
ಶೇಕ್ಸಪಿಯರ ರಿನೈಜಾನ್ಸ್ ಕಾಲದ ಶ್ರೇಷ್ಟ ನಾಟಕಕಾರ. ಇಂಗ್ಲೆಂಡಿನಲ್ಲಿ ಕ್ವೀನ ಎಲಿಜಬೆತ್ ಆಳ್ವಿಕೆಯ ಕಾಲ ಅದು. ಆತ ಬರೆದ As You Like It ರೋಮ್ಯಾಂಟಿಕ ಕಾಮೆಡಿ. ಗೊಲ್ಲ ಅಥವಾ ದನಗಾಯಿ ಸಂಪ್ರದಾಯದ ಕಾಲ್ಪನಿಕ ರಮಣೀಯ ಗ್ರಾಮೀಣ ಸೊಬಗನ್ನು ಕಟ್ಟಿಕೊಡುತ್ತ ಗೊಲ್ಲ ಜನಾಂಗದ ವೈಭವೀಕೃತ ಬದುಕನ್ನು ವಿಫುಲವಾಗಿ ತನ್ನ ಕಾವ್ಯದಲ್ಲಿ ವಿಜೃಂಬಿಸುತ್ತಾನೆ ಶೇಕ್ಸಪಿಯರ್. ರೋಮ್ಯಾಂಟಿಕ ಕಾಮೆಡಿಗಳಲ್ಲಿ ಪ್ರೇಮ ಪ್ರಮುಖವಾದ ಆಶಯ. ಇಟಲಿಯ ಡ್ಯೂಕ್ ಸಿನಿಯರ್ ತನ್ನ ಸ್ವಂತ ಸಹೋದರನ ಕರಾಮತ್ತಿಗೆ ಬಲಿಯಾಗಿ ರಾಜ್ಯಭ್ರಷ್ಟನಾಗಿ ಆರ್ಡನ್ ಕಾಡಿನಲ್ಲಿ ತನ್ನ ಸಂಗಡಿಗರೊಂದಿಗೆ ವಾಸಿಸುತ್ತಿದ್ದಾನೆ. ಆತನ ಸಹೋದರ ಡ್ಯೂಕ್ ಫ್ರೆಡರಿಕ್ ತನ್ನ ಅಣ್ಣನಿಂದ ಬಲವಂತವಾಗಿ ರಾಜ್ಯವನ್ನು ಕಬಳಿಸಿದ್ದಾನೆ. ಆದರೆ ಪ್ರೆಡರಿಕ್ ತನ್ನ ಪುತ್ರಿ ಸಿಲಿಯಾಳೊಂದಿಗೆ ಸಿನಿಯರ್ ಡ್ಯೂಕ್‌ನ ಮಗಳು ರೋಸಾಲಿಂಡ್‌ಳನ್ನು ತನ್ನೊಂದಿಗೆ ಉಳಿಸಿಕೊಂಡಿದ್ದಾನೆ. ಸಿಲಿಯಾ ಮತ್ತು ರೋಸಾಲಿಂಡ ನಡುವೆ ಅಪೂರ್ವವಾದ ಬೆಸುಗೆ ಇದ್ದು ಅವರಿಬ್ಬರು ಸಹೋದರಿಯರಷ್ಟೇ ಅಲ್ಲದೇ ಅಪರಿಮಿತ ಸ್ನೇಹಿತೆಯರು ಕೂಡಾ.
ಇನ್ನೊಂದೆಡೆ ಸರ್ ರೋಲ್ಯಾಂಡ್ ಡೆ ಸನ್ಸ್ ಎಂಬವನ ಕಿರಿಯ ಪುತ್ರ ಒರ್‍ಲಾಂಡೋ ಕಪಟಿಯೂ ದ್ರೋಹಿಯೂ ಆದ ತನ್ನ ಹಿರಿಯಣ್ಣ ಒಲಿವರ್‌ನ ಕುತಂತ್ರಕ್ಕೆ ಬಲಿಯಾಗಿ ಬಾಲ್ಯದಿಂದಲೇ ಶಿಕ್ಷಣದಿಂದ ವಂಚಿತನಾಗಿದ್ದಾನೆ. ಅಲ್ಲದೇ ಒಲಿವರ್ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುಕೊಡದೆ ಒರ್‍ಲೆಂಡೋನ ಭಾಗವನ್ನು ತಾನೇ ಅನುಭವಿಸುತ್ತಿದ್ದಾನೆ. ಹೀಗಾಗಿ ಈಗ ಒರ್‍ಲೆಂಡೋ ತನ್ನಣ್ಣನ ವಿರುದ್ದ ಎದ್ದುನಿಂತಿದ್ದಾನೆ. ಇದು ಒಲಿವರ್‌ನಿಗೆ ತಿಳಿಯುತ್ತಲೇ ಸಂಪತ್ತಿನ ವ್ಯಾಮೋಹಕ್ಕೆ ತನ್ನ ಸ್ವಂತ ತಮ್ಮನನ್ನು ಕೊಲೆಮಾಡಲು ನಿರ್ಧರಿಸುತ್ತಾನೆ. ಆ ಅವಕಾಶ ಆತನಿಗೆ ಮಲ್ಲಯುದ್ಧದ ನೆಪದಲ್ಲಿ ಸಿಗುತ್ತಲೇ ತನ್ನ ಸಹೋದರ ಒರ್‍ಲೆಂಡೋನೊಂದಿಗೆ ಸೆಣಸಲಿರುವ ಚಾರ್ಲ್ಸನಿಗೆ ಒರ್‍ಲೆಂಡೋ ಕುರಿತು ಅಲ್ಲಸಲ್ಲದ ಸಂಗತಿಗಳನ್ನು ಹೇಳಿ ಆತನನ್ನು ಮುಗಿಸುವ ಹುನ್ನಾರ ನಡೆಸುತ್ತಾನೆ. ಆದರೆ ಮಲ್ಲಯುದ್ಧದಲ್ಲಿ ಒರ್‍ಲೆಂಡೋ ಚಾರ್ಲ್ಸನನ್ನು ಸೋಲಿಸುತ್ತಾನೆ. ಡ್ಯೂಕ್ ಪ್ರೆಡರಿಕ್‌ಗೆ ಒರ್‍ಲೆಂಡೋ ಗೆದ್ದ ಸಂಗತಿ ಖುಷಿ ಕೊಡುವುದಿಲ್ಲ. ಕಾರಣವಿಷ್ಟೇ ಒರ್‍ಲೆಂಡೋ ಸಿನಿಯರ್ ಡ್ಯೂಕ್‌ನ ಸ್ನೇಹಿತನ ಮಗನೆಂಬುದು. ಆದರೆ ರೋಸಾಲಿಂಡ ಮತ್ತು ಸಿಲಿಯಾ ಈ ಜಟ್ಟಿಕಾಳಗಕ್ಕೆ ಸಾಕ್ಷಿಯಾಗುತ್ತಾರೆ. ಅವರಿಬ್ಬರೂ ಆತನನ್ನು ಮೆಚ್ಚಿಕೊಳ್ಳುತ್ತಾರೆ.ರೋಸಾಲಿಂಡಾ ಆತನಲ್ಲಿ ಅನುರಕ್ತಳಾಗುತ್ತಾಳೆ. ಮತ್ತು ಸಂಪ್ರೀತಳಾಗಿ ತನ್ನ ಕುತ್ತಿಗೆ ಹಾರವನ್ನು ಕಾಣಿಕೆಯಾಗಿ ನೀಡುತ್ತಲೇ ಡ್ಯೂಕ್ ಉರಿದೇಳುತ್ತಾನೆ. ಆಕೆಯ ಆಕರ್ಷಕ, ಸದಾಚಾರದ ನಡೆನುಡಿಗಳ ಮಧ್ಯೆ ತನ್ನ ಪುತ್ರಿ ಸಿಲಿಯಾ ಕನಿಷ್ಠಳಾಗಿ ಕಂಡಂತಾಗಿ ಕ್ಷುಧ್ರನಾದ ದೊರೆ ಆಕೆಗೆ ಆ ಕ್ಷಣವೇ ರಾಜ್ಯತೊರೆದು ಹೊರಟು ಹೋಗುವಂತೆ ಆದೇಶಿಸುತ್ತಾನೆ. ಒರ್‍ಲೆಂಡೋ ವಿರುದ್ಧ ಕೂಡ ಆತ ಸಿಡಿಮಿಡಿಗೊಂಡದುದಷ್ಟೇ ಅಲ್ಲದೇ ಒರ್‍ಲೆಂಡೋನನ್ನು ನಿವಾರಿಸಲು ಸಂಚು ಹೂಡುತ್ತಾನೆ. ಈ ಸಂಗತಿಯನ್ನು ಪ್ರೆಡರಿಕ್‌ನ ಆಸ್ಥಾನಿಗನೊಬ್ಬ ಒರ್‍ಲೆಂಡೋಗೆ ತಿಳಿಸುತ್ತಲೇ ಆತ ತನ್ನ ಸೇವಕ ಆಡಮ್‌ನೊಂದಿಗೆ ಆರ್ಡನ್ ಕಾಡನ್ನು ಸೇರಿಕೊಳ್ಳುತ್ತಾನೆ.
ಡ್ಯೂಕ್‌ನ ಆದೇಶದಂತೆ ರೊಸಾಲಿಂಡಾ ರಾಜ್ಯ ಬಿಟ್ಟು ಹೊರಡಲು ಸಿಲಿಯಾ ಕೂಡಾ ಅವಳನ್ನು ಬೆಂಬಲಿಸಿ ಹಿಂಬಾಲಿಸುತ್ತಾಳೆ. ರೊಸಾಲಿಂಡಾ ಪುರುಷವೇಷ ಧರಿಸಿ ಗೆನಿಮಿಡ ಎಂದು ಹೆಸರು ಬದಲಾಯಿಸಿಕೊಂಡರೆ, ಸಿಲಿಯಾ ಆತನ ಸಹೋದರಿ ಏಲಿಯಾನಾ ಆಗಿ ಬದಲಾಗುತ್ತಾರೆ. ಆಸ್ಥಾನದ ವಿಧೂಷಕ ಟಚ್‌ಸ್ಟನ್ ಕೂಡಾ ಅವರೊಂದಿಗೆ ಆರ್ಡನ್ ಕಾಡಿನೆಡೆಗೆ ಪಯಣ ಬೆಳೆಸುತ್ತಾರೆ.
ಇದರಿಂದ ಪ್ರೆಡರಿಕ್ ಇನ್ನಷ್ಟು ಕುಪಿತನಾಗುತ್ತಾನಲ್ಲದೇ ಇದೆಲ್ಲಕ್ಕೂ ಒರ್‍ಲೆಂಡೋನೆ ಕಾರಣವೆಂಬ ನಿರ್ಧಾರಕ್ಕೆ ಬಂದು ಆತನ ಹುಡುಕಲು ಜನರನ್ನು ನೇಮಿಸುತ್ತಾನೆ. ಡ್ಯೂಕ್‌ನ ಕೋಪಕ್ಕೆ ಹೆದರಿ ವೆನಿಸ್ ತೊರೆದು ಬಂದ ಒರ್‍ಲೆಂಡೋ ಕೂಡಾ ಆರ್ಡನ್ ಕಾಡನ್ನೇ ಹೊಕ್ಕು ಅಲ್ಲಿ ಡ್ಯೂಕ್ ಸಿನಿಯರ್‌ನನ್ನು ಭೇಟಿಯಾಗುತ್ತಾನೆ.
ರೋಸಾಲಿಂಡಾಳಂತೆ ಒರ್‍ಲೆಂಡೋ ಕೂಡಾ ಆಕೆಯನ್ನು ಪ್ರೇಮಿಸತೊಡಗುತ್ತಾನೆ. ತನ್ನ ಭಾವನೆಗಳನ್ನು ಕವಿತೆಯ ರೂಪದಲ್ಲಿ ಬರೆದು ಕಾಡಿನ ಮರಗಳ ತೊಗಟೆಗಳ ಮೇಲೆ ಬರೆಯತೊಡಗುತ್ತಾನೆ. ಗೆನಿಮಿಡ ವೇಷದಲ್ಲಿದ್ದ ರೋಸಾಲಿಂಡಾಳಿಗೆ ಅದು ಒರ್‍ಲೆಂಡೋ ತನ್ನ ಬಗ್ಗೆ ಬರೆದ ಕವಿತೆಗಳಂತೆ ಕಾಣಿಸಿದರೂ ಆಕೆ ಭೌದ್ಧಿಕವಾಗಿ ಜಾಣೆ. ಪುರುಷ ವೇಷದಲ್ಲಿರುವ ಆಕೆಯನ್ನು ಒರ್‍ಲೆಂಡೋ ಗುರುತಿಸುವಲ್ಲಿ ವಿಫಲನಾಗುತ್ತಾನೆ. ಆಕೆ ತೀಕ್ಷ್ಣ ಬುದ್ಧಿ, ಹರಿತ ಮಾತುಗಳ ಜಾಣೆ. ಆಕೆ ಒರ್‍ಲೆಂಡೋಗೆ ನೈಜ ಪ್ರೀತಿ ,ಮತ್ತು ಆಕರ್ಷಣೆಗಳ ಕುರಿತು ತಿಳಿಹೇಳುತ್ತಾಳೆ. ಕಾಡಿನ ದಾರಿಯಲ್ಲಿ ರೊಸಾಲಿಂಡಾ ಗುಂಪಿಗೆ ಸಿಲ್ವಿಯಸ್ ಎಂಬ ದನಗಾಹಿ ತನ್ನ ಪ್ರಿಯತಮೆ ಫಿಬೆಯ ಕುರಿತ ತನ್ನ ಅಸೀಮವಾದ ಪ್ರೇಮವನ್ನು ಹೇಳಿಕೊಳ್ಳುತ್ತಾನೆ. ಆದರೆ ಆಕೆ ಗ್ಯಾನಿಮೇಡ ಪುರುಷ ವೇಷದಲ್ಲಿರುವ ರೊಸಾಲಿಂಡಾಳನ್ನು ಕಂಡೊಡನೆ ತನ್ನ ನೈಜ ಗೆಳೆಯ ಸಿಲ್ವಿಯಸ್‌ನ ಬಿಟ್ಟು ಗ್ಯಾನಿಮೇಡನನ್ನು ಪ್ರೇಮಿಸತೊಡಗುತ್ತಾಳೆ. ಸಿಲ್ವಿಯಸ್‌ನೊಂದಿಗೆ ನಿರಾಸಕ್ತಿಯನ್ನು ತೋರಿಸತೊಡಗುತ್ತಾಳೆ. ಆಕೆಯನ್ನು ಬಹುವಾಗಿ ಪ್ರೀತಿಸುತ್ತಿದ್ದ ಸಿಲ್ವಿಯಸ್ ಈಗ ಭಗ್ನಹೃದಯಿ.
ಈ ಹಂತದಲ್ಲಿಯೇ ಡ್ಯೂಕ್ ಪ್ರೆಡರಿಕ್‌ನ ಆದೇಶದಂತೆ ಒರ್‍ಲೆಂಡೋನನ್ನು ಹುಡುಕಿ ಬಂದ ಸಹೋದರ ಒಲಿವರ್‌ನ ಪ್ರಾಣವನ್ನು ಒರ್‍ಲೆಂಡೋ ರಕ್ಷಿಸುತ್ತಾನೆ. ಹಸಿದ ಸಿಂಹಿಣಿಯೊಂದು ಆತನ ಮೇಲೆರಗಿದಾಗ ಅಣ್ಣ ಮಾಡಿದ ಮೋಸವನ್ನು ಮರೆತು ಮಾನವನಾಗಿ ವರ್ತಿಸುತ್ತಾನೆ ಒರ್‍ಲೆಂಡೋ. ಈ ಘಟನೆಯಿಂದ ಒಲಿವರ್ ಕೂಡಾ ಬದಲಾಗುತ್ತಾನೆ. ಈ ಸಮಯದಲ್ಲಿ ಒರ್‍ಲೆಂಡೋ ಗ್ಯಾನಿಮೇಡಗೆ [ರೋಸಾಲಿಂಡಾಳಿಗೆ] ನೀಡಿದ ಮಾತನ್ನು ತಪ್ಪುತ್ತಾನೆ. ತನ್ನ ವಿಳಂಬ ಆಗಮನಕ್ಕೆ ಕಾರಣ ಧೃಡಪಡಿಸಲು ರಕ್ತಸಿಕ್ತ ಕರವಸ್ತ್ರವನ್ನು ತೋರಿಸುತ್ತಲೂ ಗ್ಯಾನಿಮೇಡ ವೇಷದಲ್ಲಿಯ ರೋಸಾಲಿಂಡಾ ಅದನ್ನು ನೋಡಿ ಹೆದರಿ ಪ್ರಜ್ಞೆ ತಪ್ಪುತ್ತಾಳೆ.
ಇದರ ಜೊತೆಯಲ್ಲಿಯೇ ಸಿಲಿಯಾಳನ್ನು ನೋಡಿದ ಒಲಿವರ ಆಕೆಯಲ್ಲಿ ಪ್ರೇಮ ಏರ್ಪಟ್ಟು ವಿವಾಹವಾಗಬಯಸುತ್ತಾನೆ. ಗೆನಿಮಿಡ ವೇಷದ ರೋಸಾಲಿಂಡಾ ತನ್ನ ನೈಜ ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ.
ವಿವಾಹವನ್ನು ಸಿನಿಯರ್ ಡ್ಯೂಕ್ ಸಮ್ಮುಖದಲ್ಲಿ ನೆರವೇರಿಸಲು ನಿರ್ಧರಿಸಲಾಗುತ್ತದೆ. ರೋಸಾಲಿಂಡಾಳೂ ನೈಜ ವೇಷದಲ್ಲಿ ಹಾಜರಾಗುತ್ತಲೂ ಫಿಬೆಗೆ ನೈಜ ಅರಿವಾಗಿ ಸಿಲ್ವಿಯಸ್‌ನ ವರಿಸಲು ಸಿದ್ಧಳಾಗುತ್ತಾಳೆ. ವಿದೂಷಕ ಟಚ್‌ಸ್ಟನ್ ಇಷ್ಟಪಟ್ಟ ಇನ್ನೊಬ್ಬ ಕುರಿಗಾಹಿ ಹುಡುಗಿ ಆಡ್ರ್ಯೆ ಆತನ ಜೊತೆಯಾಗುತ್ತಾಳೆ. ಹೀಗೆ ಒಲಿವರ-ಸಿಲಿಯಾ, ಒರ್‍ಲೆಂಡೋ-ರೊಸಾಲಿಂಡ, ಸಿಲ್ವಿಯಸ್- ಫಿಬೆ, ಟಚ್ಸ್ಟನ್- ಆಡ್ರ್ಯೆ ಹೀಗೆ ನಾಲ್ಕು ಜೋಡಿಗಳು ಸಿನಿಯರ ಡ್ಯೂಕ್ ನ ಎದುರು ದಂಪತಿಗಳಾಗುತ್ತಾರೆ. ಆ ಹೊತ್ತಿಗೆ ಅಲ್ಲಿಗೆ ಆಗಮಿಸುವ ಒಲಿವರ ಮತ್ತು ಒರ್‍ಲೆಂಡೋರ ಸಹೋದರ ಜ್ಯಾಕ್ವೇಸ್ ಡಿ ಬಾಯ್ಸ್ ಎಂಬಾತ ಸಿನಿಯರ ಡ್ಯೂಕ್‌ನ ಕೊಲ್ಲಲು ಆಗಮಿಸುತ್ತಿದ್ದ ಡ್ಯೂಕ್ ಪ್ರೆಡರಿಕ್ ಸಾಧುಸಂತನೊಬ್ಬನ ಪ್ರೇರಣೆಗೆ ಒಳಗಾಗಿ ಆತನ ಮಾತುಗಳಿಂದ ಜ್ಞಾನೋದಯವಾಗಿ ತನ್ನಣ್ಣನಿಂದ ಕಸಿದುಕೊಂಡ ರಾಜ್ಯವನ್ನು ಪುನಃ ಅವನಿಗೆ ಒಪ್ಪಿಸಲು ಬರುತ್ತಿರುವುದಾಗಿ ಹೇಳುತ್ತಾನೆ. ಪಶ್ಚಾತ್ತಾಪಕ್ಕೆ ಒಳಗಾದ ಪ್ರೆಡರಿಕ್ ಮುಂದೆ ಪ್ರಾಯಶ್ಚಿತ್ತದ ಜೀವನ ನಡೆಸುತ್ತಾನೆ.
ಸಿನಿಯರ ಡ್ಯೂಕ್‌ನ ಸ್ನೇಹಿತನೂ ಅದರೊಂದಿಗೆ ವಿಡಂಬನಾತ್ಮಕ ವಿಮರ್ಶೆಗಳಿಂದ ಸದಾ ಜನರ ಲೋಕದ ತಪ್ಪುಗಳ ಬಯಲಿಗೆಳೆಯುವ ಪಾತ್ರವಾಗಿ ಜ್ಯಾಕ್ವೇಸ್ ಇಲ್ಲಿ ಕಂಡುಬರುತ್ತಾನೆ. All the world is a stage, men and women are mere players ಎಂಬ ಜ್ಯಾಕ್ವೇಸ ಮಾತು ನಿತ್ಯ ಸತ್ಯದ ಸಾರ. ಹಾಗಿದ್ದೂ ಬದುಕಿಗಾಗಿ ಮಾಡುವ ನೂರೆಂಟು ನಾಟಕಗಳು ಬದುಕಿನ ಜಾಡಿನ ತುಂಬಾ ಹಬ್ಬಿರುತ್ತವೆ.
ನಾಟಕ ಪ್ರೇಮವನ್ನು ವೈಭವೀಕರಿಸುತ್ತಾ ಬದುಕಿನ ಪ್ರಾಮುಖ್ಯತೆಯನ್ನು ಎತ್ತಿ ಹೇಳುತ್ತದೆ. ಸುಖಾಂತವೇ ಈ ನಾಟಕದ ಮುಖ್ಯ ತಿರುಳು. ರೊಸಾಲಿಂಡ ಕೊನೆಯ ನುಡಿ ಆಸ್ ಯು ಲೈಕ್ ಇಟ್ ಎಂಬುದರಲ್ಲೇ ಶೇಕ್ಸಪಿಯರ ನಾಟಕಕ್ಕೆ ಉಪಸಂಹಾರ ಕೊಡುತ್ತಾನೆ. ನಾಟಕದ ಸಾರ ರೋಮಾನ್ಸ್, ಹುಚ್ಚು ಪ್ರೀತಿ, ಆಕರ್ಷಕ ಹೀರೊ, ಸುಂದರಿಯಾದ ರಾಜಕುಮಾರಿ, ಕಳೆದು ಕೊಂಡ ರಾಜ್ಯ ಮರಳಿ ಪಡೆವ ಆಸ್ತಿಕ ಪ್ರಜ್ಞೆಯ ಕಥೆ ಹೀಗೆ ಬದುಕಿಗೆ ಆಶಾವಾದವಾದದ ಎಲ್ಲ ಸಂಗತಿಗಳನ್ನು ಇಟ್ಟು ಇದಕ್ಕಿಂತ ಬದುಕು ಸುಂದರವಿರಲು ಸಾಧ್ಯವೇ? ಎಂಬ ಪ್ರಶ್ನೆ ಪ್ರೇಕ್ಷಕನಲ್ಲಿ ಮೂಡಿಸುವಂತೆ ನಿರೂಪಿಸುತ್ತಾನೆ ಶೇಕ್ಸಪಿಯರ್. ಸಾಂಪ್ರದಾಯದ ಹಿನ್ನೆಲೆಯಲ್ಲಿಯೇ ದನಗಾಹಿ ಮೂಲವನ್ನು ಬಿಂಬಿಸುತ್ತಾ ಮುಖ್ಯ ಪಾತ್ರ ರೊಸಾಲಿಂಡ ಗೆನಿಮಿಡ ಆಗಿ ಬದಲಾಗುವಲ್ಲಿಯೇ ಪ್ಯಾಸ್ಟುರಲ್ ಪರಂಪರೆಯ ಸುಂದರ ಚಿತ್ರವನ್ನು ಹೆಣೆಯುತ್ತದೆ ನಾಟಕ. ವಾಸ್ತವ ಮತ್ತು ಭ್ರಮೆಗಳನ್ನು ಶೋಧಿಸುವ ಕಾರ್ಯವನ್ನೂ ಬಿಡದೆ ಮಾಡುವ ಪ್ರಯತ್ನವೂ ಇದೆ. ಆರ್ಡನ್ ಕಾಡು ವೆನಿಸ್ ಪಟ್ಟಣದ ಎಲ್ಲ ಭ್ರಮೆಗಳಿಂದ ಮುಕ್ತವಾದ ಮೋಸ ವಂಚನೆಗಳಿಂದ ದೂರವಾದ ಪ್ರದೇಶ. ಅಲ್ಲಿಯ ಜೀವನ ಸುಂದರ ಮತ್ತು ಆಹ್ಲಾದಕರ. ಆದರೆ ವೆನಿಸ್ ಡ್ಯೂಕ್‌ನ ಆಸ್ಥಾನ ಎಲ್ಲ ಕಪಟತೆ ಮೋಸ ವಂಚನೆಗಳ ತಾಣ. ಅತಿ ನಾಗರಿಕತೆಯ ವಿಧ್ವಂಸಕ ಪ್ರವೃತ್ತಿಯನ್ನು ಶೇಕ್ಸಪಿಯರ ಬಹು ಸೂಕ್ಷ್ಮವಾಗಿ ಬಿಂಬಿಸುತ್ತಾನೆ. ಇದೊಂದು ಸುಂದರ ಸುಖಾಂತ ನಾಟಕ.
–ನಾಗರೇಖಾ ಗಾಂವಕರ