ಲೇಖನ

ಸುರಿದದ್ದು ಮಳೆ, ಕರಗಿದ್ದು ಒಡಲು: ಸಂಗೀತ ರವಿರಾಜ್


ಇಳೆಯು ಬಯಸಿದ ಪ್ರೇಮ ಕಾವ್ಯವೇ ಮಳೆ ಎಂಬುದು ಅವಳಿಗಷ್ಟೆ ತಿಳಿದಿದೆ. ಈ ಕಾವ್ಯಕ್ಕೆ ನದಿ, ತೊರೆಯ ಹಂಗಿಲ್ಲ. ಇಳೆಯಲ್ಲೇ ಇಂಗಿ ಅಲ್ಲೇ ಒರತೆಯಾಗುವ ಹುಮ್ಮಸ್ಸು ಮಾತ್ರ. ಸುಮಧುರ ಮನಸ್ಸಿಗೆ, ಸುಮಧುರ ಕಾವ್ಯದ ಹಿತ ಕೊಡುವ ಮಳೆ ಅವನಿಯಂತೆ ಅಚಲ. ಭೋರ್ಗರೆಯುತ್ತಾ ಸುರಿಯುವ ನಿನಾದಕ್ಕೆ ಮನದ ಸಂಗೀತ ಎಲ್ಲೆ ಮೀರಿ ಹಾಡುತ್ತಿದೆ. ಆ ರಾಗಕ್ಕೆ ಸ್ವರಗಳು ಶ್ರುತಿಯ ಮೀಟುತ್ತಿದೆ. ಪದಗಳಿಲ್ಲದ ಆಲಾಪವೆಂದರೆ ಅದು ವರ್ಷಾಧಾರೆ ಎಂಬುದನ್ನು ಒಂದೇ ಕೊಡೆಯಡಿಯಲ್ಲಿ ನಡೆದಾಡಿದಾಗ ಉಸುರಿದ್ದು ಈಗ ನೆನಪುಗಳು. ಪದಪದಗಳ ಪಲ್ಲವಿ ಕಟ್ಟಿ ಮಳೆಯ ರಾಗಕ್ಕೆ ಜೊತೆಯಾಗಿ ಹಾಡಿದ ಕದಪು ರಂಗು ಇನ್ನು ಕಣ್ಣಂಚಲ್ಲಿ ಉಳಿದಿದೆ. ಜಡಿಮಳೆಯ ಬಿರುಸಿಗೆ ನಾಚಿ ನೀರಾದ ಭುವಿಯ ಸಂತಸ ಅಷ್ಟಿಷ್ಟಲ್ಲ. ಕೆಸುವಿನೆಲೆಯ ಮೇಲೆ ಮುದುರಿ ಕುಳಿತ ಮುತ್ತು ಕಣ್ತುಂಬಿಕೊಳ್ಳುತ್ತಿದೆ ಈ ಸೌಂದರ್ಯ ರಾಶಿಯ ಮೆರುಗನ್ನು ಕಂಡು. ನಲುಗಿದರು ಕಣ್ತುಂಬಿಕೊಳ್ಳುವ ಅದಮ್ಯ ಬಯಕೆ ಮಳೆಯ ಕನವರಿಕೆಯ ಭಾಗ. ಸೌಂದರ್ಯವೆಂದರೆ ಹೀಗೆ ಪ್ರಕೃತಿಯೊಳಗೊಂದಾಗಿ ಅಲ್ಲಿಂದ ಕಣ್ಣು ಕೀಳಲಾಗದ ಮನಸ್ಸು.

ಮಳೆಯ ನಿನಾದ ಕೊಂಚಕೊಂಚವೇ ಅವ್ಯಕ್ತವಾಗಿ ಮನದೊಳಗಿಳಿದು ಮತ್ತೆ ಮತ್ತೆ ಎದೆಯೊಳಗೆ ಸುರಿಯುತ್ತಲೆ ಇದೆ. ಇಂದಲ್ಲದ ನಾಳೆಯ ಬಗ್ಗೆ ಅಪಾರ ನಂಬಿಕೆ ಎದೆಗೂ ಜೊತೆಗೆ ಮಳೆಗು! ಬದುಕು ನಿಂತ ನೀರಲ್ಲ ಎಂದು ಮೆಲ್ಲುಸುರುತ್ತಲೇ ಮಳೆ ನೀರು ಮತ್ತೆ ಬಂದು ಹರಿಯುತ್ತಿದೆ ಎಂದಿನಂತೆ. ನೆಲದ ನಲ್ಮೆಯ ಕಂಡು ತುಂಬಿ ಬರುವ ಒಡಲಿಗೆ ಕಡಲಾಗುವ ಹಂಬಲ. ಹಂಬಲದಾಚೆ ತುಂಬಿ ತುಳುಕುವ ಒಲವು. ಆ ಒಲವಿನ ಮಳೆಬಿಂದು ಮನದೊಳಗಿಳಿದು ಬೆಚ್ಚಗೆ ಸದ್ದುಮಾಡದೆ ಕುಳಿತಿದೆ. ಮಳೆಯ ಭಾವಪ್ರಪಂಚಕ್ಕೆ ಒಗ್ಗಿ ಹೋದ ಮನಸ್ಸಿಗೆ ಇಳೆಯ ತಂಪು ಕನಸು ಚಿಗುರೊಡೆಯುವಂತೆ ಮಾಡುತ್ತದೆ. ಕೈಯೊಡ್ಡಿ ಬೊಗಸೆ ಹಿಡಿಯುತ್ತಾ ತುಂತುರು ಹನಿಗಳ ಲೀಲೆಯ ಕಣ್ತುಂಬಿಕೊಂಡು ಆಲಾಪಗಳ ಅವಗಾಹಿಸಿಕೊಳ್ಳೂವ ಮನಸ್ಸು ಮಳೆಗಾಲದಲ್ಲಿ ಹಿತವಾಗಿದೆ.

ಭೂಮಿ ನೆನೆದು ನೆನೆದು ಮೊಳಕೆಯೊಡೆಯುವ ಪ್ರತಿ ಬೀಜದ ಗುಟ್ಟು ಮಳೆಗೆ ತಿಳಿದಿದೆ. ಮೃದು ಪುಟಾಣಿ ಚಿಗುರು ಜೀವ ಹೆಣೆಯುತ್ತಿದ್ದರು ಮಳೆಯ ಆರೈಕೆಗೆ ಭೂಮಿಯು ಸಾರ್ಥಕತೆ ಕಂಡಿದೆ. ಹೊಸ ಜೀವದ ಕನಸು ಒಡಲಲ್ಲಿ ಹಸಿರಾಗಿದೆ. ಪ್ರತಿ ಮಳೆಯು ಅದಕ್ಕೆ ಕನಸು ಧಾರೆಯೆರೆಯುತ್ತಿದೆ. ಮೊಳಕೆಯೊಡೆದ ಜೀವ ಮಳೆಗೆಂದೂ ಆಭಾರಿಯಾಗಿದೆ. ಈ ಸೃಷ್ಠಿಯ ಕನಸು ಮೊಳೆದು ಭಾವ ಸಹಜವಾಗಿ ಮೊರೆಯುತ್ತಿದೆ. ಮೃತ್ತಿಕೆ ನೆನೆದು ನೆನೆದು ಹದವಾಗಿ ಜಡಿಮಳೆಯ ಅಸ್ವಾದಿಸಿ ಸೃಷ್ಠಿಯ ಪ್ರತಿ ಗಿಡಕ್ಕೆ ಚಿಗುರೊಡೆಯುವಂತಹ ಕ್ರಿಯೆಯ ಕಲಿಸುತ್ತಿದೆ.

ಮೌನವಾಗುತ್ತಾ ಮಳೆ ನಿಲ್ಲುತ್ತದೆ. ಮುತ್ತಂತ ಮಾತಿನ ಮಳೆಹನಿಗಳು ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಹಸಿರೆಲೆಯ ಅಂಚಿನಲ್ಲಿ ಕುಳಿತ ನೀರ ಮುತ್ತಿನ ಚೆಲುವ ಕಣ್ತುಂಬಿಕೊಂಡು ಬೊಗಸೆ ಹಿಡಿದು ಕಾಯಲೇಬೇದು. ಚೂರಾಗದೆ ಹಿಡಿಯುವ ಆಸೆ ಮತ್ತು ಭ್ರಮೆಗಳೆರಡರ ಮಿಳಿತದಲ್ಲಿ ಕಾಯುವಿಕೆ ಖುಷಿಕೊಡುತ್ತಿದೆ. ಮತ್ತೆ ಮೋಡ ಮುಸುಕುತ್ತಿದೆ. ತುಂಬು ಜತನದಿಂದ ದಿನಂಪ್ರತಿ ಮೌನದಲ್ಲಿ ಉತ್ತರಿಸುವ ಬೆಚ್ಚಗಿನ ನೆನಪುಗಳಿಗೆ ಮಗದೊಮ್ಮೆ ಜೀವತುಂಬಲು ಮುಸಲಧಾರೆ ಮುಂದಾಗಿದೆ. ಅತ್ತು ಅತ್ತು ಹಗುರಾದ ಆಕಾಶಕ್ಕೆ ತಂಪಾದ ಭುವಿಯ ಕಂಡು ಮನಸ್ಸು ತುಂಬಿ ಬಂದಿದೆ. ಮಗುವಿನಂತಹ ಸೆಳೆತದ ಮಳೆಗೆ ಕೈಯೊಡ್ಡಿ ಬೊಗಸೆ ಹಿಡಿಯುವಾಸೆ ಅವಳಿಗೆ. ತುಂತುರು ಹನಿಗಳ ಪಿಸು ಮಾತುಗಳನ್ನು ಕದ್ದು ಆಲಿಸುವ ಅವಳಿಗೆ ಭೂಮಿ ನೋಡುತ್ತಿರುವ ಪರಿವೆಯೆ ಇಲ್ಲ! ಭೂಮಿಯೆ ಮಳೆಯ ಸಂಗೀತವನ್ನು ಕುಳಿತು ಧ್ಯಾನಿಸುತ್ತಿರುವಾಗ ಅದಕ್ಕೆ ಇಹಪರದ ಚಿಂತೆ ಏಕೆ? ನಮ್ಮ ಭಾವನೆಗಳನ್ನು ಹತ್ತಿಕ್ಕಲು ಬಿಡದ ಮಳೆ ಯಾವಾಗಲೂ ಹೀಗೆ ನವಿರಾಗಿ ಕಾಡುತ್ತಿರಬೇಕಾದರೆ ಇನ್ನು ಮೇದಿನಿಯು ಹೇಗಿರಬಹುದೆಂದು ಯೋಚಿಸಲು ಕಷ್ಟಸಾಧ್ಯ. ಅವಳಿಗೆ ತಾನೆ ಮಳೆಯಾಗುವ ಹಂಬಲ. ಏಕೆಂದರೆ ಕಣ್ಣೀರು ಬಂದಾಗ ಮಳೆಯಲ್ಲಿ ನಿಂತವಳಿಗೆ ತನ್ನಂತೆ ಹೀಗೆ ಮಾಡುವವರ ನೆನಪಾಗಿ, ಮಳೆಯಲ್ಲಿ ನಿಂತು ಅಳುವವರನ್ನೆಲ್ಲಾ ಕಂಡುಹಿಡಿಯಬೇಕೆಂಬ ಆಸೆ. ಕಣ್ಣೀರಿನ ಪಸೆಯ ಆಳ ಹುಡುಕುವ ಕುತೂಹಲ. ನೀರಿನ ಬಿಂಬದಲ್ಲಿ ಎಲ್ಲ ಹುಡುಕಬಲ್ಲೆ ಎಂಬ ಹುಚ್ಚು ಹುಡುಗಾಟಿಕೆ.

ಸೂರಿನಡಿ ಚೂರಾದ ಮಳೆಹನಿಗಳು ಮುನಿಸು ತರವಲ್ಲವೆಂದು ಸಾರಿ ಸಾರಿ ಹೇಳುತ್ತಾ ಸಮಧಾನಿಸುವ ಪರಿಗೆ ಮಳೆಯು ಸೋಜಿಗಗೊಳ್ಳುತ್ತಿತ್ತು. ಮನಸ್ಸು ಮತ್ತು ಮಳೆ ಅಕ್ಕ ಪಕ್ಕ ಕುಳಿತು ಮಾತನಾಡಿ ಹನಿಗಳ ಮುನಿಸನ್ನು ಶಮನಗೊಳಿಸುತ್ತಿದ್ದವು. ತಂತಿ ಮೇಲೆಪೋಣಿಸಿದ ನೀರ ಹನಿಗಳು ಜಾರಿ ಒಡೆದಾಗ ಮನಸ್ಸು ತತ್ತರಿಸುತ್ತದೆ. ಬೊಗಸೆಯಲ್ಲಿ ಚೂರಾಗುವ ಹನಿಗಳ ಬಿಂಬ ಕಣ್ಣೊಳಗೆ ಕಾಂತಿಯ ಪಸರಿಸಿಬಿಡುತ್ತದೆ. ಮಳೆನಿಂತ ಗಗನದಡಿಯ ಶುಭ್ರತೆಗೆ ಮಾರುಹೋಗಿದೆ ಕಂಗಳು.

ಒಂದೊಮ್ಮೆ ಪಾದದಡಿ ಚಲಿತ ನೀರು ಮತ್ತೆ ಬರುವುದಿಲ್ಲ. ನೀರೆಂದರೆ ಹೀಗೆ ಸಾಗುತ್ತಾ ಸಾಗುತ್ತಾ ಹೊಸನೀರ ಹಾಯಿಸಿ ಬಿಡುತ್ತದೆ ನಮ್ಮೊಳಗೆ ಸದ್ದಿಲ್ಲದೆ. ಮಳೆಯ ಶಕ್ತಿಗೆ ಮನಸ್ಸು ಬಾಗಿದೆ. ಮನಸ್ಸು ಪ್ರಫುಲ್ಲಗೊಳ್ಳುವ ಮಳೆಗಾಲದ ಜಾತ್ರೆ ಮನದೊಳಗೆ ನಲಿಯುತ್ತಿರುತ್ತದೆ. ಮೋಡ ಮುಸುಕಿರುವ, ಮಂಜು ಕವಿದಿರುವ ಅಗುಳಿ ಹಾಕಿದ ಕದದೊಳಗೆ ಮನಸ್ಸು ಮಾತ್ರ ತೆರೆದುಕೊಂಡಿರುವ ಸಮಯವಿದು. ಆಕೆಗಿದು ಹೊಸತಲ್ಲ. ಮನಸ್ಸರಳಿಸಿ, ಕಣ್ಣರಳಿಸಿ, ಕಣ್ಣಾಲಿ ಕದಲಿಸಲು ಮನಸಾಗದ ಮಳೆಗಾಲದ ನೋಡುವುದೆಂದರೆ ಅವಳಿಗೆ ಎಲ್ಲಿಲ್ಲದ ಉತ್ಸಾಹ. ನೋಡ ನೋಡುತ್ತಿದ್ದಂತೆ ಮಳೆ ಸನಿಹಕ್ಕೆ ಬಂದು ಕೇಳುತ್ತಿದೆ. ಕಳೆದ ಸೋನೆ ಮಳೆಯಲ್ಲಿ ಒಂದೇ ಕೊಡೆಯಡಿಯ್ಲಲ್ಲಿ ಸಾಗಿದವರು ಈಗೆಲ್ಲಿ ಕಳೆದುಹೋದಿರಿ ಎಂದಾಗ ಮತ್ತೆ ಮಳೆಯಡಿಗೆ ತೆರಳಿದಳು ತಾನೇ ಮಳೆಯಾಗುವ ಆಸೆಯಿಂದ!

–   ಸಂಗೀತ ರವಿರಾಜ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಸುರಿದದ್ದು ಮಳೆ, ಕರಗಿದ್ದು ಒಡಲು: ಸಂಗೀತ ರವಿರಾಜ್

  1. ಇಳೆ ಮಳೆಯ ಪ್ರೀತಿಗೆ ಸಾಟಿಯಿಲ್ಲ…… ಈಕೆಯನ್ನು ಸಮಾಧಾನಿಸುವ ಪರಿ ಮಳೆಗೆ ಮಾತ್ರ ಅರಿತಿದೆ. ಚೆನ್ನಾಗಿದೆ.

Leave a Reply

Your email address will not be published. Required fields are marked *