ಅರೆ! ನಾನು ಸೀರೆಯನ್ನು ಉಟ್ಟುಕೊಳ್ಳುವಷ್ಟು ದೊಡ್ಡವಳಾಗಿಬಿಟ್ಟೆನಾ? ಹೀಗಂತ ಮೊನ್ನೆ ಕಾಲೇಜಿನಲ್ಲಿ ನಡೆದ ನ್ಯಾಶನಲ್ ಸೆಮಿನರ್ ಗೆ ಎಲ್ಲರೂ ಕಂಪಲ್ಸರಿ ಸೀರೆಯನ್ನು ಉಡಲೇಬೇಕೆಂಬ ವಿಚಾರಕ್ಕೆ ಅನಿಸಿತ್ತು.. ಛೇ ನಾ ಸೀರೆ ಉಡಲ್ಲ ನಂಗೆ ಚನ್ನಾಗಿ ಕಾಣೋಲ್ಲ ಅಂತ ಎಷ್ಟೋ ಬಾರಿ sಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದೇನಾದ್ದರೂ ಫಲ ಕಂಡಿರಲಿಲ್ಲ. ಆದರೂ ಮನಸ್ಸಿನಲ್ಲಿ ಒಂದು ರೀತಿಯ ಸಂಭ್ರಮ ನನಗಂತ ಸೀರೆಯನ್ನು ತೆಗೆದುಕೊಳ್ಳುತ್ತಿದ್ದೇನಲ್ಲ ಎಂದು. ಅಂತೂ ಸೀರೆಯನ್ನು ಕೊಂಡೂ ಆಯಿತು.. ಇನ್ನೇನು ಸೆಮಿನರ್ ದಿನ ಬಂದೇ ಬಿಟ್ಟಿತ್ತು.. ಇಷ್ಟು ದೊಡ್ಡವಳಾದರೂ ಇನ್ನೂ ಸೀರೆ ಉಡೋಕೆ ಬರಲ್ಲ.. ನನ್ನ ಬುದ್ದಿಗೆ ಏನ್ ಹೇಳಬೇಕೋ ಗೊತ್ತಾಗದೇ ಗೆಳತಿಯ ಬಳಿ ಸೀರೆ ಉಡಿಸಿ ಕೊಡ್ತೀಯಾ ಎಂದು ಕೇಳಿದ್ದಕ್ಕೆ ತಕ್ಷಣ ಹೂಂಗುಟ್ಟಿದ್ದಳು.
ಬೆಳಿಗ್ಗೆ ೫ ಘಂಟೆಗೇ ಎದ್ದು ಸೀರೆಯನ್ನು ಉಡಬೇಕೆಂಬ ಖುಷಿಯೋ, ಕಾಡಿಸುವ ಗೆಳತಿಯ ಬಗೆಗಿನ ಒಂಚೂರು ನಾಚಿಕೆಯೋ ಕಾಣೆ. ಹಾಗಂತ ಮೊದಲ ಬಾರಿಯೇನೂ ಅಲ್ಲ ಸೀರೆ ಉಡುವುದು ಆದರೂ ಒಂದು ರೀತಿಯ ತಲೆ ನೋವಾಗಿ ಬಿಟ್ಟಿತ್ತು. ಸೀರೆ ಉಟ್ಟು ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕಾಲೇಜಿನ ತನಕ ಕಷ್ಟಪಟ್ಟು ನಡೆದುಕೊಂಡು ಬರುವಾಗ ಒಂದು ಬಾರಿ ದಬಕ್ಕೆಂದು ಬೀಳುವವಳಾಗಿದ್ದೆ.. ಪುಣ್ಯ ಆಚೆ ಈಚೆ ಯಾರೂ ನೋಡಿಲ್ಲವೆಂದು ಸಮಾಧಾನ ಪಟ್ಟುಕೊಳ್ಳುತ್ತಾ ಕಾಲೇಜು ತಲುವುವವರೆಗೆ ಉಸ್ಸಪ್ಪ, ಸಾಕಪ್ಪ, ಬೇಡಪ್ಪ ಈ ಸೀರೆ ಎಂದೆನಿಸಿದ್ದಂತೂ ಸುಳ್ಳಲ್ಲ.. ಯಾಕೆ ಹಾಗನ್ನಿಸ್ತು ಗೊತ್ತಾ? ಸೀರೆ ಉಟ್ಕೊಂಡು ನಡೆಯೋದು ಒಂದೇ ಮಂಕಿ ಬೋನನ್ನು ಹೊತ್ಕೊಂಡು ಓಡಾಡೋದು ಒಂದೆ ಅಂತ.. ಯಾರೋ ಜೂನಿಯರ್‍ಸ್ ಒಂದಿಬ್ಬರು ಬಂದು ಅರೆ! ಪದ್ಮಕ್ಕ ನೀ ಚಂದ ಕಾಣ್ತಾ ಇದ್ದೀಯಾ ಅಂದ್ರೆ, ಕ್ಲಾಸ್ ಮೇಟ್ ಒಬ್ಳು ಭಾರಿ ಬಿಡು ನೀನು ಅಂದ್ಲು.. ಇನ್ನೊಬ್ಬವನು ಯಾರೋ ಬಂದು.. ಛೀ ನಿಂಗೆ ಸೀರೆ ಒಂಚೂರು ಚನ್ನಾಗಿ ಕಾಣೋಲ್ಲ ಅಂತ ಉರಿಯುತ್ತಿರುವ ಸೆಕೆಗೆ ಮತ್ತಷ್ಟು ಉರಿಸಿದ..
ಹೂಂ..ಆಗಲೇ ಅನಿಸಿದ್ದು.. ನಾನು ಸೀರೆ ಉಟ್ಕೊಳ್ಳುವಷ್ಟು ದೊಡ್ಡವಳಾಗಿದ್ದೇನಾ.. ಇನ್ನೂ ಬರೀ ಇಪ್ಪತ್ತೊಂದು ವರುಷ.. ಊಹೂಂ ನಾನಿನ್ನೂ ಚಿಕ್ಕವಳೇ ಎಂದು ಅಂದುಕೊಳ್ಳುತ್ತಿದ್ದರೂ, ಸೀರೆ ಉಟ್ಟ ಮುಖದ ಭಾವನೆಗಳೇ ಹೇಳುತ್ತಿದ್ದವು.. ನೀನೇನೂ ಚಿಕ್ಕವಳಲ್ಲ ಅಂತ ಚಿಕ್ಕಂದಿನಲ್ಲಿ ಅಮ್ಮನ ಹೊಸ ಸೀರೆಯನ್ನು ಸುತ್ತಿಕೊಳ್ಳುವ ಚಟವಿತ್ತು.. ಇಂದು ಏನಾಯಿತು.. ಉಡಬೇಕು ಅಂದರೂ ಬೇಡವೆಂದು ಹೇಳುತ್ತಿದ್ದ ಮನಸು.. ವರುಷ ಇಪ್ಪತ್ತೊಂದರಲ್ಲಿದ್ದರೂ ಮತ್ತೊಮ್ಮೆ ಮಗದೊಮ್ಮೆ ಕ್ಯಾಲ್ಕುಲೇಟ್ ಮಾಡಿ ಇಪ್ಪತ್ತೇನಾದರೂ ಆಗಿರಬಹುದೆಂಬ ಆಸೆ..ಈ ಹಾಳಾದ್ ಮನಸು ಏನೇನೋ ಯೋಚನೆ ಮಾಡುತ್ತೆ..ಸುಮ್ನೆ ಕೂತ್ಕೋ ಅಂದ್ರೆ ಮಾತು ಕೇಳದೆಯೇ..
ಅದರಲ್ಲೂ ದಕ್ಷಿಣ ಕನ್ನಡದ ಸೆಕೆಗೆ ಸೀರೆಯು ಒಂಥರಾ ಹವೆಯ ಮಶಿನ್‌ನ್ನು ದೇಹದಲ್ಲಿ ಫಿಕ್ಸ್ ಮಾಡಿಕೊಂಡಿದೇನೋ ಹೇಳೋ ತರ ಇತ್ತು.. ದೇವ್ರೇ ಈ ಅಮ್ಮಂದಿರು ಹೇಗಪ್ಪಾ ಮೇಂಟೇನ್ ಮಾಡ್ತಾರೆ ಯಾವಾಗ್ಲೂ ಸೀರೆ ಉಟ್ಕೊಂಡಿರ್‍ತಾರಲ್ವ.. ಎಂದು ಅನಿಸಿತ್ತು ಅಂತ ಬೇರೆ ಹೇಳಬೇಕೇ?.. ಇದಕ್ಕೆ ವಿರುದ್ದ ಎಂಬಂತ ನಿಂಗೆ ಸೀರೆ ಉಟ್ಕೋ ಅಂತ ಒತ್ತಾಯ ಮಾಡೋ ಹುಡುಗನೇ ಸಿಗಲಿ ಎಂಬ ರೂಂಮೇಟ್‌ನ ಆಶೀರ್ವಾದ ಬೇರೆನ॒ಡಿಗೆಯಲ್ಲೂ ಎಂದಿಗಿಂತಲೂ ಭಿನ್ನ.. ಬಿದ್ದಬಿಟ್ಟರೆ,? ಸೀರೆಯನ್ನು ಸರಿಯಾಗಿ ಉಡಿಸಿದ್ದಾಳೋ ಇಲ್ವೋ.. ಸೀರೆಯ ಪಿನ್ನು ಏನಾದರೂ ಬಿಚ್ಕೊಂಡ್ರೆ ಎಂಬ ಹೆದರಿಕೆ ಬೇರೆ..
ಅಂತೂ ಇಂತೂ ಹಾಗೂ ಹೀಗೂ ಸೀರೆ ಉಟ್ಕೊಂಡಿದ್ದ ಒಂದು ದಿನವು ಮುಗಿದು ಹೋಯ್ತು.. ಒಂಥರಾ ಮಜವಿತ್ತು, ಭಯವಿತ್ತು, ಕಷ್ಟವೂ ಇತ್ತು.. ನನ್ನದೇ ಮುಖದಲ್ಲಿ ನಗುವಿತ್ತು.. ಯಾರೋ ಕೊಟ್ಟ ಕಾಂಪ್ಲಿಮೆಂಟಿನ ಖುಷಿಯಿತ್ತು..ಯಾವಾಗಲೂ ಸೀರೆ ಉಡೋದೇ ಬೇಡ ಅಂತ ಅಂದ್ಕೊಳ್ತಾ ಇದ್ದವಳಿಗೆ ಸೀರೆಯ ಮೇಲೆ ಪ್ರೀತಿಯೂ ಉಂಟಾಗಿತ್ತು.. ಮುಂದಿನ ಸಲ ಯಾವಾಗಾದ್ರೂ ಸೀರೆ ಉಟ್ಕೋಬೇಕು ಅಂದ್ರೆ, ಉಡೋಲ್ಲ ಅಂತ ಹಠ ಮಾಡಬಾರದೆಂದು ನಿರ್ಧರಿಸಿಯೂ ಆಯಿತು..ಕೈಗೆ ಬುದ್ದಿ ಹೇಳಿ ಸೀರೆ ಉಟ್ಟುಕೊಳ್ಳಲು ಕಲಿಸಲೇಬೇಕೆಂಬ ಮನಸ್ಥಿತಿಯೂ ಉಂಟಾಗಿತ್ತು.॒.
*****
ಚನ್ನಾಗಿದೆ ನಿಮ್ಮ ಸೀರೆ ಅನುಭವ..ಸೀರೆ ಉಡೋದು ಅಪರೂಪ ಆದಾಗ ಹೀಗೆ ಆಗುತ್ತೆ..ನಾನು ಸೀರೆ ಉಟ್ಟು ಓಡಾಡುವಾಗ ಎಷ್ಟೋ ಸಲ ನನ್ನ ಮಾವನವರು ನೀನು ಆದಷ್ಟು ಬೇಗ ಸೀರೆ ಚೇಂಜ್ ಮಾಡಿ ಡ್ರೆಸ್ ಹಾಕೊಮ್ಮ ಅಂತ ಇದ್ರೂ ಪಾಪ ಅವರಿಗೆ ನನ್ನ ಕಷ್ಟ ನೋಡೋಕೆಆಗ್ತಿರಲಿಲ್ಲ ಅನ್ಸುತ್ತೆ..:)
Tumba chennag iddu padma.. Keep writing…
ಹೆ ಹೆ ಸೂಪರ್ರು 🙂 ಮೊದ್ಲ ಸಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಂಚೆ ಉಡಬೇಕಾದ್ರೆ ಹುಡುಗ್ರಿಗೂ ಪಂಚೆ ಎಲ್ಲಿ ಬಿಚ್ಚೋಗ್ತೋ ಹೇಳಿ ಭಯ !! 😉