ಒಂದ ವಾರ ಹಚ್ಚಿ ಹೊಡದ ಮಳಿ ಅವತ್ತ ಒಂದ ಸ್ವಲ್ಪ ಹೊರಪಾಗಿತ್ತು. ಇಡಿ ದಿನಾ ಬಿದ್ದ ಬಿಸಲಿಂದ ಹಸಿಯಾಗಿದ್ದ ನೆಲ ಎಲ್ಲ ಒಣಗಿ ಬೆಚ್ಚಗಿನ ವಾತಾವರಣ ಇತ್ತು. ಒಂದ ವಾರದಿಂದ ಮನ್ಯಾಗ ಕೂತು ಕೂತು ಬ್ಯಾಸರಾಗಿತ್ತು. ಸಂಜಿಮುಂದ ವಾಕಿಂಗ್ ಹೋಗಬೇಕನಿಸಿ ನಮ್ಮ ಕಾಲೋನಿಯೊಳಗಿದ್ದ ಪಾರ್ಕಿಗೆ ಮಕ್ಕಳನ್ನ ಕರಕೊಂಡು ಹೋದೆ. ಅದೊಂದು ಸಣ್ಣ ಪಾರ್ಕು. ಅಷ್ಟರೊಳಗನ ಮಕ್ಕಳಿಗೆ ಆಡಲಿಕ್ಕೆ ಜಾರಬಂಡಿ, ಜೋಕಾಲಿ, ಒಂದ ಸಣ್ಣ ಪರ್ಣಕುಟಿರ, ಹೆಣ್ಣಮಕ್ಕಳಿಗೆ ಒಂದ ಕಡೆ ಗುಂಪಾಗಿ ಕೂತು ಹರಟಿಹೊಡಿಲಿಕ್ಕೆ ಹೇಳಿ ಮಾಡಿಸಿದಂಗ ಸುತ್ತಲೂ ಜೋಡಿಸಿದ ಬೆಂಚುಗೊಳು. ವಾಕಿಂಗ್ ಮಾಡೊವರಿಗೆ ಅನುಕೂಲ ಆಗೋಹಂಗ ಅಡ್ಡ್ಯಾಡಲಿಕ್ಕೆ ಸಣ್ಣದಾದ ಕಾಲುದಾರಿ, ಅದರ ಎರಡು ಬಾಜುಕ್ಕ ಬಣ್ಣ ಬಣ್ಣದ ಹೂವಿನ ಸಸಿಗೋಳು. ಅಲ್ಲಲ್ಲೆ ಕಾಬಾಳಿಹೂವು, ಮತ್ತ ಚೆಂಡು ಹೂವಿನ ಸಸಿಗೊಳ ವ್ಯವಸ್ಥಿತವಾಗಿ ನೆಟ್ಟಿದ್ದರು. ಪಾರ್ಕಿನ ಅಂಚಿಗೆ ಸುತ್ತಲ ದೊಡ್ಡ ದೊಡ್ಡ ಗುಲ್ಮೊಹರ ಮರಗೊಳು. ವಾರದ ಮಳಿಯಿಂದಾಗಿ ನೀರೊಳಗ ತೊಯ್ದು ಎಲಿಗೊಳೆಲ್ಲಾ ಹಚ್ಚ ಹಸುರಾಗಿ ಮಲಾ ಮಲಾ ಅಂತಿದ್ವು. ಸಂಜಿಮುಂದಿನ ಎಳೆಬಿಸಿಲಿಗೆ ಹಸಿರು ಸೀರಿ ಉಟಗೊಂಡು, ಅರಿಷಿಣಾ ಹಚ್ಚ್ಕೊಂಡ, ಸುರಗಿ ನೀರು ಬಿದ್ದ ಮದುಮಗಳಂಗ ಹೋಳಿತಿದ್ವು. ನಾವು ಹೋಗೊದ್ರಾಗ ಅಗಲೇ ಸಣ್ಣ ಮಕ್ಕಳು, ದೊಡ್ಡವರು ಎಲ್ಲಾರಿಂದ ಪಾರ್ಕು ಕಲ ಕಲ ಅಂತಿತ್ತು. ಒಂದ ವಾರದಿಂದ ಮನಿಯೊಳಗನ ಬಂಧಿಯಾದ ಕೈದಿಗಳನ್ನ ಒಮ್ಮೆಲೆ ಸ್ವತಂತ್ರ್ಯವಾಗಿ ಬಿಟ್ಟಂಗಿತ್ತು. ಮಕ್ಕಳನ್ನ ಒಂದ ಕಡೆ ಆಡಲಿಕ್ಕೆ ಬಿಟ್ಟು ಖಾಲಿ ಇದ್ದ ಒಂದ ಬೆಂಚ್ ಮ್ಯಾಲೆ ಕೂತು ಸೂತ್ತಲೂ ಕಣ್ಣಾಡಿಸಿ ನೋಡಿದೆ. ಎಲ್ಲಾರು ತಮ್ಮ ತಮ್ಮ ಪ್ರಪಂಚದೊಳಗ ವ್ಯಸ್ಥ ಆಗಿದ್ದರು. ಒಂದ ಕಡೆ ವಯಸ್ಸಾದ ಅಜ್ಜಿಗೋಳು ತಮ್ಮ ಮಕ್ಕಳು ಸೊಸೆಯಂದ್ರ ಬಗ್ಗೆ ಹೇಳ್ಕೊಳ್ಳಿಕತ್ತಿದ್ರು. ವಾಕಿಂಗ್ ಪಾಥ್‍ನ್ಯಾಗ ಹೆಸರಿಗೆ ವಾಕಿಂಗ್ ಅಂತ ಸವಕಾಶ ನಡಕೊತ ಹರಟಿ ಹೋಡಿಲಿಕತ್ತ ಹೆಂಗಸರು. ಮರದ ಮೂಲಿಯೊಳಗಿನ ಬೆಂಚ್‍ನ್ಯಾಗ ಕೂತ ಒಂದಿಷ್ಟು ಕಾಲೇಜು ಹುಡುಗಿಯರು ತಮ್ಮ ಮೊಬೈಲ್ ಪ್ರಪಂಚದೊಳಗ ತೇಲಿಹೋಗಿದ್ರು. ಯಾಕಂದ್ರ ಮನಿಯೊಳಗ ಹಿಂಗ ಫೋನ್‍ನ್ಯಾಗ ಮಾತಡಲಿಕ್ಕೆ ಏಕಾಂತ ಸಿಗುದಿಲ್ಲಾ ಅವರಿಗೆ ಅಂತನ ಈ ಪಾರ್ಕನ್ನ ತಮ್ಮ ಠಿಕಾಣಾ ಮಾಡಕೊಂಡಿದ್ರು. ಹಿಂಗ ನಗು, ಹರಟಿ, ಮಕ್ಕಳ ತುಂಟಾಟದಿಂದ ವಾತಾವರಣ ಒಂಥರಾ ಪ್ರಪುಲ್ಲವಾಗಿತ್ತು. ಹಂಗ ಎದ್ದು ಅಡ್ಡ್ಯಾಡಕೋತ ಪರ್ಣಕುಟೀರದ ಕಡೆ ಬಂದೆ. ಅಲ್ಲೆ ಪೆನಶನ್ ಆದವರದು ಒಂದ ಗುಂಪನ ಇತ್ತು. ಒಂದ ಐದಾರು ಮಂದಿ ವಯಸ್ಸಾದ ಗಂಡಸರು ಆರಾಮಾಗಿ ಹರಟಿ ಹೋಡಕೊತ ಕೂತಿದ್ರು. ನಾ ಭಾಳ ಸಲಾ ಪರೀಕ್ಷಾ ಮಾಡಿ ನೋಡೆನಿ, ಏನಂದ್ರ ಈ ಹೆಂಗಸರು ಒಂದ ಕಡೆ ಕೂಡಿದ್ರ ಬರೆ ಮಮ್ಮನ್ಯಾಗ ಹಂಗ, ನಿಮ್ಮನ್ಯಾಗ ಹಿಂಗ ಅಂತ ಮನಿ ಜಂಜಾಟದ ಸುದ್ದಿನ ಹೇಳ್ಕೊತಿರತಾರ. ಆದ್ರ ಗಂಡಸರು ಹಂಗಲ್ಲಾ ತಮ್ಮ ಮನ್ಯಾಗ, ಜೀವನದಾಗ ಏನೆ ತ್ರಾಸ ಇರಲಿ, ಬ್ಯಾಸರಿರಲಿ ಹಿಂಗ ಹೊರಗ ಬಂದಾಗ ಒಟ್ಟ ಯಾರ ಮುಂದನು ಹೇಳಿ ಚರ್ಚೆ ಮಾಡುದಿಲ್ಲಾ. ಹೊರಗ ಇದ್ದಷ್ಟ ಹೊತ್ತು ತಮ್ಮ ಸ್ನೇಹಿತರ ಜೋಡಿ ಮನಸ್ಸಿನ ಭಾರ ಮರೆತು ಆರಾಮಾಗಿ ಮನಸ ತೃಪ್ತಿಯಾಗಿ ಹರಟಿ ಹೊಡದು ನಕ್ಕು, ಮನಸ್ಸು ಹವರಗ ಮಾಡಕೊಂಡು ಖುಷೀಲೆ ಮನಿಗೆ ಹೋಗತಾರ. ಆದ್ರ ಈ ಹೆಂಗಸರು ತಮ್ಮ ಮನ್ಯಾಗಿನ ಮುಗಿಲಾರದ ಸಮಸ್ಯೆಗಳನ್ನ ಚರ್ಚೆ ಮಾಡಿ ತಮ್ಮದರ ಜೋಡಿ ಮತ್ತೊಬ್ಬರದು ಸೇರಿಸಿಕೊಂಡು ಮತ್ತಷ್ಟ ಮನಸ್ಸ ಕಿರಿಕಿರಿ ಮಾಡಕೊಂಡು ಹೋಗತಾರ.
ಅವತ್ತನು ಹಿಂಗ ಒಂದು ಅಜ್ಜಂದ್ರ ಗುಂಪು ನೋಡಿ ಖುಷಿ ಆಗಿ ಅವರು ಏನೇನ ಮಾತಾಡ್ತಾರ ಕೇಳಬೇಕನ್ನೊ ಕುತೂಹಲದಿಂದ ನಾ ಅಲ್ಲೆ ಇದ್ದ ಒಂದ ಬೆಂಚ್ ಮ್ಯಾಲೆ ಕೂತೆ. ಪಾರ್ಕಿನ ನಡುವ ಇದ್ದ ಐದು ಕಂಬಗಳ ಆ ಪುಟ್ಟ ಕುಟೀರದೊಳಗ ಕಂಬಕ್ಕ ಆನ್ಕೊಂಡು ಆರಾಮಾಗಿ ಮಾತಾಡ್ಕೊತ ಕುತಿದ್ರು. ಅವರ ಮಾತಿನ್ಯಾಗ ರಾಜಕೀಯ, ಕ್ರೀಡೆ, ತಮ್ಮ ಕಾಲದ ಸಿನಿಮಾ ಸುದ್ದಿ, ಶಿಕ್ಷಣ ಪಧ್ಧತಿ, ಊಟ ತಿನಸುಗಳ ಬಗ್ಗೆ ನೆನಪು ಮಾಡಕೊತ, ಈಗಿನ ಕಾಲದ ವಿಚಾರಗೊಳ ಜೋಡಿ ತಮ್ಮ ಕಾಲದ ಸಂಗತಿಗಳನ್ನ ಹೋಲಿಸಿಕೋತ ತಮ್ಮ ನೆನಪಿನ ಬುತ್ತಿಯನ್ನ ಬಿಚ್ಚಿಕೊಂಡ ಕೂತಿದ್ರು. ಅವರೊಳಗ ಒಬ್ಬರಿಗೆ ಊಟದ ಬಗ್ಗೆ ಭಾಳ ಖಯಾಲಿ ಇರಬೆಕನಿಸ್ತದ ಅವರು "ಹೇ ನಾವ ವಯಸ್ಸಿನ್ಯಾಗ ಇದ್ದಾಗ ನಮ್ಮ ಊಟಾ ನೋಡಬೇಕ ನೀವು, ಈಗಿನವರು ಅದರಾಗ ಗಿರ್ದಾ(೧/೪)ನು ಮಾಡುದಿಲ್ಲಾ. ಹಬ್ಬಾ ಹುಣ್ಣಿವಿ ಇದ್ದರಂತು ಮುಗಿತು ಆವತ್ತ ಮಾಡಿದ್ದ ಸಿಹಿನ ಜಿದ್ದಿನ ಮ್ಯಾಲೆ ತಿಂದು ಅರಗಿಸ್ಕೊತಿದ್ವಿ. ಮಾವಿನ ಹಣ್ಣಿನ ಸೀಜನ್‍ನ್ಯಾಗ ಅಂತು ಜಿದ್ದ ಕಟ್ಟಿ ಎಂಟು ಹತ್ತು ಹೋಳಿಗಿ ಸೀಕರಣಿ ತಿಂತಿದ್ವಿ. ಈಗಿನವರಿಗೆ ಒಂದ ಹೋಳಿಗಿ ತಿನ್ನೊದ್ರಾಗ ನಡದಾಗಿನ ಕಶಿ ಸಡ್ಲ ಆಗಿರತದ. ಆವಾಗಿನ ಹಣ್ಣುನು ಭಾಳ ರುಚಿ ಇರತಿದ್ವು. ಆ ರುಚಿ ಈಗೆಲ್ಲೆ ಸಿಗತದ" ಅಂತ ಅಂದ್ರು. ಅಲ್ಲೆ ಇದ್ದ ಇನ್ನೊಬ್ಬ ಹಿರಿಯರು "ಹೌದು ಹೌದು, ಆಗಿನ ಸವಿ ಇಗೆಲ್ಲರಿ, ಬರೆ ನೆನಪ ಮಾಡಕೊತ ಕೂಡೊದಷ್ಟ ನಮ್ಮ ಕೆಲಸಾ" ಅಂದ್ರು. ಅವರ ಮಾತ ಕೇಳಿ ನಂಗ ಖರೆ ಅನಿಸ್ತು. ನಾವು ಸಣ್ಣವರಿದ್ದಾಗ ನಮ್ಮ ಸ್ಕೂಲ ಹತ್ರನ ಒಂದು ಸರ್ಕಾರಿ ಶಾಲಿ ಇತ್ತು. ಅಲ್ಲೆ ದಿನಾ ಮಧ್ಯಾಹ್ನ ಉಪ್ಪಿಟ್ಟ ಕೊಡತಿದ್ರು. ನಾನು ಮನಿಯಿಂದ ಒಯ್ದಿದ್ದ ನನ್ನ ಊಟದ್ದ ಡಬ್ಬಿನ ಸರ್ಕಾರಿ ಶಾಲಿಯೊಳಗಿನ ನನ್ನ ಗೆಳತಿಗೆ ಕೊಟ್ಟು, ಆಕಿ ಕಡೆ ಅಲ್ಲೆ ಕೊಡೊ ಉಪ್ಪಿಟ್ಟ ಇಸಕೊತಿದ್ದೆ. ಆ ಉಪ್ಪಿಟ್ಟ ಹೆಂಗಿರತಿತ್ತಂದ್ರ ಗೋಧಿಯ ದಪ್ಪ ಒಡಕಲಾ, ಅಂದ್ರ ಒಂದ ಗೋಧಿ ಕಾಳಿನ್ಯಾಗ ಎರಡು ತುಕಡಿ ಮಾಡಿದ್ದ ದಪ್ಪನ್ನ ರವಾ. ಅದರಾಗ ಒಂದ ತಟಗ ಎಣ್ಣಿನು ಇರತಿದ್ದಿಲ್ಲಾ. ಅಲ್ಲೊಂದ ಇಲ್ಲೊಂದ ಉಳ್ಳಾಗಡ್ಡಿ. ಟೊಮ್ಯಾಟೊ ಸಿಪ್ಪಿ ಕಾಣಿಸ್ತಿದ್ವು ಅಷ್ಟ. ಆದ್ರ ಅದರ ರುಚಿ ಇನ್ನು ತನಕಾ ಎಂಥಾ ತುಪ್ಪಾ ಹಾಕಿ ಮಾಡಿದ್ದ ಉಪ್ಪಿಟ್ಟನ್ಯಾಗ ಸುಧ್ಧಾ ಕಂಡಿಲ್ಲಾ. ಕೆಲವೊಂದಿಷ್ಟು ಅನುಭವಗಳಿರತಾವ ಅವು ಕೊಡೊ ಅನುಭೂತಿಯನ್ನ ಹೇಳಲಿಕ್ಕಾಗುದಿಲ್ಲಾ. ಸವಿ ಬಹುದಷ್ಟ. ಎಲ್ಲಾರ ಜೀವನದೊಳಗನು ಇಂಥಾವೊಂದಿಷ್ಟ ಸಂಗತಿಗಳಿರತಾವ ಅವು ಕೊಡೊ ತೃಪ್ತಿಯ ಅನುಭೂತಿ ಅವು ಮಾತ್ರ ಕೋಡಲಿಕ್ಕೆ ಸಾಧ್ಯ. ಹಿಂಗ ನನ್ನ ಜೀವನದೊಳಗನು ಇಂಥಾ ಕೇಲವೊಂದಿಷ್ಟು ಸಂಗತಿಗಳವ. ನಾವು ಸೂಟಿಗೆ ಊರಿಗೆ ಹೋದಾಗ ಹಬ್ಬ ಹುಣ್ಣಿಮಿ ಎನರೆ ಇದ್ರ ನಮ್ಮಜ್ಜಿ ಮಾಡೊ ಬುರುಬುರಿ (ಜೋಳದ ಹಿಟ್ಟು,ಅಕ್ಕಿ ಹಿಟ್ಟು,ಕಡ್ಲಿ ಹಿಟ್ಟು ಕಲಿಸಿ ಮಾಡಿದ ಭಜಿ) ರುಚಿ ಅಂತು ಮರಿಲಿಕ್ಕಾಗುದಿಲ್ಲಾ. ನಾವು ಬೇಕಾದಂಥಾ ದೊಡ್ಡ ದೊಡ್ಡ ಹೋಟೆಲ್‍ನ್ಯಾಗ ಹೋಗಿ ನೂರಾಎಂಟ ಸ್ಪೆಷಲ್ ಹೆಸರಿದ್ದ ಬ್ಯಾರೆ ಫ್ಲೇವರ್‍ದು ಐಸ್ ಕ್ರೀಮ್ ತಿಂದ್ರುನು, ಸಣ್ಣವರಿದ್ದಾಗ ಸ್ಕೂಲ್ ಹತ್ರ ಬರ್ಫನ ವಡಿಯನ್ನ ಹೆರೆದು ಮ್ಯಾಲೆ ಬಣ್ಣಾ ಹಾಕಿ ಕಡ್ಡಿಗೆ ಒತ್ತಿ ಕೊಡತಿದ್ದ ಆ ಐಸ್ ಕ್ಯಾಂಡಿ ತಿನ್ನೊಹೊತ್ತಿನ್ಯಾಗ ಇದ್ದ ಗಮ್ಮತ್ತು ಈಗೆಲ್ಲೆ ಬರತದ.
ಹುಣ್ಣಿವಿ ಮುಂದ ವಠಾರದಾಗಿನ ಎಲ್ಲಾ ಹುಡುಗುರು ಕೂಡೆ ಬೆಳದಿಂಗಳ ಪಂತಿ ಮಾಡತಿದ್ವಿ, ಅಂದ್ರ ಎಲ್ಲಾರು ತಮ್ಮ ತಮ್ಮ ಮನ್ಯಾಗಿನ ಅಡಗಿ ಬಡಸಿಕೊಂಡು ಬಂದು ಟೆರೇಸ್ ಮ್ಯಾಲೆ ಸುತ್ತಲೂ ಕೂತು ಊಟಾ ಮಾಡೊದು. ಎಷ್ಟ ಮಸ್ತ ಮಜಾ ಮಾಡತಿದ್ವಿ. ಆವಾಗಿನ ಆ ಖುಷಿ ಈಗಿನ ಯಾವ ಕ್ಯಾಂಡಲ್ ಲೈಟ್ ಡಿನ್ನರನ್ಯಾಗ ಆಗಲಿ ಅಥವಾ ಯಾವದೇ ಗಾರ್ಡನ್ ರೆಸ್ಟೊರೆಂಟ್‍ನ್ಯಾಗಾಗಲಿ ನಾ ಕಂಡಿಲ್ಲಾ.
ಇಂಥಾ ಎಷ್ಟೋ ವಿಷಯಗೊಳು ತಮ್ಮದೆ ಆದಂಥಾ ಒಂದು ಅನುಭವ ಹೊಂದಿರತಾವ. ನಾವು ಆಡೊ ಬಳ್ಚೂರು ಆಟಾ, ಗಿಡಮಂಗ್ಯಾ ಆಟಾ, ಜಾರಗುಂಡಿ ಮುಟ್ಟಾಟ, ಐಸ್ ಪೈಸ್, ಸರಬಡಗಿ ಆಟಾ, ಕಳ್ಳಾ-ಪೋಲಿಸ್ ಚೀಟಿ ಆಟಾ, ಲಡ್ಡು ಲಡ್ಡು ತಿಮ್ಮಯ್ಯ, ಇದ್ದಲಿನಿಂದ ಖಾನೆ ಕೊರದು ಹುಣಸಿಕೊಪ್ಪದಲೆ ಆಡೊ ಚಕ್ಕಾ ಆಟಾ, ಖೋಖೋ, ಕುಂಟಮುಟ್ಟಾಟಾ ಇವನ್ನೆಲ್ಲಾ ಎಲ್ಲಾರು ಕೂಡೆ ಆಡೊದ್ರಾಗ ಎಂಥಾ ಮಜಾ ಇರತದ. ಮತ್ತ ಇವು ಯಾವು ಒಬ್ಬರ ಆಡೋ ಆಟಗೊಳ ಅಲ್ಲೆ ಅಲ್ಲಾ. ಹಿಂಗಾಗಿ ಇವು ಸಣ್ಣಂದಿರತನ ನಮಗ ಸಂಘಜೀವಿಗಳಾಗಲಿಕ್ಕೆ, ಒಬ್ಬರಿಗೊಬ್ಬರ ಜೊಡಿ ಹೊಂದಕೊಂಡು ಸಹಕಾರ ಮನೋಭಾವನೆಗಳನ್ನ ಬೆಳಿಸಿಕೊಳ್ಳೊದ್ರೊಳಗ ಸಹಾಯ ಆಗತಿತ್ತು. ಆ ಗೆಳೆತನಾ, ಜಗಳಾ, ನಗು, ತುಂಟಾಟಾ ಆ ಹೊತ್ತಿನ್ಯಾಗ ಏನ ತೃಪ್ತಿಯಿಂದ ಅನುಭವಿಸಿದ್ವಿ. ಅದು ಮತ್ತೆಂದು ಸಿಗಲಿಕ್ಕೆ ಸಾಧ್ಯನ ಇಲ್ಲಾ. ಇವೆಲ್ಲಾ ಆಟಗೊಳೊಳಗ ಒಂದ್ಯಾವದರ ಆಟಾನ ಈಗಿನ ಹುಡುಗೊರು ಆಡೊದನ್ನ ಕಾಣುದಿಲ್ಲಾ. ಈಗಿನ ಹುಡುಗುರು ಮನ್ಯಾಗ ಒಬ್ಬರ ಕೂತು ವಿಡಿಯೋ ಗೇಮ್ ಆಡೊದು ಇಲ್ಲಂದ್ರ ಯಾವ್ದರ ಕಾರ್ಟೂನ್ ಚಾನಲ್ ನೋಡೊದ್ರಾಗ ಇರತಾರ. ಹಿಂಗಾಗಿ ಅವರಲ್ಲೆ ಸಂವಹನಶೀಲತೆನ ಕಡಿಮಿ ಆಗೇದ.
ಮತ್ತ ಗೆಳತಿಯರ ಜೋತಿ ಆ ಹರಟಿ ನೆನಿಸಿಕೊಂಡ್ರಂತು ಇಗ ಭಾಳ ಮಜಾ ಅನಿಸ್ತದ. ಅದೇನ ಮಾತಾಡ್ತಿದ್ವಿನೊ ಏನೊ, ಒಂದೊಂದ ಸಲಾ ಮನಿಗೆ ಬಂದ ಗೆಳತಿನ್ನ ಅರ್ಧಾದಾರಿ ತನಕಾ ಕಳಿಸಿ ಬರಲಿಕ್ಕೆ ಅಂತ ಹೋಗಿ ಮಾತಿನ ಗದ್ದಲದಾಗ ಪೂರ್ತಿ ಅವರ ಮನಿ ತನಕಾನ ಹೋಗಿರತಿದ್ದೆ. ಮತ್ತ ಆಕಿ ನನ್ನ ಕಳಸಲಿಕ್ಕೆ ಅಂತ ನಮ್ಮ ಮನಿ ಸಮೀಪಕ್ಕ ಬಂದಿರತಿದ್ಲು. ಈಗೆಲ್ಲ ನೆನಿಸಿದ ಕೂಡಲೆ ನಮಗ ಬೇಕಾದವರ ಜೋಡಿ ಮೊಬೈಲ್‍ನ್ಯಾಗ ತಾಸಗಟ್ಟಲೆ ಹರಟಿಹೊಡಿತಿವಿ, ಮೆಸೇಜ್ ಮಾಡತಿವಿ, ಆದ್ರ ಗೆಳತಿಯ ಹೆಗಲಮ್ಯಾಲೆ ಕೈ ಹಾಕಿ ಮಾತಾಡಕೊತ ಕಳೆದ ಆ ಕ್ಷಣಗಳು ಮತ್ತೆಂದು ಸಿಗಲಿಕ್ಕೆ ಸಾಧ್ಯ ಇಲ್ಲಾ.
ಮಧ್ಯಾಹ್ನ ಎಲ್ಲಾರು ಮಲಕೊಂಡಾಗ ಮಂದಿ ಮನಿ ಕುಂಬಿ ಕುಂಬಿ ಜಿಗಿದು ಗಿಡಾ ಹತ್ತಿ ಮಾವಿನಕಾಯಿ, ನೆಲ್ಲಿ ಕಾಯಿ, ಕಳು ಮಾಡಕೊಂಡ ಬರೊದು. ಎಲ್ಲಾರು ಕೂಡೆ ಮನ್ಯಾಗ ಗೊತ್ತಾಗಲಾರಧಂಗ ಹುಣಸೆ ಹಣ್ಣು ಖಾರಾ ಉಪ್ಪು ತಂದು ಹಿತ್ತಲದಾಗ ಒಗೆಯೊ ಕಟ್ಟಿ ಮ್ಯಾಲೆ ಹಾಕಿ ಚಿಗಳಿ ಕುಟ್ಟಿ ಖಡ್ಡಿಗೆ ಹಚಕೊಂಡ ತಿನ್ನೊದನ್ನ ನೆನಿಸಿಕೊಂಡ್ರಂತು ಈಗನೂ ಬಾಯಾಗ ನೀರು ಬರತಾವ. ಆವಾಗ ಕದ್ದು ತಿಂದ ಆ ಮಜಾ ಈಗಿನ ಯಾವ ಚಾಟ್ ಸೆಂಟರಿಗೆ ಹೊದ್ರು ಸಿಗುದಿಲ್ಲಾ ಅನಿಸ್ತದ. ಕಾಲೇಜಿನ ದಿನಗಳೊಳಗ ಕ್ಲಾಸ್ ಬಂಕ್ ಮಾಡಿ ಸಿನೇಮಾಕ್ಕ ಹೋಗಿೊ, ಮನ್ಯಾಗ ಗೊತ್ತಾಗಿ ಬೈಸ್ಕೊಂಡಿದ್ದು, ಸುರಿಯೋ ಮಳಿಯೊಳಗ ಐಸ್ ಕ್ರೀಮ ತಿನ್ನಕೊತ ರೋಡಿನ ತುಂಬ ಎಂಜಾಯ್ ಮಾಡಕೋತ ಹೋದಂಥಾ ಆ ದಿನಗಳು ಈ ಜನ್ಮದಾಗ ಮತ್ತ ಸಿಗಲಿಕ್ಕೆ ಸಾಧ್ಯ ಇಲ್ಲಾ. ರೋಡಿನ್ಯಾಗ ನಮ್ಮ ಧಾಂಧಲೆ ನೋಡಿ ಗಾಡಿಮ್ಯಾಲೆ ಹೋಗೊ ಮಂದಿ ಎಲ್ಲ ಬೈಕೋತ ಹೊಗತಿದ್ರು. ಇಗ ಯಾರರ ಸ್ವಲ್ಪ ಎನರೆ ಅಂದ್ರ ಅವಮಾನ ಆಗತದ, ನೋವಾಗತದ ಆದ್ರ ಆ ದಿನಗಳೊಳಗ ಯಾರ ಬೈದ್ರು ಎನು ಅನ್ನಿಸ್ತಿರಲೆಯಿಲ್ಲಾ. ನಮ್ಮ ಲಹರಿಯೊಳಗ ನಾವ ಇರತಿದ್ವಿ.
ನಾನು ನೌಕರಿಗೆ ಸೇರಿದಾಗಿಂದ ಒಂದ ಸಂಗತಿ ಭಾಳ ಅನುಭವಕ್ಕ ಬಂದದ ಅದೇನಂದ್ರ, ಈ ವಾರದ ಕೊನೆ ಅಂದ್ರ ಶನಿವಾರದ ಸಂಜಿಮುಂದ ಆಫೀಸ್ ಮುಗಿಸಿ ಮನಿಗೆ ಬರೊಬೇಕಾದ್ರ ಮರುದಿನಾ ರವಿವಾರ ಸೂಟಿ ಅಂತ ನೆನಪಾಗಿ ಎಷ್ಟ ನಿರಾಳ-ಆರಾಮ ಮನಸ್ಥಿತಿ ಇರತದಲ್ಲ ಅದು ನಾವ ತಿಂಗಳಾನಗಟ್ಟಲೆ ರಜಾ ಹಾಕಿ ಮನ್ಯಾಗ ಇದ್ರುನು ಸಿಗೂದಿಲ್ಲಾ. ಶನಿವಾರದ ಸಂಜೆ ತರುವ ಆ ನೆಮ್ಮದಿಯ ಭಾವನೆಯನ್ನ ಶನಿವಾರ ಮಾತ್ರ ಕೊಡಲಿಕ್ಕೆ ಸಾಧ್ಯ ಅದ.
ರವಿವಾರ ಅಂದಕೂಡಲೆ ಇನ್ನೊಂದು ನೆನಪಾಗೊದು ಅಂದ್ರ ಮುಂಝಾನೆ ಎಂಟ ಗಂಟೆಕ್ಕ ಡಿಡಿ-೧ ಚಾನಲ್‍ನ್ಯಾಗ ಬರೋ ರಂಗೋಲಿ ಕಾರ್ಯಕ್ರಮ. ನಾವ ದಿನಾ ಇಪ್ಪತ್ತನಾಲ್ಕ ತಾಸು ಬೇಕಾದಷ್ಟ ಮ್ಯೂಸಿಕ್ ಚಾನಲ್ ನೋಡತೇವಿ ಆದ್ರ ರವಿವಾರ ದಿನಾ ಮುಂಝಾನೆ ಲೋಟದ ತುಂಬ ಬಿಸಿ ಚಹಾ ಕುಡಕೊತ ರಂಗೋಲಿ ಕಾರ್ಯಕ್ರಮದೊಳಗ ಬರೊ ಹಳೆಯ ಹಾಡುಗಳನ್ನ ನೋಡೊದ್ರೊಳಗ ಇರೊ ಮಜಾನ ಬ್ಯಾರೆ ಇರತದ. ಚಂದದ ಹಾಡುಗಳಿಂದ ಶುರುವಾದ ರವಿವಾರದ ಇಡಿ ದಿನಾ ಆರಾಮಾಗಿ ಕಳೆಯೊ ಹಂಗ ಮಾಡತದ. ಮೊದಲ ಮಳಿ ಬಂದಾಗ ಹರಡೊ ಹಸಿಮಣ್ಣಿನ ವಾಸನೆಯ ಅಮಲನ್ನ ಸುರಿಯೋ ಮಳಿಗೆ ಮಾತ್ರ ಹೆಂಗ ಸಾಧ್ಯನೊ ಹಂಗ ಜೀವನಾದಾಗ ಕೆಲವೊಂದಿಷ್ಟು ಅನುಭವಗಳಿಗೆ ತಮ್ಮದ ಆದಂಥಾ ಒಂದು ಅನುಭೂತಿಯನ್ನ ಕೊಡೋ ಅಂಥಾ ಶಕ್ತಿ ಇರತದ. ಅದನ್ನ ಅವುಗಳೆ ಮಾತ್ರ ಕೊಡಲಿಕ್ಕೆ ಸಾಧ್ಯ ಅದ.
ಪಾರ್ಕಿನ್ಯಾಗ ಕೂತು ನೆನಪಿನ ಲಹರಿಯೊಳಗ ತೇಲಿಹೋಗಿದ್ದ ನನ್ನನ್ನ ಪಾರ್ಕಿನ ವಾಚಮನ್ ಬಂದು "ಪಾರ್ಕಿನ ಗೇಟ್ ಹಾಕೊ ಟೈಮ್ ಆತರಿ ಅಕ್ಕಾರ" ಅಂತ ಹೇಳಿದಾಗ ಮತ್ತ ಇಹಲೋಕಕ್ಕ ವಾಪಸ ಬಂದು ಸೂತ್ತಲು ನೋಡಿದಾಗ ಆಗಲೆ ಸಂಜಿ ಸರದು ಮೂರುಸಂಜಿಯ ಮಬ್ಬಗತ್ತಲು ಹರಡಲಿಕತ್ತಿತ್ತು. ಎಲ್ಲಾರು ಸವಕಾಶ ಮನಿಕಡೆ ಹೆಜ್ಜಿ ಹಾಕಲಿಕತ್ತಿದ್ರು. ನೆನಪುಗಳ ತಂಗಾಳಿಯಿಂದ ಮನಸ್ಸು ಹವರಗ ಆಗಿತ್ತು. ಜೀವನದ ಮುಸ್ಸಂಜೆಯೊಳಗ ಹಳೆಯ ನೆನಪುಗಳಿಂದ ಉಸಿರಾಡತಾ ನಗುವ ಹಿರಿಯ ಜೀವಗಳನ್ನ ನೋಡಿ ಮನಸು ತುಂಬಿ ಬಂದಿತ್ತು. ಟಿವ್ಹಿಯೊಳಗ ತೋರಿಸೊ ಜಾಹಿರಾತಿನ "ನಾ ವೊಹ ದಿನ ಲೌಟಾಯೆಂಗೆ, ನಾ ವೊಹ ಖಾಲಿ ಸಡಕೆ" ಅನ್ನೊ ಸಾಲುಗಳು ನೆನಪಾಗಲಿಕತ್ತಿದ್ವು.
balyakke hogi banda hage ayitu
ಮನಿಶಾಗ ತಿರಗಿ ಯಾವಾಗಲೂ ಸಿಗಲಾರದ್ದು ಅಂದ್ರ ಬಾಲ್ಯ
ಸುಡ್ಲಿ ಅದರ ನೆನಪು ಎಂದೂ ಸಾಯೋದ ಇಲ್ಲ..ನಾನೂ ಕೂಡ ಈ "ಬಾಲ್ಯವ್ಯಾಧಿ" ಪೀಡಿತನ ಇದ್ದೇನಿ..!!