ಸುಶೀಲೆ: ವರದೇಂದ್ರ ಕೆ.

ಜಮೀನ್ದಾರರ ಒಬ್ಬನೇ ಮಗ, ಕಣ್ಣಲ್ಲಿ ಸನ್ನೆ ಮಾಡಿದರೆ ಸಾಕು ತಟಕ್ಕನೆ ಕೆಲಸವಾಗಿಬಿಡುತ್ತದೆ. ಮಾತು ಆಡಿದರಂತೂ ಊರಿನ ಯಾವ ಧನಿಕನೂ ಎದುರಾಡುವಂತಿಲ್ಲ. ಅಷ್ಟೇ ಸಹಜ ನಡೆಯುಳ್ಳ ಪ್ರಾಮಾಣಿಕ ಜೀವ. ಗಾಂಭೀರ್ಯತೆಯೊಂದಿಗೆ ಕನಿಕರವೂ ತುಂಬಿಕೊಂಡ ಮುಖ. ಚಿರ ಯುವಕ, ಓದಿನಲ್ಲೂ ಚತುರನಾಗಿ ವೈದ್ಯಲೋಕಕ್ಕೆ ಕಾಲಿಟ್ಟ ಉತ್ತಮ ಕೈಗುಣವಿದೆ ಎಂಬ ಪ್ರಶಂಸೆಗೆ ಪಾತ್ರನಾದ ಸ್ಫುರದ್ರೂಪಿ ತರುಣ
ಸುರೇಶ್ ಗೌಡನಿಗೆ ತಮ್ಮ ಮಗಳನ್ನೇ ಧಾರೆಯೆರೆಯಲು ದುಂಬಾಲುಬಿದ್ದ ಅದೆಷ್ಟೋ ಸಂಬಂಧಿಕರು ಹಿರಿಗೌಡರನ್ನು ಕೇಳಿ ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ಸೋತಮುಖದೊಂದಿಗೆ ಮರಳಿದ್ದಾರೆ. ಹಿರಿ ಧರ್ಮಗೌಡರು ತನ್ನ ಮಗ ದೊಡ್ಡ ವೈದ್ಯನಾಗಿ ನಾಡಿನಾದ್ಯಂತ ಹೆಸರು ಮಾಡಬೇಕು ನಂತರ ಮದುವೆ ವಿಚಾರ ಎಂದು ಬಂದ ಸಂಬಂಧಗಳನ್ನು ತಳ್ಳಿಹಾಕುತ್ತಿದ್ದರು.

ಆದರೆ, ಸುರೇಶಗೌಡನ ತಾಯಿ ರೇಣುಕಮ್ಮನವರು ಬೇಗ ಮಗನಿಗೆ ಮದುವೆ ಮಾಡಬೇಕು, ಮನೆಗೆ ಮಹಾಲಕ್ಷ್ಮಿಯನ್ನು ತರಬೇಕು. ಮೊಮ್ಮಗುವನ್ನು ಎತ್ತಿ ಆಡಿಸಬೇಕು ಎಂದು ಹೋದ ಕಡೆಯಲ್ಲೆಲ್ಲ ಸುಂದರ ಹುಡುಗಿಯನ್ನು ಹುಡುಕುತ್ತಿದ್ದರು.

ಧರ್ಮಗೌಡರ ಆಸೆಯಂತೆ ಸುರೇಶಗೌಡ ವೈದ್ಯನಾಗಿ, ಬೇಗನೆ ಹೆಸರಾಂತ ಹೃದಯತಜ್ಞನಾದನು. ಅಚ್ಚರಿ ಆಗುವಂತೆ ಇನ್ನೇನು ಸತ್ತೇ ಹೋಗುತ್ತಾರೆ ಎನ್ನುವವರನ್ನೂ ತನ್ನ ಕೈ ಚಳಕದಿಂದ ಬದುಕಿಸಿಬಿಡುತ್ತಿದ್ದ. ಉದಾರಿಯೂ ಆಗಿ ಬಡವರಿಂದ ಹೆಚ್ಚು ಹಣವನ್ನೂ ಪಡೆಯದೆ ಬಡವರ ಬಂಧು ಆದ. ತಾಯಿ ರೇಣುಕಮ್ಮನವರ ಆತುರಕ್ಕೆ ಸಿಕ್ಕು ಕನ್ಯೆಯರನ್ನು ನೋಡತೊಡಗಿದ. ಬಂದವರೆಲ್ಲ ಒಪ್ಪಿದರೂ ಸುರೇಶನು ಮಾತ್ರ ಯಾರನ್ನೂ ಒಪ್ಪಲಿಲ್ಲ. ಸುಮಾರು ಹುಡುಗಿಯರನ್ನು ಒಪ್ಪದಿದ್ದಾಗ ಅನುಮಾನಗೊಂಡ ತಾಯಿ, “ಯಾಕೋ ಸುರೇಶ ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ? ಹಾಗಿದ್ದರೆ ಹೇಳು ಬಡವರಿರಲಿ, ಶ್ರೀಮಂತರಿರಲಿ ನಮ್ಮ ಕುಲದವರಲ್ಲದಿದ್ದರೂ ಸರಿಯೇ ನಮಗೇನು ತೊಂದರೆಯಿಲ್ಲ. ಹೇಳು ಅವಳನ್ನೇ ನಮ್ಮನೆ ಸೊಸೆಯಾಗಸಿಕೊಳ್ಳಲಿಕ್ಕೆ ನಾನು ಸಿದ್ಧವಿರುವೆ, ಹೇಳೋ? ಎಂದಾಗ ಧರ್ಮ ಗೌಡರು “ಏನೇ ರೇಣು ನನ್ನ ಮಗ ಹಾಗೆಲ್ಲ ಪ್ರೀತಿ ಪ್ರೇಮ ಅಂತ ಹೆಣ್ಣಿನಿಂದೆ ಬಿದ್ದಿದ್ದರೆ, ಡಾಕ್ಟ್ರ್ ಆಗ್ತಿದ್ನೇನೆ. ಎಂತ ಮಾತಾಡ್ತೀಯ!!”

“ಹಾಗಿದ್ರೆ ಇಷ್ಟೊಂದು ಹೆಣ್ ತೋರ್ಸಿದ್ರೂ ಒಪ್ತಾ ಇಲ್ವಲ ಇವನಿಗೇನ್ ಕಷ್ಟ ಮದುವೆ ಆಗೋಕೆ. ನಮ್ಗೂ ವಯಸ್ಸಾಗ್ತಾ ಬಂತು; ಇರೋದ್ರೊಳಗೆ ಮೊಮ್ಮಕ್ಕಳನ್ನು ಕಾಣ್ಬೇಕು ನಾನು. ನಮ್ ಮನೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳ ಓಡಾಟ ನೋಡ್ಬೇಕು. ನೋಡ್ರಿ ಈ ವರ್ಷದಲ್ಲಿ ಇವನಿಗೆ ಮದುವೆ ಆಗ್ಬೇಕು ಅಷ್ಟೆ, ಇಲ್ದಿದ್ರೆ ನಾನಂತೂ ಸುಮ್ನಿರೊಲ್ಲ. ಇರೋನು ಇವನೊಬ್ಬ ಓದು, ನೌಕರಿ, ಹೆಸರು ಅಂತ ಅಂದು ಅಂದು ನನ್ ಬಾಯಿ ಮುಚ್ಸಿದ್ರಿ ಇಷ್ಟು ದಿನ. ಇವನ ವಯಸ್ಸಿನ ಗೆಳೆಯರಿಗೆಲ್ಲ ಆಗ್ಲೇ ಎರಡೆರಡು ಮಕ್ಳು ಇವೆ. ಇವನಿಗೇನು ವಯಸ್ಸು ಕಡಿಮೆ ಆಗ್ತಾ ಹೋಗ್ತಾವೇನ್ರಿ. ನೋಡೋ ಸುರೇಶ ನಾಳೆ ನನ್ನ ದೂರದ ಸಂಬಂಧಿ, ಅಣ್ಣ ಆಗ್ಬೇಕು ಅವನ ಮಗಳ್ನ ತೋರ್ಸೋಕೆ ಬರ್ತಾರೆ, ದಂತದ ಗೊಂಬೆ ಹಂಗಿದಾಳೆ, ಅವಳೇ ನನ್ಸೊಸೆ. ನೀ ಏನಾದ್ರು ನಖರ ಮಾಡಿದ್ರೆ ನಾನ್ ವಿಷ ತೋಂಡು ಸಾಯ್ತೀನಿ ಅಷ್ಟೆ”, ಎಂದು ರಂಪ ಮಾಡಿ ಕೋಣೆ ಸೇರಿದರು ರೇಣುಕಮ್ಮ.

ಧರ್ಮೇಗೌಡ್ರು ನೋಡು ಸುರೇಶ, ಓದು ಮುಗೀತು, ನಿನ್ನಾಸೆ ನನ್ನಾಸೆಯಂತೆ ದೊಡ್ಡ ಡಾಕ್ಟ್ರು ಆಗೀದಿ, ಇನ್ನು ನಿನ್ ತಾಯಿ ಆಸೇನು ಈಡೇರಿಸೋದು ನಮ್ ಕರ್ತವ್ಯ. ನಾಳೆ ಬರೋ ಹುಡ್ಗೀನ ಒಪ್ಕೊ. ಇಲ್ಲ ನಿಂಗೆ ಯಾರಾದ್ರು ಬೇರೆ ಹುಡುಗಿ ಇಷ್ಟ ಇದ್ರೆ, ಈಗ್ಲೇ ಹೇಳಿಬಿಡು.

ಇಲ್ಲ ಅಪ್ಪ ನಂಗ್ಯಾರು ಇಷ್ಟ ಇಲ್ಲ, ನಂಗೆ ಈಗ್ಲೇ ಮದುವೆನೂ ಇಷ್ಟ ಇಲ್ಲ. ನಾನು ಫಾರೆನ್ ಗೆ ಹೋಗಿ ಇನ್ನೂ ಹೆಚ್ಚು ಸ್ಟಡಿ ಮಾಡ್ಬೇಕು. ಅದ್ಕೇ.

ಇಲ್ಲ ಇಲ್ಲ . ಸುರೇಶ ನೀನು ಮದುವೆ ಆದ್ಮೇಲೆ ಏನಾದ್ರೂ ಓದ್ಕೋ. ಅಷ್ಟೆ ನನ್ ಮಾತನ್ನು ನೀನು ಮೀರೊಲ್ಲ ಅನ್ಕೋತೀನಿ.

ಸರಿ ಈಗ ಮಲ್ಕೊ ಲೇಟಾಯ್ತು ಎಂದು ಧರ್ಮಗೌಡ್ರು ತಮ್ಮ ಕೋಣೆ ಸೇರಿದ್ರು.

ಸುರೇಶ ಗೌಡನಿಗೆ ಧರ್ಮ ಸಂಕಟ, ತಂದೆ ತಾಯಿ ಮಾತು ಮೀರೋಕೆ ಆಗೊಲ್ಲ, ಮದುವೆನೂ ಇಷ್ಟವಿಲ್ಲ. ಆದರೆ ಮದುವೆ ಆಗದೆ ವಿಧಿ ಇಲ್ಲ ಎಂದು ಗೊಣಗಿಕೊಳ್ಳುತ್ತಲೇ ಮಲಗಿದ.

ಮರುದಿನ ರೇಣುಕಮ್ಮ ಮನೆಯೆಲ್ಲಾ ಸ್ವಚ್ಛ ಮಾಡೋಕೆ ಸುಧೀರನನ್ನು ಕರೆದು ಹೇಳಿದರು. ನೋಡು ಸುಧೀ ಈ ದಿನ ಬರೋ ಹೆಣ್ಣೇ ನನ್ನ ಸೊಸೆ. ನನ್ನ ದೂರದ ಸೋದರ ಸಂಬಂಧಿ ಆಗ್ಬೇಕು. ಅವರು ಬರೋ ಹೊತ್ತಿಗೆ ಎಲ್ಲ ಕ್ಲೀನ್ ಮಾಡಿ ಮಾರ್ಕೇಟಿಗೆ ಹೋಗಿ ಹೂ, ಹಣ್ಣು, ಸ್ವೀಟು ತೋಂಡು ಬಾ. ಕಾರ್ತೋಂಡು ಹೋಗು. ಬೇಗ ಬರ್ಬೇಕು ಎಂದು ಹೇಳಿದರು.

ಆಯ್ತು ಅಮ್ಮ ಎಂದು, ಮನೆಯ ನಂಬಿಕಸ್ತ ನೆಂಟ ಸುಧೀರ್ ಎಲ್ಲವನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತಾನೆ.

ಸುಧೀರ್ ಒಬ್ಬ ಅನಾಥ. ಸಣ್ಣ ವಯಸ್ಸಿನಲ್ಲೇ ತಂದೆ ತಾಯಿಯೊಂದಿಗೆ ಪ್ರಯಾಣಿಸುತ್ತಿರುವಾಗ ಅಪಘಾತವಾಗಿ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ನತದೃಷ್ಟ. ಅದೇ ಸಮಯದಲ್ಲಿ ಅಲ್ಲೇ ಇದ್ದ ಧರ್ಮಗೌಡ್ರು. ಸುಧೀರ್ ನನ್ನು ಕರೆತಂದು ಸಂತೈಸಿದರು. ಇವನ ನೆಂಟರೂ ಯಾರಾದ್ರು ಬಂದ್ರೆ ಕಳಿಸೋಣ ಅಂತ ಪೇಪರ್ನಲ್ಲೆಲ್ಲಾ ಫೋಟೋ ಹಾಕ್ಸಿದ್ರೂ ಯಾರೂ ಬರದಿದ್ದಾಗ. ತಾವೇ ಮನೆ ಮಗನಂತೆ ಬೆಳೆಸಿದ್ರು. ಶಾಲೆಗೂ ಕಳಿಸಿದ್ರು. ವಿದ್ಯೆ ತಲೆಗೇರದೆ ಹತ್ತನೇ ತರಗತಿಯಲ್ಲಿ ಫೇಲಾದ ಸುಧೀ. ಮನೆ, ಹೊಲದ ಕೆಲಸದಲ್ಲೇ ನಿರತನಾದ. ಮನೆ ಮಗನಂತೆ ಕಂಡರೂ, ತಾನು ಯಾರು ಎಂಬುದನ್ನು ಅರಿತಿದ್ದ ಸುಧೀರ. ಮನೆಯಲ್ಲಿ ಒಬ್ಬ ಕೆಲಸಗಾರನಂತೆಯೇ ಇರುತ್ತಿದ್ದ. ನೋಡು ಸುಧೀ. ನೀನೂ ನನ್ನ ಮಗನಿದ್ದಂತೆ ಎಂದು ಧರ್ಮಗೌಡ ದಂಪತಿಗಳು ಎಷ್ಟು ಹೇಳಿದ್ರೂ. ಮಗನಂತೆಯೇ ಇದ್ದರೂ ತನ್ನ ಮಿತಿಯನ್ನು ದಾಟಿರಲಿಲ್ಲ. ಒಳ್ಳೆಯ ಸಂಸ್ಕಾರವನ್ನು ಮೈಗೂಡಿಸಿಕೊಂಡು ಊರಿಗೇ ಉತ್ತಮ ಗುಣವಂತ ಎಂದು ಹೆಸರು ಪಡೆದಿದ್ದ.

ಮರುದಿನ ಕನ್ಯಾಮಣಿ ಸುಮತಿ ಬಂದಾಯ್ತು, ಚೆಲುವೆ ಹಾಲು ಬಣ್ಣ ನೋಡಿದರೆ ಒಪ್ಪದೆ ಬಿಡಲಾಗದಂತ ಸೌಂದರ್ಯವತಿ. ಸುರೇಶಗೌಡ ಸುಮತಿಯನ್ನು ನೋಡಿದ ಮೊದಲ ನೋಟದಲ್ಲೇ ಮನಸೋತ, ಇಂತಹ ಅಂದಗಾತಿಯನ್ನು ಕಂಡೇ ಇಲ್ಲ, ಮದುವೆಗೆ ಮನಸಿಲ್ಲ ಎಂದವನು ತನ್ನ ನಿಲುವನ್ನೇ ಬದಲಿಸಿದ್ದ.

ಸುಮತಿಯೂ ಸುರೇಶನನ್ನು ನೋಡಿದ ಮೊದಲ ನೋಟದಲ್ಲೇ ಮನಸು ನೀಡಿದಳು. ಆರತಕ್ಷತೆಗೆ ಮುಹೂರ್ತ ಕೂಡಿ ಬಂತು. ಅದ್ಧೂರಿ ಮದುವೆ ಅನೇಕ ಬಂಧು ಬಳಗದವರು ಸಾಕ್ಷಿಯಾದರು. ಹೊಸ ದಾಂಪತ್ಯಕ್ಕೆ ಕಾಲಿಟ್ಟ ಸುಮತಿ ಸುರೇಶಗೌಡರ ಮೊದಲ ಮಿಲನಕ್ಕೆ ರಂಗಮಂಚ ಸಿದ್ಧವಾಗಿತ್ತು. ಹೃದಯತಜ್ಞ ಮಡದಿಯ ಹೃದಯವನ್ನು ಪರೀಕ್ಷೆ ಮಾಡಿ ಅವಳ ಒಲವನ್ನು ಅರಿತಿದ್ದ. ಮೊದಲ ರಾತ್ರಿ ಸಾವಿರಾರು ಕನಸುಗಳ ಜಾತ್ರೆ. ಇಬ್ಬರೂ ಮಧುರ ಕಾಮದೇವನ ರಥ ಎಳೆದಿದ್ದರು. ನಲ್ಬೆಳಗು ಹೊಸ ಹುರುಪಿನೊಂದಿಗೆ ಸುಮತಿ ಪ್ರಸ್ಥದ ಕೋಣೆಯಿಂದ ಹೊರಬಂದಾಗ, ಹೂ ಮಳೆಗೈದು ಸ್ವಾಗತಿಸಿದ್ದರು ಎಲ್ಲರು. ನಾಚಿಕೆಯಿಂದ ಸ್ನಾನದ ಕೋಣೆಗೆ ಓಡಿದ್ದಳು ಸುಮತಿ. ಹಿಂದೆಯೇ ಬಂದ ಸುರೇಶನ ಮೊಗದಲ್ಲೂ ಸಂತೃಪ್ತಿ ಭಾವ ಕಂಡು, ರೇಣುಕಮ್ಮ ಏನೋ ಮಗನೇ ಮದುವೆ ಬೇಡ ಅಂದವನು ಈಗ ಸಂತಸದಲ್ಲಿ ತೇಲಾಡ್ತಿದೀಯಾ. ಎಂದು ರೇಗಿಸುತ್ತಾರೆ.

ಹೀಗೆ ಪ್ರಣಯ ಸಲ್ಲಾಪಗಳೊಂದಿಗೆ ಹನಿಮೂನ್ ಕೂಡಾ ಮುಗಿದು ಇಬ್ಬರು ಪ್ರೇಮೋತ್ಸವ ಆಚರಿಸಿದ್ದರು. ತಿಂಗಳುಗಳು ದಿನಗಳಂತೆ ಉರುಳಿದ್ದವು. ಮೊಮ್ಮಗುವಿನ ನಿರೀಕ್ಷೆಯಲ್ಲಿದ್ದ ರೇಣುಕಮ್ಮಳಿಗೆ ಸಿಹಿ ಸುದ್ದಿ ಬರಲಿಲ್ಲ. ಸೊಸೆಯ ಅಂದಕ್ಕೆ ಸದಾ ಅವಳ ಹಿಂದೆನೇ ಸುತ್ತುತ್ತಿದ್ದ ಮಗನಿಗೆ, ಬೇಗ ಈ ಮನೆಯ ವಾರಸುದಾರನನ್ನು ಕೊಡೋ ಎಂದು ಹೇಳುತ್ತಲೇ ಇದ್ದರೂ ಪ್ರತ್ಯುತ್ತರಿಸದೇ ಹೋಗುತ್ತಿದ್ದ ಸುರೇಶಗೌಡ. ಸೊಸೆಯನ್ನು ಕೇಳಿದರೆ ನಾಚಿ ಹೂಂ ಅತ್ತೆ ಎಂದು ಸುಮ್ಮನಾಗುತ್ತಿದ್ದಳು.

ವರುಷಗಳು ಕಳೆದರೂ ಹೊಟ್ಟೆ ತುಂಬದಿದ್ದಾಗ ಸಹಜವಾಗಿಯೇ ಗಾಬರಿ, ಬೇಸರ ಮೂಡಿತು. ಸುರೇಶ ಸುಮತಿಯನ್ನು ಪ್ರಸೂತಿ ವೈದ್ಯರ ಬಳಿ ತೋರಿಸಿದ. ಸುಮತಿಗೆ ಯಾವ ತೊಂದರೆಯೂ ಇಲ್ಲವೆಂದೂ ನೀವೂ ಪರೀಕ್ಷಿಸಿಕೊಳ್ಳಿ ಎಂದು ಹೇಳಿದಾಗ ಸುಮತಿ ಅಯ್ಯೋ ಅವರಿಗೆ ಏನು ಆಗಿಲ್ಲ. ಮುಂದೆ ಆಗುತ್ತೆ ನೀವು ಯಾವ ಪರೀಕ್ಷೆ ಮಾಡಿಸೋದು ಬೇಕಿಲ್ಲ ಬಿಡಿ, ಎಂದು ಗಂಡನನ್ನು ಮನೆಗೆ ಕರೆದುಕೊಂಡು ಬರುತ್ತಾಳೆ ಸುಮತಿ. ಸುಮತಿಗೆ ಎಲ್ಲವೂ ನಾರ್ಮಲ್ ಇದೆ ಅಂತೆ ಅಮ್ಮ. ನನಗೂ ಪರೀಕ್ಷಿಸಿಕೊಳ್ಳಲು ಹೇಳಿದರು. ಇವಳು ಬೇಡ ಎಂದಳು. ಮುಂದೆ ಆಗಬಹುದೇನೋ ನೋಡೋಣ ಎಂದರೂ, ಮನದಲ್ಲಿ ಅಳುಕನ್ನೇ ಉಳಿಸಿಕೊಂಡ ಸರೇಶಗೌಡ.

ರೇಣುಕಮ್ಮ ಗೊಣಗುತ್ತಲೇ ಅಂದಕ್ಕೆ ಮರುಳಾದೆ, ಬಂಜೆಯನ್ನು ಮಗನಿಗೆ ತಂದುಕೊಂಡೆ, ನನ್ನ ವಂಶ ಸರ್ವನಾಶವಾಯಿತು. ನನಗೆ ಮೊಮ್ಮಗುವನ್ನು ನೋಡೋ ಭಾಗ್ಯ ಇಲ್ವ. ಇವಳಿಗೇ ಏನೋ ತೊಂದರೆ ಇದೆ. ಬೇರೆ ಕಡೆ ತೋರ್ಸು ಸುರೇಶ ಎಂದು ಬೈಯ್ಯಲು ಶುರು ಮಾಡಿದಳು.

ಮೊದಲ ಬಾರಿಗೆ ಅತ್ತೆ ಸಿಡುಕುವುದನ್ನು ನೋಡಿ ಕುಗ್ಗಿಹೋದಳು ಸುಮತಿ. ದಿನೇ ದಿನೆ ಕಳೆದಂತೆ, ರೇಣುಕಮ್ಮಳ ತಾತ್ಸಾರಕ್ಕೊಳಗಾದಳು ಸುಮತಿ. ಸುರೇಶನೂ ಮೌನಿಯಾಗ ತೊಡಗಿದ. ಅದೇನೋ ತರಬೇತಿ ಅಂತ ವಾರಗಟ್ಟಲೆ ಪರ ಊರಿಗೆ ಹೋಗತೊಡಗಿದ. ಹೀಗೆ ಮಾಸಗಳು ಕರಗಿದವು. ರಿಸರ್ಚ್ಗೆಂದು ಒಂದು ತಿಂಗಳು ಫಾರೆನ್ಗೆ ಹೊರಟು ನಿಂತ ಸುರೇಶ. ರೀ ನಾನೂ ಬರ್ತೀನಿ ಎಂದರೂ, ಬೇಡ ಸುಮತಿ ಒಂದು ತಿಗಳಲ್ಲೇ ಬಂದು ಬಿಡುವೆ ಎಂದು ಸಿಹಿ ಮುತ್ತಿಟ್ಟು ಹೊರಟ. ಅಲ್ಲೋ ಹೀಗೆ ತಿಂಗಳುಗಟ್ಟಲೇ ಹೋದರೆ ಮನೆ ಪರಿಸ್ಥಿತಿ ಹೇಗೋ ಎಂದು ಧರ್ಮಗೌಡರು ಕೇಳಿದರು. ಅಪ್ಪ ಸುಧೀ ಇದಾನಲ್ವ ನೋಡ್ಕೋತಾನೆ, ಎಂದ. ಒಲ್ಲದ ಮನಸಿಂದ ಬೀಳ್ಕೊಟ್ಟ ಸುಮತಿ ಮುಖ ಬಾಡಿದ ಹೂವಿನಂತಾಗಿತ್ತು. ಮನೆ ಬಿಕೋ ಎನ್ನಿಸುತ್ತಿದೆ ಸುಮತಿಗೆ, ಆದರೆ ಅನಿವಾರ್ಯವಾಗಿ ಸಪ್ಪೆ ಇಂದ ಇರುತ್ತಿದ್ದಳು. ಹೇಗೋ ತಿಂಗಳು ವರುಷದಂತೆ ಕಳೆದಳು.

ತಿಂಗಳೆಂದವನು ಎರಡು ತಿಂಗಳು ಫಾರೇನ್ ಟ್ರಿಪ್ ಮುಗಿಸಿ ಬಂದ ಸುರೇಶನೂ ಬಡವನಾಗಿದ್ದ. ಮುಖ ಮನಸು ಎರಡೂ ಕಳೆಗುಂದಿದ್ದವು. ಮರಳಿ ಬಂದ ಸುರೇಶನನ್ನು ಕಂಡು ಸುಮತಿ ಹರ್ಷೋದ್ಗಾರ ವ್ಯಕ್ತಪಡಿಸಿದಳು. ಆದರೆ ಸುರೇಶನಿಗೆ ಆ ಖುಷಿ ಇರಲಿಲ್ಲ. ರೀ ಏನಾಯ್ತು? ಬೇಜಾರಾ ನನ್ ಮೇಲೆ. ನಿಮಗೆ ಖಂಡಿತ ಒಂದು ಮುದ್ದಾದ ಮಗೂನ ಕೊಟ್ಟೇ ಕೊಡ್ತೀನಿ, ಚಿಂತೆ ಬೇಡ ಎಂದು ನಲ್ಲನನ್ನು ಆಲಿಂಗಿಸಿದಳು. ಸುರೇಶ ಮಡದಿಯ ಆಲಿಂಗನದಲ್ಲಿ ಕಳೆದು ಹೋದ.

ದಿನ ಕಳೆದಂತೆ ತಾಯಿ ರೇಣುಕಮ್ಮ ಮಡದಿಯನ್ನು ಹಂಗಿಸುವುದೂ ಕಂಡ ಸುರೇಶನಿಗೆ ನೋವು ಹೆಚ್ಚಾಗತೊಡಗಿತು. ಕ್ರಮೇಣ ಖಿನ್ನನಾಗತೊಡಗಿದ. ಮೊದಲಿನ ಉತ್ಸಾಹ ಲವಲವಿಕೆ ಮಾಯವಾಯತೊಡಗಿತು.
ಸುಮತಿ ಗಂಡನ ಈ ಸ್ಥಿತಿ ಕಂಡು ಅಳತೊಡಗಿದಳು. ಇದಕ್ಕೆಲ್ಲ ನಾನೇ ಕಾರಣ. ಮಗುವಿಲ್ಲದ ಕೊರತೆಯಿಂದ ಅವರು ಬಳಲಿ ಬೆಂಡಾಗಿರುವದನ್ನು ನೋಡಿ, ಅಳುತ್ತಿದ್ದವಳೇ. .ಇದ್ದಕ್ಕಿದ್ದಂತೆ ತಲೆ ತಿರುಗಿದಂತಾಗಿ ಬಿದ್ದಳು.

ತಕ್ಷಣ ಆಸ್ಪತ್ರೆಗೆ ಸುಮತಿಯನ್ನು ಅಡ್ಮಿಟ್ ಮಾಡಿದ್ರು. ಏನಾಗಿದೆಯೋ ಎಂಬ ಆತಂಕದಲ್ಲಿದ್ದವರಿಗೆ ವೈದ್ಯರಿಂದ ಸಿಹಿ ಸುದ್ದಿ ಬಂದಿತ್ತು. ಸುಮತಿ ಗರ್ಭಿಣಿ, ಅಭಿನಂದನೆಗಳು ಮಿಸ್ಟರ್ ಸುರೇಶ್ ಗೌಡ. ಇನ್ನು ಮುಂದೆ ನಿಮ್ಮ ಪತ್ನಿಯನ್ನು ನಾಜೂಕಾಗಿ ನೋಡಿಕೊಳ್ಳಿ, ಎಂದು ಹೇಳಿದರು.

ಸುರೇಶನ ಹರುಶಕ್ಕೆ ಪಾರವೇ ಇಲ್ಲ. ಅಂತೂ ತಾನು ತಂದೆ ಆಗುತ್ತಿದ್ದೇನೆ, ಎಂದು ಸುಮತಿ ಬಳಿ ಸಾಗಿ ಥ್ಯಾಂಕ್ ಯು ಮೈ ಡಿಯರ್ ಎಂದು ವಿಶ್ ಮಾಡಿ ಹಣೆಗೆ ಸಿಹಿ ಮುತ್ತು ಕೊಡುತ್ತಾನೆ. ಅದು ಪ್ರೀತಿಯ ಸಂಕೇತ, ನೆಮ್ಮದಿಯ ಸಂಕೇತ, ವಂಶ ಬೆಳೆಯುತ್ತದೆಂಬ ಹರುಷದ ಮುತ್ತು.

ಸುಮತಿ ಮುಗುಳ್ನಕ್ಕು ಸುಮ್ಮನಾಗುತ್ತಾಳೆ. ವಿಷಯ ಫೋನಿನ ಮೂಲಕ ತಾಯಿಗೆ ತಿಳಿಸುತ್ತಾನೆ ಸುರೇಶ. ಮನೆಗೆ ಹೋದೊಡನೇ ರೇಣುಕಮ್ಮಳಿಂದ ಭವ್ಯ ಸ್ವಾಗತ ಸಿಗುತ್ತದೆ. ಆರತಿ ಮಾಡಿ ಸೊಸೆಯನ್ನು ಆಲಿಂಗಿಸುತ್ತಾಳೆ ರೇಣುಕಮ್ಮ.

ಮನೆಯಲ್ಲಿ ಸಂಭ್ರಮವೋ ಸಂಭ್ರಮ. ದಿನಗಳುರುಳಿದಂತೆ ತುಂಬು ಗರ್ಭಿಣಿಯ ಸೀಮಂತ ಕಾರ್ಯವನ್ನೂ ರೇಣುಕಮ್ಮ ತಮ್ಮ ಮನೆಯಲ್ಲೇ ಅದ್ಧೂರಿಯಾಗಿ ಮಾಡಿ, ಹೆರಿಗೆಯೂ ಇಲ್ಲೇ ಆಗಬೇಕೆಂದು ನಿರ್ಧರಿಸಿ ತವರಿಗೆ ಕಳಿಸದೇ ಅಲ್ಲೇ ಇರಿಸಿಕೊಳ್ಳುತ್ತಾರೆ. ಸುಮತಿಗೆ ತವರಿಗೆ ಹೋಗಬೇಕೆನಿಸಿದರೂ ರೇಣುಕಮ್ಮನವರ ಒತ್ತಡಕ್ಕೆ ಮಣಿದು ಅಲ್ಲೇ ಉಳಿದುಕೊಳ್ಳುತ್ತಾಳೆ.

ಸುಮತಿಯ ಮಖದಲ್ಲಿ ಮಾತ್ರ ಅಸಹನೆ, ಅಸಂತೋಷ ಕಂಡು, ಸುರೇಶಗೌಡ, “ಯಾಕೆ ಸುಮ್ಮು ತವರಿಗೆ ಕಳಿಸಿಲ್ಲ ಅಂತ ಬೇಜಾರಾ? ಬೇಜಾರ್ ಆಗ್ಬೇಡ ಚಿನ್ನ. ಹೆರಿಗೆ ಆದೊಡನೆ ನಿಮ್ಮಮ್ಮನ ಮನೆಗೆ ನಾನೇ ಬಿಟ್ ಬರ್ತೀನಿ. ಇಲ್ಲಿ ಆಸ್ಪತ್ರೆ ಸೌಲಭ್ಯ ಎಲ್ಲಾ ಚೆನ್ನಾಗಿದೆ ಅಲ್ವಾ. ಬಾಣಂತನ ಅಲ್ಲೇ ಆಗುತ್ತೆ ಸರಿ ನಾ ಡಿಯರ್.” ಎಂದು ಸಂತೈಸುತ್ತಾನೆ ಸುರೇಶ್ ಗೌಡ. ಸುಮತಿ ಇಲ್ರಿ ಹಾಗೇನಿಲ್ಲ, ನಂಗೂ ನಿಮ್ಮನ್ನ ಬಿಟ್ ಹೋಗೋಕೆ ಮನಸಿಲ್ಲ. ಸದಾ ನಿಮ್ ಜೊತೇನೇ ಇರ್ಬೇಕು ನಾನು ಎಂದು ಸುರೇಶನ ಎದೆಗೊರಗುತ್ತಾಳಾದರೂ ಮುಖದಲ್ಲಿ ಗೆಲುವು, ಸಂತೋಷ ಮೂಡುವುದಿಲ್ಲ. ಇದನ್ನು ಗಮನಿಸುತ್ತಲೇ ಇದ್ದ ಸುರೇಶ, ಇವಳು ಏನೋ ಚಿಂತೆ ಮಾಡುತ್ತಾದ್ದಾಳೆ. ನನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾಳೆನಿಸಿ, ಕೇಳಬೇಕೆಂದರೂ ಈ ಪರಿಸ್ಥಿತಿಯಲ್ಲಿ ಅವಳಿಗೆ ತೊಂದರೆ ಕೊಡಬಾರದೆಂದು ಸುಮ್ಮನಾಗುತ್ತಾನೆ.

ಒಂಭತ್ತು ತಿಂಗಳು ತುಂಬಿ ಹೆರಿಗೆ ನೋವು ಕಾಣಿಸಿಕೊಂಡು ಸುಮತಿ ಆಸ್ಪತ್ರೆಗೆ ಸೇರುತ್ತಾಳೆ. ಸಹಜವಾಗಿ ಹೆರಿಗೆ ಆಗಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ವಂಶೋದ್ಧಾರಕನ ಆಗಮನಕ್ಕೆ ಗಂಡ, ಅತ್ತೆ, ಮಾವ ಎಲ್ಲರೂ ಸಂತೋಷಿಸುತ್ತಾರೆ. ಎಲ್ಲರ ಸಂತೋಷ ಕಂಡು ಸುಮತಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾಳೆ. ಮಗುವನ್ನು ನೋಡಿದ ಎಲ್ಲರೂ ಮಗು ಯಾರಂತೆ ಇದೆ, ತಾಯಿಯಂತೆಯಾ, ತಂದೆಯಂತೆಯಾ ಎಂದು ಮಾತಾನಾಡುತ್ತಾರೆ. ಹೋಲಿಕೆ ಮಾಡುವುದರಲ್ಲೇ ಲೀನವಾಗುತ್ತಾರೆ. ಈ ಮಾತುಗಳನ್ನು ಕೇಳಿದ ಸುಮತಿ. ಹೌದು ನನ್ನ ಮಗ ನನ್ನಂತಿಲ್ಲ ಆದರೆ ಅವನ ಅಪ್ಪನಂತೆಯೂ ಇಲ್ಲ ಎಂಬುದು ಸುಮತಿಗೆ ಮಾತ್ರ ತಿಳಿಯುತ್ತದೆ. ಹೌದು . ಇವನು ಮುಂದೇ. ಅಷ್ಟರಲ್ಲಿ ಸುರೇಶ ಗೌಡ ಬರುತ್ತಾನೆ.

“ಸುಮತಿ ನಾಳೆನೆ ಡಿಶ್ಚಾರ್ಜ್ ಮಾಡ್ತಾರಂತೆ ನೇರ ನಿನ್ ತವರು ಮನೆಗೆ ಹೋಗೋಣ, ಅಮ್ಮಗೆ ಹೇಳಿದೀನಿ. ಖುಷೀನಾ ಬಂಗಾರಿ. ಏನ್ ಮಾಡ್ತಿದಾನೆ ನನ್ ಮುದ್ದು ಮಗ? ” “ಈಗ ಹಾಲು ಕುಡಿದು ಮಲ್ಗಿದಾನೆ ನೋಡಿ. ರೀ ನಾನು ತವರಿಗೆ ಹೋದ್ಮೇಲೆ ನೀವು ವಾರಕ್ಕೊಮ್ಮೆಯಾದ್ರೂ ಬರ್ಲೇ ಬೇಕು ನೋಡಿ. ನಿಮ್ಮನ್ನ ನೋಡದೆ ಇರೋಕಾಗೊಲ್ಲ ನಂಗೆ. ಮತ್ತೆ ಸರಿಯಾಗಿ ಊಟ ನಿದ್ದೆ ಮಾಡ್ಬೇಕು, ಸಮಯ ಸಿಕ್ಕಾಗೆಲ್ಲ ಕಾಲ್ ಮಾಡ್ಬೇಕು. ಸರಿ ನಾ . ಆಯ್ತು ಚಿನ್ನ ಮತ್ತೆ ರೀ . ಅದೂ . ಅದೂ . ಒಂದು ವಿಷಯ ಹೇಳಬೇ.

ಉಶ್ ನೀ ಏನ್ ಹೇಳ್ತಿ ಅಂತ ನಂಗೊತ್ತು. ಈಗ ಏನು ಮಾತಾಡ್ಬೇಡ. ಗುಟ್ಟು ಗುಟ್ಟಾಗೇ ಇರಲಿ. ಎಂದ ಕೂಡಲೇ ಬೆಚ್ಚಿ ಬೀಳುತ್ತಾಳೆ ಸುಮತಿ. ರೀ ಏನ್ ಗುಟ್ಟು ರೀ. ಚಿನ್ನ ನಂಗೆಲ್ಲ ಗೊತ್ತಾಗಿದೆ. ಏನ್ ರೀ.,. ಅದೂ ನಾನು . ಸುಧೀ. ರೀ ನನ್ ಮೇಲೆ ಅನುಮಾನನಾ.
ಛೆ. ಛೇ. . ಬಿಡ್ತು ಅನ್ನು ಬಂಗಾರಿ. ನೀನು ಅಪ್ಪಟ ಚಿನ್ನ. ಸುಶೀಲೆ ನೀನು. ನಂಗೆಲ್ಲಾ ಗೊತ್ತು.

ನೀನು ಗರ್ಭಿಣಿ ಆದಾಗಿಂದ ಏನೋ ಚಡಪಡಿಕೆಯಲ್ಲೇ ಇದ್ದದ್ದು ನೋಡಿದೀನಿ. ಒಬ್ಬ ವೈದ್ಯನಾಗಿ ನಾನು ಎಲ್ಲವನ್ನೂ ತಿಳಿಯಬಲ್ಲೆ. ನನಗೆ ಈ ಜನ್ಮದಲ್ಲಿ ಮಕ್ಕಳಾಗೋದಿಲ್ಲ ಅಂತ ಗೊತ್ತಾಯ್ತು. ನಾನು ಫಾರೆನ್ಗೆ ಹೋದಾಗ ಪರೀಕ್ಷೆ ಮಾಡಿಸಿಕೊಂಡೀನಿ ಡಿಯರ್. ನಾ ಬಂದಮೇಲೇ ಹೇಗೋ ಆ ರಿಪೋರ್ಟ್ ನಿನ್ನ ಕೈಗೆ ಸಿಕ್ಕಿದೆ. ಅದನ್ನು ನೋಡಿ, ನೀನು ನನ್ನನ್ನು ಹೀಯಾಳಿಸದೆ, ತ್ಯಜಿಸದೆ. ನಿನ್ನ ಅಪಾರವಾದ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡೆ. ಜೊತೆಗೆ ಈ ವಿಷಯವನ್ನು ಗೌಪ್ಯವಾಗಿಟ್ಟು ಎಂದಿಗೂ ಈ ವಿಷಯ ಬಹಿರಂಗವಾಗಬಾರದೆಂದು ನಿರ್ಧರಿಸಿದೆ.

ಅದಕ್ಕೆ ನಾ ಇಲ್ದೇ ಇದ್ದಾಗ ನೀನು, ವೀರ್ಯದಾನ ಕೇಂದ್ರಕ್ಕೆ ಸುಧೀಯನ್ನು ಕರೆದುಕೊಂಡು ಹೋಗಿ ಅವನಿಂದ ವೀರ್ಯ ಸಂಗ್ರಹಿಸಿಟ್ಟಿದ್ದಿ., ನಂತರ ಸಮಯ ನೋಡಿ.ಅದನ್ನು ನೀನು ಪಡೆದುಕೊಂಡೆ.ಹೌದು ತಾನೆ. ನನಗೆ ಮಗು ಹುಟ್ಟಿಸೋ ಶಕ್ತಿ ಇಲ್ಲದಿದ್ರೂ, ನೀನು ಗರ್ಭಿಣಿ ಆಗಿದ್ದೀಯ, ಎಂದಾಗ. ಮೊದಲಿಗೆ ಅನುಮಾನ ಬಂದರೂ ನನ್ನನ್ನು ನಿನ್ನ ಪ್ರಾಣಕ್ಕಿತ ಹೆಚ್ಚಾಗಿ ಪ್ರೀತಿಸುವ ನೀನು. ನನಗೆ ವಂಚಿಸುವುದಿಲ್ಲ ಎಂಬ ನಂಬಿಕೆಯಿಂದ. ಸುಮ್ಮನಿದ್ದೆ.

ಗರ್ಭಧರಿಸಿದ ನಂತರವೂ ನೀನು ಪಡುತ್ತಿದ್ದ ಸಂಕಟವನ್ನು ನಾನು ಗಮನಿಸುತ್ತಿದ್ದೆ. ಅವತ್ತು. ನಿನ್ನ ಶ್ರೀಮಂತ ಕಾರ್ಯದ ದಿನ ನೀನು ಅತ್ತದ್ದು ಕಂಡು. ನನಗೆ ಗೊತ್ತಾಯಿತು. ಇದರ ಹಿಂದೆ ಯಾವುದೋ ಸತ್ಯವಿದೆ . ಆಗ ನಾನು ಸುಧಿಯನ್ನು ಕರೆದು ನಾ ಇಲ್ಲದ ಸಮಯದಲ್ಲಿ ನೀನು ಎಲ್ಲೆಲ್ಲಿ ಹೋಗಿದ್ದಿ ಎಂದು ವಿಚಾರಿಸಿದೆ. ಆಗ ಸುಧಿಯಿಂದ ಎಲ್ಲ ತಿಳಿಯಿತು.

ಬಂಗಾರಿ ನೀನು ನಿನ್ನ ಗಂಡನ ಮತ್ತು ಹೆಸರಾಂತ ವೈದ್ಯನ ಮಾನ ಉಳಿಸಿದ್ದೀಯ. ಆದರ್ಶ ಪತ್ನಿಯಾಗಿ ಗಂಡನ ನ್ಯೂನ್ಯತೆಯನ್ನು ಹೊರಜಗತ್ತಿಗೆ ಅಷ್ಟೇ ಅಲ್ಲ ನನ್ನ ಹೆತ್ತವರಿಗೂ ತೋರಗೊಡದೆ. ಇರುವ ವೈದ್ಯಕೀಯ ಸೌಲಭ್ಯ ಪಡೆದು ನಿಜಕ್ಕೂ ವೈದ್ಯನ ಹೆಂಡತಿ ಆಗಿದ್ದೀಯ. ಅಮ್ಮನಿಗೂ ಬೇಸರವಾಗದಂತೆ ಒಂದು ಉತ್ತಮ ನಿರ್ಧಾರ ತೆಗೆಗುಕೊಂಡಿದೀಯಾ. ಅಪರಿಚಿತ ದಾನಿಗಳ ವೀರ್ಯ ಪಡೆಯುವುದಕ್ಕಿಂತ. ಉತ್ತಮ ಸಂಸ್ಕಾರ, ಗುಣ ಇರುವ ಸುಧಿಯ ವೀರ್ಯ ಪಡೆದಿರುವುದೂ ಒಳ್ಳೆಯದಲ್ಲವೆ. ನೀನು ನಿಶ್ಚಿಂತೆ ಇಂದಿರು ಬಂಗಾರಿ . ಎಂದು ಮಡದಿಯನ್ನು ಆಲಿಂಗಿಸಿದ ಸುರೇಶಗೌಡ.

ನೆಮ್ಮದಿಯ ಉಸಿರು ಬಿಟ್ಟಳು ಸುಮತಿ. ಇಷ್ಟು ದಿನ ತಪ್ಪು ಮಾಡಿನೇನೋ ಎಂಬ ಭಾವ ಗಂಡನ ಮಾತುಗಳಿಂದ ಅಳಿಸಿಹೋಯ್ತು. ಭಾವಪರವಶಳಾಗಿ ಗಂಡನನ್ನು ಆಲಿಂಗಿಸಿ. ಮನಸಾರೆ ಅತ್ತು ಹಗುರಾದಳು. ಮುಖ ಎತ್ತಿ ಬೊಗಸೆಯಲ್ಲಿ ಹಿಡಿದ ಸುರೇಶಗೌಡ ಸಿಹಿ ಮುತ್ತು ನೀಡಿದ.

-ವರದೇಂದ್ರ ಕೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x