ನಿಮ್ಮ ಊರು ಅದೆಷ್ಟು ಚೆಂದ; ನೀವೆಲ್ಲಾ ಪುಣ್ಯವಂತರು ಕಣ್ರೀ, ಸ್ವರ್ಗ ಅಂದರೆ ಇದೇ ನೋಡಿ. ಅಲ್ಲಿಯ ಬೆಟ್ಟ,ಗುಡ್ಡ,ನದಿ ,ಧುಮ್ಮುಕ್ಕಿ ಹರಿಯುವ ಜಲಧಾರೆ, ತುಂತುರು ಜುಮುರು ಮಳೆ..ನೆಮ್ಮದಿಯಿಂದ ಬದುಕೋದಿಕ್ಕೆ ಇನ್ನೇನು ಬೇಕು ಹೇಳಿ?. ನಾವೂ ನಿಮ್ಮೂರಿನಲ್ಲೇ ಬಂದು ಠಿಕಾಣಿ ಹೂಡ್ತೀವಿ, ಕೆಲಸಕ್ಕೆ ಜನ ಇಲ್ಲ ಅಂತೀರಿ ನಾವೇ ಬಂದು ಬಿಡ್ತೀವಿ, ನಮಗೆ ನಿಮ್ಮ ತೋಟಗಳಲ್ಲಿ ಕೆಲಸ ಕೊಟ್ರೆ ಅಷ್ಟೇ ಸಾಕು . ಈ ಬಯಲು ಸೀಮೆಯ ಒಣ ಹವೆ, ರಾಚುವ ಬಿಸಿಲು, ಇವೆಲ್ಲಾ ಅನುಭವಿಸಿ ಸಾಕಾಗಿ ಹೋಗಿದೆ ಅಂತ ಅವಲತ್ತು ಕೊಳ್ಳುತ್ತಾ ನಮ್ಮೂರನ್ನು ಹೊಗಳುವಾಗ ನಿಜಕ್ಕೂ ಒಳಗೊಳಗೆ ಹೆಮ್ಮೆಯಿಂದ ಬೀಗಿದ್ದೆ. ಅದೆಷ್ಟೋ ಇಲ್ಲಗಳ ನಡುವೆಯೂ ತಾಜಾ ಹವೆ, ಶುದ್ಧ ನೀರು, ಹದವಾದ ಬಿಸಿಲು, ಸುತ್ತಮುತ್ತಲೆಲ್ಲಾ ಕಣ್ಣು ತಂಪಾಗಿಸುವ ಹಸಿರು, ಹೌದು! ಅದೃಷ್ಟವಂತರೇ ನಾವು ಅಂತ ಮನಸ್ಸು ನುಡಿಯುತ್ತಿತ್ತು. ದೂರದ ಊರಿಂದ ಆತ್ಮೀಯರು, ಸಂಬಂಧಿಕರು ಕೊಡಗು ನೋಡಲಿಕ್ಕಾಗಿಯೇ ಬರುತ್ತಿದ್ದರು; ತಂಗುತ್ತಿದ್ದರು. ನಮ್ಮಲ್ಲಿಗೂ ಬಂದು ಆತಿಥ್ಯವನ್ನು ಸ್ವೀಕರಿಸಿ ಹೋಗುತ್ತಿದ್ದರು. ಕೊಡಗು ಎಂಬ ಸುಂದರ ಊರೊಂದು ಅದೆಷ್ಟೋ ಸಹೃದಯ ಮನಸುಗಳನ್ನು ಬೆಸೆಯುವ ತಂತುವಾಯಿತು.
ಇಂತಹ ಅದ್ಭುತ ಸುಂದರ ಕವಿತೆಯಂತ ಊರು ಪ್ರಕೃತಿಯ ವಿಕೋಪಕ್ಕೆ ಮುನಿದು ತತ್ತರಿಸಿ ಹೋಗಿದೆ. ದುರಂತ ಕಥೆಯಾಗಿದೆ. ಪ್ರಕೃತಿಯದ್ದು ತಪ್ಪಲ್ಲ. ಅದು ತಾನೇ ಮತ್ತೇನು ಮಾಡೀತು?. ಎಷ್ಟೊಂದು ಸಹಿಸಿಕೊಂಡೀತು?. ಕೊಡಗಿನಲ್ಲಿ ಸ್ವಾಭಾವಿಕವಾಗಿ ಇದ್ದಂತಹ 85 ಶೇಕಡ ಅರಣ್ಯ ನಾಶವಾಗಿ ಕೇವಲ 16 ಶೇಕಡಕ್ಕೆ ಬಂದಿಳಿದಿದೆಯೆಂದರೆ ಈ ದುರಂತಕ್ಕೆ ಹೊಣೆ ನಾವೇ ತಾನೇ?. ಕೊಡಗು ಭೂಲೋಕದ ಸ್ವರ್ಗ ಅಂತ ಪ್ರವಾಸಿಗರು ಕೊಡಗಿಗೆ ಬಂದಿದ್ದೇ ತಡ, ಅಣಬೆಯಂತೆ ಹೋಂ ಸ್ಟೇಗಳು ಎದ್ದಿದ್ದೇ ಎದ್ದದ್ದು. ಆ ಮೂಲಕ ಅದೊಂದು ಲಾಭದಾಯಕ ಉದ್ಯಮವೇ ಆಗಿಹೋಯಿತು. ಹಣದ ಮುಂದೆ ಪೂರ್ವಾಪರ ಯೋಚನೆಯನ್ನು ಯಾರು ಮಾಡುತ್ತಾರೆ?. ಆರಕ್ಕೂ ಏರದೆ ಮೂರಕ್ಕೆ ಇಳಿಯದ ಕೃಷಿಕರು, ಒಂದಷ್ಟು ಜಾಗ ಮಾತ್ರ ಇರುವವರು ಹೋಂ ಸ್ಟೇಗಳ ಮೂಲಕ ಬದುಕ ಬಹುದು ಎನ್ನುವ ಸತ್ಯ ಕಂಡುಕೊಂಡನೆಯೇ, ಅದು ಬದುಕಿಗೊಂದು ಆಧಾರವಾಗಿ ಇದೊಂದು ವರದಾನವೆಂದೇ ಪರಿಭಾವಿಸಿದರು. ಅಲ್ಲಿಗೆ ಕೊಡಗಿನ ಭವಿಷ್ಯಕ್ಕೆ ಕಪ್ಪು ಮಸಿಯೊಂದು ಅಂಟಿಕೊಂಡಿತು. ತದನಂತರ ಅಭಿವೃದ್ದಿಯ ಹೆಸರಿನಲ್ಲಿ ಕೊಡಗಿನ ನೆಲದ ಎದೆಯ ಮೇಲೆ ದೈತ್ಯ ಯಂತ್ರಗಳು ಓಡಾಡಿ, ಅರಣ್ಯಗಳನ್ನು ಮನಬಂದಂತೆ ಕಡಿದು ಪರ್ಯಾಯವಾಗಿ ಕಾಂಕ್ರೀಟ್ ಕಾಡುಗಳ ನಿರ್ಮಾಣ ಕಾರ್ಯ ಭರದಲ್ಲಿ ಸಾಗಿತು. ಒಂದು ಬುಲ್‍ಡೋಜರ್ ಎಂಬ ಯಂತ್ರ ಮಾಡುವ ಸದ್ದು ಸಣ್ಣ ಭೂಕಂಪನಕ್ಕೆ ಸಮ ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇಂತಹುದರಲ್ಲಿ ಈ ನೆಲದ ಮೇಲೆ ಅದೆಷ್ಟು ಯಂತ್ರಗಳು ಸದ್ದಿಸುತ್ತಾ ಎದೆಯನ್ನು ಕೊರೆಯುತ್ತಾ ಸಾಗಿಲ್ಲ?. ಅದೆಷ್ಟು ಕಂಪನಗಳು?. ಯಾಕೆ ಒಂದು ಕಂಪನಕ್ಕೂ ನಮ್ಮ ಯಾರೊಬ್ಬರ ಎದೆಯೂ ಕಂಪಿಸಿಲ್ಲ?. ಯಾಕೆ ಇಷ್ಟು ದಿನ ನಮ್ಮ ಜನರು ಕಣ್ಣಿದ್ದೂ ಕುರುಡರಾದದ್ದು ತಿಳಿಯುತ್ತಿಲ್ಲ. ಕಣ್ಣು ತೆರೆದುಕೊಳ್ಳಲು ಇಂತಹ ಅವಘಢಗಳೇ ಸಂಭವಿಸಬೇಕೇ?. ನಮ್ಮ ಕಾಲ ಬುಡಕ್ಕೆ ಕಲ್ಲು ಬಂದು ಬೀಳÅವಲ್ಲಿಯವರೆಗೆ ನಾವು ಯಾಕೆ ಎಚ್ಚೆತ್ತುಕೊಳ್ಳುವುದಿಲ್ಲವೋ!.
ಸರಿ ಸುಮಾರು ಮೂರು ದಶಕಗಳ ಹಿಂದೆ ಕೊಡಗೆಂದರೆ ಹಸಿರು. ಹಾದಿಯ ಇಕ್ಕೆಲಗಳಲ್ಲಿ ತೊನೆಯುವ ಭತ್ತದ ಪೈರು, ಬೆಟ್ಟ ಗುಡ್ಡಗಳಲ್ಲಿ ಕಾಫಿ, ಏಲಕ್ಕಿ ತೋಟಗಳು, ನಡುವೆ ಭೀಮ ಕಾಯದ ಮರವನ್ನಪ್ಪಿ ಹಬ್ಬಿರುವ ಕರಿಮೆಣಸು ಬಳ್ಳಿಗಳು, ಒಪ್ಪವಾಗಿ ಕತ್ತರಿಸಿಟ್ಟ ಬೇಲಿ, ಹಾದಿ ಬದಿಯ ತುಂಬೆಲ್ಲಾ ನಗುತ್ತಾ ಸ್ವಾಗತಿಸುವ ಹೆಸರೇ ಇಲ್ಲದ ಅದೆಷ್ಟೋ ಬಣ್ಣದ ಹೂಗಳು, ಇವುಗಳನ್ನು ನೋಡುವ ಸೊಬಗೇ ಬೇರೆ. ಇನ್ನು ಕೊಡಗೆಂದರೆ ಅದು ದಕ್ಷಿಣದ ಕಾಶ್ಮೀರ. ಕೊರೆಯುವ ಚಳಿಯ ಊರು. ಬಹುತೇಕ ವರ್ಷದ ಎಲ್ಲಾ ಕಾಲಮಾನಗಳಲ್ಲಿಯೂ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು, ಆಫೀಸಿಗೆ ಹೋಗುವವರು, ಹೊಲ ಗದ್ದೆಗಳಲ್ಲಿ ದುಡಿಯುವವರ ಮೈಯಲ್ಲಿ ಸ್ವೆಟ್ಟರ್, ತಲೆಯಲ್ಲಿ ಟೋಫಿ ಅಥವಾ ಸ್ಕಾರ್ಫ್ ತಪ್ಪುತ್ತಿರಲಿಲ್ಲ.
ಈಗ ಕೊಡಗಿನ ಹವಾಮಾನ ಮೊದಲಿನಂತಿಲ್ಲ ಅನ್ನುವಂತದ್ದು ಎಲ್ಲರ ಗಮನಕ್ಕೂ ಬಂದ ವಿಚಾರ. ಸೆಖೆಯ ಊರಾದ ಕರಾವಳಿ ತೀರಗಳಿಗೂ ಮಲೆನಾಡಿಗೂ ಯಾವುದೇ ತೆರನಾದ ವ್ಯತ್ಯಾಸ ಇಲ್ಲದಂತಾಗಿದೆ. ಈಗ ಮಲೆನಾಡುಗಳಲ್ಲಿಯೂ ಸಣ್ಣ ಬಿಸಿಲಿಗೇ ದಾಹ ತಡೆಯಲಾರದೆ ಫ್ಯಾನುಗಳು ಸೆಖೆಯನ್ನು ನಿಯಂತ್ರಿಸಲು ವ್ಯರ್ಥ ಪ್ರಯತ್ನ ಮಾಡುತ್ತಿರುತ್ತವೆ. ಇದು ಇವತ್ತು ಒಂದೆರಡು ಊರುಗಳ, ಪ್ರದೇಶಗಳ, ಜಿಲ್ಲೆಗಳ ಚಿತ್ರಣ ಅಲ್ಲ, ದೇಶಕ್ಕೆ ದೇಶವೇ ಇವತ್ತು ಹವಾಮಾನದ ವೈಪರೀತ್ಯವನ್ನು ಅನುಭವಿಸುತ್ತಲಿದ್ದರೂ, ಪರಿಸರವಾದಿಗಳು ಈ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಲಿದ್ದರೂ ಯಾರು ಎಚ್ಚೆತ್ತುಕೊಳ್ಳದಿರುವುದೇ ವಿಷಾದನೀಯ ಸಂಗತಿ.
ಇಡೀ ಲೋಕವೇ ಅಲ್ಲಾಡಿದರೂ ನಾವು ಮಾತ್ರ ಸ್ಥಿರ ಅಂತ ನಮ್ಮ ನೆಲವನ್ನು ಅಚಲವೆಂದೇ ಭ್ರಮಿಸಿದ್ದೆವು. ಈಗ ಆದದ್ದಾದರೂ ಏನು?. ಊರಿಗೆ ಊರೇ ಜಲಾವೃತಗೊಳ್ಳುತ್ತಿದೆ. ಬೆಟ್ಟಗಳು ಸಡಿಲಗೊಂಡು ಪುತಪುತನೆ ಉದುರುತ್ತಿವೆ. ಊರೊಂದು ಇತ್ತು ಅನ್ನುವುದಕ್ಕೆ ಯಾವುದೇ ಕುರುಹು ಇಲ್ಲದಂತೆ ಕಣ್ಮರೆಯಾಗಿದೆ. ಹಿಂದೆಂದೂ ಕಂಡರಿಯದ ಘೋರ ದುರಂತವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಇದು ಏಕಾ ಏಕಿ ಸಂಭವಿಸಿದ್ದಲ್ಲ. ಇದರ ಸುಳಿವಿನ ಕುರಿತು ಈ ಹಿಂದೆಯ ಮಾಹಿತಿ ದೊರಕಿತ್ತು. ಅದೂ ಅಲ್ಲದೇ ಈ ದುರ್ಘಟನೆಗೆ ಒಂದು ತಿಂಗಳ ಮೊದಲೇ ಪ್ರತಿನಿತ್ಯ ರಾತ್ರೆ ಹೊತ್ತಿನಲ್ಲಿ ಭೂಮಿಯಾಳದಿಂದ ಗುಡು ಗುಡು ಸದ್ದು ಹೊರಹೊಮ್ಮುತ್ತಿದ್ದ ಬಗ್ಗೆ ದುರಂತ ಅನುಭವಿಸಿದ ಅಲ್ಲಿನ ನಿವಾಸಿಗಳು ಹೇಳಿಕೊಳ್ಳುತ್ತಿದ್ದಾರೆ.
ಕೊಡಗಿಗೆ ಸೌಂದರ್ಯ ದಕ್ಕಿಸಿ ಕೊಟ್ಟದ್ದೇ ಇಲ್ಲಿಗೆ ಕಿರೀಟವಿಟ್ಟಂತಿರುವ ಬೆಟ್ಟಗುಡ್ಡಗಳು. ಈಗ ಬೆಟ್ಟ ಗುಡ್ಡಗಳೆಲ್ಲಾ ನೆಲ ಸಮವಾಗಿ ರೋಧಿಸುತ್ತಿವೆ. ಕೊಡಗಿನ ಭೌಗೋಳಿಕ ಪರಿಸರವೇ ತೀರಾ ಬದಲಾಗಿ ಬೇರೆಯದೆ ರೂಪದಲ್ಲಿ ನಿಂತಿರುವುದನ್ನು ನೋಡುವುದು ತುಂಬಾ ದು:ಖದಾಯಕದ ಸಂಗತಿ. ಪ್ರಕೃತ್ತಿಯ ಅಸಮತೋಲನದಿಂದ ಸಂಭವಿಸಿದ ಹಾನಿಯನ್ನು ಯಾತರಿಂದ ತುಂಬಲು ಸಾಧ್ಯ?. ರಸ್ತೆಯ ಇಕ್ಕೆಲದ ಭತ್ತ ಗದ್ದೆಗಳೆಲ್ಲಾ ಸೈಟುಗಳಾಗಿ ಪರಿವರ್ತನೆಯಾಗುತ್ತಿವೆ. ಭತ್ತವನ್ನು ಬದಿಗೊತ್ತಿ ವಾಣಿಜ್ಯ ಬೆಳೆ ಶುಂಠಿ ಬೆಳೆಯುತ್ತಿದ್ದಾರೆ. ಪ್ರತೀ ಮನೆಯಲ್ಲೂ ತಲೆಗೊಂದರಂತೆ ವಾಹನಗಳು ರಾರಾಜಿಸುತ್ತಿವೆ. ದೈತ್ಯ ಯಂತ್ರವೊಂದು ದೂರದಲ್ಲೆಲ್ಲೋ ಸದ್ದು ಮಾಡಿಕೊಂಡು ನೆಲ ಬಗೆಯುತ್ತಾ ದುರಂತಕ್ಕೆ ಮುನ್ನುಡಿ ಬರೆಯುತ್ತಲೇ ಇದೆ.
ಮೊನ್ನೆ ಅದೆಷ್ಟು ಊರುಗಳು ಕಣ್ಮರೆಯಾಗಿವೆ?. ಬದುಕಿ ಉಳಿದವರಿಗೆ ಮುಂದಿನ ನೆಲೆಯೇನು?.ಅಭಿವೃದ್ಧಿಯ ಹೆಸರಿನಲ್ಲಿ ಯಾರು ಯಾರೋ ಮಾಡಿದ ಅನ್ಯಾಯಕ್ಕೆ, ಅನ್ಯಾಯವಾಗಿ ಅದೆಷ್ಟು ಜನರ ಜೀವ ಬಲಿ?,ಮನೆ ಮಠ ಕಳೆದುಕೊಂಡು ಬೀದಿ ಪಾಲಾಗುವ ಸ್ಥಿತಿ ಬಂದೊದಗಿದ್ದು?.
ಕೊಡಗು ಕಲಿಗಳ ಊರು. ಖಂಡಿತಾ ನಾವು ಎದ್ದು ನಿಂತೇ ನಿಲ್ಲುತ್ತೇವೆ. ಅಂತಹ ಛಲ ನಮ್ಮ ಜನರ ರಕ್ತದಲ್ಲಿದೆ. ಕರ್ನಾಟಕದಲ್ಲಿ ಸರಿ ಸುಮಾರು 6 ಕೋಟಿ ಕನ್ನಡಿಗರಿದ್ದಾರೆ. ಎಲ್ಲರೂ ಮಾನವೀಯ ದೃಷ್ಟಿಯಿಂದ ಮುಂದಾದರೆ ಕೊಡಗು ಮತ್ತೊಮ್ಮೆ ಸುಂದರವಾಗಿ ಅರಳಬಲ್ಲದು. ಅಣು ಬಾಂಬು ಹೊಡೆತ ತಿಂದ ನಾಗಸಾಕಿ, ಹಿರೋಶಿಮಾದಂತಹ ಪುಟ್ಟ ಜಪಾನಿನ ಊರುಗಳೇ ಅದೆಷ್ಟು ಅದ್ಭುತವಾಗಿ ಎದ್ದು ನಿಂತಿವೆ ಅಂದರೆ ನಮಗೂ ಸಾಧ್ಯ. ನಾವು ಮನುಷ್ಯರು, ಮಾನವೀಯತೆಯೇ ನಮ್ಮ ಧರ್ಮ. ಹೊಸ ಕೊಡಗನ್ನು ಕಟ್ಟುತ್ತಲೇ ಹೊಸ ಎಚ್ಚರಿಕೆಯ ಪಾಠವನ್ನು ಎಲ್ಲರೂ ಕಲಿಯೋಣ. ಸುಂದರವಾದ ಸ್ವಾಭಾವಿಕ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸುವ ಗುರುತರವಾದ ಜವಾಬ್ಧಾರಿ ನಮ್ಮ ಮೇಲಿರಲಿ.
–ಸ್ಮಿತಾ ಅಮೃತರಾಜ್. ಸಂಪಾಜೆ