ಸುಂದರ ಸಿಯಾಟೆಲ್: ಪ್ರಶಸ್ತಿ

ನಮಗೆ ಅದೇ ಹೆಸರೇಕೆ ಇಟ್ಟರು ಅನ್ನೋದರ ಹಿಂದೆ ನಮ್ಮಪ್ಪ ಹೇಳೋ ತರ ಪ್ರಸಿದ್ಧ ನಗರಗಳಿಗೂ ಆ ಹೆಸರುಗಳೇ ಯಾಕೆ ಬಂದವು ಅಂತ ಎಷ್ಟು ಸಲ ಯೋಚನೆ ಮಾಡಿರೋಲ್ಲ ನಾವು ? ಹೆಸರಲ್ಲೇನಿದೆ ಅಂದ್ರಾ ? ಪ್ರತೀ ನಗರಕ್ಕೂ ತನ್ನದೇ ಆದೊಂದು ಹೆಸರಿರುತ್ತೆ. ಆ ಹೆಸರೇಕೆ ಬಂತು ಅನ್ನೋದರ ಹಿಂದೊಂದು ಸುಂದರ ಕಥೆಯಿರುತ್ತೆ. ಹೆಸರ ಇತಿಹಾಸ ಥಟ್ಟನೆ ಗೋಚರಿಸದಿದ್ದರೂ ಕಾಲಗರ್ಭದಲ್ಲೆಲ್ಲೋ ಮರೆಯಾಗಿ ಕೆದಕುವವರಿಗಾಗಿ ಕಾದು ಕೂತಿರುತ್ತೆ. ದೇಶ ಸುತ್ತೋ ಜೋಶಿನಲ್ಲಿ ಸಿಕ್ಕಿದ್ದ ಸಿಯಾಟೆಲ್ಲಿಗೆ ಆ ಹೆಸರೇಕೆ ಬಂತೆನ್ನೋ ಪ್ರಶ್ನೆಯ ಉತ್ತರ ಹುಡುಕುತ್ತಾ ಅದರ ಗತಕಾಲದಿಂದ ಇಂದಿನ ವೈಭವಗಳ ಕಣ್ತುಂಬಿಕೊಳ್ಳುವ ಪ್ರಯತ್ನವೇ ಇಂದಿನ ಲೇಖನ

ಸಿಯಾಟೆಲ್ಲಿಗೆ ಆ ಹೆಸರೇ ಏಕೆ ?
ಭಾರತವನ್ನು ಹುಡುಕಿ ಹೊರಟ ಯುರೋಪಿಯನ್ ನಾವಿಕ ಕೊಲಂಬಸ್ ೧೪೯೨ರಲ್ಲಿ ಗಲ್ಫ್ ಆಫ್ ಮೆಕ್ಸಿಕೋದಲ್ಲಿನ ಆಂಟಿಲೆಸ್ ತಲುಪುತ್ತಾನೆ. ತಾನು ಭಾರತವನ್ನೇ ತಲುಪಿದೆ ಅನ್ನೋ ಭ್ರಮೆಯಲ್ಲಿ ಆತ ಅಲ್ಲಿನ ನಿವಾಸಿಗಳನ್ನು ಇಂಡಿಯನ್ಸ್ ಅಂತ ಕರೆಯುತ್ತಾನೆ. ಸ್ವಲ್ಪ ಸಮಯದ ನಂತರ ಆತನಿಗೆ ತನ್ನ ತಪ್ಪಿನ ಅರಿವಾದರೂ ಅವನಿಟ್ಟಿದ್ದ ಹೆಸರು ಹಾಗೇ ಉಳಿದು ಅಮೇರಿಕಾದ ಮೂಲ ನಿವಾಸಿಗಳಿಗೆ ರೆಡ್ ಇಂಡಿಯನ್ಸ್ ಅನ್ನೋ ಹೆಸರುಳಿದುಬಿಡುತ್ತದೆ. ಅಮೇರಿಕಾದ ರಾಜ್ಯಗಳಲ್ಲೊಂದಾದ ವಾಷಿಗ್ಟಂನ್ನಿನ ಆಗ್ನೇಯದಲ್ಲಿರುವ ಫೆಸಿಫಿಕ್ ಸಮುದ್ರ ಪ್ರದೇಶಗಳಿಗೆ ಪುಗೆಟ್ ಸೌಂಡ್ ಅಂತ ಈಗ ಕರೆಯಲಾಗುತ್ತೆ. ಇಂದಿನ ಪುಗೆಟ್ ಸೌಂಡಿನ ತೀರ ಪ್ರದೇಶಗಳಲ್ಲಿ ಹಿಂದೆ ಸೀ ಅಶ್ಲಾಷ್(see-ahlsh) ಎಂಬುದೊಂದು ಪಟ್ಟಣವಿತ್ತು. ಅಲ್ಲಿದ್ದ ಹಲವು ಪಂಗಡಗಳಲ್ಲಿ ಒಂದಾದ ಡುವಾಮಿಷ್ ಮತ್ತು ಸುಕಾಮಿಷ್ ಗಳಿಗೆ ಹದಿನೆಂಟನೆಯ ಶತಮಾನದ ಆದಿ ಮತ್ತು ಮಧ್ಯದಲ್ಲಿ ನಾಯಕನಾಗಿದ್ದವನ ಹೆಸರು ಸಿಯಾಟೆಲ್. ಯುರೋಪಿಯನ್ನರ ಜೊತೆಗಿನ ಉತ್ತಮ ಬಾಂಧವ್ಯದಿಂದ ಈ ನಗರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಾರಣನಾದ ಈ ನಾಯಕನ ಹೆಸರನ್ನೇ(ಸೀ ಅಶ್ಲಾಷ್ ಅನ್ನೋ ಹೆಸರಿನ ಅಪಭ್ರಂಶ ರೂಪ) ಇಟ್ಟು ಬಿಡುತ್ತಾರೆ.

ಸಿಯಾಟೆಲ್ ಬೆಂಕಿ ಮತ್ತು ನಗರವೇ ಭೂಗತವಾದ ಕತೆ:
ಸಿಯಾಟೆಲ್ ನಲ್ಲಿ ಹೇರಳವಾಗಿದ್ದ ಕಾಡಿನ ಕಾರಣ ಅಲ್ಲಿನ ಮರದ ದಿಮ್ಮಿಗಳನ್ನು ಸ್ಯಾನ್ ಫ್ರಾನ್ಸಿಸ್ಕೋ ಮುಂತಾದ ಜಾಗಗಳಿಗೆ ರಫ್ತು ಮಾಡೋದೇ ಇಲ್ಲಿನ ಮುಖ್ಯ ಉದ್ಯಮವಾಗಿತ್ತು . ಇಲ್ಲಿ ಮರ ಅನ್ನೋದು ಎಷ್ಟು ಹೇರಳವಾಗಿತ್ತೆಂದರೆ ಇಲ್ಲಿನ ಮನೆಗಳು, ನೀರು ಸರಬರಾಜು ಮಾಡೋ ಪೈಪುಗಳು ಕೂಡ ಮರದ್ದಾಗಿತ್ತಂತೆ ೧೮೮೯ ರ ಮುಂಚೆ. ೧೮೮೯ರ ಮುಂಚೆ ಅಂತಲೇ ಯಾಕಂದೆ ಅಂದಿರಾ ? ೧೮೮೯ ಜೂನ್ ಆರರಂದು ಬೆಂಕಿ ಹತ್ತಿ ಸಿಯಾಟೆಲ್ಲಿನ ಮುಖ್ಯ ವಾಣಿಜ್ಯ ಪ್ರದೇಶವಾಗಿದ್ದ ಬಿಸಿನೆಸ್ ಡಿಸ್ಟ್ರಿಕ್ಟಿನ ೨೫ ಬ್ಲಾಕುಗಳು ಪೂರ್ಣ ಸುಟ್ಟು ಹೋದವು. ಬೆಂಕಿಯೆಂದರೆ ಸಾಮಾನ್ಯ ಬೆಂಕಿಯಲ್ಲವದು. ಅದರಲ್ಲಿ ಅಂದಿನ ಕಾಲದಲ್ಲಾದ ನಷ್ಟ ೨೦ ಮಿಲಿಯನ್ ಡಾಲರ್(ಇಂದಿನ ಲೆಕ್ಕಕ್ಕೆ ಸುಮಾರು ೫೨೭ ಮಿಲಿಯನ್ ಡಾಲರ್! )ಅಂದೇ ಸಿಯಾಟೆಲ್ಲಿನಲ್ಲಿ ಕಟ್ಟೋ ಕಟ್ಟಡಗಳನ್ನು ಸಿಮೆಂಟು ಅಥವಾ ಕಲ್ಲಿನಿಂದ ಮಾತ್ರ ಕಟ್ಟಬೇಕೆನ್ನೋ ನಿರ್ಣಯವನ್ನು ಅಲ್ಲಿನ ಮುನ್ಸಿಪಾಲಿಟಿಯಿಂದ ಜಾರಿಗೆ ತರಲಾಯ್ತು. ಸರಿ, ಹೊಸ ನಗರವನ್ನು ಕಟ್ಟೋ ನಿರ್ಣಯವನ್ನೇನೋ ಕೈಗೊಳ್ಳಲಾಯ್ತು.ಆದ್ರೆ ಅದನ್ನು ಕಟ್ಟೋದೆಲ್ಲಿ ? ಈಗಿದ್ದ ರಸ್ತೆಗಳ ಮೇಲೆ ಎರಡೂ ಕಡೆ ಎಂಟಡಿಯ ಗೋಡೆಗಳನ್ನು ಕಟ್ಟಿ ಅದರ ಮೇಲೆ ಹೊಸ ರಸ್ತೆಗಳನ್ನು ಮಾಡಲಾಯ್ತು. ಈಗಿದ್ದ ಕಟ್ಟಡಗಳ ಮೇಲೆ ಹೊಸ ಕಟ್ಟಡಗಳೆದ್ದವು. ಮುಂಚೆಯಿದ್ದ ಕಟ್ಟಡಗಳು, ರಸ್ತೆಗಳನ್ನೆಲ್ಲಾ ಭೂಗತವಾಗಿಸಿ ಹೊಸ ಕಟ್ಟಡವನ್ನು ಕಟ್ಟಾಯ್ತು !

ಬಿಲ್ ಸ್ಪೈಡಲ್ಸ್ ಭೂಗತ ಟೂರ್:
ಯಾರೀ ಬಿಲ್ ಸ್ಪೈಡಲ್ ಅಂದಿರಾ ? ಆತ ಅಮೇರಿಕಾದ ಪ್ರಸಿದ್ದ ಇತಿಹಾಸಕಾರರಲ್ಲೊಬ್ಬ. ಸಿಯಾಟೆಲ್ ನಗರ ಬೆಳೆದ ರಕ್ತಸಿಕ್ತ ಕತೆಯನ್ನು ಆತ ವರ್ಣಿಸುವ “ಸನ್ಸ್ ಆಫ್ ದ ಪ್ರಾಫಿಟ್ಸ್” ಮುಂತಾದ ಪುಸ್ತಕಗಳಲ್ಲೇ ಓದಬೇಕು. ಸಿಯಾಟೆಲ್ ನಗರಿಯ ಗತವೈಭವದ ಭೂಗತ ರಸ್ತೆಗಳು ಈಗಲೂ ಇವೆಯಂತೆ ಅನ್ನೋ ಅಂತೆ ಕಂತೆಗಳು ೧೯೫೦ ರ ಸುಮಾರಿಗೆ ಹರಿದಾಡುತ್ತಿದ್ದವು. ಆದರೆ ಅವುಗಳನ್ನ ತೋರಿಸುವ ಯಾವುದೇ ಗೈಡಾಗಲೀ, ಟೂರಾಗಲಿ ಇರಲಿಲ್ಲ. ಈ ತರದ ಜಾಗಗಳಿದ್ದ ಬಗ್ಗೆ ಅಧ್ಯಯನ ಮಾಡಿದ್ದ ಬಿಲ್ ಸ್ಪೈಡಲ್ಲಿಗೆ ಆತನ ಹೆಂಡತಿ ಶೆರ್ಲಿಯ ಕಡೆಯಿಂದ ಅದನ್ನು ಸಂರಕ್ಷಿಸುವ ಬಗ್ಗೆ ಸಲಹೆಗಳು ಬರುತ್ತಿದ್ದರೂ ಅದನ್ನು ಕಾರ್ಯರೂಪಕ್ಕೆ ತರೋದು ಹೇಗೆಂಬ ನಿಶ್ಚಿತವಾದ ಗೊತ್ತು ಗುರಿಯಿರಲಿಲ್ಲ. ಹೀಗೇ ಪತ್ರಿಕೆಯೊಂದರಲ್ಲಿ ಆತ ಬರೆದ ಅಂಕಣಕ್ಕೆ ಮುನ್ನೂರಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯೆ ನೀಡಿದ ಜನ ದಿನಂಪ್ರತಿ ಅಂತಹ ಟೂರೊಂದನ್ನು ಶುರು ಮಾಡಬೇಕೆಂದು ದುಂಬಾಲು ಬೀಳತೊಡಗಿದರು. ೧೯೬೫ರಲ್ಲಿ ಇಂತಹ ಪ್ರಯೋಗಾರ್ಥ ಟೂರನ್ನು ಪ್ರಾರಂಭಿಸಿ ಮೊದಲ ದಿನವೇ ಐನೂರು ಜನ ಪಾಲ್ಗೊಂಡಾಯ್ತು. ನಿಧಾನವಾಗಿ ಅಲ್ಲಿಗೆ ಬರತೊಡಗಿದ ಜನರು, ಅವರ ಮೂಲಕ ಸಂಗ್ರಹಿಸಿದ ಸಹಿಯ ಬೆಂಬಲದಿಂದ ಈಗಿನ ಪಿಯೋನೀರ್ ಸ್ಕಾರಿನ ೨೦ ಬ್ಲಾಕುಗಳನ್ನು ಐತಿಹಾಸಿಕ ಸಂರಕ್ಷಿತ ಜಾಗಗಳೆಂದು ಘೋಷಿಸಲಾಯ್ತು. ಸುಮಾರು ತೊಂಭತ್ತು ನಿಮಿಷದ ಈ ಟೂರಿನಲ್ಲಿ ಸಿಯಾಟೆಲ್ ನಗರದಲ್ಲಿ ಆಗಿದ್ದ ಕಟ್ಟಡಗಳ ಅವಶೇಷಗಳು, ಅವುಗಳ ಅಂದಿನ ಫೋಟೋಗಳು, ಅವುಗಳು ಬೆಳೆದು, ಸುಟ್ಟ ಪರಿ, ಹೊಸ ನಗರ ಬೆಳೆದ ಪರಿ, ಪ್ರತೀ ಸ್ಥಳದ ಅಂದಿನ ವೈಶಿಷ್ಟ್ಯಗಳ ಬಗ್ಗೆ ಕೇಳಬಹುದು. ಇತಿಹಾಸದ ಪುಟಗಳಲ್ಲಿ ಹಿಂದಿಂದೆ ಜೀಕಿದ ಖುಷಿ ಪಡೆಯಬಹುದು.

ಸ್ನೊಕಾಮಿ ಫಾಲ್ಸ್:
ಸ್ನೊಕಾಮಿ(Snoqualmie) ಎಂಬ ಮೂಲ ಅಮೇರಿಕನ್ ಪಂಗಡದ ಬಗ್ಗೆ ಮತ್ತು ಅದರ ನಾಯಕನ ಬಗ್ಗೆ ಮುಂಚೆ ಹೇಳಿದ್ದೆನಲ್ಲಾ ? ಸ್ನೊಕಾಮಿ ಅನ್ನೋ ಪ್ರದೇಶವೂ ಕೂಡ ಇಲ್ಲಿನ ಮೂಲ ಭಾಷೆಯಾದ ಸಾಲಿಶ್ ನ ಸ-ಕೊ-ಕೊ(sah-KOH-koh) ವನ್ನು ಉಚ್ಚರಿಸಲು ಬಾರದ ಆಂಗ್ಲರು ಮಾಡಿದ ಅಪಭ್ರಂಶ ರೂಪ. ಸ-ಕೊ-ಕೋ ಅಂದರ ಚಂದ್ರನೆಂದು ಅರ್ಥವಂತೆ ಸಾಲಿಶ್ ಭಾಷೆಯಲ್ಲಿ. ಮೂಲ ನಿವಾಸಿಗಳ ಪಂಗಡಗಳು ಹೆಚ್ಚು ನೆಲೆಸಿದ್ದ ಪ್ರದೇಶದಲ್ಲಿದ್ದ ಜಲಪಾತವೊಂದನ್ನು ರೈಲ್ವೇ ಲೈನುಗಳನ್ನು ಹಾಕಲು ಬಂದ ಯುರೋಪಿಯನ್ನರು ೧೮ನೇ ಶತಮಾನದ ಅಂತ್ಯದಲ್ಲಿ ಕಂಡು ಹಿಡಿಯುತ್ತಾರೆ. ಅಂದು ಅಲ್ಲಿ ಇಂಜಿನಿಯರ್ ಆಗಿದ್ದ ಚಾರ್ಲ್ಸ್ ಹೆ ಬೇಕರ್ ಅನ್ನುವವನು ಇಲ್ಲಿ ೧೮೯೯ರಲ್ಲಿ ಅಂಗರ್ತತ ಜಲ ವಿದ್ಯುತ್ ಕೇಂದ್ರವನ್ನು ತೆರೆಯುತ್ತಾನೆ. ಇದು ಪ್ರಪಂಚದ ಪ್ರಪಥಮ ಅಂಗರ್ಗತ ಜಲವಿದ್ಯುತ್ ಉತ್ಪಾದನಾ ಕೇಂದ್ರ. ಸಿಯಾಟೆಲ್ ನ ಕೆಂದ್ರದಿಂದ ಸುಮಾರು ೨೨ ಕಿ.ಮೀ ದೂರವಿರುವ ಇಲ್ಲಿಂದ ಸಿಯಾಟೆಲ್ಲಿಗೆ ವಿದ್ಯುತ್ ಸರಬರಾಜು ಶುರುವಾಗುತ್ತದೆ. ಆಗ ತಾನೇ ಸಿಯಾಟೆಲ್ ಬೆಂಕಿಯಿಂದ ಸುಟ್ಟು ಹೊಸತಾಗಿ ನಿರ್ಮಾಣವಾಗುತ್ತಿದ್ದ ಕಾರಣದಿಂದ ಈತನ ಸುರಕ್ಷಿತ ವಿದ್ಯುತ್ತಿಗೆ ಸಖತ್ ಬೇಡಿಕೆ ಬರುತ್ತದೆ. ಈಗ ಅಲ್ಲಿ ಮತ್ತೊಂದು ಜಲವಿದ್ಯುತ್ ಕೇಂದ್ರವನ್ನು ಸ್ಥಾಪಿಸಲಾಗಿದೆಯಾದರೂ ಜನರಿಲ್ಲಿಗೆ ಬರೋದು ಸ್ನೊಕಾಮಿ ಜಲಪಾತದ ನಯನ ಮನೋಹರ ದೃಶ್ಯವನ್ನು ಸವಿಯೋಕೆ. ಜಲಲ ಧಾರೆಯಾಗಿ ಜಲಪಾತ ಧುಮ್ಮುಕ್ಕುತ್ತಾ ನಮ್ಮೆದುರಿಗೆ ಮಂಜ ತೆರೆಯನ್ನು ಏರ್ಪಡಿಸುತ್ತಿದ್ದರೂ ಅದು ತೆರೆದು ಮತ್ತೆ ಮುಚ್ಚೋ ಕೆಲವೇ ಸೆಕೆಂಡುಗಳಿಗೆ ನಿಮಿಷಗಟ್ಟಲೇ ಕಾಯುತ್ತಾ ನಿಲ್ಲುವವರಿದ್ದಾರೆ. ಕೊರೆಯೋ ಚಳಿಯ ಡಿಸೆಂಬರಿನಲ್ಲಿ ಇಲ್ಲಿನ ವೀಕ್ಷಣಾ ತಾಣಗಳ ಮೇಲೆಲ್ಲಾ ಮಂಜುಗಟ್ಟಿದ್ದರೂ , ನಡುಗುವ ಚಳಿಯಲ್ಲೂ ಜಲಪಾತದ ಮರಗಟ್ಟದ ನೀರ ರೇಚನವನ್ನು ಸವಿಯೋಕೆ ಜನ ಬರುತ್ತಾರೆ. ಬೇಸಿಗೆಯ ದಿನಗಳಲ್ಲಿ ಇಲ್ಲಿ ನೀರ ರಭಸ ಕಡಿಮೆಯಿದ್ದಾಗ ಹೋಗುವ ಹೈಕಿಂಗಿನ ದಾರಿಯೂ ಇಲ್ಲಿದೆ. ಮುಂಚಿನ ಸ್ನೊಕಾಮಿ ಜನರಿಗೆ ಇದೊಂದು ತೀರ್ಥ ಕ್ಶೇತ್ರವಾಗಿತ್ತಂತೆ. ಕೆಳಗಿನ ಪ್ರದೇಶಗಳಿಂದ ನೀರ ಪ್ರವಾಹಕ್ಕೆ ಎದುರಾಗಿ ಹುಟ್ಟು ಹಾಕಿ ಬರುವ ಅವರು ಜಲಪಾತವನ್ನೂ ಸುತ್ತಿ ಬಳಸಿ ಹತ್ತಿ, ಮತ್ತೆ ಅದೇ ನದಿಯ ಮೂಲಕ ಹಾದು ನೀರ ಮೇಲ್ಗಣ ಜಾಗಗಳನ್ನು ತಲುಪುತ್ತಿದ್ದರಂತೆ ! ಅಂದಿನ ಇತಿಹಾಸದ ಪುಟಗಳನ್ನು ಓದುತ್ತಿದ್ದರೆ ನಮ್ಮ ದಬಾರೆಯ ಕಾಳಿನದಿ ಅಥವಾ ಹೃಷಿಕೇಷದಲ್ಲಿನ ರಾಫ್ಟಿಂಗ್ ಸಾಹಸಗಳು ಏನೇನೂ ಅಲ್ಲವೆನಿಸಿಬಿಡುತ್ತೆ !

ಸ್ಪೇಸ್ ನೀಡಲ್:
ಸಿಯಾಟೆಲ್ಲಿನ ಇನ್ನೊಂದು ಮುಖ್ಯ ಆಕರ್ಷಣೆ ಸ್ಪೇಸ್ ನೀಡಲ್. ೧೯೬೨ರಲ್ಲಿ ಇಲ್ಲಿ ವರ್ಲ್ಟ್ ಫೇರ್ ನಡೆದಾಗ ಅಲ್ಲಿ ಬರೋ ಜನರ ಆಕರ್ಷಣೆಗೆಂದು ಎರಡು ಮುಖ್ಯ ನಿರ್ಣಯಗಳನ್ನು ಕೈಗೊಳ್ಳಲಾಯ್ತು. ಮೊದಲನೆಯದು ಸ್ಪೇಸ್ ನೀಡಲ್. ಎರಡನೆಯದು ಮಾನೋ ರೈಲ್. ಆರು ನೂರು ಅಡಿಗಳಿಗಿಂತಲೂ ಹೆಚ್ಚು ಎತ್ತರ ತಲುಪಿ ಇಡೀ ಸಿಯಾಟೆಲ್ಲಿನ ೩೬೦ ಡಿಗ್ರಿ ಸುತ್ತಣ ಸೌಂದರ್ಯವನ್ನು ಸವಿಯಲು ಅನುಕೂಲ ಮಾಡಿಕೊಡುವ ಈ ಸ್ಪೇಸ್ ನೀಡಲ್ ಅಂದೂ , ಇಂದೂ ಸಖತ್ ಪ್ರಸಿದ್ದವಾಗಿದೆ. ಈಗ ಕಟ್ಟಡ ಕಾಮಗಾರಿ ನಡೆಯುತ್ತಾ ಮೇಲ್ಗಡೆಯ ಕೊಂಚ ಭಾಗದ ದೃಶ್ಯಾವಳಿ ಮರೆಯಾದರೂ ಸಿಯಾಟೆಲ್ಲಿನ ಉಳಿದ ಭಾಗಗಳನ್ನು ಅಷ್ಟೆತ್ತರದಿಂದ ನೋಡುವ ಅನುಭವ ಮನೋಹರವಾಗಿದೆ.

ಚಿಹುಲಿ ಗ್ಲಾಸ್ ಮ್ಯೂಸಿಯಂ:
೨೦೧೨ ರಲ್ಲಿ ಸಾರ್ವಜನಿಕರಿಗೆ ತೆರೆಯಲ್ಪಟ್ಟ ಈ ಮ್ಯೂಸಿಯಂನಲ್ಲಿ ಡೇಲ್ ಚಿಹುಲಿ ಮತ್ತವರ ಸಹಚರರ ಗ್ಲಾಸ ಕೈಚಳಕಗಳನ್ನು ಕಾಣಬಹುದು. ಗ್ಲಾಸಿನಲ್ಲಿ ಇವರು ಮಾಡಿರುವ ತರಹೇವಾರಿ ಡಿಸೈನುಗಳು, ಅವಕ್ಕೆ ಕೊಟ್ಟಿರುವ ಬಣ್ಣಗಳು, ಆ ಬಣ್ಣಗಳು ಪ್ರತಿಫಲಿಸುವಂತೆ ಕೊಟ್ಟಿರುವ ಹಿಂಬೆಳಕು, ಅದರ ಪ್ರತಿಫಲಿಸೋ ಗ್ಲಾಸುಗಳು.. ವಾ ! ಇಷ್ಟದ್ಭುತ ಗ್ಲಾಸ ಚಳಕವನ್ನು ನಾನು ಹಿಂದೆಲ್ಲೂ ನೋಡಿಲ್ಲವೆಂದರೆ ತಪ್ಪಾಗಲಾರದೇನೋ. ಇಲ್ಲಿ ಪ್ರತೀ ಮುಕ್ಕಾಲು ಘಂಟೆಗೊಂದರಂತೆ ಗ್ಲಾಸನ್ನು ಊದಿ ಆ ತರಹದ ಶಿಲ್ಪಗಳನ್ನು ಮಾಡೋದು ಹೇಗೆ ಎಂಬ ಪ್ರದರ್ಶನಗಳು, ಎಲ್ಲಾ ಶಿಲ್ಪಗಳ ಇತಿಹಾದದ ಬಗೆಗಿನ ಮಾಹಿಸಿ ಕೋಷ್ಟಕಗಳು, ಕೆಲವು ಶಿಲ್ಪಗಳ ಬಗೆಗೆ ವರ್ಣಿಸೋಕೆ ಅಲ್ಲೇ ಇರುವ ಗೈಡುಗಳು.. ಹೀಗೆ ಗ್ಲಾಸ ಬಗೆಗಿನ ನಿಮ್ಮ ಕಲ್ಪನಾ ಲಹರಿಯನ್ನೇ ಬದಲಿಸುವಷ್ಟು ಅದ್ಭುತವಾದ ಮ್ಯೂಸಿಯಂ ಇದು.

ಸಿಯಾಟೆಲ್ ಸೆಂಟರ್
ಇತ್ತೀಚೆಗಷ್ಟೇ ಸಿಯಾಟೆಲ್ಲಿನಲ್ಲಿ ಮುಕ್ತಾಯವಾದ ನವೆಂಬರ್ ಫೆಸ್ಟಿನಲ್ಲಿ ಸಿಯಾಟೆಲ್ ಸಂಟರಿನ ಸುತ್ತಮುತ್ತ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದವು. ಐಸಿನಲ್ಲಿ ಕೆತ್ತನೆಗಳನ್ನು ಮಾಡೋದನ್ನು ತೋರಿಸೋ ಶೋ, ಒಪೆರಾಗಳು,ವಿಂಟರ್ ಟ್ರೈನ್, ಐಸ್ ರಿಂಕುಗಳು ಹೀಗೆ ಇಲ್ಲಿನ ಮುಖ್ಯ ಸ್ಥಳವಾದ ಆರ್ಮೋರಿಯಲ್ಲೆಲ್ಲಾ ಹಬ್ಬದ ಸಂಭ್ರಮ. ಒಂದಾನೊಂದು ಜಮಾನದಲ್ಲಿ ಶಸ್ತ್ರಾಗಾರವಾಗಿದ್ದು ಸದ್ಯಕ್ಕೆ ಪ್ರೇಕ್ಷಣೀಯ ಸ್ಥಳವನ್ನಾಗಿಸಿರುವ ಆರ್ಮೋರಿಯಲ್ಲಿ ಯಾವಾಗಲೂ ಜನಜಂಗುಳಿ. ಹತ್ತಿರದಲ್ಲೇ ಮೈಕ್ರೋಸಾಫ್ಟಿನ ಸ್ಥಾಪಕರಲ್ಲೊಬ್ಬರಾದ ಪಾಲ್ ಅಲೆನ್ ಸ್ಥಾಪಿಸಿದ ಮ್ಯೂಸಿಯಂ ಅಫ್ ಪಾಪ್ ಕಲ್ಪರ್(ಮೊಪಾಪ್) ಕೂಡ ಇದೆ. ನೀವು ಪುಸ್ತಕ ಪ್ರೇಮಿಯಾಗಿದ್ದರೆ ಸಿಯಾಟೆಲ್ಲಿನಲ್ಲಿ ಭೇಟಿ ಕೊಡಲೇ ಬೇಕಾದ ಜಾಗವೆಂದರೆ ಲೈಬ್ರರಿ ಆಫ್ ಕಾಂಗ್ರೆಸ್. ಹನ್ನೊಂದು ಅಂತಸ್ತುಗಳನ್ನು ಹೊಂದಿರುವ ಬೃಹದಾಕಾರದ ಈ ಲೈಬ್ರರಿಯನ್ನು ಹೊಕ್ಕರೆ ವಾಪಾಸ್ ಬರಲು ಕೆಲವು ಘಂಟೆಗಳಾದರೂ ಬೇಕು !

ಮಾನೋ ರೈಲ್:
೧೯೬೨ ರ ವರ್ಲ್ಡ್ ಫೇರಿನ ಸಮಯದಲ್ಲಿ ಸಿಯಾಟಲ್ಲಿನ ಶುರುವಾದ ಮಾನೋ ರೈಲ್ ಸಿಯಾಟಲ್ಲಿನ ವೆಸ್ಟ್ ಲೇಕ್ ಸೆಂಟರ್ ಮತ್ತು ಸಿಯಾಟಲ್ ಸೆಂಟರಿನ ನಡುವೆ ಸಂಚರಿಸುತ್ತದೆ. ಐದು ನಿಮಿಷದ ಈ ಪಯಣದಲ್ಲಿ ಸಿಯಾಟಲ್ಲಿನ ಗಗನಚುಂಬಿ ಕಟ್ಟಡಗಳನ್ನು ಕಾಣಬಹುದು.

ಪೈಕ್ ಪ್ಲೇಸ್ ಮಾರ್ಕೇಟ್ ಮತ್ತು ಸ್ಟಾರ್ ಬಕ್ಸ್ ಕಾಫಿ:
ಮೆಕ್ಸಿಕೋ, ಅಮೇರಿಕಾಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸ್ಟಾರ್ ಬಕ್ಸ್ ಕಾಫಿ ಕಾಣಸಿಗುತ್ತೆ. ೧೯೭೧ರಲ್ಲಿ ಶುರುವಾದ ಸ್ಟಾರ್ ಬಕ್ಸಿನ ಮೊದಲ ಅಂಗಡಿಯಿರುವುದು ಸಿಯಾಟಲ್ಲಿನ ಪೈಕ್ ಪ್ಲೇಸ್ ಮಾರ್ಕೇಟಿನಲ್ಲಿ. ಅಲ್ಲೇ ಹತ್ತಿರದಲ್ಲಿ ಸ್ಟಾರ್ ಬಕ್ಸಿನಲ್ಲಿ ಸರಬರಾಜಾಗೋ ಕಾಫಿ ಬೀಜಗಳನ್ನು ರೋಸ್ಟ್ ಮಾಡೋ ರೋಸ್ಟರಿ ಕೂಡ ಇದೆ. ಇಲ್ಲಿ ಪ್ರಪಂಚದ ಹಲವು ಮೂಲೆಗಳಿಂದ ತರುವ ಕಾಫಿ ಬೀಜಗಳಿಂದ ತಯಾರಾಗೋ ಕಾಫಿಯನ್ನು ಸವಿಯಬಹುದು. ಪೈಕ್ ಪ್ಲೇಸಿನ ಮತ್ತೊಂದು ಆಕರ್ಷಣೆಯೆಂದರೆ ಇಲ್ಲಿರುವ ಮೀನು ಮಾರ್ಕೇಟು. ಜನ ಇಲ್ಲಿ ಮೀನು ತಗೊಂಡರೆ ಆ ಮೀನುಗಳನ್ನು ಪ್ಯಾಕ್ ಮಾಡೋ ಇಲ್ಲಿನ ಪದ್ದತಿಯನ್ನು ನೋಡೋದೇ ಒಂದು ವಿಶೇಷ. ಹೊರಗಿನ ಬೀದಿಯಿಂದ ಗ್ರಾಹಕರು ತೆಗೆದುಕೊಂಡ ಮೀನನ್ನು ಪ್ಯಾಕ್ ಮಾಡುವವನ ಕೈಗೆ ಸಿಗುವಂತೆ ಹಾಡು ಹೇಳುತ್ತಾ ಎಸೆಯುತ್ತಾರೆ. ಅವರು ಎಸೆಯೋದು, ಹಿಡಿಯೋದು, ಮಧ್ಯದ ಹಾಡು ನೋಡೋದೇ ಒಂದು ಮಜಾ. ಮೀನು ತಿನ್ನದವರೂ ಇಲ್ಲಿನ ಹಾರಾಡೋ ಮೀನುಗಳನ್ನು ನೋಡೋಕೆ ಬಂದು ನೆರೆದಿರುತ್ತಾರೆ ! ಇಲ್ಲಿನ ಬೀದಿಗಳಲ್ಲಿ ಭಾರತದ ಅಲಂಕಾರ ಸಾಮಗ್ರಿಗಳನ್ನು ಮಾರುವವರು, ಹೂ ಮಾರುವವರು ಹೀಗೆ ತರಹೇವಾರಿ ಸಾಮಗ್ರಿಗಳ ಕೊಡು, ಕೊಳ್ಳುವವರು ಸಿಗುತ್ತಾರೆ. ಇಲ್ಲಿಂದ ಹತ್ತಿರದ ಐಲೈಂಡುಗಳಿಗೆ ಹಡಗುಗಳಲ್ಲಿ ಹೋಗೊಕೆ ಕಾಯುವವರೂ ಸಿಗುತ್ತಾರೆ.

ಸಿಯಾಟೆಲ್ ಶಹರವನ್ನು ಸುತ್ತಿದಷ್ಟೂ, ತಿರುಗಾಟದ ನೆನಪುಗಳನ್ನು ಬರೆದಷ್ಟೂ ಮುಗಿಯೋಲ್ಲ. ಸುತ್ತಣ ಹಲವಾರು ದ್ವೀಪಗಳು, ಮೌಂಟ್ ರೈನರ್ ಎಂಬ ಜ್ವಾಲಾಮುಖಿ ಪರ್ವತದ ಚಾರಣ, ಕೌಘರ್ ಬೆಟ್ಟದ ಹೈಕಿಂಗ್ ಟ್ರೈಲುಗಳು, ವಾಷಿಂಗ್ಟನ್ ಲೇಕ್ ಎಂಬ ಸಿಯಾಟೆಲ್ಲಿನ ಒಳನಾಡು ಮತ್ತು ಪುಗೆಟ್ ಸೌಂಡಿನ ಮಧ್ಯೆ ಬೋಟುಗಳ ಓಡಾಟಕ್ಕೆ ಮಾಡಿರುವ ಜಾಗ, ಸೊಮೋನ್(solmon) ಮೀನುಗಳ ಸಂಚಾರಕ್ಕೆ ಮಾಡಿರೋ ಫಿಶ್ ಲ್ಯಾಡರ್ರುಗಳು.. ಹೀಗೆ ಅದೆಷ್ಟೋ ನೆನಪುಗಳು. ಮತ್ತೆ ಮತ್ತಲ್ಲಿಗೆ ಹೋಗಲು ಪ್ರೇರೆಪಿಸುವಷ್ಟು. ಸೌಂದರ್ಯದ ನಾಡಲ್ಲಿ, ಇತಿಹಾಸದ ಗರ್ಭದಲ್ಲಿ ಮಿಂದು ಮುಳುಗೇಳಲು ಸೆಳೆದೊಯ್ಯುವಷ್ಟು. ಮತ್ತಷ್ಟು ನೆನಪುಗಳೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಒಂದಿಷ್ಟು ವಿರಾಮ.

ಪ್ರಶಸ್ತಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x