ಮುಂಝಾನೆ ನಸುಕಿನ್ಯಾಗ ಮೂಲಿಮನಿ ನಿಂಗವ್ವನ ಕೋಳಿ ಕೂಗಿದ್ದ ಕೇಳಿ ’ಪಾರು’ ಗ ಎಚ್ಚರಾತು. ದಿನಾ ಹಿಂಗ ಒದರಿ ಒದರಿ ತಂಗಳ ನಿದ್ದಿ ಕೆಡಸತಿದ್ದ ಕೋಳಿಗೆ ಹಿಡಿಶಾಪಾ ಹಾಕಿ ಮತ್ತ ಹೊಚಕೊಂಡ ಮಲಗತಿದ್ದ ಪಾರು, ಇವತ್ತ ಹಂಗ ಮಾಡಲಿಲ್ಲ. ಆವತ್ತ ತನ್ನ ಪ್ರೀತಿಯ ಅಕ್ಕನ ಊರಿಗೆ ಹೋಗೊದಿತ್ತು. ಲಗು ಲಗು ಎದ್ದು ಮಾರಿ ತೊಳಕೊಂಡು, ಅಡುಗಿ ಮನಿಗೆ ಬಂದ್ಲು. ಆಗಲೆ ಅವ್ವ ಮಗಳ ಊರಿಗೆ ಬುತ್ತಿಗೆಂತ ರೊಟ್ಟಿ, ಪಲ್ಯಾ, ಸಜ್ಜಿಗಿ ವಡಿ, ಕೆಂಪಖಾರ, ಮೊಸರನ್ನ ಎಲ್ಲಾ ಮಾಡಿ ಮುಗಿಸಿ, ನಾಷ್ಟಾಕ್ಕಂತ ಉಪ್ಪಿಟ್ಟ್ ತಿರುವಲಿಕತ್ತಿದ್ಲು.
ಎಷ್ಟಂದ್ರು ಹೀರೆ ಮಗಳು, ಅದಕ್ಕ ಊರಹೊಂತುಟ್ಲೆ ಎದ್ದ ಎಲ್ಲಾ ಮಾಡಿ ನೀ, ನನಗಿಂತ ಆಕಿ ಮ್ಯಾಲೆನ ಭಾಳ ಜೀವ ಅದಿ ಅಂತ ಅವ್ವನ್ನ ಕಾಡಿದ್ಲು ಪಾರು. ಇಕಿ ಮಾತಿಗೆ ರುದ್ರವ್ವ, ಅಯ್ಯ ಪಿಸಾಳಿ, ನೀನು ಲಗ್ನಾ ಮಾಡಕೊಂಡ ಗಂಡನ ಮನಿಗೆ ಹೊದಾಗ ನಿಂಗು ಹಿಂಗ ಬುತ್ತಿ-ರೊಟ್ಟಿ ಮಾಡಿಕೊಂಡ ಭೇಟ್ಟಿ ಆಗಾಕ ಬರ್‍ತೇನೆಳ, ಅಷ್ಟ್ಯಾಕ ಉರಕೋತಿ ಅಂದ್ಲು. ಅವ್ವನ ಮಾತ ಕೇಳಿ ಪಾರು, ಹೋಗ ಹೋಗಬೆ, ಈ ಬುತ್ತಿರೊಟ್ಟಿ ತಿನ್ನಾಕಂತ ನಾ ಮದವಿ ಮಾಡಿಕೊಂಡ ಹೋಗಬೇಕೆನ ಹೋಗ ಹೋಗಬೆ ಅಂತ ಪರಕ್ಕನ ಹರಕೊಂಡ ಬಚ್ಚಲಿಗೆ ಜಳಕಕ್ಕ ಹೋದ ಮಗಳನ್ನ ನೋಡಕೋತ ತನ್ನ ಹೀರೆ ಮಗಳ ನೆನಪು ಮಾಡಿಕೊಂಡ್ಲು ರುದ್ರವ್ವ.
ಗಂಡ ಕುಡುದು ಕುಡುದು ಸತ್ತು ಹೋದಮ್ಯಾಲೆ, ಭಾಳ ಕಷ್ಟಪಟ್ಟ ಇರೊ ಎರೆಡು ಹೆಣ್ಣು ಮಕ್ಕಳನ್ನ ಸಾಕಿದ್ಲು. ಇರೊತನಕಾ ಬರೆ ಹೆಣ್ಣ ಮಕ್ಕಳನ್ನ ಹಡದಿ ಅಂತ ಹಂಗಿಸಿ ಹಂಗಿಸಿ ಹೆಂಡ್ತಿಗೆ ತ್ರಾಸ ಕೊಟಗೋತ ಇರತಿದ್ದ. ಮಕ್ಕಳನ್ನ ಒಂದಿನಾನು ಸೇರಲಿಲ್ಲ. ರುದ್ರವ್ವ ಅವರಿವರ ಹೊಲದಾಗ ದುಡುದು ಮಕ್ಕಳನ್ನ ದೊಡ್ಡವರನ್ನ ಮಾಡಿದ್ಲು.
ಹೀರೆ ಮಗಳನ್ನ ಸಿನೇಮಾ ಟಾಕೀಸಿನ್ಯಾಗ ರೀಲ ಬಿಡೊ ಶಿವಪ್ಪಗ ಮದುವಿ ಮಾಡಿಕೊಟ್ಟಿದ್ಲು. ಶಿವಪ್ಪಗು ಹಿಂದ ಮುಂದ ಯಾರು ಇದ್ದಿಲ್ಲಾ. ಇದ್ದೊಬ್ಬ ಅಕ್ಕನ ಮನ್ಯಾಗ ಬೆಳೆದು ದೊಡ್ಡಾಂವ ಆಗಿದ್ದಾ. ಹಂಗೂ ಹಿಂಗೂ ಮ್ಯಾಟ್ರೀಕ್ ಮುಗಿಸಿ ಅಲ್ಲೆ ಇಲ್ಲೆ ನಾಟಕ ಕಂಪನಿಯೊಳಗ ಕೆಲಸಾ ಮಾಡಕೋತ ಅಡ್ಡ್ಯಾಡತಿದ್ದಾಂವನ್ನ, ಅಕ್ಕನ ಗಂಡ ಹಿಡಕೊಂಡ ಬಂದು ಸಿನೇಮಾ ಟಾಕೀಸಿನ್ಯಾಗ ಕೆಲಸಾ ಕೊಡಿಸಿ ಮೆಟ್ಟಿಗೆ ಹಚ್ಚಿದ್ದಾ. ಶಿವಪ್ಪ ನೋಡಲಿಕ್ಕೆ ಚೆಲುವಾ. ನಾಟಕ ಕಂಪನಿಯವರ ಜೋಡಿ ಅಡ್ಯಾಡಿ ಸ್ವಲ್ಪ ಠಾಕಠೀಕ ಡ್ರೇಸ್ ಹಾಕ್ಕೊಂಡ ಯಾವಾಗ್ಲು ಚೈನಿ ಇರತಿದ್ದಾ. ಇಗಂತು ಕೇಳೊದ ಬ್ಯಾಡ ಸಿನೇಮಾ ಟಾಕಿಸ್‌ನ್ಯಾಗ ದಿನಕ್ಕೊಂದ ಸಿನೇಮಾನೋಡಕೋತ ಇನ್ನಷ್ಟು ಶೋಕಿಲಾಲ ಆಗಿದ್ದಾ. ಆಂವಗ ಮಾತಿನಿಂದ ಮಂದಿನ್ನ ಮಳ್ಳ ಮಾಡೊ ಕೆ ಭಾಳ ಛೊಲೊ ಒಲಿದಿತ್ತು. ರಸಿಕ ಶೀಖಾಮಣಿ ಅಂತ ಬಿರುದಿತ್ತು. ಒಟ್ಟಿನಮ್ಯಾಲ ಜೀವನವನ್ನ ಭಾಳ ಹಗುರ ತಗೊಂಡು ಯಾವಾಗಲು ಒಂದ ನಮೂನಿ ಲಹರಿಯೊಳಗ ಇರತಿದ್ದ.
ಒಂದ ಗುಣಾ ಏನ ಛೊಲೊ ಇತ್ತಂದ್ರ ಆಂವಗ ಒಂದ ಅಡಕಿಹೊಳಿನ ಚಟ ಇರಲಿಲ್ಲ. ಅಂದ್ರ ಬೀಡಿ, ಸಿಗರೇಟು, ಶರಾಯಿ ಎಲಿಅಡಕಿ, ತಂಬಾಕು ಅಂತ ಯಾವ ಚಟಾನು ಇರಲಿಲ್ಲ. ಕುತಮೆಟ್ಟಿನ ಮ್ಯಾಲೆ ಆರೇಳು ರೊಟ್ಟಿ ಖಾರಾ ಹೊಡತಾ ಹೊಡೆದು ಶರೀರ ಗಟ್ಟಿಮುಟ್ಟಾಗಿಟ್ಕೊಂಡಿದ್ದಾ. ಅದಕ್ಕ ಕಿರೀಟಾ ಅನ್ನೊ ಹಂಗ ಚೆಲುವಿಕಿ ಮತ್ತ ಹರೆದ ವಯಸ್ಸು ಎರೆಡು ಕೂಡೆ ಆಂವನ್ನ ಒಂಥರಾ ಚೆಲುವ ಚಂದ್ರಾಮನ್ನ ಸಾಲಿಗೆ ಸೇರಿಸಿದ್ದ್ವು.
ಕಪ್ಪಿದ್ರು ಲಕ್ಷಣ ಇದ್ದ ರೇಣವ್ವ ಶಿವಪ್ಪನ ಮನಿತುಂಬಿದ್ಲು. ರೇಣವ್ವ ಶಾಂತ ಸ್ವಭಾವದಾಕಿ. ಗಂಡನ ಮನಸ್ಸನ್ನ ಅರಿತು ಸಂಸಾರ ಮಾಡಿತಿದ್ಲು. ಶಿವಪ್ಪನು ಅಷ್ಟ ಹೆಂಡತಿ ಮ್ಯಾಲೆ ಬಲೇ ಜೀವ ಇದ್ದ. ಒಂದು ಹೆಣ್ಣು, ಒಂದು ಗಂಡು, ಎರೆಡು ಮಕ್ಕಳ ಪುಟ್ಟ ಸಂಸಾರ ಒಳೇ ಛಂದ ಇತ್ತು. ಆವಾಗಿವಾಗ ಗಂಡ ಶಿವಪ್ಪನ ಮದವಿಗಿಂತಾ ಮೊದಲಿನ ರಂಗುರಂಗಿನ ಜೀವನದ ಬಗ್ಗೆ ಒಂದಿಷ್ಟ ಸುದ್ದಿಗೊಳು ಕೇಳಿ ಬಂದ್ರುನು, ರೇಣವ್ವ ಅದಕ್ಕೆಲ್ಲ ತಲಿ ಕೆಡಿಸಿಕೊಂಡಿರಲಿಲ್ಲ.
ಇತ್ಲಾಗ ಮಗಳ ನೆನಪಿನ್ಯಾಗಿಂದ ಹೊರಗ ಬಂದ ರುದ್ರವ್ವ, ಲಗೂನೆ ಎಲ್ಲಾ ಬುತ್ತಿ ಚೀಲಾ ಕಟ್ಟಿ ತಯಾರ ಮಾಡಿದ್ಲು. ಯಾಕೊ ಮಗಳು ರೇಣವ್ವಗ ಈಗ ಒಂದ ತಿಂಗಳಿಂದ ಆರಾಮ ಇಲ್ಲಂತ, ಭಾಳ ಅಶಕ್ತ ಆಗ್ಯಾಳ, ಕಾಡೊ ಮಕ್ಕಳ ಬ್ಯಾರೆ, ಸ್ವಲ್ಪ ದಿನಾ ಸಹಾಯಕ್ಕಂತ ಪಾರುನ್ನ ಕಳಿಸಿಕೊಡು ಅಂತ ಹೇಳಿಕಳಿಸಿದ್ಲು. ಅದಕ್ಕ ಪಾರು ಈಗ ಅಕ್ಕನ ಉರಿಗೆ ಹೋಗಲಿಕ್ಕೆ ತಯಾರ ಆಗಲಿಕತ್ತಿದ್ಲು. ಪಾರುನು ನೋಡಲಿಕ್ಕೆ ರೇಣವ್ವನ ಪಡಿಯಚ್ಚ ಇದ್ಲು ಆದ್ರ ಮೈ ಬಣ್ಣ ಮಾತ್ರ ರೇಣವ್ವನಕಿಂತ ಸ್ವಲ್ಪ ತಿಳಿ ಇತ್ತು. ಒಟ್ಟಿನಮ್ಯಾಲ ಆಕಿನೂ ಚೆಲುವಿನ.
ಪಾರು ಅಕ್ಕನ ಊರಿಗೆ ಬಂದ ಇಳಿದಾಗ ಮಧ್ಯಾಹ್ನ ಒಂದ ಗಂಟೆ ಆಗಿತ್ತು. ಇಕಿ ಬರುತ್ತಲೆ ಅಕ್ಕನ ಮಕ್ಕಳು ಚಿಗವ್ವ ಚಿಗವ್ವ ಅಂತ ಸುತ್ತಗಟ್ಟಿದ್ವು. ಅವರಿಗಂತ ತಂದ ಬಿಸ್ಕೀಟು, ಬ್ರೇಡ್ಡಿನ ಪುಡಕಿ ಕೊಟ್ಟು, ಮುದ್ದ ಮಾಡಿ ಒಳಗ ಹೋದ್ಲು. ಅಕ್ಕ ರೇಣವ್ವ ಅಲ್ಲೆ ಮಂಚದ ಮ್ಯಾಲೆ ಮಲಗಿದ್ಲು. ತಿಂಗಳದಿಂದ ಒಂದಸಮನ ಬಂದ ಜ್ವರದಿಂದ ಸೊರಗಿ ಕಡ್ಡಿ ಆಗಿದ್ಲು. ಸೋತು ಮಲಗಿದ ಅಕ್ಕನ್ನ ನೋಡಿ ಪಾರುನ ಜೀವ ಮರಮರ ಮರಗಿತು. ಹತ್ರ ಬಂದ ಕೂತು ಅಕ್ಕನ್ನ ಮಾತಾಡಿಸಿ ಊರಿಂದ ತಂದ ಬುತ್ತಿ ಗಂಟ ಬಿಚ್ಚಿ ಊಟಕ್ಕ ಕೊಟ್ಟಳು. ತಂಗಿ ಬಂದದ್ದರಿಂದ ರೇಣವ್ವಗ ಒಂದ ಸ್ವಲ್ಪ ನಿರಾಳ ಆಗಿತ್ತು. ಮಕ್ಕಳದು, ಮನಿದು ಚಿಂತಿ ಬಿಟ್ಟಂಗಾಗಿತ್ತು, ಊಟಾ ಮಾಡಿ ಆರಾಮಾಗಿ ಮಲಗಿದ್ಲು. ಪಾರು ಅಕ್ಕನ ಮನಿ ಜವಾಬ್ದಾರಿ, ಮಕ್ಕಳ ಜವಾಬ್ದಾರಿ ತನ್ನ ಹೆಗಲಿಗೆ ತಗೊಂಡು, ಅಕ್ಕನ ಆರೈಕಿಗೆ ನಿಂತಳು. ಮಧ್ಯಾಹ್ನ ಮನಿಗೆ ಬಂದ ಶಿವಪ್ಪನು ಪಾರು ಬಂದದ್ದ ನೊಡಿ ಖುಷಿ ಪಟ್ಟ, ಮಕ್ಕಳು ತಿಂದುಂಡು ಆಡಲಿಕತ್ತದ್ದು ಮತ್ತ ರೇಣವ್ವಗ ಸ್ವಲ್ಪ ಆರಾಮ ಸಿಕ್ಕದ್ದು ನೋಡಿ ಆಂವಗು ಸ್ವಲ್ಪ ಸಮಾಧಾನ ಆಗಿತ್ತು. ಮೊದಲಿಂದನು ಸೊಸಿ ಪಾರುನ ಮ್ಯಾಲೆ ಶಿವಪ್ಪಗ ಭಾಳ ಅಕ್ಕರತಿ ಮತ್ತ ಸಲುಗಿ ಇತ್ತು. ಆಕಿನ್ನ ಕಾಡಕೊತ ಚಾಷ್ಟಿ ಮಾಡಕೊತ ಇರತಿದ್ದ.
ಹವರಗ ತಂಗಿ ಆರೈಕಿಯೊಳಗ ರೇಣವ್ವ ಸುಧಾರಸ್ಲಿಕತ್ತಿದ್ಲು. ಆದ್ರು ಅಶಕ್ತತನ ಇತ್ತು. ನಡುನಡುವ ಒಮ್ಮೊಮ್ಮೆ ಜ್ವರ ಬರತಿದ್ವು. ಆವತ್ತ ಶಿವಪ್ಪನ ಅಕ್ಕ ರೇಣವ್ವನ ಭೆಟ್ಟಿಗೆ ಬಂದಿದ್ಲು. ಆಕಿ ರೇಣವ್ವಗ ಒಮ್ಮೆ ಪ್ಯಾಟಿಊರಿಗೆ ಹೋಗಿ ದೊಡ್ಡ ದವಾಖಾನ್ಯಾಗ ಛೋಲೊ ಡಾಕ್ಟರ್ ಹತ್ರ ತೊರಿಸ್ಕೊಂಡ ಬಾ ಅಂತ ಹೇಳಿದ್ಲು. ಅದಕ್ಕ ಪಾರು ಮಕ್ಕಳನ್ನ ನಾ ನೋಡ್ಕೊತೆನಿ, ನೀ ಒಮ್ಮೆ ಮಾಮಾನ ಗೂಡ ಹೋಗಿ ದೊಡ್ಡ ದವಾಖಾನ್ಯಾಗ ತೊರಿಸಿಕೊಂಡ ಬಾ ಅಂತ ಹೇಳಿದ್ಲು. ರೇಣವ್ವಗೂ ಅದು ಬರೊಬ್ಬರಿ ಅನಿಸ್ತು. ಶಿವಪ್ಪನ ಕೇಳಿ ನೋಡಿದ್ಲು, ಆಂವಾ ನಂಗ ಬ್ಯಾರೆ ಕೆಲಸದ, ಅಕ್ಕನ್ನ ಜೋಡಿ ಹೋಗಿ ತೊರಿಸಿಕೊಂಡ ಬಾ ಅಂತ ರೊಕ್ಕಾ ಕೊಟ್ಟು ತಮ್ಮಕ್ಕನ ಜೋಡ ಮಾಡಿ ಕಳಿಸಿಕೊಟ್ಟಾ. ಲಗೂ ಮುಂಝಾನೆ ತಂಪ ಹೊತ್ತಿನ್ಯಾಗ ಹೋಗಿ ಬರಬೇಕಂತ ರೇಣವ್ವ ಅತ್ತಿಗಿ ಅಂದ್ರ ಗಂಡನ ಅಕ್ಕನ್ನ ಜೋಡಿ ಪ್ಯಾಟಿಗೆ ಹೊದ್ಲು.
ಸಂಜಿಮುಂದ ಐದು ಗಂಟೆ ಆಗಲಿಕ್ಕೆ ಬಂದಿತ್ತು ರೇಣವ್ವ ದವಾಖಾನಿಯಿಂದ ವಾಪಸ ಆದಾಗ. ದಣಿವಾದ ಅಕ್ಕಗ ಬಿಸಿಬಿಸಿ ಚಹಾ ಮಾಡಿಕೊಟ್ಟು, ಡಾಕ್ಟರ್ ಏನಂದ್ರು ಅಂತ ಕೇಳಿದ್ಲು. ಅದನ್ನ ಕೇಳಿ ರೇಣವ್ವನ ಮಾರಿ ಯಾಕೊ ದುಃಖದಿಂದ ದಟ್ಟವಾತು. ಸ್ವಲ್ಪ ಹೊತ್ತು ಹಂಗ ಗ್ವಾಡಿಗೆ ಆನಕೊಂಡ ಕೂತು ಕಣ್ಣಮುಚ್ಚಿದ್ಲು. ಯಾಕೊ ಭಾಳ ಆಯಾಸ ಆಗಿರಬೇಕು ಆಮ್ಯಾಲೆ ಮಾತಾಡ್ಸಿದ್ರಾತಂತ ಸಂಜಿ ಅಡಗಿ ಮಾಡಲಿಕ್ಕೆ ಅಡಗಿ ಮನಿಗೆ ಹೋದ್ಲು ಪಾರು. ಬ್ಯಾಳಿ ಸಾರು, ಪಲ್ಯೆ ಮಾಡಿ ಒಲಿಮ್ಯಾಲೆ ಅನ್ನಕ್ಕಿಟ್ಟು, ಪಾರು ಮತ್ತ ಅಕ್ಕನ ಹತ್ರ ಬಂದು ಕೂತ್ಲು. ಅಕ್ಕನ ಕಣ್ಣಾಗ ಕಂಡು ಕಾಣಲಾರಧಂಗ ಇದ್ದ ನೀರಿನ ಹನಿ ಕಂಡು ಪಾರುಗ ಘಾಬರಿ ಆತು. ಹತ್ರ ಸರದು ಅಕ್ಕನ ಕೈ ಹಿಡಕೊಂಡು, ಯಾಕ ಯಕ್ಕಾ ಏನಾತ, ಡಾಕ್ಟರ್ ಎನಂದ್ರು, ಎಲ್ಲಾ ಆರಾಮ ಐತಿ ಹೌದಿಲ್ಲೊ ಅಂತ ಕೇಳಿದ್ಲು. ತಂಗಿ ಅಷ್ಟ ಕೇಳಿದ್ದ ತಡಾ, ರೇಣವ್ವಗ ಎಲ್ಲಿಲ್ಲದ ದುಃಖ ಉಕ್ಕಿಬಂದು, ಪಾರುನ್ನ ತೆಕ್ಕಿಬಡಕೊಂಡು ದುಃಖಿಸಿ ದುಃಖಿಸಿ ಅಳಲಿಕ್ಕೆ ಶೂರು ಮಾಡಿದ್ಲು. ಕಣ್ಣಾಗಿನ ನೀರು ಕೋಡಿಯಂಗ ಹರದಹೋಗಿ ಸ್ವಲ್ಪ ಸಮಾಧಾನ ಆದಿಂದ, ಪಾರು ಎಲ್ಲಾ ಮುಗಿತಬೇ, ಇನ್ನ ನನ್ನ ಜಡ್ಡು ಕಮ್ಮ ಆಗಂಗಿಲ್ಲ. ದೊಡ್ಡ ದವಾಖಾನ್ಯಾಗ ರಗತಾ ತಪಾಸ ಮಾಡಿ ನಂಗ ಏಡ್ಸ ಐತಿ ಅಂತ ಹೇಳಿದ್ರು. ಎಲ್ಲಾ ನಿಮ್ಮ ಮಾವನ ಆಹೇರಿ(ಉಡುಗೊರೆ) ಬೇ ಇದು. ಎಲ್ಲಾರು ಅಂತಿದ್ರು ಮದವಿಕಿನಾ ಮದ್ಲ ಇಂವಾ ತುಸಾ ಆಟಾ ಆಡಿಲ್ಲಂತ. ಆದ್ರ ನಾ ತಲ್ಯಾಗ ತಗೊಂಡಿದ್ದಿಲ್ಲ ಬೇ. ನಂದ ಹೊದರ ಹೋಗಲಿ, ಮಕ್ಕಳ ಜೀವದ ಗತಿ ಏನಂತ ಚಿಂತಿ ಆಗೇತಿ. ಪಾಪದ ಕೂಸುಗೊಳನ್ನ ಹಡದ ಅವಕ್ಕ ಅನ್ನೆ(ಅನ್ಯಾಯ) ಮಾಡಿದ್ನಿ ಅನಿಸಾಕತ್ತೆತಿ. ನಾ ಯಾರಿಗೇನ ಕೆಟ್ಟದ್ದ ಮಾಡೇನಿ ಅಂತ ದೇವರ ನಂಗ ಈ ಸಿಕ್ಷೆ(ಶಿಕ್ಷೆ) ಕೊಟ್ಟಾನ. ಅಂತ ಹಣಿ ಹಣಿ ಬಡಕೊಂಡು ಹಂಗ ಗ್ವಾಡಿಗೆ ತಲಿ ಚೆಲ್ಲಿ ಕೂತಂಥಾಕಿ, ಪಟಕ್ಕನ ತಂಗಿ ಕೈ ಹಿಡಕೊಂಡು ಬೇ ಪಾರು, ನಾ ಹಿಂಗ ಹೇಳತೇನಂತ ತಪ್ಪ ತಿಳ್ಕೊಬ್ಯಾಡಾ, ನಿಮ್ಮ ಮಾಮಾನ ಚಾಳಿ ಹೆಂಗಸುರ ವಿಷಯದಾಗ ಅಷ್ಟ ಬರೊಬ್ಬರಿ ಇಲ್ಲ ತಂಗಿ. ಆಂವನ್ನ ಕಣ್ಣು ನಿನ್ನ ಮ್ಯಾಲೆ ಬಿಳೊದ್ರಾಗ ನೀ ಊರಿಗೆ ವಾಪಸ ಹೊಂಟ ಬಿಡ. ನಂದ ಹ್ಯಾಂಗರ ಆಕ್ಕೇತಿ ಇಲ್ಲೆ. ನಮ್ಮ ಬಾಳೆ ನಮಗ ಬಿಡಲಾರದ್ದ ನಾ ಹೆಂಗರೆ ಮಾಡ್ತೇನಿ. ನಿನ್ನ ಬಾಳೆ ಮೂರಾಬಟ್ಟೆ ಆಗುದ ಬ್ಯಾಡಾ. ನಾಳೆನ ಊರಿಗೆ ಹಚ್ಚಗೊಡ್ತೇನ(ಕಳಿಸಿಕೊಡ್ತೇನ) ನಿನ್ನ. ಅಂದ್ಲು. ಇದನ್ನೆಲ್ಲಾ ಕೇಳಕೋತ ಕೂತ ಪಾರುಗ ದಿಂಗ ಬಡಧಂಗ ಆಗಿತ್ತು. ಮುಗುಲು ಕಡದು ಮೈಮ್ಯಾಲೆ ಬಿದ್ಧಂಗ ಕೂತಿದ್ಲು. ಇನ್ನ ಅಕ್ಕನ ಮುಂದ ಕೂತು ಅಳೋದ ಬ್ಯಾಡಂತ ಸರಕ್ಕನ ಅಡಗಿ ಮನಿಗೆ ಹೋಗಿ ಒಲಿಮುಂದ ಕೂತು ಉರಿಯೊ ಬೆಂಕಿ ನೋಡಕೋತ ಹಿಂದಿನ ದಿನದ ಆ ಘಟನೆ ನೆನಪಾಗ್ಲಿಕತ್ತು.
ರೇಣವ್ವ ದವಾಖಾನಿಗೆ ಹೋದಮ್ಯಾಲೆ, ಪಾರು ಸರಾ ಸರಾ ಮನಿ ಕೆಲಸಾ ಎಲ್ಲಾ ಮುಗಿಸಿ, ಮಕ್ಕಳಿಗೆ ಊಟಕ್ಕ ಕೊಟ್ಟು, ಅವರನ್ನ ಮಲಗಿಸಿ, ಇನ್ನೆನ ಶಿವಪ್ಪ ಮಾವ ಬಂದಿಂದ ಊಟಕ್ಕ ಕೊಡಬೇಕಂತ ಕಾಯ್ಕೋತ ಕುತಿದ್ಲು. ಮಧ್ಯಾಹ್ನ ಬಂದ ಶಿವಪ್ಪಗ ಊಟ ಬಡಿಸಿ ತಾನು ಉಂಡು ಅಡಗಿ ಮನಿ ಸ್ವಚ್ಛ ಮಾಡಬೇಕಾದ್ರ ಹಿಂದಿಂದ ಬಂದ ಶಿವಪ್ಪ ಘಟ್ಟ್ಯಾಗಿ ಅಪ್ಪಿಕೊಂಡ ಭರಕ್ಕ, ಪಾರುಗ ದಿಕ್ಕ ತಪ್ಪಿಧಂಗ ಆಗಿತ್ತು. ಹರೆದ ಗಂಡಿನ ಬಿರುಸಿನ ಅಪ್ಪುಗಿ ಆಕಿಗೆ ಒಂಥರಾ ಮತ್ತೇರಿಧಂಗಾಗಿತ್ತು. ಆಕಿ ಬಿಡಿಸಿಕೊಳ್ಳೊ ಪ್ರಯತ್ನ ಮಾಡಲೇಯಿಲ್ಲಾ. ಆಂವನ ಅಪ್ಪುಗಿಯೊಳಗ ಹಂಗ ಕರಗಿ ಹೋದ್ಲು. ಘಳಿಗಿಗಳೊಳಗ ಎಲ್ಲಾ ಮುಗುದು ಹೋಗಿತ್ತು. ತನ್ನೆಲ್ಲಾನು ಮಾವಗ ಅರ್ಪಿಸಿಕೊಂಡಿದ್ಲು.
ಸುಖದನಶೆ ಇಳದ ಮ್ಯಾಲೆ ಅನಿಸಿತ್ತು ನಂಬಿ ಕರೆಸಿಕೊಂಡ ಅಕ್ಕಗ ಮೊಸಾ ಮಾಡಲಿಕತ್ತೇನೆನೊ ಅಂತ. ಆದ್ರ ದೇವರು ಅದೆಂಥಾ ಶಿಕ್ಷಾ ಕೊಟ್ಟಾ, ಮಾಡಿದ ತಪ್ಪಿಗೆ ಜೀವನಿಡಿ ಮರಗೊ ಅಂಥಾ ಬರೆ ಕೊಟ್ಟಾನ. ಇಂಥಾ ಪರಿಸ್ಥಿತಿಯೊಳಗ ಸುದ್ಧಾ ಅಕ್ಕಗ ತನ್ನ ಬಗ್ಗೆ ಇದ್ದ ಕಾಳಜಿ ಬಗ್ಗೆ ನೆನಪಾಗಿ ಜೀವ ವಿಲಿವಿಲಿ ಒದ್ದ್ಯಾಡಿ ಹೋತು. ಅಕ್ಕಾ ನಿನಗ ಮೋಸಾ ಮಾಡಿದ್ದಕ್ಕ ನಂಗ ದೇವರ ಬರೊಬ್ಬರಿ ಶಿಕ್ಷಾನ ಕೊಟ್ಟಾನ ಅಂತ ಒದರಿ ಒದರಿ ಹೇಳಬೇಕನಿಸ್ತು. ಯಾವ ಅನಾಹುತ ಆಗಬಾರದು ಅನ್ನೊ ಕಾರಣಕ್ಕ ನನ್ನ ಊರಿಗೆ ಕಳಿಸಬೇಕಂದಿದ್ಲೊ ಆ ಅನಾಹುತ ನಡೆದುಹೋಗಿ ಬಿಟ್ಟಿತ್ತು.
ಹೊತ್ತು ಕೈಮೀರಿಹೋಗಿತ್ತು. ರೇಣವ್ವ ಮತ್ತ ಮಕ್ಕಳು ತನ್ನ ಪ್ರಾರಭ್ಧಕರ್ಮಕ್ಕ ಅಂಟಿದ ವ್ಯಾಧಿಗೆ ಬಲಿಯಾಗಿದ್ರ , ಪಾರು ತಾನ ಬಯಸಿಬೆನ್ನತ್ತಿ ಹೋಗಿ ಸುಖದ ವ್ಯಾಧಿ ಗೆ ಬಲಿಯಾಗಿದ್ಲು. . . . . . .
*****
Hoo shit…..wat a. Story…..? Keep on writing madm……