ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ವ್ಯಾಧಿಗ್ರಸ್ತ ರಾಜನ ಕತೆ
ರಾಜನೊಬ್ಬ ಭೀಕರ ಕಾಯಿಲೆಯಿಂದ ನರಳುತ್ತಿದ್ದ. ನಿರ್ದಿಷ್ಟ ಲಕಷ್ಣಗಳುಳ್ಳ ವ್ಯಕ್ತಿಯೊಬ್ಬನ ಪಿತ್ತಕೋಶವನ್ನು ಬಿಟ್ಟರೆ ರಾಜ ಅನುಭವಿಸುತ್ತಿದ್ದ ನೋವಿಗೆ ಪರಿಹಾರವೇ ಇಲ್ಲವೆಂಬುದಾಗಿ ವೈದ್ಯರ ತಂಡವೊಂದು ತೀರ್ಮಾನಿಸಿತು. ಅಂಥ ವ್ಯಕ್ತಿಯನ್ನು ಹುಡುಕುವಂತೆ ರಾಜ ತನ್ನ ಸೇವಕರಿಗೆ ಆಜ್ಞಾಪಿಸಿದ. ಪಕ್ಕದ ಹಳ್ಳಿಯಲ್ಲಿಯೇ ಅಗತ್ಯವಾದ ಎಲ್ಲ ಲಕ್ಷಣಗಳೂ ಇದ್ದ ಆದಿಲ್‌ ಎಂಬ ಹುಡುಗನನ್ನು ಅವರು ಪತ್ತೆಹಚ್ಚಿದರು. ರಾಜನು ಅವನ ತಂದೆತಾಯಿಯರನ್ನು ಬರಹೇಳಿ ಅವರನ್ನು ಸಂತೋಷಪಡಿಸಬಲ್ಲ ಅನೇಕ ಉಡುಗೊರೆಗಳನ್ನು ನೀಡಿದ. ಬಲು ಉನ್ನತ ಶ್ರೇಣಿಯ ನ್ಯಾಯಾಧೀಶನೊಬ್ಬ ರಾಜನ ಪ್ರಾಣ ಉಳಿಸಲೋಸುಗ ಪ್ರಜೆಯ ರಕ್ತ ಸುರಿಸುವುದು ನ್ಯಾಯಸಮ್ಮತವಾದದ್ದು ಎಂಬುದಾಗಿ ಘೋಷಿಸಿದ.

ಆದಿಲ್‌ನ ಪಿತ್ತಕೋಶವನ್ನು ತೆಗೆಯಲು ವೈದ್ಯರು ತಯಾರಾಗುತ್ತಿದ್ದಾಗ ಅವನು ಮೇಲೆ ಆಕಾಶದತ್ತ ನೋಡಿ ನಸುನಕ್ಕ. ಆಶ್ಚರ್ಯಚಕಿತನಾದ ರಾಜಕೇಳಿದ, “ಇಂಥ ಗಂಭೀರವಾದ ಸನ್ನಿವೇಶದಲ್ಲಿ ನಗಲು ನಿನಗೆ ಹೇಗೆ ಸಾಧ್ಯವಾಯಿತು?”

ಆದಿಲ್‌ ಉತ್ತರಿಸಿದ, “ಸಾಮಾನ್ಯವಾಗಿ ತಂದೆತಾಯಂದಿರು ತಮ್ಮ ಮಕ್ಕಳನ್ನು ಪ್ರೀತಿಯಿಂದ ಪೋಷಿಸುತ್ತಾರೆ. ನ್ಯಾಯಕ್ಕಾಗಿ ಜನ ನ್ಯಾಯಾಧೀಶರ ಮೊರೆ ಹೋಗುತ್ತಾರೆ. ರಾಜರು ತನ್ನ ಪ್ರಜೆಗಳನ್ನು ಅಪಾಯಗಳಿಂದ ರಕ್ಷಿಸುತ್ತಾರೆ. ಆದರೆ ಇಲ್ಲಿ ನನ್ನ ತಂದೆತಾಯಿಯರು ಭೌತಿಕ ಉಡುಗೊರೆಗಳ ಮೇಲಿನ ಆಸೆಯಿಂದ ನನ್ನನ್ನು ಮೃತ್ಯುವಿಗೆ ಒಪ್ಪಿಸಿದ್ದಾರೆ, ನ್ಯಾಯಾಧೀಶರು ನನ್ನ ಮೇಲೆ ಸಾವು ಸಂಭವಿಸಬಹುದಾದ ಶಸ್ತ್ರಕ್ರಿಯೆ ಮಾಡಲು ಅನುಮತಿ ನೀಡಿದ್ದಾರೆ, ರಾಜರಾದರೋ ನನ್ನನ್ನು ನಾಶಮಾಡಿ ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಂದ ಮೇಲೆ ನನ್ನನ್ನು ರಕ್ಷಿಸಲು ದೇವರ ಹೊರತಾಗಿ ಬೇರೆ ಯಾರೂ ಇಲ್ಲ.”

ಈ ಮಾತುಗಳು ರಾಜನ ಹೃದಯವನ್ನು ಸ್ಪರ್ಶಿಸಿದವು. ಅವನು ಅಳುತ್ತಾ ಹೇಳಿದ, “ಅಮಾಯಕನೊಬ್ಬನ ರಕ್ತ ಹರಿಸಿ ಬದುಕುವುದಕ್ಕಿಂತ ಸಾಯುವುದೇ ಉತ್ತಮ.” ಆನಂತರ ರಾಜನು ಅನೇಕ ಉಡುಗೊರೆಗಳನ್ನು ಕೊಟ್ಟು ಪ್ರೀತಿಯಿಂದ ಆಲಂಗಿಸಿ ಆದಿಲ್‌ನನ್ನು ಕಳುಹಿಸಿದ. ಆ ವಾರದಲ್ಲಿಯೇ ಪವಾಡ ಸದೃಶ ರೀತಿಯಲ್ಲಿ ರಾಜ ಗುಣಮುಖನಾದ.

*****

೨. ನಿದ್ದೆಹೋಕನ ಕತೆ
ಒಂದಾನೊಂದು ಕಾಲದಲ್ಲಿ ಅಮೈನ್‌ ಎಂಬ ಬಲು ಒಳ್ಳೆಯವನೊಬ್ಬನಿದ್ದ. ಸತ್ತ ನಂತರ ಸ್ವರ್ಗಕ್ಕೆ ಕೊಂಡೊಯ್ಯಬಹುದಾದ ಗುಣಗಳನ್ನು ಅಭ್ಯಾಸಮಾಡುವುದರಲ್ಲಿ ತನ್ನ ಇಡೀ ಜೀವಮಾನವನ್ನು ಅವನು ಕಳೆಯುತ್ತಿದ್ದ.ಬಡವರಿಗೆ ಧಾರಾಳವಾಗಿ ದಾನ ಮಾಡುತ್ತಿದ್ದ. ಎಲ್ಲ ಪ್ರಾಣಿಗಳನ್ನೂ ಪ್ರೀತಿಸುತ್ತಿದ್ದ, ಅವುಗಳನ್ನು ಸಾಧ್ಯವಿರುವಷ್ಟು ಉಪಚರಿಸುತ್ತಿದ್ದ. ತಾಳ್ಮೆಯ ಆವಶ್ಯಕತೆಯನ್ನು ಸದಾ ನೆನಪಿಸಿಕೊಳ್ಳುತ್ತಿದ್ದದ್ದರಿಂದ ಅನಿರೀಕ್ಷಿತ ಕಷ್ಟ ಪರಿಸ್ಥಿತಿಗಳನ್ನು, ಅನೇಕ ಸಲ ಇತರರ ಸಲುವಾಗಿ, ತಾಳ್ಮೆಯಿಂದ ಅನುಭವಿಸುತ್ತಿದ್ದ. ಜ್ಞಾನವನ್ನು ಅರಸುತ್ತಾ ಯಾತ್ರೆಗಳನ್ನು ಮಾಡುತ್ತಿದ್ದ. ಅನುಕರಣಯೋಗ್ಯ ನಡೆನುಡಿಗಳೂ ವಿನಯವೂ ಅವನಲ್ಲಿ ಇದ್ದವು. ಇದರಿಂದಾಗಿ ವಿವೇಕಿ, ಉತ್ತಮ ನಾಗರಿಕ ಎಂದೇ ಅವನು ಖ್ಯಾತನಾಗಿದ್ದ. ಅವನ ಖ್ಯಾತಿಯು ಪೂರ್ವದಿಂದ ಪಶ್ಚಿಮಕ್ಕೂ ಉತ್ತರದಿಂದ ದಕ್ಷಿಣಕ್ಕೂ ಹರಡಿತ್ತು.

ಈ ಒಳ್ಳೆಯ ಗುಣಗಳನ್ನು ಅವನು ತನ್ನ ದೈನಂದಿನ ಜೀವನದಲ್ಲಿ ನೆನಪಾದಾಗಲೆಲ್ಲ ಪ್ರದರ್ಶಿಸುತ್ತಿದ್ದರೂ ಅವನಲ್ಲಿ ಒಂದು ಕೊರತೆ ಇತ್ತು – ಅಜಾಗರೂಕತೆಯಿಂದಿರುವುದು. ಈ ಗುಣ ತೀವ್ರವಾದದ್ದು ಆಗಿರಲಿಲ್ಲ. ತಾನು ರೂಢಿಸಿಕೊಂಡಿದ್ದ ಇತರ ಒಳ್ಳೆಯ ಗುಣಗಳು ಈ ಗುಣದ ಪ್ರಭಾವವನ್ನು ತೊಡೆದು ಹಾಕುತ್ತದೆಂದು ಅವನು ಪರಿಗಣಿಸಿದ್ದ. ಅದೊಂದು ಸಣ್ನ ದೌರ್ಬಲ್ಯವಾಗಿತ್ತು.

ಅಮೈನ್‌ನಿಗೆ ನಿದ್ದೆ ಮಾಡುವುದು ಬಲು ಪ್ರಿಯವಾದ ಕಾರ್ಯವಾಗಿತ್ತು. ಕೆಲವು ಸಲ ಅವನು ನಿದ್ದೆ ಮಾಡುತ್ತಿದ್ದಾಗ, ಜ್ಞಾನ ಗಳಿಸುವ ಅವಕಾಶಗಳು, ಅಥವ ಜ್ಞಾನವನ್ನು ಮನೋಗತ ಮಾಡಿಕೊಳ್ಳುವ ಅವಕಾಶಗಳು, ನಿಜವಾದ ನಮ್ರತೆಯನ್ನು ಪ್ರದರ್ಶಿಸುವ ಅವಕಾಶಗಳು, ಅಥವ ಈಗಾಗಲೇ ಇದ್ದ ಸದ್ಗುಣಗಳಿಗೆ ಹೊಸದೊಂದನ್ನು ಸೇರಿಸುವ ಅವಕಾಶಗಳು ಬಂದು ಹೋಗುತ್ತಿದ್ದವು. ಅವನಿಗೆ ಅವು ಮತ್ತೊಮ್ಮೆ  ದೊರೆಯುತ್ತಿರಲಿಲ್ಲ. ಅವನಲ್ಲಿದ್ದ ಸದ್ಗುಣಗಳು ಅವನ ಸ್ವಬಿಂಬದ ಮೇಲೆ ಹೇಗೆ ಅಳಿಸಲಾಗದ ಛಾಪನ್ನೊತ್ತಿದ್ದವೋ ಅಂತೆಯೇ ಅಜಾಗರೂಕತೆಯ ಗುಣವೂ ತನ್ನ ಛಾಪನ್ನೊತ್ತಿತ್ತು.

ಕೊನೆಗೊಂದು ದಿನ ಅಮೈನ್ ಸತ್ತನು. ಸಾವಿನ ನಂತರ ಸ್ವರ್ಗದ ಬಾಗಿಲುಗಳತ್ತ ಪಯಣಿಸುತ್ತಿರುವಾಗ ಆತ ಅಂತಃವೀಕ್ಷಣೆ ಮಾಡಿಕೊಂಡನು. ಸ್ವರ್ಗ ಪ್ರವೇಶಿಸುವ ಅವಕಾಶ ತನಗೆ ಲಭಿಸುತ್ತದೆ ಎಂಬುದಾಗಿ ಅವನಿಗೆ ಅನ್ನಿಸಿತು.

ಅವನು ಸ್ವರ್ಗದ ಬಾಗಿಲುಗಳನ್ನು ಸಮೀಪಿಸಿದಾಗ ಅವು ಮುಚ್ಚಿದ್ದವು. ಆಗ ಅವನಿಗೊಂದು ಧ್ವನಿ ಕೇಳಿಸಿತು, “ಜಾಗರೂಕನಾಗಿರು. ಸ್ವರ್ಗದ ಬಾಗಿಲುಗಳು ಒಂದುನೂರು ವರ್ಷಗಳಿಗೊಮ್ಮೆ ಮಾತ್ರ ತೆರೆಯುತ್ತವೆ!”

ಅಮೈನ್‌ ಬಾಗಿಲುಗಳು ತೆರಯುವ ಕ್ಷಣಕ್ಕಾಗಿ ಕಾಯುತ್ತ ಅಲ್ಲಿಯೇ ಕುಳಿತನು. ಸ್ವರ್ಗವನ್ನು ಪ್ರವೇಶಿಸುವ ಅವಕಾಶ ತನ್ನದಾಗುವ ಕ್ಷಣ ಸಮೀಪಿಸುತ್ತಿದೆ ಎಂಬ ಆಲೋಚನೆಯಿಂದ ಅವನು ಉತ್ತೇಜಿತನಾಗಿದ್ದರೂ ಮನುಕುಲಕ್ಕೆ ಒಳಿತನ್ನು ಮಾಡುವ ಅವಕಾಶಗಳಿಂದ ವಂಚಿತನಾದದ್ದು ಅವನಿಗೆ ತುಸು ಬೇಸರವನ್ನು ಉಂಟು ಮಾಡಿತು. ಅವಧಾನ ಕೇಂದ್ರೀಕರಿಸುವ ಸಾಮರ್ಥ್ಯದ ಕೊರತೆ ತನ್ನಲ್ಲಿ ಇರುವುದರ ಅರಿವೂ ಅವನಿಗಾಯಿತು. ಯುಗಗಳೇ ಕಳೆದವೋ ಏನೋ ಅನ್ನಿಸುವಷ್ಟು ಕಾಲ ಬಾಗಿಲುಗಳನ್ನೇ ನೋಡುತ್ತಾ ಕುಳಿತಿದ್ದ ಅವನು ಅರಿವಿಲ್ಲದೆಯೇ ತೂಕಡಿಸಲು ಆರಂಭಿಸಿದ. ಅವನ ಕಣ್ಣುರೆಪ್ಪೆಗಳು ಮುಚ್ಚಿದ್ದ ಕ್ಷಣವೊಂದರಲ್ಲಿ ಸ್ವರಗದ ಬಾಗಿಲುಗಳು ತೆರೆದುಕೊಂಡವು. ಅವನು ಪೂರ್ಣವಾಗಿ ಕಣ್ದೆರೆದು ನೋಡುವಷ್ಟರಲ್ಲಿ ಸತ್ತವರನ್ನೂ ಬಡಿದೆಬ್ಬಿಸುವಷ್ಟು ಜೋರಾದ ಸಪ್ಪಳದೊಂದಿಗೆ ಆ ಬಾಗಿಲುಗಳು ಮುಚ್ಚಿಕೊಂಡವು!

*****

೩. ಎರಡು ಬೀದಿಗಳ ಕತೆ
ಒಂದಾನೊಂದು ಕಾಲದಲ್ಲಿ ಪರಸ್ಪರ ಎರಡು ಸಮಾಂತರ ಬೀದಿಗಳು ಇದ್ದ ಪಟ್ಟಣವೊಂದಿತ್ತು. ಒಂದು ದಿನ ಫಕೀರನೊಬ್ಬ ಒಂದು ಬೀದಿಯಿಂದ ಇನ್ನೊಂದು ಬೀದಿಗೆ ದಾಟಿದ ಕೂಡಲೇ ಅವನ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿಯಲಾರಂಭಿಸಿದ್ದನ್ನು ಜನ ನೋಡಿದರು.
ತಕ್ಷಣವೇ “ಪಕ್ಕದ ಬೀದಿಯಲ್ಲಿ ಯಾರೋ ಒಬ್ಬರು ಸತ್ತುಹೋದರಂತೆ” ಎಂಬುದಾಗಿ ಒಬ್ಬಾತ ಬೊಬ್ಬೆಹೊಡೆದ. ಕೆಲವೇ ಕ್ಷಣಗಳಲ್ಲಿ ಆಸುಪಾಸಿನಲ್ಲಿದ್ದ ಮಕ್ಕಳು ಒಬ್ಬರ ನಂತರ ಒಬ್ಬರಂತೆ ಬೊಬ್ಬೆಹಾಕಿ ಆ ಸುದ್ದಿಯನ್ನು ಆ ಬೀದಿಯಲ್ಲಿ ಇದ್ದವರಿಗೆಲ್ಲ ತಲುಪಿಸಿದರು.

ವಾಸ್ತವವಾಗಿ ಫಕೀರ ಮೊದಲನೇ ಬೀದಿಗೆ ಬರುವ ಮುನ್ನವೇ ಈರುಳ್ಳಿಗಳನ್ನು ಕತ್ತರಿಸಿದ್ದರಿಂದ ಆತನ ಕಣ್ಣುಗಳಿಂದ ಕಣ್ಣೀರು ಸುರಿಯುತ್ತಿತ್ತು..
“ಪಕ್ಕದ ಬೀದಿಯಲ್ಲಿ ಯಾರೋ ಒಬ್ಬರು ಸತ್ತುಹೋದರಂತೆ”  ಸುದ್ದಿ ಬಾಯಿಯಿಂದ ಬಾಯಿಗೆ ಹರಡುತ್ತಾ ಅತ್ಯಲ್ಪ ಅವಧಿಯಲ್ಲಿ ಮೊದಲನೇ ಬೀದಿಯನ್ನೂ ತಲುಪಿ ಅಲ್ಲಿಯೂ ಹರಡಿತು. ಪರಸ್ಪರ ನಂಟುಳ್ಳವರೇ ಆಗಿದ್ದ ಎರಡೂ ಬೀದಿಗಳ ವಯಸ್ಕರು ಎಷ್ಟು ದುಃಖಿತರೂ ಭಯಗ್ರಸ್ಥರೂ ಆಗಿದ್ದರೆಂದರೆ ಯಾರೊಬ್ಬರೂ ಸುದ್ದಿಯ ನಿಷ್ಕೃಷ್ಟತೆಯನ್ನೇ ಆಗಲಿ ಮೂಲವನ್ನೇ ಆಗಲಿ ವಿಚಾರಿಸುವ ಗೊಡವೆಗೇ ಹೋಗಲಿಲ್ಲ.
‘ಸತ್ತದ್ದು ಯಾರು’ ಎಂಬುದನ್ನು ಯಾರೊಬ್ಬರೂ ವಿಚಾರಿಸುತ್ತಿಲ್ಲವೇಕೆ ಎಂಬುದಾಗಿ ವಿವೇಕಿಯೊಬ್ಬ ಎರಡೂ ಬೀದಿಗಳ ಜನರನ್ನು ಕೇಳಲಾರಂಭಿಸಿದ. ತುಂಬ ಗೊಂದಲಗೊಂಡಿದ್ದ ಅವರ ಪೈಕಿ ಒಬ್ಬ ಹೇಳಿದ, “ಪಕ್ಕದ ಬೀದಿಯಲ್ಲಿ ಮಾರಣಾಂತಿಕ ಪ್ಲೇಗಉ ಹರಡಿದೆ ಎಂಬುದು ಮಾತ್ರ ನಮಗೆ ಗೊತ್ತು.”

ಈ ಸುದ್ದಿಯೂ ಕಾಳ್ಗಿಚ್ಚಿನಂತೆ ಎರಡೂ ಬೀದಿಗಳಲ್ಲಿ ಹರಡಿತು. ಪ್ರತೀ ಬೀದಿಯ ಪ್ರತೀ ನಿವಾಸಿಯೂ “ಈ ಬೀದಿಯಲ್ಲಿ ಇದ್ದರೆ ಉಳಿಗಾಲವಿಲ್ಲ” ಎಂಬುದಾಗಿ ನಂಬಿದರು.
ತತ್ಪರಿಣಾಮವಾಗಿ ತಮ್ಮನ್ನು ಸಂರಕ್ಷಿಸಿಕೊಳ್ಳುವ ಸಲುವಾಗಿ ಎರಡೂ ಬೀದಿಯ ಜನರು ಆ ಸ್ಥಳದಿಂದ ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗಿ ತಾವಿದ್ದ ಪಟ್ಟಣದಿಂದ ಅನತಿ ದೂರದಲ್ಲಿ ಎರಡು ಹಳ್ಳಿಗಳನ್ನೇ ನಿರ್ಮಿಸಿದರು!

ಈ ವಿದ್ಯಮಾನ ಜರಗಿ ಶತಮಾನಗಳೇ ಕಳೆದಿವೆ. ಆ ಪಟ್ಟಣ ಈಗ ಒಂದು ಜನರಿಲ್ಲದ  ಹಾಳೂರು. ವಲಸಿಗರು ಕಟ್ಟಿಕೊಂಡ ಎರಡೂ ಊರುಗಳ ಪೈಕಿ ಪ್ರತೀ ಊರಿನವರು ‘ಒಂದಾನೊಂದು ಕಾಲದಲ್ಲಿ ಅಜ್ಞಾತ ದುಷ್ಟಶಕ್ತಿಯಿಂದ ಅಳಿಯುವುದನ್ನು ತಪ್ಪಿಸಿಕೊಳ್ಳಲು ಹಿಂದೆ ಇದ್ದ ಊರಿನಿಂದ ಓಡಿಬಂದ ರೋಚಕ ಕತೆಯನ್ನೂ ಹಾಲಿ ಇರುವಲ್ಲಿ ಅಂದು ಸ್ಥಾಪಿಸಿದ ಪಾಳೆಯ ಇಂದು ಸುಂದರ ಹಳ್ಳಿಯಾಗಿ ಪರಿವರ್ತನೆಯಾದ ರೋಚಕ ಕತೆಯನ್ನೂ’ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಹೇಳುತ್ತಾರೆ.

*****

೪. ದಿನಸಿ ವ್ಯಾಪಾರಿಯೂ ಅವನ ಗಿಳಿಯೂ
ಒಂದು ದಿನ ಜಹಾಂಗೀರ್‌ ಎಂಬ ದಿನಸಿ ವ್ಯಾಪರಿಯು ಮಾರಾಟಕ್ಕೆ ಇಟ್ಟಿದ್ದ ಸುಂದರ ಗಿಳಿಯೊಂದನ್ನು ಮಾರುಕಟ್ಟೆಯಲ್ಲಿ ನೋಡಿದ. ಅತ್ಯುತ್ಸಾಹದಿಂದ ಅದನ್ನು ಕೊಂಡುಕೊಂಡ. ತನ್ನ ಅಂಗಡಿಯ ಛತ್ತುವಿನಲ್ಲಿ ಒಂದು ಕೊಕ್ಕೆಯನ್ನು ಕೂರಿಸಿ ಅದಕ್ಕೆ ಆ ಗಿಳಿಯ ಪಂಜರವನ್ನು ನೇತು ಹಾಕಿದ. ಆ ಗಿಣಿಯು ತನ್ನ ವರ್ಣರಂಜಿತ ರೆಕ್ಕೆಪುಕ್ಕಗಳಿಂದಲೂ ಮಾತನಾಡುವ ಸಾಮರ್ಥ್ಯದಿಂದಲೂ ಹೆಚ್ಚು ಗಿರಾಕಿಗಳನ್ನು ಆಕರ್ಷಿಸುತ್ತದೆ ಎಂಬ ನಂಬಿಕೆಯಿಂದ ಜಹಾಂಗಿರ್‌ ಪಂಜರವನ್ನು ಹೊರಗಡೆಯಿಂದಲೇ ಕಾಣಿಸುವಂತೆ ಬಾಗಿಲಿಗೆ ಎದುರಾಗಿ ಒಳ್ಳೆಯ ಆಯಕಟ್ಟಿನ ಸ್ಥಳದಲ್ಲಿ ನೇತು ಹಾಕಿದ್ದ. ಇತ್ತೀಚೆಗೆ ಅಷ್ಟೇನೂ ಚೆನ್ನಾಗಿ ನಡೆಯುತ್ತಿರದೇ ಇದ್ದ ವ್ಯಾಪಾರವನ್ನು ಅಭಿವೃದ್ಧಿಪಡಿಸಬಲ್ಲ ಹೂಡಿಕೆ ಎಂಬುದಾಗಿ ಗಿಳಿಯನ್ನು ಅವನು ಪರಿಗಣಿಸಿದ್ದ.

ಅವನ ಆಲೋಚನೆ ಹುಸಿಯಾಗಲಿಲ್ಲ. ಗಿಳಿಯ ಮಾತುಗಳನ್ನು ದಾರಿಯಲ್ಲಿ ಹೋಗುತ್ತಿದ್ದವರು ಕೇಳಿದಾಗ ಕುತೂಹಲದಿಂದ ಅಂಗಡಿಯ ಒಳಬಂದು ಅದರ ಆಸಕ್ತಿ ಮೂಡಿಸುವ ಬಡಬಡಿಸುವಿಕೆಯನ್ನು ಕೇಳಿದ ನಂತರ ಸೌಜನ್ಯಕ್ಕಾಗಿ ಏನೋ ಒಂದು ವಸ್ತುವನ್ನು ಖರೀದಿಸುತ್ತಿದ್ದರು. ಜಹಾಂಗೀರ್‌ನಿಗೆ ಇದರಿಂದ ಬಲು ಖುಷಿಯಾಗಿ ಆ ಗಿಣಿಗೆ ‘ಸಿಹಿನಾಲಿಗೆ’ ಎಂಬುದಾಗಿ ನಾಮಕರಣ ಮಾಡಿದ.
ಸಿಹಿನಾಲಿಗೆ ಒಂದು ಸಾಮಾನ್ಯ ಗಿಳಿಯಾಗಿರಲಿಲ್ಲ. ಮಾತುಗಳನ್ನು ಯಥಾವತ್ತಾಗಿ ಅನುಕರಿಸುವುದರ ಜೊತೆಗೆ ಅವುಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಂತೆ ಕಾಣುತ್ತಿತ್ತು. ಜಹಾಂಗೀರ್‌ನೊಂದಿಗೆ ಅದು ಸಂಭಾಷಿಸುತ್ತಿತ್ತು. ತತ್ಪರಿಣಾಮವಾಗಿ ಜಹಾಂಗೀರ್‌ ಮತ್ತು ಗಿಳಿ ಬಲು ಬೇಗನೆ ಮಿತ್ರರಾದರು.

ಜಹಾಂಗೀರ್‌ನ ದಿನಸಿ ವ್ಯಾಪಾರ ಬಲುಬೇಗನೆ ಉಚ್ಛ್ರಾಯಸ್ಥಿತಿಯನ್ನು ಪಡೆಯಿತು, ಅವನು ಬೇರೆಡೆ ಇನ್ನೂ ದೊಡ್ಡದಾದ ಅಂಗಡಿ ತೆರೆದನು, ಸರಕು ಸಂಗ್ರಹವನ್ನೂ ವಿಸ್ತರಿಸಿದನು. ಅವನ ವ್ಯಾಪಾರ ದಿನೇದಿನೇ ಬಲುವೇಗವಾಗಿ ಅಭಿವೃದ್ಧಿಯಾಗುತ್ತಿದ್ದದ್ದರಿಂದ ಗಿಡಮೂಲಿಕೆಗಳ ಔಷಧಿಗಳ ವಿಭಾಗವನ್ನೂ ಅಂಗಡಿಗೆ ಸೇರಿಸಿದನು. ಅಂತಿಮವಾಗಿ ಜಹಾಂಗೀರ್‌ ಬಲುದೊಡ್ಡ ಮೊತ್ತದ ಹಣವನ್ನು ಬಂಡವಾಳವಾಗಿ ಹೂಡಿಕೆ ಮಾಡಿದ ನಂತರ ಅಂಗಡಿಯ ಒಂದು ದೊಡ್ಡ ಭಾಗವನ್ನು ಪೂರ್ಣಪ್ರಮಾಣದ ಔಷಧದ ಅಂಗಡಿಯಾಗಿ ಪರಿವರ್ತಿಸಲು ನಿರ್ಧರಿಸಿದ. ತತ್ಪರಿಣಾಮವಾಗಿ ಎಲ್ಲ ತರಹದ ತೈಲಗಳು, ಮುಲಾಮುಗಳು, ದ್ರವ ಔಷಧಗಳು, ಔಷಧ ಷರಬತ್ತುಗಳು ಇರುವ ನೂರಾರು ಸೀಸೆಗಳು ಪ್ರದರ್ಶನ ಕಪಾಡಿನಲ್ಲಿ ರಾರಾಜಿಸಿದವು. ಗಿಳಿಯ ಗುಣವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಜಹಾಂಗೀರ್‌ ತನ್ನ ಪಕ್ಷಿ ಮಿತ್ರನನ್ನು ಬಹುವಾಗಿ ಪ್ರೀತಿಸುತ್ತಿದ್ದ. ಎಂದೇ, ಬಹುಮಾನವಾಗಿ ತನ್ನ ಅಂಗಡಿಯೊಳಗೆ ಇಷ್ಟಬಂದಲ್ಲಿ ಹಾರಾಡುವ ಸ್ವಾತಂತ್ರ್ಯವನ್ನು ಅದಕ್ಕೆ ಕೊಟ್ಟಿದ್ದ.

ಇಂತಿರುವಾಗ ಒಂದು ದಿನ ಬೆಳಗ್ಗೆ ಎಂದಿನಂತೆ ಜಹಾಂಗೀರ್‌ ಅಂಗಡಿಯ ಬಾಗಿಲು ತೆರೆದಾಗ ಸಿಹಿನಾಲಿಗೆ ಮನಬಂದೆಡೆಯೆಲ್ಲ ಹಾರಾಡುತ್ತಿದ್ದದ್ದನ್ನೂ ಎಲ್ಲ ಸೀಸೆಗಳು ಒಡೆದು ಚೂರುಚೂರಾಗಿ ನೆಲದ ಮೇಲೆ ಚಲ್ಲಾಪಿಲ್ಲಿಯಾಗಿ ಹರಡಿರುವುದನ್ನೂ ನೋಡಿದ. ಹಾರಾಡುವಾಗ ಗಿಳಿಗೆ ಸೀಸೆಗಳು ತಗುಲಿ ಅವು ನೆಲಕ್ಕೆ ಬಿದ್ದಿದ್ದವು. ಹಾಕಿದ್ದ ಬಂಡವಾಳದ ಬಹುಪಾಲು ನಷ್ಟವಾಗಿತ್ತು! ಕೋಪೋದ್ರಿಕ್ತನಾದ ಜಹಾಂಗೀರ್‌ ಸಿಹಿನಾಲಿಗೆಯ ಕತ್ತನ್ನು ಹಿಡಿದು ಅದರ ತಲೆಗೆ ಅನೇಕ ಸಲ ಹೊಡೆದ. ಅಷ್ಟೊಂದು ಹೊಡೆತಗಳು ತಲೆಗೆ ಬಿದ್ದರೂ ಬಡಪಾಯಿ ಪಕ್ಷಿ ಸಾಯದೇ ಬದುಕಿ ಉಳಿದದ್ದೇ ಆಶ್ಚರ್ಯದ ಸಂಗತಿ. ಕೊನೆಗೆ ಗಿಳಿಯನ್ನು ಪಂಜರದೊಳಕ್ಕೆ ಎಸೆದು ಒಂದೆಡೆ ಕುಳಿತು ತನ್ನ ದುರದೃಷ್ಟವನ್ನು ಜ್ಞಾಪಿಸಿಕೊಂಡು ಅತ್ತನು. ಅನೇಕ ಗಂಟೆಗಳ ನಂತರ ತಾನು ಗಿಳಿಯ ತಲೆಗೆ ಹೊಡೆದದ್ದರಿಂದ ಅದರ ತಲೆಯ ಗರಿಗಳು ಬಿದ್ದು ಹೋಗಿವೆಯೆಂಬ ಅಂಶ ಅವನ ಅರಿವಿಗೆ ಬಂದಿತು. ಸಂಪೂರ್ಣ ಬೋಳುತಲೆಯ ಬಡಪಾಯಿ ಪಕ್ಷಿ ಪುನಃ ಪಂಜರದೊಳಗೆ ಬಂಧಿಯಾಯಿತು.

ನಿಧಾನವಾಗಿ ಜಹಾಂಗೀರ್‌ನ ವ್ಯಾಪಾರ ಪುನಃ ಚೇತರಿಸಿಕೊಂಡದ್ದರಿಂದ ಆದ ನಷ್ಟವನ್ನು ಸರಿದೂಗಿಸಲು ಅವನಿಗೆ ಸಾಧ್ಯವಾಯಿತು. ಆದರೂ, ದುರಸ್ತಿಮಾಡಲಾಗದ ಹಾನಿಯಂದು ಅಂತೆಯೇ ಉಳಿಯಿತು. ನೋಡಲು ವಿಚಿತ್ರವಾಗಿ ಕಾಣುತ್ತಿದ್ದ ಸಿಹಿನಾಲಗೆ ಮೌನವಾಗಿಯೇ ಉಳಿಯಿತು. ಸಿಹಿನಾಲಗೆಯ ಮಧುರವಾದ ಮಾತುಗಳನ್ನು ಕೇಳಲೋಸುಗವೇ ಅಂಗಡಿಗೆ ಬರುತ್ತಿದ್ದ ಗಿರಾಕಿಗಳ ಸಂಖ್ಯೆ ಕ್ರಮೇಣ ಕಮ್ಮಿಆಯಿತು. ಒಂದು ಕಾಲದಲ್ಲಿ ಜೋರಾಗಿಯೇ ನಡೆಯುತ್ತಿದ್ದ ದಿನಸಿ ವ್ಯಾಪಾರವೂ ಇಳಿಮುಖವಾಗಲು ಆರಂಭಿಸಿತು.

ಗಿಳಿ ಪುನಃ ಮಾತನಾಡುವಂತೆ ಮಾಡಲು ಜಹಾಂಗೀರ್‌ ಅನೇಕ ತಂತ್ರಗಳನ್ನು ಯೋಜಿಸಿದ. ಬಲು ರುಚಿಯಾದ ಬೀಜಗಳ ಪ್ರಲೋಭನೆಯೊಡ್ಡಿದರೂ ಅದು ಆಸಕ್ತಿ ತೋರಲಿಲ್ಲ. ಜಹಾಂಗೀರ್‌ನನ್ನು ಕ್ಷಮಿಸಿ ಪುನಃ ಮಾತನಾಡುವಂತೆ ಸಿಹಿನಾಲಗೆಯ ಮನಸ್ಸನ್ನು ಪರಿವರ್ತಿಸಲು ಅಂಗಡಿಗೆ ಒಬ್ಬ ಸಂಗೀತಗಾರನನ್ನೂ ಕರೆತಂದದ್ದಾಯಿತು. ಆದರೂ ಸಿಹಿನಾಲಗೆ ಮೌನವಾಗಿಯೇ ಇತ್ತು. ಕೊನೆಯ ಪ್ರಯತ್ನವಾಗಿ ಹೆಣ್ಣು ಗಿಳಿಯೊಂದನ್ನು ತಂದು ಸಿಹಿನಾಲಗೆಯ ಪಂಜರದ ಎದುರೇ ಅದರ ಪಂಜರವನ್ನೂ ಜಹಾಂಗೀರ್‌ ಇಟ್ಟನು. ಸಿಹಿನಾಲಗೆ ಪುನಃ ಮಾತನಾಡಿದರೆ ಅಂಗಡಿಯೊಳಗೆ ಹಾರಾಡುವ ಸ್ವಾತಂತ್ರ್ಯವನ್ನು ಎರಡೂ ಪಕ್ಷಿಗಳಿಗೆ ಕೊಡುವುದಾಗಿಯೂ ಹೇಳಿದರೂ ಸಿಹಿನಾಲಿಗೆ ಅವನನ್ನೂ ಹೆಣ್ಣುಗಿಳಿಯನ್ನೂ ನಿರ್ಲಕ್ಷಿಸಿತು.

ಕೊನೆಗೆ ಜಹಾಂಗೀರ್‌ ಪ್ರಯತ್ನಿಸುವದನ್ನೇ ಬಿಟ್ಟುಬಿಟ್ಟನು. ದೇಹಕ್ಕೆ ಆದ ಆಘಾತದಿಂದಾಗಿ ಗಳಿ ಮಾತನಾಡುವ ಸಾಮರ್ಥ್ಯವನ್ನೇ ಕಳೆದುಕೊಂಡಿರಬೇಕೆಂದು ಭಾವಿಸಿದ ಜಹಾಂಗೀರ್‌ ಗಿಳಿಯನ್ನು ಪಂಜರದಲ್ಲಿಯೇ ನೆಮ್ಮದಿಯಿಂದ ಇರಲು ಬಿಟ್ಟಬಿಟ್ಟನು. ಆದರೂ, ತನ್ನ ಧರ್ಮನಿಷ್ಠೆಯ ಪರಿಣಾಮವಾಗಿ  ಅದು ಮಾತನಾಡಲು ಆರಂಭಿಸೀತು ಎಂಬ ಆಸೆಯಿಂದ ಬಡವರಿಗೆ ತುಸು ಧಾರಾಳವಾಗಿ ದಾನ ಮಾಡಲಾರಂಭಿಸಿದ, ಹೆಚ್ಚಿನ ಶ್ರದ್ಧೆಯಿಂದ ಪ್ರಾರ್ಥನೆಯನ್ನೂ ಮಾಡಲಾರಂಭಿಸಿದ ಜಹಾಂಗೀರ್‌.

ಇಂತಿರುವಾಗ ಒಂದು ದಿನ ಕೈನಲ್ಲಿ ಮರದ ಬಟ್ಟಲನ್ನು ಹಿಡಿದುಕೊಂಡಿದ್ದ ತೇಪೆಹಾಕಿದ ಉಡುಪು ಧರಿಸಿದ್ದ ಅಲೆಮಾರಿ ಫಕೀರನೊಬ್ಬ ಅಂಗಡಿಯನ್ನು ದಾಟಿ ಮುಂದೆ ಹೋಗುತ್ತಿದ್ದ. ಅವನ ತಲೆ ಸಂಪೂರ್ಣ ಬೋಳಾಗಿತ್ತು. ಆಗ ಅಂಗಡಿಯೊಳಗಿನಿಂದ ಹಠಾತ್ತಾಗಿ ಮೂಗಿನಿಂದ ಉಚ್ಚರಿಸಿದಂತಿದ್ದ ಧ್ವನಿಯೊಂದು ಕೇಳಿಸಿತು, “ ಏಯ್‌, ನೀನು! ನಿನ್ನ ತಲೆ ಏಕೆ ಬೋಳಾಯಿತು? ನೀನೂ ಕೆಲವು ಸೀಸೆಗಳನ್ನು ಒಡೆದು ಹಾಕಿದೆಯಾ?”

ತನ್ನನ್ನು ಮಾತನಾಡಿಸಿದವರು ಯಾರು ಎಂಬುದನ್ನು ನೋಡಲೋಸುಗ ಫಕೀರ ಅಂಗಡಿಯತ್ತ ತಿರುಗಿದ. ತನ್ನನ್ನು ಮಾತನಾಡಿಸಿದ್ದು ಒಂದು ಗೀಲಿ ಎಂಬುದನ್ನು ತಿಳಿದು ಆಶ್ಚರ್ಯಚಕಿತನಾದ. ಹಠಾತ್ತಾಗಿ ಒಲಿದು ಬಂದ ಅದೃಷ್ಟದಿಂದ ಉತ್ತೇಜಿತನಾದ ಜಹಾಂಗೀರ್‌ ಆ ಫಕೀರನನ್ನು ಅಂಗಡಿಯೊಳಕ್ಕೆ ಆಹ್ವಾನಿಸಿದ. ಔಷಧದ ಸೀಸೆಗಳನ್ನು ಗಿಳಿ ಒಡೆದ ಕತೆಯನ್ನೂ ಗಿಳಿಯ ತಲೆ ಏಕೆ ಬೋಳಾಯಿತೆಂಬುದನ್ನೂ ಅದು ಮಾತನಾಡುವುದನ್ನು ನಿಲ್ಲಿಸಿದ ಕತೆಯನ್ನೂ ಫಕೀರನಿಗೆ ಜಹಾಂಗೀರ್‌ ಹೇಳಿದ. ಫಕೀರ ಪಂಜರದ ಸಮೀಪಕ್ಕೆ ಹೋಗಿ ಸಿಹಿನಾಲಗೆಗೆ ಹೇಳಿದ, “ನಿನಗಾದ ಅನುಭವವನ್ನು ಹೋಲುವ ಅನುಭವ ನನಗೂ ಆದದ್ದು ನನ್ನ ತಲೆ ಬೋಳಾಗಲು ಕಾರಣ ಎಂಬುದಾಗಿ ನೀನು ಆಲೋಚಿಸುತ್ತಿರುವೆಯಲ್ಲವೇ?”

“ಬೇರೇನು ಆಗಿರಲು ಸಾಧ್ಯ,” ಕೇಳಿತು ಸಿಹಿನಾಲಿಗೆ.
ಫಕೀರ ನಸುನಕ್ಕು ಹೇಳಿದ, “ಪ್ರಿಯ ಮಿತ್ರನೇ, ನಿನಗೊಂದು ಬುದ್ಧಿಮಾತು ಹೇಳುತ್ತೇನೆ: ಒಂದು ಮರದ ಯಾವುದೇ ಎರಡು ಎಲೆಗಳು ಸಮರೂಪಿಗಳಾಗಿರುವುದಿಲ್ಲ! ಅಂತೆಯೇ ಮೇಲ್ನೋಟಕ್ಕೆ ಒಂದೇ ರೀತಿ ಇರುವಂತೆ ಭಾಸವಾಗುವ ಇಬ್ಬರು ವ್ಯಕ್ತಿಗಳೂ ಸಹ. ಇವರ ಪೈಕಿ ಒಬ್ಬ ತನ್ನ ಜೀವನಾನುಭವಗಳ ಕುರಿತು ಚಿಂತನ ಮಾಡುವವನಾಗಿರಬಹುದು, ಇನ್ನೊಬ್ಬ ತಿಳಿವಳಿಕೆ ಸಾಲದವನಾಗಿರಬಹುದು. ಇಂತಿದ್ದರೂ ಅವರೀರ್ವರೂ ಒಂದೇ ರೀತಿ ಇದ್ದಾರೆ ಅನ್ನುವವರು ಬಹುಮಂದಿ ಇದ್ದಾರೆ. ವಿವೇಕಿಗೂ ವಿವೇಕರಹಿತನಿಗೂ ಇರುವ ವ್ಯತ್ಯಾಸಕ್ಕಿಂತ ಹೆಚ್ಚಿನ ವ್ಯತ್ಯಾಸ ಇರುವುದು ಸಾಧ್ಯವೇ?. ಮೋಸೆಸ್‌ನ ಕೈನಲ್ಲಿದ್ದ ದಂಡಕ್ಕೂ ಏರನ್‌ನ ಕೈನಲ್ಲಿದ್ದ ದಂಡಕ್ಕೂ ನಡುವಿನ ವ್ಯತ್ಯಾಸಕ್ಕೆ ಸಮನಾದ ವ್ಯತ್ಯಾಸ ಇದು – ಒಂದರಲ್ಲಿ ದೈವಿಕ ಶಕ್ತಿ ಉಳ್ಳದ್ದು, ಇನ್ನೊಂದು ಮಾನವ ಶಕ್ತಿ ಉಳ್ಳದ್ದು. ಒಂದು ಪವಾಡಗಳನ್ನು ಮಾಡುತ್ತದೆ, ಇನ್ನೊಂದು ಮೋಡಿ ಮಾಡುತ್ತದೆ. ಮೇಲ್ನೋಟಕ್ಕೆ ಒಂದೇ ತೆರನಾಗಿ ಕಾಣುವ ವಸ್ತುಗಳ ತಿರುಳು ಬೇರೆಬೇರೆ ಆಗಿರುವ ಸಾಧ್ಯತೆ ಇರುವುದರಿಂದ ತೋರ್ಕೆಯನ್ನು ಆಧರಿಸಿ ಅಂಥವುಗಳ ಕುರಿತಾಗಿ ತೀರ್ಮಾನ ಕೈಗೊಳ್ಳುವ ಮಾನವನ ಸ್ವಭಾವಸಿದ್ಧ ಗುಣ ಉಂಟುಮಾಡುವಷ್ಟು ತೊಂದರೆಯನ್ನು ಬೇರೆ ಯಾವುದೂ ಮಾಡಲಾರದು. ಉದಾಹರಣೆಗೆ ಜೇನುನೊಣ, ಹೆಜ್ಜೇನು – ಇವುಗಳನ್ನು ಪರಿಶೀಲಿಸು. ಮೇಲ್ನೋಟಕ್ಕೆ ಎರಡೂ ಒಂದೇ ತೆರನಾಗಿ ಕಂಡರೂ ಒಂದರಿಂದ ನಮಗೆ ಸುಲಭವಾಗಿ ದೊರೆಯವುದು ಜೇನು, ಇನ್ನೊಂದರಿಂದ ನೋವು!”

ಫಕೀರನು ಮಾತನಾಡುವುದನ್ನು ನಿಲ್ಲಿಸಿ ಜಹಾಂಗೀರ್‌ನ ಆತ್ಮವನ್ನೇ ವಾಚಿಸುವವನಂತೆ ಅವನತ್ತ ಒಂದು ತೀಕ್ಷ್ಣವಾದ ನೋಟ ಬೀರಿದ. ಸಿಹಿನಾಲಗೆ ತನ್ನ ಪಂಜರದಲ್ಲಿ ಮೌನವಾಗಿ ಕುಳಿತಿತ್ತು, ಜಹಾಂಗೀರ್‌ ದಿಗ್ಭ್ರಾಂತನಾದವನಂತೆ ನಿಂತಿದ್ದ. ಫಕೀರ ನಸುನಕ್ಕು ಹೊರನಡೆದ. ತನಗೆ ಎಂದೂ ಮರೆಯಲಾಗದ ಪಾಠವೊಂದನ್ನು ಫಕೀರ ಕಲಿಸಿದ ಎಂಬುದನ್ನು ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡ ಜಹಾಂಗೀರ್‌ ಅರ್ಥಮಾಡಿಕೊಂಡ. ಫಕೀರನಿಗೆ ಕೃತಜ್ಞತೆಗಳನ್ನು ಅರ್ಪಿಸಲೋಸುಗ ಅವನು ಹೊರಕ್ಕೆ ಓಡಿದನಾದರೂ ಎಲ್ಲಿಯೂ ಫಕೀರನ ಸುಳಿವೇ ಇರಲಿಲ್ಲ. ಬೋಳುತಲೆಯ ಫಕೀರನೊಬ್ಬನನ್ನು ಆ ದಿನ ಪೇಟೆಯಲ್ಲಿ ನೋಡಿದ ನೆನಪೇ ಯಾರಿಗೂ ಇರಲಿಲ್ಲ!

*****

೫. ವಿನಿಗರ್‌ನಲ್ಲಿ ಬೇಯಿಸಿದ ಲೀಮ ಹುರುಳಿಯ ಕತೆ
ತೀವ್ರವಾದ ಹೊಟ್ಟೆನೋವಿನಿಂದ ನರಳುತ್ತಿದ್ದ ಚಮ್ಮಾರನೊಬ್ಬ ಸ್ಥಳೀಯ ವೈದ್ಯರ ಹತ್ತಿರ ಹೋದ. ವೈದ್ಯರು ಚಮ್ಮಾರನನ್ನು ಬಲು ಜಾಗರೂಕತೆಯಿಂದ ಕೂಲಂಕಶವಾಗಿ ತಪಾಸಣೆ ಮಾಡಿದರೂ ಚಮ್ಮಾರನ ಬಾಧೆಯ ಕಾರಣ ತಿಳಿಯದ್ದರಿಂದ ಅವನ ಬಾಧೆಯನ್ನು ನಿವಾರಿಸಬಲ್ಲ ಔಷಧ ಸೂಚಿಸಲು ಸಾಧ್ಯವಾಗಲಿಲ್ಲ. ಚಮ್ಮಾರ ಆತಂಕದಿಂದ ಕೇಳಿದ, “ವೈದ್ಯರೇ ನನ್ನ ರೋಗಕ್ಕೆ ಏನಾದರೂ ಚಿಕಿತ್ಸೆ ಇದೆಯೇ?”
ವೈದ್ಯರು ಉತ್ತರಿಸಿದರು, “ದುರದೃಷ್ಟವಶಾತ್‌ ನಿನ್ನ ರೋಗವನ್ನು ನಿವಾರಿಸಬಲ್ಲ ಯಾವುದೇ ಔಷಧ ನನ್ನ ಹತ್ತಿರ ಇಲ್ಲ. ವಾಸ್ತವವಾಗಿ ನಿನ್ನ ಹೊಟ್ಟೆನೋವಿಗೆ ಕಾರಣವೇನು ಎಂಬುದನ್ನು ನಿಷ್ಕೃಷ್ಟವಾಗಿ ಗುರುತಿಸಲೂ ನನಗೆ ಸಾಧ್ಯವಾಗುತ್ತಿಲ್ಲ”

ಚಮ್ಮಾರ ಬಲು ಬೇಸರದಿಂದ ಹೇಳಿದ, “ಸರಿ ಹಾಗಾದರೆ, ನೀವು ಮಾಡಬಹುದಾದದ್ದು ಏನೂ ಇಲ್ಲ ಅನ್ನುವುದಾದರೆ ನನ್ದೊಂದು ಅಂತಿಮ ಆಸೆ ಇದೆ. ದೊಡ್ಡದಾದ ತಪ್ಪಲೆಗೆ ಎರಡು ಪೌಂಡ್‌ ಲೀಮ ಹುರುಳಿ ಹಾಗೂ ಒಂದು ಗ್ಯಾಲನ್‌ ವಿನಿಗರ್‌ ಹಾಕಿ ಬೇಯಿಸಬೇಕು. ಅದೇ ನನ್ನ ಅಂತಿಮ ಭೋಜನದ ಭಕ್ಷ್ಯ.
ವೈದ್ಯರು ಹೆಗಲನ್ನು ಕೊಡವುವುದರ ಮುಖೇನ ತನ್ನ ತಿರಸ್ಕಾರವನ್ನು ಪ್ರದರ್ಶಿಸಿ ಹೇಳಿದರು, “ಇದೊಂದು ಒಳ್ಳೆಯ ಆಲೋಚನೆ ಎಂಬುದಾಗಿ ನನಗನ್ನಿಸುವುದಿಲ್ಲ. ಆದರೂ ಅದು ಪರಿಣಾಮಕಾರೀ ಔಷಧವಾಗುತ್ತದೆ ಎಂಬುದಾಗಿ ನಿನಗನ್ನಿಸುವುದಾದರೆ, ಪ್ರಯತ್ನಿಸಿ ನೋಡು. ನನ್ನದೇನೂ ಅಭ್ಯಂತರವಿಲ್ಲ.”
ಚಮ್ಮಾರನ ಸ್ಥಿತಿ ಬಲು ಗಂಭೀರವಾಗಿದೆ ಎಂಬ ಸುದ್ದಿಯ ಬರುವಿಕೆಯನ್ನು ಇಡೀ ರಾತ್ರಿ ವೈದ್ಯರು ಕಾಯುತ್ತಿದ್ದರು.

ಮರುದಿನ ಬೆಳಗ್ಗೆಯ ವೇಳೆಗೆ ಚಮ್ಮಾರನ ಹೊಟ್ಟೆನೋವು ಮಾಯವಾಗಿ ಆತ ಬಲು ಸಂತೋಷದಿಂದ ಇದ್ದದ್ದನ್ನು ನೋಡಿ ವೈದ್ಯರು ಆಶ್ಚರ್ಯಚಕಿತರಾದರು. ತನ್ನ ದಿನವರದಿಯ ಪುಸ್ತಕದಲ್ಲಿ ಅವರು ಇಂತು ದಾಖಲಿಸಿದರು: “ಇಂದು ಚಮ್ಮಾರನೊಬ್ಬ ನನ್ನ ಹತ್ತಿರ ಬಂದಿದ್ದ. ಅವನ ರೋಗ ನಿವಾರಣೆಗೆ ತಕ್ಕ ಚಿಕಿತ್ಸೆ ನನಗೆ ತಿಳಿಯಲಿಲ್ಲ. ಅವನೇ ಸೂಚಿಸಿದ ಎರಡು ಪೌಂಡ್‌ ಲೀಮ ಹುರುಳಿ ಹಾಗೂ ಒಂದು ಗ್ಯಾಲನ್‌ ವಿನಿಗರ್‌ ಅವನನ್ನು ರೋಗಮುಕ್ತನನ್ನಾಗಿಸಿತು.” 

ಕೆಲವು ದಿನಗಳ ನಂತರ ತೀವ್ರವಾಗಿ ಅಸ್ವಸ್ಥನಾಗಿದ್ದ ಆ ಊರಿನ ದರ್ಜಿಗೆ ವೈದ್ಯಕೀಯ ನೆರವು ನೀಡಲೋಸುಗ ಆ ವೈದ್ಯರು ದರ್ಜಿಯ ಮನೆಗೆ ಹೋಗಬೇಕಾಯಿತು. ದರ್ಜಿಯನ್ನು ಕಾಡುತ್ತಿದ್ದ ರೋಗಕ್ಕೆ ಏನು ಔಷಧ ನೀಡಬೇಕೆಂಬುದು ವೈದ್ಯರಿಗೆ ತಿಳಿಯಲಿಲ್ಲ. ನೋವಿನಿಂದ ನರಳುತ್ತಿದ್ದ ದರ್ಜಿ ಕಿರುಚಿದ, “ದಯವಿಟ್ಟು ವೈದ್ಯರೇ, ಯಾವುದೇ ರೀತಿಯ ಒರಿಹಾರವೂ ನಿಮಗೆ ತೋಚುತ್ತಿಲ್ಲವೇ?”
ವೈದ್ಯರು ಒಂದು ಕ್ಷಣ ಆಲೋಚಿಸಿ ಹೇಳಿದರು, “ಇಲ್ಲ. ಆದರೆ ಇತ್ತೀಚೆಗೆ ಇದೇ ರೀತಿಯ ಹೊಟ್ಟೆನೋವಿನಿಂದ ನರಳುತ್ತಿದ್ದ ಚಮ್ಮಾರನೊಬ್ಬ ನನ್ನ ಹತ್ತಿರ ಬಂದಿದ್ದ. ಎರಡು ಪೌಂಡ್‌ ಲೀಮ ಹುರುಳಿ ಹಾಗೂ ಒಂದು ಗ್ಯಾಲನ್‌ ವಿನಿಗರ್‌ ಅವನನ್ನು ರೋಗಮುಕ್ತನನ್ನಾಗಿಸಿತು.”

“ಇದೊಂದು ವಿಚಿತ್ರವಾದ ಚಿಕಿತ್ಸೆ ಎಂಬುದಾಗಿ ಅನ್ನಿಸುತ್ತಿದ್ದರೂ ಒಂದು ಬಾರಿ ಪ್ರಯೋಗಿಸಿ ನೋಡುತ್ತೇನೆ,” ಎಂಬುದಾಗಿ ಉದ್ಗರಿಸಿದ ದರ್ಜಿ. ವಿನಿಗರ್‌ನೊಂದಿಗೆ ಲೀಮ ಹುರುಳಿ ಸೇವಿಸಿದ ಆ ದರ್ಜಿ. ತತ್ಪರಿಣಾಮವಾಗಿ ಮಾರನೆಯ ದಿನದ ವೇಳೆಗೆ ಅವನ ಹೊಟ್ಟೆನೋವು ಉಲ್ಬಣಿಸಿತು.

ವೈದ್ಯರು ತಮ್ಮ ದಿನವರದಿಯ ಪುಸ್ತಕದಲ್ಲಿ ಅವರು ಇಂತು ದಾಖಲಿಸಿದರು: “ನಿನ್ನೆ ಒಬ್ಬ ದರ್ಜಿ ನನ್ನ ಹತ್ತಿರ ಬಂದಿದ್ದ. ಅವನಿಗೆ ನಾನು ಯಾವ ನೆರವೂ ನೀಡಲಾಗಲಿಲ್ಲ. ಅವನು ಲೀಮ ಹುರುಳಿ ಮತ್ತು ವಿನಿಗರ್‌ ಸೇವಿಸಿದ. ತತ್ಪರಿಣಾಮವಾಗಿ ಅವನ ಹೊಟ್ಟೆನೋವು ಉಲ್ಬಣಿಸಿತು. ಚಮ್ಮಾರರಿಗೆ ಯಾವುದರಿಂದ ಒಳ್ಳೆಯದಾಗುತ್ತದೋ ಅದರಿಂದ ದರ್ಜಿಗಳಿಗೆ ಒಳ್ಳೆಯದಾಗುವುದಿಲ್ಲ!”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x