ಲಲಿತ ಪ್ರಬಂಧ

ಸೀರೆ ಎಕ್ಸ್‌ಚೇಂಜ್: ರಶ್ಮಿ.ಆರ್. ಕುಲಕರ್ಣಿ


ಮಹಿಳೆಯರು ಒಂದು ಕಡೆ ಸೇರಿದರೆ ಅವರಲ್ಲಿ ಚರ್ಚಿಸುವ ಮುಖ್ಯವಾದ ವಿಷಯಗಳೆಂದರೆ, ಸೀರೆ ಮತ್ತು ಚಿನ್ನದ ವಡವೆಗಳು,ಚಿನ್ನದ ಬೆಲೆ ಗಗನಕ್ಕೇರಿದ ಮೇಲೆ ಸೀರೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು  ಕೊಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ವಿಶಿಷ್ಟವಾದ ಸ್ಥಾನ ನೀಡಲಾಗಿದೆ. ಹಿಂದಿನ ಕಾಲದಲ್ಲಿ ಒಂಭತ್ತು ವಾರಿ ಸೀರೆಗಳಿದ್ದವು,  ಮುಂದೆ ಆರು ವಾರಿ ಸೀರೆಗಳು ಬಂದವು. ಈಗೀಗ ರೆಡಿ ಸೀರೆಗಳು ಮಾರುಕಟ್ಟೆಗೆ ಬಂದಿವೆ. ಸಲ್ವಾರ ಕಮೀಜ,ಸೀರೆ ಜೊತೆಗೆ ಪೈಪೋಟಿಗಿಳಿದರೂ ಕೂಡ ಸೀರೆ ತನ್ನದೇ ಆದ  ಸ್ಥಾನ ಉಳಸಿಕೊಂಡಿದೆ ಎನ್ನುವದಕ್ಕೆ ನಮ್ಮ ಮಹಿಳೆಯರೇ ಸಾಕ್ಷಿ.            

ಯಾವ ನಗರದ ಮೇಲೇ ಬಾಂಬ್ ಬೀಳಲಿ ಚುನಾವಣಾ ಪ್ರಚಾರ ಭರದಿಂದ ಸಾಗಿರಲಿ ಕೇಜ್ರಿವಾಲ ಹೊಸ ಪಕ್ಷ ಕಟ್ಟಲಿ ಅಣ್ಣಾ ಹಜಾರೆ ಉಪವಾಸ ಮಾಡಲಿ ಇವುಗಳಲ್ಲಿ ಯಾವುದರ ಪರಿವೆಯೂ ಇಲ್ಲದೆ  ಮಹಿಳೆಯರು ತಮ್ಮ ಸೀರೆಗಳ ಲೋಕದಲ್ಲಿ ತಲ್ಲೀನರಾಗಿರುತ್ತಾರೆ, ತಮ್ಮ ಹತ್ತಿರವಿರುವ ನೂರಾರು ಸೀರೆಗಳಿಗಿಂತ ಬೇರೆಯವರ ಸೀರೆಗಳೇ ಇವರಿಗೆ ಇಷ್ಟವಾಗುತ್ತವೆ. ಇಂತಹ ಮಹಿಳೆಯರಲ್ಲಿ ನಾನೂ ಒಬ್ಬಳು ಎಂದು ಬೇರೆ ಹೇಳಬೇಕಾಗಿಲ್ಲ. ಇನ್ನು ನನ್ನ ಅತ್ತೆ ಈ ವಿಚಾರದಲ್ಲಿ ಸ್ವಲ್ಪ ಭಿನ್ನ. ಅವರು ಸೀರೆ ಕೊಳ್ಳುವಾಗ ಖುಷಿಯಿಂದಲೇ ಕೊಳ್ಳುತ್ತಾರೆ, ಆದರೆ ಅದನ್ನು ಮನೆಗೆ ತಂದು, ಹತ್ತು ಹನ್ನೆರಡು ಬಾರಿ ಮುಟ್ಟಿ ನೋಡಿ, ಹೆಗಲ ಮೇಲೆ ಹಾಕಿಕೊಂಡು ಕನ್ನಡಿಯ ಮುಂದೆ ನಿಂತು ಏಳೆಂಟು ಬಾರಿ ನೋಡಿ ಮಾರನೆ ದಿನ ಎಕ್ಸ್ ಚೇಂಜ್ ಮಾಡಲು ಅಂಗಡಿಗೆ ಹೋಗುತ್ತಾರೆ. ಎಕ್ಸ್‌ಚೆಂಜ್ ಮಾಡಿ ತಂದ ಸೀರೆಯನ್ನು ಮಾತ್ರ ಅವರು ಉಟ್ಟುಕೊಳ್ಳುತ್ತಾರೆ.ಇದು ಅವರು ಪಾಲಿಸಿಕೊಂಡು ಬಂದ ಸಂಪ್ರದಾಯ .

ಒಂದು ದಿನ ನಾನು ಮತ್ತು ನನ್ನ ಅತ್ತೆ ಕೂಡಿಕೊಂಡು ಸೀರೆ ತರಲು ಮಾರ್ಕೆಟ್‍ಗೆ ಹೋದೆವು, ಕೆಲವು ಅಂಗಡಿಗಳಲ್ಲಿ ೫೦ ಪ್ರತಿಶತ ಡಿಸ್ಕೌಂಟ್,  ಒಂದು ಸೀರೆ ಕೊಂಡುಕೊಂಡರೆ ಎರಡು ಉಚಿತ, ಹೀಗೆ ಇನ್ನೂ ಅನೇಕ ಬೊರ್ಡ್‌ಗಳನ್ನು ಅಂಗಡಿಯ ಮುಂದೆ ತೂಗುಹಾಕಲಾಗಿತ್ತು. ಹೀಗೆ ಬೋರ್ಡುಗಳನ್ನೇ ನೋಡುತ್ತಾ ಹೊರಟಿದ್ದೆವು. ಬನಾರಸ ಸೀರೆ ರೂ-೨೦, ರೇಷ್ಮೆ ಸೀರೆ ರೂ-೧೫, ನೈಲಾನ ಸೀರೆ ರೂ-೧೨, ಕಾಟನ್ ಸೀರೆ ರೂ-೧೦  ಎಂದು ತೂಗುಹಾಕಲಾಗಿದ್ದ ಬೊರ್ಡ್ ನೋಡಿದ ಅತ್ತೆ ನನ್ನ ಭುಜ ಅಲುಗಾಡಿಸಿ "ಈ ಅಂಗಡಿಯೊಳಗ ಸೀರಿ ಎಷ್ಟು ಸೋವಿ ಅವ ನೋಡು ಒಳಗ ಹೋಗಿ ನೋಡಿ ಬರೋಣ". ಅಂದರು ".ಅದು ಸೀರೆ ಅಂಗಡಿ ಅಲ್ಲಾ ಇಸ್ತ್ರಿ ಅಂಗಡಿ ಅಂತ ಹೇಳಿದಾಗ ನಮ್ಮ ಸುತ್ತಮುತ್ತಲಿನ ಜನರಿಗೂ ಸಹ ನಗೆ ತಡೆಯಲಾಗಲಿಲ್ಲ. ಮುಂದೆ ಹೋಗಿ ಒಂದೆರಡು ಅಂಗಡಿಗಳಲ್ಲಿ ಸೀರೆಗಳನ್ನು ತೆಗೆಸಿ ನೋಡಿದೆವು, ಅಲ್ಲಿ ನಮಗೆ ಯಾವ ಸೀರೆಗಳೂ ಇಷ್ಟವಾಗಲಿಲ್ಲ.ಮತ್ತೊಂದು ದೊಡ್ಡ ಅಂಗಡಿಗೆ ಹೋದಾಗ ಅಲ್ಲಿ ಗೊಂಬೆಗಳಿಗೆ ಸೀರೆ ಉಡಿಸಿ ನಿಲ್ಲ್ಲಿಸಿದ್ದರು, ಅವು ನಮ್ಮನ್ನು ಆಕರ್ಷಿಸಿದವು, ಒಳಗೆ ಹೋಗಿ ಸೀರೆಗಳನ್ನು ನೋಡಲಾರಂಭಿಸಿದೆವು. ಸೀರೆಗಳನ್ನು ನಮಗೆ ತೋರಿಸಿ ತೋರಿಸಿ ಅಂಗಡಿಯವ ಸುಸ್ತಾದ. ಸುಮಾರು ಮೂರರಿಂದ ನಾಲ್ಕು ತಾಸಿನ ಮೇಲೆ ಇಬ್ಬರೂ ಒಂದೊಂದು ಸೀರೆಯನ್ನು ಕೊಂಡುಕೊಂಡು ಮನೆಗೆ ಬಂದೆವು. ಮಾರನೇ ದಿನವೇ ಒಂದು ಶುಭ ಸಮಾರಂಭದ ಆಮಂತ್ರಣ ಬಂದಿತ್ತು ಅದಕ್ಕೆ ರಾತ್ರಿ ಹನ್ನೆರಡು ಗಂಟೆಯ ತನಕ ಕುಳಿತು ಹೊಸ ಸೀರೆಗಳಿಗೆ ಪಿಕೊ ಮತ್ತು ಫಾಲ್ಸ್ ಮಾಡಿ ಅದೇ ಬಣ್ಣದ ಹಳೆಯ ರವಿಕೆ ಬೀರುವಿನಿಂದ ತೆಗೆದು ಸೀರೆಯ ಜೊತೆ ಜೋಡಿಸಿಟ್ಟೆವು.    

ಮಾರನೆಯ ದಿನ ಹೊಸ ಸೀರೆ ಉಟ್ಟು ತಯಾರಾಗಿ ಅತ್ಯಂತ ಉತ್ಸಾಹದಿಂದ ಸಮಾರಂಭಕ್ಕೆ ಹೋದೆವು. ಅಲ್ಲಿ ನಮ್ಮ ಬಂಧುಮಿತ್ರರೆಲ್ಲ ಸೇರಿದ್ದರು. ಅತ್ತೆ ಮೊದಲ ಬಾರಿ  ಎಕ್ಸ್ ಚೇಂಜ್ ಮಾಡದೆ ಸೀರೆಯನ್ನು ಉಟ್ಟಿದ್ದರು. ಇವರ ಸೀರೆ ಎಕ್ಸ್‌ಚೆಂಜ್ ಪದ್ಧತಿಯನ್ನು ಭಂಗ ಮಾಡಿದೆನೆಂಬ  ಅಪರಾಧಿ ಭಾವನೆ ನನ್ನನ್ನು  ಕಾಡುತ್ತಿತ್ತು. ನಾವು ಹೋಗಿ ಅಲ್ಲಿ ಹಾಕಿರುವ ಕುರ್ಚಿಗಳ ಮೇಲೆ ಇನ್ನೇನು ಕೂಡಬೇಕೆನ್ನುವಷ್ಟರಲ್ಲಿ ಅತ್ತೆಯ ಪರಿಚಯದವರೊಬ್ಬರು ಬಂದು ಉಭಯಕುಶಲೋಪರಿ ವಿಚಾರಿಸಿದ ನಂತರ "ಏ ಪದ್ಮಜಾ ಇದೆಂಥಾ ಸೀರಿ ಉಟ್ಕೊಂಡು ಬಂದೀಯ ?" ಅಂತ ಅಂದು ಬಿಟ್ಟರು. ಅತ್ತೆಯ ಸೀರೆ ಚೆನ್ನಾಗಿಲ್ಲ ಎಂಬ ಧ್ವನಿಯಲ್ಲಿ ಅವರು ಹೇಳಿದ್ದು ನನ್ನ ಅತ್ತೆಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಅತ್ತೆಗೆ ಅವರು ಹೇಳಿದ ಮಾತುಗಳಿಂದ ಮನಸ್ಸಿಗೆ ಬಹಳ ಬೇಸರವಾಗಿ, ಯಾವಾಗಲೂ ಗಾಳಿ ತುಂಬಿದ ಬಲೂನಿನಂತೆ ಇರುತ್ತಿದ್ದ ಅವರ ಮುಖ ಪಿನ್ನು ಚುಚ್ಚಿದ ಬಲೂನಿನಂತಾಗಿತ್ತು.  ಏನು ಉತ್ತರಕೊಡದೆ ಕುರ್ಚಿಯ ಮೇಲೆ ಕುಸಿದು ಬಿಟ್ಟರು ಅಲ್ಲಿ ಊಟವನ್ನು ಮಾಡದೆ ತಲೆನೋವಿನ ನೆಪ ಹೇಳಿ ನನ್ನನ್ನೂ ಕರೆದುಕೊಂಡು ಮನೆಗೆ ಬಂದರು. ಬಂದ ತಕ್ಷಣ ಉಟ್ಟಿದ್ದ ಸೀರೆಯನ್ನು ಬಿಚ್ಚಿ ಅದಕ್ಕೆ ಹಾಕಲಾಗಿದ್ದ ಫಾಲ್ಸ ಹೊಲಿಗೆಯನ್ನು ತೆಗೆಯಲಾರಂಭಿಸಿದರು ಮತ್ತು ಪಿಕೊ ಮಾಡಿದ ಸೀರೆ ತುದಿಯನ್ನು ಕತ್ತರಿಸಿ, ಸೀರೆಯನ್ನು ಇಸ್ತ್ರಿ ಮಾಡಿ ಓರಣವಾಗಿ ಮಡಿಕೆಮಾಡಿ ಪ್ಲಾಸ್ಟಿಕ್ ಚೀಲzಲ್ಲ್ಲಿ ಹಾಕಿ, ನನಗೆ’",ಅಂಗಡಿಗೆ ಹೋಗೋಣ ನಡಿ ಈ ಸೀರಿ ಎಕ್ಸ್‌ಚೆಂಜ್ ಮಾಡಿಕೊಂಡು ಬರೋಣ"  ಅಂತ ಹೇಳಿದರು. ನಾನು ಗಡಿಯಾರದ ಕಡೆ ನೋಡಿದೆ ರಾತ್ರಿ ಒಂಭತ್ತು ಘಂಟೆಯಾಗಿತ್ತು .ನಾವು ಮಾತನಾಡುವುದನ್ನು ಕೇಳಿಸಿಕೊಂಡ ನನ್ನ ಮನೆಯವರು "ನಿಮ್ಮ ತಲೀಗಿಲೀ ಕೆಟ್ಟದೆನು?’ಇಷ್ಟೊತ್ತಿನಮ್ಯಾಲ ಮಾರ್ಕೆಟಿಗೆ ಹೊಂಟಿರಿ ಅದೂ ನೀವಿಬ್ಬರ ಹೆಂಗಸರು ಏನರ ಹೆಚ್ಚು ಕಡಿಮಿ ಆದರ……?ಅಂತ ಬಿಸಿ ಎಣ್ಣೆಯಲ್ಲಿ ಒಂದು ಹನಿ ನೀರು ಬಿದ್ದಂತೆ ರೇಗಿದರು. ಅವರ ಮಾತಿನ ಧಾಟಿಯಲ್ಲಿ ಒಂದು ಕಡೆ ನಮ್ಮ ಬಗ್ಗೆ ಕಾಳಜಿ ತೋರಿದರೆ ಇನ್ನೊಂದು ಕಡೆ ಸಮಾಜದಲ್ಲಿ ಮಹಿಳೆಯರಿಗಿರುವ ಅಭದ್ರತೆಯ ಬಗ್ಗೆ ತಿಳಿಸುವಂತಿತ್ತು. ಅವರನ್ನು ವಿರೋಧಿಸುವ ಧೈರ್ಯವಿರಲಿಲ್ಲ. ಆದ್ದರಿಂದ ನಾಳೆ ಹೋದರಾಯಿತೆಂದು ಊಟ ಮಾಡಿ ಮಲಗಿದೆವು .ಅತ್ತೆಗೆ ರಾತ್ರಿಯೆಲ್ಲ ಸೀರೆಯದೆ ಚಿಂತೆ.

ಬೆಳಿಗ್ಗೆ ಬೇಗ ಬೇಗ ಮನೆ ಕೆಲಸ ಮುಗಿಸಿಕೊಂಡು ಮಗಳನ್ನು ಸ್ಕೂಲಿಗೆ ಕಳಿಸಿ ನಾವು ಸೀರೆ ಎಕ್ಸ್‌ಚೆಂಜ್ ಮಾಡಲು ಮಾರ್ಕೆಟ್ ಕಡೆ ನಡೆದೆವು. ಇನ್ನೊಂದಿಷ್ಟು ಹೊಸ ಸೀರೆಗಳನ್ನು ನೋಡಬಹುದಲ್ಲಾ ಎಂಬ ಆತುರ ನನಗಾದರೆ,ಅಂಗಡಿಯವನು ಸೀರೆಯನ್ನು ಬದಲಾಯಿಸಿ ಕೊಡುತಾನೋ ಇಲ್ಲವೋ ಎಂಬ ಆತಂಕ ಅತ್ತೆಗೆ.  ದಾರಿಯಲ್ಲಿ ಬಗೆಬಗೆಯ ಸೀರೆಗಳನ್ನು ಉಟ್ಟ ಹೆಂಗಸರನ್ನು ನೋಡುತ್ತಾ, ಎಂಥ ಸೀರೆ ಕೊಳ್ಳಲೀ? ಎಂದು ಮನದಲ್ಲೇ  ಆಲೋಚಿಸುತ್ತ ಅಂಗಡಿಗೆ ಹೊರಟಿದ್ದರು ಅತ್ತೆ. ಅಲ್ಲಿ ನಮಗೆ ಸೀರೆಕೊಟ್ಟ ಹುಡಗನೇ ನಿಂತದ್ದ ನಮ್ಮ ಕೈಯಲ್ಲಿದ್ದ ಸೀರೆ ಚೀಲವನ್ನು ನೋಡಿ,  ನಾವು ಕೇಳುವ ಮೊದಲೇ ಅವನು "ಮೇಡಂ ಸೀರಿ ಎಕ್ಸಚೆಂಜ ಮಾಡಲಿಕ್ಕೆ ಬಂದಿರೀ ಬರ್ರಿ ನೀವು ನಿನ್ನೆನೇ ಬರತೀರಿ ಅಂತ ಮಾಡಿದ್ದೆ .ಇರ್ಲಿ ಕೂಡ್ರಿ.ಎಂದು ಹೇಳಿ, ಮತ್ತೊಂದಿಷ್ಟು ಸೀರೆಗಳನ್ನು ನಮ್ಮ ಮುಂದೆ ಹರಡಿದ ಕನ್ನಡದ ಕೋಟ್ಯಾಧಿಪತಿಯಲ್ಲಿ ಒಂದು ಕೋಟಿ ರೂಪಾಯಿ ಸಿಕ್ಕಷ್ಟು ಸಂತೋಷ ಅತ್ತೆಯ ಮುಖದಲ್ಲಿ ಕಾಣುತ್ತಿತ್ತು.

ನಮಗೆ ಮತ್ತು ನಮ್ಮ ಬಂಧುಗಳಿಗೆಲ್ಲ ಅತ್ತೆಯ ಸೀರೆ ಎಕ್ಸಚೆಂಜ ಬಗ್ಗೆ ತಿಳಿದಿದ್ದರಿಂದ ಅವರಿಗೆ ಉಡುಗೊರೆಯಾಗಿ ಸೀರೆಯನ್ನು ಕೊಡುವುದರ ಜೊತೆಗೆ ಆ ಸೀರೆಯ ರಸೀದಿಯನ್ನು ಮರೆಯದೇ ಕೊಡುತ್ತೇವೆ.[ಎಕ್ಸ್ ಚೇಂಜ್ಗೆ ಅನುಕೂಲವಾಗಲೆಂದು] ಉಡಿತುಂಬುವಾಗ ಸೀರೆಜೊತೆಗೆ ಖಣ ಎಂಬ ಪದ್ಧತಿಯನ್ನು ನಾವು ಈಗ ಸೀರೆ ಜೊತೆಗೆ ರಸೀದಿ ಎಂದು ಬದಲಾಯಿಸಿದ್ದೇವೆ. 

ಕೆಲವು ದಿನಗಳ ನಂತರ ಸೀರೆ ಎಕ್ಸ್‌ಚೆಂಜ್  ಮಾಡಲು ಹೆಸರುವಾಸಿಯಾದ ಅತ್ತೆಯ ಜೊತೆಯಲ್ಲಿ ಮತ್ತೊಮ್ಮೆ ಸೀರೆ ತರಲು ಅಂಗಡಿಗೆ ಹೋದೆ ಇಬ್ಬರೂ ಒಂದೊಂದು ಸೀರೆಯನ್ನು ಖರೀದಿ ಮಾಡಿದೆವು ನನ್ನಲ್ಲಿರುವ ದುಡ್ಡು ನಾನು ಕೊಂಡುಕೊಂಡ ಸೀರೆ ಬೆಲೆಗಿಂತ ಸ್ವಲ್ಪ ಕಡಿಮೆ ಇತ್ತು ಇದನ್ನು ಚರ್ಚಿಸುತ್ತಿರುವಾಗ ಅಂಗಡಿಯವ ಕೇಳಿಸಿಕೊಂಡು "ಇರ್ಲಿ ಬಿಡ್ರಿ ನಿಮ್ಮ ಹತ್ರ ಎಷ್ಟ್ ರೊಕ್ಕ ಅವನೊ ಅಷ್ಟು ಕೊಡ್ರಿ,[ಅತ್ತೆಯ ಕಡೆ ಕೈ ಮಾಡಿ ತೋರಿಸಿ ] ಇವ್ರು ನಾಳೆ ಬರ್ತ್ರಾರಲ್ಲಾ [ಸೀರೆ ಎಕ್ಸ್‌ಚೆಂಜ್‌ಗೆ ] ಇವ್ರ ಹತ್ರ  ಉಳದ ರೊಕ್ಕಾ ಕೊಟ್ಟು ಕಳಸ್ರಿ" ಎಂದು ಹೇಳಿ ನಮ್ಮ ನಮ್ಮ ಸೀರೆ ಚೀಲಗಳನ್ನು ನಮಗೆ ಕೊಟ್ಟ. ಅತ್ತೆಯ ಸೀರೆ ಎಕ್ಸ್‌ಚೆಂಜ್ ಪದ್ಧತಿಯಿಂದ ಯಾರಿಗಾದರೂ ಲಾಭ ಆಗಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ. ನನಗಂತೂ ಪ್ರಯೋಜನವಾಗಿತ್ತು, ಹಾಗೂ ನನ್ನನ್ನು ಕಾಡುತ್ತಿದ್ದ ಅಪರಾಧಿ ಭಾವನೆ ಹೋಗಿತ್ತು.       

******

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಸೀರೆ ಎಕ್ಸ್‌ಚೇಂಜ್: ರಶ್ಮಿ.ಆರ್. ಕುಲಕರ್ಣಿ

  1. ಸೀರೆ ಎಕ್ಸಚೆಂಜ್ ನಗೆಬರಹ ತುಂಬ ಚನ್ನಾಗಿ ಮೂಡಿ ಬಂದಿದೆ. ಮಹಿಳೆಯರ  ನಡುವೆ ಹಲವಾರು ನಗೆಪ್ರಸಂಗಗಳ ಕುರಿತು  ಬರೆಯಲಿ. ಸರಳವಾಗಿ ಹಾಸ್ಯ ಚಿಮ್ಮಿಸುವ ರಶ್ಮಿ ಕುಲಕರ್ಣಿಯವರುಚನ್ನಾಗಿ ಬರೆಯಬಲ್ಲರು. ಇನ್ನಷ್ಟು ಹಾಸ್ಯಲೇಖನಗಳು ಪಂಜುವಿನಲ್ಲಿ ಬೆಳಕು ಕಾಣಲಿ.

  2. ನನ್ನ ಲೇಖನ ಓದಿ    ಇನ್ನಷ್ಟು ಬರೆಯಲು ಉತ್ಸಾಹ ತುಂಬಿದ ತಮ್ಮೆಲ್ಲರಿಗೂ ದನ್ಯವಾದಗಳು.

Leave a Reply

Your email address will not be published. Required fields are marked *