ಪ್ರಚಾರ ಅನ್ನೋದು ಯಾರಿಗೆ ಬೇಡ ಹೇಳಿ ? ಯಾರಿಗೂ ಒಂದು ಜೊತೆ ಬಟ್ಟೆ ಕೊಟ್ಟಿದ್ರಿಂದ ಹಿಡಿದು ಮತ್ಯಾರಿಗೋ ಐದು ರೂಪಾಯಿ ದಾನ ಮಾಡಿದವರೆಗೆ ನಿತ್ಯದ ತಿಂದುಂಡು ಮಲಗೋದ್ರ ಹೊರತಾಗಿ ಮಾಡಿದ ಒಳ್ಳೇ ಕೆಲ್ಸಗಳನ್ನ ನಾಲ್ಕು ಜನರೊಂದಿಗೆ ಹಂಚಿಕೋಬೇಕು ಅನ್ನೋ ಹಂಬಲ ನಮಗೆ. ಅದನ್ನ ಮಾಡಿದೆ, ಇದನ್ನ ಮಾಡಿದೆ ಹೇಳಿಕೊಳ್ಳೋ ಮೂಲಕ ಬೇರೆಯವ್ರ ದೃಷ್ಟಿಯಲ್ಲೊಂದು ಒಳ್ಳೇ ಸ್ಥಾನ ಪಡೆಯೋದು ಸಾಮಾನ್ಯರ ಬಯಕೆಯಾದ್ರೆ ಏನೆಲ್ಲಾ ಮಾಡ್ತಿದ್ರೂ ಯಾರ ಕಣ್ಣಿಗೂ ಬೀಳದೇ ತಣ್ಣಗಿದ್ದು ಬಿಡೋ ಜನಗಳದ್ದು ಮತ್ತೊಂದು ಗುಂಪು. ತಮ್ಮ ಜೀವನವನ್ನೇ ಜನಸೇವೆಗೆಂದು ಮೀಸಲಿಟ್ಟ ಜನನಾಯಕರಲ್ಲ ಇವರು. ಸಮಾಜಸೇವೆಯೇ ಇವರ ಮೂರು ಹೊತ್ತಿನ ಕೆಲಸವೂ ಅಲ್ಲ. ಸಾಮಾನ್ಯ ಸಮಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರೇ ಆಗಿರೋ ಇವರು ಸಮಾಜದಲ್ಲಿ ಏನೋ ಸರಿಯಿಲ್ಲವೆಂದಾಗ ಸರಿಪಡಿಸೋಕೆ, ಉಳಿದವರಿಗೆ ನೆರವಾಗೋಕೆ ನಿಂತಕಾಲಲ್ಲಿ ಹೊರಟುನಿಲ್ತಾರೆ. ತಮ್ಮದೇ ರೀತಿಯಲ್ಲಿ ಯಾವುದೇ ಅಬ್ಬರದ ಪ್ರಚಾರ, ಸದ್ದುಗದ್ದಲಗಳಿಲ್ಲದ ಸಮಾಜಸೇವೆಗೆ ಮುಂದಾಗ್ತಾರೆ. ಅಂತಹವರಿಗೊಂದು ಸಲಾಮೆನ್ನೋದೇ ಈ ಲೇಖನದ ಉದ್ದೇಶ.
ಭದ್ರಾವತಿಯ ನೀರ ಸಂಘ:
ನೆನಪುಗಳ ಪಯಣದಲ್ಲಿ ಕೊಂಚ ಹಿಂದೆ ಜಾರೋಣ..ಈ ಸಲದ ಬೇಸಿಗೆ ಮಲೆನಾಡ ನಗರಿ ಶಿವಮೊಗ್ಗವನ್ನೂ ಬಿಟ್ಟಿರದ ಸಮಯ. ತಾಪ ನಲ್ವತ್ತು ದಾಟಿತಾ ಅನ್ನೋ ಆತಂಕದಲ್ಲಿ , ಸುಡೋ ಬಿಸಿಲಲ್ಲಿ ಬೆಳಗಿನ ಬಸ್ಸ ಪಯಣವೇ ಬೇಡವೆನಿಸೋ ಸಂದರ್ಭ. ಶಿವಮೊಗ್ಗೆಯಿಂದ ಬೀರೂರು, ಕಡೂರು, ಬೆಂಗಳೂರು ಹೀಗೆ ಬರೋ ಬಸ್ಸುಗಳೆಲ್ಲಾ ಉಕ್ಕಿನ ನಗರಿ ಭದ್ರಾವತಿಯನ್ನು ದಾಟೇ ಮುಂದೆ ಬರಬೇಕು. ಶಿವಮೊಗ್ಗೆಯಲ್ಲಿ ಬಸ್ ಹತ್ತಿದ ಕೆಲ ಹೊತ್ತಿನಲ್ಲೇ ತಂದ ನೀರ ಬಾಟಲಿ ಬಿರಡೆ ಬಿಚ್ಚಾಗಿತ್ತು. ಇದೇ ಸೆಖೆಯ ಹಾದಿ ಮುಂದುವರೆದ್ರೆ ಬೆಂದಕಾಳೂರವರೆಗೆ ಮುಟ್ಟೊದು ಹೇಗಪ್ಪಾ ಅನಿಸಿತ್ತು. ಭದ್ರಾವತಿಯ ಬಸ್ಟಾಂಡಿಗೆ ಬಂದು ನಿಂತಾಗೊಂದು ಅಚ್ಚರಿಯೆನಗೆ. ಬಸ್ಸ ಕಿಟಕಿಯಲ್ಲಿ ಒಂದು ನೀರಿನ ಲೋಟ ಹಿಡಿದ ವಯಸ್ಕರೊಬ್ಬರು ನೀರು ಬೇಕಾ ಸಾರ್ ? ನೀರು ಅಂದ್ರು . ಬಾಟಲಿಯಲ್ಲಿ ನೀರು ಮಾರೋದು ಗೊತ್ತಿತ್ತು. ಈಗ ಲೋಟದಲ್ಲೂ ನೀರು ಮಾರೋ ಪರಿಸ್ಥಿತಿ ಬಂತೇ ವಿಧಿಯೇ ಅಂತ ಅಂದ್ಕೋತಾ ಇದ್ದೆ. ಅಷ್ಟರಲ್ಲಿ ನನ್ನ ಮನಸ್ಸನ್ನೋದಿದಂತೆ ಕಂಡ ಆ ಹಿರಿಯರು, ಫ್ರೀ ನೀರು ಸಾರ್ .ಬಾಟ್ಲಿಗೆ ಬೇಕಾದ್ರೆ ತುಂಬಿಸ್ಕೊಳ್ಳಿ ಅಂತ ಮುಗುಳ್ನಕ್ರು. ಈ ತರ ನೀರ ಸೇವೆಯ ಬಗ್ಗೆ ಕೇಳಿಯೂ ಇರದಿದ್ದ ನನಗೆ ಒಂಥರಾ ಅಚ್ಚರಿಭರಿತ ಖುಷಿ. ಆ ಬಿರುಬೇಸಿಗೆಯಲ್ಲಿ ಸಿಕ್ಕ ತಂಪಾದ ನೀರು ನಿಜಕ್ಕೂ ಅಮೃತ ಅಂತೇನಾದ್ರೂ ಇದ್ದಿದ್ರೆ ಅದು ಹೀಗೇ ಇರುತ್ತಿತ್ತೇನೋ ಅನಿಸಿಬಿಟ್ತು. ಸುತ್ತ ಕಣ್ಣು ಹಾಯಿಸಿದ್ರೆ ಅವರಂತಹ ಎಂಟತ್ತು ಸ್ವಯಂಸೇವಕರು ಬಸ್ಸುಗಳ ಬಳಿ ತೆರಳಿ ನೀರು ಹಂಚುತ್ತಿದ್ರು. ಅಂದ ಹಾಗೆ ಇವರದ್ದು ಬೋರ್ಡು,ಶಾಮಿಯಾನ , ಭಜಂತ್ರಿಗಳ ಪ್ರಚಾರವಿಲ್ಲ. ನಾವು ಉಚಿತವಾಗಿ ನೀರು ಹಂಚುತ್ತಿದ್ದೇವೆ ಅಂತ ಯಾವ ಪತ್ರಿಕೆಯಲ್ಲೂ ಬರೆಸಿಕೊಂಡದ್ದು ಕಾಣೆ. ವಾರದ ಯಾವ್ಯಾವ ದಿನ ಯಾರ್ಯಾರು ಫ್ರೀ ಇರ್ತಾರೋ ಅವ್ರವ್ರು ಬಂದು ಹೀಗೆ ಫ್ರೀಯಾಗಿ ನೀರು ಹಂಚೋ ಕೆಲ್ಸದಲ್ಲಿ ತಮ್ಮನ್ನ ತೊಡಗಿಸಿಕೊಳ್ತಿದ್ರಂತೆ. ಅದರಲ್ಲಿ ಹುಡುಗ ಹುಡುಗಿಯರಿದ್ರು, ಅಜ್ಜ-ಅಜ್ಜಿಯರಿಂದ್ರು, ವಯಸ್ಕರಿದ್ರು. ಪುಟಾಣಿಯರಿದ್ರು. ಒಟ್ನಲ್ಲಿ ಬಸ್ಸಲ್ಲಿ ಪಯಣಿಸೋ ಪಯಣಿಗರ ಎಲ್ಲಾ ಕೆಟಗರಿಗಳವರೂ ಹೊರಗೆ ನೀರ ಹಂಚ್ತಾ ಇದ್ರು! ಇದು ಒಂದಿನವಲ್ಲ. ಇದೇ ಮಾರ್ಗದಲ್ಲಿ ಎರಡು ಮೂರು ಬೇಸಿಗೆಯ ಪಯಣಗಳಲ್ಲಿ ಕಂಡು ಹೆಮ್ಮೆಪಟ್ಟ ದೃಶ್ಯ. ನಿಧಾನವಾಗಿ ತಿಳಿದ ಸಂಗತಿಯೆಂದ್ರೆ ಇವರೆಲ್ಲಾ ಭದ್ರಾವತಿಯ ಶ್ರೀ ಸತ್ಯಸಾಯಿ ಸಂಘದವರೆಂದು. ನಿತ್ಯವೂ ಎಲ್ಲಿಂದಲೋ ಡ್ರಮ್ಮುಗಟ್ಟಲೇ ನೀರು ತಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಬಸ್ಟಾಂಡಿನಲ್ಲಿ ನಿಂತು ಬಾಯಾರಿದವರಿಗೆ ನೆರವಾಗ್ತಿರೋ, ನಯಾಪೈಸೆ ಧನ್ಯವಾದವನ್ನೂ ಬಯಸದ, ಥ್ಯಾಂಕ್ಸು,ಸಖತ್ ಒಳ್ಳೆ ಕೆಲ್ಸ ಮಾಡ್ತಿದೀರ ಅಂದ್ರೂ ಮುಗುಳ್ನಕ್ಕು ಮುಂದಿನವರಿಗೆ ನೀರ ಹಂಚೋಕೆ ಮುಂದಾಗೋ ಇವರ ನೆನಪು ಬೇಸಿಗೆ ಅಂದಾಗೆಲ್ಲಾ ಬರದೇ ಇರಲ್ಲ. ಸುದ್ದಿಗೇ ಬರದ ಮಂದಿ ಅಂದಾಗ ಮುಂಚೂಣಿಯಲ್ಲಿ ಬರೆಯದಂತೆ ಇರೋಕೂ ಬಿಡಲ್ಲ.
ನಾರ್ಮಲ್ ಬಸ್ಸು ಕೇಳೋ ನವೀನ್ ಕುಮಾರ್:
ಬೆಂಗಳೂರಲ್ಲಿ ಈ ಐ.ಟಿ.ಪಿ.ಎಲ್, ಎಲೆಕ್ಟ್ರಾನಿಕ್ ಸಿಟಿಗಳ ಹೆಸರು ಕೇಳದ ಜನ ಕಮ್ಮೀನೆ ಅಂದ್ಕೋತೀನಿ. ವಿಪರೀತ ಟ್ರಾಫಿಕ್ ಜ್ಯಾಮುಗಳು ಗೂಡು, ಟೆಕ್ಕಿಗಳ ಬೀಡು ಹೀಗೆ ಹಲವು ಹೆಸರಲ್ಲಿ ಕರೆಯಲ್ಪಡೋ ಈ ಜಾಗಗಳಲ್ಲಿ ಐ.ಟಿ.ಪಿ.ಎಲ್ಗೊಂದು ಕುಖ್ಯಾತಿ. ಮಾರತ್ತಳ್ಳಿಯಿಂದ ಐ.ಟಿ.ಪಿ.ಎಲ್ ವರರೆಗಿನ ಒಂಭತ್ತು ಕಿಲೋಮೀಟರ್ಗಳ ದಾರಿಯಲ್ಲಿ ವೋಲ್ವೋಗಳದ್ದೇ ಕಾರ್ಬಾರು, ಒಂದು ಸಾಮಾನ್ಯ ಬಸ್ಸಿಗಾಗಿ ಹದಿನೈದು ನಿಮಿಷ ಕಾದ್ರೂ ಸಿಗದಿದ್ದ ಪರಿಸ್ಥಿತಿಯಲ್ಲಿ ಹತ್ತು ವೋಲ್ವೋ ಬಸ್ಸುಗಳು ಒಂದರ ಹಿಂದೆ ಒಂದರಂತೆ ಹೋಗಿ ಹೊಟ್ಟೆ ಉರಿಸ್ತವೆ ! ಖಾಲಿ ಖಾಲಿ ವೋಲ್ವೋಗಳು ಒಂದ್ರ ಹಿಂದೆ ಒಂದರಂತೆ ಹೋಗ್ತಾ ಇದ್ರೂ ತಲೆಕೆಡಿಸಿಕೊಳ್ಳದ ಬಿ,ಎಂ.ಟಿ.ಸಿ ಅವುಗಳ ಬದ್ಲು ತುಂಬಿ ತುಳುಕೋ ಸಾಮಾನ್ಯ ಬಸ್ಸುಗಳನ್ನ ಯಾಕೆ ಹೆಚ್ಚಿಸಲ್ಲ ಅನ್ನೋದು ಎಲ್ಲರ ಯೋಚನೆ. ಈ ರಸ್ತೆಯಲ್ಲಿ ತುಂಬಿರೋ ಕಂಪೆನಿಗಳಿಗಾಗಿ ಟೆಕ್ಕಿಗಳೇ ಹೆಚ್ಚು ಈ ರಸ್ತೆಯಲ್ಲಿ ಓಡಾಡ್ತಾರೆ ಅಂದುಕೊಂಡ್ರೂ ಇದೇ ರಸ್ತೆಯಲ್ಲಿರೋ ಸಾಯಿಬಾಬಾ ಆಸ್ಪತ್ರೆಗೆ , ವೈದೇಹಿ ಆಸ್ಪತ್ರೆಗೆ ಬರೋ ಎಷ್ಟೊ ಬಡವರು, ಸಿಎಂಆರ್ ಐಟಿ ಕಾಲೇಜಿಗೆ ಬರೋ ವಿದ್ಯಾರ್ಥಿಗಳು, ಕುಂದಲಹಳ್ಳಿ ಗೇಟು, ಕಾಲೋನಿಯ ಬಳಿ ಇರೋ ಮೂಲ ಸಾಮಾನ್ಯ ಜನರು.. ಹೀಗೆ ಸಾಮಾನ್ಯ ಬಸ್ಸುಗಳಿಗಾಗಿ ಕಾದು ಕಾದು ಹೈರಾಣಾಗೋ ನೂರಾರು ಜನ ದಿನನಿತ್ಯ. ಆದ್ರೆ ದಿನನಿತ್ಯ ಇದ್ರ ಬಗ್ಗೆ ಗೊಣಗಿ ಸುಮ್ಮನಾಗುವವರ ಮಧ್ಯ ವಿಭಿನ್ನವಾಗಿ ಎದ್ದು ನಿಲ್ಲುವವರು ನವೀನ್ ಕುಮಾರ್ ಹಿದಾಯತ್. ಕಳೆದ ತಿಂಗಳಿಂದ ಪ್ರತಿನಿತ್ಯ ಇವರು ಈ ರಸ್ತೆಯಲ್ಲಿ ಸಾಮಾನ್ಯ ಬಸ್ಸುಗಳ ಹೆಚ್ಚಿಸುವಂತೆ ಬಿ.ಎಂ.ಟಿ.ಸಿಗೆ ಪೋಸ್ಟ್ ಕಾರ್ಡು ಬರೆದಿದ್ದಾರೆ. ಇನ್ನೂ ಬರೆಯುತ್ತಿದ್ದಾರೆ. ಬಿಂ.ಎಂಟಿಸಿಯ ಮ್ಯಾನೇಜರನ್ನ ಭೇಟಿಯಾಗೋ ವಿಫಲ ಪ್ರಯತ್ನದಿಂದ ಕಿಂಚಿತ್ತೂ ಕಂಗೆಡದ ಇವ್ರು ರಸ್ತೆಯೊಂದಕ್ಕೆ ಯಾವ ಬಸ್ಸು ಬಿಡಬೇಕು ಅಂತ ಬಿಂ,ಎಂ.ಟಿ.ಸಿ ಹೇಗೆ ನಿರ್ಧರಿಸತ್ತೆ ? ಈ ರಸ್ತೆಯಲ್ಲಿ ಯಾಕೆ ವೋಲ್ವೋಗಳೇ ಹೆಚ್ಚಿವೆ ಅಂತ ವೈಜ್ನಾನಿಕ ಮಾಹಿತಿಯನ್ನ ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಪಡೆಯೋ ಪ್ರಯತ್ನ ನಡೆಸಿದ್ದಾರೆ. ಯಾವ ಕಡೆ ಯಾವ ಬಸ್ಸು ಬಿಡಬೇಕು ಅಂತ ಯಾವ ಸರ್ವೆಯನ್ನು ನಡೆಸದೇ ಸುಮ್ನೆ ಒಂದು ಅಂದಾಜಿನ ಮೇಲೆ ನಡೆದುಕೊಳ್ಳೋ ಜನರನ್ನ ಕಂಡ್ರೆ ಬೇಜಾರಾಗೋಲ್ವ ? ಸರಿ . ತಪ್ಪೇನೋ ಆಗ್ತಾ ಇದೆ. ಅದ್ನ ಸರಿಪಡಿಸೋದು ಹೇಗೆ ? ನಮ್ಗೆ ಹೆಚ್ಚು ಸಾಮಾನ್ಯ ಬಸ್ಸು ಬೇಕು ಅಂತ ಅರ್ಥ ಮಾಡಿಸೋದು ಹೇಗೆ ಅಂತ ತಲೆಕೆಡಿಸಿಕೊಳ್ಳುತ್ತಿದ್ದ ಇವರ ಪತ್ರಗಳಿಗೆ ಕೊನೆಗೂ ಒಂದು ಉತ್ತರ ಸಿಕ್ಕಿತ್ತು. ಬಸ್ಸುಗಳನ್ನ ನಿರ್ಧರಿಸೋದು ಜನಾಭಿಪ್ರಾಯದ ಮೇಲೆ ಅಂತ. ಸರಿ ಎಂದು, ಇವ್ರು ಈಗ ನಿತ್ಯ ಸಾಮಾನ್ಯ ಬಸ್ಸುಗಳಲ್ಲಿ ಸಂಚರಿಸುವವರಲ್ಲಿ ಹೆಚ್ಚಿನ ಸಾಮಾನ್ಯ ಬಸ್ಸುಗಳ ಅಭಿಯಾನದ ಬಗ್ಗೆ ತಿಳಿಸಿ, ಅದಕ್ಕೆ ಬೆಂಬಲವಾಗಿ ಸಹಿ ಸಂಗ್ರಹಿಸೋ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ನಿತ್ಯ ತಮ್ಮ ನಿವಾಸ ಬಿ.ಇ.ಎಂ.ಎಲ್ ಲೇಔಟಿನಿಂದ ಐ.ಟಿ.ಪಿ.ಎಲ್ವರೆಗೆ ಸಾಮಾನ್ಯ ಬಸ್ಸಿನಲ್ಲಿ ಸಾಗಿ ಜನರ ಸಹಿ ಸಂಗ್ರಹಿಸುತ್ತಾರಿವರು. ಸದ್ಯದಲ್ಲೇ ಸಾರಿಗೆ ಮಂತ್ರಿಯವರನ್ನು ಭೇಟಿ ಮಾಡುವ ಇರಾದೆಯಲ್ಲಿರುವ ಇವರಿಗೆ ಎಷ್ಟು ಸಹಿ ಸಂಗ್ರಹಿಸೋ ಬಯಕೆ ಇದೆ ಅಂತ ಕೇಳಿದರೆ ತಮ್ಮ ಮುಂದಿನ ಯೋಚನೆಗಳ ಬಗ್ಗೆ ಮಾತ ಹರಿಯಬಿಡುತ್ತಾರೆ. ಬಿಂ.ಎಂ.ಟಿ.ಸಿಯ ಮ್ಯಾನೇಜರ್ ಭೇಟಿ ಯಾವತ್ತು ಆಗತ್ತೋ ಗೊತ್ತಿಲ್ಲ. ಮಂತ್ರಿಗಳ ಭೇಟಿಗೂ ನಡೆಸುತ್ತಿರೋ ಪ್ರಯತ್ನ ಸದ್ಯವೇ ಈಡೇರೀತೆಂಬ ಬಯಕೆ. ಅಲ್ಲಿಯವರೆಗೆ ಎಷ್ಟು ಸಾಧ್ಯವೋ ಅಷ್ಟು ಸಹಿ ಸಂಗ್ರಹಿಸೋ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಒಬ್ಬ ಕಾನೂನ ತಜ್ನರನ್ನೂ ಭೇಟಿಯಾಗಿದ್ದಾರಂತೆ. ಮಾಹಿತಿ ಹಕ್ಕನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಬೇಕು ಇದಕ್ಕೆ ಅನ್ನೋ ಮಾಹಿತಿ ಪಡೆಯೋಕೆ. ಮರ್ಸಿಡಿಸ್ ಫೋರ್ಡಿನಲ್ಲಿ ಕೆಲಸ ಮಾಡೊ ಇವರಿಗೆ ಯಾವ ಬಡವರು ಸಾಮಾನ್ಯ ಬಸ್ಸಿಗಾಗಿ ಕಾದರೆ ಏನಂತೆ , ಸರ್ಕಾರಕ್ಕೆ ಸಿಗೋ ನೂರೆಂಟು ಶಾಪಗಳಲ್ಲಿ ಒಂದೆರಡು ಹೆಚ್ಚಾದರೇನಂತೆ ? ಏನೂ ವ್ಯತ್ಯಾಸವಾಗ್ತಿರಲಿಲ್ಲ ಅಲ್ವಾ ? ತಮ್ಮ ಪಾಡಿಗೆ ತಾವಿದ್ದುಬಿಡೋ ಬದಲು ಸಮಾಜಕ್ಕೊಂದು ಕೊಡುಗೆ ಕೊಡಲು ಸದ್ದಿಲ್ಲದೇ ಮುಂದಾಗಿರೋ ಇವರು ಬಯಸಿದ್ರೆ ದಿನಪತ್ರಿಕೇಲಿ ಮುಖಪುಟದ ಸುದ್ದಿಯಾಗಬಹುದಿತ್ತು. ಯಾವುದೋ ರಾಜಕೀಯ ಪಕ್ಷದ ಜೈಕಾರಕ್ಕೆ, ಹಾರ ತುರಾಯಿಗಳಿಗೆ, ಪ್ರಶಸ್ತಿ ಪುರಸ್ಕಾರಗಳಿಗೆ ಅರ್ಜಿ ಗುಜರಾಯಿಸಬಹುದಿತ್ತು. ಆದ್ರೆ ಅದ್ಯಾವುದರ ಗೊಡವೆಗೂ ಹೋಗದೇ ತಣ್ಣಗೆ ತಮ್ಮ ಕೆಲ್ಸ ಮಾಡ್ತಿರೋ ಇವರನ್ನು ಅಚಾನಕ್ಕಾಗಿ ಭೇಟಿ ಮಾಡಿದ ಕ್ಷಣಗಳು ಪ್ರಚಾರ ಅಂದಾಕ್ಷಣ ನೆನಪಾಗಿ ಅಣಕಿಸದೇ ಇರಲ್ಲ. ಇಂಥ ನಿಸ್ವಾರ್ಥ ತೆರೆಮರೆ ಸೇವಕರಿಗೆ ಒಮ್ಮೆಯಾದ್ರೂ ಹ್ಯಾಟ್ಸಾಫ್ ಅನ್ನದೇ ಇರಕ್ಕಾಗಲ್ಲ.
ಕೊನೆ ಹನಿ: ನಿಸ್ವಾರ್ಥತೆ ಅನ್ನೋದು ಯಾರೊಬ್ಬರ ಸ್ವತ್ತಲ್ಲ. ನಿಸ್ವಾರ್ಥತೆ ಅಂದ್ರೆ ತನ್ನದೆಲ್ಲವನ್ನೂ ಕೊಟ್ಟುಬಿಡೋದು ಅಥವಾ ಇನ್ನೊಬ್ಬರಿಗಾಗಿ ತನ್ನ ಕೆಲಸವನ್ನು ಬಿಟ್ಟು ಸಹಾಯ ಮಾಡೋದು ಅಂತನೂ ಅಲ್ಲ. ಮಾಡೋ ನಿತ್ಯದ ಕೆಲ್ಸದಲ್ಲೇ ಅದನ್ನ ಮೆರೆಯೋ ಎಷ್ಟೋ ಜನ ಇರ್ತಾರೆ. ಈ ವಿಷಯ ಬಂದಾಗೆಲ್ಲ ನಮ್ಮ ಬಸ್ಸಿನ ಡ್ರೈವರ್ ಕೃಷ್ಣಣ್ಣ ಅಥವಾ ಕೃಷ್ಣ ರೆಡ್ಡಿ ನೆನಪಾಗ್ತಾರೆ. ಆಫೀಸಿನ ಬ್ಯಾಗನ್ನು ನೋಡಿ ನಮ್ಮ ಹಿಂದಿಂದಲೇ ಗುರುತಿಸೋ ರೆಡ್ಡಿಯವ್ರು ಬಸ್ಸ ಸ್ಟಾಪಿಗೆ ಬರೋ ದಾರಿಯಲ್ಲೇ ಎಲ್ಲಾದ್ರೂ ನಡ್ಕೊಂಡು ಬರ್ತಿದ್ದವ್ರಿಗೂ ನಿಲ್ಲಿಸ್ತಾರೆ. ಛೇ, ಲೇಟಾಯ್ತು. ಸ್ಟಾಪಿಗೆ ಬರೋ ಹೊತ್ತಿಗೆ ಬಸ್ ಜಸ್ಟ್ ಮಿಸ್ಸಾಯ್ತು ಅಂತ ಶಪಿಸಿಕೊಳ್ಳೋರಿಗೆ ಆ ತರ ಯಾವತ್ತೂ ಆಗಬಿಡದ ರೆಡ್ಡಿಯವ್ರ ದೃಷ್ಟಿಕೋನವೇ ಬೇರೆ. ಕಂಪೆನಿ ದುಡ್ಡುಕೊಟ್ಟೇ ಕೊಡತ್ತೆ ನಂಗೆ. ಐವತ್ತು ಜನ್ರ ಬದ್ಲು ಎಂಭತ್ತು ಜನ ಹತ್ತಿದ್ರೆ ನನ್ನ ಬಸ್ಸು ಎಳ್ಯಲ್ವಾ ? ಎಳ್ಯತ್ತೆ. ದಿನಾ ನಮ್ಮ ಬಸ್ಸಿಗೆ ಬರೋರು ಇವತ್ಯಾಕೋ ಲೇಟಾಗಿ ದಾರೀಲೇ ಇದಾರೆ ಅಂತ ಕಂಡ್ರೂ ಅವ್ರನ್ನ ಹಾಗೇ ಬಿಟ್ಟು ಹೋದ್ರೆ ನಂಗೇನಾದ್ರೂ ಲಾಭವಾಗುತ್ತಾ ? ಇಲ್ಲ. ಮತ್ಯಾಕೆ ಜನ್ರನ್ನ ಬಿಟ್ಟು ಹೋಗ್ಬೇಕು ಅಂತಾರೆ ಅವ್ರು . ದಾರಿ ಮೇಲೆಲ್ಲಾ ನಿಲ್ಲಿಸಿದ್ರೆ ಅದಕ್ಕೇನು ಹೆಚ್ಚಿಗೆ ಸಂಬಳ ಕೊಡ್ತಾರಾ ? ಯಾರೋ ದೂರದಿಂದ ಓಡಿ ಬರ್ತಾ ಇದಾರೆ ಅಂತ ಅವ್ರಿಗಾಗಿ ಒಂದೆರಡು ಕ್ಷಣ ಕಾದೆ ಅಂತ ನಂಗೇನಾದ್ರೂ ಶಹಬ್ಬಾಶ್ ಗಿರಿ ಸಿಗತ್ತಾ ? ಬರೋ ಸಂಬಳ ಅಷ್ಟರಲ್ಲೇ ಇದೆ,ಏನು ಮಾಡಿದ್ರೂ ಅಂತ ಸ್ವಲ್ಪ ಸ್ಟಾಪಲ್ಲಿರದೇ ಹತ್ತತ್ರ ಬತ್ರಿರೋರನ್ನೂ ಬಿಟ್ಟು ಹೋಗೋ ಡ್ರೈವರ್ರುಗಳೇ ಹೆಚ್ಚಿರೋ ಸಂದರ್ಭದಲ್ಲಿ ರೆಡ್ಡಿಯಂತೋರೋ ಯಾಕೋ ನೆನಪಾಗ್ತಾರೆ. ನೆನಪಲ್ಲೇ ಉಳಿದು ಹೋಗ್ತಾರೆ.
ಮಣಿಯಣ್ಣನ ಭಾವ ತೀರಯಾನ ಓದ್ತಾ ಇದ್ದಾಗ ಅವರಂದ ಒಂದು ಮಾತು ನೆನಪಾಯ್ತು. ಇಲ್ಲಿರೋ ಸಕ್ಷಸ್ ಸ್ಟೋರಿಗಳಲ್ಲಿ ಹೆಚ್ಚಿನವು ಇಂಟರ್ನೆಟ್ಟಿನವೇ…ಅಂತ. ಆದ್ರೂ ಅವರನ್ನ ಭೇಟಿಯಾಗಿ ನೆಟ್ಟಿಗೆ ಗಿಟ್ಟಿರದ ಇನ್ನಷ್ಟು ಮಾಹಿತಿ ಕಲೆಹಾಕಿ ಮನಮುಟ್ಟುವಂತೆ ಬರೆದ ಎ.ಆರ್. ಮಣಿಕಾಂತರಿಗೆ ಒಮ್ಮೆ ಸಲಾಂ ಅನ್ನದಿರೋಕೆ ಸಾಧ್ಯವೇ ಇಲ್ಲ. ನೆಟ್ಟು, ಪ್ರಚಾರ ಅಂದಾಗ ಮತ್ತೆ ಮತ್ತೆ ನೆನಪಾಗೋದು ಮೇಲೆ ಹೇಳಿದಂತ ಜನರು. ಇಂದಿನ ಗುಟುಕಿಗೆ ಸಿಕ್ಕಿದ್ದಿಷ್ಟೇ. ಆದ್ರೆ ನಮ್ಮ ನಿಮ್ಮ ನಡುವೆ ಇಂಥಹವರು ನೂರಾರು ಮಂದಿ ಇದ್ದಾರೆ, ಮುಂದೆಯೋ ಇರುತ್ತಾರೆ ಎಂಬ ಭದ್ರ ನಂಬಿಕೆ ನನ್ನದು.ಇಂಥಹವರು ಬಾಳ ಹಾದಿಯಲ್ಲೊಂದು ದಿನ ಅಚಾನಕ್ಕಾಗಿ ಭೇಟಿಯಾದಾಗ ಅವರ ಸತ್ಕಾರ್ಯಕ್ಕೆ ಹೆಚ್ಚು ನೆರವಾಗಲಾಗದಿದ್ರೂ ಒಮ್ಮೆ ಬೆನ್ನು ತಟ್ಟೊ ಪ್ರಯತ್ನವನ್ನೋ , ಕೊನೇ ಪಕ್ಷ ಒಂದು ಧನ್ಯವಾದ ಹೇಳೋ ಪ್ರಯತ್ನವನ್ನಾದ್ರೂ ಖಂಡಿತಾ ಮಾಡೋಣ ಅನ್ಸತ್ತೆ. ಏನಂತೀರ ?
*****
Nice work 🙂
ಈ ತರಹದ ನಿಸ್ವಾರ್ಥ ಸೇವೆ ಸಲ್ಲಿಸುವ
ಜನವಿರುವುದರಿಂದಲೇ "ಸಜ್ಜನಿಕೆ" ಎಂಬ
ಶಬ್ಡಕ್ಕೆ ಅರ್ಥವಿದೆ. ಚೆನ್ನಾಗಿ
ಬರೆದಿದ್ದೀರಿ ಪ್ರಶಸ್ತಿ. ಹಂಚಿಕೊಂಡಿದ್ದಕ್ಕೆ
ಧನ್ಯವಾದಗಳು
Thank you Akki bhai n Snathosh 🙂