ಸುಸ್ಥಿರ ಅಭಿವೃದ್ಧಿ-ಕೃಷ್ಣಾ ನದಿ: ಅಖಿಲೇಶ್ ಚಿಪ್ಪಳಿ


ಭರತ ಖಂಡ ಎಂದು ಕರೆಸಿಕೊಂಡ ಸಮಗ್ರ ಭಾರತ ಹಲವಾರು ಸಾರಿ ಛಿದ್ರವಾಯಿತು. ಚೀನಾ ಅತಿಕ್ರಮಿಸಿದರೆ, ಪಾಕಿಸ್ತಾನವನ್ನು ನಾವೇ ಕೊಟ್ಟೆವು. ಇಷ್ಟಾಗ್ಯೂ ನೂರಾರು ನದಿಗಳ ಭವ್ಯ ಪರ್ವತಗಳ, ಗಿರಿ ಶಿಖರಗಳ ನಾಡು. ಹೇರಳ ನೈಸರ್ಗಿಕ ಸಂಪತ್ತಿನ ಬೀಡು ಭಾರತ. ಪ್ರಪಂಚದ ಎಲ್ಲಾ ಖಂಡಗಳಲ್ಲೂ ನಾಗರೀಕತೆ ಅರಳಿದ್ದು, ನದಿಗಳ ದಂಡೆಗಳ ಮೇಲೆ. ಪವಿತ್ರ ಗಂಗಾನದಿ ಅದೆಷ್ಟು ಜನರಿಗೆ ಆಧಾರವಾಗಿದೆ. ಅದೆಷ್ಟು ಆಹಾರ ಧಾನ್ಯವನ್ನು ಇದೇ ನದಿಯ ನೀರನ್ನುಪಯೋಗಿಸಿ ಬೆಳೆಯಲಾಗುತ್ತಿದೆ. ಜನಸಂಖ್ಯೆ ಮತ್ತು ಅಭಿವೃದ್ಧಿಯೆಂಬೆರೆಡು ಗಂಗಾನದಿಗೆ ಕಂಟಕವಾಗಿ ಪರಿಣಮಿಸಿದ್ದೊಂತು ದುರಂತವೇ ಸೈ. ಗಂಗಾನದಿಯನ್ನು ನಾವೇ ಅರ್ಧ ಕೊಂದಿದ್ದೇವೆ. ಕಾರ್ಖಾನೆಗಳ ವಿಷದಿಂದಾಗಿ ಅಪರೂಪದ ಗರಿಯಾಲ್ ಮೊಸಳೆ ಸಂತತಿ ಕ್ಷೀಣಿಸುತ್ತಿದೆ. ಗಂಗಾನದಿ ಮತ್ತು ಇದರ ಉಪನದಿಗಳಿಗೆ ಲೆಕ್ಕವಿಲ್ಲದಷ್ಟು ಆಣೆಕಟ್ಟುಗಳನ್ನು ಕಟ್ಟಲಾಗಿದೆ. ಆದರೂ ವಿದ್ಯುತ್ ಕೊರತೆ ನೀಗಿಲ್ಲ. ಯೋಜನೆ ರೂಪಿಸುವವರು ಹೆಚ್ಚು ಹಣ ಬೇಡುವ ದೊಡ್ಡ-ದೊಡ್ಡ ಯೋಜನೆಗಳಿಗೇ ಮಹತ್ವ ನೀಡುತ್ತಾರೆ. 20 ಸಾವಿರ ಕೋಟಿಯಷ್ಟು ದೊಡ್ಡ ಜೈತಾಪುರ ಅಣುವಿದ್ಯುತ್ ಯೋಜನೆಯಲ್ಲಿ ಹಲವು ನೂರು ಕೋಟಿ ಆಚೀಚೆಗಾದರೆ ಯಾರ ಗಮನಕ್ಕೂ ಬರುವುದಿಲ್ಲ. ಅದ್ಯಾವುದೊ ಮಂತ್ರಿ ಮತ್ತು ಹಿರಿ ನೌಕರ ತಲೆತಲಾಂತರಕ್ಕಾಗುವಷ್ಟು ಹಣ ಮಾಡಿಕೊಳ್ಳುತ್ತಾನೆ.

ಶಾಖೋತ್ಪನ್ನ ಘಟಕಗಳಿಗೆ ಕಲ್ಲಿದ್ದಲು ಬೇಕು ಹಾಗೆಯೇ ಅಣುಸ್ಥಾವರಕ್ಕೆ ಯುರೇನಿಯಂ. ಕಲ್ಲಿದ್ದಲು ಸುಡುವುದರಿಂದಾಗಿ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚುತ್ತದೆ. ಭೂಮಿ ಬಿಸಿಯಾಗುತ್ತದೆ. ಹಿಮಾಲಯ ಶೀಘ್ರವಾಗಿ ಕರಗುತ್ತದೆ. ನದಿಗಳಲ್ಲಿ ಪ್ರವಾಹ ಉಕ್ಕೇರುತ್ತದೆ. ಅಪಾರ ಪ್ರಮಾಣದ ಹಾನಿಯಾಗುತ್ತದೆ. ಉತ್ತರಾಖಂಡದ ಕರ್ಮಕಾಂಡ ಇದೀಗ ನಿತ್ಯ ಸುದ್ಧಿ. ರಾಷ್ಟ್ರೀಯ ವಿಕೋಪವೆಂಬ ಪಟ್ಟ ಕಟ್ಟಿದ್ದಾರೆ. ಅಲ್ಲಿ ಸಿಕ್ಕಿಹಾಕಿಕೊಂಡವರು ಆಹಾರವಿಲ್ಲದೆ ಸಾಯುತ್ತಿದ್ದರೆ, ಬದುಕುಳಿದವರು ಬಹಿರ್ದೆಸೆಗೂ 500 ರೂಪಾಯಿಗಳನ್ನು ನೀಡಬೇಕಾದ ಪರಿಸ್ಥಿತಿಯಿದೆ. ಅಣುಸ್ಥಾವರಕ್ಕೆ ಬೇಕಾಗುವ ಕಚ್ಛಾವಸ್ತು ನಮ್ಮಲ್ಲಿಲ್ಲ. ವಿದೇಶದಿಂದ ಅಮದಾಗಬೇಕು. ಅಪಾರ ಹಣ ಬೇಕು. ಅಣುಬೂದಿ ವಿಲೇವಾರಿ ಮಾಡಲು ಎಲ್ಲೂ ತಂತ್ರಜ್ಞಾನ ಲಭ್ಯವಿಲ್ಲ. ಹೂತು ಹಾಕಿದರೂ ಸಾವಿರಾರು ವರ್ಷ ವಿಕಿರಣ ಸೂಸುತ್ತದೆ. ಶಾಖೋತ್ಪನ್ನ ಮತ್ತು ಅಣುಸ್ಥಾವರಗಳಿಗೆ ಅಪಾರ ಪ್ರಮಾಣದ ಸಿಹಿನೀರು ಬೇಕು. ನದಿಗಳ ಅಥವಾ ಅಂತರ್ಜಲವೇ ಬೇಕು. ಇಲ್ಲೊಂದು ಚಿಕ್ಕ ಹೋಲಿಕೆ ನೋಡೋಣ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿದ್ದಾಗ ನೀವು ಅದನ್ನು ಬಳಸಿಕೊಳ್ಳಬಹುದು. ಖಾಲಿಯಾದ ಮೇಲೆ ವೈಯಕ್ತಿಕ ನೆಲೆಯಲ್ಲಿ ಸಾಲವನ್ನೂ ಮಾಡಬಹುದು. ಒಟ್ಟಾರೆ ಖಾತೆಯಲ್ಲಿ ಹಣವಿಲ್ಲದಿದ್ದರೆ ನಿಮಗದು ಸಿಗುವುದಿಲ್ಲ.

ನಾವು ಜಮಾ ಮಾಡಿಟ್ಟರೆ, ಬೇಕಾದಾಗ ಬಳಸಿಕೊಳ್ಳಬಹುದು. ನೀರಿನ ಕತೆಯೂ ಇದೇ ಆಗಿದೆ. ಅಂತರ್ಜಲವೆಂಬ ಬ್ಯಾಂಕು ಬರಿದಾಗುತ್ತಿದೆ. ಮಲೆನಾಡಿನಲ್ಲೂ ನೀರಿಗಾಗಿ ಹಾಹಾಕಾರವೆದ್ದಿದೆ. ಕೊಳವೆಬಾವಿಗಳು ಪಾತಾಳಕ್ಕಿಳಿಯುತ್ತಿವೆ. ಅಂತರ್ಜಲವೆಂಬ ಬ್ಯಾಂಕು ದಿವಾಳಿಯೇಳುತ್ತಿದೆ. ಜಮಾ ಮಾಡುವ ನಾವು ಕೈಕಟ್ಟಿ ಕುಳಿತಿದ್ದೇವೆ. ಮಳೆಗಾಲ ಶುರುವಾಗಿ ತಿಂಗಳ ಹತ್ತಿರವಾದರೂ, ನಗರಸಭೆಯ ನೀರಿಗಾಗಿ ಜನ ಕಾಯುತ್ತಾರೆ. ಸೂರು ನೀರಿನ ಬಗ್ಗೆ ಅದೇಕೋ ತಾತ್ಸಾರ. ಕರ್ನಾಟಕ ರಾಜ್ಯದ ಸಾಗರ ತಾಲ್ಲೂಕು ಪಶ್ಚಿಮಘಟ್ಟದ ಕಾಲಡಿಯಲ್ಲಿರುವ ಸ್ವರ್ಗದಂತಹ ಪಟ್ಟಣ. ಕಾಡಿನಿಂದ ನಿರಂತರ ಅಬ್ಬಿರೂಪದಲ್ಲಿ ನೀರು ಬರುತ್ತಿದ್ದ ಸ್ಥಳ. ಇಲ್ಲೀಗ ಬರಗಾಲ. ಮೇ ತಿಂಗಳಲ್ಲೂ ಬಾವಿಯಲ್ಲಿ ನೀರು ಇರುತ್ತಿದ್ದ ಊರಿನಲ್ಲೀಗ ನೀರಿಗೆ ಹಾಹಾಕಾರ. ಬೆಳೆಯುವ ಪಟ್ಟಣಗಳು ಹತ್ತಿರದ ಹಳ್ಳಿಗಳನ್ನು ನುಂಗುತ್ತಿವೆ. ಬೆಟ್ಟಗಳಲ್ಲಿ ನೈಸರ್ಗಿಕ ಅರಣ್ಯಗಳ ಬದಲಿಗೆ ಹಣ ತರುವ ನೀಲಗಿರಿ-ಅಕೇಶಿಯಾ ಬಂದು ಕೂತಿವೆ. ವೇಗವಾಗಿ ಬೆಳೆಯುವ ಈ ವಿದೇಶಿ ಸಸ್ಯಗಳು ಬೆಟ್ಟದಲ್ಲಿ ಸಂಗ್ರವಾಗುವ ನೀರನ್ನೆಲ್ಲಾ ಹೀರುತ್ತಿವೆ. ಅಬ್ಬಿ ನೀರು ಬತ್ತಿಹೋಗಿವೆ.

ವರದಪುರ, ನಡೆದಾಡುವ ದೇವರು ಎಂದು ಕರೆಸಿಕೊಂಡ ಭಗವಾನ್ ಶ್ರೀಧರರು ನೆಲೆಸಿದ ಪವಿತ್ರ ಸ್ಥಳ. ಇಲ್ಲಿನ ನಿಸರ್ಗದ ಪ್ರಶಾಂತತೆ ಮನಸೋತ ಶ್ರೀಧರರು ಇಲ್ಲಿಯೇ ನೆಲೆಸಿದರು. ಗುಡ್ಡದಿಂದ ಬರುವ ಅಬ್ಬಿ ನೀರು ಶ್ರೀಧರ ತೀರ್ಥ. ಅದೆಷ್ಟು ರೋಗಿಗಳು ಶ್ರೀಧರ ತೀರ್ಥ ಸೇವಿಸಿಯೇ ಗುಣಮುಖರಾದರು. ಅದೆಷ್ಟು ವರ್ಷಗಳಿಂದ ನಿರಂತರವಾಗಿ ಬರುತ್ತಿದ್ದ ನೀರಿನ ಸೆಲೆ ಕಡಿಮೆಯಾಯಿತು. ಆಡಳಿತ ಮಂಡಳಿ ಗಾಬರಿಗೆ ಬಿತ್ತು. 248 ಮೆಟ್ಟಿಲು ಹತ್ತಿ ಕುಟೀರಕ್ಕೆ ಹೋಗಬೇಕು. ಹುಷಾರಿಲ್ಲದವರಿಗೆ, ವಯಸ್ಸಾದವರಿಗೆ, ವಿ.ಐ.ಪಿಗಳಿಗೆ ಓಡಿಯಾಡಲು ರಸ್ತೆ ಮಾಡಿದರು. ವಾಹನಗಳಲ್ಲಿ ಮೇಲೆ ಹೋಗಬಹುದು. ಮೊದ-ಮೊದಲಿಗೆ ವಿರಳವಾಗಿ ಬಳಕೆಯಾಗುತ್ತಿದ್ದ ರಸ್ತೆ, ಭಕ್ತಾಧಿಗಳು ಹೆಚ್ಚಿದಂತೆ ವಿಪರೀತ ಬಳಕೆಯಾಯಿತು. ಪ್ರತಿ ವಾಹನ ಹೋದಾಗಲೂ ಜಲದ ಕಣ್ಣು ಇಂಚಿಂಚಾಗಿ ಮುಚ್ಚುತ್ತಿತ್ತು. ಸಾಲದಕ್ಕೆ ಗುಡ್ಡದ ಮೇಲೆ ಅಕೆಶೀಯಾವನ್ನು ತಂದು ನೆಟ್ಟರು. ಇಷ್ಟು ಸಾಲದೆಂಬಂತೆ ಗುಡ್ಡದಲ್ಲಿ ಇಂಗು ಗುಂಡಿಗಳನ್ನು ತೆಗೆದರು. ನೆಲದ ಮೇಲೆ ಮಾಡಿದ ಅಪಚಾರ ನೆಲದೊಳಗೆ ವ್ಯಕ್ತವಾಯಿತು. ಪವಿತ್ರ ತೀರ್ಥದ ಹರಿವು ಕ್ಷೀಣವಾಯಿತು.

ವರದಪುರದಲ್ಲಿ ಇನ್ಯಾವುದೇ ತರಹದ ಗಣಿಗಾರಿಕೆಯಾಗಲಿ ಅಥವಾ ಕಾರ್ಖಾನೆಗಳಾಗಲಿ ಇಲ್ಲ. ಬರೀ ವಾಹನದ ಓಡಾಟವೇ ಅಬ್ಬಿ ನೀರಿನ ಜಲದ ಕಣ್ಣು ಮುಚ್ಚುವಲ್ಲಿ ಕಾರಣವಾಯಿತು. ಇದೀಗ ಎಚ್ಚೆತ್ತುಕೊಂಡ ಅಲ್ಲಿನ ಆಡಳಿತ ಮಂಡಳಿ ಅಬ್ಬಿ ನೀರಿಗೆ ಅಡ್ಡಿಯಾಗುವ ತೊಂದರೆಗಳನ್ನು ನಿವಾರಿಸುವಲ್ಲಿ ಗಮನ ಹರಿಸಿದೆ. ಸಣ್ಣ ಉದಾಹರಣೆಯೊಂದಿಗೆ ಹೋಲಿಸುವುದಾದಲ್ಲಿ, ಭಾರತದ ಮೂರನೇ ದೊಡ್ಡ ನದಿ ಕೃಷ್ಣಾ.  ಸಾವಿರಾರು ರೈತರ ಬಾಳಿಗೆ ಬೆಳಕು ನೀಡುವ ಜೀವ ನದಿ. ಲಕ್ಷಾಂತರ ಜನರಿಗೆ ಕುಡಿಯುವ ನೀರಿಗೆ ಮೂಲ. ಅಸಂಖ್ಯ ಜಲಚರಗಳ ತವರೂರು. ಹೀಗೆ ಕೃಷ್ಣಾ ನದಿಯ ಸೇವೆ ಅನನ್ಯ. ನಮ್ಮ ನೇತಾರರಿಗೆ ದೇಶದ ಅಭಿವೃದ್ಧಿ ಬೇಕು. ಸುಸ್ಥಿರ ಅಭಿವೃದ್ಧಿಯಲ್ಲಿ ಇವರಿಗೆ ಆಸಕ್ತಿಯಿಲ್ಲ. ಯಾಕೆಂದರೆ ಸುಸ್ಥಿರ ಅಭಿವೃದ್ಧಿಯಲ್ಲಿ ಹೇರಳ ಹಣವಿಲ್ಲ. ಕೃಷ್ಣಾ ನದಿ ಪಾತ್ರದ ಕೆಳಗೆ ಹೇರಳ ನೈಸರ್ಗಿಕ ಅನಿಲ ಸಂಪತ್ತಿದೆ. ಅಂಬಾನಿ ಕಂಪನಿಯವರು ಯಾರನ್ನಾದರೂ ಕೊಳ್ಳಬಲ್ಲ ತಾಕತ್ತಿರುವವರು. ಪ್ರಕೃತಿ ಸಂಪತ್ತು ಹಾಳಾಗುತ್ತದೆ. ಲಕ್ಷಾಂತರ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಇದೂವರೆಗೂ ಈ ಪ್ರದೇಶ ಪರಿಶುದ್ಧವಾಗಿತ್ತು.

ಆದರೆ ಇದೀಗ ಕೇಂದ್ರ ಸರ್ಕಾರ ತೈಲ ಕಂಪನಿಗಳ ಒತ್ತಡಕ್ಕೆ ಮಣಿಯುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ. ಅರ್ಜಿ ಅನುಮತಿಗಾಗಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮೇಜಿನ ಮೇಲಿದೆ. ಸಚಿವಾಲಯ ಒಪ್ಪಿಗೆ ಕೊಟ್ಟಿತೋ, ಮುಂದಾಗುವುದೆಲ್ಲಾ ಮಾಲಿನ್ಯವೇ. ಜನರಿಗೆ, ಪ್ರಾಣಿ-ಪಕ್ಷಿಗಳಿಗೆ, ಜಲಚರಗಳಿಗೆ ತೊಂದರೆ ತಪ್ಪಿದ್ದಲ್ಲ. ವರದಾಪುರದಲ್ಲಿ ಬರೀ ವಾಹನ ಓಡಾಡಿದ್ದರಿಂದ ನೀರಿನ ಸೆಲೆ ಬತ್ತಿಹೋಗುವುದಾದರೆ. ಭೂಮಿಯ  ಗರ್ಭಬಗೆದು ಅನಿಲ ತೆಗೆದಲ್ಲಿ ಏನೇನು ಅನಾಹುತಗಳಾಗಬಹುದು. ಎಂದೆಂದೂ ಸರಿಮಾಡಲಾರದಷ್ಟು ಅಲ್ಲಿಯ ಪ್ರದೇಶ ಹಾಳಾಗುತ್ತದೆ. ಅಲ್ಲಿನ ಸಂಸ್ಕೃತಿ ಸಾಯುತ್ತದೆ. ಹೊರಗಿನ ಜನರ ದಬ್ಬಾಳಿಕೆ ಮಿತಿ ಮೀರುತ್ತದೆ. ಕಾಡಿನಲ್ಲಿರುವ ಪ್ರಾಣಿಗಳು ಊರಿಗೆ ಬರುತ್ತವೆ. ಅನಾಹುತಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಶೀತ ಪ್ರದೇಶ ಜರ್ಮನಿ-ಸ್ವೀಡನ್ ದೇಶಗಳಲ್ಲಿ ಶಕ್ತಿಗಾಗಿ ಸೂರ್ಯನನ್ನು ಅವಲಂಬಿಸಿದ್ದಾರೆ. ಮನೆಯ ಮೇಲ್ಚಾವಣಿಯಲ್ಲಿ ಸೂರ್ಯಫಲಕವನ್ನು ಅಳವಡಿಸಿದ್ದಾರೆ. ಕಿಟಕಿ ಬಾಗಿಲುಗಳು ವಿದ್ಯುತ್ ಉತ್ಪಾದಿಸುತ್ತವೆ. ಮನೆಗೆ ಬೇಕಾದಷ್ಟು ವಿದ್ಯುತ್‍ನ್ನು ಪಡೆದು ಮಿಕ್ಕಿದ ವಿದ್ಯುತ್‍ನ್ನು ಸರ್ಕಾರಕ್ಕೆ ನೀಡುತ್ತಾರೆ. ಬದಲಿಗೆ ಸರ್ಕಾರ ಪ್ರತಿ ತಿಂಗಳು ಮನೆಯ ಯಜಮಾನನಿಗೆ ಹಣ ನೀಡುತ್ತದೆ. ಈ ತರಹದ ಒಪ್ಪಂದ ಅಲ್ಲಿನ ಸರ್ಕಾರ ಮತ್ತು ಜನರ ಮಧ್ಯೆ ಆಗಿದೆ. ಮುಂದಿನ 25 ವರ್ಷಗಳವರೆಗೂ ಪ್ರತಿತಿಂಗಳು ಮನೆಯ ಮಾಲಿಕ ಹಣ ಪಡೆಯುತ್ತಾನೆ. ಸಮಶೀತೋಷ್ಣ ದೇಶ ಭಾರತದಲ್ಲಿ ಯಾಕಿದು ಸಾಧ್ಯವಾಗಿಲ್ಲ? ಮಿಲಿಯನ್ ಡಾಲರ್ ಪ್ರಶ್ನೆ? ಸಣ್ಣ-ಸಣ್ಣ ಯೋಜನೆಗಳಲ್ಲಿ ಮಿಲಿಯಾಂತರ ಡಾಲರ್‍ಗಳು ವೈಯಕ್ತಿಕವಾಗಿ ದಕ್ಕುವುದಿಲ್ಲ. ಹಾಗಾಗಿ ನಮಗೆ, ಪೆಟ್ರೋಲ್, ಡೀಸೆಲ್, ಅಣು-ಸ್ಥಾವರ, ಶಾಖೋತ್ಪನ್ನ ಘಟಕಗಳೇ ಬೇಕು. ಪರಿಸರ ಸ್ನೇಹಿ ಸೋಲಾರ್ ಬೇಡ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Gaviswamy
10 years ago

ಸಂದರ್ಭೋಚಿತ ಲೇಖನ .  ಮಿತಿ ಮೀರಿದ ಕೈಗಾರಿಕೀಕರಣ ಪರಿಸರಕ್ಕೆ ಮಾರಕವಾಗುತ್ತಿದೆ.
ಅಭಿವೃದ್ಧಿಯ ನೆಪದಲ್ಲಿ ಪರಿಸರದ  ಸಂಹಾರ ನಡೆಯುತ್ತಿದೆ .
ನೀವು ಹೇಳಿದ ಹಾಗೆ , ಗಂಗಾ ನದಿಯ ಪಾತ್ರದುದ್ದಕ್ಕೂ ತಲೆ ಎತ್ತಿರುವ 
ಕಾರ್ಖಾನೆಗಳು ಗಂಗೆಯನ್ನು ಕಲುಷಿತಗೊಳಿಸಿವೆ. ಕೆಲವು ತಿಂಗಳುಗಳ ಹಿಂದೆ
ಗಂಗಾಮಾಲಿನ್ಯದ ಬಗ್ಗೆ outlook ನಲ್ಲಿ coverstory ಪ್ರಕಟವಾಗಿತ್ತು.
ಆ ದೃಶಗಳನ್ನು ನೋಡುತ್ತಿದ್ದರೆ ಭಯವಾಗುತ್ತಿತ್ತು. ಕಾನ್ಪುರದ ಲೆದರ್ 
ಫ್ಯಾಕ್ಟರಿಗಳ ಕಲುಷಿತ ಕಡುಕಪ್ಪು ನೀರು ಬೃಹತ್ ಕೊಳೆಗಳ ಬಾಯಿಯಿಂದ 
ನೇರವಾಗಿ ಗಂಗೆಯ ಒಡಲಿಗೆ ಬೀಳುತ್ತಿತ್ತು. ಮತ್ತು ಆ ಕಲುಷಿತ ನೀರನ್ನು 
prior treatment ಗೆ ಒಳಪಡಿಸದೇ ಬಿಡುಲಾಗುತ್ತಿದೆ ಎಂದು ವರದಿಯಾಗಿತ್ತು.
ಇದೊಂದು ಸ್ಯಾಂಪಲ್ ಎನ್ನಬಹುದು . ಬಹುತೇಕ ಕಾರ್ಖಾನೆಗಳಲ್ಲಿ ಯಾವುದೇ 
treatment fecility ಇಲ್ಲ ಎಂದು ವರದಿಯಾಗಿತ್ತು.
ಇನ್ನು ಅಂತರ್ಜಲದ ಬಗ್ಗೆ ಬರೆದಿದ್ದೀರಿ. ಖಂಡಿತ ಇದೊಂದು ಗಂಭೀರವಾಗಿ 
ಪರಿಗಣಿಸಬೇಕಾದ ವಿಷಯ . ರೈತರು ಎಗ್ಗಿಲ್ಲದೇ ಕೊಳವೆ ಬಾಯಿಗಳನ್ನು ಕೊರೆಸುತ್ತಿದ್ದಾರೆ.
ಒಂದು ಹಂತದವರೆಗೆ ಎಲ್ಲವೂ ಸರಿಯಿತ್ತು. ಆದರೆ ಯಾವಾಗ ಕೊಳವೆಬಾವಿಗಳ ಸಂಖ್ಯೆ 
ಮೀರಿತೋ ಅಂತರ್ಜಲ ಬರಿದಾಗಿ ಹೋಯಿತು. ಈಗ ರೈತರ ಪರಿಸ್ಥಿತಿ ನೋಡಿದರೆ ಶೋಚನಿಯವೆನಿಸುತ್ತದೆ.
ಇದ್ದಬದ್ದದ್ದನೆಲ್ಲಾ ಎರಡು ಮೂರು ಬೋರ್ ಹಾಕಿಸಿ ಒಂದರಲ್ಲೂ ನೀರುಕಾಣದೇ 
ಕಣ್ಣೀರು ಹಾಕುವವರನ್ನು ನೋಡುತ್ತಲೇ ಇದ್ದೇವೆ.
ಕೆರೆಗಳನ್ನು ಪಟ್ಟಭದ್ರರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ಕಾರಣಗಳಿಂದಾಗಿ 
ಒತ್ತುವರಿಯನ್ನು ತೆರವುಗೊಳಿಸುವುದೂ ಕಷ್ಟವಾಗುತ್ತಿದೆ. ಜಲಮರುಪೂರಣ ಮಾಡುವ 
ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಪ್ರಯತ್ನಗಳೂ ನಡೆಯುತ್ತಿಲ್ಲ. 
ಇನ್ನು ಇಂಧನ ಬಳಕೆಯ ವಿಷಯಕ್ಕೆ ಬಂದರೆ, ನೀವು ಹೇಳಿದ ಹಾಗೆ ಸರ್ಕಾರಗಳು ಸೌರಶಕ್ತಿಯನ್ನು ಗಂಭೀರವಾಗಿ 
ಪರಿಗಣಿಸಿಲ್ಲ. ಆದ್ರೆ , ಗುಜರಾತ್ ಇದಕ್ಕೆ ಅಪವಾದವೆನ್ನಬಹುದು . ಗುಜರಾತಿನ ಚರಕ ಗ್ರಾಮದಲ್ಲಿ ಏಷ್ಯದಲ್ಲೇ
ಅತಿದೊಡ್ಡ ಸೋಲಾರ್ ಪ್ಲಾಂಟ್ ತಲೆ ಎತ್ತಿದೆ. ಬೇರೆ ರಾಜ್ಯಗಳೂ ಇದೇ ಮಾದರಿ ಅನುಸರಿಸಿದರೆ ಕಲ್ಲಿದ್ದಲು ಮತ್ತು 
ಯುರೇನಿಯಂ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು . ಪರಿಸರವೂ ಸುರಕ್ಷಿತವಾಗಿರುತ್ತದೆ. 
ಧನ್ಯವಾದಗಳು ಸರ್ , very insightful and relevant article. 

 

1
0
Would love your thoughts, please comment.x
()
x