-೧-
ಮೊದಮೊದಲು ಕ್ಷೇಮವಾಗಿಯೇ ಇತ್ತು ಜೀವನ, ಹೂವಿನಹಾಸಿಗೆಯಾಗಿತ್ತು. ಯಾರಿಗೆ ಗೊತ್ತಿತ್ತು? ಹೀಗೆ ಮುಳ್ಳಿನದಾರಿಯಾಗುವುದೆಂದು?, ಬದುಕು ಕಣ್ಣೀರ ಕಡಲಾಗುವದೆಂದು. ಮನೆಗೆನಾನೊಬ್ಬಳೆ ಮಗಳು, ಅರಮನೆಯಂಥ ಮನೆಗೆ ನಾನೇ ಒಡತಿ. ಅವ್ವನನ್ನನ್ನು ಅಪ್ಪನ ಕೈಗಿಟ್ಟು ಶಿವನ ಪಾದಾ ಸೇರಿದ್ದಳು. ಅವ್ವ ಹೋದಮ್ಯಾಗ ಊರ ಜನ ಅಪ್ಪನಿಗೆ ಇನ್ನೊಂದು ಮದುವೆ ಆಗುವ ಸಲಹೆನೀಡಿದ್ದರೂ, ಹೊಸದಾಗಿ ಬರುವ ಹೆಂಗಸು ಹೆಂಗಿರತಾಳೋ?. ತಾಯಿ ಇಲ್ಲದ ತಬ್ಬಲಿಗೆ ಮಲತಾಯಿ ಹಿಂಸೆ ಬೇರೆ ಬೇಡ ಅಂತಾ ಕಣ್ಣಲ್ಲಿ ಕಣ್ಣಿಟ್ಟು, ಅಂಗೈಯಲಿ ಅರಗಿಣಿ ಸಾಕಿದಾಂಗ ನನ್ನ ಸಾಕಿದ್ದ. ನಾ ಬೆಳದ ದೊಡ್ಡಾಕಿ ಆದಾಂಗ ನಮ್ಮಪ್ಪನ ಇಡೀ ಸಾಮ್ರಾಜ್ಯಕ್ಕನ ನಾನ ರಾಜಕುಮಾರಿಯಾದೆ. ಹರೆಯದ ಮೈಯಾಗ ಚಿತ್ತಾರ ಅರಳಿ ಎದೆಭಾರ ಆಗತೊಡಗಿದರೆ, ಕನಸುಕಾಂತಿ ತುಂಬಿಕೊಂಡ ಕಣ್ಣುಗಳು ಆಕಷರ್ಣೆಯ ಕೇಂದ್ರ ಬಿಂದುಗಳಾದವು, ಯೌವ್ವನ ಎಂಬ ಮನ್ಮಥ ಮನದಂಗಳದಲ್ಲಿ ರಂಗೋಲಿ ಬಿಡಸುತ್ತಿದ್ದರೆ, ಬಯಕೆಗಳು ದೇಹದ ನರನಾಡಿಗಳಲ್ಲಿ ಬೆಂಕಿ ಹಚ್ಚುತ್ತಿದ್ದವು. ಬಿಸಿ ತುಪ್ಪ ಹಂಗ ಎಷ್ಟ ದಿನಾಂತ ಅಂಗೈಯಲ್ಲಿ ಇಟಕೊಂಡ ಇರಾಕ ಆಗತೈತಿ? ಅಪ್ಪನಿಗೆ ನನ್ನ ಮದ್ವಿ ಚಿಂತೆ ಆರಂಭವಾಯಿತು. ಆದರೆ ನನ್ನನ್ನು ಮದುವೆ ಮಾಡಿ ದೂರದ ಊರಿಗೆ ಕಳಿಸುವುದು ಅವನಿಗೆ ಇಷ್ಟವಿರಲಿಲ್ಲ. ಮಗಳು ಹೋದರೆ ಈ ಅರಮನೆಯಂಥ ಮನೆಗೆ ಯಾರು ವಾರಸದಾರರು ಎನ್ನುವ ಯೋಚನೆ ಅಪ್ಪನದು. ಅಪ್ಪನ ಕೊರಗು ಕಂಡು ನನಗೂ ಈ ಮನೆಬಿಟ್ಟು ದೂರ ಹೋಗುವ ಮನಸಿರಲಿಲ್ಲ. ನಾನೂ ಅದೇ ಯೋಚನೆಗೆ ಬಿದ್ದೆ. ಇಂಥದರಲ್ಲಿ ಅಪ್ಪನಿಗೆ ಅದೇನು ವಿಚಾರ ಹೊಳೆಯಿತೋ ನನ್ನಹತ್ತಿರ ಬಂದವನೆ “ಗಂಗಾ, ಮಗಳೇ! ನಿನಗಾಗಿ ಎಂತೆಂಥ ಶ್ರೀಮಂತಮನೆತನಗಳು ಬಂದು ಹೋಗುತ್ತಿದ್ದರೂ ನಾನು ಅವುಗಳನ್ನುತಿರಸ್ಕರಿಸಿದ್ದೇನೆ, ಕಾರಣ ನೀನು ಈ ಮನೆ ಬಟ್ಟು ಹೋದರೆ ಈಮನೆ ಆಸ್ತಿ ಪಾಸ್ತಿಯ ಗತಿಯೇನು? ಈ ಮನೆಗೆ ಒಡತಿಯಾಗಿ, ಮಹಾರಾಣಿಯಾಗಿ ನೀನು ಇಲ್ಲೇ ಇರಬೇಕು ಅನ್ನುವ ಆಸೆ ನನ್ನದು.ನನಗೊಬ್ಬ ಗಂಡ ಮಗಾ ಇದ್ದಿದ್ದರ ಇದರ ಬಗ್ಗೆ ಯೋಚನೆ ಮಾಡುವ ಅಗತ್ಯವಿರಲಿಲ್ಲ. ನನಗೆ ಗಂಡು ಹೆಣ್ಣು ಎಲ್ಲಾ ನೀನೇ ಅಂದಾಗ ಒಬ್ಬ ಬಡ ಹುಡಗನ ಜೊತೆ ನಿನ್ನ ಮದುವೆ ಮಾಡಿ, ಅವನನ್ನೇ ಮನೆ ಅಳಿಯನನ್ನಾಗಿಸಬೇಕು ಅನ್ನುವುದು ನನ್ನಾಸೆ.’“ನಿನ್ನ ಇಚ್ಛೆಯಂತೆಯೇ ಆಗಲಿ, ನಾನು ಆಡಿ ಬೆಳೆದ ಈಮನೆ. ಮಾತೃ ಹೃದಯವಿರುವ ತಂದೆಯನ್ನು ಬಿಟ್ಟು ಹೋಗುವ ಮನಸ್ಸಾದರೂ ಯಾರಿಗೆ ಆದೀತು? ನಾನು ಹೋದರೆ ನಿನ್ನ ಗತಿಯೇನು? ನಿನ್ನ ಆರೋಗ್ಯದ ಗತಿಯೇನು? ನನಗೂ ಮದುವೆ ಆಗಿ ಬೇರೆ ಊರಿಗೆ ಹೋಗುವ ಮನಸ್ಸಿಲ್ಲ.” ಎನ್ನುವ ಮೂಲಕತಂದೆಯ ಮಾತಿಗೆ ಸಮ್ಮತಿ ವ್ಯಕ್ತ ಪಡಿಸಿದ್ದಳು.
ನಿರ್ಧರಿಸಿದಂತೆ ಮನೆ ಆಳಿಯನ ಅನ್ವೇಷಣೆಆರಂಭವಾಯ್ತು. ಬಡ ಮನೆತನದ, ಸುಂದರ, ಗುಣವಂತ , ಮನೆ ಅಳಿಯನಾಗ ಬಯಸುವ ಹುಡುಗ ಬೇಕಂತಾ ಎಲ್ಲಾಕಡೆ ಹೇಳಿ ಕಳಸಿದ್ದೆ ತಡ ಮನೆ ಮುಂದೆ ವರ ಜಾತ್ರೆ ಸೇರಿತು. ಕೆಲವರು ದುಡ್ಡಿನ ಆಸೆಗೆ ಇನ್ನೂ ಕೆಲವರು ಶ್ರೀಮಂತಿಕೆ ಆಸೆಗೆ, ಕೆಲವರು ನನ್ನ ಸೌಂದರ್ಯದಾಸೆಗೆ ಹೀಗೆ ಹಲವಾರು ಕಾರಣಗಳಿಗಾಗಿ ಬಂದವರಾಗಿದ್ದರು. ಆದರೆ ಬಂದವರಲ್ಲಿ ಒಬ್ಬರಾದರು ತನಗೆ ಒಪ್ಪುವ,ತನಗೆ ಸರಿಯಾದ ಜೋಡಿ ಅನಿಸುವ ಒಬ್ಬನಾದರು ಬೇಕಲ್ಲ. ಎಂತಂಥ ಮೊಸಡಿಯ, ಕುಳ್ಳರು, ಕಳ್ಳರು ಎಲ್ಲ ಬಂದಿದ್ದು ಕಂಡು ಅಪ್ಪ ನಿರಾಸೆಯಾಗಿ ಕೈಚಲ್ಲಿ ಕುಳಿತ. ಇಂಥದರಲ್ಲಿ ನಾನು ಮಂಕಾಗಿ ಹೋದೆ.ಮುಂದೇನು ಅನ್ನುವ ಪ್ರಶ್ನೆ ಕಾಡಲಾರಂಭಿಸಿತು. ಅಷ್ಟರಲ್ಲಿ ರಂಗನ ನೆನಪಾಯಿತು. ಹೌದು ರಂಗನೇ ನನ್ನ ಜೀವನ ಸಂಗಾತಿಯಾಕಾಗಬಾರದು. ರೂಪದಲ್ಲಿ, ಗುಣದಲ್ಲಿ ಅಪ್ಪಟ ಚಿನ್ನ! ಅವನನ್ನೇ ಮದ್ವೆ ಯಾಕಾಗಬಾರದು? ಅನ್ನುವ ವಿಚಾರ ಬಂದರೂ ಅಪ್ಪ ಈ ವಿಚಾರಕ್ಕೆ ಒಪ್ಪತಾನಾ ಅನ್ನುವ ಅನುಮಾನ, ಏಕೆಂದರೆ ರಂಗ ಮನೆ ಜೀತದಾಳು ಚಂದ್ರಪ್ಪನ ಮಗ. ಬಾಲ್ಯದಿಂದಲೇ ಅವನೊಂದಿಗೆ ಸಲುಗೆ. ಜಾತಿ-ಮತ, ಬಡತನ-ಸಿರಿತನ ಎನ್ನುವ ಭೇದ ಭಾವವಿಲ್ಲದೆ ಇಬ್ಬರೂ ಸೇರಿ ಶಾಲೆಗೆ ಹೋಗುತ್ತಿದ್ದದ್ದು, ಆಟ ಆಡುತ್ತಿದ್ದದು, ಕೆಸರು ಗದ್ದೆಗಳಲ್ಲಿ ಓಡಾಡುತ್ತಿದ್ದದು, ಬಾವಿ ನೀರಿಗೆ ಬಿದ್ದು ಈಜಾಡುತ್ತಿದ್ದದು, ಬಾಲ್ಯದ ಎಲ್ಲ ನೆನಪುಗಳು ಮರುಕಳಿಸಿ ಹೃದಯ ಆರ್ದ್ರಗೊಂಡು ಕಣ್ಣುಗಳು ತೇವಗೊಂಡಿದ್ದವು. ರಂಗ ಮತ್ತು ತನ್ನ ನಡುವೆ ಸ್ನೇಹ ಅನ್ನುವುದು ಬಿಟ್ಟರೆ ಇಲ್ಲಿಯವರೆಗೂ ಮತ್ತೇನೂ ಇಲ್ಲ. ಆದರೆ ದೇವರು ಈ ರಂಗನನ್ನು ತನಗಾಗಿಯೇ ಸೃಷ್ಟಿ ಮಾಡಿರಬೇಕು ಎನ್ನುವ ಯೋಚ್ನೆ ಕಾಡಲು ಕಾರಣವಾದರೂ ಏನೀರಬಹುದು?. ಬಾಲ್ಯದ ಗೆಳೆಯ ಜೀವನ ಸಂಗಾತಿಯಾಗಬೇಕಾದರೆ ಪುಣ್ಯ ಮಾಡಿರಬೇಕು. ಈ ವಿಷಯ ಹೇಗಾದರು ಧೈರ್ಯ ಮಾಡಿ ಅಪ್ಪನ ಮುಂದೆ ಹೇಳಿ ಬಿಡಬೇಕು ಅಂಕೊಂಡ ಹೇಳಿದರೆ ಅಪ್ಪನು ಅಷ್ಟೇ ಸಂತೋಷದಿಂದ, ಅಷ್ಟೇಸಲಿಸಾಗಿ ಒಪ್ಪಿಕೊಂಡದ್ದು ಕಂಡು ಆನಂದಾಶ್ಚರ್ಯ ಏಕ ಕಾಲಕ್ಕೆ ಆಗದೇ ಇರಲಿಲ್ಲ.“ಹೌದಲ್ವೆ, ಮನೆಯಲ್ಲಿ ತುಪ್ಪಾ ಇಟ್ಕೊಂಡು ಊರೆಲ್ಲ ಅಲೆದಾಂತಾಯಿತು ನೋಡು, ಯಾವದಕ್ಕೂ ಒಂದು ಸಾರಿ ನಿಮ್ಮ ವಕೀಲ ಕಾಕಾನ ಸಲಹೆ ತಗೆದುಕೊಂಡರೆ ಮುಂದಿನ ದಾರಿ ಸುಲಭವಾಗುತ್ತೆ” ಅಂತ್ಹೇಳಿ ವಕೀಲಕಾಕಾನನ್ನು ಕರೆಸಿ ಮಾತಾಡಿದ ನಂತರ ಮದುವೆಗೆ ಹಸಿರು ನಿಶಾನೆ ತೋರಿಸಿದ ಕೆಲವೇ ದಿನಗಳಲ್ಲಿ ನನ್ನ ಮತ್ತು ರಂಗನ ಮದುವೆ ನಡೆದು ಹೋಯಿತು. ರಂಗ ಮನೆಗೆ ಅಳಿಯನಾಗಿ ಬಂದರೂ ಆಳಾಗಿ ದುಡಿಯುವುದು ಮಾತ್ರ ನಿಲ್ಲಿಸಲಿಲ್ಲ. ನಮ್ಮಆಸ್ತಿ ಪಾಸ್ತಿ ಬಗ್ಗೆ ತೆಲೆ ಕೆಡಿಸಿಕೊಳ್ಳದೆ , ಯಾವುದಕ್ಕೂ ಆಸೆ ಪಡದೆ,ತಾನು ಮನೆ ಜೀತದಾಳು ಅನ್ನುವುದನ್ನು ಮರೆಯದೆ ಮಣ್ಣಲ್ಲಿ ಮಣ್ಣಾಗಿ, ಎತ್ತುಗಳ ಜೊತೆ ಎತ್ತಾಗಿ ದುಡಿಯುತ್ತಿದ್ದ. ಅಪ್ಪ ರಂಗನ ಪ್ರಾಮಾಣಿಕತೆ, ದುಡಿಮೆ ಎಲ್ಲ ನೋಡಿ ನನ್ನ ಆಯ್ಕೆ ಸರಿಯಾದದ್ದು ಎಂದು ಖುಷಿಯಾಗಿದ್ದ. ತನ್ನ ಮನೆ ಅಳಿಯನ ಬಗ್ಗೆ ಹೆಮ್ಮೆ ಪಡುತ್ತಿದ್ದ, ತನ್ನ ಆಸ್ತಿಗೆ ಒಡೆಯನಾಗುವ ಅರ್ಹತೆ ರಂಗನಲ್ಲಿ ಇದೆ ಎಂದುಕೊಂಡ. ಹಾಗೂ ಅವನಿಂದಲೇ ತನ್ನ ಆಸ್ತಿಯ ರಕ್ಷಣೆ ಮತ್ತು ಸಮೃದ್ಧಿಯಾಗುತ್ತದೆ ಎಂದು ಭಾವಿಸಿದ್ದ.
-೨-
ಅದೊಂದು ಸಂಜೆ, ನಾವೆಲ್ಲ ಮನೆಯಂಗಳದಲ್ಲಿ ಕುಳಿತು ಸೂರ್ಯಾಸ್ತದ ಸೌಂದರ್ಯ ಸವಿಯುತ್ತಿದ್ದರೆ ನಡು ಪ್ರಾಯದ ಹೆಣ್ಮಗಳೊಬ್ಬಳು ಬಂದು ಅಪ್ಪನ ಕಾಲಿಗೆ ಎರಗಿದಳು. ಅವಳ ಜೊತೆ ಇಬ್ರು ಗಂಡ ಮಕ್ಕಳು ಇದ್ದರು, ವಯಸ್ಸು ಸುಮಾರು ಹನ್ನೇರಡರಿಂದ ಹದಿನೈದರ ಒಳಗೆ ಇರಬಹುದು. ಮಕ್ಕಳೊಂದಿಗೆ ಕಾಲಿಗೆ ಬಿದ್ದಿದ್ದ ಅವಳು ಹೇಳಲಾರಂಭಿಸಿದಳು. “ಸೌಕಾರ್ರೇ…ನಮ್ಮನ್ನು ನೀವೇ ಕಾಪಾಡಬೇಕು, ನಮ್ಮನ್ನು ನೀವೇ ಎತ್ತಕೋಬೇಕು ನಾವೆಲ್ಲ ಹಾಳಾದ್ವಿ.ನಮ್ಮ ನಾಟಕ ಕಂಪನಿ ನಿಮ್ಮೂರಾಗ ಲಾಸಾಗಿ ನಾವೆಲ್ಲ ಬೀದಿಗೆ ಬಂದ್ವಿ, ನಮ್ಮ ಕಲಾವಿದರು ಕೆಲಸದವರೆಲ್ಲ ದುಡ್ಡು ಕೊಡಲಿಲ್ಲಂತಾ ಹೇಳಿ ಓಡಿ ಹೋಗಿ ಬೇರೆ ಕಂಪನಿ ಸೇರಿದರು. ನೀವು ತುಂಬ ದೊಡ್ಡ ಹೃದಯದವರು ದಾನಿಗಳು ಅಂತಾ ನಮಗೆ ಜನ ಹೇಳಿದ್ದಾರೆ, ನೀವೇ ನಮಗೇನಾದರೂ ದಾರಿ ತೋರಿಸಬೇಕು” ಎಂದು ಅಂಗಲಾಚಿ ಬೇಡಿಕೊಂಡಳು. ಬಂದವಳು ಶೀಲಾ, ನಾಟಕ ಕಂಪನಿಯ ಒಡತಿ ಅಷ್ಟೇಯಲ್ಲ ಒಳ್ಳೆ ಕಲಾವಿದೆ ಎನ್ನುವುದು ಅಪ್ಪನಿಗೆ ಗೊತ್ತಿತ್ತು. ಅಪ್ಪ ಒಂದೆರಡು ಬಾರಿ ನಾಟಕ ನೋಡಲು ಸಹ ಹೋಗಿದ್ದ, ಮಹಾಸಾದ್ವಿನಾಟಕದಲ್ಲಿ ಸಾದ್ವಿ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮನಗೆದ್ದು ಅವರ ಕಣ್ಣೀರು ಹರಿಸಿ ಸೈ ಅನಿಸಿಕೊಂಡ ನಾಟಕದ ನಾಯಕಿ, ಮಹಾನಕಲಾವಿದೆ.ಅವಳ ಪಾತ್ರ ಅಪ್ಪನ ಮನಸಿನ ಪರದೆಯ ಮೇಲೆ ಇನ್ನೂ ಜೀವಂತ ಇರುವಾಗಲೇ ಅವಳು ಬಂದು ಅಂಗಲಾಚಿದ್ದಳು. ಅಪ್ಪ ಸುತ್ತು ಹಳ್ಳಗಳಿಗೆಲ್ಲ ದೊಡ್ಡ ಸಾವಕಾರ ಕೊಡಗೈ ದಾನಿ ಎಂದೇಪ್ರಖ್ಯಾತನಾದವ. ತನ್ನ ಊರಲ್ಲಿ ನಾಟಕದವರ ಪಾಡು ಹೀಗಾಯಿತಂದರೆ ತನ್ನ ಊರಿಗೆ ಮಾತ್ರ ಅವಮಾನದ ವಿಷಯವಲ್ಲ, ಅದು ತನ್ನಮರ್ಯಾದೆ ಪ್ರಶ್ನೆಯೂ ಹೌದು ಎಂದು ಅಂದುಕೊಂಡು ಆಯ್ತು, ಮುಂದೇನಾದರು ಮಾಡಿದರಾಯಿತು ಈಗ ಸಧ್ಯ ನೀವೆಲ್ಲ ನಮ್ಮಲ್ಲೆ ಇದ್ದು ಬಿಡಿ” ಎಂದು ಆಜ್ಙೆ ಮಾಡಿ ಬಿಟ್ಟಿದ್ದ.ಅದಕ್ಕೆ ಪ್ರತಿಯಾಗಿ ಅಪ್ಪನಿಗೆ ನಾಟಕ ಶೈಲಿಯಲ್ಲಿ “ನೀವೇ ನಮ್ಮ ಪಾಲಿನ ಸಾಕ್ಷಾತ್ ದೇವರು, ನಿಮ್ಮಂಥವರುಇರುದರಿಂದಲೇ ಭೂಮಿ ಮೇಲೆ ಕಾಲಕಾಲಕ್ಕೆ ಮಳೆ ಬೆಳೆ ಎಲ್ಲ” ಎಂದು ಡೈಲಾಗ ಹೊಡೆದಂತೆ ಹೇಳಿದ್ದಳು. ಗಂಡ ಕೆಲವು ತಿಂಗಳ ಹಿಂದೆ ಯಾವುದೋ ಕಾಯಿಲೆಯಿಂದ ಅಸುನೀಗಿದ್ದು, ಗಂಡ ಇರುವತನಕ ನಾಟಕ ಕಂಪನಿ ಸರಿಯಾಗಿ ನಡದಿತ್ತು. ಅವನ ಸತ್ತ ನಂತರ ಕಂಪನಿ ಕ್ಯಾಶಿಯರ ಇವಳನ್ನು ವಂಚಿಸಿ, ಇದ್ದ ದುಡ್ಡು ತಗೆದುಕೊಂಡು ಫರಾರಿಯಾಗಿದ್ದಕ್ಕನೇ ಇಷ್ಟೆಲ್ಲ ಆವಾಂತರಕ್ಕೆ ಕಾರಣವಾಗಿತ್ತು.
ಒಂದು, ಎರಡು, ಮೂರು ಹೀಗೆ ಐದಾರು ತಿಂಗಳು ಕಳೆದರೂ ಶೀಲಾ ಮಾತ್ರ ಮನೆ ಬಿಡುವ ಮಾತೇ ಇಲ್ಲ. ಅಪ್ಪನ ಸ್ವಭಾವದಲ್ಲೂ ಬರಬರುತ್ತ ವ್ಯತ್ಯಾಸವಾಗತೊಡಗಿತು, ಅಪ್ಪ ಶೀಲಾಳ ಜೊತೆಯಲ್ಲೆ ಹೆಚ್ಚಿನ ಸಮಯ ಕಳೆಯತೊಡಗಿದ, ಅವನು ಅವಳ ಬಣ್ಣದ ಮಾತುಗಳಿಗೆ, ಮಿಂಚಿನ ನಗುವಿಗೆ ಮರುಳಾಗ ತೊಡಗಿದ. ನಮಗೆಲ್ಲ ಏನು ಗ್ರಹಚಾರ ಕಾದಿತ್ತೋ ಒಂದಿನ ಅಪ್ಪ ಗುಟ್ಟಾಗಿ ಮದುವೆ ಮಾಡಿಕೊಂಡು ಬಂದು ಮನೆಯಲ್ಲಿ ಅವಳಿಗೂ ಅವಳ ಮಕ್ಕಳಿಗೂ ಅಧಿಕೃತ ಸ್ಥಾನ ಕಲ್ಪಿಸಿಯೇ ಬಿಟ್ಟ. ನನಗೆ ಮಲತಾಯಿ ಕರುಣಿಸುವ ಮೂಲಕ ರಾಜೇಶ ಮತ್ತು ನಾಗೇಶಎಂಬ ಶೀಲಾಳ ಮಕ್ಕಳಿಗೆ ಸ್ವಂತ ತಂದೆಕ್ಕಿಂತ ಹೆಚ್ಚಾದ. ಶೀಲಾ ಮಹಾಸಾದ್ವಿ ಪಾತ್ರದಿಂದ ಮನೆಯ ಮಹಾರಾಣಿ ಪಾತ್ರಕ್ಕೆ ಬಡ್ತಿಹೊಂದಿದಳು. ಮನೆಯಲ್ಲಿ ಅವಳ ದರ್ಬಾರ ಜೋರಾಗಿಯೇ ನಡೆಯಿತು. ಅವಳ ಇಬ್ಬರು ಮಕ್ಕಳು ಅವಳ ಸಾಮ್ರಾಜ್ಯದ ರಾಜಕುಮಾರರು, ನಾನು ಮತ್ತು ರಂಗ ಇಬ್ಬರೂ ಮನೆ ಕೆಲಸದಾಳಗಳುಮಾತ್ರ ಆಗಿ ಉಳಿದು ಬಿಟ್ಟೆವು. ಇವಳಿಗೆ ಬಡ್ತಿ ಸಿಕ್ಕ ವಿಚಾರ ತಿಳಿದು ಇವಳ ಹಳೆ ಗೆಳೆಯರು ಮಿಂಡರು ಎಲ್ಲ ಮನೆಗೆ ಬಂದು ವಕ್ಕರಿಸಲಾರಂಭಸಿದರು, ಇದರಲ್ಲಿ ಆ ಕ್ಯಾಶೀಯರ್ ಕಾಶೀನಾಥ ಕೂಡಇದ್ದ. ಶೀಲಾ ಅವನನ್ನು ಕಾಶೀ ಎಂದೇ ಕರೆಯುತ್ತಿದ್ದಳು. ಬರಬರುತ್ತಮನೆ, ಮನೆ ಹೋಗಿ ನಾಟಕ ಥೇಟರ ಆಗಲು ಆರಂಭಿಸಿತು. ಇಷ್ಟೆಲ್ಲ ದಿನ ಅವ್ವ ಸತ್ತ ಮೇಲೆ ಅಪ್ಪ ಒಂಟಿಯಾಗಿ ಜೀವನ ಸಾಗಿಸಿದ್ದಾನೆ ಎನೋ ಇರಲಿ ಎಂದು ಸಮ್ನೆ ಕುಳಿತ್ತಿದ್ದೆ. ನಾನು ಒಂದು ದಿನಅಪ್ಪನ ಬೆನ್ನ ಹಿಂದೆ ನಡೆಯುತ್ತಿರುವದೆಲ್ಲ ಹೇಳಿದರೆ ತನ್ನದು ಚಾಡಾ ಹೇಳಿದಳು ಅಂತಾ ಶೀಲಾ ನನ್ನ ಮೇಲೆ ಹಗೆತನ ಸಾಧಿಸಲು ಆರಂಭಿಸಿದಳು. ನಾನು ಹೇಳಿದ್ದು ಮಾತ್ರ ಅಪ್ಪನ ಮೇಲೆ ಯಾವುದೇಪರಿಣಾಮ ಬೀರಲೇ ಇಲ್ಲ. ಇದರ ಬದಲು ಅವಳು ಹೇಳಿದ್ದೆ ಸರಿ ಅಂತಾ ಕುಣಿಯಲು ಆರಂಭಿಸಿದ್ದ. ಹೇಳಿಕೇಳಿ ನಾಟಕದವಳು. ಮಹಾಸಾದ್ವಿ ಪಾತ್ರಧಾರೀಣಿಯ ನಾಟಕೀಯ ಕಣ್ಣೀರಿಗೆ ಕರಗಿದ. ಅಪ್ಪನ ಎದುರಲ್ಲೆ ಅವಳು ನನ್ನನ್ನು, ನನ್ನ ಗಂಡನ್ನು ಉಟ್ಟ ಬಟ್ಟೆ ಮೇಲೆ ಹೊರಗೆ ಹಾಕಿದರೆ ಅಪ್ಪ ಕೇವಲ ಮೂಕ ಪ್ರೇಕ್ಷಕನಾಗಿದ್ದ.
ದುಡಿಮೆಯನ್ನೇ ನಂಬಿದ್ದ ಶ್ರಮಜೀವಿ ಪತಿ ನನ್ನೊಂದಿಗೆ ಇರುವಾಗ ನಾ ಯಾರಿಗೂ ಹೆದರಬೇಕಾಗಿರಲಿಲ್ಲ. “ನೀನು ಹೆದರಬೇಡ, ನನ್ನ ಶಕ್ತಿ ಮೀರಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ”ಎಂದಾಗ ನನ್ನ ಕಣ್ಣಲ್ಲಿ ಆನಂದ ಭಾಷ್ಪ. ಪ್ರಾಣಕ್ಕಿಂತ್ ಹೆಚ್ಚಾಗಿ ಪ್ರೀತಿಸುವ ಪತಿ ಬಾಳಿನುದ್ದಕ್ಕೂ ನೆರಳಾಗಿ ಇರುವಾಗ ಈ ಊರಾದರೇನು? ಇನ್ನೊಂದು ಊರಾದರೇನು?, ಊರು ಬಿಟ್ಟು ಬಂದುದುಡಿದು ಬದುಕಲಾರಂಭಿಸಿದೆವು. ಹೀಗೆ ಹಲವು ವರ್ಷಗಳು ಗತಿಸಿದವು.ನಮ್ಮ ಬಡತನದ ಜೀವನ ನಮ್ಮ ಪಾಲಿಗೆ ಇತ್ತು. ಈ ನಡುವೆ ಒಂದು ಗಂಡು, ಇನ್ನೊಂದು ಹೆಣ್ಣು ನನ್ನ ಒಡಲ ತುಂಬಿದವು.ಹಿರಿಯ ಮಗ ಶರತ್ನಿಗೀಗ ಆರು ವರ್ಷ, ಮಗಳು ಶೃತಿಗೆ ಮೂರು ವರ್ಷ. ಬದುಕಿನ ಬಂಡಿ ಹೇಗೋ ತನ್ನ ಪಾಡಿಗೆ ತಾ ಓಡುತ್ತಿತ್ತು. ತವರಿನಿಂದ ಬಂದ ಯಾರೋ ಪರಿಚಿತರು ಹೇಳಿದರು.“ನಿನ್ನ ಮಲತಾಯಿ ಮಕ್ಕಳಿಗೆ ಮದ್ವೆ ಗೊತ್ತಾಗಿದೆ ಮದ್ವೆಗೆ ಭರಪೂರ ತಯಾರಿ ನಡದಿದೆ. ಸುತ್ತ ಹಳ್ಳಿ ಜನರಿಗೆಲ್ಲ ಮದ್ವೆ ಆಹ್ವಾನಹೋಗಿದೆ. ಆದರೆ ನಿಮಗೆ ಮಾತ್ರ ಕರೆಯೋ ಹಾಂಗಿಲ್ಲ ಅಂತಾಶೀಲಾ ಯಜಮಾನ್ತಿಯ ಆದೇಶವಾಗಿದೆ. ನಿಮ್ಮಪ್ಪನದು ನಿಮಗೆಲ್ಲಕರೆಯಬೇಕೆಂದು ಆಸೆ ಇದ್ದರೂ ಅವನದು ಎನೂ ನಡೆಯುವದಿಲ್ಲ.ಎಂದು ಹೇಳಿದಾಗ ನಾನು ದಃಖ ತಡಿಯಲಾಗದೆ ಬಿಕ್ಕಿ ಬಿಕ್ಕಿಅಳಲಾರಂಭಿಸಿದೆ.. ಆದರೆ ನನ್ನ ಪತಿ ಪರಮೇಶ್ವರ ನನ್ನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದ. ನಾ ಜನ್ಮವೆತ್ತಿದ ತವರ ಸಂಬಂದ ನನಗೆಬೇಕು. ಶೀಲಾ ಎಂಥವಳಾದರೇನು ನಮ್ಮಪ್ಪ ಮದ್ವೆ ಆಗಿದ್ದಾನೆಂದರೆ ಅವಳು ನನ್ನ ತಾಯಿಯೇ. ಅವಳ ಹೊಟ್ಟೆಯಿಂದ ಹುಟ್ಟಿದ ಆ ಇಬ್ಬರೂ ಮಕ್ಕಳು ನನಗೆ ತಮ್ಮಂದರೇ, ಅವರು ಕರೆಯದಿದ್ದರೆನಂತೆ ನಾನು ನನ್ನ ತವರಿಗೆ ಹೋಗಲು ಯಾರದೇನು ಅಂಜಿಕೆ. ಮದ್ವೆಕಣ್ಣು ತುಂಬಿ ನೋಡಿ ನಾಲ್ಕು ಅಕ್ಕಿ ಕಾಳು ಹಾಕಿ ಬಂದರಾಯಿತು ಎಂದು ತವರಿಗೆ ಹೋಗಲೇ ಬೇಕೆಂದು ಹಟ ಹಿಡಿದು ಕುಳಿತೆ.ಯಾವತ್ತೂ ನನ್ನ ಆಸೆಗೆ ಅಡ್ಡಿಯಾಗದ ರಂಗ ಈ ದಿನ ಮೊದಲು ಸಲ ಸ್ವಲ್ಪ ತಕರಾರು ತಗ್ದರು, ಒಂದೆರಡು ದಿನ ಕೇಳದೇ ಊಟಬಟ್ಟು ಉಪವಾಸ ಸತ್ಯಾಗ್ರಹ ಹೂಡಿ ಹೋಗುವುದಕ್ಕೆ ಒಪ್ಪಿಸಿದೆ.
-೩-
ಊರಲ್ಲಿ ಮದುವೆಯ ಸಂಭ್ರಮವೇ ಸಂಭ್ರಮ!, ದೀಪಾಲಂಕಾರ, ಊರ ಅಗಸಿ ಬಾಗಿಲಕೂ ತಳಿರು ತೋರಣ, ರಸ್ತೆಗಳ ಉದ್ದಕ್ಕೂ ಹೂವಿನ ಹಾಸಿಗೆ. ಎಲ್ಲಿ ನೋಡಿದರಲ್ಲಿ ಹಸಿರು ಸೀರೆ ಉಟಕೊಂಡು ಓಡಾಡು ಸುಮಂಗಲಿಯರು. ಕಿವಿಗಿಂಪು ನೀಡುವ ಮುತ್ತೈದೆಯರ ಮಧುರ ಹಾಡುಗಳು. ತವರ ಮನೆ ವೈಭವ ಕಂಡು ಕಾಣುತ್ತಿರುವುದು ಕನಸೋ, ನನಸೋ, ಅನ್ನುವದು ನನಗೆ ತಿಳಿಯದಾಯಿತು. ಇದನ್ನೆಲ್ಲ ನೋಡಿ ದಂಗಾಗಿ ಊರ ಅಗಸಿ ಹತ್ತಿರಕಲ್ಲಿನಂತೆ ನಿಂತಿದ್ದ ನನ್ನನ್ನು ನನ್ನ ಗಂಡ ಎಚ್ಚರಿಸಿದ್ದ. “ನೋಡು ನಿನ್ನ ಮಲತಾಯಿ ದರ್ಬಾರ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ…” ಎಂದು ಮಾತಿನಲ್ಲಿ ಚುಚ್ಚಿದ. “ಹೋಗ್ಲಿ ಬಿಡು ಶುಭ ಹೊತ್ತಿನ್ಯಾಗ ಅಪಶಕುನ ನುಡಿಬಾರದು”ಎಂದು ಗಂಡನಿಗೆ ಸಮಾಧಾನ ಹೇಳಿ ಮನೆಯತ್ತ ಹೆಜ್ಜೆ ಹಾಕಿದೆವು.ನಾವು ಬಂದ ವಿಷಯ ತಿಳಿದು ಅಪ್ಪ ಅನಂದದಿಂದ ಸ್ವಾಗತಿಸಲೆಂದು ಓಡಿ ಬಂದು “ಒಳಗೆ ಬಾ ಮಗಳೇ, ಬಂದಿದ್ದು ತುಂಬಾ ಒಳ್ಳೆಯದೇ ಆಯಿತು” ಎನ್ನುವ ಮಾತು ಇನ್ನು ನಾಲಿಗೆಯ ಮೇಲೆಯೇ ಇತ್ತು,“ ಭೀಕಾರಿಗಳಾರು ನಮ್ಮ ಮನೆ ಹತ್ತರಕೂ ಬರಾಂಗಿಲ್ಲ ಅಂತಾ ಮೊದಲ ಹೇಳೀನಿ. ಆದರೂ ನಾಚಿಕೆ ಮಾನ ಮರ್ಯಾದೆ ಬಿಟ್ಟು ಬಂದಿದ್ದಾರೆ, ಅವರನ್ನ ಒದ್ದು ಓಡಸರೋ” ಅಂತಾ ಅಲ್ಲಿದ್ದ ನಾಟಕದ ಆಳುಗಳಿಗೆ ಹೇಳಿದ್ದೆ ತಡ ಅಳುತ್ತಿದ್ದನನ್ನನ್ನು-“ ಆಯಿತಿಲ್ಲೋ ಮುಖಕ್ಕೆ ಮಂಗಳಾರತಿ ಇನ್ನೂ ಸುಮ್ನೆ ನಡಿ ಎಂದು ಕೈ ಎಳೆದುಕೊಂಡು ಮುಂದಾದ. ನಾನು ಬಿಕ್ಕುತ್ತ ಅವನನ್ನು ಹಿಂಬಾಲಿಸಿದೆ. ತವರ ಮನಿಗೆ ಬಂದ ಮನೆ ಮಗಳನ್ನು ಹೀಗೆಅವಮಾನಿಸ ಬಾರದಿತ್ತು. ಇವರಿಗೆಲ್ಲ ಒಳ್ಳೆದಾಗುದಿಲ್ಲ, ಹಾಳಾಗಿ ಹೋಗ್ತಾರೆ ಅಂತಾ ಮದುವೆಗೆ ಸೇರಿದ ಜನರ ಆಡಿಕೊಳ್ಳುತ್ತಿರುವುದು ನಮ್ಮ ಕಿವಿಗೆ ಬಿಳುತ್ತಿತ್ತು. ಇಷ್ಟೆಲ್ಲ ನಡೆದರೂ ಅಪ್ಪ ಮೂಕನಾಗಿಯೇ ಇದ್ದ. ಈಗ ಅವನದೇನೂ ನಡೆಯುವದಿಲ್ಲ.. ಆ ಶೀಲಾ ಆಡಿಸಿದಂತೆ ಆಡುವ ಗೊಂಬೆಯಾತ…, ಮದುವೆಗೆ ನಮ್ಮನ್ನು ಕರಿತೀನಿ ಅಂತಾ ಅಪ್ಪ ಅಂದಾಗಲೇ ಅವಳು ಸಿಟ್ಟಿನಲ್ಲಿ ಕೆರಳಿ ಸರ್ಪವಾಗಿದ್ದಳಂತೆ,ಇನ್ನೊಮ್ಮೆ ಮಗಳ ಬಗ್ಗೆ ಮಾತಾಡಿದರೆ ನಾಲಿಗೆ ಕಿತ್ತು ಹಾಕತೀನಿ ಅಂತಾ ನಾಟಕದ ಖಳನಾಯಕಿ ಘರ್ಜಿಸುವಂತೆ ಘರ್ಜಿಸಿದ್ದಳು ಅಂತಾಒಬ್ಬರು ಹೇಳಿದರು. ಹೌದು ಈ ನಾಟಕದ ಹೆಂಗಸು ನಮ್ಮ ಜೀವನ ಎಂಬ ನಾಟಕದಲ್ಲಿ ಬಂದ ಮಹಾ ಖಳನಾಯಕಿ ಎಂದು ಅಪ್ಪನಿಗೆ ಎಂದೋ ಗೊತ್ತಾಗಿ ಹೋಗಿದ್ದರೂ ಅವಳು ಹೂಡಿದ ಸಂಚಿಗೆ ಬಲಿಪಶುವಾಗಿ ಎನೋ ಮಾಡಲು ಆಗದೇ ಒದ್ದಾಡುತ್ತಿದ್ದನು.
ಮದುವೆಯಲ್ಲಿ ನಮಗೆ ಮನೆಯಿಂದ ಹೊರಗೆ ಹಾಕಿದ ನಂತರ ಅವನು ಅನಾರೋಗ್ಯದಿಂದ ಹಾಸಿಗೆ ಹಿಡಿದ ಸುದ್ದಿ ಬಂದಿತು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಪನನ್ನು ನೋಡುವ ಸ್ವಾತಂತ್ರರ ಕೂಡ ಇಲ್ಲದಿರುವದಕ್ಕೆ ಮನಸ್ಸಿನಲ್ಲೇ ಕೊರಗಿ ಸುಮ್ಮನಾಗಿ ಬಿಟ್ಟಿದ್ದೆ. ಮುಂದೆವರ್ಷವೂ ಕಳೆದಿರಲಿಲ್ಲ ಅಪ್ಪ ಸತ್ತ ಸುದ್ದಿ ಬರಸಿಡಿಲಿನಂತೆ ಬಂದು ಎರಗಿತು. ಶೀಲಾ, ಅವಳ ಮಕ್ಕಳು, ಸೊಸೆಯಂದಿರು, ಆ ಕ್ಯಾಶೀಯರ ಮತ್ತವನ ಸ್ನೇಹಿತರು ಎಲ್ಲ ಸೇರಿ ಅಪ್ಪನಿಗೆ ಮಾನಸಿಕ ಕಿರಕುಳ ಮತ್ತುನಿರಂತರ ಶೋಷಣೆಯ ಕಾರಣ ಮತ್ತು ಶೀಲಾಳನ್ನು ಮದುವೆಯಾಗಿ,ಅವಳು ಹೂಡಿದ ಮೋಡಿಗೆ ಮರುಳಾಗಿ ಸ್ವಂತ ಅಳಿಯ ಮತ್ತುಮಗಳನ್ನೇ ತನ್ನಿಂದ ದೂರ ಮಾಡಿಕೊಂಡಿದ್ದಷ್ಟೆಯಲ್ಲ ಅವಳನ್ನ ಅವಮಾನಿಸಿದೆ ಎನ್ನುವ ಕಾರಣಕ್ಕೆ ಮನಸ್ಸಿಗೆ ಹಚ್ಚಿಕೊಂಡು ತಾನುಶೀಲಾಳನ್ನು ಮದುವೆ ಮಾಡಿಕೊಂಡು ದೊಡ್ಡ ತಪ್ಪು ಮಾಡಿದೆ ಎನ್ನುವ ಕೊರಗು ಹಚ್ಚಿಕೊಂಡು ಹಾಸಿಗೆ ಹಿಡಿದವನ ಮುಂದೆ ಆಸ್ತಿಯಲೆಕ್ಕಾಚಾರ ಆಗಲೇ ಆರಂಭವಾಗಿತ್ತು. ಅವನು ಸತ್ತ ನಂತರ ಯರ್ಯಾರಿಗೆಎಷ್ಟೆಷ್ಟು ಸಿಗಬೇಕು, ತಾನು ಮೊದಲಿನಿಂದ ಕೊನೆಯವರೆಗೂ ಈಯೋಜನೆಯಲ್ಲಿದ್ದೇನೆ, ಮೊದಲಿನ ನಿನ್ನ ಗಂಡ ನಾಟಕ ಕಂಪನಿ ಮಾಲಿಕ ಇದ್ದಾಗಿನಿಂದಲೂ ನಾನು ನಿನ್ನ ಜೊತೆ ಇದ್ದವನು, ಅಷ್ಟೆಯಲ್ಲ ಆ ನಿನ್ನ ಗಂಡ ಸತ್ತ ನಂತರ ನಾಟಕ ಕಂಪನಿ ಲಾಸಾದ ನಂತರವೂನಿನ್ನ ಜೊತೆಯಿದ್ದು ನೀನು ಹೀಗೆ ಮಾಡಿದರೆ ಹೀಗಾಗುತ್ತೆ ಅಂತಾ ಐಡಿಯಾ ಕೊಟ್ಟು ಈ ಸಾವಕಾರನ ಹತ್ತಿರ ಕಳಿಸಿಕೊಟ್ಟವನೇ ನಾನು,ಆಸ್ತಿಯಲ್ಲಿ ತನಗೆ ಸಮ ಪಾಲು ಸೀಗಬೇಕು ಅಂತಾ ವಾದಿಸುತ್ತಿದ್ದ.ಇವಳ ಮಕ್ಕಳಂತೂ ಈಗಲೇ ಐಷಾರಾಮಿ ಜೀವನ ಸಾಗಿಸುತ್ತ ಮೆರೆಯತ್ತಿದ್ದರು. ಇದನ್ನೆಲ್ಲ ಕಂಡು ಅಪ್ಪ ಹಾಸಿಗೆಯಲ್ಲಿ ನರಳುತ್ತಿದ್ದರೆ ಅವನನ್ನ ಕೇಳವರು ಯಾರೂ ಇರಲಿಲ್ಲ. ಇದೆಲ್ಲ ಆದ ನಂತರ ಅದೇನಾಯಿತೋ ಅಪ್ಪ ಸತ್ತೇ ಹೋಗಿದ್ದ. ಅಪ್ಪನನ್ನು ಅವನ ಆಸ್ತಿಗಾಗಿ ಔಷಧಿಯಲ್ಲಿ ಏನಾದರೂ ಬೆರೆಸಿ ಕೊಟ್ಟಿರಬೇಕು ಎನ್ನುವ ಆತಂಕ ಗುಪ್ತವಾಗಿ ಸಾವಿನ ಸುದ್ದಿ ತಂದ ವ್ಯಕ್ತಿಯೊಬ್ಬ ವ್ಯಕ್ತಪಡಿಸಿದ್ದ. ಅಪ್ಪನ ದುರಂತ ಸಾವು ಕೇಳಿ ನಾನು ಹುಚ್ಚಿಯಾಗುವದೊಂದೇ ಬಾಕಿ,ಕೊನೆಯಸಾರಿ ಅಪ್ಪನ ಮುಖ ನೋಡಬೇಕು ಎನ್ನುವ ನನ್ನ ಮನದಿಚ್ಛೆಯನ್ನು ಅರಿತ ರಂಗ- “ಸಮಾಧಾನ ಮಾಡಿಕೋ…ನಿಮ್ಮಪ್ಪನ ಮಣ್ಣಿಗೆ ಹೋಗೋಣ’ ವೆಂದು ಹೇಳಿದಾಗ ಸ್ವಲ್ಪ ಚೇತರಿಸಿಕೊಂಡಿದ್ದೆ.
-೪-
ತವರಿಗೆ ಬಂದು ತಲುಪಿದ್ದೆ ತಡ, ದಾರಿಯಲ್ಲಿ ಪರಿಚಯದವರೊಬ್ಬರು “ ಈಗ ಸ್ವಲ್ಪ ಸಮಯದ ಮುಂಚೆ ಮಣ್ಣಾತು” ಎಂದು ಹೇಳಿ ದೇವರಂಥ ತಮ್ಮೂರ ಸಾವುಕಾರರನ್ನು ಆಸ್ತಿ ಆಸೆಗೆ ಆ ನಾಟಕದವರು ಎಲ್ಲ ಸೇರಿ ಅನ್ಯಾಯವಾಗಿ ಕೊಂದಹಾಕಿದರು, ದೇವರು ಖಂಡಿತವಾಗಿಯೂ ಅವರನ್ನು ಸುಮ್ನೆಬಿಡುವದಿಲ್ಲ. ಪೊಲೀಸರು ಬಂದು ವಿಚಾರಣೆ ಮಾಡಬಹುದೆಂಬಆತಂಕ ದಿಂದ ಬೇಗ ಮಣ್ಣು ಮಾಡಿದರು ಎಂದುವಿವರಿಸಿದರು.ಕೊನೆಯ ಸಾರಿ ಅಪ್ಪನ ಮುಖ ನೋಡಲು ಸಹ ಆಗಲಿಲ್ಲ ಅಂತಾ ನನಗೆ ತುಂಬಾ ವ್ಯಥೆಯಾಯ್ತು. ಇನ್ನೇನು ಮಾಡಲು ಸಾಧ್ಯ? ಬಂದಿದ್ದು ಬಂದಿದ್ದೇವೆ ಕೊನೆದಾಗಿ ಒಂದು ಬಾರಿ ಹುಟ್ಟಿ ಬೆಳೆದ ತನ್ನ ಮನೆಗೆಹೋಗಿ ತನ್ನ ತಂದೆ ತಾಯಿಯ ಒಡನಾಟದ ಕ್ಷಣಗಳನ್ನು ಹಸಿರಾಗಿಸಿಕೊಂಡು ಹೋಗಬೇಕೆಂದು ಬಯಸಿದೆ. ರಂಗ ಕೂಡಕೊನೆಯ ಬಾರಿ ತನ್ನ ಹುಟ್ಟಿದ ಮನೆ ನೋಡಬೇಕೆನ್ನುವ ಆಸೆಗೆಅಸ್ತು ಎಂದ. ರಂಗ ಮಕ್ಕಳನ್ನು ಕರೆದುಕೊಂಡು ಮನೆಯ ಅಂಗಳದಲ್ಲೆ ನಿಂತಿದ್ದ. ನಾನು ಮಾತ್ರ ಧೈರ್ಯ ಮಾಡಿ ಮನೆಯೊಳಗೆ ಕಾಲಿಟ್ಟೆ.ನಾಟಕ ಮಂಡಳಿ ನಾಟಕೀಯವಾಗಿ ಮೊಸಳೆ ಕಣ್ಣೀರು ಸುರಿಸುತ್ತಿತ್ತು.ಊರ ಧಣಿ ಎನ್ನುವ ಕಾರಣಕ್ಕೆ ಊರಿನ ಸಾಕಷ್ಟು ಜನ ಅಲ್ಲಿ ಸೇರಿದ್ದರು. ಎಲ್ಲರೂ ನಾಟಕ ಕಂಪನಿಗೆ ಹಿಡಿಶಾಪ ಹಾಕುವರೇ ಆಗಿದ್ದರು. ಎಲ್ಲರೂ ಹೂಮಾಲೆ ಹಾಕಿದ್ದ ಅಪ್ಪನ ಭಾವಚಿತ್ರಕ್ಕೆ ನಮಿಸಿ,ನಾಟಕದವರತ್ತ ಒಮ್ಮೆ ಕೆಂಗಣ್ಣಿನಿಂದ ನೋಡಿ ಮುಂದೆ ಸಾಗುತ್ತಿದ್ದರು.ಅವರ ಈ ವರ್ತನೆ ನೋಡಿದರೆ ಅವರಲ್ಲಿ ಈ ನಾಟಕ ಕಂಪನಿಯ ವಿರುದ್ಧ ಜನರ ಅಸಮಾಧಾನ ಹೊಗೆಯಾಡುತ್ತಿದೆ ಎನ್ನುವುದು ಅರ್ಥವಾಗುತ್ತಿತ್ತು.ಇಷ್ಟರಲ್ಲೆ ಏನಾದರೂ ಪವಾಡ ನಡೆದು ಈ ನಾಟಕದವರೆಲ್ಲ ಜನರ ಆಕ್ರೋಶಕ್ಕೆ ಒಳಗಾಗಿ ಸುಟ್ಟು ಹೋಗಲಿದ್ದಾರೆ ಎಂದು ನನ್ನ ಸೂಪ್ತ ಮನಸ್ಸು ಹೇಳುತ್ತಿತ್ತು. ನನ್ನನ್ನು ಯಾರೂ ಗುರ್ತಿಸದಿರಲಿ ಅಂತಾ ನನ್ನ ಸಂಪೂರ್ಣ ಮುಖ ಮುಚ್ಚಿಕೊಂಡು ಅಪ್ಪನ ಚಿತ್ರಕ್ಕೆ ಕೊನೆ ನಮಸ್ಕಾರ ಹೇಳಿದ್ದೆ. ಯಾಕೋ ಅವ್ವನ ನೆನಪಾಯಿತು. ಇಲ್ಲಿದ್ದಾಗ ನಿತ್ಯ ಅವ್ವನ ಚಿತ್ರಕ್ಕೆ ನಮಿಸಿದ ನಂತರವೇ ನನ್ನ ದಿನಚರಿ ಆರಂಭವಾಗುತ್ತಿದ್ದ ನೆನಪು, ನಂತರ ಅವ್ವನ ಕೈತುತ್ತು, ಗೆಳತಿಯರ ಜೊತೆಯಾಟ, ಅಪ್ಪನ ಜೊತೆ ತೋಟಕ್ಕೆ ಹೋಗಿ ನೀರಲ್ಲಿ ಮನಸಾ ಆಡಿ ಆನಂದ ಹೊಂದುತ್ತಿದ್ದು…ಎಲ್ಲ ನೆನಪಾಗಿ ಕಣ್ಣೀರ ಕಟ್ಟೆಯೊಡೆಯಿತು.
ಕೊನೆ ಬಾರಿ ಅವ್ವನ ಚಿತ್ರಕ್ಕೆ ಶೀರಬಾಗಿ ಈ ಮನೆಯ ಋಣ ಮುಗಿಸಿ ಬಿಡಬೇಕೆಂದು ಅವ್ವನ ಚಿತ್ರಯಿದ್ದ ಕೋಣೆಯತ್ತ ನಡೆದರೆ ನನ್ನನ್ನು ಗಮನಿಸಿದ್ದ ನಾಟಕದ ಹೆಂಗಸರು “ ಸಾಯುತನಕ ಮಗಳ ಮಗಳ ಅಂತಾ ಹಲಬಿ ಹಲಬಿಸತ್ತ ಹ್ವಾದ ಮುದಕಾ, ಬಿನ್ನಾನಗಿತ್ತಿ ವೈಯಾರ ಮಾಡಕೋತ ಈಗ ಬಂದಿದ್ದಾಳ…ಆಸ್ತಿಯಲ್ಲಿ ಏನಾದರೂ ಸೀಗಬಹುದಂತಾ ಬಂದಿರಬೇಕು” ಎಂದು ಚುಚ್ಚಿ ಮಾತಾಡಿದ್ದರು. ಅಳುತ್ತಲೇ ಜಗಲಿ ಮನೆಗೆ ಓಡಿದೆ. ಅವ್ವನ ಜಗಲಿ ಮುಂದೆ ಹಣೆ ಚಚ್ಚಿಕೊಂಡು ಮನಸ್ಸು ಹಗುರಾಗಲೆಂದು ಅಳುತ್ತಿದ್ದರೆ “ಆ ಬೋಸಡಿನ ಒದ್ದ ಹೊರಗ ಹಾಕರೋ” ಅಂತಾ ಶೀಲಾ ಆಜ್ಞೆ ಹೊರಡಿಸಿದ್ದೆ ತಡ ಅವಳ ಮಿಂಡ ಆ ಕ್ಯಾಶೀಯರ ನನ್ನ ಮೇಲೆ ಎರಗಿದ, ಸಿಕ್ಕಾಪಟ್ಟೆ ಹೊಡೆದು ನನ್ನ ತಲೆಗೂದಲ ಹಿಡಿದು ದರದರನೇಎಳಿಯುತ್ತಿದ್ದರೇ ಅಲ್ಲಿ ನೆರದಿದ್ದ ಊರ ಜನರ ಕಣ್ಣಿಂದ ಕಣ್ಣೀರು ಸುರಿಯುತ್ತಿತ್ತು. ಪಾಪ ಮನೆಯ ನಿಜವಾದ ವಾರಸದಾರಳಿಗೆ ಈ ಸ್ಥಿತಿ ಬರಬಾರದಾಗಿತ್ತು ಎಂದು ಮರಗುತ್ತಿದ್ದರು.“ರಂಗಾ.. ನನ್ನನ್ನು ಕಾಪಾಡಿ, ಯಾರಾದರೂ ಬಂದು ನನ್ನ ಪ್ರಾಣ ಉಳಿಸಿ….”ಎಂದು ನಾನು ಆಕ್ರಂದಿಸುತ್ತಿದ್ದೆ, ಅವನು ಮಾತ್ರ ನನ್ನನ್ನು ನಿರ್ದಯವಾಗಿ ಎಳೆಯುತ್ತಿದ್ದ. ನನ್ನ ಬಡಿದು ಎಳೆದು ತಂದು ಅಂಗಳದಲ್ಲಿ ತಂದು ಬೀಸಾಕಿದರೆ, ಆಗಲೇ ನನ್ನ ಗಂಡ ಮತ್ತು ಮಕ್ಕಳು ರಕ್ತದ ಮಡವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಅವರನ್ನು ಸಹ ಬಡಿದು ಬೀಸಾಕಿದ್ದು ಸ್ಪಷ್ಟವಾಗಿತ್ತು. ನಾವೆಲ್ಲ ಪ್ರಾಣಭಿಕ್ಷೆ ಬೇಡುತ್ತಿದ್ದರೆ ಅಲ್ಲಿ ನೆರದಿದ್ದ ಜನ ನಮ್ಮ ಪ್ರಾಣ ರಕ್ಷಣೆಗೆ ಮುಂದಾದರು. ಯಾಕೋ ನಮ್ಮ ಮೇಲೆ ಈ ನಾಟಕದವರ ದೌರ್ಜನ್ಯ ಅತಿಯಾಯ್ತುಅನಿಸಿರಬೇಕು. ರೊಚ್ಚಿಗೆದ್ದ ಜನ ಈ ನಾಟಕದವರಿಗೆ ಹಿಗ್ಗಾಮುಗ್ಗಾ ಥಳಿಸಲಾರಂಭಸಿದರು. ಶೀಲಾಳನ್ನು ಸೀರೆ ಬಿಚ್ಚಿ ಓಡಾಡಿಸಿ ನಾಯಿಗೆ ಬಡಿದ ಹಾಗೆ ಬಡಿಯುತ್ತಿದ್ದರು. ಕೆಲವು ಮಹಿಳೆಯರು ನಮ್ಮನ್ನೆಲ್ಲ ಎಬ್ಬಿಸಿ ಕೂಡಿಸಿ ನೀರು ಕುಡಿಸಿ ಆರೈಕೆ ಮಾಡುತ್ತಿದ್ದರು. ಅಷ್ಟರಲ್ಲಿ ಪೊಲೀಸ್ ಜೀಪ ಮನೆಯಂಗಳಕ್ಕೆ ಪ್ರವೇಶವಾಗಿತ್ತು. ಜೀಪನಿಂದಕರಿಕೋಟಿನ ವ್ಯಕ್ತಿ ಸಹಿತ ಆರು ಜನ ಖಾಕಿ ಧಾರಿಗಳು ಕೆಳಗಿಳಿದರು.ಪೋಲಿಸರು ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿ ದೊಂಬಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು.ಸ್ವಲ್ಪ ಚೇತರಿಸಿಕೊಂಡು ಕುಳಿತಿದ್ದ ನಮ್ಮ ಮುಂದೆ ಆ ಕರಿ ಕೋಟಧಾರಿ ವ್ಯಕ್ತಿ ಬಂದು ನಿಂತರು. ಅವರನ್ನು ಕಂಡು ನನಗೆ ಒಂದಕ್ಷಣ ಪರಮಾಶ್ಚರ್ಯವಾಯಿತು. ಅವರನ್ನು ನೋಡುತ್ತಿದ್ದಂತೆಯೇ ನನ್ನ ಬಾಯಿಂದ-“ವಕೀಲ ಕಾಕಾ !!!” ಎನ್ನುವ ಮಾತು ಹೊರಟಿತು.
ಅದಕ್ಕೆಪ್ರತಿಯಾಗಿ- “ಹೌದಮ್ಮ ನಾನೇ ನಿಮ್ಮ ವಕೀಲ ಕಾಕಾ…ಒಂದಿಲ್ಲ ಒಂದುದಿನ ಇದೆಲ್ಲ ನಡೆಯುತ್ತದೆ ಅನ್ನುವುದು ನಿಮ್ಮಪ್ಪನಿಗೆ ಮೊದಲೇ ಗೊತ್ತಿತ್ತು, ಅದಕ್ಕೇ ಅವನು ತನಗೆ ಭೆಟ್ಟಿಯಾಗಲು ಬರಬೇಕೆಂದುಗುಟ್ಟಾಗಿ ಹೇಳಿಕಳಿಸಿದ್ದ. ನಾನು ಆರಾಮಿಲ್ಲದವನಿಗೆ ನೋಡಲು ಬಂದಂತೆ ಬಂದು ಎಲ್ಲ ವಿಷಯ ತಿಳಿದುಕೊಂಡು ಹೋಗಿ ಅವನು ಹೇಳಿದಂತೆ ಮೃತ್ಯುಪತ್ರ ತಯಾರಿಸಿಕೊಂಡು ಬಂದು ಸಹಿ ತಗೆದುಕೊಂಡು ಹೋಗಿದ್ದೆ” ಎಂದು ವಿವರಿಸಿದರು. ವಕೀಲಕಾಕಾ ಅಂದರೆ ನನ್ನ ಅಪ್ಪನ ಪ್ರಾಣ ಸ್ನೇಹಿತರು. ಬಡತನದಿಂದ ಮೇಲೆ ಬಂದಿದ್ದರು. ಅವರಿಗೆ ನನ್ನಪ್ಪನೇ ಕಾನೂನ ಓದಲು ಹೇಳಿ, ದುಡ್ಡಿನ ಸಹಾಯ ಸಹ ಮಾಡಿದ್ದನಂತೆ. ಹೀಗಾಗಿ ಆಗಾಗ ನಮ್ಮ ಮನೆಗೆಬರುತ್ತಿದ್ದರು ಮತ್ತು ನಮ್ಮಪ್ಪನ ನೆರವನ್ನು ಪದೆಪದೇ ಸ್ಮರಿಸಿಕೊಳ್ಳುತ್ತಿದ್ದರು,ಅಷ್ಟೆಯಲ್ಲ ಅಪ್ಪನ ಎಲ್ಲ ಆಸ್ತಿ ಆದಾಯದ ವ್ಯವಹಾರವನ್ನು ಕಾನೂನರೀತ್ಯ ನಿರ್ವಹಿಸುವ ಮನೆ ವಕೀಲರಾಗಿದ್ದರು. ಹೀಗಾಗಿಅವರೊಂದಿಗೆ ನಮ್ಮ ಸಂಪರ್ಕ ನಿಕಟವಾಗಿತ್ತು. ನಮ್ಮ ಮದುವೆ ವಿಷಯ ಬಂದಾಗಲೂ ಅಪ್ಪನಿಗೆ ಧೈರ್ಯಹೇಳಿ ನನ್ನ ರಂಗನ ಮದುವೆಗೆ ನಗುನಗುತ್ತ ಸಮ್ಮತಿಸುವಂತೆ ಮಾಡಿದ್ದರು. ಮೊದಲಿನಿಂದಲೇಅವರು ನಮ್ಮ ಕುಟುಂಬದ ಸದಸ್ಯರಂತೆ ಆಗಿಹೋಗಿದ್ದರು. ಈ ಸಲುಗೆಯಿಂದಲೇ ನಾವು ಅವರನ್ನು ವಕೀಲಕಾಕಾ ಎಂದು ಕರೆಯುತ್ತಿದ್ದೆವು. ಅಪ್ಪ ಶೀಲಾಳೊಂದಿಗೆ ಮದುವೆಯಾಗಿದ್ದು ಅವರಿಗೂ ಬೇಸರ ತರಿಸಿತ್ತು. ಆಗಿನಿಂದಲೇ ಅವರು ನಮ್ಮ ಮನೆಗೆ ಬರುವುದು ಕಡಿಮೆ ಮಾಡಿದ್ದರು. ನಮ್ಮನ್ನು ಮನೆಯಿಂದ ಹೊರಗೆ ಹಾಕಿದ ನಂತರವಂತೂ ಅವರು ಅಪ್ಪನ ಮೇಲೆ ಸಿಟ್ಟಾಗಿ ಮನೆಗೇ ಬರುವದನ್ನು ನಿಲ್ಲಿಸಿದ್ದರು ಅಂತಾ ಕೇಳಿದ್ದೆ. ಅಂಥಾ ತಂದೆ ಸಮಾನ ವಕೀಲರುನಮ್ಮ ಸಹಾಯಕ್ಕೆ ಬಂದಿದ್ದರು. ಪೋಲಿಸರು ನಾಟಕದವರಿಗೆಲ್ಲ ಕೋಳ ತೊಡಸುತ್ತಿದ್ದರು, ಶೀಲಾ “ನಮಗ್ಯಾಕೆ ಬಂದಿಸುತ್ತಿದ್ದೀರಿ?” ಎಂದು ತಕರಾರು ತಗೆದಾಗ ಶೀಲಾಳನ್ನು ಹಿಗ್ಗಾ ಮುಗ್ಗಾ ಹೊಡೆದು ಎಳೆದುತಂದು ನಿಲ್ಲಿಸಿ-“ನಿಮ್ಮೆಲ್ಲರ ಮೇಲೆ ದೇವರಂಥ ಈ ಊರ ಧನಿಯನ್ನು ಕೊಲೆಮಾಡಿದ ಆರೋಪವಿದೆ, ಈ ಊರ ಪಂಚರು, ಹಿರಿಯರು, ಎಲ್ಲ ನೀವೇ ಕೊಲೆ ಮಾಡಿದ್ದೀರಿ ಅಂತಾ ಕಂಪ್ಲೇಟ ಕೊಟ್ಟಿದ್ದಾರೆ. ಅಲ್ಲದೆ ಅದಕ್ಕೆ ಬೇಕಾದ ಸಾಕ್ಷಿ ಒದಗಿಸಿದ್ದಾರೆ. ನೀವು ಔಷಧಿಯಲ್ಲಿ ವಿಷಬೆರೆಸಿ ಕೊಡುವುದು ಆಳ ಮನುಷ್ಯ ಕಣ್ಣಾರೆ ಕಂಡಿದ್ದಾನೆ. ಅಷ್ಟೇಯಲ್ಲ ಈಗ ಈ ಮನೆ ಮಗಳು ಮತ್ತು ಅವಳ ಗಂಡನ ಮೇಲೆ ಹಲ್ಲೆಮಾಡಿ ಕೊಂದು ಹಾಕಲು ಪ್ರಯತ್ನ ಮಾಡಿದ್ದನ್ನು ಇಡೀ ಊರಿನ ಜನರೇ ಸಾಕ್ಷಿಯಾಗಿದ್ದಾರೆ” ಎಂದು ಬೇಡಿ ತೊಡಿಸಿದರು. ಈ ಮನೆಗೆ ಮೊದಲಿನಿಂದಲೂ ವಿಧೇಯನಾಗಿ ದುಡಿಯುತ್ತ ಬಂದ ಆಳಮನುಷ್ಯನೇ ಇದಕ್ಕೆ ಮುಖ್ಯಸಾಕ್ಷಿಯಾಗಿದ್ದ. ಅಪ್ಪ ಆ ಆಳು ಮನುಷ್ಯಯನನ್ನು ಕೆಲಸದವನಂತೆ ಎಂದೂ ನೋಡದೆ ಸ್ವಂತ ಸಹೋದರನಂತೆ ಕಾಣುತ್ತಿದ್ದರ ಕಾರಣ ಆತ ಈ ಮೂಲಕ ಅಪ್ಪನ ಋಣ ತೀರಿಸಿದ್ದ,
“ಹಾಗಾದರೆ ನಮ್ಮ ಆಸ್ತಿ ವಿಷಯ?” ಎಂದು ಅವಳು ಪ್ರಶ್ನಿಸಿದಾಗ ಮುಂದೆ ಬಂದ ವಕೀಲರು-“ ಸಾವಕಾರರ ಮೃತ್ಯು ಪತ್ರದ ಪ್ರಕಾರ ಈಗ ಅವರು ಎಲ್ಲ ಆಸ್ತಿ ಅವರ ಮಗಳು ಮತ್ತು ಅಳಿಯನ ಹೆಸರಿಗೆ ಹೋಗಿದೆ. ಈ ಆಸ್ತಿ ಅವರು ಸ್ವಂತ ಗಳಿಸಿದ್ದರಿಂದ ಅವರು ಯಾರಿಗಾದರೂ ಕೊಡಬಹುದಾಗಿದೆ. ಈಗ ನಿಮಗೆಲ್ಲ ಜೈಲೂಟ ಮಾತ್ರ ಗತಿ, ನಿಮ್ಮಗೆಲ್ಲ ಮೃತ್ಯು ದಂಡವಾಗುವುದಂತೂ ಗ್ಯಾರಂಟಿ” ಎಂದು ಸಾರಿದಾಗ ಶೀಲಾ, ಅವಳ ಮಕ್ಕಳು, ಸೊಸೆಯಂದಿರು, ಕ್ಯಾಶೀಯರ ಮತ್ತುಇನ್ನುಳಿದ ನಾಟಕದವರು ಮೃತ್ಯು ಭಯದಿಂದ ಗಡಗಡನೇ ನಡುಗಿ ಹೋದರು.ಪೊಲೀಸರೂ ಎಲ್ಲರನ್ನೂ ಬೇಡಿ ತೊಡಿಸಿ ಜೀಪ ಹತ್ತಿಸಿದರು. ವಕೀಲಕಾಕಾ ನಮ್ಮನ್ನು ಕರೆದುಕೊಂಡು ಮನೆಯೊಳಗೆ ಬಂದರು. ಅಪ್ಪ ಫೋಟೋದಲ್ಲಿ ಕುಳಿತು ಕೊನೆಗೂ ನಮಗೆ ನ್ಯಾಯ ದಕ್ಕಿದ್ದಕ್ಕೆ ಸಂತೋಷದಿಂದ ನಗುತ್ತಿದ್ದ. ಊರಿನ ಜನ ಆನಂದದಿಂದ ಅಪ್ಪನಹೆಸರಿಗೆ ಜೈಜೈಕಾರ ಹಾಕುತ್ತಿದ್ದರು. ಒಟ್ಟಿನಲ್ಲಿ ಯಾರದೋ ಶಾಪದಿಂದ ಮುಕ್ತಿ ದೊರತಂತೆ ನಮಗೆಲ್ಲ ಆಗಿತ್ತು. ನಾವೆಲ್ಲ ಶ್ರದ್ಧೆಯಿಂದ ಅಪ್ಪನಿಗೆ ಶೀರಬಾಗಿ ವಂದಿಸಿದೆವು.
-ಅಶ್ಫಾಕ್ ಪೀರಜಾದೆ