"ಸಿಸುಮಗನೇ ನಾನೇಳಿದಷ್ಟು ಮಾಡು. ನಿಂಗೆ ಒಳ್ಳೇದಾಗ್ಲಿಲ್ಲ ಅಂದ್ರೆ ನನ್ನೆಸ್ರು ಬದಲಾಯಿಸಿಕೊಳ್ತೀನಿ" ಎಂದು ಮೈಮೇಲೆ ಬಸಪ್ಪದೇವರು ಬಂದಿದ್ದ ಸಣ್ಣಯ್ಯ ಹೇಳಿದಾಗ ಸುತ್ತ ನೆರೆದಿದ್ದ ರಾಗಿದೊಡ್ಡಿಯ ಜನ ದೂಸ್ರಾ ಮಾತಾಡದೆ ಕೈ ಮುಗಿದರು. ನಾವೆಲ್ಲಾ ಅದನ್ನು ನೋಡಿ ಕಂಗಾಲಾದೆವು. ಅಷ್ಟೊತ್ತಿಗಾಗಲೇ ಸಣ್ಣಯ್ಯ ತನ್ನೆದುರು ಬಿಡಿಸಿದ್ದ ರಂಗೋಲಿಯನ್ನು ತನ್ನ ಬಲಗೈಯಿಂದ ಉಜ್ಜಿ ಉಜ್ಜಿ ಚುಕ್ಕಿ ಹಾಗೂ ಗೆರೆಗಳ ಗುರ್ತು ಸಿಗದಂತೆ ಮಾಡಿ ಆರ್ಭಟಿಸಿದ್ದ. ಸಗಣಿ ಉಂಡೆಯ ಮೇಲಿದ್ದ ಮಣ್ಣಿನ ದೀಪ ಆಕಳಿಸುತ್ತಿತ್ತು. ನಾವು ತೂಕಡಿಸುತ್ತಿದ್ದೆವು. ಸಣ್ಣಯ್ಯ ಕಡೆಗೂ 'ಅರಾ ಅರಾ ಮಾದೇವ ಸಂಬೋ' ಅಂತ ದೊಪ್ಪನೆ ನೆಲಕ್ಕುರುಳುವ ಮೂಲಕ ಅವತ್ತಿನ ದೇವರು ಬರಿಸಿಕೊಳ್ಳುವ ಕೆಲಸಕ್ಕೆ ಮಂಗಳ ಹಾಡಿದ. ಯಾವಾಗ ಎಲ್ಲರು ಎದ್ದರೋ ನಿದ್ರಿಸುತ್ತಿದ್ದ ಚಿಕ್ಕಚಿಕ್ಕಮಕ್ಕಳು ತಂತಮ್ಮ ಬಾಯೊಳಗಿದ್ದ ಬೆರಳನ್ನು ಹೊರತೆಗೆದು ಅಳಲು ಶುರುವಿಕ್ಕಿಕೊಂಡವು. ನಮಗೂ ಮಲಗುವಾಸೆಯಾಯಿತು.
ಇಡೀ ಊರಿನಲ್ಲೇ ಅವನೊಬ್ಬನಿಗೆ ಮಾತ್ರ ದೇವರು ಬರುತ್ತಿತ್ತು. ರಾಗಿದೊಡ್ಡಿಯಲ್ಲಿ ಇನ್ನಾರಿಗೂ ಲಿಂಗಧಾರಣೆಯಾಗಿರಲಿಲ್ಲ.
ಸಣ್ಣಯ್ಯ ಊರದೇವರಾದ ಬಸಪ್ಪನ ಆಪ್ತಕಾರ್ಯದರ್ಶಿಯಂತಿದ್ದ ಅರ್ಚಕ.ಕಟ್ಟಾ ಬ್ರಹ್ಮಚಾರಿ ಅನ್ನುವ ಬಿರುದು ಪಡೆದಿದ್ದ. ರಾಗಿದೊಡ್ಡಿ ಜನರ ಕಷ್ಟ-ಸುಖ, ದುಡ್ಡು-ಕಾಸು, ನೆಗಡಿ-ಜ್ವರ, ಮದುವೆ-ಶೋಭನ, ಯಾಪಾರ-ಸಾಪಾರ ಎಲ್ಲದರ ಸಂಪೂರ್ಣ ಹೊಣೆಗಾರಿಕೆ ಸಣ್ಣಯ್ಯನ ಮೇಲಿತ್ತು ಪಾಪ. ಇಂಥ ಸಣ್ಣಯ್ಯನನ್ನು ಕೂರಿಸಿ ದೇವರು ಕೇಳುವ ಕೆಲಸ ಆಗಾಗ ನಡೆಯುತ್ತಿತ್ತು. ಸಣ್ಣಯ್ಯನ ಮೈಮೇಲೆ ಬರುವ ದೇವರು ಯಾವುದು, ಯಾಕೆ ಬರುತ್ತದೆ, ಎಲ್ಲಿಂದ ಬರುತ್ತದೆ- ಇಂಥ ಹಲವು ಅತ್ಯಮೂಲ್ಯ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳುತ್ತಿದ್ದೆವು. ಹಾಗಾಗಿ, ಈ ವ್ಯಕ್ತಿ ಒಂದು ಬಗೆಯ ಶಂಕಿತ ಉಗ್ರಗಾಮಿಯಂತೆ ನಮಗೆ ತೋಚುತ್ತಿದ್ದ. ಯಂತ್ರ ಕಟ್ಟುವುದು, ನೆಲ ಬಗೆದು ಕುಡಿಕೆ ತೆಗೆಯೋದು, ಕೈಯಲ್ಲಿ ಮಣಿ ಹಿಡಿದು ಅರ್ಥವಾಗದ ಭಾಷೆಯಲ್ಲಿ ಮಾತಾಡೋದು, ಹೆಂಗಸರ ಮೈಮೇಲೆ ಮಾರಮ್ಮನನ್ನು ಬರಿಸಿ 'ತಂಗ್ಯವ್ವಾ…' ಅಂತ ಅವರ ಗಂಡಂದಿರೆದುರೇ ತಬ್ಬಿಕೊಳ್ಳೋದು, ಮಕ್ಕಳ ಕೊರಳಿಗೆ ತಾಯತ ಕಟ್ಟಿ ಅವುಗಳ ವಾರಸುದಾರರಿಂದ ಒಂದಿಷ್ಟು ಕಾಸು ವಸೂಲಿ ಮಾಡೋದು- ಇಂಥ ವಿಚಿತ್ರ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದುದರಿಂದ ನಮಗೆಲ್ಲಾ ಉಗ್ರಗಾಮಿಯಂತೆ ಕಾಣುತ್ತಿದ್ದ ಅನ್ನಬಹುದು ಅನ್ನಿ.
ಇಷ್ಟು ಮಾತ್ರವಲ್ಲದೆ ಸಾಕಷ್ಟು ಬೀಡಿಗಳನ್ನು ಸೇದುತ್ತಿದ್ದ. ರಾತ್ರೋರಾತ್ರಿ ಎದ್ದು ಶಂಖ ಊದುತ್ತಾ ಸ್ಮಶಾನದೆಡೆಗೆ ಸಾಗಿಬಿಡುತ್ತಿದ್ದ. ಕೋಳಿ ಕೂಗುವ ಹೊತ್ತಿಗೆ ಸರಿಯಾಗಿ ಎಂಥ ಚಳಿಯಿದ್ದರೂ ಲೆಕ್ಕಿಸದೆ ಹೊಳೆಯಲ್ಲಿ ಸ್ನಾನ ಮಾಡಿ ನೇರವಾಗಿ ಮನೆಗೆ ಬಂದು ಒಂದು ಸೇರು ಟೀ ಕುಡಿದು ಹೊಲಕ್ಕೆ ಹೊರಟುಬಿಡುತ್ತಿದ್ದ. ಟೀ ಕುಡಿಯುವ ಮೊದಲು ತನ್ನ ಕೊರಳಿನಲ್ಲಿದ್ದ ಬೆಳ್ಳಿಕರಡಿಗೆಯೊಳಗಿನ ತನ್ನ ದೇವರಿಗೆ ಸ್ನಾನ ಮಾಡಿಸಿ, ಹೂ ಮುಡಿಸಿ, ವಿಭೂತಿ ಹಚ್ಚಿ, ಗಂಧದಕಡ್ಡಿ ಹೊಗೆ ತೋರಿಸುತ್ತಿದ್ದ. ನಂತರ ಗೋಡೆಗೆ ನೇತುಹಾಕಿದ್ದ ಹತ್ತಿಪ್ಪತ್ತು ವಿಚಿತ್ರ ವಿಚಿತ್ರ ದೇವರುಗಳ ಭಾವಚಿತ್ರಗಳಿಗೆ ಹೊಗೆ ತೋರಿಸಿ ಕರ್ಪೂರದಾರತಿ ಬೆಳಗುವುದನ್ನು ಮರೆಯುತ್ತಿರಲಿಲ್ಲ. ಧೂಪವನ್ನೂ ಹಾಕುತ್ತಿದ್ದ. ಇವಿಷ್ಟೂ ನೇಮಗಳನ್ನು ಸೂರ್ಯಾಸ್ತದ ನಂತರವೂ ತಪ್ಪದೆ ಪಾಲಿಸುತ್ತಿದ್ದ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ರಾಗಿದೊಡ್ಡಿಯ ಜನ ಸಣ್ಣಯ್ಯನಿಗೆ ಎರಡೆಕರೆ ಹೊಲ, ಮೂರಂಕಣದ ಹೆಂಚಿನಮನೆ ಕೊಟ್ಟಿದ್ದರು. ಬಸವೇಶ್ವರನ ಪೂಜಾರಿಗೆ ಸಲ್ಲಬೇಕಾದವುಗಳಾಗಿದ್ದವು ಅವು.
ಸಣ್ಣಯ್ಯ ನಮ್ಮನ್ನು ಇಷ್ಟು ಕಾಡಲು ಇದ್ದ ಇನ್ನೊಂದು ಮುಖ್ಯಕಾರಣವೆಂದರೆ, ವರ್ಷಕ್ಕೊಮ್ಮೆ ನಡೆಯುತ್ತಿದ್ದ ಬಸಪ್ಪನ ಕೊಂಡಕ್ಕೆ ನುಗ್ಗಿ ಕಾಲು ಸುಟ್ಟುಕೊಳ್ಳದೆ ಸೈ ಅನ್ನಿಸಿಕೊಳ್ಳೋದು. ಎಲ್ಲರೂ ಸಣ್ಣಯ್ಯನದು ಬಸಪ್ಪನ ಪುನರ್ಜನ್ಮ ಅಂತಲೇ ನಂಬಿದ್ದರು. ಏಕೆಂದರೆ, ಅವನ ಗೂನುಬೆನ್ನನ್ನು ಸದಾ ಎತ್ತಿನ(ಬಸವ) ಬೆನ್ನಿನ ಮೇಲಿರುವ ಉಬ್ಬಿದ ಗುಪ್ಪೆಗೆ ಹೋಲಿಸಿಬಿಟ್ಟಿದ್ದರು. "ಸಿಸುಮಗನೇ" ಅಂತ ದೊಡ್ಡವರು ಚಿಕ್ಕವರೆಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಏಕರೀತಿಯಲ್ಲಿ ಸಂಭೋದಿಸುತ್ತಿದ್ದುದರಿಂದ ಹಿರಿಯರನ್ನು ಏಕವಚನದಲ್ಲಿ ಮಾತಾಡಿಸಲು ಹಿಂಜರಿಯುತ್ತಿದ್ದ ನಮಗೆ ಸಣ್ಣಯ್ಯ ಅಸಮಾನ್ಯನೇ ಇರಬೇಕೆನಿಸುತ್ತಿತ್ತು. ಮುದುಕರೋ, ಸಣ್ಣಯ್ಯ ತಮ್ಮನ್ನು ಹೇಗೆ ಕರೆದರೂ ಮರುಮಾತಾಡದೆ ಕೈಮುಗಿದು ಸುಮಧುರವಾಗಿ ಕೆಮ್ಮುತ್ತಿದ್ದರು. ಇನ್ನೊಂದು ವಿಚಾರವೆಂದರೆ, ಸಣ್ಣಯ್ಯನ ನಿರಂತರ ಯೋಗಾಭ್ಯಾಸದಿಂದಾಗಿ ಅವನ ದೇಹದಲ್ಲಿ ವೀರ್ಯೋತ್ಪಾದನೆಯೇ ನಿಂತುಹೋಗಿದೆಯಂತೆ ಎಂದೂ ಮತ್ತು ಊರಾಚೆಯ ಅರಳಿಮರದ ನಾಗರಕಲ್ಲಿನ ಬಳಿ ಬಿದ್ದಿರುತ್ತಿದ್ದ ಬುದ್ಧಿಮಾಂದ್ಯ ಹೆಂಗಸಿನ ಗೂನುಬೆನ್ನಿನ ಮಗು ಅವನದೇ ಎಂದೂ ಹಲವು ರೀತಿಯ ಗಾಸಿಪ್ಪುಗಳನ್ನು ರಾಗಿದೊಡ್ಡಿಯ ಪುಂಡರು ಶ್ರದ್ಧೆಯಿಂದ ಹಬ್ಬಿಸಿದ್ದರು. ಹದಿನಾರೋ, ಹದಿನೆಂಟೋ ವರ್ಷ ವಯಸ್ಸಿನ ನಮಗೆಲ್ಲಾ ಅಂಥ ವಿಷಯಗಳಲ್ಲಿ ಹೆಚ್ಚು ಆಸಕ್ತಿಯಿತ್ತು!
ಹೀಗೇ ಒಂದು ಕಾರ್ತಿಕ ಸೋಮವಾರದ ಸಂಜೆಯಂದು ಸಣ್ಣಯ್ಯನಿಗೆ ದೇವರು ಬರುವ ಕಾರ್ಯಕ್ರಮವಿತ್ತು. ಹಬ್ಬದ ವಿಶೇಷವಾಗಿ ಬಸಪ್ಪನ ಗುಡಿಯ ಮೇಲೆಲ್ಲಾ ಸೀರಿಯಲ್ ಸೆಟ್ಟು ಎಳೆಯಲಾಗಿತ್ತು. ಮೈಕ್ ಸೆಟ್ ತರಿಸಿ ಗುರುರಾಜಲುನಾಯ್ಡು ಹರಿಕಥೆ ಹಾಕಲಾಗಿತ್ತು. ಮಹಾಮಂಗಳಾರತಿಯ ನಂತರ ಭಕ್ತರೆಲ್ಲ ಸೀಯನ್ನ ಉಂಡು, ಎಲೆಗಳನ್ನು ನೆಕ್ಕಿ, ಕೈಬಾಯಿ ತೊಳೆದುಕೊಂಡು ಅವತ್ತಿನ ಮುಖ್ಯಘಟ್ಟವಾದ ಸಣ್ಣಯ್ಯನ ಮಾತುಗಳಿಗಾಗಿ ಕಾದಿದ್ದರು. ಆ ಸುಧೀರ್ಘ ಮೌನವನ್ನು ಮುರಿಯುವ ಪ್ರಯತ್ನದಲ್ಲಿ ಸಣ್ಣಯ್ಯ ಕಣ್ಣುಮುಚ್ಚಿ,ತಲೆಗೂದಲು ಕೆದರಿ, ಇಡೀ ಬಾಡಿಯನ್ನು ಶೇಕ್ ಮಾಡುತ್ತಾ "ಬಂ" ಅಂತ ಕಣ್ಣುಬಿಟ್ಟು, "ಸಿಸುಮಗನೇ- ಡೋoಟರೀ ಗಾಡೀಸ್ ಗ್ರೇಟ್…ನೋ ಡೋಟ್!" ಅಂತ ಹೇಳಿ ಸುತ್ತಲೂ ಒಮ್ಮೆ ಕೆಕ್ಕರಿಸಿಕೊಂಡು ನೋಡುತ್ತಾ ತನ್ನೆರಡು ಭುಜಗಳನ್ನೂ ಕುಣಿಸಲಾರಂಭಿಸಿದ. ಸಣ್ಣಯ್ಯ ಯಾವಾಗ ಅರ್ಥವಾಗದ ಭಾಷೆಯಲ್ಲಿ ಮಾತನಾಡಿದನೋ ಅಲ್ಲಿದ್ದ ಮುದುಕಿಯೊಬ್ಬಳು ಎಲೆಯಡಿಕೆ ತುಂಬಿದ್ದ ಬಾಯಿಂದ-
"ನನ್ನಪ್ಪನೇ, ಸತ್ವಂತ ಕಣಪ್ಪ ನೀನು…ಸತ್ವಂತ. ನನ್ನ ಕಿರೀಮಗ ಮುನಿಯ ನೆನ್ನೆ ಮದ್ದಾನ ತಂಗ್ಳಿಟ್ಟು ಮಜ್ಗೆ ಕಲಸ್ಕೊಂಡು ಕುಡುದುಬುಟ್ಟು, ತಡಿಯವ್ವ ಕರಿಗೊಸಿ ಜ್ವಾಳದ ಚಿಗುರು ತತ್ತೀನಿ ಅಂತ ಗೌಡಾರ್ ತ್ವಾಟುತ್ಕಡೆ ವೋಗಿದ್ದ…"
"ಅವನು ದುಡೀವಂಗೆ, ವಲ ಮನೇಲಿ ಕ್ಯಲ್ಸ ಮಾಡ್ವಂಗೆ ಗ್ಯಾನ ಕೊಟ್ಟುದ್ದು ನಾನೇ"
"ಜ್ವಾಳದ ಚಿಗುರು ಕುಯ್ವಾಗ ಕಿರುಬೆಟ್ಟು ಗಾತ್ರದ ಹಸಿರಾವು ಕಚ್ಚಿ ಜೊಲ್ಲು ಸುರಿಸ್ಕೊಂಡು ಬೇಲಿತಾವು ಬಿದ್ದಿದ್ದೋನ ಕಡೇ ಹಟ್ಟಿ ಬೀರಿಚಿಕ್ಕ ನೋಡ್ಕೊಂಡು ಸೈಕಲ್ ಮ್ಯಾಲೆ ಕುಂಡ್ರಿಸ್ಕೊಂಡು ಡಾಕ್ರು ಸಾಪ್ಗೆ ಕರ್ಕೊಂಡೋದ್ನಂತೆ"
"ಅವನ್ಗೂ ಆ ಗ್ಯಾನ ಕೊಟ್ಟುದ್ದು ನಾನೇ"
"ಒಂದೇ ಒಂದು ಗಳಿಗೆ ಹೊತ್ಗೆ ನನ್ನ ಮಗಂಗೆ ಸತ್ತೆ ಮುಟ್ಟಿರೋ ಸುದ್ದಿ ರಾಗಿದೊಡ್ಡಿಲೆಲ್ಲಾ ಹಬ್ಬುಡ್ತು"
"ಎಲ್ಲ ನನ್ ಮೈಮೆ"
"ಇಸ್ಯಾ ಗೊತ್ತಾಗಿ ನನ್ನುಸುರೋದಂಗೆ ಆಗಿ ಬಿರಬಿರನೆ ಕುಡಿಕೇಲಿದ್ಕಾಸ್ನ ಎತ್ಕೊಂಡು ಡಾಕ್ರು ಸಾಪ್ಗೋದೆ. ಅಸ್ಟೊತ್ಗೆ ಇಸ ಕಕ್ಸಿ ಉಸಾರ್ ಮಾಡಿದ್ರು ನನ್ನಪ್ಪನೇ"
"ಈ ಬಸಪ್ಪನ ನಂಬಿದೋರ್ಯಾರಿಗೂ ಮೋಸ ಆಗಲ್ತು"
"ನಾನು, ಡಾಕ್ರು ಕಾಲ ಬಿಗ್ಗೆಗಿಡ್ಕೊಂಡು, ನನ್ನ ಮಗುಂಗೆ ಏನು ಅಪಾಯ ಆಗುದಿಲಾ ಅಲ್ವುರಾ ಸ್ವಾಮೀ ಅಂದೆ. ಅದುಕ್ಕವ್ರು, ನೀವು ಅವಾಗೇಳುದ್ನೆ ಯೋಳುದ್ರು"
"ನಾನೇ ಅಂಗನ್ನು ಅಂದುದ್ದು. ಡೋoಟರೀ ಗಾಡೀಸ್ ಗ್ರೇಟ್. ನೋ ಡೋಟ್!"
"ಇದೇ ಸ್ವಾಮೀ ಡಾಕ್ರು ಯೋಳುದ್ದು! ಇವಾಗ ನನ್ನ ಮಗ ಉಸಾರಗವ್ನೆ. ಮೊನ್ನೆ ಮಳವಾಡಿ ಸಂತೆಗೋಗಿ ಒಂದು ಕಡಸು ವಡಕೊಂಡು ಬಂದವನೇ. ಎಲ್ಲ ನಿನ್ನ ದಯಾ ನನ್ನಪ್ಪ" ಎಂದು ಹೇಳಿ ಮುದುಕಿ ಮುಗಿಸಿದಳು. ಸಣ್ಣಯ್ಯ ಜೂಮಿನಲ್ಲಿದ್ದ.
ಇದನ್ನು ಕೇಳಿ ಅಲ್ಲಿದ್ದ ಅಷ್ಟೂ ಜನ "ಬಸಪ್ಪನಿಗೆ ಉಘೇ ಉಘೇ" ಅಂದುಬಿಟ್ಟರು. ಸಣ್ಣಯ್ಯ ಮುದುಕಿಯ ಮಗನಿಗೆ ಇನ್ನೆಂದೂ ಹಾವು ಕಚ್ಚದಂತೆ ನೋಡಿಕೊಳ್ಳುತ್ತೆನೆಂದು ಬಲಗೈ ಭಾಷೆ ಕೊಟ್ಟು ಭುಜವನ್ನು ಮತ್ತಷ್ಟು ಶೇಕ್ ಮಾಡಿ ಏಕದಂ ಉರುಳಿಹೋದ. ಅವನು ಉರುಳಿಹೋದ ಫೋರ್ಸಿಗೆ ಅವನ ಹಿಂದೆ ತಟ್ಟೆಯಲ್ಲಿಟ್ಟಿದ್ದ ಅಕ್ಕಿ ಕಾರಂಜಿಯಂತೆ ಚಿಮ್ಮಿ ಎಲ್ಲರ ಮೇಲೂ ಬಿದ್ದವು. ಅದನ್ನು ಶುಭಶಕುನವೆಂದು ಭಾವಿಸಿದ ಜನ ಗಟ್ಟಿಯಾಗಿ ಇನ್ನೊಮ್ಮೆ "ಬಸಪ್ಪನಿಗೆ ಉಘೇ ಉಘೇ" ಅಂತ ಹೇಳಿ ಮೇಲೆದ್ದರು. ನಾವು ಪಾಲಿಗೆ ಬಂದ ಸೀಯನ್ನಕ್ಕಷ್ಟೇ ತೃಪ್ತಿಪಟ್ಟೆವು.
ಮೈಸೂರಿನ ಯಾವುದೋ ಮಾಡ್ರನ್ ಸ್ವಾಮೀಜಿಯ ಹತ್ತಿರ ಹೋಗಿ ತಾನೂ ಅವನಂತಾಗಬೇಕೆಂಬ ಹಟಕ್ಕೆ ಬಿದ್ದು ಒಂದಿಷ್ಟು ಇಂಗ್ಲೀಷನ್ನು ತಪ್ಪುತಪ್ಪಾಗಿ ಕಲಿತು ಅದರ ಚೊಚ್ಚಲ ಪ್ರಯೋಗವೆಂಬಂತೆ ಸಣ್ಣಯ್ಯ ಇಲ್ಲಿ ಪ್ರಯೋಗಿಸಿ ಎಲ್ಲರಲ್ಲೂ ಗಾಬರಿ ಹುಟ್ಟಿಸಿದ್ದನೆಂಬ ವಿಷಯ ಆಮೇಲೆ ಗೊತ್ತಾಯಿತು. ಸಾಲದೆಂಬಂತೆ "ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿ" ಅನ್ನುವ ಹೆಸರಿನಲ್ಲಿ ಒಂದು ವಿಸಿಟಿಂಗ್ ಕಾರ್ಡು ಮಾಡಿಸಿ ಕಂಡಕಂಡವರಿಗೆಲ್ಲ ಒತ್ತಾಯ ಮಾಡಿ ಕೊಡುತ್ತಿದ್ದ ಅನ್ನುವ ಬಿಸಿಬಿಸಿ ಸುದ್ದಿ ಕೇಳಿ ನಮಗೆ ಕಕ್ಕಾಬಿಕ್ಕಿಯಾಯಿತು.
ರಾಗಿದೊಡ್ಡಿಯಲ್ಲಿ ದೇವರು ಬರುವ ಏಕೈಕ ಮನುಷ್ಯ ಎನ್ನುವ ಕಾರಣದಿಂದಾಗಿ ಸಣ್ಣಯ್ಯ ಎಲ್ಲರ ಗಮನ ಸೆಳೆದಿದ್ದ. ಬಸುರಿ-ಬಾಣಂತಿಯರು ಉಪವಾಸವಿದ್ದು ಸಣ್ಣಯ್ಯನ ಪಾದಪೂಜೆ ಮಾಡಿ ಆ ಪಾದೋದಕವನ್ನು ಭಕ್ತಿಯಿಂದ ಕುಡಿಯಲಾರಂಭಿಸಿದರು. ಕನ್ಯೆಯರಂತೂ ಸಣ್ಣಯ್ಯನ ಮೈಗೆ ಕೈಯೆಣ್ಣೆ ತಿಕ್ಕಿ ಹಂಡೆಗಟ್ಟಲೆ ಬಿಸಿನೀರು ಸುರಿದು ಸ್ನಾನ ಮಾಡಿಸಿ ಅವನ ಉದ್ದವಾದ ಕೂದಲನ್ನು ಸೀರಣಿಗೆಯಿಂದ ಸಿಕ್ಕುಬಿಡಿಸಿ ಬಾಚಿ ಜಡೆ ಹಾಕಿ ಮಲ್ಲಿಗೆ ಹೂವು ಮುಡಿಸಿ ಆನಂತರ ಆ ಹೂವನ್ನು ತಾವು ಮುಡಿದುಕೊಳ್ಳುತ್ತಿದ್ದರು. ಇಂತಹ ವಿಚಿತ್ರ ವ್ರತಗಳನ್ನು ಸಾಕ್ಷಾತ್ "ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿ"ಗಳೇ ಸಂಶೋಧಿಸಿದ್ದರು. ಇಂಥ ವ್ರತಗಳಿಂದ ಕನ್ಯೆಯರಿಗೆ ಬೇಗ ಕಂಕಣಭಾಗ್ಯ ಕೂಡಿ ಬರುವುದಾಗಿಯೂ, ಮದುವೆಯಾಗಿ ವರ್ಷ ತುಂಬುವುದರೊಳಗೆ ಸಂತಾನಭಾಗ್ಯ ಒದಗಿಬರುವುದಾಗಿಯೂ ಗುಲ್ಲೆಬ್ಬಿಸಿಬಿಟ್ಟಿದ್ದ ಸಣ್ಣಯ್ಯ. ತಮಾಷೆಯೆಂದರೆ ಇದರ ಬಗ್ಗೆ ಊರಿನಲ್ಲಿ ಯಾರೂ ಚಕಾರ ಎತ್ತುತ್ತಿರಲಿಲ್ಲ.
ಸಣ್ಣಯ್ಯನಿಂದ ನಮಗೆ (ನಮ್ಮದು ಐದಾರು ಫಟಿಂಗ ಹುಡುಗರ ಗುಂಪು) ನಿಧಾನವಾಗಿ ಅನೇಕ ತೊಂದರೆಗಳು ಶುರುವಾಗತೊಡಗಿದವು. ನಾವು ಪರೀಕ್ಷೆಗೆ ಓದಿಕೊಳ್ಳುವಾಗ ಸರಿರಾತ್ರಿಯಲ್ಲಿ ಶಂಖ ಊದುತ್ತಾ ಊರಲ್ಲೆಲ್ಲಾ ಸುತ್ತಾಡುತ್ತಿದ್ದ. ಬುಡುಬುಡುಕೆಯವನೊಂದಿಗೆ ತತ್ವಸಮರಕ್ಕಿಳಿಯುತ್ತಿದ್ದ. ಇದರ ಪರಿಣಾಮ ನಮ್ಮ ಏಕಾಗ್ರತೆ ಇವರ ಕಡೆ ಹರಿದು ಪರೀಕ್ಷೆಗಳಲ್ಲಿ ಅಂಕಗಳು ಕಡಿಮೆಯಾಗುತ್ತಿದ್ದವು. ಇದನ್ನೇ ಸರಿಯಾಗಿ ಬಳಸಿಕೊಂಡ ಸಣ್ಣಯ್ಯ ತನ್ನನ್ನು ನಂಬದ ಕಾರಣ ಇವರೆಲ್ಲ ಈ ಬಗೆಯ ಪಾಪಕ್ಕೆ ಗುರಿಯಾಗಿದ್ದಾರೆಂದು ನಮ್ಮ ನಮ್ಮ ಮನೆಯವರಲ್ಲಿ ನಂಬಿಸಿ ಮತ್ತಷ್ಟು ಉಗಿಸುತ್ತಿದ್ದ.
ಇದಕ್ಕೆ ಇಂಬು ಕೊಡುವಂತೆ ಮೊನ್ನೆ ಶಿವರಾತ್ರಿಯಂದು ಮತ್ತೊಂದು ಉಪದ್ರವವಾಯಿತು. ಬಸಪ್ಪನ ಗುಡಿಯಲ್ಲಿ ಮಂಗಳಾರತಿಯ ನಂತರ ಎಲ್ಲರ ಹಣೆಗೂ ವಿಭೂತಿ ಬಳಿದ ಸಣ್ಣಯ್ಯ ನಮ್ಮ ಗುಂಪಿನವರ್ಯಾರಿಗೂ ವಿಭೂತಿ ಹಚ್ಚದೆ ಗರ್ಭಗುಡಿಗೆ ಹೊರಟುಹೋದ. ಊರಿನ ಜನರು ಕಾರಣ ಕೇಳಿದಾಗ "ನಿಮ್ಮ ಹುಡುಗರು ಮೈಸೂರಿನ ಅಸೋಕ ರೋಡಲ್ಲಿರೋ ಬಾರಲ್ಲಿ ಕೂತು ಕುಡೀತಿದ್ದುದ್ದನ್ನ ನಾನೇ ನನ್ನ ಕಣ್ಣಾರ ನೋಡಿದೀನಿ. ಇಂಥ ಹುಡುಗರ ಹಣೆಗೆ ಈಬತ್ತಿ ಇಕ್ಕಿ ನನ್ನ ಕೈನ ಮೈಲಿಗೆ ಮಾಡ್ಕೊಳಕೆ ಇಷ್ಟ ಇಲ್ಲ ಗೌಡ್ರೇ" ಎಂದು ಹೇಳಿಯೇಬಿಟ್ಟ. ಪ್ರತಿಯಾಗಿ ನಮ್ಮ ಗುಂಪಿನ ಹುಡುಗನೊಬ್ಬ, "ತಾವೇಕೆ ಅಲ್ಲಿಗೆ ಬಂದಿದ್ರಿ ಸಣ್ಣಯ್ಯನೋರೆ?" ಅಂದಾಗ ಗರ್ಭಗುಡಿಯಲ್ಲಿ ಏನೋ ಸದ್ದಾದಂತಾಯಿತು. ಎಲ್ಲರೂ ಗಾಬರಿಯಿಂದ ನೋಡುತ್ತಿದ್ದರೆ ಸಣ್ಣಯ್ಯ ಮುಳ್ಳಾವಿಗೆ ಮೇಲೆ ಕಾಲಿಟ್ಟು "ಸಿಸುಮಗನೇ" ಅಂತ ಶುರುಮಾಡಿಕೊಂಡ. ನಮ್ಮ ಹುಡುಗನ ಪ್ರಶ್ನೆಗೆ ಉತ್ತರ ಸಿಕ್ಕದ ಬೇಸರದಲ್ಲಿ ನಾವು ಮನೆಗಳ ಕಡೆ ಹೊರಟೆವು.
ಮೊದಲಿನಿಂದಲೂ ಸಣ್ಣಯ್ಯನಿಗೆ ನಾವ್ಯಾರೆಂದು ತೋರಿಸಿಯೇ ಬಿಡಬೇಕೆಂಬ ಜಿದ್ದು ಎದೆಯಲ್ಲಿ ಬೇಯುತ್ತಲೇ ಇತ್ತು. ಅವತ್ತೊಂದು ರಾತ್ರಿ ಮಾಮೂಲಿಯಂತೆಯೇ ಸಣ್ಣಯ್ಯನ ಮೈಮೇಲೆ ಬಸಪ್ಪ ಬಂದಿದ್ದ.ಜನ ತಂತಮ್ಮ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ನಮ್ಮ ಗುಂಪಿನಲ್ಲಿದ್ದ ತರಲೆಯೊಬ್ಬ ಒಂದೂಕಾಲು ರೂಪಾಯನ್ನು ಎಲೆಯಡಿಕೆ ಮೇಲಿತ್ತು ಸಣ್ಣಯ್ಯನೆದುರು ಕೈಮುಗಿದು ಕೂತ. ಸಣ್ಣಯ್ಯ ಆರ್ಭಟಿಸುತ್ತಾ ಶುರುಮಾಡಿದ-
"ಸಿಸುಮಗನೇ ನಿನ್ನ ಕಷ್ಟ ಏನು?"
"ನೀವೇ ಹೇಳ್ಬೇಕು"
"ಏನ್ ಹೇಳ್ಬೇಕು?
"ಏನಾದ್ರೂ…"
"ನಿನ್ನದ್ರುಸ್ಟ ಚನ್ನಾಗದೆ"
"ಅಂದ್ರೆ?"
"ಲಸ್ಮಿ ನಿನ್ನ ಮನೆ ಬಾಕ್ಲುಗೆ ಬತ್ತಾವ್ಳೇ"
"ನನ್ನ ಕ್ಲಾಸ್ ಮೇಟ್ ಲಕ್ಷ್ಮೀನೇ ಪರಮಾತ್ಮಾ?"
"ನೀನಿನ್ನ ಎಳೆಮಗ ನಿನಗೇನು ಅರ್ಥ ಆಗಲ್ತು"
"ಕ್ಲಾಸಲ್ಲೂ ಅಷ್ಟೇ"
"ನಾನೇಳಿದಷ್ಟು ಮಾಡು ಸಿಸುಮಗನೇ.. ಆ ಲಸ್ಮಿ ನಿನ್ನ ಕೈ ಸೇರ್ವಂಗೆ ಮಾಡ್ತೀನಿ"
"ಏ ಸುಮ್ನಿರ್ರಿ ಸಾಕು. ಅವರ ಜಾತೀನೆ ಬ್ಯಾರೆ, ನಮ್ಮ ಜಾತೀನೆ ಬ್ಯಾರೆ. ಮನೇಲಿ ಒಪ್ಪೋದಿಲ್ಲ."
"ಮೂರ್ಕ, ಬರೋ ಅಮಾಸೆರಾತ್ರೆ ಸರೋತ್ಗೆ ಎದ್ದು ತಣ್ಣೀರು ಸ್ತಾನ ಮಾಡಿ ವದ್ದೆ ಬಟ್ಟೆ ಆರೋತ್ಗೆ ಮೂಡ್ಲುದಿಕ್ಕಿನ ನಿಮ್ಮ ವಲದಲ್ಲಿರೋ ಆಲದಮರದ ಕೆಳಗೆ…" ಅಂತ ಹೇಳಿ ಸಣ್ಣಯ್ಯ ವೀರಾವೇಶದಿಂದ ಮೇಲೆದ್ದಾಗ ಗೋಡೆಗೆ ಹೊಡೆದಿದ್ದ ಕಬ್ಬಿಣದ ಗೂಟಕ್ಕೆ ತಲೆ ಬಡಿಸಿಕೊಂಡು "ಗಾಡೀಸ್ ಗ್ರೇಟ್, ನೋ ಡೌಟ್ " ಅಂತ ಜೋರಾಗಿ ಕಿರುಚಿ ಮೂರ್ಛೆಹೋದ. ವಿಷಯ ಪೂರ್ತಿ ಹೇಳಲಿಲ್ಲವೆಂಬ ಬೇಸರ ಜನರಲ್ಲಿ ತುಂಬಿತ್ತು.ನಾವೆಲ್ಲ ಏನು ನಡೆಯಿತೆನ್ನುವ ಗೊಂದಲದೊಂದಿಗೆ ಕೆರೆಯ ಕಡೆ ಹೆಜ್ಜೆ ಹಾಕಿದೆವು.
ಈಗ ಊರಿನಲ್ಲಿ ಗುಸುಗುಸು ಶುರುವಾಯಿತು. "ಲಕ್ಷ್ಮಿಯಂತೆ, ಆಲದ ಮರವಂತೆ, ಏನು ಕಥೆಯೋ ಏನೋ ಆ ಬಸಪ್ಪನೆ ಬಲ್ಲ" ಎನ್ನುತ್ತಾ ಜನ ತಲೆಗೆ ಕ್ರಿಮಿ ಬಿಟ್ಟುಕೊಂಡು ಹೊಲಗದ್ದೆ, ಕೆಲಸಕಾರ್ಯಗಳನ್ನು ಮರೆಯಲಾರಂಭಿಸಿದರು. ನಮಗೋ ತಲೆ ಚಿಟ್ಟು ಹಿಡಿದು ಚಟ್ನಿಯಾಗಿತ್ತು. ಸಣ್ಣಯ್ಯನ ಮಾನಸಿಕ ಆರೋಗ್ಯ ಸರಿಯಿಲ್ಲ ಅಂತ ನಮ್ಮ ಗುಂಪಿನ ತರಲೆಯು ಕಿವಿಗೆ ಹದ್ದಿನ ಗರಿ ತುರುಕಿಕೊಂಡು ಗೊಣಗುತ್ತಿದ್ದ. ಗುಂಪಿನ ಇತರ ಸದಸ್ಯರು ಇಸ್ಪೀಟೆಲೆಯ ಕಟ್ಟು ಬಿಚ್ಚಿ ಇದ್ದೊಂದು ಸಿಗರೇಟನ್ನು ತಲಾ ಎರಡೆರಡು ದಮ್ಮು ಎಳೆದು ಹೊಗೆಯಾಡಿದರು.
ಇಡೀ ಊರಿನಲ್ಲಿ ನಮ್ಮ ಹೊರತಾಗಿ ಸಣ್ಣಯ್ಯನನ್ನು ವಿರೋಧಿಸುವವರು ಯಾವೊಬ್ಬನೂ ಇರಲಿಲ್ಲ. ಆದರೆ, ಸಣ್ಣಯ್ಯ ಮಾತ್ರ ತೊಂಡುದನದಂತೆ ತನಗಿಷ್ಟ ಬಂದ ಹಾಗೇ ಜೀವಿಸುತ್ತಿದ್ದ. ದೇವರ ಹೆಸರನ್ನು ಬಳಸಿಕೊಂಡು ಮುಗ್ಧಜನರನ್ನು ಯಾಮಾರಿಸುತ್ತಿದ್ದ. ಹೇಗಾದರೂ ಮಾಡಿ ಇವನಿಗೆ ಬುದ್ಧಿ ಕಲಿಸಬೇಕಲ್ಲಾ ಅಂಥ ಯೋಚಿಸುತ್ತಿದ್ದಂತೆಯೇ ತಾನೇ ಬಿರುಗಾಳಿಯಂತೆ "ಗಾಡೀಸ್ ಗ್ರೇಟ್…ನೋ ಡೌಟ್!" ಅಂತ ಜೋರಾಗಿ ಕಿರುಚುತ್ತ ನಮ್ಮ ಪಕ್ಕದಲ್ಲೇ ಪಾಸಾದ. ಅವನು ಹೋದ ರಭಸಕ್ಕೆ ಅಲ್ಲೇ ಹತ್ತಿರದ ನಾಗರಕಲ್ಲಿನ ಬಳಿ ಮಲಗಿದ್ದ ಬುದ್ಧಿಮಾಂದ್ಯ ಹೆಂಗಸಿನ ಗೂನುಬೆನ್ನಿನ ಮಗು "ಅಮ್ಮಾ…" ಅಂತ ಕಿರುಚಿಕೊಂಡಿತು. ಆ ಕೂಗು ನಮಗೆ "ಅಪ್ಪಾ…" ಅಂತ ಕೇಳಿಸಿದಂತಾಗಿ ಸಣ್ಣಯ್ಯನಿಗೂ, ಆ ಮಗುವಿಗೂ ಇರಬಹುದಾದ ರಕ್ತಸಂಬಂಧದ ಗಾಸಿಪ್ಪು ಮತ್ತಷ್ಟು ಕಾವು ಪಡೆದಂತಾಯಿತು. ಅಷ್ಟೊತ್ತಿಗೆ ಸೋಮ್ಲಾನಾಯ್ಕ "ಷೋ" ಅಂದು ಎಲೆ ಮೊಗಚಿದ. ಎಲ್ಲರೂ ಎದ್ದೆವು.
ಅಷ್ಟರಲ್ಲೇ ಯಾರೋ ಚೆಡ್ಡಿಯಿಲ್ಲದ ಹುಡುಗನೊಬ್ಬ ಸೈಕಲ್ ಟಯರನ್ನು ಕೋಲಿನಿಂದ ಓಡಿಸಿಕೊಂಡು ಬರುತ್ತಾ, "ಆಲದಮರದ ಬುಡದಲ್ಲಿ ಭೂಕಂಪ ಆಗಿದತಂತೆ!" ಅಂತಷ್ಟೇ ಹೇಳಿ ನಮ್ಮ ಪ್ರತಿಕ್ರಿಯೆಗೂ ಕಾಯದೆ ಅಲ್ಲಿಂದ ಓಟ ಕಿತ್ತ.ನಾವು ಆತುರಾತುರವಾಗಿ ಆಲದಮರದ ಹತ್ತಿರ ಹೋಗಲು ಮುಂದಾಗುತ್ತಿದ್ದಂತೆಯೇ ಹೋದ ವೇಗದಲ್ಲೇ ಮರಳಿ ಬಂದ ಸಣ್ಣಯ್ಯ ಅದೇ "ಗಾಡೀಸ್ ಗ್ರೇಟ್…ನೋ ಡೌಟ್!" ಅನ್ನು ತನಗೆ ತಾನೇ ಹೇಳಿಕೊಂಡು ತನ್ನ ಬಾಯಲ್ಲಿದ್ದ ನೂರಿಪ್ಪತ್ತು ಗ್ರಾಂ ಎಲೆಯಡಿಕೆ ತ್ಯಾಜ್ಯವನ್ನು ತುಪಾರನೆ ಉಗಿದು ಯಕ್ಷಗಾನಶೈಲಿಯಲ್ಲಿ ನಡೆದುಹೋದ.ನಾವು, ಟೊಮ್ಯಾಟೋ ಅಂತ ತಿಳಿದು ಈರುಳ್ಳಿ ತಿಂದ ಮಗುವಿನಂತೆ ಮುಖ ಮಾಡಿಕೊಂಡು ಅಲ್ಲಿಂದ ಹೊರಟೆವು.
ನಾವು ಹೋಗುವಷ್ಟರಲ್ಲಿ ಆಲದಮರದಡಿಯಲ್ಲಿ ಕೆಲಸವಿಲ್ಲದ ಅಥವಾ ದುಡಿಯಲು ಆಸಕ್ತಿಯಿಲ್ಲದ ಬಹಳಷ್ಟು ಪ್ರಜೆಗಳು ಮಕ್ಕಳು ಮರಿ ಸಮೇತ ನಿಷ್ಠೆಯಿಂದ ಜಮಾಯಿಸಿದ್ದರು. ಆ ಗುಂಪನ್ನು ಸೀಳಿ ದಾರಿ ಮಾಡಿಕೊಂಡು ಒಳನುಗ್ಗಿ ನೋಡಿದರೆ ಬಸಪ್ಪನ ಕೊಂಡಕ್ಕೆ ಸಾಕಾಗುಷ್ಟು ದೊಡ್ಡದೊಂದು ಗುಂಡಿ ನಮ್ಮನ್ನು ಸ್ವಾಗತಿಸಿತ್ತು. ಕಳೆದ ರಾತ್ರಿ ಭಾರೀ ಮಳೆಯಾಗಿದ್ದರಿಂದ ಗುಂಡಿಯ ತುಂಬ ಆರಾಧ್ಯರ ಹೋಟೆಲಿನ ಕಾಫಿಬಣ್ಣದ ನೀರು ತುಂಬಿತ್ತು. ಆ ನೀರನ್ನು ಆಲದೆಲೆಗಳು, ಕಸಕಡ್ಡಿಗಳು ಸ್ವಿಮಿಂಗ್ ಫೂಲು ಮಾಡಿಕೊಂಡಿದ್ದವು. ಮೂವತ್ತೋ,ಮೂವತ್ತಾರೋ ಸತ್ತ ಇರುವೆಗಳು, ಒಂದೆರಡು ಅಳಿಲುಗಳ ಪಾರ್ಥಿವ ಶರೀರಗಳು ಅವಕ್ಕೆ ಕಂಪನಿ ಕೊಡುತಿದ್ದವು. ನಮ್ಮ ಗುಂಪಿನ ತೂಕದ ವ್ಯಕ್ತಿ ಒಂದು ಉದ್ದನೆಯ ಬಿದಿರ ಗಳ ಹಿಡಿದು ಮೆಲ್ಲಗೆ ನೀರಿನೊಳಗಿಳಿಸಿ ಅಡುಗೆ ಭಟ್ಟರು ಉದ್ದನೆಯ ಸೌಟಿನಿಂದ ಸಾರು ತಿರುವುವಂತೆ ಸ್ವಲ್ಪ ಅಳುಕಿನಿಂದಲೇ ತಿರುವಿದ. ಎಲ್ಲರೂ ನಿಯತ್ತಾಗಿ ಗುಂಡಿಯನ್ನೇ ನೋಡುತ್ತಾ ಲೈಟುಕಂಬಗಳಂತೆ ನಿಂತಿದ್ದರು. ಯಾವಾಗ ಬಿದಿರ ಗಳ ತನ್ನ ಕೆಲಸ ಮುಂದುವರೆಸಿತೋ ಊದಿಕೊಂಡಿದ್ದ ಸಕ್ರಿನಾಯ್ಕನ ಮೃತದೇಹ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಮೇಲೆ ಬಂದಿತು. ಮಕ್ಕಳು ಕಿರುಚಿಕೊಂಡರು. ಹೆಂಗಸರು ಸೆರಗಿನಿಂದ ಮುಖ ಮುಚ್ಚಿಕೊಂಡರು.ಮುದುಕರು ಕನ್ನಡಕ ಸರಿಮಾಡಿಕೊಂಡರು. ಗಳ ಹಿಡಿದಿದ್ದ ಭೂಪ ತನ್ನಿಡೀ ದೇಹಕ್ಕೆ ಲಕ್ವ ಹೊಡೆದಂತಾಗಿ ವಿಗ್ರಹವಾಗಿಬಿಟ್ಟಿದ್ದ. ಅಷ್ಟರಲ್ಲಿ ಪೊಲೀಸರ ಜೀಪು ಬಂತು.ಅದರ ಹಿಂದೆಯೇ ಗ್ರಾಮಪಂಚಾಯಿತಿ ಅಧ್ಯಕ್ಷ ಚಿಕ್ಕಮಲ್ಲೇಗೌಡ ಕಾರಿನಿಂದಿಳಿದರು.
ಸಕ್ರಿನಾಯ್ಕನ ಮೃತಶರೀರವನ್ನು ಮೇಲೆತ್ತಿದ ಪೊಲೀಸರು ಕೈ ತೊಳೆದುಕೊಂಡು ಮೂಗೊರೆಸಿಕೊಂಡರು. ಚಿಕ್ಕಮಲ್ಲೇಗೌಡ ಕನ್ನಡಕ ತೆಗೆದು ಕಣ್ಣೊರೆಸಿಕೊಂಡು ಪಂಚೆ ಮೇಲೆತ್ತಿಕಟ್ಟಿದರು.ಇನ್ಸ್ಪೆಕ್ಟರ್ ಆಜ್ಞಾನುಸಾರ ಬಾಡಿಯನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಮುಂದಾದಾಗ ಸಕ್ರಿನಾಯ್ಕನ ಹೆಂಡತಿ ರೂಪ್ಲಿಬಾಯಿ ಬಾಯಿ ಬಡಿದುಕೊಂಡು ಲಂಬಾಣಿ ಭಾಷೆಯಲ್ಲಿ ಗೋಳಾಡಿದಳು. ಅದನ್ನು ಅರ್ಥ ಮಾಡಿಕೊಂಡ ನಮ್ಮ ಗುಂಪಿನ ಸೋಮ್ಲಾನಾಯ್ಕ ಗೊಣ್ಣೆಯನ್ನು ಸೊರಕ್ಕನೆಳೆದುಕೊಂಡು ಹದವಾಗಿ ಬಿಕ್ಕಳಿಸಿದ. ನಾವು ಏನೂ ತೋಚದಂತಾಗಿ ಮುಖ ಮುಖ ನೋಡಿಕೊಳ್ಳುವಷ್ಟರಲ್ಲಿ "ಗಾಡೀಸ್ ಗ್ರೇಟ್ …ನೋ ಡೌಟ್!" ಅಂತ ಹೇಳಿಕೊಂಡು ಸಣ್ಣಯ್ಯನೂ ಅಲ್ಲಿಗೆ ಬಂದ. ಬಂದವನೇ ಗುಂಡಿಯ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಒಂದು ನಿಮಿಷ ಸಕ್ರಿನಾಯ್ಕನ ಹೆಣವನ್ನೇ ದಿಟ್ಟಿಸುತ್ತ ಕೈಯಲ್ಲಿ ಮಣಿ ಹಿಡಿದುಕೊಂಡು ಯಾವುದೋ
ಅಸ್ಪಷ್ಟ ಮಂತ್ರವನ್ನುಚ್ಚರಿಸಿ ಯಾರ ಕಡೆಯೂ ನೋಡದೆ ಹೊರಟೇ ಹೋದ. ಸಕ್ರಿನಾಯ್ಕನ ದಿಢೀರ್ ಸಾವಿನ ಸುತ್ತ ಒಬ್ಬೊಬ್ಬರೂ ಒಂದೊಂದು ಕಥೆಯನ್ನು ಕಟ್ಟಲು ಶುರು ಮಾಡಿಕೊಳ್ಳುತ್ತಿದ್ದಂತೆಯೇ ನಾವು ತೂಕದ ಮಿತ್ರನನ್ನು ಗಟ್ಟಿಯಾಗಿ ಹಿಡಿದುಕೊಂಡು ಪಕ್ಕದೂರಿನ ಆಸ್ಪತ್ರೆ ಕಡೆ ಹೊರಟೆವು.
ಕೆಲದಿನಗಳ ಹಿಂದೆಯಷ್ಟೇ ಸಣ್ಣಯ್ಯ ತನ್ನ ಮೈಮೇಲೆ ಬಸಪ್ಪ ಬಂದಿದ್ದಾಗ ಆಲದಮರ, ಲಕ್ಷ್ಮಿ, ಅದೃಷ್ಟ ಅಂತೆಲ್ಲಾ ಅಸ್ಪಷ್ಟವಾಗಿ ಹೇಳಿದ್ದರ ಪರಿಣಾಮವಾಗಿ, ಆಲದಮರದಡಿಯಲ್ಲಿ ನಿಧಿ ಇರಬಹುದೆಂಬ ಆಸೆಗೊಳಗಾದ ಸಕ್ರಿನಾಯ್ಕ ರಾತ್ರೋರಾತ್ರಿ ಒಬ್ಬನೇ ಹೋಗಿ ಗುಂಡಿ ತೋಡಿದ್ದರಿಂದಲೂ, ಅದೇ ವೇಳೆಗೆ ಭಯಂಕರ ಮಳೆ ಬಂದು ಗುಂಡಿಯ ತುಂಬ ನೀರು ತುಂಬಿಕೊಂಡಿದ್ದರಿಂದಲೂ, ಗುಂಡಿಯಿಂದ ಮೇಲೇರಲಾಗದ ಸಕ್ರಿನಾಯ್ಕ ಜಾರಿ ಜಾರಿ ಅಲ್ಲೇ ಬಿದ್ದು ಹೊಟ್ಟೆ ತುಂಬ ನೀರು ಕುಡಿದು ಲಂಬಾಣಿ ಭಾಷೆಯಲ್ಲಿ ಗೋಳಾಡಿ ಸತ್ತು ಊದಿಕೊಂಡಿದ್ದ ಅಂತ ಅಲ್ಲಲ್ಲಿ ಜನ ಅದ್ಭುತವಾಗಿ ವರ್ಣಿಸುತ್ತಿದ್ದರು. ಇದಕ್ಕೆ ತದ್ವಿರುದ್ಧವಾಗಿ ಸಕ್ರಿನಾಯ್ಕನ ಮನೆಯಲ್ಲಿ ಸಣ್ಣಯ್ಯ ಕದ್ದು ಭಟ್ಟಿಸಾರಾಯಿ ಕುಡಿದು ಕಡಿಮೆ ಕಾಸು ಕೊಟ್ಟನೆಂಬ ಕಾರಣಕ್ಕೆ ಉದ್ರಿಕ್ತನಾದ ಸಕ್ರಿನಾಯ್ಕ ಈ ಸುದ್ಧಿಯನ್ನು ರಾಗಿದೊಡ್ಡಿಯ ತುಂಬೆಲ್ಲಾ ಹರಡಿದ್ದನೆನ್ನುವ ಸಂದೇಹ ಸಣ್ಣಯ್ಯನಿಗೆ ಬಂದು ಮಾಟ ಮಂತ್ರ ಮಾಡಿಸಿ ಸಕ್ರಿನಾಯ್ಕನ ಸಾವಿಗೆ ಪರೋಕ್ಷವಾಗಿ ಕಾರಣಕರ್ತ ಅನ್ನುವ ಸುದ್ದಿಯನ್ನೂ ಹೆಂಗಸರು ಹೊಲಗದ್ದೆಗಳಲ್ಲಿ ಕಳೆ ಕೀಳುವಾಗ ಬಾಯಿಯಿಂದ ಬಾಯಿಗೆ ಪುಗಸಟ್ಟೆಯಾಗಿ ಹಂಚಿ ಆನಂದಪಡುತ್ತಿದ್ದರು. ಅಂದು ಸಣ್ಣಯ್ಯ ಗುಂಡಿಯ ಸುತ್ತ ಪ್ರದಕ್ಷಿಣೆ ಹಾಕಿ ಮಂತ್ರ ಹೇಳಬಾರದಿತ್ತು ಅಂತ ಎಷ್ಟೋ ದಿನಗಳವರೆಗೂ ಆಗಾಗ ನಮಗನ್ನಿಸುತ್ತಿತ್ತು.
*******
ಈ ನಡುವೆ ಮತ್ತೊಂದು ಆತಂಕಕಾರಿ ಅಂಶ ರಾಗಿದೊಡ್ಡಿಯಲ್ಲಿ ಕಂಡು ಬಂದಿತು. ಸಣ್ಣಯ್ಯ ಅಲ್ಲಿ ಇಲ್ಲಿ ದುಡ್ಡು ಎತ್ತಿ ಬಸಪ್ಪನ ಗುಡಿಯನ್ನು ಅಗಲ ಮಾಡಿ ಮೇಲೊಂದು ಗೋಪುರ ಇಟ್ಟು ಮುಂಭಾಗದಲ್ಲೊಂದು ಹೋಮಕುಂಡ ಮಾಡಿಸಿದ್ದ. ಅಷ್ಟು ಸಾಲದೆಂಬಂತೆ ಪಕ್ಕದಲ್ಲೇ ಇದ್ದ ದೇವಸ್ಥಾನಕ್ಕೆ ಸೇರಿದ್ದ ಜಾಗದಲ್ಲಿ ಒಂದು ಆರ್.ಸಿ.ಸಿ ಕಟ್ಟಡವನ್ನೇರಿಸಿ "ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿಯವರ ಮಠ" ಎಂದು ಬೋರ್ಡು ಬರೆಸಿ ಅದರೊಳಗೆ ಬಣ್ಣದ ಬಲ್ಬು ಹಾಕಿಸಿ ಕರೆಂಟು ಕನೆಕ್ಷನ್ನು ಕೊಟ್ಟು ಎಲ್ಲರಿಗೂ ಕಾಣುವಂಥ ಜಾಗದಲ್ಲಿ ತೂಗು ಹಾಕಿ ಅವಾಗವಾಗ ತಾನೇ ನೋಡಿಕೊಂಡು ಖುಷಿ ಪಡುತ್ತಿದ್ದ. ದಿನವೂ ಗುಂಪುಗುಂಪಾಗಿ ಜನ ಸೇರುತ್ತಿದ್ದರು. ಪ್ರತಿ ಸೋಮವಾರ ಕಾಳುಸಾರು ಮುದ್ದೆ ಊಟ ಲಭ್ಯವಿತ್ತು. ಪ್ರತೀ ಹುಣ್ಣಿಮೆಯ ರಾತ್ರಿ ಒಬ್ಬಟ್ಟು ಕಂಪಲ್ಸರಿ. ಇನ್ನು ಹರಕೆ ಹೊತ್ತ ಭಕ್ತರು ಮೊಸರನ್ನ, ಸೀಯನ್ನ, ಪಂಚಾಮೃತ, ಶಾವಿಗೆ, ಬೂಂದಿ ಇತ್ಯಾದಿಗಳನ್ನು ಜನರಿಗೆ ಉಣಬಡಿಸುತ್ತಿದ್ದುದರಿಂದ ಸುತ್ತಮುತ್ತಲ ಊರುಗಳಲ್ಲೆಲ್ಲಾ ಮಠ ಸಿಕ್ಕಾಪಟ್ಟೆ ಫೇಮಸ್ಸಾಗತೊಡಗಿತು.
ಯಾರಾದರೂ ಸಣ್ಣಯ್ಯನನ್ನು ಭೇಟಿ ಮಾಡಬೇಕೆಂದರೆ ತುಂಬಾ ಕಷ್ಟವಾಗುತ್ತಿತ್ತು. ಮಠದಲ್ಲಿ ತಾನು ನೇಮಿಸಿಕೊಂಡಿದ್ದ ವ್ಯವಸ್ಥಾಪಕಿ(?)ಯನ್ನು ಸಂಪರ್ಕಿಸಿ ಅಪಾಯಿಂಟ್ಮೆಂಟು ತಗೊಂಡು ಎರಡ್ಮೂರು ವಾರಗಳ ನಂತರ ಶ್ರೀಗಳನ್ನು ಭೇಟಿ ಮಾಡಬೇಕಿತ್ತು. ಇದನ್ನು ಕಂಡು ನಮಗೆ ದೇಹದ ಯಾವ ಭಾಗದಿಂದ ನಗಬೇಕೋ ತಿಳಿಯದಾಗಿತ್ತು.ಸಣ್ಣಯ್ಯನ ಕೈಯಲ್ಲಿ ಯಾವಾಗ ದುಡ್ಡುಕಾಸು ಓಡಾಡಲು ಶುರುವಾಯಿತೋ ರಾಗಿದೊಡ್ಡಿಯ ಗಂಡಸರು ಮೂರೊತ್ತೂ ಮಠದಲ್ಲೇ ಬಿದ್ದಿರುತ್ತಿದ್ದರು. ಶ್ರೀಗಳ ಬಗ್ಗೆ ಯಾರಾದ್ರು ನೆಗೆಟಿವಾಗಿ ಮಾತಾಡಿದರೆ ಸಂಸ್ಕೃತದಲ್ಲಿ ಚೆನ್ನಾಗಿ ಬೈದು ಜುಟ್ಟು ಹಿಡಿದು ಮೇಲೆತ್ತಿ ಕೆಳಕ್ಕೆ ಕುಕ್ಕಿಬಿಡುತ್ತಿದ್ದರು. ನಾಲಿಗೆಗೆ ಕಾರೆಮುಳ್ಳು ಚುಚ್ಚಿ, ಜೀವಂತವಿರುವ ಕರಿಗೊದ್ದಗಳನ್ನು ಬಾಯಿಗೆ ತುಂಬಿ ಬಿಡುತ್ತಿದ್ದರು. ಇನ್ನೂ ನಕರ ಮಾಡಿದರೆ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರೋರಾತ್ರಿ ದಟ್ಟಕಾಡಿನ ಮಧ್ಯಕ್ಕೆ ಕರೆದೊಯ್ದು ಒಂಟಿಯಾಗಿ ಬಿಟ್ಟು ಬರುತ್ತಿದ್ದರು. ಸಣ್ಣಯ್ಯ ಕೊಡುತ್ತಿದ್ದ ಪುಡಿಗಾಸು, ಗಣೇಶ ಬೀಡಿ ಇಷ್ಟೆಲ್ಲಾ ಕೆಲಸ ಮಾಡಿಸುತ್ತಿತ್ತು.
"ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿ"ಗಳ ಜನ್ಮದಿನದಂದು ಶ್ರೀಮಠದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು, ಭಕ್ತಿಸಂಗೀತ ರಸಸಂಜೆಗಳು, ವಚನಗಾಯನ, ಸುಗಮಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯನ್ನು ಕೈಗೊಳ್ಳುವ ಐಡಿಯಾ ಪ್ರಚಾರಪ್ರಿಯ ಸಣ್ಣಯ್ಯನಿಗೆ ಹೊಳೆದುದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅದಕ್ಕೆ ಬೇಕಾದ ಪೋಲೀಸ್ ಸೆಕ್ಯುರಿಟಿ ವ್ಯವಸ್ಥೆಯನ್ನು ಚಿಕ್ಕಮಲ್ಲೇಗೌಡರು ನೋಡಿಕೊಳ್ಳುವುದಾಗಿ ಸಣ್ಣಯ್ಯನಿಗೆ ಮಾತು ಕೊಟ್ಟಿದ್ದರು. ಅದರ ಹಿಂದಿದ್ದ ಮರ್ಮವೆಂದರೆ, ತಮಗೂ ಉಯ್ಯಂಬಳ್ಳಿಯ ಅಂಗನವಾಡಿ ಟೀಚರ್ ಫಾತಿಮಾಗೂ ಇರುವ ಗುಪ್ತಸಂಬಂಧದ ವಿಷಯ ಅತೀಂದ್ರಿಯ ವಿದ್ಯೆಯಲ್ಲಿ ಪಾರಂಗತನಾಗಿದ್ದ ಸಣ್ಣಯ್ಯನಿಗೆ ಗೊತ್ತಿದ್ದರೂ ಗೊತ್ತಿರಬಹುದು. ಸಣ್ಣಯ್ಯ ಯಾವುದೇ ಕಾರಣಕ್ಕೂ ನಾಳೆ ದಿನ ಅಪ್ಪಿತಪ್ಪಿಯೂ ಬಾಯಿ ಬಿಡದಂತೆ ನೋಡಿಕೊಳ್ಳಲು ಅವನ ಜೊತೆ ಸಾಧ್ಯವಾದಷ್ಟು ಚೆನ್ನಾಗಿರಬೇಕು ಅನ್ನುವ ದೂರದೃಷ್ಟಿ ಚಿಕ್ಕಮಲ್ಲೇಗೌಡರದು.
ಸಣ್ಣಯ್ಯನ ಜನ್ಮದಿನೋತ್ಸವ ಬಂತು. ಪ್ಲಾನ್ ಪ್ರಕಾರ "ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿ"ಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ಊರೆಲ್ಲಾ ಮೆರವಣಿಗೆ ಏರ್ಪಡಿಸಲಾಗಿತ್ತು. ಜನಸಾಗರವೇ ಅಲ್ಲಿ ನೆರೆದಿತ್ತು. ಎಲ್ಲರ ಕಣ್ಣೂ ಪಲ್ಲಕ್ಕಿಯ ಮೇಲಿದ್ದರೆ ನಮ್ಮ ಕಣ್ಣುಗಳು ಅಕ್ಕಪಕ್ಕದೂರಿನ ಮುದ್ದುಮುದ್ದಾದ ಹೆಣ್ಣುಮಕ್ಕಳ ಮೇಲಿದ್ದವು.ಅವರ ಜೊತೆ ಬಂದಿದ್ದವರ ಕಣ್ಣುಗಳು ನಮ್ಮ ಮೇಲಿದ್ದವು. ಆ ಸುಂದರಿಯರು ತಂತಮ್ಮ ಅಮ್ಮಂದಿರ ಸೀರೆಗಳನ್ನುಟ್ಟು ಕಳಸದ ತಟ್ಟೆಗಳನ್ನು ಹಿಡಿದುಕೊಂಡು ಗಂಭೀರವಾಗಿ ಬರುತ್ತಿದ್ದರು. ಆಗಾಗ ಕದ್ದುಮುಚ್ಚಿ ನಮ್ಮ ಕಡೆ ನೋಡಿದಾಗಲಂತೂ ಮನಸು ಮಂಕಿಯಾಗುತ್ತಿತ್ತು.
ಸಣ್ಣಯ್ಯ ಕುಳಿತಿದ್ದ ಪಲ್ಲಕ್ಕಿ ಲೋಡಾದ ಪ್ರೈವೇಟು ಬಸ್ಸಿನಂತೆ ಡಂಕಡಿಂಕ ಡಿಂಕಡಂಕ ಅಂತ ಊರ ತುಂಬಾ ಉರುಳಾಡತೊಡಗಿತು. ಸಣ್ಣಯ್ಯ ಮದುವೆಗಂಡಿನಂತೆ ನಾಚಿಕೊಂಡು ಕೆನ್ನೆ ಕೆಂಪಗಾಗಿಸಿಕೊಂಡಿದ್ದ. ಗೂನುಬೆನ್ನು "ಛೀ ಕಳ್ಳ!" ಅಂತ ರೇಗಿಸುತ್ತಿತ್ತು. ನಾವೆಲ್ಲಾ ಗೂನುಬೆನ್ನಿಗೆ ಥ್ಯಾಂಕ್ಸ್ ಹೇಳಿ ನಮ್ಮ ಸಮೀಪದ ಕೈಗಾಡಿಯಲ್ಲಿದ್ದ ಗೋಲಿಸೋಡಾ ಕುಡಿದು ದೀರ್ಘವಾಗಿ ತೇಗಿದೆವು. ಸಣ್ಣಯ್ಯ ನಾಟಕದವರಂತೆ ಕಾಣುತ್ತಿದ್ದ.
ಪಲ್ಲಕ್ಕಿಯ ಮುಂದೆ ಬಹುತೇಕ ನಿತ್ಯದ ಕುಡುಕರು ಟಪ್ಪಾಂಗುಚ್ಚಿ ಹಾಕುತ್ತಿದ್ದರು. ಅವರಿಗೆಲ್ಲಾ ಹುಚ್ಚುನಾಯಿ ಕಡಿದಿತ್ತೋ, ಪಾಪಸ್ಸುಕಳ್ಳಿ ತಿಂದು ಬಂದಿದ್ದರೋ ಆ ಬಸಪ್ಪನಿಗಷ್ಟೇ ಗೊತ್ತಿತ್ತು. ಬಸಪ್ಪ ಅಂದಾಗ ನೆನಪಾಯಿತು; ಸಣ್ಣಯ್ಯ ದೇವರಾದ ನಂತರ ರಾಗಿದೊಡ್ಡಿಯ ಜನ ಬಸಪ್ಪನನ್ನು ಅಕ್ಷರಶಃ ಮರೆತೇ ಬಿಟ್ಟಿದ್ದರು. ಪ್ರತಿವರ್ಷ ಶಿವರಾತ್ರಿಯಂದು ಉತ್ಸವಕ್ಕೆ ಎತ್ತುತ್ತಿದ್ದ ಬಸಪ್ಪನ ಬೆಳ್ಳಿವಾಹನ ಕಪ್ಪುಬಣ್ಣಕ್ಕೆ ತಿರುಗಿ ಮೂಲೆಯಲ್ಲಿ ನಿಂತಿತ್ತು. ಅದರ ಕಿವಿಗಳಲ್ಲಿ ಜೇಡ ಬಲೆ ಹೆಣೆದಿತ್ತು. ಅದರ ಹೊಟ್ಟೆಯಲ್ಲಿ ಜಿರಳೆಗಳು ಪರಸ್ಪರ ಕಿತ್ತಾಡಿಕೊಂಡು ಮೈಕೈಯೆಲ್ಲಾ ಗಾಯಮಾಡಿಕೊಂಡಿದ್ದವು.
ಇತ್ತ ಚಿಕ್ಕಮಲ್ಲೇಗೌಡ ಕಳುಹಿಸಿದ್ದ ಖಾಕಿಗಳು ಟೋಪಿ ಹಾಕಿಕೊಂಡು, ಸವೆದು ಹೋಗಿರುವ ಕೋಲು ಹಿಡಿದುಕೊಂಡು ಕಿರ್ರೋ ಮರ್ರೋ ಎನ್ನುತ್ತಿದ್ದವು. ಅದನ್ನು ನೋಡಿದ ಕೆಲವರು ಪಿಕ್ ಪಾಕೆಟ್ ಮಾಡುವವರು ಪೋಲೀಸರ ವೇಷದಲ್ಲಿ ಬಂದಿದ್ದಾರೆಂದು ಅಕ್ಕಪಕ್ಕದವರ ಕಿವಿಗಳಲ್ಲಿ ಊದಿ ಎಚ್ಚರಿಸುತ್ತಿದ್ದರು. ಅತ್ತ ಸಣ್ಣಯ್ಯನ ಪಲ್ಲಕ್ಕಿ ಜಗಮಗಿಸುವ ವಿದ್ಯುದ್ದೀಪಗಳಿಂದ ಹೊಳೆಯುತ್ತಿತ್ತು. ಇಂಥಾ ಟೈಮಲ್ಲಿ ಕರೆಂಟು ಹೋದರೆ ಮಜಾ ಇರುತ್ತದೆಂದು ನಮ್ಮ ಗುಂಪಿನ ಸದಸ್ಯರು ಆಸೆಪಟ್ಟೆವು. ಹಾಗೊಂದು ವೇಳೆ ಕರೆಂಟು ಹೋದರೆ ಬಸಪ್ಪನಿಗೆ ಒಂದು ಕಂಚಿನ ಗಂಟೆ ಗಿಫ್ಟು ಮಾಡುವುದಾಗಿ ಹರಕೆ ಮಾಡಿಕೊಂಡೆವು. ಅದೇ ವೇಳೆಗೆ ಅದೇಕೋ ಗೊತ್ತಿಲ್ಲ ಸಣ್ಣಯ್ಯ ಇದ್ದಕ್ಕಿದ್ದಂತೆಯೇ ಮುಳ್ಳಿನ ಕುರ್ಚಿ ಮೇಲೆ ಕುಳಿತಂತೆ ಆಡತೊಡಗಿದ. ಅದನ್ನು ಕಂಡು ಜನ ದೇವರು ಬಂತೆಂದು ತಿಳಿದು "ಬಸಪ್ಪನಿಗೆ ಉಘೇ ಉಘೇ!" ಅಂದೇಬಿಟ್ಟರು. ಅದು "ಉಕ್ಕಿ ಬಂದ ಮೂತ್ರವನ್ನು ತಡೆದು ನಿಲ್ಲಿಸಲಾಗದ ಸ್ಥಿತಿ" ಅಂತ ನಮ್ಮ ಗುಂಪಿನ ತೂಕದ ವ್ಯಕ್ತಿ ತನ್ನನುಭವ ಹಂಚಿಕೊಂಡು ತುಟಿಬಿಚ್ಚದೆ ನಕ್ಕ.
ಇದ್ದಕ್ಕಿದ್ದಂತೆಯೇ ನಲವತ್ತರ ವ್ಯಕ್ತಿಯೊಬ್ಬ ಓಡಿ ಬಂದು ಚಿಕ್ಕಮಲ್ಲೇಗೌಡರ ಕಿವಿಯಲ್ಲಿ ಏನನ್ನೋ ಹೇಳಿದ. ತಮಟೆ, ನಗಾರಿ, ಓಲಗಗಳ ಸದ್ದಿನಲ್ಲಿ ಅವರಿಗೇನು ಕೇಳಿಸಿತು ಎಂದು ನನಗೆ ಸಾಕ್ಷಾತ್ ಸಣ್ಣಯ್ಯನಾಣೆಗೂ ಗೊತ್ತಾಗಲಿಲ್ಲ. ಚಿಕ್ಕಮಲ್ಲೇಗೌಡರು ಗಲಿಬಿಲಿಯಿಂದ ಪಂಚೆಯನ್ನೆತ್ತಿಕಟ್ಟಿ ದಡದಡನೆ ಅವನ ಹಿಂದೆ ಹೆಜ್ಜೆ ಹಾಕಿದರು. ನಾವೂ ಉತ್ಸಾಹ ಕಳೆದುಕೊಳ್ಳದೆ ಅವರಿಬ್ಬರನ್ನು ಕದ್ದುಮುಚ್ಚಿ ಹಿಂಬಾಲಿಸಿದೆವು. ನಡೆದಂತೆಲ್ಲಾ ಊರಿನ ದೀಪಗಳ ಬೆಳಕು ನಿಧಾನವಾಗಿ ಕರಗುತ್ತಾ ಸುತ್ತಲೆಲ್ಲಾ ಗವ್ವೆನ್ನುವ ವಾತಾವರಣ ಕಂಡು ಬಂತು. ಜೀರುಂಡೆ ಗುಂಯ್ ಗುಡುವ ಕಗ್ಗತ್ತಲನ್ನೇ ದಿಗ್ಭ್ರಮೆಗೊಳಿಸುವಂತೆ ದೂರದಲ್ಲಿ ಬೆಳ್ಳಗೆ ಏನೋ ಕಂಡಂತಾಯಿತು. ಚಿಕ್ಕಮಲ್ಲೇಗೌಡ ಮತ್ತು ಆ ಅಪರಿಚಿತ ವ್ಯಕ್ತಿ ಆ ಬೆಳ್ಳಗಿದ್ದುದರತ್ತ ಬಿಳಿಹಂದಿಗಳಂತೆ ನುಗ್ಗುತ್ತಿದ್ದುದ್ದನು ಕಂಡು ನಮಗೆ ಹೊಟ್ಟೆಯಲ್ಲಿ ಕೋತಿ ಪರಚಿದಂತಾಯಿತು. ಅವರಿಬ್ಬರೂ ಆ ಬೆಳ್ಳಗಿದ್ದುದರ ಹತ್ತಿರ ಹೋಗಿ ತಾವೂ ಬೆಳ್ಳಬೆಳ್ಳಗೆ ನಿಂತುಬಿಟ್ಟವು. ನಾವು ಕಳ್ಳಿಬೇಲಿಯ ಪಕ್ಕದಲ್ಲಿದ್ದ ತಿಪ್ಪೆಯ ಮೇಲೆ ಹಲಸಿನ ಹಣ್ಣು ಅಡೆ ಹಾಕುವಂತೆ ಉಸಿರುಗಟ್ಟಿ ಕುಳಿತೆವು. ಅಸ್ಪಷ್ಟವಾಗಿ ಕಾಣುತ್ತಿದ್ದ ಆ ಬೆಳ್ಳಗಿನ ವಸ್ತು ಪಾಳುಬಿದ್ದ ಮಾರಿಗುಡಿ ಅಂತ ನಿಧಾನವಾಗಿ ಗೊತ್ತಾಯಿತು. ನಾವು ಒಂದೇ ಕಡೆ ಕೂರಲಾಗದೆ ದೇಹದಿಡೀ ಭಾರ ಹೊತ್ತ ಅಂಗಾಲು ಉರಿಯುತ್ತಿದ್ದರೂ ಅಯ್ಯಪ್ಪಸ್ವಾಮಿ ಭಕ್ತರು ಮಕರಜ್ಯೋತಿ ದರ್ಶನಕ್ಕಾಗಿ ಕಾಯುವಷ್ಟೇ ಉತ್ಸಾಹದಲ್ಲಿ ಕೆಮ್ಮದೆ, ಕ್ಯಾಕರಿಸದೆ ಕುಕ್ಕರಿಸಿದ್ದೆವು.
ಯಾವಾಗ ಆ ಅಪರಿಚಿತ ವ್ಯಕ್ತಿ ಮಾರಿಗುಡಿಯೊಳಕ್ಕೆ ನುಗ್ಗಿದನೋ ಅವನ ಹಿಂದೆ ಏಳೆಂಟಡಿ ಎತ್ತರವಿದ್ದ ಚಿಕ್ಕಮಲ್ಲೇಗೌಡನೂ ತೂರಿಕೊಂಡ. ತಕ್ಷಣ ಮಾರಿಗುಡಿಯೊಳಗಿಂದ ಸಿಡಿಲು ಹೊಡೆದಂತೆ "ಪೂರ್ಣೀsss " ಅಂತ ಜೋರಾಗಿ ಶಬುದವೊಂದು ಕೇಳಿ ಬಂತು. ಸುಮಾರು ವರ್ಷಗಳಿಂದ ಗುಡಿ ಪಾಳು ಬಿದ್ದಿದ್ದರಿಂದ ಮಾರಿಯ ಹಸಿವು ಜಾಸ್ತಿಯಾಗಿ ಅವರಿಬ್ಬರನ್ನೂ ಏಕಕಾಲಕ್ಕೆ ಗಬಕ್ಕನೆ ನುಂಗಿಬಿಟ್ಟಿರಬಹುದೆಂದೂ, ಅಪರೂಪಕ್ಕೆ ರಕ್ತದ ರುಚಿ ನೋಡಿದ ಮಾರಿ ಕಣ್ಣು ನಮ್ಮ ಮೇಲೆ ಬಿದ್ದರೂ ಬೀಳಬಹುದೆಂದೂ ಭಯಗೊಂಡ ನಾವು ಹೆಜ್ಜೆಯ ಸದ್ದೂ ಕೇಳದಷ್ಟು ನಾಜೂಕಾಗಿ ಅಲ್ಲಿಂದ ಎಸ್ಕೇಪಾದೆವು. ನಾವು ಸ್ವಲ್ಪ ದೂರ ಕಳ್ಳರಂತೆ ನಡೆದು ಬಳಿಕ ಓಡಿ ಬಂದಿದ್ದರಿಂದ ನಮ್ಮ ಗುಂಪಿನ ತೂಕದ ಮಿತ್ರ ಜೀವಮಾನದಲ್ಲೇ ಪ್ರಥಮಬಾರಿಗೆ ವ್ಯಾಯಾಮ ಮಾಡಿದ ಕೀರ್ತಿಗೊಳಗಾದ. ಇಡೀ ರಾತ್ರಿ ನಿದ್ದೆ ಬರಲಿಲ್ಲ.ಕಣ್ಣಿನ ತುಂಬಾ ಮಾರಿಗುಡಿಯೂ, ಕಿವಿಯ ತುಂಬಾ ಪೂರ್ಣಿಯೂ ತುಂಬಿದ್ದವು.
ಮಾರನೆಯ ಬೆಳಗ್ಗೆ ಸೂರ್ಯ ಏಳುವ ಮೊದಲೇ ಎದ್ದೆವು. ಹಿಂದಿನ ರಾತ್ರಿ ಎಲ್ಲರೂ ಸೋಮ್ಲಾನಾಯ್ಕನ ಮನೆಯ ಹಿಂದಿರುವ ಗುಡಿಸಲಿನಲ್ಲಿ ಮಲಗಿದ್ದೆವು. ಸಣ್ಣಯ್ಯನ ಜಯಂತೋತ್ಸವ ಇದ್ದುದರಿಂದ "ರಾತ್ರೆ ಎಲ್ಲಿ ಹಾಳಾಗಿ ಹೋಗಿದ್ರಿ" ಅಂತ ಮನೆಯವರ್ಯಾರೂ ಕೇಳಿರಲಿಲ್ಲ.ಇನ್ನೇನು ಮಾರಿಗುಡಿ ಕಡೆ ಹೊರಡಬೇಕು ಅನ್ನುವಷ್ಟರಲ್ಲಿ "ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿ"ಯವರ ಮಠದಲ್ಲಿ ಏಳುತಲೆಯ ಸ್ನೇಕು ಪ್ರತ್ಯಕ್ಷವಾಗಿದೆ ಎಂತ ಊರಿನ ತುಂಬೆಲ್ಲಾ ಗುಲ್ಲೋ ಗುಲ್ಲು. ಎಲ್ಲಿಗೆ ಹೋಗಬೇಕು ಅನ್ನುವ ಗೊಂದಲ ಕಾಡತೊಡಗಿತು.ಸ್ನೇಕನ್ನು ಬೇಕಾದರೆ ನಾಳೆಯೂ ನೋಡಬಹುದು. ಮಾರಿಗುಡಿ ಹತ್ತಿರ ಒಂದು ವೇಳೆ ಅವರಿಬ್ಬರೂ ಸತ್ತುಹೋಗಿದ್ದರೆ ಚಟ್ಟಕ್ಕೆ ಹದ ಮಾಡಲು ನಮ್ಮ ಸಹಾಯವೂ ಬೇಕಾಗಬಹುದು ಅನ್ನುವ ಮಾನವೀಯ ಮೌಲ್ಯಗಳು ನಮ್ಮೊಳಗೆ ಜಾಗೃತವಾಗಿ ಮಾರಿಗುಡಿಯ ಕಡೆಗೆ ಹೊರಟೆವು.
ಚಿಕ್ಕಮಲ್ಲೇಗೌಡನ ಒಬ್ಬಳೇ ಮಗಳು ಪೂರ್ಣಿ ಭೀಕರ ಅತ್ಯಾಚಾರಕ್ಕೊಳಗಾಗಿ ಸತ್ತು ಮಲಗಿದ್ದಳು. ಪೊಲೀಸರು ತಂತಮ್ಮ ಕಾರ್ಯ ನಿರ್ವಹಿಸುತ್ತಿದ್ದರು. ಮಗಳಸಾವಿನಿಂದ ನೊಂದ ಚಿಕ್ಕಮಲ್ಲೇಗೌಡನ ಹೆಂಡತಿ ಸರೋಜಕ್ಕ ಮೂರ್ಛೆ ಹೋಗಿದ್ದಳು.
ಉಯ್ಯಂಬಳ್ಳಿಯ ಅಂಗನವಾಡಿ ಫಾತಿಮಾಳ ಏಕೈಕ ಗಂಡ ಇಂಜಮಾಮ್ ಅಲಿಯಾಸ್ ಕೋಳಿಸಾಬಿ ಆಯಮ್ಮನ ಮುಖಕ್ಕೆ ನೀರೆರಚಿದ. ಚಿಕ್ಕಮಲ್ಲೇಗೌಡನನ್ನು ತಬ್ಬಿಕೊಂಡು ಎರಡುಹನಿ ಕಣ್ಣೀರು ಮಿಡಿದು, ಟೋಪಿ ಸರಿ ಪಡಿಸಿಕೊಂಡು ತಾನು ಕೋಳಿಮೊಟ್ಟೆ ಸರಬರಾಜು ಮಾಡಲು ಇಟ್ಟುಕೊಂಡಿದ್ದ ಹಳೇ ಬಜಾಜ್ ಚೇತಕ್ ಮೇಲೆ ಕೂತು ಬುರ್ರನೆ ಹೋದ. ಪೂರ್ಣಿಯ ಹೆಣವನ್ನು ಪೊಲೀಸರು ಎತ್ತಿಕೊಂಡು ಹೋದರು.ಆನಂತರ ಸರೋಜಕ್ಕ ಕಣ್ಣು ಬಿಟ್ಟಳು.ನಾವು ಏಳುತಲೆಯ ಸ್ನೇಕನ್ನು ನೋಡಲು ಮಠದ ಕಡೆ ಹೊರಟೆವು.
ಪೂರ್ಣಿಯ ದಿವಸದ ಕಾರ್ಯ ಮುಗಿದು ಸೂತಕ ಕಳಕೊಂಡ ಮರುದಿನ ಊರಿಗೂರೇ ಸಾರಿಸಿ, ಗುಡಿಸಿ, ವಪ್ಪ ಮಾಡಿ ಮಠದ ಮುಂದೆ ಜಮಾಯಿಸಿತ್ತು. ಸಣ್ಣಯ್ಯನ ಮೇಲೆ ದೇವರು ಬರಿಸಿ ರಾಗಿದೊಡ್ಡಿಯಲ್ಲಿ ಸಂಭವಿಸುತ್ತಿರುವ ಸಾವುನೋವುಗಳ ಹಿಂದೆ ಅಡಗಿರಬಹುದಾದ ರಹಸ್ಯ ತಿಳಿಯುವ ಉದ್ದೇಶ ಎಲ್ಲರದಾಗಿತ್ತು. ಸ್ವಲ್ಪ ಹೊತ್ತು ಭುಜ ಕುಣಿಸಿ ಸಣ್ಣಯ್ಯ ಕಡೆಗೂ "ಸಿಸುಮಗನೇ" ಅಂತ ರಾಗ ಎಳೆದ. ಎಲ್ಲರೂ ಎಂದಿನಂತೆ "ಬಸಪ್ಪನಿಗೆ ಉಘೇ ಉಘೇ!" ಅಂದರು. ಕುರಿತುಪ್ಪಟ ಕತ್ತರಿಸುವ ವೃತ್ತಿಯ ಸಿಂಗ್ರಣ್ಣ ಪ್ರಶ್ನೆ ಶುರು ಮಾಡಿಕೊಂಡ-
"ಸ್ವಾಮೀ, ತಪ್ಪು ಒಪ್ಪು ಎಲ್ಲಾನು ನಿನ್ನ ಹೊಟ್ಟೆಗೆ ಹಾಕ್ಕೊಂಡು ಈ ಸಾವುನೋವ್ಗೆಲ್ಲ ಕಾರಣ ತಿಳ್ಸಪ್ಪಾ…"
"ಅದಕ್ಕೂ ಮುಂಚೆ ಇನ್ನೊಂದು ಇಚಾರ ಪೈಸ್ಲು ಆಗ್ಬೇಕು."
"ಅದೇನಂತ ಯೋಳು ನನ್ನೊಡೆಯಾ"
"ಮೊಟ್ಮೊದುಲ್ನೇದಾಗಿ ಯೋಳಬೇಕಂದ್ರೆ ಈ ಊರಿನ ವಾಸ್ತುನೆ ಸರಿಲ್ಲ!"
"ಹಂಗಾರೆ ಇಡೀ ಊರುನ್ನೇ ಬೀದಿ, ಮನೆಗಳ ಸಮೇತ ಬೇರೆ ಎಲ್ಲಿಗಾದ್ರೂ ಸಿಪ್ಟ್ ಮಾಡಿಬುಡುವಾ ಬುಡ್ರಿ ಐನೋರೆ ಒಂದು ಭಾನುವಾರ ನೋಡ್ಕೊಂಡು" ಅಂತ ನಮ್ಮ ಗುಂಪಿನ ತರಲೆ ಕೆಮ್ಮಿದ.
"ಲೇ ಸುಮ್ನಿರೋ ತಲೆಪಾತಕ ನನ್ನ್ಮಕ್ಳಾ..ಇಂಗೆಲ್ಲಾ ಮಾತಾಡುದ್ರೆ ಅಯ್ಯ ವಂಟೋಯ್ತನೆ " ಇಷ್ಟು ಹೇಳಿ ನಮ್ಮ ಕಡೆಗೊಮ್ಮೆ ಗುರಾಯಿಸಿ ಮುದುಕ ಮುಂದುವರಿಸಿದ-
"ತಪ್ಪಾಯ್ತು ಸಣ್ಣಯ್ಯನೋರೆ! ಅಲ್ಲ…ಅಲ್ಲ… ಬಸಪ್ನೋರೆ,!! ಹುಡುಗಮುಂಡೇವು ..ಸಮುಸ್ಬೇಕು. ಹಂಗಾರೆ ರಾಗಿದೊಡ್ಡಿಗೆ ಉಳುಗಾಲ ಇಲ್ಲ ಅನ್ನಿ?"
"ನಾನೇಳಿದಂಗೆ ಕೇಳುದ್ರೆ ಉಳಿಗಾಲ ಅದೆ…" ಸಣ್ಣಯ್ಯ ಘನವಾದ ಗತ್ತಿನಿಂದ ಹೇಳಿದ.
ಎಲ್ಲರೂ ಸಣ್ಣಯ್ಯನ ಮಾತಿಗಾಗಿ ಕಾಯುತ್ತಾ ನಿಂತರು. ಸಣ್ಣಯ್ಯ ತನ್ನೆರಡೂ ಭುಜಗಳನ್ನು ಅಲ್ಲಾಡಿಸಿ ಕಟ್ಟಿದ ತಲೆಗೂದಲನ್ನು ಬಿಚ್ಚಿ ಕಟಕಟನೆ ಹಲ್ಲು ಕಡಿದ. ತನ್ನ ಕೈಲಿದ್ದ ಬೆತ್ತದಿಂದ "ಏಯ್" ಅನ್ನುತ್ತ ಆರ್ಭಟಿಸಿ ಮುದುಕ ಸಿಂಗ್ರಣ್ಣನಿಗೆ ರಪರಪಾಂತ ನಾಲ್ಕು ಬಿಗಿದ. ವದೆ ತಿಂದ ಸಿಂಗ್ರಣ್ಣ ರೊಚ್ಚಿಗೆದ್ದು, "ಥೂ ಸೂಳೆಮಗನೆ, ಈ ಬಡ್ಡಿಹೈದನಿಗೆ ದೇವರೂ ಬರಲ್ತು. ದಿಂಡರೂ ಬರಲ್ತು. ಎಲ್ಲ ಬರೀ ನಾಟ್ಕ. ನನಗೆ ವಡೀತನೆ ಇವ್ನ್ ತಾಯ್ನಾ…" ಅಂತ ನೀಟಾಗಿ ಹೇಳಿ ಅಲ್ಲಿಂದ ಸ್ವಲ್ಪ ದೂರದಲ್ಲೇ ಇದ್ದ ಕಲ್ಲಿನ ಮೇಲೆ ಕೂತು ಬೀಡಿ ಹಚ್ಚಿದ. ಸಣ್ಣಯ್ಯನ ಅಭಿಮಾನಿಗಳು "ಕಂಯ್ಯ ಪಿಂಯ್ಯ" ಅಂದರು. ನಾವೆಲ್ಲಾ "ಐಟ್ಲಗ ಐಟ್ಲಗ" ಎಂದು ಕೇಕೆ ಹಾಕಿದೆವು. ಚಿಕ್ಕಮಲ್ಲೇಗೌಡ ನಮ್ಮ ಕಡೆ ನೋಡಿ ಒಮ್ಮೆ ಗುರಾಯಿಸಿ ತನ್ನ ಎಡಭುಜದ ಮೇಲಿದ್ದ ಟರ್ಕಿ ಟವಲನ್ನು ಬಲಭುಜಕ್ಕೆ ವರ್ಗಾಯಿಸಿ ಸಣ್ಣಯ್ಯನ ಕಡೆ ತಿರುಗುತ್ತಾ-
"ಸ್ವಾಮೀ ನಮ್ಮಿಂದೇನು ತಪ್ಪಾಯ್ತು ಅಂತ ಹೇಳ್ಬುಟ್ರೆ ತಪ್ಪುಕಾಣ್ಕೆ ಕೊಟ್ಟು ನಿನ್ನ ಪಾದುಕ್ಕೆ ಅಡ್ಬಿದ್ಬುಡ್ತೀವಿ. ಅದನ್ನು ಬುಟ್ಟು ಹಿಂಗೆ ಕ್ವಾಪಿಸಿಕೊಳ್ಳೋದು ಸರೀನೆ?"
"………….."
"ಈ ಊರಿನ ದೋಸ ಕಳೀಬೇಕಾದ್ರೆ ಏನ್ಮಾಡಬೇಕು ನನ್ನೊಡೆಯಾ? ನನ್ನ ಮಗಳು ಏನ್ಪಾಪ ಮಾಡಿದ್ಲಪಾ…ಅವಳ ಮಕ ಗ್ಯಾಪಿಸಿಕೊಂಡಾಗಲೆಲ್ಲ ಕಳ್ಳು ಕಿತ್ತುಕೊಂಡು ಬತ್ತದೆ. ಯಾರತ್ರ ಹಗೆ ಇತ್ತಪ್ಪ ನಂಗೆ? ಯಾರಿಗೆ ಏನು ಅನ್ಯಾಯ ಮಾದಿಡ್ನಪ್ಪಾ ನಾನು? ನಾನಿಷ್ಟೆಲ್ಲ ಕೇಳ್ತಿದ್ರು ನೀನು ಮಾತ್ರ ಮೂಗುಬಸವಣ್ಣನಂಗೆ ಇದ್ದೀ… ಯಾಕೋ ನನ್ನೊಡೆಯಾ? ನಿನಗೇನು ಬೇಕು ಕೇಳೋ ನನ್ನ ತಂದೆ." ಎಂದು ಹೇಳಿ ಜೋರಾಗಿ ಅಳಲಾರಂಭಿಸಿದ.
"ನಂಗೆ ಸೇರಿರೋ ಜಾಗ ನಂಗೇ ಬೇಕು"
"ಯಾವ್ ಜಾಗ ಸ್ವಾಮೀ?"
"ನಾನು ಮೇಯ್ಕೊಂಡು,ಓಡಾಡ್ಕೊಂಡು ಇದ್ನಲ್ಲಾ… ಆ ಜಾಗ"
"ವೊಸಿ ಬುಡಿಸಿ ಹೇಳೋ ನನ್ನಪ್ಪನೇ ಅರ್ತ ಆಗ್ಲಿಲ್ಲ" ಅಂತ ಚಿಕ್ಕಮಲ್ಲೇಗೌಡ ತಲೆ ಕೆರೆದುಕೊಳ್ಳುತ್ತಿದ್ದಂತೆಯೇ ಸಣ್ಣಯ್ಯ ಮತ್ತಷ್ಟು ಹೂಕರಿಸಿ, ಝೇಂಕರಿಸಿ ಚಿಕ್ಕಮಲ್ಲೇಗೌಡನಿಗೂ ಎರಡು ಬೆತ್ತಡೇಟು ಕೊಟ್ಟು "ಏಯ್" ಅಂತ ಗಂಟಲು ಕಿತ್ತುಹೋಗುವ ರೇಂಜಿಗೆ ಆರ್ಭಟಿಸಿದ. ಪಾಪ ಚಿಕ್ಕಮಲ್ಲೇಗೌಡ ಬೆನ್ನು ಮುಟ್ಟಿನೋಡಿಕೊಂಡು ಹಸುಮಕ್ಕಳಂತೆ ಮೂತಿ ಸೋಡು ಬಿಟ್ಟ. ನಾವು ಜಾತ್ರೆಯಲ್ಲಿ ಟೈಂಪಾಸಿಗಿರಲೆಂದು ಕೊಂಡಿದ್ದ ಬತಾಸನ್ನು ಬಾಯಿಗೆ ಹಾಕಿಕೊಂಡೆವು. ಎಲ್ಲರೂ ತುಟಿಪಿಟಿಕ್ಕೆನ್ನದೆ ಸಣ್ಣಯ್ಯನನ್ನೇ ನೋಡುತ್ತಿದ್ದರು. ಸಣ್ಣಯ್ಯ ಸುತ್ತಲೂ ಒಮ್ಮೆ ನೋಡಿ "ಗೋಮಾಳ…ಗೋಮಾಳ" ಅಂದ. ಹಸುಗಳು ಮೇಯಲೆಂದು ಬಿಟ್ಟಿರುವ ಜಾಗವನ್ನು ತನಗೆ ಕೊಡಬೇಕೆಂದು ಸಣ್ಣಯ್ಯನ ಬಾಯಲ್ಲಿ ಬಸಪ್ಪ ಹೇಳಿಸಿದ್ದಾನೆಂದು ನಿಧಾನವಾಗಿ ಅರ್ಥ ಮಾಡಿಕೊಂಡ ಜನ "ಓಹೋ ಹಿಂಗೆ ಇಸಯಾ" ಎನ್ನುವಂತೆ ತಲೆದೂಗಿದರು. ನಾವು ಮಾತ್ರ ಬತಾಸು ತಿನ್ನುವುದನ್ನು ಮುಂದುವರಿಸಿದ್ದೆವು. ಹಾಲಿ ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿರುವ ಚಿಕ್ಕಮಲ್ಲೇಗೌಡ ಮನಸು ಮಾಡಿದರೆ ಗೋಮಾಳವನ್ನು ಸಣ್ಣಯ್ಯನ ಮಠಕ್ಕೆ ಸೇರಿಸಬಲ್ಲ ಹಾಗೂ ಸಣ್ಣಯ್ಯನಿಂದ ಬಯಲಾಗಬಹುದಾದ ಉಯ್ಯಂಬಳ್ಳಿ ಫಾತಿಮಾ ಜೊತೆಗಿನ ತನ್ನ ಗುಪ್ತಸಂಸಾರದ ಘನರಹಸ್ಯವನ್ನು ತಪ್ಪಿಸಬಲ್ಲ ಅಂತ ನಮ್ಮ ಗುಂಪಿನ ತೂಕದ ವ್ಯಕ್ತಿ ಹೇಳಿದಾಗ ಮುಂದೆ ನಡೆಯಬಹುದಾದ ಸ್ವಾರ್ಥಸಾಧನೆಯ ಕುರಿತು ಬತಾಸು ತಿನ್ನುವುದನ್ನು ಅರ್ಧಕ್ಕೆ ನಿಲ್ಲಿಸಿ ಯೋಚಿಸತೊಡಗಿದೆವು.
ಅಷ್ಟರಲ್ಲಿ ಅಲ್ಲಿಗೆ ಪೋಲೀಸ್ ಜೀಪು ಬಂತು. ಜೊತೆಯಲ್ಲಿ ಫಾತಿಮಾಳ ಗಂಡ ಇಂಜಮಾಮ್ ಅಲಿಯಾಸ್ ಕೋಳಿಸಾಬಿ ಕೂಡಾ ಇದ್ದ. ಸಣ್ಣಯ್ಯ ಹಾಗೂ ಚಿಕ್ಕಮಲ್ಲೇಗೌಡ ಸೇರಿಕೊಂಡು ಗೋಮಾಳದ ಜಮೀನನ್ನು ಹೊಡೆಯುವ ಒಳಸಂಚು ರೂಪಿಸಿದ್ದಾರೆಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೋರ್ವ ನೀಡಿದ ದೂರಿನನ್ವಯ ಹೆಚ್ಚಿನ ವಿಚಾರಣೆಗಾಗಿ ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿ ಹಾಗೂ ಚಿಕ್ಕಮಲ್ಲೇಗೌಡರನ್ನು ಪೊಲೀಸರು ಬಂಧಿಸಿದರು. ಇಬ್ಬರ ಕೈಗೂ ಬೇಡಿ ಹಾಕಿ ಜೀಪಿನಲ್ಲಿ ಕೂರಿಸಿಕೊಂಡು ಹೊರಟರು. ಚಿಕ್ಕಮಲ್ಲೇಗೌಡರ ಮುಖ ನಾಕಾಣಿಯಗಲಕ್ಕೆ ಸಂಕುಚಿತಗೊಂಡಿತ್ತು. ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿಯವರ ಮೈಮೇಲೆ ಬಸಪ್ಪ ದೇವರು ಇನ್ನೂ ಇದ್ದಾಗಲೇ ಪೊಲೀಸರು ಎಳೆದೊಯ್ದರಿಂದ ಜನ ಬಾಯಿ ಮೇಲೆ ಬೆರಳಿಟ್ಟುಕೊಂಡು "ಬಸಪ್ಪನಿಗೆ ಉಘೇ ಉಘೇ!" ಅಂತ ಸಾಮೂಹಿಕವಾಗಿ ಒಂದು ಸಲ ಹೇಳಿ ತಂತಮ್ಮ ಮನೆಗಳಿಗೆ ಹೊರಟರು.
*******
ಯಾವಾಗ ಸಣ್ಣಯ್ಯನ ಬಾಯಲ್ಲಿ "ಗೋಮಾಳ…ಗೋಮಾಳ" ಅನ್ನುವ ಶಬ್ದ ಕೇಳಿಬಂತೋ ದೂರದಲ್ಲಿ ಕುಳಿತು ಬೀಡಿ ಸೇದುತ್ತಿದ್ದ ಮುದುಕ ಸಿಂಗ್ರಣ್ಣ ತನಗೇ ಬೆತ್ತದಿಂದ ಬಾರಿಸಿದ ಸಣ್ಣಯ್ಯನ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾಗೂ ತನಗೆ ಬರಬೇಕಿದ್ದ ಗ್ರಾಂಟ್ ಮನೆಯ ಹಣವನ್ನು ನುಂಗಿ ನೀರು ಕುಡಿದಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಮಲ್ಲೇಗೌಡನಿಗೆ ಬುದ್ಧಿ ಕಲಿಸಲು ಇದೇ ಸರಿಯಾದ ಸಮಯವೆಂದು ನಿರ್ಧರಿಸಿ ಸೀದಾ ಸ್ಟೇಷನ್ನಿಗೆ ಹೋಗಿ ಇವರಿಬ್ಬರ ವಿರುದ್ಧ ಗೋಮಾಳದ ನೆಪಹೂಡಿ ಕಂಪ್ಲೇಂಟು ಕೊಟ್ಟಿದ್ದ ಅಂತ ಆಮೇಲೆ ಗೊತ್ತಾಯಿತು.
ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ ಚಿಕ್ಕಮಲ್ಲೇಗೌಡನ ಮೇಲೆ ಕೋಪವಿದ್ದ ಫಾತಿಮಾಳ ಏಕೈಕ ಗಂಡ ಇಂಜಮಾಮ್ ಅಲಿಯಾಸ್ ಕೋಳಿಸಾಬಿ ದೂರು ಕೊಟ್ಟಿರಬಹುದೆಂಬ ಶಂಕೆ ದೂರವಾಯಿತು.ಆದರೆ, ಪೂರ್ಣಿಯ ಸಾವಿನ ಹಿಂದೆ ಇದೇ ಕೋಳಿಸಾಬಿಯ ಕೈವಾಡವಿತ್ತೆಂದೂ, ಅವನ ಹೆಂಡತಿಯೂ ಸಾಥ್ ಕೊಟ್ಟಿದ್ದಳೆಂದೂ ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದರು.
ಎಳೆ ಎಳೆಯ ಸೊಗಸಾಗಿ ಸೇರಿಸಿ , ಕೆಲವು ವಿಚಾರಗಳತ್ತ ಸೂಕ್ಷ್ಮವಾಗಿ ಗಮನ ಸೆಳೆಯುವಂತೆ ಕಥೆಯು ಸುತ್ತಮುತ್ತಲ ಸಮಾಜವನ್ನು ಎದುರಲ್ಲಿ ಕಾಣುವಂತೆ ಹಾಗೂ ಮಾತುಗಳು ನೈಜತೆಯಲ್ಲಿ ಹಳ್ಳಿ ಜನಗಳ ಮೂಢ ನಂಬಿಕೆಯ ಬಗ್ಗೆ ಬೆಳಕು ಚೆಲ್ಲುವಂತಿದೆ .. ಇನ್ನೂ ಪ್ರತ್ಯೇಕವಾಗಿ ದೇವರು ಮೈಯೊಳಗೆ ಬಂದು ಮಾತಾಡುವುದು ಹೀಗೆಲ್ಲಾ ಪ್ರತಿಯೊಂದು ಊರಿನಲ್ಲೂ ನಡೆಯುತ್ತಲೇ ಇದೆ.. ಅದೆಷ್ಟು ಸರಿಯೋ ತಪ್ಪೋ ನಮ್ಮೂರಲ್ಲೂ ಕೂಡ ಈ ಬಗೆಯ ಜನರಿದ್ದಾರೆ ಮತ್ತೊಬ್ಬರ ದೇಹದಲ್ಲಿ ಬಂದು ಊರಿನ ಜನಗಳ ಸಮಸ್ಯೆ ಪರಿಹಾರ ಕೊಡುವ ದೇವರಿಗೆ ಅವತಾರಗಳ ಅಗತ್ಯವೇನಿತ್ತು ಎಂದು ಒಮ್ಮೊಮ್ಮೆ ವಿಭಿನ್ನ ಕಲ್ಪನೆಗಳೇ ಮೂಡುತ್ತಿರುತ್ತವೆ… ಹಾಗೆಯೇ ಮೈಮೇಲೆ ಬರುವ ದೇವರುಗಳು ಜಾತಿ ಧರ್ಮದ ಲೆಕ್ಕದಲ್ಲಿ ಬರುತ್ತವೆ ಎಂದಾದಲ್ಲಿ ಮತ್ತೆ ವಿಚಿತ್ರ ಚಿಂತನೆಗಳು ..
ಅದೆಲ್ಲಾ ಈಗ ಸದ್ಯಕ್ಕೆ ಇಲ್ಲಿ ಬೇಡವೆಂದುಕೊಳ್ಳುತ್ತಾ , ಕಥೆಯ ಮತ್ತೊಂದು ಅಂಶದಲ್ಲಿ ರಾಜಕೀಯ ಕಾಣುತ್ತದೆ .. ರಾಜಕೀಯ ಲಾಭಕ್ಕಾಗಿ ಭೂಮಿ ಕಬಳಿಕೆ ಹಗರಣಗಳ ಬಹಳಷ್ಟು ಸುದ್ದಿಗಳು ಸಹ ನೆನಪಾಗಿ ಕಥೆ ಓದುವ ಕಾಲದಲ್ಲಿ ಒಂದಷ್ಟು ಬೇರೆ ಬೇರೆ ಯೋಚನೆಗಳಲ್ಲಿ ಸಮಯ ಕಳೆದುಹೋಗಿದೆ
.. ಇನ್ನು ಸರಿ ತಪ್ಪಿನ ಸಂಬಂಧಗಳ ಲೆಕ್ಕದಲ್ಲಿ ಉತ್ತಮ ಶಿಕ್ಷಣದ ಕೊರತೆಯ ವಿಚಾರವೂ ಸಹ ಇಲ್ಲಿ ಕಂಡುಬರುತ್ತಿದೆ .. ನಾಲ್ಕಾರು ಸಮಸ್ಯೆಗಳ ಸುತ್ತ ಕಟ್ಟಿಕೊಂಡ ಕಾಲ್ಪನಿಕ ಜಗತ್ತು ಒಂದಷ್ಟು ಕಾಲ ದಿನ ಪತ್ರಿಕೆಗಳನ್ನು ಓದಿದಂತೆ ಅನುಭವ ಕೊಟ್ಟಿದೆ..
ಕಥಾ ವಸ್ತುವಿನ ಉತ್ತಮ ಆಯ್ಕೆ ಜೊತೆಯಲ್ಲೇ ಅದರ ಅತ್ಯುತ್ತಮ ಬಳಕೆ .. ಒಟ್ಟಾರೆ ಮನಸ್ಸು ಮುಟ್ಟಿತು .. ಆಸಕ್ತಿದಾಯಕ ಕಥೆ ಸರ್ .. 🙂
(ನನ್ನ ರೂಮಿನಲ್ಲಿ ನಾನೊಬ್ಬನೇ ಅನೇಕ ಆಲೋಚನೆಗಳ ಜೊತೆ ನಿಮ್ಮ ಮತ್ತಷ್ಟು ಕಥೆಗಳನ್ನು ಓದಲು ಕಾದಿರುವೆ .. ಮುಂದುವರೆಸಿರಿ … )
ನಮಸ್ತೆ, ಪೂರ್ಣ ಕತೆಯನ್ನ ಬರೆದ ಬಾಷೆಯಲ್ಲೆ ಹಸಿ ಹಸಿಯಾಗಿ ಓದಿದೆ . ಓದಿಸಿಕೊಳ್ಳುವ ಕತೆಗಿಂತ , ಬರೆಸಿಕೊಂಡ ಬರಹ ನನಗೆ ತುಂಬಾ ಇಷ್ಟವಾಯಿತು. ಹಳ್ಳಿಯ ವಾತಾವರಣ , ಪ್ರತಿಯೊಂದು ವಿಷಯದ ಪ್ರಸ್ತಾಪ , ನಡೆದ ಸನ್ನಿವೇಶದ ಸುತ್ತಮುತ್ತಲಿನ ಪರಿಸರದ ವರ್ಣನೆ , ಹದ್ದಿನ ಗರಿ , ಕ್ಯಾಕರಿಸಿದೆ ಕುಕ್ಕರಿಸಿದೆ ,ಸಣ್ಣಯ್ಯ ಮುಂದೆ ಬಸಪ್ಪ ಅನ್ನುವಂತಹ ಪದಗಳು ವಿಶೀಷ್ಟ ಅನ್ನಿಸಿದವು . ಕೊನೆಯಲ್ಲಿ ಇನ್ನೋಚೂರು ಕತೆ ಗಟ್ಟಿಯಾಗಬೇಕಾಗಿತ್ತೇನೋ ಅವನ ಪವಾಡ ಬಯಲಾಗಬೇಕಿತ್ತೇನೊ( ಇವತ್ತಿನ ಪರಿಸ್ಥಿತಿಯಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುತ್ತದೆ ಒಂದು ಕಡೆ ನೆಲೆ ಕಳೇದುಕೊಂಡ ಸ್ವಾಮಿ ಇನ್ನೊಂದು ಕಡೆ ಬದುಕುತ್ತಾನೆ ) ಎಂದನೆಸಿತು . ಉಳಿದಂತೆ ಚೆಂದ್ ಇತ್ತು ಸರ್ ..
Priya Hrudyashivji,
nyjavada atyuttama kate. super!!
Superb Shiva!!
ತುಂಬಾ ಚೆನ್ನಾಗಿದೆ ಸರ್ ಲೇಖನ… ಓದುತ್ತಾ ಓದುತ್ತಾ.. ನಮ್ಮ ಗ್ರಾಮದ ಕೆಲವರನ್ನೇ ಪಾತ್ರದಾರಿಗಳನ್ನಾಗಿಮಾಡಿಕೊಂಡುಬಿಟ್ಟೆ
ಇಂತಹ ಸಣ್ಣಯ್ಯನಂತವರು ಪ್ರತಿ ಗ್ರಾಮದಲ್ಲೂ ಇದ್ದಾರೆ,… ಇಂತವರಿಗೆಲ್ಲ ತಕ್ಕ ಶಿಕ್ಷೆ ಆಗಬೇಕು!
ತುಂಬಾ ಚೆನ್ನಾಗಿದೆ ಸರ್ ಲೇಖನ… ಓದುತ್ತಾ ಓದುತ್ತಾ.. ನಮ್ಮ ಗ್ರಾಮದ ಕೆಲವರನ್ನೇ ಪಾತ್ರದಾರಿಗಳನ್ನಾಗಿ ಮಾಡಿಕೊಂಡುಬಿಟ್ಟೆ
ಇಂತಹ ಸಣ್ಣಯ್ಯನಂತವರು ಪ್ರತಿ ಗ್ರಾಮದಲ್ಲೂ ಇದ್ದಾರೆ,… ಇಂತವರಿಗೆಲ್ಲ ತಕ್ಕ ಶಿಕ್ಷೆ ಆಗಬೇಕು!
ತುಂಬಾ ಉತ್ತಮವಾಗಿ ಓದಿಸಿಕೊಂಡು ಹೋಯಿತು.. ಆದ್ರೆ ಅಂತ್ಯ ಮಾತ್ರ ಅಪೂರ್ಣ ಅನಸ್ತು…
ಸುಂದರ ಕಥನಗಾರಿಕೆ, ಇಷ್ಟವಾಯಿತು..
ಕಥೆ ಹೇಳಿದ ರೀತಿ ಮತ್ತು ಭಾಷೆ ಹಿಡಿಸಿತು.
Katheya shyli estavaythu kathe odhutha may mele baruva ondastu devrugalu nenpadvu
Hige enondastu kathegagi kaytha erthini