೧. ದತ್ತು ಹಕ್ಕಿಮರಿಯ ಕತೆ
ಒಂದಾನೊಂದು ಕಾಲದಲ್ಲಿ ಹಾರಲಾರದ ಹೆಣ್ಣು ಪಕ್ಷಿಯೊಂದಿತ್ತು. ಕೋಳಿಯಂತೆ ನೆಲದ ಮೇಲೆ ನಡೆದಾಡುತ್ತಿದ್ದ ಅದಕ್ಕೆ ಕೆಲವು ಪಕ್ಷಿಗಳು ನಿಜವಾಗಿಯೂ ಹಾರುತ್ತಿದ್ದವು ಎಂಬುದು ತಿಳಿದಿತ್ತು. ಒಂದು ದಿನ ಅದು ಹಾರುವ ಪಕ್ಷಿಯ ಪರಿತ್ಯಕ್ತ ಮೊಟ್ಟೆಯೊಂದನ್ನು ನೋಡಿತು. ಮೊಟ್ಟೆಯೊಡೆದು ಮರಿ ಹೊರಬರುವ ವರೆಗೆ ಅದಕ್ಕೆ ಕಾವು ಕೊಡಲು ತೀರ್ಮಾನಿಸಿತು.
ಯುಕ್ತ ಸಮಯಾನಂತರ ಮೊಟ್ಟೆಯನ್ನು ಒಡೆದುಕೊಂಡು ಮರಿ ಹೊರಬಂದಿತು. ಅದು ಹಾರುವ ಸಾಮರ್ಥ್ಯವಿದ್ದ ಪಕ್ಷಿಯ ಮೊಟ್ಟಯಿಂದ ಹೊರಬಂದ ಮರಿಯಾದ್ದರಿಂದ ಅದಕ್ಕೂ ಹಾರುವ ಸಾಮರ್ಥ್ಯ ಹುಟ್ಟುವಾಗಲೇ ಇತ್ತು. ತುಸು ಬೆಳೆದ ನಂತರ ಅದು ತನ್ನನ್ನು ದತ್ತು ತೆಗೆದುಕೊಂಡಿದ್ದ ತಾಯಿಯನ್ನು ಕೇಳಿತು, “ನಾನು ಹಾರುವುದು ಯಾವಾಗ?” ಭೂ ಬಂಧಿತ ಪಕ್ಷಿ ಉತ್ತರಿಸಿತು, “ಇತರರಂತೆ ನಿನ್ನ ಪ್ರಯತ್ನಗಳನ್ನು ಪಟ್ಟುಬಿಡದೆ ಮುಂದುವರಿಸು.” ಮರಿಹಕ್ಕಿಗೆ ಹಾರುವುದು ಹೇಗೆಂಬುದನ್ನು ಕಲಿಸುವ ತಂತ್ರಗಳು ಆ ಹಕ್ಕಿಗೆ ತಿಳಿದಿರಲಿಲ್ಲ. ತನಗೆ ಹಾರಲು ಹೇಳಿಕೊಡಲು ಅದಕ್ಕೆ ಸಾಧ್ಯವಿಲ್ಲ ಎಂಬ ವಿಷಯ ಮರಿಹಕ್ಕಿಗೆ ಗೊತ್ತಿರಲಿಲ್ಲ. ತಾನು ಮೊಟ್ಟೆಯಿಂದ ಹೊರಬರಲು ಕಾರಣವಾದ ಹಕ್ಕಿಯ ಕುರಿತು ಮರಿಹಕ್ಕಿಗೆ ಕೃತಜ್ಞತಾ ಭಾವ ಇದ್ದದ್ದರಿಂದ ಪರಿಸ್ಥಿತಿಯನ್ನು ಅರ್ಥಮಾಡಿಕೊಳಲ್ಲುವುದರಲ್ಲಿ ಅದಕ್ಕೆ ಗೊಂದಲವಾಗುತ್ತಿತ್ತು.
ಎಂದೇ ಮರಿಹಕ್ಕಿ ತನಗೆ ತಾನೇ ಇಂತು ಹೇಳಿಕೊಳ್ಳುತ್ತಿತ್ತು: “ನನ್ನನ್ನು ದತ್ತು ತೆಗೆದುಕೊಂಡ ತಾಯಿಹಕ್ಕಿ ಕಾವುಕೊಡದೇ ಇದ್ದಿದ್ದರೆ ನಾನು ಇನ್ನೂ ಮೊಟ್ಟೆಯೊಳಗೆ ಇರುತ್ತಿದ್ದೆ. ನಾನು ಮೊಟ್ಟೆಯೊಡೆದು ಹೊರಬರಲು ನೆರವಾದವರು ನನಗೆ ಹಾರುವುದನ್ನು ಖಂಡಿತ ಕಲಿಸಬಲ್ಲರು. ಬಹುಶಃ ಅದಕ್ಕೆ ಯುಕ್ತ ಸಮಯ ಒದಗಿ ಬರಬೇಕಷ್ಟೆ. ನನ್ನನ್ನು ಇಷ್ಟು ದೂರ ಕರೆದುಕೊಂಡು ಬಂದಾಕೆ ಒಂದು ದಿನ ಇದ್ದಕ್ಕಿದ್ದಂತೆ ನನ್ನನ್ನು ಮುಂದಿನ ಹಂತಕ್ಕೆ ಕರೆದೊಯ್ಯುವುದು ಖಚಿತ.”
*****
೨. ನಾನು, ನನ್ನ ಮನಸ್ಸು ಬೇರೆಬೇರೆ ಅಲ್ಲ ಎಂಬ ನಂಬಿಕೆ – ದುಃಖದ ಮೂಲ
ಜುನೈದ್ ತನ್ನ ಶಿಷ್ಯರೊಂದಿಗೆ ಪಟ್ಟಣದ ಮಾರುಕಟ್ಟೆಯ ಮೂಲಕ ಹೋಗುತ್ತಿದ್ದಾಗ ಯಾರೋ ಒಬ್ಬ ತನ್ನ ಹಸುವನ್ನು ಎಳೆದುಕೊಂಡು ಹೋಗುತ್ತಿದ್ದದ್ದನ್ನು ನೋಡಿದರು. ತಕ್ಷಣ “ತುಸು ಕಾಲ ನಿಲ್ಲು” ಎಂಬುದಾಗಿ ಅವನಿಗೆ ಹೇಳಿ ತನ್ನ ಶೀಷ್ಯರಿಗೆ ಹೇಳಿದರು, “ನೀವೆಲ್ಲರೂ ಈ ಮನುಷ್ಯ ಮತ್ತು ಅವನ ಹಸುವನ್ನು ಸುತ್ತುವರಿದು ನಿಂತುಕೊಳ್ಳಿ. ಈಗ ನಿಮಗೇನನ್ನೋ ಬೋಧಿಸುತ್ತೇನೆ.”
ಜುನೈದ್ ಒಬ್ಬ ಖ್ಯಾತ ಮುಮುಕ್ಷುವಾಗಿದ್ದದ್ದರಿಂದಲೂ ತನ್ನನ್ನೂ ತನ್ನ ಹಸುವನ್ನೂ ಉಪಯೋಗಿಸಿಕೊಂಡು ಏನು ಬೋಧಿಸುವರೆಂಬುದನ್ನು ತಿಳಿಯುವ ಕುತೂಹಲದಿಂದಲೂ ಆ ಮನುಷ್ಯ ಹಸುವನ್ನು ಹಿಡಿದುಕೊಂಡು ನಿಂತನು.
ಜುನೈದ್ ತನ್ನ ಶಿಷ್ಯರನ್ನು ಕೇಳಿದರು, “ನನಗೆ ನಿಮ್ಮಿಂದ ಒಂದು ವಿಷಯ ತಿಳಿಯಬೇಕಾಗಿದೆ. ಇಲ್ಲಿ ಯಾರು ಯಾರಿಗೆ ಬಂಧಿಸಲ್ಪಟ್ಟದ್ದಾರೆ? ಹಸು ಮನುಷ್ಯನಿಗೆ ಬಂಧಿಸಲ್ಪಟ್ಟದೆಯೋ ಅಥವ ಮನುಷ್ಯ ಹಸುವಿಗೆ ಬಂಧಿಸಲ್ಪಟ್ಟಿದ್ದಾನೋ?”
ಶಿಷ್ಯರು ಹೇಳಿದರು, “ಹಸು ಮನುಷ್ಯನಿಗೆ ಬಂಧಿಸಲ್ಪಟ್ಟಿದೆ. ಮನುಷ್ಯ ಇಲ್ಲಿ ಯಜಮಾನ. ಅವನು ಹಗ್ಗದಿಂದ ಹಸುವನ್ನು ಬಂಧಿಸಿ ಹಿಡಿದುಕೊಂಡಿದ್ದಾನೆ. ಅವನು ಹೋದಲ್ಲಿಗೆಲ್ಲ ಹಸು ಹೋಗಲೇ ಬೇಕು. ಅವನು ಯಜಮಾನ, ಹಸು ಗುಲಾಮ.”
“ಹಾಗೋ? ಈಗ ನೋಡಿ,” ಎಂಬುದಾಗಿ ಹೇಳಿದ ಜುನೈದ್ ಒಂದು ಚಾಕುವಿನಿಂದ ಹಗ್ವನ್ನು ಕತ್ತರಿಸಿದರು. ತಕ್ಷಣ ಹಸು ಅಲ್ಲಿಂದ ತಪ್ಪಿಸಿಕೊಂಡು ಓಡಿತು. ಅದರ ಮಾಲಿಕ ಅದನ್ನು ಹಿಡಿಯಲೋಸುಗ ಅದರ ಹಿಂದೆ ಓಡಿದ.
ಜುನೈದ್ ಶಿಷ್ಯರಿಗೆ ಹೇಳಿದರು, “ಏನಾಗುತ್ತಿದೆ ಎಂಬುದನ್ನು ಗಮನಿಸಿ. ಯಾರು ನಿಜವಾದ ಯಜಮಾನ? ಹಸುವಿಗೆ ಆ ಮನುಷ್ಯನ ಕುರಿತು ಯಾವ ಆಸಕ್ತಿಯೂ ಇಲ್ಲ. ಎಂದೇ ಅದು ತಪ್ಪಿಸಿಕೊಂಡು ಓಡುತ್ತಿದೆ.”
ಹಸುವಿನ ಮಾಲಿಕ ಕೋಪೋದ್ರಿಕ್ತನಾಗಿ ಅಬ್ಬರಿಸಿದ, “ಇದೆಂಥಾ ಪ್ರಯೋಗ?”
ಅದನ್ನು ನಿರ್ಲಕ್ಷಿಸಿ ಜನೈದ್ ತನ್ನ ಶಿಷ್ಯರಿಗೆ ಹೇಳಿದರು, “ನಿಮ್ಮ ಮನಸ್ಸಿಗೆ ಈ ವಿದ್ಯಮಾನವನ್ನು ಅನ್ವಯಿಸಬಹುದು. ನೀವು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರುವ ತೀರ ಅವಿವೇಕದ ಅಳೋಚನೆಗಳು ನಿಮ್ಮಲ್ಲಿ ಆಸಕ್ತವಾಗಿಲ್ಲ. ನಿಮಗೆ ಅವುಗಳಲ್ಲಿ ಆಸಕ್ತಿ ಇದೆ. ಏನೇನೋ ಕಸರತ್ತು ಮಾಡಿ ಅವನ್ನು ನೀವು ಹಿಡಿದಿಟ್ಟುಕೊಂಡಿದ್ದೀರಿ. ಅವನ್ನು ಹಿಡಿದಿಟ್ಟುಕೊಳ್ಳುವ ಕಾಯಕದಲ್ಲಿ ನೀವು ಹುಚ್ಚರಾಗುತ್ತಿದ್ದೀರಿ. ನೀವು ಅವುಗಳಲ್ಲಿ ಆಸಕ್ತಿ ಕಳೆದುಕೊಂಡ ತಕ್ಷಣ, ನೀವು ಅವುಗಳ ನಿರುಪಯುಕ್ತತೆಯನ್ನು ಮನಗಂಡ ತಕ್ಷಣ ಅವು ಮಾಯವಾಗಲಾರಂಭಿಸುತ್ತವೆ. ಈ ಹಸುವಿನಂತೆ ಅವು ನಿಮ್ಮಿಂದ ತಪ್ಪಿಸಿಕೊಂಡು ಹೊರಟು ಹೋಗುತ್ತವೆ.”
*****
೩. ಬೈರಾಗಿಯ ಬಯಕೆಗಳ ಕತೆ
ಆಲ್ಬೋರ್ಝ್ ಬೆಟ್ಟಗಳಲ್ಲಿ ಒಂದು ತುಂಡು ಬಟ್ಟೆಯನ್ನು ಸುತ್ತಿಕೊಂಡು ಧ್ಯಾನ ಮಾಡಲು ಬೈರಾಗಿ ಝಾರ್ವಂದ್ ತೀರ್ಮಾನಿಸಿದ. ಧರಿಸಿದ ಬಟ್ಟೆಯನ್ನು ಒಗೆದು ಒಣಹಾಕಿದಾಗ ಧರಿಸಿಕೊಳ್ಳಲು ಇನ್ನೊಂದು ತುಂಡು ಬಟ್ಟೆಯ ಅಗತ್ಯವಿದೆ ಅನ್ನುವ ಅರಿವು ಅವನಿಗೆ ಬಲು ಬೇಗನೆ ಉಂಟಾಯಿತು. ಸಮೀಪದ ಹಳ್ಳಿಯ ಜನಕ್ಕೆ ತನ್ನ ಬಯಕೆಯನ್ನು ಆತ ತಿಳಿಸಿದ. ಅವನೊಬ್ಬ ಧರ್ಮಶ್ರದ್ಧೆಯುಳ್ಳವ ಎಂಬುದು ಅವರಿಗೆ ಗೊತ್ತಿದ್ದದ್ದರಿಂದ ಅವನ ಬಯಕೆಯನ್ನು ಅವರು ಪೂರೈಸಿದರು. ಧರಿಸಿದ್ದ ಬಟ್ಟೆಯಲ್ಲದೆ ಇನ್ನೊಂದು ಬಟ್ಟೆಯ ತುಂಡಿನೊಂದಿಗೆ ಆತ ಪುನಃ ಬೆಟ್ವವನ್ನೇರಿದ.
ಕೆಲವೇ ದಿನಗಳಲ್ಲಿ ಇಲಿಯೊಂದು ತಾನು ಧ್ಯಾನ ಮಾಡುತ್ತಿದ್ದಾಗ ಹೆಚ್ಚುವರಿ ಬಟ್ಟೆಯ ತುಂಡನ್ನು ಎಳೆದೊಯ್ಯಲು ಪ್ರಯತ್ನಿಸುತ್ತಿರುವುದು ಅವನ ಗಮನಕ್ಕೆ ಬಂದಿತು. ಆ ಇಲಿಯನು ಹೆದರಿಸಿ ಓಡಿಸುವ ಇರಾದೆ ಅವನಗೆ ಇತ್ತಾದರೂ ಧ್ಯಾನ, ಪ್ರಾರ್ಥನೆಗಳನ್ನು ಬಿಟ್ಟು ಇಲಿಯನ್ನು ಅಟ್ಟಿಕೊಂಡು ಹೋಗುವಂತಿರಲಿಲ್ಲ. ಎಂದೇ, ಆತ ಪುನಃ ಹಳ್ಳಿಗೆ ಹೋಗಿ ತನಗೊಂದು ಬೆಕ್ಕನ್ನು ಕೊಡುವಂತೆ ಹಳ್ಳಿಗರನ್ನು ಕೇಳಿದ.
ಬೆಕ್ಕನ್ನು ಪಡೆದ ಬಳಿಕ ಕೇವಲ ಹಣ್ಣುಗಳನ್ನು ತಿಂದು ಬೆಕ್ಕು ಬದುಕಲಾರದು ಎಂಬ ಅರಿವು ಅವನಿಗೆ ಉಂಟಾಯಿತು. ಅವನು ಧ್ಯಾನ ಮಾಡುತ್ತಿದ್ದ ಸ್ಥಳದಲ್ಲಿ ಬೆಕ್ಕಿಗೆ ಬೇಕಾಗುವಷ್ಟು ಸಂಖ್ಯೆಯಲ್ಲಿ ಇಲಿಗಳೂ ಇರಲಿಲ್ಲ. ಅದಕ್ಕೆ ಹಾಲಿನ ಅವಶ್ಯಕತೆ ಇತ್ತು. ಅವನಿಗೆ ಕುಡಿಯಲು ಹಾಲು ಬೇಕಿರಲಿಲ್ಲ ಎಂಬುದು ಹಳ್ಳಿಗರಿಗೆ ಗೊತ್ತಿದ್ದದ್ದರಿಂದ ಸ್ವಲ್ಪ ಹಾಲನ್ನೂ ಅವರು ಕೊಟ್ಟರು.
ಆದರೆ ಆ ಹಾಲು ಬಲು ಬೇಗನೆ ಮುಗಿದು ಹೋಯಿತು. ಝಾರ್ವಂದ್ ಚಿಂತಾಕ್ರಾಂತನಾದ. ಏಕೆಂದರೆ ಆಗಿಂದಾಗ್ಯೆ ಅವನು ಹಾಲಿಗಾಗಿ ಬೆಟ್ಟ ಇಳಿದು ಹತ್ತಬೇಕಾಗಿತ್ತು. ಈ ಸಮಸ್ಯೆಯನ್ನು ನಿವಾರಿಸಲೋಸುಗ ಅವನು ಒಂದು ಬೆಕ್ಕಿಗೆ ಸಾಲುವಷ್ಟು ಹಾಲು ಕೊಡಬಲ್ಲ ಹಸುವೊಂದನ್ನು ತಾನು ಧ್ಯಾನ ಮಾಡುವಲ್ಲಿಗೆ ಒಯ್ದನು. ತತ್ಪರಿಣಾಮವಾಗಿ ಬೆಕ್ಕಿಗೆ ಹಾಲು ನೀಡುವ ಸಲುವಾಗಿ ಅವನೇ ಹಾಲು ಕರೆಯಬೇಕಾಯಿತು. ಆಗ ಅವನು ಇಂತು ಆಲೋಚಿಸಿದ: “ಹಳ್ಳಿಯಲ್ಲಿ ಬಹಳ ಮಂದಿ ಬಡವರು ಇದ್ದಾರೆ. ಅವರ ಪೈಕಿ ಯಾರಾದರೂ ಒಬ್ಬನಿಗೆ ಇಲ್ಲಿಗೆ ಬಂದು ಬೆಕ್ಕಿನ ಸಲುವಾಗಿ ಹಾಲು ಕರೆಯುವಂತೆಯೂ ಉಳಿದ ಹಾಲನ್ನು ಅವನೇ ಕುಡಿಯುವಂತೆಯೂ ಹೇಳುವುದು ಸರಿಯಾದೀತು.”
ಹಾಲು ಕುಡಿಯುವ ಆವಶ್ಯಕತೆ ಇದ್ದಂತೆ ಕಾಣುತ್ತಿದ್ದ ಬಡವನೊಬ್ಬನನ್ನು ಬೆಟ್ಟದ ಮೇಲಕ್ಕೆ ಕರೆದೊಯ್ದ ಝಾರ್ವಂದ್. ಬೆಟ್ಟದ ಮೇಗಣ ತಾಜಾ ವಾಯುವಿನ ಸೇವನೆ ಹಾಗೂ ಪುಷ್ಟಿದಾಯಕ ಹಾಲು ಕುಡಿಯುವಿಕೆಗಳ ಪರಿಣಾಮವಾಗಿ ಕೆಲವೇ ವಾರಗಳಲ್ಲಿ ಆತ ಆರೋಗ್ಯವಂತನಾದ. ಅವನು ಝಾರ್ವಂದ್‌ನಿಗೆ ಹೇಳಿದ, “ನನಗೊಬ್ಬ ಸಂಗಾತಿ ಬೇಕು ಅನ್ನಿಸುತ್ತಿದೆ. ಕುಟುಂಬವೊದನ್ನು ಹುಟ್ಟುಹಾಕುವ ಇರಾದೆಯೂ ಇದೆ.”
ಝಾರ್ವಂದ್ ಆಲೋಚಿಸಿದ, “ಅವನು ಹೇಳುತ್ತಿರುವುದು ಸರಿಯಾಗಿಯೇ ಇದೆ. ಸಂಗಾತಿಯ ಸಾಹಚರ್ಯದಿಂದ ಅವನನ್ನು ವಂಚಿತನಾಗುವಂತೆ ನಾನು ಮಾಡಕೂಡದು.”
ಇದೇ ರೀತಿ ಮುಂದುವರಿಯುವ ನೀಳ್ಗತೆಯನ್ನು ಮೊಟಕುಗೊಳಿಸಿ ಹೇಳುವುದಾದರೆ ಎರಡು ತಿಂಗಳುಗಳ ನಂತರ ಇಡೀ ಹಳ್ಳಿಯೇ ಬೆಟ್ಟದ ಮೇಲಕ್ಕೆ ವರ್ಗಾವಣೆ ಆಗಿತ್ತು.
*****
೪. ಒಬ್ಬ ಮಗ ಬೇಕೆನ್ನುತ್ತಿದ್ದ ಫಕೀರನ ಕತೆ
ಶಿರಾಝ್‌ನ ಷೇಖ್ ಸಾದಿಗೆ ಒಬ್ಬ ಫಕೀರನ ಪತ್ನಿ ಗರ್ಭಿಣಿ ಎಂಬ ವಿಷಯ ತಿಳಿದಿತ್ತು. ತನಗೊಬ್ಬ ಮಗ ಹುಟ್ಟಬೇಕೆಂಬುದು ಆ ಫಕೀರನ ಬಯಕೆಯಾಗಿತ್ತು. ಎಂದೇ ಆತ ಇಂತೊಂದು ಪ್ರತಿಜ್ಞೆ ಮಾಡಿ ಪ್ರಾರ್ಥಿಸಿದ: “ಓ ದೇವರೇ, ನೀನು ನನಗೆ ಮಗನೊಬ್ಬನನ್ನು ದಯಪಾಲಿಸಿದರೆ ನಾನು ಧರಿಸಿರುವ ಬಟ್ಟೆಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲ ಸಂಪತ್ತನ್ನೂ ನೆರಹೊರೆಯವರಿಗೆ ಕೊಡುತ್ತೇನೆ.”
ಕೆಲವು ತಿಂಗಳುಗಳು ಕಳೆದ ನಂತರ ಫಕೀರನ ಹೆಂಡತಿ ಗಂಡು ಮಗುವಿಗೆ ಜನ್ಮವಿತ್ತಳು. ಇಡೀ ಕುಟುಂಬ ಆಣಂದಿಸಿತು. ಫಕೀರ ತಾನು ಪ್ರತಿಜ್ಞೆ ಮಾಡಿದ್ದಂತೆ ನಡೆದುಕೊಂಡ.
ಅನೇಕ ವರ್ಷಗಳು ಕಳೆದ ನಂತರ ಸಿರಿಯಾಕ್ಕೆ ಹೋಗಿ ಹಿಂದಿರುಗಿ ಬಂದಿದ್ದ ಷೇಖ್ ಸಾದಿ ಫಕೀರ ವಾಸವಿದ್ದ ಸ್ಥಳದ ಸಮೀಪದಲ್ಲಿ ಹೋಗುತ್ತಿದ್ದ. ಫಕೀರ ಈಗ ಎಲ್ಲಿದ್ದಾನೆ ಎಂಬುದನ್ನು ಆಸುಪಾಸಿನ ನಿವಾಸಿಗಳ ಹತ್ತಿರ ವಿಚಾರಿಸಿದ.
ಅವರು ಬಲು ದುಃಖದಿಂದ ತಲೆಯಲ್ಲಾಡಿಸುತ್ತಾ ಹೇಳಿದರು, “ಅವನು ಸ್ಥಳೀಯ ಸೆರೆಮನೆಯೊಳಗೆ ಕುಳಿತಿದ್ದಾನೆ.”
ಆಶ್ಚರ್ಯಚಕಿತನಾದ ಷೇಖ್ ಸಾದಿ ಕಾರಣ ಏನೆಂಬುದನ್ನು ವಿಚಾರಿಸಿದ. ಅವರು ಹೇಳಿದರು, “ಒಂದು ರಾತ್ರಿ ಫಕೀರನ ಮಗ ಒಬ್ಬನೊಂದಿಗೆ ಏನೋ ಓಮದು ವಿಷಯದ ಕುರಿತಾಗಿ ವಾದ ಮಾಡುತ್ತಿದ್ದ. ಕೊನೆಗೊಮ್ಮೆ ಕೋಪೋದ್ರಿಕ್ತನಾದ ಫಕೀರನ ಮಗ ಅತನನ್ನು ತೀವ್ರವಾಗಿ ಗಾಯಗೋಲಿಸಿ ನಗರ ಬಿಟ್ಟು ಓಡಿಹೋದ. ಅಧಿಕಾರಿಗಳಿಗೆ ಅವನು ಸಿಕ್ಕದೇ ಇದ್ದದ್ದರಿಂದ ಅವನ ಬದಲಿಗೆ ಅವನ ತಂದೆಯನ್ನು ಸೆರೆಮನೆಯೊಳಕ್ಕೆ ತಳ್ಳಲು ತೀರ್ಮಾನಿಸಿದರು.”
ಷೇಖ್ ಸಾದಿ ಉದ್ಗರಿಸಿದ, “ನನಗೀಗ ನೆನಪಾಯಿತು. ಪ್ರಾರ್ಥನೆ, ಪ್ರತಿಜ್ಞೆಗಳನ್ನು ಮಾಡಿ ಫಕೀರ ಪಡೆದ ಮಗ ಆತ!”
“ವಿವೇಕೀ ಗೆಳೆಯನೇ! ತಂದೆಯ ಪೋಷಣೆಗೆ ತಯಾರಿಲ್ಲದ ಗಂಡುಮಕ್ಕಳಿಗೆ ಜನ್ಮ ನೀಡುವುದಕ್ಕೆ ಬದಲಾಗಿ ಕಾಳಸರ್ಪಗಳಿಗೆ ಗರ್ಭವತಿಯಾಗಿರುವ ಹೆಂಡತಿ ಜನ್ಮನೀಡುವುದೊಳಿತು – ಅಂದಿದ್ದಾರೆ ವಿವೇಕಿಗಳು”
*****
೫. ಮೂರು ಮೀನುಗಳ ಕತೆ
ಒಂದು ಕೆರೆಯಲ್ಲಿ ಮೂರು ಮೀನುಗಳು ವಾಸಿಸುತ್ತಿದ್ದವು – ಒಂದು ಜಾಣ ಮೀನು, ಒಂದು ಅರೆ-ಜಾಣ ಮೀನು, ಒಂದು ಅಷ್ಟೇನೂ ಜಾಣವಲ್ಲದ ಮೀನು. ಎಲ್ಲೆಡೆ ಮೀನುಗಳ ಜೀವನ ಹೇಗಿತ್ತೋ ಅಂತೆಯೇ ಇತ್ತು ಅವುಗಳ ಜೀವನ. ಇಂತಿರುವಾಗ ಒಂದು ದಿನ ನಾಡ್ಡಿ ಎಂಬ ಬೆಸ್ತ ಅವುಗಳು ಇದ್ದ ಕೆರೆಗೆ ಭೇಟಿ ನೀಡಿದ. ಅವನ ಕೈನಲ್ಲಿ ಮೀನು ಹಿಡಿಯುವ ಬಲೆ ಹಾಗು ಒಂದು ಬುಟ್ಟಿ ಇತ್ತು. ಜಾಣ ಮೀನು ಅವನನ್ನು ಕೆರೆಯ ನೀರಿನ ಒಳಗಿನಿಂದ ನೀರಿನ ಮೂಲಕವೇ ನೋಡಿತು. ಹಿಂದಿನ ಅನುಭವಗಳು ಹಾಗು ಕೇಳಿದ್ದ ಕತೆಗಳನ್ನು ಆಧರಿಸಿ ಜಾಣ ಮೀನು ಯುಕ್ತ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತು. “ಅಡಗಲು ಈ ಕೆರೆಯಲ್ಲಿ ಹೆಚ್ಚು ಸ್ಥಳಗಳಿಲ್ಲ. ಆದ್ದರಿಂದ ನಾನು ಸತ್ತಂತೆ ನಟಿಸುತ್ತೇನೆ,” ಎಂಬುದಾಗಿ ಅದು ಆಲೋಚಿಸಿತು.
ತನ್ನ ಎಲ್ಲ ಶಕ್ತಿಯನ್ನು ಉಪಯೋಗಿಸಿ ಅದು ನೀರಿನಿಂದ ಮೇಲಕ್ಕೆ ಹಾರಿ ನಾಡ್ಡಿಯ ಕಾಲುಗಳ ಹತ್ತಿರ ಬಿದ್ದಿತು. ಇದನ್ನು ನೋಡಿ ಬೆಸ್ತನಿಗೆ ಆಶ್ಚರ್ಯವಾಯಿತು. ಜಾಣ ಮೀನು ಉಸಿರನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡದ್ದು ತಿಳಿಯದ ಬೇಸ್ತ ಆ ಮೀನು ಸತ್ತಿದೆಯೆಂದು ಭಾವಿಸಿ ಅದನೆತ್ತಿ ಕೆರೆಗೆ ಎಸೆದನು. ಜಾಣ ಮೀನು ಒಂದು ಸಣ್ಣ ತೂತಿನೊಳಕ್ಕೆ ವೇಗವಾಗಿ ಹೋಗಿ ಸೇರಿಕೊಂಡಿತು. ನಡೆದದ್ದು ಏನು ಎಂಬುದು ಅರೆ-ಜಾಣ ಮೀನಿಗೆ ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ಎಂದೇ ಅದು ಜಾಣ ಮೀನಿನ ಹತ್ತಿರ ಹೋಗಿ ನಡೆದದ್ದರ ಕುರಿತು ಕೇಳಿತು. ಜಾಣ ಮೀನು ಹೇಳಿತು, “ಬಲು ಸರಳ. ನಾನು ಸತ್ತಂತೆ ನಟಿಸಿದೆ. ಆದ್ದರಿಂದ ಅವನು ನನ್ನನ್ನು ಹಿಂದಕ್ಕೆ ಕೆರೆಗೇ ಎಸೆದ.” ತಕ್ಷಣ ಅರೆ-ಜಾಣ ಮೀನು ಕೂಡ ನೀರಿನಿಂದ ಹಾರಿ ನಾಡ್ಡಿಯ ಕಾಲುಗಳ ಬುಡದಲ್ಲಿ ಬಿದ್ದಿತು. “ವಿಚಿತ್ರವಾಗಿದೆ. ಈ ಮೀನುಗಳು ಎಲ್ಲೆಡೆ ಮೇಲಕ್ಕೆ ಹಾರುತ್ತಿವೆ,” ಎಂಬುದಾಗಿ ಅಂದುಕೊಂಡ ಆ ಬೆಸ್ತ. ದುರದೃಷ್ಟವಶಾತ್ ಅರೆ-ಜಾಣ ಮೀನು ಉಸಿರು ಬಿಗಿ ಹಿಡಿಯುವುದನ್ನು ಮರೆತುಬಿಟ್ಟಿತ್ತು. ಅದು ಜೀವಂತವಾಗಿರುವುದನ್ನು ನೋಡಿದ ಬೆಸ್ತ ಅದನ್ನೆತ್ತಿ ತನ್ನ ಬುಟ್ಟಿಗೆ ಹಾಕಿಕೊಂಡ.
ಮೀನುಗಳು ತನ್ನ ಮುಂದೆ ನೆಲದ ಮೇಲಕ್ಕೆ ಹಾರಿ ಬೀಳುತ್ತಿದ್ದದ್ದನ್ನು ನೋಡಿ ಗೊಂದಲಕ್ಕೊಳಗಾದ ಬೆಸ್ತ ಬುಟ್ಟಿಯ ಮುಚ್ಚಳ ಹಾಕುವುದನ್ನು ಮರೆತು ಕೆರೆಯೊಳಕ್ಕೆ ನೋಡಲೋಸುಗ ಅತ್ತ ತಿರುಗಿದ. ಬುಟ್ಟಿಯ ಮುಚ್ಚಳ ತೆರೆದಿರುವುದನ್ನು ಗಮನಿಸಿದ ಅರೆ-ಜಾಣ ಮೀನು ಹೊರಕ್ಕೆ ಹಾರಿ ಬಲು ಕಷ್ಟದಿಂದ ಕೆರೆಯೊಳಕ್ಕೆ ಪುನಃ ಸೇರಿಕೊಂಡಿತು. ಏದುಸಿರು ಬಿಡುತ್ತಾ ಅದು ಈಜಿ ಮೊದಲನೆಯ ಮೀನಿನ ಜೊತೆ ಸೇರಿಕೊಂಡಿತು.
ಮೊದಲನೇ ಎರಡು ಮೀನುಗಳ ಹಾಗು ಬೆಸ್ತನ ಚಟುವಟಿಕಗಳನ್ನು ನೋಡುತ್ತಿದ್ದ ಅಷ್ಟೇನೂ ಜಾಣವಲ್ಲದ ಮೀನಿಗೆ ಬಹಳ ಗೊಂದಲವಾಯಿತು. ಎರಡೂ ಮೀನುಗಳು ನೀಡಿದ ವಿವರಣೆಗಳನ್ನು ಅದು ಕೇಳಿತು. ಅವೆರಡೂ ಮೀನುಗಳು ತಂತ್ರದ ಪ್ರತೀ ಅಂಶವನ್ನು ಅದಕ್ಕೆ ವಿವರವಾಗಿ ತಿಳಿಸಿದವು. ಸತ್ತಂತೆ ಕಾಣಲೋಸುಗ ಉಸಿರು ಬಿಗಿ ಹಿಡಿಯಬೇಕಾದ್ದರ ಪ್ರಾಮುಖ್ಯವನ್ನು ಒತ್ತಿ ಹೇಳಿದವು. “ನಿಮಗೆ ತುಂಬಾ ಧನ್ಯವಾದಗಳು. ನೀವು ಹೇಳಿದ್ದೆಲ್ಲವೂ ನನಗೆ ಅರ್ಥವಾಗಿದೆ,” ಎಂಬುದಾಗಿ ಹೇಳಿದ ಅಷ್ಟೇನೂ ಜಾಣವಲ್ಲದ ಮೀನು ನೀರಿನಿಂದ ಹಾರಿ ಬೆಸ್ತನ ಕಾಲುಗಳ ಬುಡದಲ್ಲಿ ಬಿದ್ದಿತು.
ಈಗಾಗಲೇ ಎರಡು ಮೀನುಗಳನ್ನು ಕಳೆದುಕೊಂಡಿದ್ದ ಬೆಸ್ತನು ಮೂರನೆಯದ್ದನ್ನು ಅದು ಉಸಿರಾಡುತ್ತಿದೆಯೋ ಇಲ್ಲವೋ ಎಂಬುದನ್ನೂ ನೋಡದೆ ಎತ್ತಿ ಬುಟ್ಟಿಯೊಳಕ್ಕೆ ಹಾಕಿ ಭದ್ರವಾಗಿ ಮುಚ್ಚಳ ಹಾಕಿದನು. ತದನಂತರ ಅನೇಕ ಸಲ ಕೆರೆಯಲ್ಲಿ ಬಲೆ ಬೀಸಿ ಮೀನು ಹಿಡಿಯಲು ಪ್ರಯತ್ನಿಸಿದನು. ಉಳಿದ ಎರಡು ಮೀನುಗಳು ಅವನ ಬಲೆಗೆ ಸಿಕ್ಕಿ ಬೀಳಲಿಲ್ಲ, ಏಕೆಂದರೆ ಅವು ಸಣ್ಣ ಬಿಲವೊಂದರಲ್ಲಿ ಒತ್ತೊತ್ತಾಗಿ ಅಡಗಿ ಕುಳಿತಿದ್ದವು.
ಸ್ವಲ್ಪ ಸಮಯದ ನಂತರ ನಾಡ್ಡಿ ತನ್ನ ಪ್ರಯತ್ನವನ್ನು ನಿಲ್ಲಿಸಿದ. ಬುಟ್ಟಿಯ ಮುಚ್ಚಳ ತೆಗೆದು ನೋಡಿದ, ಒಳಗಿದ್ದ ಮೀನು ಸತ್ತಿದೆ ಎಂಬುದಾಗಿ ಭಾವಿಸಿದ. ಏಕೆಂದರೆ ಅಷ್ಟೇನೂ ಜಾಣವಲ್ಲದ ಮೀನು ಉಳಿದೆರಡು ಮೀನುಗಳು ಹೇಳಿದಂತೆ ಉಸಿರು ಬಿಗಿಹಿಡಿದು ಸತ್ತಂತೆ ಬಿದ್ದುಕೊಂಡಿತ್ತು. ಆ ಮೀನನ್ನು ಬುಟ್ಟಿಯಲ್ಲಿಯೇ ಇಟ್ಟುಕೊಂಡು ಬೆಸ್ತ ಮನೆಯತ್ತ ನಡೆದ!
*****
ಅನುವಾದಿತ ಸೂಫಿ ಕತೆಗಳು ಚೆಂದವಿವೆ ಗೋವಿಂದರಾವ್ ಅವರೇ.
ಹಕ್ಕಿ ಮರಿ ಮತ್ತು, ಮೋಹದಿಂದ ನಾವೇ, ನಮ್ಮಿಂದ ಮೋಹವೇ ಎಂಬ ಯಾರಿಂದ ಯಾರು ಬಂಧಿತ ಎಂಬುದನ್ನು ಹಸು ಮತ್ತು ಅದರ ಮಾಲೀಕನ ಮೂಲಕ ವಿವರಿಸುವ ಕತೆಗಳು ಸಖತ್ ಇಷ್ಟವಾದವು