ನನ್ನ ಕೂದಲಿನಲ್ಲಿ ಸದಾ ಹುದುಗಿ ಮರೆಯಾಗುವ ಆ ಮೂರು ಬೆರಳಿನ ಹಣೆಯಲ್ಲಿ ಯಾರೋ ಟಿಪ್ಪಣಿ ಬರೆದಿದ್ದಾರಂತೆ. ಜೀವನದಲ್ಲಿ ಎಲ್ಲಾ ಘಟಿಸುವುದು ಅಲ್ಲಿಯ ಪೂರ್ವ ನಿರ್ಧಾರಿತವಂತೆ. ಯಾವುದೂ ಇಲ್ಲಿ ನಮ್ಮ ಕೈಯಲ್ಲಿಲ್ಲ, ಶಾಶ್ವತವಲ್ಲವೆಂಬುದು ಸದಾ ಕೇಳುವ ಮಾತು. ಎಲ್ಲವೂ ಅದಾಗಲೇ ನಿಶ್ಚಿತವಾಗಿದೆಯಂತೆ. ನಾವು ನೆಪ ಮಾತ್ರವಂತೆ. ಜೀವದ ಉಸಿರಾಗಿರುವ ಗೆಳತಿಯ ಸಮ್ಮತಿಗಿಂತ…ಈ ಹಣೆಯಲ್ಲಿ ಅವಳ ಹೆಸರು ಬರೆದಿರಬೇಕಂತೆ. ವಾಸ್ತವದಲ್ಲಿ, ಇಂತಹ ಎಷ್ಟೋ ಇಲ್ಲ್ಯೂಷನ್ ಗಳಿಗೆ ನನ್ನದು ಯಾವಾಗಲೂ ತಕರಾರು. ನಮ್ಮ ಅಸಮರ್ಥತೆಯನ್ನು ಒಪ್ಪದೇ..ಹುಡುಕಿಕೊಂಡ ಕತೆಗಳಿವು ಅನಿಸುತ್ತದೆ. ಸದಾ ಸೋತು ಸಪ್ಪೆ ಮೊರೆ ಹಾಕಿಕೊಂಡು ಯಾರೋ ಬಂದು ನಮ್ಮ ಜೀವನ ಉದ್ದಾರ ಮಾಡುತ್ತಾರೆ. ಯಾರದೋ ಕೈಯಲ್ಲಿದೆ ಅನ್ನುವ ಸೋಮಾರಿಯ ವಾಸನೆ ತೋರಿಸುವ ಜನಗಳ ಮಧ್ಯೆ ಅಲ್ಲೆಲ್ಲೋ ಒಂದಷ್ಟು ಜೀವಗಳು, ತಮ್ಮ ಎಲ್ಲ ಶ್ರದ್ಧೆ, ಇಚ್ಛೆಯನ್ನು ಪಣಕಿಟ್ಟು ಸಂಗತಿಗಳನ್ನು ಅವರ ಕನಸುಗಳ ಹಾದಿಯಲ್ಲಿ ನನಸು ಮಾಡಿಕೊಳ್ಳುತ್ತಾರೆ. ಇಲ್ಲಿ, ಆ ಆಟಿಟ್ಯೂಡ್ ಬೇಕಷ್ಟೆ. ಎಷ್ಟೋ ಸೋಲುಗಳೇ ಗೆಲುವಿಗೆ ದಾರಿ ಎಂಬುದು ತಿಳಿದುಕೊಳ್ಳಲು ಒಂದು ಸಲ ಎಲ್ಲೋ ಎಡವುತ್ತೇವೆ. ಆದರೇ ಅದನ್ನು ಓಪ್ಪುವುದಿಲ್ಲ. ಯಾವುದೋ ಒಂದು ವಿಷಯ ಫಲಿಸದ ಕ್ಷಣದಲ್ಲಿ ಈ ಜೀವವೇ ಬೇಡ. ಜೀವನಕ್ಕೆ ಸೋಲೆನ್ನುವ ಪಟ್ಟ ಕಟ್ಟಿ, ಹಣೆಬರಹದಲ್ಲಿ ಬರೆದಿಲ್ಲ ಎನ್ನುವ ಶಾಯರಿ ಬರೆಯುತ್ತೇವೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬದುಕುವುದು ಮತ್ತು ಬದುಕನ್ನು ಛಲದಿಂದ ರೂಪಿಸಿಕೊಳ್ಳುವುದು, ಸತ್ಯವನ್ನು ಅರ್ಥ ಮಾಡಿಸುವುದು, ಪ್ರೀತಿಯಿಂದಲೇ ಸಾದಿಸಿ ತೋರಿಸುವುದು ಇಲ್ಲಿ ಬಹುಮುಖ್ಯವಾಗುತ್ತದೆ.
ಕೋವಿಡ್ ಅಂತ ಹೆದರುವ ಈ ದಿನಗಳಲ್ಲೇ ನಿನ್ನೆಯ ತನಕ ಖಾತ್ರಿ ಇದ್ದ ನೌಕರಿ ಇಂದು ಬೆಳ್ಳಿಗ್ಗೆ ಏಳುವ ವೇಳೆಗೆ ಇಲ್ಲದಾದಾಗ ಅದನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ನಿನ್ನೆಯ ತನಕವಿದ್ದ ಜೀವದ ಗೆಳತಿ ಇಂದು ದಿಡೀರನೆ ಎದೆಗೆ ಘಾಸಿ ಮಾಡಬಹುದು. ನನ್ನೊಳಗೊಬ್ಬ ಗೆಳೆಯ ಆ ಜೀವದ ಗೆಳತಿಯ ತಿರಸ್ಕಾರದಲ್ಲಿ, ಅವಳ ಸನಿಹದ ಹಂಬಲದ ಗುಂಗಿನಲ್ಲಿ ಅವನ ಏನೇನೋ ಆರ್ತನಾದ ಕೇಳಿಸುತಿದ್ದಾನೆ. ಈ ದೂರಕ್ಕೆ, ತಿರಸ್ಕಾರಕ್ಕೆ ಕಾರಣಗಳ ಕುತೂಹಲ ಹುಡುಕುತಿದ್ದಾನೆ. ನಮ್ಮ ಜೀವಕ್ಕಿಂತಲೂ ಹೆಚ್ಚು ಅನ್ನುವ ಹುಡುಗಿ ಈಗೀಗ ಉಡಾಫೆಯ ಅಲೆ ಎಬ್ಬಿಸಿದ್ದಾಳೆ ಎಂದರೆ ಅದರ ನೋವಿನ ಆಳ ಅಳತೆಗೆ ಸಿಗದು. ಇದು ಕೇವಲ ಪ್ರೀತಿಸಿದವರಿಗೆ ಕಾಡುವ ಪ್ರಶ್ನೆಯಲ್ಲ, ಮದುವೆಯಾದವರಿಗೂ, ಮದುವೆಯಾಗಿ ವರ್ಷಾನುಗಟ್ಟಲೇ ಸಂಸಾರ ಮಾಡಿದವರಿಗೂ ಕಾಡುವ ಪ್ರಶ್ನೆ. ನಾವು ಹೆಳಿದ್ದನ್ನೇ ಕೇಳಬೇಕು, ಕರೆದೆಡೆಗೆ ಬರಬೇಕು? ಮಧ್ಯರಾತ್ರಿ, ಮುಂಜಾನೆ, ಮುಸ್ಸಂಜೆ ಎಷ್ಟೊತ್ತೆಂದರೇ ಮೆಸೇಜ್ ಮಾಡಬೇಕು, ಅಷ್ಟೊತ್ತಿನ್ನಲ್ಲಿ ಸೆಕ್ಸ್ ಬೇಕು, ಮುದ್ದಾಡಬೇಕು, ಆರೋಗ್ಯ ಕೆಟ್ಟು ಬಿದ್ದಿದ್ದರೂ ಅವಳು ನನ್ನೊಡನೆ ತನ್ನನ್ನು ತೊಡಗಿಸಿಕೊಳ್ಳಬೇಕು. ಅವಳ ಭಾವನೆಗಳಿಗೂ ಸ್ಪಂದಿಸದ ಇದೆಂಥಹ ವಿಕೃತ ಮನಸ್ಸು ನಮ್ಮದು. ಪ್ರೀತಿಸುವ ಹುಡುಗಿಯಾದ ಅವಳು ಅಷ್ಟೇ, ಅವನನ್ನು ಅರ್ಥೈಸಿಕೊಳ್ಳುವ ಮನಸ್ಸು ಮಾಡಬಾರದೇ? ಎರಡು ಮನಸ್ಸುಗಳ ಪಿಸುಮಾತಗಳನ್ನು ಒಮ್ಮೆ ಕಿವಿಗೊಟ್ಟು ಕೆಳಬಾರದೇ? ತೆಕ್ಕೆಗೆ ಸಿಗದ ಎಷ್ಟೋ ವಿಷ್ಯಗಳಿವೆ ಆದರೆ ತಕ್ಕ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರೀತಿ ಬರುವುದು ನಮಗೆ ಎಲ್ಲವೂ ಸಮರ್ಪಕವಾಗಿದ್ದಾಗ ಎನ್ನುವುದು ಅವರವರು ನಂಬಿರುವ ಸತ್ಯದ ಸೋಗು.
ವಿದ್ಯಾಬ್ಯಾಸ, ಉದ್ಯೋಗ, ಸ್ವಂತ ಸಂಪಾದನೆ, ಇದೆಲ್ಲವೂ ಇಲ್ಲದೇ ಇದ್ದಿದ್ದರೇ ಪ್ರೀತಿ ಸಿಗುವುದೇ? ಸೌಂದರ್ಯವಿಲ್ಲದ ಹುಡುಗಿಯನ್ನು ಪ್ರೀತಿಸಲು ಮುಂದೆ ಬರುವ ಗಂಡಸರು ಬಹಳ ಕಡಿಮೆ ಅಲ್ಲವೇ? ಆಂತರಿಕ ಪ್ರೀತಿ ಎಂದು ನಾವು ಎಷ್ಟೇ ಬೊಬ್ಬೆ ಹೊಡೆದರು, ವಾಸ್ತವಿಕತೆ ಬಹು ಮುಖ್ಯವೆನಿಸುತ್ತದೆ. ನೈಜತೆಗೆ ಹತ್ತಿರ ನಿಂತು ಚಿಂತನೆ ಮಾಡಬೇಕಾಗುತ್ತದೆ. ನಿಜವಾದ ಪ್ರೀತಿ ಏನು? ನಾವು ಪ್ರೀತಿಸುವವರನ್ನು ಸಂತೋಷದಿಂದಿಡುವುದು. ನಾವು ಇದ್ದರೂ ಇಲ್ಲದಿದ್ದರೂ ಅವರು ಸಂತೋಷದಿಂದಿರುವಂತೆ ನಾವು ಮಾಡಬೇಕು. ಅದಕ್ಕಾಗೆ ಪ್ರಯತ್ನಿಸಬೇಕು, ನನ್ನೊಡನೆ ಇರುವಾಗ ಮಾತ್ರ ಖುಷಿ ಆಗಿರು, ನಾನಿಲ್ಲದ ಮರು ಕ್ಷಣ ನೀನು ಸತ್ತು ಹೋಗು, ಹಾಳಾಗು ಎಂದು ಬಯಸಿದರೇ ಅದು ಪ್ರೀತಿ ಆಗುವುದೇ? ನಾನು ಹೇಳಿದ್ದನ್ನು ಕೇಳಿದರೇ ಮಾತ್ರ, ಪ್ರೀಗತಿ ನನ್ನೊಡನೆ ಇದ್ದರೇ ಮಾತ್ರ ಪ್ರಿತಿ ಇಲ್ಲದಿದ್ದರೇ ನಿನ್ನನ್ನು ಸಾಯಿಸುತ್ತೇನೆ, ಆಸಿಡ್ ಹಾಕುತ್ತೇನೆ ಎನ್ನುವ ಕ್ರೌರ್ಯವನ್ನು ಪ್ರೀತಿ ಎನ್ನವುದೇಗೆ? ಅದು ಪ್ರೀತಿಯಾ? ಪ್ರೀತಿಯಲ್ಲಿ ದೈವತ್ವವನ್ನು ಕಾಣಬೇಕು, ಪ್ರೀತಿ ಇರುವುದು ದೇವರನ್ನು ಕಾಣಲು, ನಮ್ಮನ್ನು ಪ್ರೀತಿಸಿದವಳ ಸಂತೋಷವನ್ನು ಬಯಸದ ನಾವು ನಮ್ಮ ಸ್ವಾರ್ಥಕ್ಕೆ ಅವರನ್ನು ಬಲಿ ಪಶು ಮಾಡುವುದು ನ್ಯಾಯವೇ?
‘ಗೆಳತಿ ….ತುಂಬಾ ದಿನದಿಂದ ಬಚ್ಚಿಟ್ಟುಕೊಂಡ ಭಾವ ಇದು …ನಂಗೇ ಗೊತ್ತಿಲ್ಲದೇ ನಾ ನಿನ್ನೆಡೆಗೆ ವಾಲಿದ್ದೇನೆ…ಹೇಳೋಕೆ ಧೈರ್ಯ ಇಲ್ಲದೇ ಹೇಳದೆ ಇರಲೂ ಅಗದೇ ಅದೆಷ್ಟೋ ನೀರವ ರಾತ್ರಿಗಳು ಸಂದ ಮೇಲೆ ಇವತ್ತು …. ..ಇವತ್ತು..ನಿನ್ನೆದುರು ಮಂಡಿಯೂರಿ ಕೇಳ ಬಂದೆ …ನೀ ನನ್ನ ಜೀವದ ಗೆಳತಿ …ಜೀವನದ ಸಂಗಾತಿಯಾಗು ಬಾ..’ ಎಂದೇಳಿದ ಮಾತಿನಲ್ಲಿ ನಂಜಿರಬಾರದು ಅಲ್ಲವೇ? ಸ್ವೀಕರಿಸಿದ ಅವಳಿಗೂ ಅಷ್ಟೇ, ಯಾವುದರ ಲಾಭದ ಕ್ಯಾಲ್ಕುಲೇಷನ್ ಇಟ್ಟುಕೊಂಡಿರಬಾರದು. ಯಾವುದೋ ವಿಷಯಕ್ಕೆ ಅಪಸ್ವರ ಬಂದಾಗ ಅಥವಾ ಅದೊಂದು ತಾಳ್ಮೆಯನ್ನು ಕಳೆದುಕೊಂಡಾಗ ಆಗುವ ಎಡವಟ್ಟು ಎರಡು ಜೀವಗಳಿಗೆ ಕುತ್ತು ತಂದುಬಿಡುತ್ತದೆ. ಒಡೆದು ಹೋದ ಕನ್ನಡಿಯನ್ನು ಮತ್ತೆ ಜೋಡಿಸಿಕೊಳ್ಳುವುದು…, ಮತ್ತೇ ಆ ಒಲವಿನಲ್ಲಿ ಅದೇ ಸ್ಪಷ್ಟ ಚೆಲುವು ಬಾಚಿಕೊಳ್ಳುವುದು ಅಷ್ಟು ಸುಲಭವಲ್ಲ. ಜೀವವಾಗಿದ್ದ ಅವಳನ್ನು ಹಂಗಿಸಿ ನಿಂದಿಸಿ ಮಾತಿನಿಂದ ಚುಚ್ಚುವ ಮುಂಚೆ ಆ ನಿಸ್ವಾರ್ಥ ಪ್ರೀತಿ ಮುಂದಾಗಬೇಕು. ನಾನೇ ಸರಿ ಎನ್ನುವ ಬಂಡತನ ಅದೆಷ್ಟೋ ವಿರಹಕ್ಕೆ ಕಾರಣ. ನಿಜವಾದ ಪ್ರೀತಿಗೆ ಓರೆ ಕೊರೆಗಳ ಹಂಗಿಲ್ಲ. ಅವಳು ಹೇಗಿದ್ದರೂ ಇಷ್ಟವಾಗುತಾಳೆ. ಅಲ್ಲೊಂದು ಸುಂದರವಾದ ಅಪ್ಪಿಕೊಳ್ಳುವ, ಆರಾಧಿಸುವ, ಆ ಪ್ರೀತಿಯನ್ನು ಇನ್ನಷ್ಟು ಸಿಂಗರಿಕೊಳ್ಳುವ ಮನಸಿದ್ದಾಗ ಮಾತ್ರ. ಅದೊಂದು ಬೆಸುಗೆಯ ನಂಟಿನಲ್ಲಿ ‘ಸಿರ್ಫ್’ ಪ್ರೀತಿ ಇರಲಿ, ಮಿಕ್ಕಿದ್ದೆಲ್ಲವು ತೋಳುಗಳಲ್ಲಿ ಬಂಧಿಯಾಗಲಿ. ಆ ಕಣ್ಣುಗಳಲ್ಲೇ ಈ ಜೀವನದ ಅಷ್ಟು ಸೊಬಗನ್ನು ಬಾಚಿಕೊಳ್ಳುವ ಹಂಬಲ ಹಸಿರಾಗಿರಲಿ.
-ಬೀರೇಶ್ ಎನ್ ಗುಂಡೂರ್