‘ನಮಸ್ತೆ’ ಅವಳು ‘ಎಫ್ ಬಿ’ ಯಲ್ಲಿ ಕಳಿಸಿದ ಮೊದಲ ಶಬ್ದ ಸಂದೇಶವಿದು. ನಾನು ಕುತೂಹಲದಿಂದಲೇ ಪ್ರತಿಕ್ರಿಯಿಸಿದೆ ಕೊಂಚ ಉತ್ಸುಕನಾಗಿ.
‘ಹಾಯ್ ’
‘ಥ್ಯಾಂಕ್ಸ ನನ್ನ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಕ್ಕೆ’
‘ ನನ್ನ ಫ್ರೆಂಡ್ ಪೋಟೋ ಒಂದಕ್ಕೆ ನಾನು ಕಮೆಂಟ್ ಹಾಕಿದ್ದು ನಿಮಗೆ ಇಷ್ಟವಾಗಿ, ನೀವು ಲೈಕ್ ಒತ್ತಿದ್ದಿರಿ. ನಾನು ಕುತೂಹಲದಿಂದ ನಿಮ್ಮನ್ನ ಪರಿಚಯ ಮಾಡಿಕೊಳ್ಳಕ್ಕೆ ಮುಂದಾದೆ ನೋಡಿ. ಹಾಗಾಗಿ ಈ ಗೆಳೆತನ ಅಂದೆ.
‘ಅವರು ನಿಮಗೆ ಗೊತ್ತಾ’ ಅಂತ ಅವಳು ಕೇಳಿದ್ಲು.
‘ತೀರಾ ಪರಿಚಿತರೇನಲ್ಲ. ಎಫ್ ಬಿ ಮೂಲಕ ಸ್ನೇಹಿತರು’ ಅಂದೆ.
‘ಓಹೋ ಹಾಗಾ’
‘ಮತ್ತೆ ಕೊಡಗಿಗೆ ಬಂದಿದ್ರಾ?’
‘ಇಲ್ಲ , ನೆಕ್ಸ್ಟ್ ವೀಕ್ ಹೋಗ್ತಿದ್ದೀನಿ. ಬರುತ್ತೀರಾ? ಕೊಡಗು ಸುತ್ತಿಸುತ್ತೀನಿ’
‘ ನಾನು ಮೈಸೂರಲ್ಲಿ ಇರುತ್ತೀನಿ’
‘ಹೌದಾ. ನನ್ನ ಕಜಿನ್ ಮೈಸೂರಲ್ಲಿ ಇರ್‍ತಾರೆ. ತುಂಬಾ ಸಲಿ ಬಂದ್ದೀನಿ’
‘ಹೌದಾ?’ ಫೈನ್.
‘ಮೈಸೂರು ತುಂಬಾ ಚೆಂದ ಅಲ್ವಾ ನೋಡೋಕೆ’
‘ಹೌದು. ಅದಕ್ಕೆ ನಾನು ಇಲ್ಲಿರೋದು. ಮತ್ತೆ ಕೊಡಗಿನಲ್ಲಿ ನಿಮ್ಮ ಮಮ್ಮಿ ಡ್ಯಾಡಿ ಇರ್‍ತಾರಾ?’
‘ ಹಾ. ಅಲ್ಲೇ ಮಡಿಕೇರಿ ಹತ್ತಿರ. ಒಂದು ಹಳ್ಳಿ’.
‘ ಮಡಿಕೇರಿಗೆ ಬರೋದಿದೆ. ನನ್ನ ಫ್ರೆಂಡ್‌ಗೆ ಬೇಬಿ ಹುಟ್ಟಿದೆ. ಮಗು ನೋಡೋಕೆ ಬರಬೇಕು. ಆಗ ಬರುತ್ತೀನಿ. ನೀವು ಬಂದಾಗ ಪೋನ್ ಮಾಡಿ. ಖಂಡಿತಾ ಬರುವೆ’.
‘ ಈ ಸಲಿ ಬಂದಾಗ ಪೋನ್ ಮಾಡ್ತಿನಿ. ಒಕೆ. ಇಷ್ಟೆಲ್ಲಾ ಆದ ಮೇಲೆ ಮಾತು ವೃತ್ತಿ ಕಡೆ ಹೊರಳಿತು. ಒಂದು ಹೆಜ್ಜೆ ಮುಂದೆ ಹೋಗಿ ಕೇಳಿದೆ.
‘ ನೀವು ಏನ್ ಜಾಬ್ ಮಾಡ್ತೀರಿ?’
‘ಬ್ಯಾಂಕ್ ಎಂಪ್ಲಾಯಿ’
‘ಹೌದಾ….ಫೈನ್.
‘ನಮ್ಮದು ನೋಡಿ. ಪರ್‍ಸನಲ್ ಲೈಫ್ ಇಲ್ಲದ ಜಾಬ್..’
‘ಹೌದಲ್ವಾ…ತುಂಬಾ ಬ್ಯುಜಿ ಅಲ್ವಾ ನೀವು’ ಆಕೆ ಏನೂ ಅಭಿಮಾನದಿಂದ ನನ್ನನ್ನ ಹೊಗಳಿದಂತಾಯಿತು. ಸ್ವಲ್ಪ ಉತ್ಸಾಹದಿಂದಲೇ ‘ನೀವು ಇಲ್ಲಿಗೆ ಬಂದು ಬಿಡಿ. ನಿಮ್ಮ ಬ್ಯಾಂಕ್ ಶಾಖೆಗಳು ಇಲ್ಲಿಯೂ ಇವೆಯಲ್ಲಾ ಅಂತ ಆಹ್ವಾನಿಸಿದೆ. ಆ ಕಡೆಯಿಂದ ಕೇಳಿಸಿದ್ದು ‘ಕುಲು ಕುಲು ನಗು’. ಎಷ್ಟು ಉತ್ಸಾಹದಿಂದ ಇದ್ದಳಲ್ಲಾ….ಅಂದು ಕೊಂಡೆ. ಏನೋ ಒಂಥರಾ ಒಲವು ಸುಳಿವಿನ ಅಲೆಗಳು ಅಮೂರ್ತವಾಗಿ ಚಲಿಸಿದಂತಾದವು. ಆಶಾಡದ ಮೋಡಗಳು….
ಮಾತುಕತೆ ಮುಂದುವರಿದಿತ್ತು. ಮನಸ್ಸಿನ ಲೆಕ್ಕಾಚಾರದ ಲಹರಿಗಳು ಹರಿದಾಡತೊಡಗಿದವು. ಆ ಕಡೆ ಸಹ ನನ್ನ ಹಾಗೆ ಆಗುತ್ತಿರಬೇಕು ಅನಿಸಿತು.
‘ ಸೋ… ಊಟ ಆಯಿತಾ?’
‘ ಇಲ್ಲ ಮಾಡ್ಕೋಬೇಕು. ಅನ್ನಕ್ಕೆ ಇಟ್ಟಿದ್ದೀನಿ. ಬೆಳಗಿನ ಸಾಂಬಾರು ಇದೆ’
‘ ಓಹೋ , ನೀವೇ ಪ್ರಿಪೇರ್ ಮಾಡ್ಕೋತೀರಾ, ಪಕ್ಕಾ ವೆಜ್ಜಾ ? ’
‘ ಹೌದು ಮತ್ತೆ. ಅಂದವಳೇ ನಿಮ್ಮ ಊಟಾ ಅಂದ್ಲು?
‘ ನನ್ನದಾಯಿತು. ಕೊಡಗಿನವರಾಗಿ ವೆಜ್ಜಾ ಅಂದೆ’
‘ ಹಾಗೇನಿಲ್ಲ. ಆಗಾಗ ಆಹಾರ ಪದ್ಧತಿ ಬ್ರೇಕ್ ಆಗುತ್ತೆ’ ಅಂದ್ಲು.
ನೆಕ್ಸ್ಟ್ ಮಾತಿನ ಒಂದೆಜ್ಜೆ ಮುಂದಿಟ್ಟಳು.
‘ ನೀವು ಯಾರ್‍ಯಾರು ಇರ್‍ತೀರಿ ಅಲ್ಲಿ?’ ಪ್ರಶ್ನೆಯಲ್ಲಿ ಏನೋ ಗೆಳೆತನವನ್ನು ವಿಸ್ತರಿಸುವ ಹಂಬಲ ಇದ್ದಂತಿತ್ತು.
‘ಎಷ್ಟು ವಿಚಿತ್ರ ನೋಡಿ. ನಾವು ಎಷ್ಟೋ ದಿನಗಳ ಸ್ನೇಹಿತರ ಹಾಗೆ ಮಾತಾಡುತ್ತಿದ್ದೀವಿ. ಸಂಬಂಧಗಳೇ ವಿಚಿತ್ರ. ಎಲ್ಲೆಲ್ಲೋ ಯಾವಾವ ಕಾರಣಕ್ಕೋ ಸ್ನೇಹ ಬೆಳೆದು ಬಿಡುತ್ತೆ. ಅಲ್ವಾ?
‘ಹೌದು’ ಚುಟುಕಾಗಿ ಪ್ರತಿಕ್ರಿಯಿಸಿದಳು’
‘ವಾಸ್ತವ ಅಂದ್ರೆ ಮನಸ್ಸಿನ ಸೂಕ್ಷ್ಮ ಭಾವನೆಗಳನ್ನ ಹತ್ತಿರ ಇದ್ದವರೇ ಅರ್ಥ ಮಾಡಿಕೊಳ್ಳಲ್ಲ ನೋಡಿ’ ಬೆಳೆಯುತ್ತಿದ್ದ ಸ್ನೇಹಕ್ಕೆ ಮತ್ತಷ್ಟು ನೀರು ಸುರಿಯುತ್ತಿದ್ದೆ .
‘ಹೂಂ. ನಿಜ ’
‘ಮತ್ತೆ ನೀವು ಊಟ ಮಾಡಿ. ಅಮೇಲೆ ಮಾತಾಡೋಣ’.
‘ಆಯಿತು. ಮಾಡ್ತಿನಿ’
‘ಖಂಡಿತಾ ಅಮೇಲೆ ಮಾತಾಡೋಣ’.
ಇಷ್ಟೆಲ್ಲಾ ಮಾತಾಡಿದ ಮೇಲೆ ಹದಿನೈದು ನಿಮಿಷ ಬಿಡುವಿತ್ತು. ಇತ್ತ ಏನೇನೋ ಕನಸುಗಳು. ಅವಳು ಶಬ್ದರಹಿತ ಸಂಭಾಷಣೆಯಿಂದ ಶಬ್ದ ಸಹಿತ ಮಾತಿಗೆ ಜಿಗಿಯಬಹುದೇ. ಸ್ನೇಹ ಮತ್ತೆ ಎತ್ತ ಬೆಳೆಯಬಹುದು. ಹೊಸ ರಿಲೇಶನ್‌ಶಿಪ್. ಪ್ಲಾಟೋನಿಕ್ ಆಗಿ ಉಳಿಯುತ್ತೋ ಅಥವಾ ಹೆಚ್ಚಿನದಾಗಿ…ಎಂದು ಯೋಚಿಸಿದೆ.
ಮತ್ತೆ ಚಾಟಿಂಗ್ ಸ್ಟಾರ್ಟ್ ಆಯಿತು….ಮತ್ತದೇ ಪ್ರಶ್ನೆ. ನನಗೆ ಉತ್ತರಿಸಲು ಇಷ್ಟವಿಲ್ಲದ ಪ್ರಶ್ನೆ. ಉತ್ತರಿಸಿದ್ರೆ ಎಲ್ಲಿ ಸಂಬಂಧ ಮುರಿದುಬೀಳುತ್ತದೆಯೋ ಎಂಬ ಅನುಮಾನ ಬೇರೆ. ಅಂತೂ ಅವಳು ನನಗೆ ಬೇಡವಾದ ಪ್ರಶ್ನೆಯನ್ನೇ ಕೇಳಿದಳು ಮತ್ತೆ.
‘ನೀವು ಯಾರ ಜೊತೆ ಸ್ಟೇ ಆಗಿದ್ದೀರಿ?’
ಇದು ಸಂಬಂಧಗಳ ವ್ಯಾಪ್ತಿಯನ್ನು ಕೆಣಕುವ ಪ್ರಶ್ನೆ ಎಂದು ಕೊಂಡೇ ಯೋಚಿಸಿ ಉತ್ತರಿಸಿದೆ. ‘ನೀವು ನನ್ನ ಉತ್ತರ ಕೇಳಿದ ನಂತ್ರ ನನ್ನ ಜೊತೆ ಮಾತು ಬಿಡಬಾರದು’ ಕಂಡೀಶನ್ ಹಾಕಿದೆ ಅವಳಿಗೆ.
‘ಇಲ್ಲ ಹೇಳಿ’
ಆ ಕಡೆಯ ಧ್ವನಿಯಲ್ಲಿ ಕಾತುರತೆ ಮತ್ತು ಹೊಸ ವಿಷಯ ತಿಳಿಯುವ ಆಳ ಕುತೂಹಲವಿತ್ತು.
‘ ನಾನು ಸುಳ್ಳು ಹೇಳಲ್ಲ. ಅದು ನನ್ನ ಜಾಯಮಾನವೂ ಅಲ್ಲ. ನಾನು ನಿಜ ಹೇಳಿದ ನಂತ್ರ ಮಾತು ಬಿಡಲ್ಲ ಅಂತ ಪ್ರಾಮಿಸ್ ಮಾಡಿ’. ಅಂದೆ.
‘ ಓಕೆ. ಪ್ರಾಮೀಸ್… ನಿಮ್ಮ ಜೊತೆ ಮಾತು ಬಿಡಲ್ಲ. ಹೇಳಿ ಪ್ಲೀಜ್. ಯಾರ್‍ಯಾರು ಇರುತ್ತೀರಿ’
‘ ನನ್ನ ಪ್ರೀತಿಯ ಟಾಮಿ. ನನ್ನ ಪುಟ್ಟ ಗೆಳತಿ ನನ್ನ ಮಗಳು. ಹದಿನಾರು ವಸಂತಗಳಿಗೆ ನನ್ನ ಭುಜಕ್ಕೆ ಬೆಳೆದಿರುವ ಮಗ ಹಾಗೂ…ಹಾಗೂ ನನ್ನ ಪತ್ನಿ ಇರುತ್ತೇವೆ. ಅಂದೆ.
‘ಹೌದಾ….’ ರಾಗ ಎಳೆದಳು ಆ ಕಡೆಯಿಂದ.
‘ಮಾತು ಕೊಟ್ಟಿದ್ದೀರಿ, ಮಾತು ನಿಲ್ಲಿಸಲ್ಲ ಅಂತ. ನೆನಪಿರಲಿ’ ಅಂದೆ.
ಹೊಸ ಬೆಸುಗೆ ಕೆಡದಿರಲಿ ಅಂತ ಮುಂದುವರಿದು ಮತ್ತಷ್ಟು ಗುಟ್ಟು ಬಿಟ್ಟುಕೊಟ್ಟೆ ಅವಳಿಗೆ ‘ನಮ್ಮದು ಅನ್ಯೂನ್ಯ ಜೋಡಿಯೇನಲ್ಲ ಬಿಡ್ರಿ. ಹಾಗಾಂತ ಜಗಳನೂ ಆಡಲ್ಲ. ಮೇಡ್ ಫಾರ್ ಈಚ್ ಅದರ್ ಜೋಡಿನೂ ಅಲ್ಲ, ಫ್ರೆಂಡ್ಸ ತರಹ ಇದ್ದೀವಿ ’ ಅಂತ ವಿವರಿಸುತ್ತಲೇ ಇನ್ನು ಬದುಕು ಇದೆ. ಜೀವಂತಿಕೆ, ಜೀವನೋತ್ಸಾಹ ಉಳಿದಿದೆ ಅಂತ ಹಿಂಟ್ ಕೊಟ್ಟೆ.
ಆಕೆ ಮೆದುವಾದಳು. ‘ನಮ್ಮ ಸಂಭಾಷಣೆ ಪುಟ್ಟ ಕತೆಯಂತಿದೆ’ ಅಂದೆ.
‘ಹೌದು’ ಎಂದಳು.
‘ಮಡಿಕೇರಿ ಸುತ್ತಿಸಬೇಕು. ನೆನಪಿದೆ ತಾನೆ. ಮಾತುಕೊಟ್ಟಿದ್ದೀರಿ’ ಅಂದೆ.
‘ನೆನಪಿದೆ’.
‘ನೀವು ಮೈಸೂರಿಗೆ ಬಂದ್ರೆ ನನ್ನ ಕಾರ್ ನಲ್ಲಿ ಸುತ್ತಿಸುವೆ.
‘ಓಹ್ ಹಾಗಾ’
‘ ಊಟ ಆಗಿದೆ. ಹೋಗಿ ಮಲಗಿ. ಹ್ಯಾವೇ ನೈಸ್ ಸ್ಲೀಪ್’
‘ ನಿಮಗೆ ನಿದ್ದೆ ಬಂತಾ?’
‘ ನಿಜ ಹೇಳಲಾ? ’
‘ಹೇಳಿ’
‘ನಿಮ್ಮ ಜೊತೆ ಸುಮ್ನೆ ಮಾತಾಡುತ್ತಿರಬೇಕು ಅನ್ನಿಸುತ್ತೆ’
‘ಮಾತಾಡಿ. ನಿಮ್ಮ ಫ್ರೆಂಡ್ ಏನು ಮಾಡುತ್ತಿದ್ದಾರೆ? ಪ್ರಶ್ನಿಸಿದಳು.
‘ ಅದು ನಿದ್ದೆ ಮಾಡಿದೆ. ಅದಕ್ಕೆ ತಲೆನೋವು’ ಎಂದೆ.
‘ ಮಗ-ಮಗಳು ಏನು ಮಾಡುತ್ತಿದ್ದಾರೆ?’ ಆಕೆ ಫ್ರೀಯಾಗಿ ಮಾತಾಡುವ ಸನ್ನಿವೇಶಕ್ಕಾಗಿ ಕಾದಿದ್ದಾಳೆ ಅಂದುಕೊಳ್ಳುತ್ತಲೇ…..‘ ಮಗ ನಾನು ಮಲಗದೇ ಮಲಗುವುದಿಲ್ಲ. ಅವನು ನನ್ನ ಕೇರ್ ತಗೋಳ್ತಾ ಇರ್‍ತಾನೆ. ಮಗಳು ಅವಳ ಕೋಣೆಯಲ್ಲಿ ನೆಟ್ ನಲ್ಲಿ ಏನೋ ಹುಡುಕುತ್ತಿದ್ದಾಳೆ.
‘ ಒಕೆ’ ಅಂದ್ಲು.
‘ಮತ್ತೆ ಏನು ವಿಶೇಷ’
‘ನಮ್ಮದೇನಿರುತ್ತೆ. ಮಾಮೂಲಿ ಬಿಡಿ’
‘ನೀವು ಬೆಂಗಳೂರಲ್ಲಿ ಯಾರ್‍ಯಾರು ಇರುತ್ತೀರಿ? ವುಮೆನ್ಸ ಹಾಸ್ಟೆಲ್ ನಲ್ಲಿ ಇದ್ದೀರಾ?
‘ಇಲ್ಲಪ. ನಾನು ಮತ್ತು ನನ್ನ ಪ್ರೀತಿಯ ನಾಯಿ ಟೈಗರ್ ಇರುತ್ತೀವಿ. ಮನೆ ಲೀಸ್ ಮೇಲೆ ತಗೊಂಡಿದ್ದೀನಿ’.
‘ ಹಾಗಾ. ಫೈನ್’
‘ ಸೋ. ಟೈಮ್ ಆಯ್ತು. ನಾಳೆ ಸಿಗ್ತಿನಿ ಅಂತ ಮುಗಿಸಿ ಬೈ ಬೈ’ ಅಂದೆ.
‘ಓ ಕೆ. ನಂಗೆ ನಿದ್ದೆ ಬಂದಿಲ್ಲ. ನೀವು ಮಲಗಿ’ ಅಂದ್ಲು. ನಾನು ಚಾಟ್ ಆಫ್ ಮಾಡಿದೆ.
ಅಷ್ಟೊತ್ತಿಗೆ ಮೊಬೈಲ್ ನಂಬರ್ ಅವಳಿಗೆ ವಿನಿಮಯ ಆಗಿತ್ತು. ಅವಳು ಮಾತ್ರ ನಂಬರ್ ಕೊಟ್ಟಿರಲಿಲ್ಲ. ಹಾಗಾಗಿ ಅವಳೇ ನನ್ನ ನಂಬರ್‌ಗೆ ಮೆಸೆಜ್ ಅಥವಾ ಪೋನ್ ಮಾಡಬಹುದು ಅಂತ ಕಾದಿದ್ದೆ. ಬೆಳಿಗ್ಗೆ ಹೊಸ ನಂಬರ್ ನಿಂದ ಮೆಸೇಜ್ ಬಂದಿತ್ತು. ಹ್ಯಾವೇ ನೈಸ್ ಡೇ ಅಂತ. ನಾನು ಅವಳೇ ಮಾಡಿರಬಹುದು ಅಂತ ಊಹಿಸಿದೆ. ಆದರೂ ಕುತೂಹಲದಿಂದ ‘ಯಾರಿದು ಅಂತಾ? ’ ಮರಳಿ ಮೆಸೇಜ್ ಮಾಡಿದೆ. ಅದಕ್ಕೆ ಉತ್ತರವಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಆ ಹೊಸ ನಂಬರ್‌ಗೆ ಪೋನ್ ಮಾಡಿದೆ. ರಿಸೀವ್ ಮಾಡಲಿಲ್ಲ. ಸುಮ್ನೆ ಕಾಡಿಸುತ್ತಿರಬಹುದಾ ಅಂದುಕೊಂಡೆ. ಕೆಲ ಗಂಟೆಗಳು ಬಿಟ್ಟು ಮತ್ತೆ ಪೋನ್ ಮಾಡಿದೆ. ಪೋನ್ ರಿಸೀವ್ ಮಾಡಿದ ಕಡೆಯಿಂದ ‘ಯಾರ್ ಬೇಕಿತ್ತು ? ಎಂಬ ಪ್ರಶ್ನೆ. ಪ್ರಶ್ನಿಸಿದ್ದು, ಯುವಕನ ಧ್ವನಿ ಆದ್ದರಿಂದ ‘ಯಾರು ನೀವು?, ಬೆಳಿಗ್ಗೆ ನನ್ನ ನಂಬರ್‌ಗೆ ಮೆಸೇಜ್ ಮಾಡಿದ್ರಲ್ಲಾ ಅಂದೆ. ಹೌದಾ ಸಾರ್. ಸಾರಿ. ಬೈ ಮಿಸ್‌ಟೇಕ್ ಮೆಸೇಜ್ ಹೋಗಿದೆ. ತಪ್ಪು ತಿಳಿಯಬೇಡಿ ಅಂದ. ಆಯಿತು ಬಿಡಿ ಎಂದು ಪೋನ್ ಇಟ್ಟೆ. ಇದು ನಾನು ಎಣಿಸಿದ ಕಡೆಯಿಂದ ಬಂದ ಮೆಸೇಜ್ ಅಲ್ಲ ಅಂದುಕೊಂಡು ಸುಮ್ಮನಾದೆ. ಹಗಲು ಅದು ಇದು ಮಾಡುತ್ತಾ…ಪೋನ್‌ಗಾಗಿ ಕಾಯುತ್ತಾ ದಿನ ಕಳೆದಾಯ್ತು. ರಾತ್ರಿಯಾಯಿತು. ಮತ್ತದೇ ಎಫ್‌ಬಿ ಯಲ್ಲಿ ಅದು ಇದು ಸ್ಟೆಟಸ್ ನೋಡುತ್ತಾ, ಕಮೆಂಟ್ ಹಾಕುತ್ತಾ ಕುಳಿತುಕೊಳ್ಳೋದು. ಅವಳು ಚಾಟ್‌ಗೆ ಬಂದ್ಲು. ಮತ್ತೆ ಅದೇ ಪ್ರಾರಂಭ….
‘ಹಾಯ್…ಹೇಗಿದ್ದೀರಿ?’
‘ನೀವು ಹೇಗಿದ್ದೀರಿ? ಹೇಗಿತ್ತು ದಿನ? ಏನ್ ವಿಶೇಷ. ಏನಾದ್ರು ಹೊಸತು ವಿಷಯ’
ಹೀಗೆ ಉಭಯಕುಶಲೋಪರಿಯಾಗಿ ಅನಾಮಧೇಯ ಮೆಸೇಜ್ ಮತ್ತು ಸಂಭಾಷಣೆ ವಿವರಿಸಿದ್ದಾತು. ಅವಳು ನಕ್ಕಿದ್ದು ಆಯಿತು. ಕೊನೆಗೆ ಬ್ಯಾಂಕ್ ವಿಷಯ, ಬೆಂಗಳೂರು ವಿಷಯ ಮಾತಾಡಿ, ಗುಡ್ ನೈಟ್ , ನೈಸ್ ಸ್ಲೀಪ್ . ಸ್ವೀಟ್ ಡ್ರೀಮ್ಸ ಹೇಳಿ ಆ ದಿನವೂ ಮುಗಿಯಿತು.
ಮತ್ತೊಂದು ದಿನ ಹಗಲು ಕಳೆದು ರಾತ್ರಿ ಆಯಿತು. ಮತ್ತೆ ಆಕೆ ಚಾಟಿಂಗ್‌ಗೆ ಬಂದಳು. ನನಗೋ ಒಳಗೊಳಗೆ ಖುಷಿ. ಅಂತು ಸಂಬಂಧ ಚಿಗುರುತ್ತಿದೆ ಎಂದು.
‘ತುಂಬಾ ಬೇಜಾರಾಗಿದೆ, ಮನಸ್ಸಿಗೆ’ ಅವಳ ಸಂಭಾಷಣೆಯ ಮೊದಲ ವಾಕ್ಯ . ಏನೋ ಪೀಠಿಕೆ ಇದೆ ಅಂದ್ಕೊಂಡೆ.
‘ಯಾಕೆ ಏನಾಯ್ತು’
‘ಏನಿಲ್ಲ ಬಿಡಿ. ಅದೆಲ್ಲಾ ನಿಮ್ಮಿಂದ ಬಗೆ ಹರಿಸುವಂತಹದ್ದಲ್ಲ’
‘ಏನಂತ ಹೇಳಿ ನೋಡೋಣ. ಸಾಧ್ಯವಾದ್ರೆ ಯತ್ನಿಸೋಣ’
‘ನಂಗೆ ೧೦ ಕೆ ಬೇಕು. ಕೊಡೊಕೆ ಆಗುತ್ತಾ’
‘ ೧೦ ಕೆ ಅಂದ್ರೆ ? ಅರ್ಥವಾಗಲಿಲ್ಲ?’
‘ ನೋಡಿ ನಂಗೆ ಮಾತುಕೊಟ್ರೆ ತಪ್ಪಿಸೋ ಹಾಗಿಲ್ಲ. ಮಾತು ತಪ್ಪಿಸಿದ್ರೆ ಕೋಪ ಬರುತ್ತೆ ನಂಗೆ ಎಂದು ಮೊದಲೇ ತಾಕೀತು ಮಾಡುತ್ತಲೇ, ೧೦ ಕೆ ಅಂದ್ರೆ ಹತ್ತು ಸಾವಿರ ರೂ. ಬೇಕಿತ್ತು. ಕೊಡೊಕೆ ಆಗುತ್ತಾ ?’
‘ ಓಹೋ ಅದಕ್ಕೇನಂತೆ. ನಿಮ್ಮ ಆಕೌಂಟ್ ನಂಬರ್ ಕೊಡಿ. ನಾಳೆ ಹಾಕುವೆ’ ಎನ್ನುತ್ತಲೇ ಮನದೊಳಗೆ ತರ್ಕಿಸಲು ಪ್ರಾರಂಭಿಸಿದೆ. ಮುಖತಃ ನೋಡಿಲ್ಲ. ಪರಿಚಯ ಆದದ್ದು ಮುಖರಹಿತ ಮುಖಪುಟದಲ್ಲಿ. ಪ್ರಾರಂಭದಲ್ಲೇ ದುಡ್ಡು ಕೇಳ್ತಾಳಲ್ಲ. ಟೋಪಿ ಗಿರಾಕಿನೇ ಇವ್ಳು ಅಂದ್ಕೊಳತ್ತಾ ಮಾತು ಮುಂದುವರಿಯಿತು.
‘ಆಯಿತು. ಆದ್ರೆ ಒಂದು ಪ್ರಶ್ನೆ. ಅಷ್ಟೊಂದು ದೊಡ್ಡ ಮೊತ್ತ ಯಾಕೆ ಅಂತ ಕೇಳಬಹುದಾ?’
‘ಅದೊಂದು ದೊಡ್ಡ ಕತೆ ಕಣ್ರಿ. ನನ್ನ ಫ್ರೆಂಡ್ ಹಾಸ್ಪಿಟಲೈಜ್ ಆಗಿದ್ದಾಳೆ. ಆಸ್ಪತ್ರೆಗೆ ಕಟ್ಟೋಕೆ ಹಣವಿಲ್ಲ. ಅವ್ಳಿಗೆ ಪ್ರಾಮೀಸ್ ಮಾಡಿ ಬಂದಿದ್ದೀನಿ. ಏನೊ ಮಾಡೋದು ಹಣ ಹೊಂದಿಸೋಕೆ ಅಂತ ಯೋಚಿಸುತ್ತಿದ್ದೆ. ತಲೆಭಾರವಾಗಿದೆ ಅಂದ್ಲು.
‘ಯಾಕೆ ಅವ್ರ ಮನೆಯವ್ರು ಇಲ್ವಾ ?’ ನನ್ನ ಪ್ರಶ್ನೆ.
‘ ಇಲ್ಲ. ತೀರಾ ಬಡಕುಟುಂಬದವಳು. ಸಿ.ಎ. ಮಾಡ್ತಿದ್ದಾಳೆ. ಬೇರೆ ಕಡೆ ಪಾರ್ಟಟೈಮ್ ಕೆಲ್ಸ ಮಾಡಿಕೊಂಡಿದ್ದಾಳೆ. ನನ್ನ ಜೀವದ ಗೆಳತಿ. ಹೆಲ್ಪ ಮಾಡಬೇಕಲ್ಲಾ ಅಂತ’ ಶುರುವಾಯ್ತು.
‘ ನೀವು ಬ್ಯಾಂಕ್ ಎಂಪ್ಲಾಯಿ. ನಿಮ್ಗೆ ಏನು ದುಡ್ಡಿನ ಕೊರತೆ’
‘ ಆಯ್ಯೋ ಅಲ್ಲಿ ಸಾಲ ಕೊಡೋಕೆ ನೂರೆಂಟು ತಾಪತ್ರಯ. ನಿಮ್ಮಿಂದ ಆಗೊತ್ತೋ’ ಪ್ರಶ್ನೆ ಕಡಕ್ ಆಗಿತ್ತು. ಮುಖ ನೋಡದೇ ಹತ್ತು ಸಾವಿರ ರೂಪಾಯಿ ಕೊಡೊದು ಹೇಗೆ? ಮನಸ್ಸು ತರ್ಕಿಸುತ್ತಿತ್ತು. ತರ್ಕದ ಮನಸ್ಸಲ್ಲೇ ‘ಆಯಿತು ನೈನ್ಟಿನೈನ್ ಪರ್‍ಸೆಂಟ್ ಟ್ರೈ ಮಾಡ್ತಿನಿ ’ಅಂದೆ.
‘ಟ್ರೈನಾ’ ಎಂದು ರಾಗ ಎಳೆದಳು. ಜೊತೆಗೆ ನಾಳೆ ಬೆಳಿಗ್ಗೆ ಪೋನ್ ಮಾಡ್ತಿನಿ. ಆಗ ಆಕೌಂಟ್ ನಂಬರ್ ಕೊಡುವೆ ಅಂದ್ಲು. ಜೊತೆಗೆ ನೀವು ಕೊಡುವ ಹಣವನ್ನು ವಾಪಾಸ್ ತಗೋಳ್ಳೊದಾದ್ರೆ ಮಾತ್ರ ಅಂತ ಸೇರಿಸಿದ್ಲು. ವಾಪಾಸ್ ಕೊಡುವ ಮಾತು ಈಗ್ಯಾಕೆ ಬಿಡಿ. ಆಮೇಲೆ ನೋಡೋಣ ಎಂದೆ. ನಿಜಕ್ಕೂ ಹಣ ಕೊಡುವ ಮನಸ್ಸಿರಲಿಲ್ಲ ನಂಗೆ. ಅದ್ರೂ ಅದನ್ನ ತೋರ್‍ಸಿಕೊಳ್ಳದೇ ಮಾತು ಮುಂದುವರಿಯಿತು.
‘ಆಯ್ತು ಟ್ರೈ ಮಾಡುವೆ’ ಎಂದು ಹೇಳಿದೆ.
‘ಗ್ಯಾರಂಟಿ ದುಡ್ಡು ಕಳಿಸ್ತೀರಲ್ಲಾ’ ಎಂದು ಕನ್ಫರ್ಮ್ ಮಾಡಿಕೊಳ್ಳೋಕೆ ಯತ್ನಿಸಿದಳು.
‘ ಆಯ್ತು. ನಿಜಕ್ಕೂ ಪ್ರಯತ್ನಿಸುವೆ’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟೆ.
ಬೆಳಿಗ್ಗೆ ನಿರೀಕ್ಷೆಯಂತೆ ಪೋನ್ ಬಂತು. ಅದು ಇದು ಮಾತಾಡಿದ್ದಾಯಿತು. ಹಣದ ವಿಷಯ ಅವಳು ಪ್ರಸ್ತಾಪಿಸಲಿಲ್ಲ. ನಾನು ಅದರ ಸುಳಿವೆತ್ತಲಿಲ್ಲ. ಪೋನ್ ಇಟ್ಟ ನಂತರ ಮೆಸೇಜ್ ಬಂತು. ‘ಹಣ ಕಳುಸಿತ್ತೀರಲ್ಲ’ ಎಂದು. ನಾನು ಆಫೀಸ್ ಮೀಟಿಂಗ್ ನಲ್ಲಿದ್ದೇನೆ. ‘ಸ್ವಲ್ಪ ಬ್ಯುಜಿ’ ಅಂತ ಮರಳಿ ಮೆಸೇಜ್ ಕಳುಹಿಸಿದೆ. ಅದಕ್ಕವಳು ‘ಎಂಜಾಯ್’ ಎಂದು ಪ್ರತಿಕ್ರಿಯಿಸಿ ಸುಮ್ಮನಾದಳು. ಮೀಟಿಂಗ್ ನಲ್ಲಿ ಎಂಥ ಎಂಜಾಯ್ ಕಣ್ರಿ. ಆಫೀಸ್ ನಲ್ಲಿ ಸೀರಿಯಸ್ ಇಸ್ಸೂ ಚರ್ಚೆ ಆಗುತ್ತಿದೆ ಎಂದು ಮರಳಿ ಮೆಸೇಜ್ ಹಾಕಿದೆ. ಆ ಕಡೆಯಿಂದ ಉತ್ತರವಿಲ್ಲ. ನಾನು ಪೀಡೆ ತಪ್ಪಿತು ಅಂತ ಸುಮ್ಮನಾದೆ.
ಮತ್ತೆ ರಾತ್ರಿ ಆಗುತ್ತಿದ್ದಂತೆ ಎಫ್‌ಬಿ ಚಾಟ್ ಪ್ರಾರಂಭವಾಯ್ತು.
‘ನೀವು ತುಂಬಾ ಬ್ಯುಜಿ ಏನೋ, ನೀವು ದುಡ್ಡು ಅಡ್ಜೆಸ್ಟ್ ಮಾಡ್ತೀರಿ ಅಂತ ರಿಲೀಫ್ ಆಗಿದ್ದೆ. ಈಗ ಮತ್ತೆ ಟೆನ್ಶನ್ ಶುರುವಾಗಿದೆ’
‘ಸುಮ್ಮನಿದ್ದು ಬಿಡಿ. ಎಲ್ಲಾ ಸರಿಹೋಗುತ್ತೆ’ ಅಂದೆ.
‘ ಏನ್ರಿ ಹೀಗೆ ಹೇಳ್ತಿರಾ? ಮನುಷ್ಯರಾಡುವ ಮಾತಾ ಇದು. ಆಕೆಯ ಧನಿಯಲ್ಲಿ ಕೋಪವಿತ್ತು.
‘ ನನ್ನ ಕೇಳಿ ನಿಮ್ಮ ಫ್ರೆಂಡ್‌ಗೆ ಹಣ ಕೊಡುವ ಮಾತು ಆಡಿ ಬಂದಿದ್ರಾ?’ ಅವಳ ವಾದವನ್ನ ಪ್ರಶ್ನಿಸಿದೆ.
‘ ಅದೆಲ್ಲಾ ಯಾಕೆ ? ಹಣ ಕೊಡಲ್ಲ ಅಂತ ಮೊದ್ಲೆ ಹೇಳಿದ್ರೆ ಸಾಕಿತ್ತು. ದೊಡ್ಡ ನಮಸ್ಕಾರ ನಿಮಗೆ? ನಿಮ್ಮ ಹತ್ರ ಮಾತಾಡಲ್ಲ ’ ಅಂತ ಉಪದೇಶ ಬಂತು.
‘ ಏನ್ರಿ. ನಂಗೆ ಉಪದೇಶ ಮಾಡ್ತೀರಾ? ಮುಖವನ್ನೇ ನೋಡದೇ ಸ್ನೇಹವಾಗಿ ಎರಡು ದಿನ ಆಗಿಲ್ಲ. ಹಣ ಕೇಳ್ತೀರಲ್ಲರ್ರಿ. ಹಣ ಹೊಂದಿಸುವ ತಾಕತ್ತು ಇಲ್ಲದೇ ನಿಮ್ಮ ಸ್ನೇಹಿತೆಗೆ ಯಾಕೆ ಪ್ರಾಮೀಸ್ ಮಾಡಿ ಬಂದ್ರಿ. ನನ್ನ ಕೇಳಿ ಪ್ರಾಮೀಸ್ ಮಾಡಿಲ್ಲ ತಾನೆ? ಬ್ಯಾಂಕ್ ಎಂಪ್ಲಾಯಿ ಅಂತ ಬೇರೆ ಹೇಳ್ತೀರಿ, ಅಂತ ಆಕೆಯ ಸ್ವಾಭಿಮಾನ ಪ್ರಶ್ನಿಸಿದೆ.
‘ ನಾನು ಹಣ ಆರೆಂಜ್ ಮಾಡಿದ್ದು ಆಯ್ತು, ಆಸ್ಪತ್ರೆಗೆ ಕಟ್ಟಿದ್ದು ಆಯಿತು’ ಎಂದುತ್ತರ ಬಂತು.
‘ಮತ್ತೆ ನನ್ನ ಬಳಿ ಹಣ ಕೇಳಿದ್ದೇಕೆ’
‘ ನಾನು ಕೇಳಿಲ್ಲ’
‘ಚಾಟ್ ಹಿಸ್ಟರಿ ಪರೀಕ್ಷಿಸಿ, ಗೊತ್ತಾಗುತ್ತೆ’
‘ ಹಲೋ ನನ್ನ ಟೆನ್ಶನ್ ನಲ್ಲಿ ನಾನಿದ್ದೆ. ಏನೋ ಕೇಳಿದ್ರಿ ಅಂತ ಹೇಳಿದೆ. ಇನ್ಮೇಲೆ ನಂಗೆ ಮೆಸೇಜ್ ಮಾಡ್ಬೇಡಿ. ಬೈ ಎಂದ್ಲು.
‘ ನೀವು ಅಷ್ಟೇ. ಮತ್ತೆ ಚಾಟ್ ಮಾಡ್ಬೇಡಿ. ಮೆಸೇಜ್ ಹಾಕ್ಬೇಡಿ. ಮುಖವಿಲ್ಲದ ಪುಟದಲ್ಲಿ ಆಟ ಆಡುವ ನಿಮಗೆ ಧಿಕ್ಕಾರವಿರಲಿ. ಸ್ನೇಹದ ನೆಪದಲ್ಲಿ ಹಣ ಕೀಳಲು ನಾಟಕವಾಡುವ ನಿಮ್ಮಂಥವರ ಸಹವಾಸವೂ ಅವಶ್ಯಕತೆ ಇಲ್ಲ’ ಅಂತ ಚಾಟ್ ಕಟ್ ಮಾಡಿದೆ. ಮೂರು ದಿನದ ಮುಖಪುಟ ಮುರಿದು ಬಿದ್ದಿತ್ತು. ಮಾತು ಕತೆಯಾಗಿ ಎದೆಗಿಳಿದ ಭಾವನೆಗಳು ಚೆಲ್ಲಾಪಿಲ್ಲಿಯಾಗಿ ಅಣಕಿಸತೊಡಗಿದ್ದವು.
*****
ಟೆಂಪರರಿ ಸ್ನೇಹ. ಚೆನ್ನಾಗಿದೆ ನಾಗರಾಜ್.
ಫೇಸ್ ಬುಕ್ಕಿನ ನೂರೆಂಟು ಸತ್ಯಗಳಲ್ಲಿ ಇದು ಒಂದು 🙂
🙂 🙁
ಹೀಗೂ ಆಗಬಹುದು! ಚೆನ್ನಾಗಿದೆ.
ಕಥೆ ಚೆನ್ನಾಗಿದೆ!