ಹೃದಯಶಿವ ಅಂಕಣ

ಸುದೀಪ್ ನಾಯಗನ್, ಇಳಯರಾಜಾ ಟ್ಯೂನುಗಳು ಮತ್ತು ನನ್ನ ಲೈನುಗಳು: ಹೃದಯಶಿವ ಅಂಕಣ

ನನ್ನನ್ನು ಸದಾ ಕಾಡುವ ಅನೇಕ ತಮಿಳು ಚಿತ್ರಗಳಲ್ಲಿ ನಾಯಗನ್ ಚಿತ್ರಕ್ಕೆ ಮೊದಲ ಸ್ಥಾನ ಕೊಡಬಯಸುತ್ತೇನೆ. ೧೯೮೭ರಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿದ್ದ ಈ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದರು. ಕಮಲಾ ಹಾಸನ್ ಅತ್ಯದ್ಭುತ ಅಭಿನಯವಿತ್ತು. ಚಿತ್ರ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಆಸ್ಕರ್ಸ್ ವರೆಗೂ ಹೋಗಿತ್ತು. ಸುದೀಪ್ ಈ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಿ, ನಟಿಸುವ ಆಸಕ್ತಿ ತೋರಿದ್ದ ಕಾಲದಲ್ಲಿ ನಾನು ಒಂದೇ ಒಂದು ಚಿತ್ರಗೀತೆ ಬರೆಯುವ ಹೋರಾಟದಲ್ಲಿದ್ದೆ. ಈ ಕಾರಣದಿಂದ ಸುದೀಪ್ ತಂದೆ ಸರೋವರ್ ಸಂಜೀವರನ್ನು ಒಂದೆರಡು ಸಲ ಭೇಟಿಯಾಗಿದ್ದೆ. ಆ ದೆಸೆಯಿಂದ ನಾಯಗನ್ ಚಿತ್ರದ ಮೂಲ ಹಾಡುಗಳನ್ನೇ ಉಳಿಸಿಕೊಳ್ಳುವುದಾಗಿಯೂ, ಸಾಹಿತ್ಯ ಮಾತ್ರ ಕನ್ನಡದ ಜಾಯಮಾನಕ್ಕೆ ಹೊಂದುವಂತೆ ಬದಲಾಯಿಸಿಕೊಳ್ಳಬೇಕು ಅಂತ ನಿರ್ಧಸಿದ್ದರು. ಬರೆಯುವಂತೆಯೂ ನನಗೆ ಹೇಳಿದ್ದರು.

ನಾನಾಗ ಮೈಸೂರಿನಲ್ಲಿ ವಾಸವಿದ್ದೆ. ಅಶೋಕ ರಸ್ತೆಯ ಪುಟ್ಟ ಲಾಡ್ಜಿನಲ್ಲಿದ್ದುಕೊಂಡು ಕೆಲವು ಗೃಹೋಪಯೋಗಿ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುತ್ತಾ ಜೀವಿಸುತ್ತಿದ್ದೆ. ಅಲ್ಲಿಯೇ ಒಂದೆರಡು ಅಂಗಡಿಗಳಲ್ಲಿ ವಿಚಾರಿಸಿದಾಗ ನಾಯಗನ್ ಚಿತ್ರದ ಆಡಿಯೋ ಕ್ಯಾಸೆಟ್ ಸಿಕ್ಕಿತು. ನನ್ನ ಬಳಿ ಇದ್ದ ಪುಟ್ಟ ವಾಕ್ಮನ್ನಿನಲ್ಲಿ ಆ ಕ್ಯಾಸೆಟ್ಟು ಹಾಕಿ ಹಾಡುಗಳನ್ನು ಎದೆಗಿಳಿಸಿಕೊಳ್ಳಲು ಪ್ರಯತ್ನಿಸಿದೆ. ಹೇಳಿ ಕೇಳಿ ಇಳಯರಾಜಾರವರು  ಸಂಗೀತ ನೀಡಿದ್ದ ಹಾಡುಗಳವು.ಅದರಲ್ಲಿ ಒಂದು ಹಾಡು ಹೀಗೆ ಶುರುವಾಗುತ್ತೆ. ಸಂದರ್ಭ ಊರಿನ ಜನರೆಲ್ಲಾ ಮಳೆಯಲ್ಲಿ ನೆನೆಯುತ್ತ ಹೋಳಿಯಾಡುವುದು:

ಅಂದಿ ಮಳೈ ಮೇಘಂ ತಂಗ ಮಳೈ ತೂವುಂ ತಿರುನಾಳಾಂ

ಎಂಗಳುಕ್ಕುಂ ಕಾಲಂ ಅಂದಾ ದಿನಂ ಪಾಡುಂ ಪೆರುನಾಳಾಂ

(ಸಂಜೆ ಮುಗಿಲು ತಂದೆರೆಯಲು ಮಳೆಯ ಶುಭದಿನವಿದು

ಹಾಡುವ ಘಳಿಗೆ ಬಂದೊಲಿಯಲು ನಮಗೆ ಹಿರಿದಿನವಿದು)

ಈ ಸಾಲುಗಳನ್ನು ನನ್ನ ಯಥಾವತ್ತಾಗಿ ಅನುವಾದಿಸುವ ಬದಲಾಗಿ ಹಾಡಿನ ಸಂದರ್ಭಕ್ಕೆ ಅನುಗುಣವಾಗಿ ಆ ರಾಗವನ್ನಷ್ಟೇ ಕೇಳಿಸಿಕೊಂಡು ಹೊಸಸಾಲುಗಳನ್ನು ಪೋಣಿಸಿದೆ. ಆ ಸಾಲುಗಳು ಇಲ್ಲಿವೆ ನೋಡಿ:

ಮುಂಗಾರುಮಳೆ ಹುಯ್ದು ಬಂಗಾರವಾಯಿತಲ್ಲ ನಮ್ಮೂರು 

ಕೆನ್ನೀರ ಹೊಳೆ ಹರಿದು ಸಿಂಗಾರವಾಯಿತಲ್ಲ ನಮ್ಮೂರು 

ಮೊದಲೇ ಸಿನಿಮಾವನ್ನು ನೋಡಿದ್ದರಿಂದ ಇಡೀ ಹಾಡನ್ನು ಹೊಸದಾಗಿ ಬರೆಯಲು ಕಷ್ಟವಾಗಲಿಲ್ಲ. ಹಾಡಿನ ವಿಡಿಯೋ ಮತ್ತೆ ಮತ್ತೆ ನೋಡಿಕೊಳ್ಳುತ್ತಿದ್ದೆ. ಹಾಡಿನ ಒಟ್ಟಾರೆ ಕಾನ್ಸೆಪ್ಟ್, ಕೊರಿಯೋಗ್ರಫಿಗೆ ಬಳಸಿರುವ ತಂತ್ರ, ಲೋಕೇಶನ್ನು,ಕಾಸ್ಟೂಮು,ಮೂಡು ಎಲ್ಲವನ್ನೂ ಗಮನಿಸಿ ಬರೆದೆ. ಆ ದೃಶ್ಯದ ಜೊತೆಗೆ ನಾನು ಬರೆದ ಸಾಲುಗಳನ್ನು ತಾಳೆ ಹಾಕಿದರೆ ಏರುಪೇರು ಇರಬಾರದು. ಅಂಥದೊಂದು ಷರತ್ತು ಹಾಕಿಕೊಂಡು ಪೂರ್ತಿ ಹಾಡು ಬರೆದೆ. ಈ ಮೊದಲು ಬೇರೆ ಭಾಷೆಯಿಂದ ಯಾವುದೇ ಚಿತ್ರ ಕನ್ನಡಕ್ಕೆ ಬಂದಾಗ ಮೂಲ ಹಾಡುಗಳನ್ನೇ ಉಳಿಸಿಕೊಳ್ಳಬೇಕಾಗಿ ಬಂದಾಗ ಸಾಹಿತ್ಯವನ್ನೂ ಯಥಾವತ್ತು ಭಟ್ಟಿ ಇಳಿಸಿದ ಉದಾಹರಣೆಗಳುಂಟು. ಈ ನಿಟ್ಟಿನಲ್ಲಿ ಹಂಸಲೇಖಾರವರು ಹೊಸ ಟ್ಯೂನು,ಹೊಸ ಸಾಹಿತ್ಯ ಸೃಷ್ಟಿಸಿ ಮೂಲಕ್ಕಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹಾಡಿನ ಅಂದ ಹೆಚ್ಚಿಸಿಬಿಡುತ್ತಿದ್ದರು. ಉದಾ: ತಮಿಳಿನ 'ಚಿನ್ನತಂಬಿ' ಹಾಡುಗಳಿಗಿಂತ ಕನ್ನಡದ 'ರಾಮಾಚಾರಿ' ಹಾಡುಗಳು ಅದ್ಭುತವಾಗಿವೆ. ಇದೊಂದು ಉದಾಹರಣೆಯಷ್ಟೇ. ಹೊಸತಿನೆಡೆಗೆ ತುಡಿಯುವ ಹಂಸಲೇಖಾರವರು ಇಂಥ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಮೂಲ ಹಾಡುಗಳಿಗಿಂತಲೂ ಪ್ರಯೋಗಾತ್ಮಕವಾಗಿ ಕೆಲಸ ಮಾಡಿದ್ದಾರೆ. ನನ್ನ ಕ್ರಿಯಾಶೀಲತೆಗೆ ಧಕ್ಕೆ ಉಂಟಾಗುತ್ತದೆ ಅಂತ ಈ ಪ್ರಯೋಗ ಮಾಡಿದೆ.ಅದರಿಂದ ನನಗೆ ಎಷ್ಟು ಸಫಲತೆ ಸಿಕ್ಕಿತೋ ನನಗಂತೂ ಗೊತ್ತಿಲ್ಲ.

ಇನ್ನು ಎರಡನೇ ಹಾಡು ಹೀಗೆ ಶುರುವಾಗುತ್ತೆ:

ನೀ ಒರು ಕಾದಲ್ ಸಂಗೀತಂ 

ವಾಯ್ ಮೊಳಿ ಸೊನ್ನಾಲ್ ದೈವೀಗಂ 


ವಾನಂಬಾಡಿ ಪರವೈಗಳ್ ರೆಂಡು 

ಊರ್ವಲಂ ಎಂಗೊ ಪೋಯ್ಗಿರದು 

ಕಾದಲ್ ಕಾದಲ್ ಎನುಮೊರು ಗೀತಂ 

ಪಾಡಿಡುಂ ಆಸೈ ಕೇಟ್ಕಿರದು 

ಇಸೈ ಮಳೈ ಎಂಗುಂ…

ಇಸೈ ಮಳೈ ಎಂಗುಂ ಪೊಳಿಗಿರದು 

ಎಂಗಳಿನ್ ಜೀವನ್ ನನೈಗಿರದು 

ಕಡಲಲೈಯಾವುಂ ಇಸೈ ಮಗಳ್ ಮೀಟುಂ 

ಅಳಗಿಯ ವೀಣಯ್ ಸುರಸ್ಥಾನಂ 

ಇರವುಂ ಪಗಲುಂ ರಸಿತಿರುಪೋಂ 


(ನೀನೇ  ನಲ್ಮೆಯ ಸಂಗೀತ 

ಹಾಡಲು ಒಲವೇ ಭಗವಂತ 


ವಾನಂಬಾಡಿ ಹಕ್ಕಿಗಳೆರಡು

ಎಲ್ಲಿಗೋ ದಿಬ್ಬಣ ಹೊರಟಿಹವು 

ಪ್ರೀತಿ ಪ್ರೀತಿಯೆನ್ನುವ ಗೀತೆಯೊಂದ 

ಹಾಡುವ ಆಸೆ ಕೇಳಿಹುದು 

ಸರಿಗಮ ಮಳೆಯು ಸುರಿದಿಹುದು 

ನಮ್ಮೀ ಜೀವನ ನೆನೆದಿಹುದು 

ಕಡಲಲೆಗಳಲಿ ಹೊಮ್ಮಲು ನಾದ 

ಚೆಲುವಿನ ವೀಣೆ ಸ್ವರಮಯವು 

ಇರುಳು ಹಗಲು ಸುಖಿಸೋಣ)

 

ಹೊಸದಾಗಿ ನಾನು ಬರೆದ ಸಾಲುಗಳು ಹೀಗಿವೆ:

ನೀನೆ ಹೃದಯದ ಗೀತೆಯು 

ಒಲವಿನ ಬಾಳಸಂಗೀತವು

ಸ್ವರತಾಳಗಳ ಸಮ್ಮಿಲನದಲಿ 

ಮೂಡಿದ ರಾಗವು ನೀನಾದೆ  

ರಾಗದ ಜೊತೆ ಅನುರಾಗವ ಬೆರೆಸಿ 

ಹಾಡಿದ ಪಲ್ಲವಿ ನೀನಾದೆ 

ತಂತಿಯ ವೀಣೆಗೆ…

ತಂತಿಯ ವೀಣೆಗೆ ಬೆರಳಿರಲು 

ಬೆರಳಿನ ನೆರಳಲಿ ಕೊರಳಿರಲು

ಸ್ವರವೇಳಿಲ್ಲಿಯೇ ತಂಗಿರಲು 

ಹರಿವುದು ನಾದ ಹಗಲಿರುಳು 

ನನಗೂ ನಿನಗೂ ಒಲವೇ ಬದುಕು… 

ಈ ಹಾಡು ಶೃಂಗಾರಮಯವಾಗಿರಬೇಕಿತ್ತು. ನಾಯಕ,ನಾಯಕಿ ಸರಸವಾಡುತ್ತ ಮಿಲನವಾಗುವ ಸಂದರ್ಭ. ಮೈರೆತು ಪರವಶವಾಗುತ್ತ ಪರಸ್ಪರ ಲೀನವಾಗುವ ರಸಘಳಿಗೆ. ಮೂಲ ಸಾಲುಗಳಲ್ಲಿ ಶೃಂಗಾರವನ್ನು ಗಂಭೀರವಾಗಿ ಹೇಳಲಾಗಿದೆ. ರಸಿಕತೆಯಿದೆ. ದೃಶ್ಯ ಹಸಿಹಸಿಯಾಗಿದ್ದು ರೋಮಾಂಚಕವಾಗಿದೆ. ಕಮಲ್ ಹಾಸನ್ ಇಂಥ ದೃಶ್ಯಗಳಲ್ಲಿ ಎತ್ತಿದ ಕೈ! ಅವರೊಬ್ಬ ರಸಿಕ. ಕಲಾ ರಸಜ್ಞ. ಸಾಲದಂತೆ ಮಣಿರತ್ನಂ ತಮ್ಮ ಚಿತ್ರಗಲ್ಲಿ ಇಂಥದೊಂದು ಬಿಸಿ ಬಿಸಿ ಹಾಡನ್ನು ಇಟ್ಟೇ ಇರುತ್ತಾರೆ. ಮಳೆ,ಮಿಡಿತ ಮತ್ತು ಶೃಂಗಾರ ಮಣಿರತ್ನಂ ಚಿತ್ರದಲ್ಲಿ ಸಿಗಲೇಬೇಕು. ಇಲ್ಲಿಯೂ ಅಷ್ಟೇ, ನಾನು ಮೂಲಸಾಹಿತ್ಯವನ್ನು ಕೇಳಿಸಿಕೊಂಡು ಹೊಸದನ್ನೇ ಬರೆಯಲು ಮುಂದಾದೆ. ಇಳಯರಾಜಾರವರ ಅದ್ಭುತ ರಾಗಗಳಿಗೆ ಒಳ್ಳೆಯ ಸಾಲುಗಳನ್ನು ಹುಟ್ಟಿಸಬಲ್ಲ ಶಕ್ತಿಯಿದೆ. ರಾಗ ಸಪ್ಪೆಯಿದ್ದಾಗ ಸಾಲುಗಳು ಹುಟ್ಟೋದು ಕಷ್ಟ. 

ಕೆಲವರು ನನಗೆ ಕೇಳುವುದುಂಟು: ಮುಂಗಾರುಮಳೆಗೆ ಬರೆದಂತೆ ಬರೆದುಕೊಡಿ, ಗಾಳಿಪಟಕ್ಕೆ ಬರೆದಂತೆ ಬರೆದುಕೊಡಿ ಅಥವಾ ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ,ಸೆರೆಯಾದೆನು ಇತ್ಯಾದಿ. ಅವರಲ್ಲಿ ನಾನೂ ಹೇಳೋದು, ಬರೀ ಸಾಹಿತ್ಯದಿಂದಷ್ಟೇ ಹಾಡು ಹಿಟ್ ಆಗಲು ಸಾಧ್ಯವಿಲ್ಲ. ಟ್ಯೂನ್ ಕೂಡ ಚೆನ್ನಾಗಿರಬೇಕು. ಹಾಡುಗಾರಿಕೆ ಕೂಡ ಸೋಗಸಾಗಿರಬೇಕು. ಜೊತೆಗೆ ಹಾಡಿನ ಚಿತ್ರೀಕರಣ, ಚಿತ್ರದ ಯಶಸ್ಸು ಎಲ್ಲವೂ ಮುಖ್ಯವಾಗುತ್ತವೆ. ಮುಂಗಾರುಮಳೆ ಚಿತ್ರ ಫ್ಲಾಪ್ ಆಗಿದ್ರೆ ಹಾಡುಗಳೂ ಫ್ಲಾಪ್ ಆಗುತ್ತಿದ್ದವೋ ಏನೋ? ಇಷ್ಟಕ್ಕೂ ನಾನು ಬರೆದಿದ್ದ 'ಸವಿಸವಿ ನೆನಪು' ಚಿತ್ರದ ಹಾಡುಗಳು ಆಡಿಯೋ ಬಿಡುಗಡೆಯಾದಾಗ ಹಿಟ್ ಆದವು. ಬಹಳಷ್ಟು ಜನ ಮೆಚ್ಚಿಕೊಂಡಿದ್ದರು. ಎಫ್ ಎಂನಲ್ಲಿ, ಟಿವಿಗಳಲ್ಲಿ ಪದೇ ಪದೇ ರಿಕ್ವೆಸ್ಟ್ ಮಾಡಿಕೊಂಡು ಜನರೇ ಕೇಳುತ್ತಿದ್ದರು. 

ಆದರೆ, ಯಾವಾಗ ಚಿತ್ರ ಬಿಡುಗಡೆಯಾಯಿತೋ, ಬಾಕ್ಸಾಫೀಸಿನಲ್ಲಿ ಸೋತಿತೋ ಆ ಚಿತ್ರದ ಹಾಡುಗಳನ್ನು ಕೇಳುವವರೂ ಕಮ್ಮಿಯಾದರು. ಆಡಿಯೋ ಮಾರುಕಟ್ಟೆಯಲ್ಲಿ ಆ ಚಿತ್ರ ಕ್ರಮೇಣ ನಷ್ಟ ಅನುಭವಿಸಿತು. ಇದರರ್ಥ, ಹಾಡುಗಳ ಯಶಸ್ಸಿಗೆ ಸಿನಿಮಾ ಕೂಡ ಗೆಲ್ಲಬೇಕಾಗುತ್ತದೆ. ಹಾಗೆ ನೋಡಿದರೆ,ಹಾಡುಗಳು ಚೆನ್ನಾಗಿದ್ದವು ಅದಕ್ಕೇ ಸಿನಿಮಾ ಹಿಟ್ ಆಯಿತು ಅನ್ನುವ ಉದಾಹರಣೆಗಳು ಭಾರತ ಎಲ್ಲ ಭಾಷೆಯ ಚಿತ್ರೋದ್ಯಮದಲ್ಲೂ ಸಿಗುತ್ತವೆ. ಅದೇ ರೀತಿ ಹಾಡುಗಳು ಸರಿಯಿಲ್ಲ ಮಾರಾಯ ಅದಕ್ಕೇ ಸಿನಿಮಾ ತೋಪಾಯ್ತು ಅನ್ನುವ ಉದಾಹರಣೆಗಳ ಪ್ರಮಾಣ ತೀರಾ ಕಮ್ಮಿ. ಅಲ್ಲಿಗೆ,ಉತ್ತಮ ಸಾಹಿತ್ಯ ಹುಟ್ಟಲು ಸಿನಿಮಾಡ ಗುಣಮಟ್ಟದಂತೆಯೇ ಸಂಗೀತ ನಿರ್ದೇಶಕ ಹೊಸೆಯುವ ರಾಗವೂ ಮುಖ್ಯವೆಂದಾಯ್ತು.

ಇನ್ನು ವಿಷಯಕ್ಕೆ ಬರೋದಾದ್ರೆ,  ನಾಯಗನ್ ಚಿತ್ರದ ಎಲ್ಲ ಹಾಡುಗಳೂ ಸೂಪರ್ ಹಿಟ್ ಹಾಡುಗಳೇ. ಒಂದೊಂದು ಹಾಡಿಗೂ ತನ್ನದೇ ಆದ ಆತ್ಮವಿದೆ. ತನ್ನದೇ ಹಿನ್ನೆಲೆಯಿದೆ. ತನ್ನದೇ ಆದ ಜೀವಂತಿಕೆ ಇದೆ. ಹಾಗೇನೆ ಒಂದು ಮಸಾಲ ಹಾಡೂ ಕೂಡ ಈ ಚಿತ್ರದಲ್ಲಿದೆ. ತನ್ನ ಸೊಂಟ ಬಳುಕಿಸುತ್ತ ಆ ಮೋಹಕ ಹೆಣ್ಣು ದೋಣಿಯಲ್ಲಿ ಕುಣಿಯುತ್ತಿದ್ದರೆ ಸಮುದ್ರಕ್ಕೆ ಬಿಸಿ ಹುಟ್ಟಿದರೂ ಅಚ್ಚರಿ ಪಡುವಂತಿಲ್ಲ. ಸಂದರ್ಭ ಏನಂದರೆ, ಕಮಲ್ ಹಾಸನ್ ಪಾತ್ರ ಚಿಕ್ಕಂದಿನಲ್ಲೇ ಒಂದು ಕೊಲೆ ಮಾಡಿ ಬಾಂಬೆಗೆ ಓದಿ ಬಂದಿರುತ್ತದೆ. ಆ ಕೊಲೆಗೆ ಕಾರಣ, ಪೊಲೀಸರು ತನ್ನ ಕುಟುಂಬದ ಮೇಲೆ ಎಸೆದ ದೌರ್ಜನ್ಯ. ಸಣ್ಣ ಹುಡುಗನಿಂದಲೇ ಆ ಪಾತ್ರ ಕ್ರಾಂತಿಕಾರಿ ಮನೋಭಾವ ಹೊಂದಿರುತ್ತದೆ. ವ್ಯವಸ್ಥೆಯ ವಿರುದ್ಧ ಅಸಮಾನದ ದ್ವನಿ ಎತ್ತಿರುತ್ತದೆ. ಅಂತಹ ಹಿನ್ನೆಲೆ ಇದ್ದ ಹುಡುಗ ಬಾಂಬೆಗೆ ಓಡಿ ಬಂದು ದಿಕ್ಕಿಲ್ಲದೆ ಕೂತಿದ್ದಾಗ ಒಬ್ಬ ಮುಸ್ಲಿಂ ಮುದುಕ ಈ ಹುಡುಗನಿಗೆ ಅನ್ನ,ಬಟ್ಟೆ,ಆಶ್ರಯ ಕೊಡುತ್ತಾನೆ. 

ತಾನು ಮಾಡುವ ಕಸುಬನ್ನೇ ಕಲಿಸಿಕೊಡುತ್ತಾನೆ; ಜೊತೆಗೆ, ದೋಣಿಯಲ್ಲಿ ಕಳ್ಳಮಾಲು ಸಾಗಿಸುವುದನ್ನೂ! ಕಡಲತಡಿ ತೂತ್ತುಕುಡಿಯಿಂದ ಓಡಿ ಬಂದ ಹುಡುಗನಾದ್ಧರಿಂದ ಸಮುದ್ರದ ನಂಟಿತ್ತು ಇವನಿಗೆ. ಹೀಗಾಗಿ ಮುದುಕನಿಗೆ ಲಗತ್ತಾದ ಸಂಗಾತಿಯಾದ. ಹುಡುಗ ದೊಡ್ಡವನಾಗುತ್ತಾನೆ. ಸ್ಮಗಲಿಂಗ್ ವಿಷಯದಲ್ಲಿ ಮಾಸ್ಟರ್ ಆಗುತ್ತಾನೆ. ಕಳ್ಳ ಮಾಲು ಸಾಗಿಸುವಾಗ ಅಪ್ಪಿ ತಪ್ಪಿ ಅಧಿಕಾರಿಗಳು ದಾಳಿ ಮಾಡುವುದುಂಟು. ಅಂತಹ ಸಂದರ್ಭದಲ್ಲಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಕಾರ್ಯಸಾಧಿಸಬೇಕಾದರೆ ಹೆಣ್ಣು ಬೇಕಾಗುತ್ತೆ. ಅವಳ ಬಳುಕುವ ಸೊಂಟ ಬೇಕಾಗುತ್ತೆ. ಅವಳ ಇಷ್ಟಿಷ್ಟೇ ಇಣುಕುವ ಹೊಕ್ಕಳು ಬೇಕಾಗುತ್ತದೆ. ಅವರ ಮಾದಕ ಕಣ್ಣುಗಳು ಬೇಕಾಗುತ್ತವೆ. ಅಂಥದೊಂದು ಸಂದರ್ಭ ಚಿತ್ರದಲ್ಲಿ ಬಂದಾಗ ಒಂದು ಹಾಡು ಹೀಗೆ ಶುರುವಾಗುತ್ತೆ:

ನಿಲಾ ಅದು ವಾನತ್ತು ಮೇಲ ಪಲಾನದು ಓಡತ್ತು ಮೇಲ

ಒಂದಾಡುದು ತೇಡುದು ಉನ್ನೈ ಹೊಯ್ಯಾ ಹೋಯ್

ಅದು ಎನ್ನಾ ಹೋಯ್

 (ಚಂದಿರ ಆಕಾಶದ ಮೇಲೆ ಈ ವೇಶ್ಯೆಯು ದೋಣಿಯ ಮೇಲೆ 

ಕುಣಿಕುಣಿದಾಡುತ ಹುಡುಕಿಹೆ ನಿನ್ನ ಹೊಯ್ಯಾ ಹೋಯ್  

ಅದು ಏನದು ಹೋಯ್)                                                            

ಈ ಸಾಲುಗಳನ್ನು ಕೇಳಿಸಿಕೊಂಡ ಮೇಲೆ ಸಾಧ್ಯವಾದಷ್ಟು ಸೌಂಡಿಂಗ್ ಕಡೆ ಗಮನ ಕೊಟ್ಟು ಬರೆಯೋಣ ಅನ್ನಿಸ್ತು. ಅದದೇ  ಬಗೆಯಲ್ಲಿ ಕೇಳಿಸುವ ಸೌಂಡ್ ಉಳ್ಳ ಕನ್ನಡ ಪದಗಳನ್ನು ಪೋಣಿಸುವ ಪ್ರಯತ್ನ ಮಾಡಿದೆ. ಆ ಸಾಲುಗಳು ಇಲ್ಲಿವೆ ನೋಡಿ:

ಎಲಾ ಇದು ಏನಿದು ಲೀಲೆ ಭಲೇ ಬೇಲೂರಿನ ಬಾಲೆ 

ಈ ಸೊಂಟಕೆ ಸೋಲದ ತುಂಟ ಇರಲಾರ 

ಖಂಡಿತ ಇರಲಾರ…

ಈ ಹಾಡಿನ ಚರಣಗಳಲ್ಲಿ ವ್ಯವಸ್ಥೆಯ ಬಗ್ಗೆ ವ್ಯಂಗ್ಯವಿದೆ. ಭ್ರಷ್ಟ ಅಧಿಕಾರಿಗಳ ಕುರಿತು ಲೇವಡಿಯಿದೆ. ಈ ಇಡೀ ಹಾಡು ಒಂದು ಫಿಲಾಸಪಿಯನ್ನು ಹೇಳುತ್ತದೆ. ಇವತ್ತೇನು ಐಟಂಸಾಂಗ್ ಅಂತೀವಿ ಅಂಥವನ್ನು ಮೊದಲು ಕ್ಯಾಬರೆ ಹಾಡುಗಳು ಅಂತ ಕರೀತಿದ್ರು. ಸತ್ಯ ಹರಿಶ್ಚಂದ್ರದಂಥ ಸಿನಿಮಾದಲ್ಲೂ ಕೂಡ 'ನನ್ನ ನೀನು ನಿನ್ನ ನಾನು…' ಅನ್ನುವ ಒಂದು ಐಟಂ ಸಾಗಿತ್ತು ಅಲ್ಲವೇ? 'ಜೋಕೆ ನಾನು ಬಳ್ಳಿಯ ಮಿಂಚು,ಕಣ್ಣು ಕತ್ತಿಯ ಅಂಚು…' ಇರಬಹುದು. ಇತ್ತೀಚೆಗಂತೂ ಸಿನಿಮಾಗೊಂದು ಐಟಂ ಅನ್ನುವಂತಾಗಿದೆ. ಕೆಲವು ಐಟಂ ಸಾಂಗ್ಕೆ ಸ್ಪೆಸಿಲಿಸ್ಟ್ ಗೀತಸಾಹಿತಿಗಳು ಬಿಜಿಯಾಗಿದ್ದಾರೆ.ಅದನ್ನು ಆಧುನಿಕ ಜಾನಪದ ಅನ್ನುವ ಹೆಸರಿನಲ್ಲಿ ಕೆಲವು ಕೃಪಾಪೋಷಿತ ವಿಮರ್ಶಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿ ಎರಡೆರಡು ಐಟಂ ಸಾಂಗುಗಳಿರುತ್ತವೆ. ಕಥೆಯ ಬಗ್ಗೆ ಭರವಸೆಯಿಲ್ಲದಿದ್ದಾಗ ಒಮ್ಮೊಮ್ಮೆ ಕೈ ಹಿಡಿಯೋದು ಐಟಂ ಸಾಂಗುಗಳೇ. ವಿಷ್ಣುವರ್ಧನ್ ನಟಿಸಿದ್ದ ಏಕದಂತ ಚಿತ್ರಕ್ಕಾಗಿ ನಾನೇ ಬರೆದ 'ಈ ಸೊಂಟ ನೋಡೋ ನೆಂಟ ನಿನ್ನಾಸೆ ತೀರೋ ಗಂಟ..' ಅನ್ನುವ ಒಂದು ಹಾಡನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. 

ಐಟಂ ಸಾಂಗುಗಳಲ್ಲಿ ಹೆಣ್ಣಿನ ಅಂಗಾಂಗಗಳನ್ನು ವರ್ಣಿಸೋದು,ದ್ವಂದಾರ್ಥ ಸೂಚಿಸುವ ಪದಗಳನ್ನು ಬಳಸುವುದಕಿಂತ ಸಾಧ್ಯವಾದಷ್ಟು ಮನರಂಜನೆ ನೀಡುವ ಕಾನ್ಸೆಪ್ಟ್ ಗಳನ್ನು ಬಳಸಿದರೆ,ಅಂತಹ ಕಾನ್ಸೆಪ್ಟ್ ಗಳನ್ನು ಸಾಲಿಗಿಳಿಸುವಾಗ ಹಾಸ್ಯದ ಹೊದಿಕೆ ಹೊದಿಸಿದರೆ ಪ್ರೇಕ್ಷಕ ಹಾಡನ್ನು ಎಂಜಾಯ್ ಮಾಡಬಲ್ಲ.ಇಡೀ ಕುಟುಂಬ ಕೂತು ಕೇಳಬಹುದು, ನೋಡಬಹುದು. ಮುಖ್ಯವಾಗಿ ಕಥೆಗೆ ಅಗತ್ಯವಿದ್ದರೆ ಮಾತ್ರ ಐಟಂಸಾಂಗುಗಳನ್ನುಅಳವಡಿಸಿಕೊಳ್ಳಬೇಕು. ಸುಮ್ಮನೆ ತುರುಕಿದರೆ ಅಂತ ಹಾಡುಗಳು ಹೆಚ್ಚು ಕಾಲ ಉಳಿಯುವುದಿಲ್ಲ. ನಾಯಗನ್ ಚಿತ್ರದಲ್ಲಿ 'ನಿಲಾ ಅದು ವಾನತ್ತು ಮೇಲ…' ಹಾಡು ಬೇಕಿತ್ತು, ಅದಕ್ಕೇ ಆ ಹಾಡು ಇನ್ನೂ ಬದುಕಿದೆ.

ಈ ಚಿತ್ರದಲ್ಲಿ ಇನ್ನೊಂದು ಹಾಡಿದೆ; 'ನಾನ್ ಸಿರಿತ್ತಾಲ್ ದೀಪಾವಳಿ..' ಅಂತ ಶುರುವಾಗುತ್ತೆ. ಚಿತ್ರದಲ್ಲಿ ಕಮಲಹಾಸನ್ ಮೊದಲಸಾರಿ ವೇಶ್ಯಾಗೃಹಕ್ಕೆ ಹೋದಾಗ ಬರುವ ಹಾಡು. ವೇಶ್ಯೆಯ ಸಂಗ ಮಾಡಲು ಹೋದವನು ಅಲ್ಲಿ ಕಾಣುವ ಮುಗ್ಧ ಹೆಣ್ಣಿಗೆ ಮಾರು ಹೋಗಿ ಕೊನೆಗೆ ಅವಳನ್ನೇ ಮದುವೆಯಾಗುತ್ತಾನೆ. ಅದು ಒತ್ತಟ್ಟಿಗಿರಲಿ. ಇನ್ನು ಈ ಹಾಡಿನ ವಿಷಯಕ್ಕೆ ಬಂದರೆ ಇದೂ ಕೂಡ ಗಂಡಸರನ್ನು ಆಕರ್ಷಿಸುವ ಎಂದಿನ ರೀತಿಯ ಒಂದು ಕ್ಯಾಬರೆ ಹಾಡು. ಈ ಹಾಡಿನಲ್ಲಿ ಆ ಹೆಣ್ಣು ತನ್ನನ್ನು ತಾನು ಹೊಗಳಿಕೊಳ್ಳೋದು ಕಂಡುಬರುತ್ತದೆ. 'ನಾನು ನಕ್ಕರೆ ದೀಪಾವಳಿ..' ಅನ್ನುವ ಸಾಲು ಈ ಮಾತನ್ನು ಪುಷ್ಟೀಕರಿಸುತ್ತದೆ. ಒಂದೊಂದು ಸಾಲಿನಲ್ಲೂ ಕಾವ್ಯಗುಣ ಅಡಗಿದೆ. ಆ ಸಾಲುಗಳು ಇಲ್ಲಿವೆ ನೋಡಿ:

ನಾನ್ ಸಿರಿತ್ತಾಲ್ ದೀಪಾವಳಿ 

ನಾಳುಂ ಇಂಗೆ ಏಕಾದಶಿ

ಅಂದಿ ಮಲರುಂ ನಂದವನಂ ನಾನ್ 

ಅಳ್ಳಿ ಪರುವುಂ ಕಂಬರಸಂ ನಾನ್ 

ಎನದು ಉಲಗಿಲ್ ಅಸ್ತಮಾನಂ ಆವದಿಲ್ಲೈ 

ಇಂಗು ಇರುವುಂ ಪಗಲುಂ ಎನ್ನವೆಂಡ್ರು ತೋಣವಿಲ್ಲೈ 

ವಂದದು ಎಲ್ಲಾಂ ಪೋವದು ತಾನೇ 


(ನಾ ನಕ್ಕರೆ ದೀಪಾವಳಿಯು 

ಪ್ರತಿದಿನವೂ ಜಾಗರಣೆಯೂ 

ಸಂಜೆ ಹೂವುಗಳ ಉದ್ಯಾನವು ನಾ 

ಬೊಗಸೆಯ ತುಂಬಾ ಕಂಬರಸವು ನಾ 

ನನ್ನೀ ಲೋಕದಿ ಅಸ್ತಮಾನವೇ ಇಲ್ಲ 

ಇಲ್ಲಿ ಹಗಲು ಇರುಳು ತಿಳಿಯುವುದಿಲ್ಲ 

ಬಂದುದು ಎಲ್ಲ ಹೋಹುದು ತಾನೇ)

 

ನಾನು ಬರೆದ ಸಾಲುಗಳು ಇಲ್ಲಿ ಕೆಳಗಿವೆ:

ನನ್ನಲ್ಲಿ ನೀನು ಸೇರಿಕೊಂಡರೆ 

ಭೂಲೋಕವೇ ಸ್ವರ್ಗವಲ್ಲವೇ 

ನನ್ನಂದ ನೀನು ಹೀರಿಕೊಂಡರೆ 

ಈ ಜನ್ಮಕೀಗ ಪ್ರಾಪ್ತಿಯಲ್ಲವೇ 

ರತಿಯ ನೋಟ ನಿನಗಿದು ತಿಳಿಯದು 

ಈ ಮೈಮಾಟ ಎಂದಿಗು ಬಾಡದು 

ವಿರಹ ಮರೆಸು ನನ್ನಾವರಿಸು 

ಚಿತ್ರದ ಅಷ್ಟೂ ಹಾಡುಗಳಲ್ಲಿ ವಿಶೇಷವಾಗಿ ನನ್ನನ್ನು ಕಾಡಿದ್ದು ಮುಂದೆ ಪ್ರಸ್ತಾಪಿಸಲಿರುವ ಹಾಡು. ಈ ಹಾಡು ದೀರ್ಘಕಾಲ ಉಳಿಯಬಲ್ಲ ಭಾರತದ ಸರ್ವಶ್ರೇಷ್ಠ ಹಾಡುಗಳಲ್ಲಿ ಒಂದು. ಇಳಯರಾಜಾರವರ ಬೆಸ್ಟ್ ಗಳಲ್ಲಿ ಬೆಸ್ಟ್ ಹಾಡು. ಈ ಹಾಡಿನ ಸ್ಫೂರ್ತಿ ಪಡೆದು ಅದೆಷ್ಟೋ ಹಾಡುಗಳು ಇಂಡಿಯಾದಲ್ಲಿ ಹುಟ್ಟಿಕೊಂಡಿವೆ. ಈ ಹಾಡಿನ ಸಾಹಿತ್ಯವೂ ಅಷ್ಟೇ ನನ್ನಂಥ ಅನೇಕರಿಗೆ ಸ್ಪೂರ್ತಿಯಾಗಿವೆ. ಬದುಕನ್ನು ಹಿಡಿಯಾಗಿ ಹಿಡಿದಿಡಬಲ್ಲ ಶಕ್ತಿ ಆ ಸಾಲುಗಳಿಗಿದೆ. ಮಣಿರತ್ನಂ ಮಾತ್ರ ಇಂಥ ಸನ್ನಿವೇಶಗಳನ್ನು ಸೃಷ್ಟಿಸಬಲ್ಲ ನಿರ್ದೇಶಕ ಅನ್ನುವಷ್ಟರ ಮಟ್ಟಿಗೆ ಈ ಹಾಡನ್ನು ಇಡೀ ನಾಯಗನ್ ಚಿತ್ರದ ಉದ್ದಕ್ಕೂ ಬಿಟ್ ಬಿಟ್ ಗಳಾಗಿ ಬಳಸಿಕೊಂಡಿದ್ದಾರೆ. ಒಂದೊಂದು ತುಣುಕು ಬಂದಾಗಲೂ ಒಂದೊಂದು ರೀತಿಯಲ್ಲಿ ಚಿಂತನೆಗೆ ಹಚ್ಚುತ್ತದೆ. ಕಥೆಯ ಓಘಕ್ಕೆ ಅನುಗುಣವಾಗಿ ತಾನೂ ತನ್ನ ರೂಪವೈವಿಧ್ಯತೆಯನ್ನು ಬಿಚ್ಚಿಡುತ್ತಾ ಹೋಗುತ್ತದೆ. 

ಒಂದೇ ಮಾತಲ್ಲಿ ಹೇಳುವುದಾದರೆ ಒಂದಿಡೀ ಚಿತ್ರದ ಹಂದರವನ್ನು, ಆತ್ಮವನ್ನು ಪ್ರತಿನಿಧಿಸುವ ಶಕ್ತಿ ಈ ಹಾಡಿನ ಹೊಣೆಗಾರಿಕೆ ಹಾಗೂ ಹೆಚ್ಚುಗಾರಿಕೆ. ಈ ಟ್ರೆಂಡ್ ಮುಂದುವರಿದು ಅನೇಕ ಹಿಂದಿಚಿತ್ರಗಳು ಈ ರೀತಿಯ ಬಿಟ್ ಗಳನ್ನು ಸಮರ್ಥವಾಗಿ ಪ್ರಯೋಗಿಸಿ ಗೆದ್ದವು. ಕನ್ನಡದ ಮಟ್ಟಿಗೆ ಮುಂಗಾರುಮಳೆ ಇದಕ್ಕೆ ಸೂಕ್ತ ನಿದರ್ಶನ. ಮುಂಗಾರು ಮಳೆಯೇ.., ಇವನು ಗೆಳೆಯನಲ್ಲ, ಜನುಮಜನುಮದಲ್ಲೂ… ಬಿಟ್ ಗಳು ಇಡೀ ಚಿತ್ರವನ್ನು ಸಮಾನಾಂತರ ರೇಖೆಯ ಮೇಲೆ ನಡೆಸುತ್ತಾ ಸಾಗುತ್ತವೆ. ಪ್ರೇಕ್ಷಕನ ಹೃದಯಬಡಿತದ ಲಯಕ್ಕೆ ಪೂರಕವಾಗಿ ಶ್ರುತಿ ಬೆರೆಸುತ್ತಾ ಹೋಗುತ್ತವೆ. ಇಂತಹ ಅನೇಕ ಚಿತ್ರಗಳ ಹಿಂದೆ ನಾಯಗನ್ ಚಿತ್ರದ ಈ ಹಾಡಿನ ನೆರಳು ಇದ್ದರೂ ಇರಬಹುದು. ಆ ಅದ್ಭುತ ಸಾಲುಗಳು ಇಲ್ಲಿವೆ ನೋಡಿ:

ತೆನ್ ಪಾಂಡಿ ಚೀಮಯಿಲೆ 

ತೇರೋಡುಂ ವೀಧಿಯಿಲೆ 

ವಾನ್ ಪೋಲ ವಂದವನೇ

ಯಾರ್ ಅಡಿಚಾರೋ ಯಾರ್ ಅಡಿಚಾರೋ… 

ವಲರುಂ ಪಿರಯೇ ತೇಯಾದೆ

ಇನಿಯುಂ ಅಳುದು ತೇಂಬಾದೆ

ಅಳುದಾ ಮನಸು ತಾಂಗಾದೆ…


ತೆನ್ ಪಾಂಡಿ ಸೀಮೆಯಲಿ (ಮಧುರೈ ಪ್ರಾಂತ್ಯ)

ರಥ ಸಾಗುವ ಬೀದಿಯಲಿ   

ಹೆಮ್ಮೆಯಲಿ ಬಾಳ್ದವಗೆ 

ಹೊಡೆದವರಾರೋ ಹೊಡೆದವರಾರೋ 

ಬೆಳಗೂ ಚಿಗುರೇ ಮಾಸದಿರು 

ಇನ್ನೂ ಅಳುತಾ ಬಿಕ್ಕದಿರು 

ಅಳುವಾ ಮನಸು ತಡೆಯುವುದೇ?)                                          

ಈ ಸಾಲುಗಳನ್ನು ಪ್ರತಿ ಬಾರಿ ಕೇಳಿದಾಗಲೂ ನನ್ನೊಳಗೆ ಏನೋ ಒಂದು ಉದ್ಭವಿಸುತ್ತೆ. ಏನು ಅಂತ ಹೇಳಲಾಗದ ಸೆಳಕು. ಕಂಠ ಬಿಗಿಯುವ ಉತ್ಕಟತೆ. ಈ ಸಾಲುಗಳನ್ನು ಅನುವಾದಿಸುವುದಕಿಂತ ಸುಮ್ಮನಿರುವುದೇ ವಾಸಿ ಅನ್ನಿಸುತ್ತದೆ. ಹೌದು, ಕೆಲವೊಂದು ಅದ್ಭುತ ಕೃತಿಗಳನ್ನು ಅನುವಾದಿಸಲು ಹೋಗಬಾರದು. ಅನುವಾದಿಸುವ ಹಟಕ್ಕೆ ಬಿದ್ದಾಗ ಎಷ್ಟೋ ಸಲ ಮೂಲಕ್ಕೆ ಮೋಸ ಮಾಡಿದಂತಾಗುತ್ತದೆ. ಅಥವಾ ಅನುವಾದಕನ ಆತ್ಮಸ್ಥೈರ್ಯ ಕುಂದುಹೋಗಬಹುದು. ಮೂಲಕ್ಕಿಂತಲೂ ಅದ್ಭುತವಾಗಿ ಅನುವಾದಿಸಿದ್ದರೂ ಎಲ್ಲೋ ಒಂದು ಕಡೆ ಅತೃಪ್ತಿ ಕಾಡದಿರದು. ಅದನ್ನೂ ಮೀರಿ ತೃಪ್ತಿ ಸಿಕ್ಕರೆ ಅನುವಾದಕ ಗೆದ್ದ ಅಂತ ಅರ್ಥ. ಹಾಗಾಗಿ ಈ ಹಾಡಿನ ಟ್ಯೂನಿಗೆ ಬೇರೆಯದೇ ಸಾಲುಗಳನ್ನು ಬರೆದಿದ್ದೇನೆ ನೋಡಿ:

ದಿಕ್ಕಿಲ್ಲದೂರಿನಲಿ ಸುತ್ತೆಲ್ಲ ಬೇಲಿಗಳು 

ಸದ್ದಿರದೆ ಪಾಲಿಸು ನೀ 

ಕಾಲನಾಣತಿ ಕಾಲನಾಣತಿ 

ಜನನ ಮರಣ ತುದಿಮೊದಲು 

ನಡುವೆ ನೂರು ತಿರುವುಗಳು 

ಕೊನೆಗೆ ಎಲ್ಲ ಕರಿನೆರಳು 

ಹೀಗೆ ಇನ್ನಷ್ಟು ಸಾಲುಗಳನ್ನು ಬರೆದಿದ್ದೆ.ಅದರೂ ಸಮಾಧಾನವಾಗಿರಲಿಲ್ಲವೆಂದೆ ಹೇಳಬಯಸುತ್ತೇನೆ.ಹಾಗೆಯೇ,ತಮಿಳು ಸಾಲುಗಳ ಜೊತೆಜೊತೆಗೆ ಆವರಣದಲ್ಲಿ ಬರುವ ಕನ್ನಡ ಸಾಲುಗಳು ಮೂಲಭಾವವನ್ನು ನಿಮಗೆ ಅರ್ಥ ಮಾಡಿಸುವ ಸಲುವಾಗಿ ಮಾತ್ರ ಅನುವಾದಿಸಲು ಪ್ರಯತ್ನಿಸಿದ್ದೇನೆ.ಅದು ಖಂಡಿತ ಪಕ್ಕಾ 'ಅನುವಾದ' ಅಲ್ಲ.

                                                     *****

ಈ ಸಾಲುಗಳನ್ನೆಲ್ಲ ಮೈಸೂರಿನಲ್ಲೇ ಬರೆದಿದ್ದು. ಬೆಂಗಳೂರಿಗೆ ಬಂದು ಸುದೀಪ್ ಮನೆಗೆ ಹೋಗಿ ಅವರ ತಂದೆಯವರ  ಕೈಗೆ ಜೆರಾಕ್ಸ್ ಪ್ರತಿಗಳನ್ನು ಕೊಟ್ಟೆ. ಪ್ರತಿಗಳ ಮೇಲೆ ಒಮ್ಮೆ ಕಣ್ಣಾಡಿಸಿ ಗಂಭೀರರಾದ ಸಂಜೀವ್ ರವರು ನನ್ನ ಅಡ್ರೆಸ್ಸು ಫೋನ್ ನಂಬರ್ ಪಡೆದುಕೊಂಡರು. ಸುದೀಪ್ ಕೂಡ ಸಾಲುಗಳನ್ನು ನೋಡಿದರು. ಅವರಿಗೆ ಅರ್ಥವಾಗಲಿಲ್ಲ ಅಂತ ಕಾಣುತ್ತೆ!ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕೊಟ್ಟರು. ಆತ ತನಗೆ ಏನು ಅರ್ಥವಾಯಿತೋ ಅದನ್ನು ಹೇಳಿದರು. ಸುದೀಪ್ ತಲೆದೂಗಿದರು. ಆಗಷ್ಟೇ ಚಂದು, ನಂದಿ ಚಿತ್ರಗಳನ್ನು ಮುಗಿಸಿ ಹೊಸದೇನಾದರು ಮಾಡಬೇಕೆಂಬ ಉತ್ಸಾಹದಲ್ಲಿದ್ದರು ಸುದೀಪ್. ಟೀ ತರಿಸಿಕೊಟ್ಟರು. ಕುಡಿದೆ. ಕೈಕುಲುಕಿ ಹೊರಟೆ. ಗೇಟಿನ ಹತ್ತಿರ ಬರುತ್ತಿದ್ದಂತೆಯೇ ಅವರ ತಂದೆ ಸಂಜೀವ್ ಹೇಳಿದರು,

"ಸದ್ಯಕ್ಕೆ ನಾಯಗನ್ ಸಿನಿಮಾ ಮಾಡುವ ಯೋಜನೆ ಕೈ ಬಿಟ್ಟಿದ್ದೇವೆ! ಸ್ವಲ್ಪ ದಿನದಲ್ಲೇ 'ರಂಗ ಎಸ್ಸೆಸ್ಸೆಲ್ಸಿ' ಅನ್ನುವ ಸಿನಿಮಾ ಶುರುವಾಗುತ್ತೆ. ಆಗ ಬನ್ನಿ. ಒಂದು ಹಾಡು ಬರೆಸೋಣ ಅಂದ್ರು'.ಪ್ರಾಮಾಣಿಕವಾಗಿ.  'ಸರಿ ಸಾರ್' ಎಂದಷ್ಟೇ ಹೇಳಿ ಅಲ್ಲಿಂದ ಹೊರಟೆ.

                                                       *****

ಕೆಲ ತಿಂಗಳುಗಳ ನಂತರ ಸುದೀಪ್ ನಾಲಿಗೆಗೆ ಹೆಬ್ಬೆರಳಿನಿಂದ ಸಹಿ ಹಾಕುತ್ತಿದ್ದ ಪುಟ್ಟ ಪೋಸ್ಟರೊಂದು ಸುಬೇದಾರ್ ಛತ್ರಂ ರಸ್ತೆಯಲ್ಲಿ ಕಣ್ಣಿಗೆ ಬಿತ್ತು. ಅದು ರಂಗ-ಎಸ್ಸೆಸ್ಸೆಲ್ಸಿ ಚಿತ್ರದ ಪೋಸ್ಟರು. ಚಿತ್ರ ಆಗಷ್ಟೇ ಶುರುವಾಗಿತ್ತು. ನಾನು ಮತ್ತೆ ಸುದೀಪ್ ಮನೆ ಕಡೆ ಹೋಗಲಿಲ್ಲ. ಸಿನಿಮಾ ಬಗ್ಗೆ ಸಂಪೂರ್ಣ ಆಸಕ್ತಿ ಕಳೆದುಕೊಂಡು ಮೈಸೂರಿಗೆ ಹೋದೆ. ಅಲ್ಲಿಂದ ಬಟ್ಟೆ ಬರೆ, ಮಾರಬೇಕಾದ ವಸ್ತುಗಳನ್ನು ಬ್ಯಾಗಿಗೆ ಹಾಕಿಕೊಂಡು ಜಾಗ ಖಾಲಿ ಮಾಡಿ ಕಲ್ಲಿಕೋಟೆ ಬಸ್ ಹತ್ತಿದೆ. ನಾಯಗನ್ ಎದೆಯಲ್ಲುಳಿದ, ತನ್ನ ಹಾಡುಗಳೊಂದಿಗೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಸುದೀಪ್ ನಾಯಗನ್, ಇಳಯರಾಜಾ ಟ್ಯೂನುಗಳು ಮತ್ತು ನನ್ನ ಲೈನುಗಳು: ಹೃದಯಶಿವ ಅಂಕಣ

 1. ನಿಮ್ಮ ಲೇಖನ ಹೃದಯ ತಟ್ಟಿತು, ಶಿವಾ….ಕೊನೆಯ ನಾಲ್ಕು ಸಾಲುಗಳು ಮಾತ್ರ ನೋವನ್ನು ಕೊಟ್ಟಿತು.  ನಿಮ್ಮಂತಹ ಕವಿಗಳು, ಹೊಟ್ಟೆ ಪಾಡಿಗಾಗಿ, ಆ ರಂಗಕ್ಕೆ ಹೋಗಬೇಕೇ ಅನಿಸಿತು.

 2. ನಾಯಗನ್ ಸಿನೆಮ  ಕೆಲ ತಿಂಗಳುಗಳ ಹಿಂದೆ ನೋಡಿದ್ದೇ.. 
  ನಾ ನೋಡಿದ್ದು ತೆಲುಗು ಡಬ್ ಮಾಡಿದ ಸಿನೆಮ . 
  ಅದನ್ನು ಕಾಪಿ ಮಾಡಿದ ಹಲ ಸಿನೆಮಾಗಳನ್ನು ಅದಾಗಲೇ ನೋಡಿದ್ದರಿಂದ ಇದು ಅಸ್ಟೇನು  ಇಷ್ಟ ಆಗಲಿಲ್ಲ  ಆದರೆ ಮಣಿ ರತ್ನಂ- ಕಮಲ್ ಹಸನ್ (ಸಂಬಂಧಿಕರು ) ಇಳಯ ರಾಜ  ಅಂತ ದಿಗ್ಗಜರು ಇದ್ದ ಸಿನೆಮ ಆದ ಕಾರಣ ಅದರ ಮೇಲೆ ನಿರೆಕ್ಷೆ ಇದ್ದುದು ಸಹಜ .. 
   
  ನಿಮ್ಮ ಕಥೆ ಕೇಳಿದ ಮೇಲೆ  ನೀವು ಅಸ್ಟು  ಕಷ್ಟ ಪಟ್ಟು ಬರೆದ  ಆ ಹಾಡುಗಳನ್ನು ಬಳಸಿ ಸಿನೆಮ ಮಾಡಲಿಲ್ಲ ಅಂತ  ಬೇಜಾರಾಯ್ತು .. 
  ಸುದೀಪ್ ಅವರು ಆಗ ಇನ್ನು ಎಳಸು ಹುಡುಗ ,ಈಗ ಆಗಿದ್ದರೆ  ನಿಮಂ ಶ್ರಮ ಅರ್ಥ ಆಗುತ್ತಿತ್ತು.. 
  ನಾನೂ ಓದಿರುವೆ  ಅವರು ಆ ಸಿನೆಮ ಕನ್ನಡದಲ್ಲಿ ಮಾಡಬೇಕು ಎಂದಿದ್ದು , ಅದಾಗಲೇ ಅವರು ಸ್ವಾತಿ ಮುತ್ತು ಮಾಡಿರುವರು.. 
  ಆದರೆ ಈ ತರಹದ ಕ್ಲಾಸಿಕ್ ಸಿನೆಮಾಗಳನ್ನು ಈಗಿನವರು ಮಾಡಿದರೆ ಅದ್ಕೆ ನ್ಯಾಯ ಸಿಗೋಲ್ಲ ಅನ್ಸುತ್ತೆ .. ಅವುಗಳನ್ನ್ನ ಹಾಗೆ ಬಿಡೋದು ಒಳ್ಳೇದು.. 
   
  ಸಿನೆಮ ಒಂದು ಮಾಯಾ ಲೋಕ . ಅಲ್ಲಿ ಯಶಸು ಕಠಿಣ ಪರಿಶ್ರಮ ಪಟ್ತೊರಿಗೆ  ಅಸಾಧ್ಯ ಇನ್ನು ಆಕರ್ಷಣೆಗೆ ಹೋದರೆ ಗೋವಿಂದಾ … !!
  ನೀವ್ ಬರೆದ ಹಾಡುಗಳನ್ನು ಅವುಗಳ ಹಾಡುಗಳನ್ನು ಕೇಳಿರುವೆ .. 
   
  ನನ್ನದೊಂದು ಮನವಿ – ಆದಸ್ಟು  ಹಾಡುಗಳು   ಒಳ್ಳೆ ಪದಗಳಲ್ಲಿ ಇರಲಿ , ಈಗ ಬರುವ  – ಹಳೆ ಪಾತ್ರೆ ಕಬ್ಬಿಣ , ಅಪ್ಪಾ ಲೂಜ ಅಮ್ಮಾ ಲೂಜಾ ,ಡವ್ ಡವ್  ದುನಿಯಾ ಕಣೋ , ವಯಕ , ಲಬಕ  ಬೇಡ ….. 
   
  ಆ ತರಹದ್ದು ಬರೆಯಲು ಯಾರದ್ರೂ ಒತ್ತಾಯಿಸಿದರೆ  ತಿರಸ್ಕರಿಸಿ ಮರಳಿ ಹಳ್ಳಿಗೆ ಹೋಗಿ.. 
  ಯಾಕೆಂದರೆ ಮುಂದೊಮ್ಮೆ ಈ ತರಹದ ನುಡಿಗಟ್ಟುಗಳು -ಹಾಡುಗಳು ಶಬ್ದ ಪದಗಳು ಎಲ್ಲೆಡೆ ಎಲ್ಲರ ಬಾಯಲ್ಲಿ ನಲಿದಾಡಿ ಮುಂದಿನ ಜನಾಂಗ ನೈಜ ಸಾಹಿತ್ಯ ಮರೆತಾರು .. 
   
  ನೀವ್ ಹಂಸಲೇಖ ಅವರ ಬಗ್ಗೆ ಇನ್ನಸ್ಟು ಮುಂದೊಮ್ಮೆ ಬರೆಯಿರಿ . 
  ಅವರು ಬರೆಯದ ಹಾಡಿಲ್ಲ -ನೀಡದ ಸಂಗೀತವಿಲ್ಲ . ಮಾಂತ್ರಿಕ -ಇಳಯ ರಾಜ  ಅವರಿಗೆ ಸಮ ಅಥವಾ ಹೆಚ್ಚೇ … 
   
   
  ನಿಮ್ಮ ಇನ್ನಸ್ಟು ಅನುಭವಗಳನ್ನು ಎದುರು ನೋಡುವೆ 
   
  ಶುಭವಾಗಲಿ 
   
  \।/

 3. ಸಿನೆಮಾಗಳ ಬಗ್ಗೆ ಅಷ್ಟೇನು ಆಸಕ್ತಿ ಇಲ್ಲದ ನಾನು ಇಂದು ನಿಮ್ಮ ಪೂರ್ಣ ಲೇಖನ ಓದಿದೆ. ಖುಷಿಯಾಯ್ತು.

Leave a Reply

Your email address will not be published.