಲ್ಲಿ ಗೋಚರಿಸುತ್ತಿದ್ದ ಪ್ರಕಾಶಮಾನವಾದ ಬೆಳಕಿನತ್ತ ಆಕೆ ಪಯಣಿಸಿದಳು, ಅಲ್ಲಿ ಸೂಫಿ ವಾಸವಾಗಿದ್ದಾನೆ ಎಂಬ ನಂಬಿಕೆಯಿಂದ. 

ಬೆಳಕಿನ ಆಕರವನ್ನು ತಲುಪಿದಾಗ ಅಲ್ಲಿ ಹಾತೆಗಳು ಸುತ್ತಲೂ ಹಾರುತ್ತಿದ್ದ ಎಣ್ಣೆಯ ದೀಪವೊಂದನ್ನು ಹೊರತುಪಡಿಸಿ ಬೇರೇನೂ ಇಲ್ಲದ್ದನ್ನು ಕಂಡು ಆಕೆಗೆ ಆಶ್ಚರ್ಯವಾಯಿತು. ಸುತ್ತಣ ಕತ್ತಲೆಗೆ ಆಕೆಯ ಕಣ್ಣುಗಳು ಒಗ್ಗಿದಾಗ ತುಸು ದೂರದಲ್ಲಿ ಮಂದವಾದ ಬೆಳಕು ಗೋಚರಿಸಿತು. ಅದನ್ನು ಸಮೀಪಿಸಿದಾಗ ಒಂದು ಮೋಂಬತ್ತಿಯ ಬೆಳಕಿನಲ್ಲಿ ಪುಸ್ತಕವೊಂದನ್ನು ಓದುತ್ತಿದ್ದ ಸೂಫಿ ಗೋಚರಿಸಿದ.

ನೇರು ಆತನಿಗೆ ನಮಸ್ಕರಿಸಿ ಕೇಳಿದಳು, “ಓ ಅಲ್ಲಿ ಹೆಚ್ಚು ಪ್ರಕಾಶಮಾನವಾದ ದೀಪ ಉರಿಯುತ್ತಿರುವಾಗ ಬಲು ಮಂದವಾದ ಈ ಬೆಳಕಿನ ಸಮೀಪ ಕುಳಿತು ಓದುತ್ತಿರುವುದೇಕೆ?”
ಸೂಫಿ ಉತ್ತರಿಸಿದ, “ಪ್ರಕಾಶಮಾನವಾದ ಆ ಬೆಳಕು ಇರುವುದು ಹಾತೆಗಳಿಗಾಗಿ. ಅದು ಅಲ್ಲಿ ಇರುವುದರಿಂದಲೇ ನಾನು ಈ ಮೋಂಬತ್ತಿಯ ಬೆಳಕಿನಲ್ಲಿ ಏಕಾಗ್ರತೆಯಿಂದ ಓದಲು ಸಾಧ್ಯವಾಗಿರುವುದೆ.”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

Leave a Reply

Your email address will not be published. Required fields are marked *