[ಮಾನವನ ಮನೋವಿಕಾರಗಳಿಗೆ ಎಣೆಯಿಲ್ಲ. ಮನುಷ್ಯರನ್ನೇ ಗುಲಾಮರನ್ನಾಗಿಸಿ, ಚಿತ್ರಹಿಂಸೆ ನೀಡಿ ದುಡಿಸಿಕೊಂಡಿರುವ ಹಲವಾರು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅನೇಕ ತರಹದ ರಕ್ತಪಾತ, ಹೋರಾಟ, ಪ್ರತಿರೋಧಗಳಿಂದಾಗಿ ಜಗತ್ತಿನ ಹಲವು ಭಾಗಗಳಲ್ಲಿ ಮಾನವ ಗುಲಾಮಗಿರಿ ಎಂಬ ಅಮಾನುಷ ಕೃತ್ಯ ಹೆಚ್ಚು ಕಡಿಮೆ ಅಳಿದುಹೋಗಿದ್ದರೂ, ನಾಗರೀಕ ಸಮಾಜದಲ್ಲಿ ಅಲ್ಲಲ್ಲಿ ಇನ್ನೂ ಈ ಹೇಯ ಕೃತ್ಯ ಇನ್ನೂ ಉಳಿದುಕೊಂಡಿದೆ. ಜೀತ ಪದ್ಧತಿಯೆಂದು ನಮ್ಮಲ್ಲಿ ಕರೆಯಲಾಗುವ ಕೆಲವು ಘಟನೆಗಳನ್ನು ದಿನಪತ್ರಿಕೆಗಳಲ್ಲಿ ನಾವಿನ್ನೂ ಓದುತ್ತಿದ್ದೇವೆ. ಇದೇ ನಾಗರೀಕ ಸಮಾಜ ತನ್ನ ಮನರಂಜನೆಗಾಗಿ ಪ್ರಾಣಿಗಳನ್ನು ಪಳಗಿಸಿ ಗುಲಾಮಿತನಕ್ಕೆ ಒಡ್ಡುವ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಭಾರತ ಸರ್ಕಾರ ಸರ್ಕಸ್ಸ್‍ನಲ್ಲಿ ಪ್ರಾಣಿಗಳನ್ನು ಬಳಸುವುದನ್ನು ನಿಷೇಧಿಸಿದ್ದರೂ, ಕೆಲವು ಕಡೆಗಳಲ್ಲಿ ಪ್ರಾಣಿಗಳನ್ನು ಬಳಸುವುದು ಇನ್ನೂ ಜಾರಿಯಲ್ಲಿದೆ. ಬೃಹತ್ ದೇಹಿ ಆನೆಗಳು ಗುಲಾಮಿತನದಿಂದ ಹೊರತಾಗಿಲ್ಲ. ಈ ಘಟನೆಯಲ್ಲಿ ಸುಜಿ ಎಂಬ ಕುರುಡು ಆನೆಯನ್ನು ಅಂತ:ಕರಣ ಹೊಂದಿರುವ ವೈಲ್ಡ್‍ಲೈಫ್ ಎಸ್.ಓ.ಎಸ್. ಸಂಸ್ಥೆಯ ಯುವಕರು ಸರ್ಕಸ್ಸಿನ ಸಂಕೋಲೆಗಳಿಂದ ಸುಜಿಯನ್ನು ರಕ್ಷಿಸಿದ ಯಶೋಗಾಥೆಯಿದು. ತಿರುಪತಿಯಿಂದ ಮಥುರಾವರೆಗಿನ ಪಯಣದ ಯಶೋಗಾಥೆಯನ್ನು ಇಲ್ಲಿ ನೀಡಲಾಗಿದೆ]
ಫೆಬ್ರುವರಿ 1 2015: ವೈಲ್ಡ್‍ಲೈಫ್ ಎಸ್.ಓ.ಎಸ್. ಸಂಸ್ಥೆಯ ಯುವಕರು ಕಾನೂನಾತ್ಮಕವಾದ ಎಲ್ಲಾ ಹಂತಗಳನ್ನು ಪೂರೈಸಿದ ನಂತರ ನತದೃಷ್ಟ ಕುರುಡು ಆನೆ ಸುಜಿಯನ್ನು ತಿರುಪತಿಯಲ್ಲಿ ಬೀಡು ಬಿಟ್ಟಿರುವ ಸರ್ಕಸ್ಸ್‍ನಿಂದ ತಮ್ಮ ವಶಕ್ಕೆ ಪಡೆದರು. ಅದೊಂದು ಅವಿಸ್ಮರಣೀಯ ಕ್ಷಣ. ಕಣ್ಣಿಲ್ಲದ ಸುಜಿಗೊಂದು ಹೊಸ ಜೀವನ ನೀಡುವ ಹೆಬ್ಬಯಕೆಯಿಂದ ನಡೆಸಲಾದ ಕಾರ್ಯಚರಣೆಯ ಯಶಸ್ಸಿನ ಮೊದಲ ಮೆಟ್ಟಿಲು. ಸರ್ಕಸ್ಸಿನ ಇಕ್ಕಟ್ಟಿನ ಗಲೀಜು ಕೊಟ್ಟಿಗೆಯಿಂದ ಬಾಹ್ಯಪ್ರಪಂಚಕ್ಕೆ ಸುಜಿ ಕಾಲಿಟ್ಟ ಅಮೃತ ಘಳಿಗೆ. ತಿರುಪತಿಯಿಂದ ಮಥುರಾವರೆಗಿನ ದುರ್ಗಮ ರಸ್ತೆಯ ಹಾದಿಯನ್ನು ಕ್ರಮಿಸುವ ಪೂರ್ವದಲ್ಲಿ ಸಾಕಷ್ಟು ಬಾಳೆಹಣ್ಣು ಹಾಗೂ ಹಸಿಹುಲ್ಲನ್ನು ಸುಜಿಗೆ ನೀಡಲಾಯಿತು. ಸರ್ಕಸ್ಸಿನ ಮಾವುತನಿಂದ ನಿರಂತರವಾಗಿ ಅಂಕುಶದ ಏಟು ತಿಂದ ಸುಜಿ ಯಾವುದೇ ಗದ್ದಲಕ್ಕೆ ಆಸ್ಪದವಿಲ್ಲದಂತೆ, ಅದನ್ನು ಸಾಗಿಸಲು ನಿಯೋಜಿಸಿದ ಲಾರಿಯನ್ನು ಏರಿತು. ಲಾರಿ ಏರುವಾಗ ಸುಜಿಯ ಕುರುಡಗಣ್ಣಿನಿಂದ ತೊಟ್ಟು ಕಣ್ಣೀರು ಬಿತ್ತು. ಗುಲಾಮಿಗಿರಿಯಿಂದ ಬಿಡುಗಡೆಯಾದ ಸಂತೋಷದಿಂದ ಕೆಳಗೆ ಬಿದ್ದ ಅಶ್ರುಬಿಂದುವೇ ಇರಬಹುದು. ದೂರದ ಪ್ರಯಾಣಕ್ಕೆ ಬೇಕಾದ ಸಕಲ ತಯಾರಿಯನ್ನು ನಮ್ಮ ತಂಡ ಮಾಡಿಕೊಂಡಿತ್ತು.
ಫೆಬ್ರುವರಿ 6 2015: ಬೆಳಗಿನ 10 ಗಂಟೆ: ಸುಜಿಯನ್ನೊಳಗೊಂಡ ನಮ್ಮ ತಂಡ ಇದೀಗ ಯಶಸ್ವಿಯಾಗಿ 500 ಕಿ.ಮಿ. ದೂರವನ್ನು ಕ್ರಮಿಸಿತು. ಯಾವುದೇ ತಕರಾರಿಲ್ಲದೆ ಸುಜಿ ಕೂಡ ನಮ್ಮೊಂದಿಗೆ ಅದ್ಭುತ ಸಹಕಾರವನ್ನು ನೀಡಿದ್ದಾಳೆ. ಮಧ್ಯದಲ್ಲಿ ಒಂದು ಚಿಕ್ಕ ಅಪಘಾತದಂತಹ ಘಟನೆ ಬಿಟ್ಟರೆ ಇನ್ನೆಲ್ಲವೂ ಸಸೂತ್ರವಾಗಿಯೆ ನಡೆಯುತ್ತಿದೆ. ಲಾರಿಯಲ್ಲಿ ನಿಂತು ಸಾಕಾಗಿದ್ದರಿಂದ ಸುಜಿಗೊಂದು ವಿರಾಮ ಬೇಕು. ಮಹಾರಾಷ್ಟ್ರ ಗಡಿಯಲ್ಲಿ ಸ್ವಲ್ಪ ಹೊತ್ತು ಸುಜಿಗೊಂದು ವಿಶ್ರಾಂತಿ ನೀಡಬೇಕಾಗಿದೆ. ಸುಜಿಯನ್ನು ಕರೆದುಕೊಂಡು ಅಲ್ಲೇ ಮೈದಾನದಲ್ಲಿ ಸುಜಿಯ ಮೇಲ್ವಿಚಾರಕ ಅದರ ಮೈದಡವುತ್ತಾ ಹಲವು ಸುತ್ತುಗಳನ್ನು ಹಾಕಿದ. ಇದರಿಂದ ಸುಜಿಗೆ ಆನಂದ ಹಾಗೂ ಬಿಡುಗಡೆಯ ಭಾವ ಉಂಟಾಯಿತು. ಹೀಗೆ ಮೂರು ತಾಸು ಸುಜಿಗೆ ವಿಶ್ರಾಂತಿ ನೀಡಿ, ಮತ್ತೆ ಹೊರೆಟೆವು. ಸುಜಿಯ ಸುರಕ್ಷತೆಯ ಹಾಗೂ ದಾಖಲೆಯ ದೃಷ್ಟಿಯಿಂದ ಪ್ರತಿ ಹಂತದ ಛಾಯಚಿತ್ರವನ್ನು ತೆಗೆಯುವುದಕ್ಕೆ ನಮ್ಮ ತಂಡದ ಸದಸ್ಯರೊಬ್ಬರನ್ನು ನಿಯೋಜಿಸಿದ್ದೆವು.
ಮಹಾರಾಷ್ಟ್ರದ ಗಡಿಯನ್ನು ದಾಟುತ್ತಿದ್ದಂತೆ, ಸುಜಿಯನ್ನು ಹಿಂಬಾಲಿಸುತ್ತಿದ್ದ ನಮ್ಮ ತಂಡದ ಜೀಪಿನ ಫ್ಯಾನ್ ಬೆಲ್ಟ್ ತುಂಡಾಯಿತು. ಇದಕ್ಕೆಲ್ಲಾ ಪೂರ್ವ ತಯಾರಿ ನಮ್ಮ ಹತ್ತಿರವಿತ್ತು. ಬರೀ 20 ನಿಮಿಷದಲ್ಲಿ ಜೀಪನ್ನು ರಿಪೇರಿ ಮಾಡಿಕೊಂಡೆವು. ರಾತ್ರಿ 11 ಗಂಟೆ. ನಾವೀಗ ಮಹಾರಾಷ್ಟ್ರದ ಗಡಿಯನ್ನು ಪ್ರವೇಶಿಸಿಯಾಗಿದೆ. ಉತ್ತರ ಭಾರತದಲ್ಲಿ ಚಳಿಯ ಕೊರೆತ ಕಡಿಮೆಯಾಗಿ ಆಹ್ಲಾದಕರ ವಾತಾವರಣವಿದೆ. ರಾತ್ರಿಹೊತ್ತು ಕ್ಯಾಮರಾದ ಬೆಳಕಿನಿಂದ ಸುಜಿಯನ್ನು ಘಾಸಿಗೊಳಿಸಬಾರದು ಎಂಬ ಉದ್ಧೇಶದಿಂದ ಛಾಯಾಚಿತ್ರವನ್ನು ತೆಗೆಯಲಿಲ್ಲ.
ಫೆಬ್ರುವರಿ 7 2015: ರಾತ್ರಿ 2 ಗಂಟೆ. ಸುಜಿಯನ್ನು ಸುರಕ್ಷಿತವಾಗಿ ಮಥುರಾದವರೆಗಿನ ಪ್ರಯಾಣದ ಹಾದಿಯಲ್ಲಿ ಈಗ ಎದುರಿರುವ ಹಾದಿ ತುಂಬಾ ಅಪಾಯಕರವಾದ ದಾರಿಯಾಗಿದೆ. ಸುಜಿಯ ತಂಡಕ್ಕಿದು ಸಂಕಷ್ಟದ ಕಾಲ. ನಾವು ಹೋಗುತ್ತಿರುವ ಹಾದಿ ಡಕಾಯಿತರು, ದರೋಡೆಕೋರರು ಇರುವ ಜಾಗ. ಕೆಲವು ಗೊಂಡಾಗಳು ನಮ್ಮ ವಾಹನಗಳನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದರು. ಆದರೆ ನಮ್ಮ ಚಾಲಕರಿಗೆ ಈ ಹಾದಿಯ ಅನುಭವ ಇದ್ದುದ್ದರಿಂದ ನಿಲ್ಲಿಸಲಿಲ್ಲ. ಅಂತೂ ದಾರಿ ಬದಿಯಲ್ಲಿದ್ದ ಪೆಟ್ರೋಲ್ ಬಂಕ್‍ನ ಹತ್ತಿರ ಲಾರಿಯನ್ನು ನಿಲ್ಲಿಸಿ ಬೆಳಗು ಮಾಡಿದೆವು. ಇದೇ ದಿನ ಬೆಳಗ್ಗೆ 10 ಗಂಟೆಗೆ ನಮ್ಮ ಪಯಣ ಪುನ: ಪ್ರಾರಂಭವಾಯಿತು. ಇಷ್ಟರಲ್ಲಿ ನಾವು 1000 ಕಿ.ಮಿ. ಕ್ರಮಿಸಿದ್ದೆವು. ಲಾರಿಗೆ ಹತ್ತಿಸುವ ಮುಂಚೆ ಸುಜಿಗೆ ಅಲ್ಲಿ ಲಭ್ಯವಿದ್ದ ಜೋಳದ ಹಸಿಯನ್ನು ಹೊಟ್ಟೆತುಂಬಾ ನೀಡಿದೆವು. ಅದೇಕೋ ಕಲ್ಲಂಗಡಿ ಹಣ್ಣು ಸುಜಿಗೆ ಮೆಚ್ಚುಗೆಯಾದಂತೆ ತೋರಲಿಲ್ಲ. ಕೃತಕ ಹಾರ್ಮೊನೋ ಅಥವಾ ಕೀಟನಾಶಕದ ಘಮಟು ಇತ್ತೇನೋ?. ಸಂಜೆ 5 ಗಂಟೆಯಾಗುತ್ತಿದೆ. ಸುಜಿಯ ರಾತ್ರಿ ಊಟಕ್ಕೆ ಒಂದಷ್ಟು ಬಾಳೆಗೊನೆಗಳನ್ನು ಹುಡುಕುತ್ತಾ ಸಾಗುತ್ತಿದ್ದೆವು. ದಾರಿಯಲ್ಲಿ ಸಿಕ್ಕಿದ ಪಪ್ಪಾಯವನ್ನು ಸುಜಿಯೇಕೊ ಇಷ್ಟಪಡಲಿಲ್ಲ. ನಮ್ಮ ಮೊಬೈಲ್ ಮತ್ತು ಲ್ಯಾಪ್‍ಟ್ಯಾಪ್ ಬ್ಯಾಟರಿಗಳು ಮುಗಿದುಹೋಗಿದ್ದವು. ಮಧ್ಯದಲ್ಲೊಂದು ವಿಶ್ರಾಂತಿಯ ಅಗತ್ಯವಿದೆ. ರಾತ್ರಿ 10 ಗಂಟೆ: ಸುಜಿಯ ಹೊಟ್ಟೆ ತುಂಬಿ ಆಯಿತು. ನಮ್ಮೆಲ್ಲಾ ಪರಿಕರಗಳಿಗೂ ಚಾರ್ಜ್ ಮಾಡಿಯೂ ಆಯಿತು. ಮಥುರಾವೆಂಬ ಗಮ್ಯ ತಲುಪಲು ಇನ್ನೂ 1000 ಕಿ.ಮಿ. ಬಾಕಿಯಿದೆ. ಸುಭದ್ರ ಹಾಗೂ ಸುರಕ್ಷಿತ ರಸ್ತೆಯಾದ್ದರಿಂದ ರಾತ್ರಿಯಿಡಿ ಪಯಣ ಮಾಡಬೇಕು. ಟ್ರಕ್ಕಿಗೀಗ ಬೇರೆಯ ಚಾಲಕನಿದ್ದಾನೆ. ಫೆಬ್ರುವರಿ 8 2015, ಬೆಳಗಿನ 11 ಗಂಟೆ: ರಾತ್ರಿಯ ಪಯಣ ಸುಖಕರವಾಗಿಯೇ ಇತ್ತು. ನಾವೀಗ ರಾಜಸ್ಥಾನದ ಹತ್ತಿರ ಇದ್ದೇವೆ. ಸುಜಿಗೀಗ ಆಹಾರ ಮತ್ತು ವಿಶ್ರಾಂತಿ ಎರಡೂ ಬೇಕಾಗಿದೆ. ಭರಪೂರ ಕಲ್ಲಂಗಡಿ ಹಣ್ಣಿನ ಭೋಜನ ಸುಜಿಗೆ. ಫೆಬ್ರುವರಿ 9 2015, ಸರಿರಾತ್ರಿಯಲ್ಲಿ ರಾಜಸ್ಥಾನ ಪ್ರವೇಶ ಮಾಡಿದೆವು. ಸ್ವಲ್ಪ ಚಳಿ ಇದ್ದುದ್ದರಿಂದ ಸುಜಿಗೆ ಬೆಚ್ಚನೆಯ ರಜಾಯಿ ಹೊದಿಸಿದೆವು. ಗಮ್ಯಕ್ಕೆ ಹತ್ತಿರ-ಹತ್ತಿರವಾಗುತ್ತಿದ್ದೇವೆ.
ಫೆಬ್ರುವರಿ 9 2015, ಬೆಳಗಿನ 10 ಗಂಟೆ: ಸುಜಿಗೆ ಅಷ್ಟಾಗಿ ಇಷ್ಟವಿಲ್ಲದಿದ್ದರೂ ನಾವು ಕೇಜಿಗಟ್ಟಲೆ ಕಲ್ಲಂಗಡಿಯನ್ನೇ ಕೊಳ್ಳಬೇಕಾದ ಅನಿವಾರ್ಯತೆ. ದುರದೃಷ್ಟವಶಾತ್ ಸುಜಿಯ ಇಷ್ಟದ ಆಹಾರ ಅಲ್ಲೆಲ್ಲೂ ಕಂಡು ಬರಲಿಲ್ಲ. ಜೀಪಿನ ತುಂಬಾ ಕಲ್ಲಂಗಡಿಯನ್ನೆ ತುಂಬಿಕೊಂಡೆವು. ಗಮ್ಯ ತಲುಪಲು ಇನ್ನು ಬರೀ 300 ಕಿ.ಮಿ. ಸಾಗಬೇಕು. ಫೆಬ್ರುವರಿ 9 2015, ಮಧ್ಯಾಹ್ನ 3.30, ಸಿಹಿ ಸುದ್ಧಿ. ಮಥುರಾದ ಎಲಿಫೆಂಟ್ ಕನ್ಸರ್‍ವೇಷನ್ ಕೇರ್ ಸೆಂಟರ್ ತಲುಪಲು ಇನ್ನು ಬರೀ 5 ತಾಸಿನ ಪಯಣ. ಸುಜಿಗೆ ಖುಷಿಯಾದಂತೆ ಇದೆ. ಅತಿಯಾದ ಹಾಳಾದ ರಸ್ತೆಯಿಂದಾಗಿ ಪಯಣ ನಿಧಾನವಾಗುತ್ತಿದೆ. ಅಂದುಕೊಂಡ ಸಮಯಕ್ಕೆ ಗಮ್ಯ ತಲುಪುವುದು ಕಷ್ಟ. ಇದಕ್ಕೆ ಮುಂಜಾಗೂರುಕತೆಯಾಗಿ ಇನ್ನಷ್ಟು ಹಸಿ ಮೇವನ್ನು ಸಂಗ್ರಹಿಸಿದೆವು.
ರಾತ್ರಿ 11 ಗಂಟೆ: ನಾವೊಂದು ಬಗೆದರೆ, ದೈವವೊಂದು ಬಗೆಯಿತು ಎಂಬಂತೆ, ನಮ್ಮ ಲಾರಿ ಕೈ ಕೊಟ್ಟಿತು. ಇನ್ನು ರಾತ್ರಿ ಪಯಣ ಕನಸಿನ ಮಾತು. ಲಾರಿಯನ್ನು ಸರಿ ಮಾಡಿಕೊಂಡು ಹೊರಡುವುದು ಮಾರನೇ ದಿನವೇ ಆಯಿತು. ಒಂದು ಲೆಕ್ಕಕ್ಕೆ ಲಾರಿ ಹಾಳಾಗಿದ್ದು ಒಳ್ಳೆಯದೇ ಆಯಿತು. ಅಲ್ಲೊಂದಿಷ್ಟು ನುಣುಪಾದ ದೂಳಿನ ಗುಡ್ಡವಿತ್ತು. ಸುಜಿಯನ್ನು ಅಲ್ಲಿ ಬಿಟ್ಟೆವು. ಸಂತೋಷದಿಂದ ಆಡಿಕೊಂಡಿತು. ಮಥುರಾ ತಲುಪಲು ಇನ್ನು ಬರೀ 150 ಕಿ.ಮಿ. ಬಾಕಿಯಿದೆ.
ಫೆಬ್ರುವರಿ 10, ಮಧ್ಯಾಹ್ನ 2 ಗಂಟೆ: ಅಬ್ಬಾ!! ಗಮ್ಯ ತಲುಪಿದೆವು. ಇನ್ನು ಶಾಶ್ವತವಾಗಿ ಇದು ಸುಜಿಯ ಮನೆಯಾಗಿದೆ.
ಭಾರತದ ಸರ್ಕಸ್ಸಿನಲ್ಲಿ ಇನ್ನು 66 ಆನೆಗಳು ಹಿಂಸಕರ ಕೈಯಲ್ಲಿ ನರಳುತ್ತಿವೆ. ಇವುಗಳನ್ನು ರಕ್ಷಿಸುವ ಮಹತ್ತರ ಹೊಣೆ ನಮ್ಮ ಮೇಲಿದೆ. ನಿಮ್ಮ ಸಹಕಾರವಿದ್ದಲ್ಲಿ ಇದನ್ನು ಸಾಧಿಸಿ ಗುರಿ ಮುಟ್ಟುವೆವು. ನಿಮ್ಮೆಲ್ಲರ ಸಹಕಾರ ಸದಾ ಇರಲಿ.