ಸಿಡಿದೆದ್ದ ಗಾಂಧೀಶಕ್ತಿಸ್ಥಳ ಬದನವಾಳು: ಎಸ್.ಜಿ. ಸೀತಾರಾಮ್


 

“ಬದನವಾಳು” ಎಂದೊಡನೆ ಹಳೆಯ ಮೈಸೂರಿಗರ ಮನಸ್ಸಿಗೆ ಬರುವುದು, ಗಾಂಧೀ ರಚನಾತ್ಮಕ ಕಾರ್ಯಕ್ರಮದಡಿಯಲ್ಲಿ 88 ವರ್ಷಗಳ ಕೆಳಗೆ, ಅಂದರೆ 1927ರಲ್ಲಿ, ಅಲ್ಲಿ ಸ್ಥಾಪಿಸಲ್ಪಟ್ಟ, “ನೂಲುವ ಪ್ರಾಂತ್ಯ” ಮತ್ತು “ಖಾದಿ ಗ್ರಾಮೋದ್ಯೋಗ ಕ್ಷೇತ್ರ.”  ಮೈಸೂರು-ಚಾಮರಾಜನಗರ ರೈಲು ಮಾರ್ಗದಲ್ಲಿರುವ ಈ ಗಾಂಧೀಕ್ಷೇತ್ರವು, ನಂಜನಗೂಡಿನಿಂದ 9 ಕಿ.ಮೀ. ಮತ್ತು ಮೈಸೂರಿನಿಂದ 34 ಕಿ.ಮೀ. ದೂರದಲ್ಲಿದೆ; “ತಗಡೂರು” ಎಂಬ ಇದರ “ಅವಳಿ” ಗಾಂಧೀಕ್ಷೇತ್ರದಿಂದ 9 ಕಿ.ಮೀ. ದೂರದಲ್ಲಿದೆ. “ಮೈಸೂರು ಗಾಂಧೀ” ಎಂದೇ ಪ್ರಸಿದ್ಧರಾಗಿದ್ದ ತಗಡೂರು ರಾಮಚಂದ್ರ ರಾವ್ ಮತ್ತು ಅಗರಂ ರಂಗಯ್ಯ (ಸಾಧ್ವೀ ಪತ್ರಿಕೆ), ವಿ. ವೆಂಕಟಪ ್ಪ (ಮೈಸೂರು ವಿಧಾನಸಭೆಯ ಮೊದಲ ಸಭಾಪತಿ) ಮೊದಲಾದ ಗಾಂಧೀಯರೊಡನೆ, ಗಾಂಧೀಜೀ 1934ರ 5ನೇ ಜನವರಿಯಂದು ನಂಜನಗೂಡು-ತಗಡೂರು-ಬದನವಾಳು ಪ್ರವಾಸ ಮಾಡಿದರು.  ನಂಜನಗೂಡಿನಲ್ಲಿ ವಿಶ್ರಾಂತಿ ಪಡೆದ ಮೇಲೆ, (ಆಗ ಪ್ಲೇಗ್-ಪೀಡಿತವಾಗಿದ್ದ) ತಗಡೂರಿಗೆ ಬಂದು, ಅಲ್ಲಿನ ಶಾಲೆಯ ಆವರಣದಲ್ಲಿ ಭಾಷಣ ನೀಡಿದರು, ಮತ್ತು ಅಲ್ಲಿಂದ ಬದನವಾಳುವನ್ನು ತಲುಪಿ, ಅಲ್ಲಿನ ಖಾದಿ ನೂಲಿನ ಕೇಂದ್ರ ಹಾಗೂ ಉಗ್ರಾಣವನ್ನು ಸಂದರ್ಶಿಸಿದರು. 
  
ಪುಟ್ಟಹಳ್ಳಿಯಾದ ಬದನವಾಳು ಒಂದಾನೊಂದು ಕಾಲದಲ್ಲಿ ಖಾದಿ ಒದಗಿಸುವ ಪ್ರಧಾನ ಕೇಂದ್ರವಾಗಿ, “ಗ್ರಾಮಸ್ವರಾಜ್ಯದ” ಪ್ರತೀಕವಾಗಿ, ಹೊರಜಗತ್ತಿನಲ್ಲಿ ಹೆಸರುವಾಸಿಯಾಗಿತ್ತು.  ಬಟ್ಟೆಗಳ ನೂಲ್ಗೆ-ನೇಯ್ಗೆ-ಬಣ್ಣಗಾರಿಕೆಯೇ ಅಲ್ಲದೆ, ಕೈಗೈದ-ಕಾಗದ ತಯಾರಿಕೆ, ಕತ್ತಾಳೆನಾರು ಕೈಕಸಬು, ಎಣ್ಣೆ ಗಾಣ, ಬಟ್ಟೆ-ಸಾಬೂನು ಮತ್ತು  ಮೈ-ಸಾಬೂನು (“ಕುಟೀರ”) ತಯಾರಿಕೆ, ರೇಷ್ಮೆಯ ಉರುಳೆಗೊಳಿಸುವಿಕೆ, ದೀಪದಕಡ್ಡಿ (“ಚಕಮಕಿ”) ಉತ್ಪಾದನೆ, ಮರಗೆಲಸ ಇತ್ಯಾದಿ ಬಗೆಬಗೆಯ ಉದ್ಯೋಗಗಳಲ್ಲೂ ತೊಡಗಿದ್ದ ಈ ಕೇಂದ್ರದಲ್ಲಿ, ವಾರ್ಧಾ-ಸೇವಾಗ್ರಾಮ್‍ನಿಂದ ತರಬೇತಿ ಪಡೆದ ಕೆಲವು ವೃತ್ತಿಕುಶಲರೂ ಇದ್ದರು, ಮತ್ತು ಇದರಿಂದಾಗಿ ನೂರಾರು ಹಿಂದುಳಿದ ಹೆಣ್ಣುಮಕ್ಕಳಿಗೆ, ಕುಟುಂಬಗಳಿಗೆ ಜೀವನಾರ್ಥವು ದೊರಕಿತ್ತು.  ಕರ್ನಾಟಕ ಚರಖಾ ಸಂಘದ ಮಾನ್ಯತೆಯನ್ನು ಪಡೆದಿದ್ದ ಈ ಕಾರ್ಯಕ್ಷೇತ್ರವು, 1965ರ ಕಡೆಯವರೆಗೆ ಮೈಸೂರು ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಆಶ್ರಯದಲ್ಲಿದ್ದು, ಆ ಬಳಿಕ ಬದನವಾಳು ಖಾದಿ ಗ್ರಾಮೋದ್ಯೋಗ ಸಂಘದ ಆಡಳಿತಕ್ಕೆ ಒಪ್ಪಿಸಲ್ಪಟ್ಟಿತು. ಆದರೆ, ಇದಾದ ಸುಮಾರು ಎಂಟೊಂಬತ್ತು ವರ್ಷಗಳೊಳಗೇ ಉಂಟಾದ ಕೈಗಾರಿಕೋದ್ಯಮೀಕರಣ, ನಗರೀಕರಣ, ನಗರಾಭಿಮುಖ ವಲಸೆ, ಯುವಜನರಲ್ಲಿ ಆಸಕ್ತಿಹೀನತೆ ಮತ್ತು ಒಟ್ಟು ಕಾಲಸ್ಥಿತಿಯ ನವೀನೀಕರಣದ ಪರಿಣಾಮಗಳಿಂದಾಗಿ, ಇಲ್ಲಿನ ಚಟುವಟಿಕೆಗಳೆಲ್ಲ ಸ್ತಬ್ಧಗೊಂಡವು. ಇಲ್ಲಿನ ಒಡೆದ ಕಟ್ಟಡಗಳು, ಮುರಿದ ಯಂತ್ರೋಪಕರಣಗಳು ಹಾಗೂ ಹುಲುಸಾಗಿ ಹರವಿದ ಮುಳ್ಳುಕಂಟಿಗಳು-ಕಳೆಗಳಿಂದಾಗಿ ಕಡೆಗೆ ಇದೊಂದು “ಬದನಹಾಳುಹಂಪೆ” ಆಯಿತು; ಕೊಂಪೆಯಾಗಿ ಮೂಲೆಗುಂಪಾಯಿತು.        
      
ಹೀಗೆ ಚರಿತ್ರೆಯ ಧೂಳುಪುಟಗಳೊಳಗೆ ಕಣ್ಮರೆಯೇ ಆಗಿಹೋಗಿದ್ದ ಬದನವಾಳುವಿನ ನೇಯ್ಗೆ ಕೈಗಾರಿಕೆಯನ್ನು, “ಹೊಳೆನರಸೀಪುರ ಖಾದಿ ಗ್ರಾಮೋದ್ಯೋಗ ಸಹಕಾರಿ ಸಂಘ” (ಪೂರ್ವಕಾಲದಲ್ಲಿ, “ಖದ್ದರ್ ಪರಸ್ಪರ ಸಂಘ”) 1984ರಲ್ಲಿ ತನ್ನ ಕೈಗೆತ್ತಿಕೊಂಡು, ಬದನವಾಳು ಗ್ರಾಮಕ್ಕೆ ಕಾಯಕಲ್ಪವನ್ನು- ಮರುಜೀವವನ್ನು ನೀಡಿತು.  ಹಾಗಾಗಿ, ಇಂದು ಬದನವಾಳು ಹಲವಾರು ಸ್ಥಳೀಯ ಸ್ತ್ರೀಯರಿಗೆ ಜೀವನಾಧಾರ ಕರ್ಮಭೂಮಿಯಾಗಿ ಮತ್ತೆ ತಲೆಯೆತ್ತಿ ಮುನ್ನಡೆಯುತ್ತಿದೆ.

ಚಿತ್ರ 1. ರಾಜಾರಾಮ್ ಅಯ್ಯಂಗಾರ್ (ಮಧ್ಯದಲ್ಲಿ) ಮತ್ತು ತಗಡೂರು ಕೇಶವಮೂರ್ತಿ – ಮೂಲಪ್ರವರ್ತಕರು

ಚಿತ್ರ 2. ಕಬ್ಬಳ್ಳಿ ಸಣ್ಣನಾಯ್ಕ – ಗಾಂಧೀ ಬಂದಿದ್ದನ್ನು ಕಂಡ ಅತ್ಯಂತ(ಈಗ ನಿವೃತ್ತ)ಹಿರಿಯ ಕಾರ್ಯಕರ್ತ

 

 

 

 

 

 

ಫೋಟೋ ಕೃಪೆ: ಡಾ. ಬಸವರಾಜ್ ಎ. ಪಾಟೀಲ್

ಅತ್ಯಾಧುನಿಕತೆ ಮತ್ತು ಅದರ ಸಂಗಾತಿಯಂತಿರುವ ಅತ್ಯಾಶೆ, ಹಾಗೂ ಮಿತಿಮೀರಿದ ಯಾಂತ್ರೀಕರಣ-ತಾಂತ್ರೀಕರಣ-ಜಾಗತೀಕರಣ-ವಾಣಿಜ್ಯನಿಗಮೀಕರಣ ಇವುಗಳ ಹೊಡೆತದಿಂದಾಗಿ

ಇಂದು ಅನೇಕ ಪೆಡಂಭೂತ-ಮೂಲಭೂತ ಸಮಸ್ಯೆಗಳು ಜನಜೀವನದ ಎಲ್ಲ ಮಗ್ಗುಲುಗಳಲ್ಲಿಯೂ ಮುಳ್ಳಾಗಿ ಮೇಲೆದ್ದು, ಸಮಾಜವನ್ನು ಆಪತ್ತಿನಂಚಿಗೆ ಒಡ್ಡಿವೆ.  ಇದರಿಂದಾಗಿ ಈಗ ಸರಳ, ಶ್ರಮಶೀಲ, ಸುಸ್ಥಿರ, ಸಂಪನ್ಮೂಲ-ಚಿಂತಕ, ಸಂತುಷ್ಟ, ಸರ್ವಜನ-ಸರ್ವಸೃಷ್ಟಿ ಹಿತಕರವಾದ ಬದಲಿ ಬಾಳ ಬಗೆಯೊಂದನ್ನು ಕಂಡುಕೊಳ್ಳುವ ಅಗತ್ಯ ತೀವ್ರಗೊಂಡಿದೆ. ಈ ಕಾರಣ, ಈ ಬುಡಮಟ್ಟ ವಿಷಯ ಹಾಗೂ ಅದು ಒಳಗೊಳ್ಳುವ ಸುಸ್ಥಿರ ವ್ಯವಸಾಯ (ನೈಸರ್ಗಿಕ ಕೃಷಿ, ಇತ್ಯಾದಿ), ಪಾರಂಪರಿಕ ಕೌಶಲ್ಯ ಆಧಾರಿತ ಕಸಬು (ಕೈಮಗ್ಗ, ಇತ್ಯಾದಿ), ಗ್ರಾಮ ಸ್ವರಾಜ್ಯ, ದೇಸಿ ಸಂಸ್ಕೃತಿ, ಪರಿಸರ ಪ್ರಜ್ಞೆ ಮೊದಲಾದ ನಾನಾಬಗೆಯ ವಿಷಯಗಳ ಬಗ್ಗೆ ವೈಚಾರಿಕ-ವೈಜ್ಞಾನಿಕ ಚರ್ಚೆಗಳು ಮತ್ತು ಸಾರ್ವಜನಿಕ ಸಂಚಲನ-ವಸ್ತುಪ್ರದರ್ಶನಗಳ ಮೂಲಕ ಜನಜಾಗೃತಿ ಮೂಡಿಸುವ ಸಲುವಾಗಿ, ಇಂಥ ಸಹಜಮೌಲ್ಯಗಳ ಏಳ್ಗೆ ಮತ್ತು ಬೀಳ್ಗೆ ಎರಡಕ್ಕೂ ಸಂಕೇತವೇ ಆಗಿರುವ “ಬದನವಾಳು” ಹೆಸರಿನಲ್ಲಿ, 2015ರ ಮಾರ್ಚ್ 21ರಂದು ಗಜೇಂದ್ರಗಡದಲ್ಲಿ (ಗದಗ್) “ಬದನವಾಳು ಸತ್ಯಾಗ್ರಹ” ಚಾಲನೆಗೊಂಡು, ಒಂದು ತಿಂಗಳ ವ್ಯಾಪಕ ಕಾರ್ಯಕ್ರಮಗಳ ಬಳಿಕ, ಏಪ್ರಿಲ್ 19ರಂದು ಬದನವಾಳುವಿನಲ್ಲಿಯೇ, ಬದನವಾಳುವಿನ ವದನವನ್ನು ಬದಲಾಯಿಸುವಂಥ ಒಂದು ಅಪೂರ್ವ “ರಾಷ್ಟ್ರೀಯ ಸಮಾವೇಶ” ಮತ್ತು ಮಹಾಮೇಳವೊಂದರಲ್ಲಿ ಮುಕ್ತಾಯಗೊಂಡಿತು. [ಅಖಿಲ-ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟವು ನಡೆಸಿದ ಚಳುವಳಿಯ ಭಾಗವಾಗಿ 2014ರ ಜನವರಿ 15ರಂದು ಕೈಮಗ್ಗದ ಉಳಿವಿಗಾಗಿ ಪ್ರಾರಂಭಿಸಿದ ಗಜೇಂದ್ರಗಡ-ಬನಶಂಕರಿ (ಬಾಗಲಕೋಟೆ-ಬಾದಾಮಿ ಬಳಿ) ಪಾದಯಾತ್ರೆಯನ್ನು, ಬದನವಾಳು ಸತ್ಯಾಗ್ರಹದ ನಿಜಮೂಲವೆನ್ನಬಹುದು). ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿ ಬೇರೆಬೇರೆ ದಿಕ್ಕುಗಳಿಂದ-ವೃತ್ತಿರಂಗಗಳಿಂದ ಆಸಕ್ತರು-ಅಭಿಮಾನಿಗಳು, “ಬದನವಾಳ್ ಚಲೋ” ಪಾದಯಾತ್ರೆಯನ್ನು ಕೈಗೊಂಡಿದ್ದರು, ಮತ್ತು ಇದರ ಅಂಗವಾಗಿ, ಕೃಷಿ-ಪರಿಸರ-ಗ್ರಾಮೋದ್ಯೋಗ-ಶಿಕ್ಷಣಪದ್ಧತಿ-ಆಡಳಿತ ವಿಕೇಂದ್ರೀಕರಣ, ಇತ್ಯಾದಿ ವಿಭಿನ್ನ ವಿಷಯಗಳನ್ನು ಕುರಿತಂತೆ ಪಂಚಾಯಿತಿಗಳು ನಡೆದು, ಬದನವಾಳು ಕಾರ್ಯಕ್ಷೇತ್ರವನ್ನು ಸೇವಾಗ್ರಾಮ್ ಮಾದರಿಯಲ್ಲಿ ಬೆಳೆಸುವುದು, ಅಲ್ಲಿನ ಖಾದಿ ಘಟಕವನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾನ್ಯಮಾಡುವುದು, ಹಾಗೂ ಬದನವಾಳು ಸತ್ಯಾಗ್ರಹವನ್ನು ವಿವಿಧ ಮಟ್ಟಗಳಲ್ಲಿ ಮುಂದುವರೆಸುವುದು ಮೊದಲಾದ ಠರಾವುಗಳನ್ನು  “ಬದನವಾಳು ಘೋಷಣೆ” ರೂಪದಲ್ಲಿ ಪ್ರಕಟಿಸಲಾಯಿತು. “ದೇಶದ ಸಮಗ್ರ ಅಭಿವೃದ್ಧಿಯನ್ನು, ಸ್ಥೂಲ ದೇಶೀ ಉತ್ಪಾದ (ಜಿ.ಡಿ.ಪಿ.) ಎಂಬ ಕಚ್ಚಾ ಸೂಚಕಾಂಕದ ಬದಲು, ಸಾಮಾಜಿಕ ಸುಸ್ಥಿರತೆ-ಸ್ವಾಸ್ಥ್ಯಗಳಿಂದ ಮತ್ತು ಸರ್ವಸಾಮಾನ್ಯರ ನಲಿವು-ನೆಮ್ಮದಿಗಳಿಂದ ಮಾಪನ ಮಾಡಬೇಕು; ಜೊತೆಗೆ, ಅಭಿವೃದ್ಧಿಯ ಆಧಾರಗಳೆಂದು ವಾಣಿಜ್ಯೋದ್ಯಮಗಳನ್ನಷ್ಟೇ ಅಲ್ಲದೆ, ಹಸುಮೇಯಿಸುವವನು, ನೂಲು ಹೆಣೆಯುವವಳು ಮೊದಲಾದ ಪ್ರಾಥಮಿಕ ಶ್ರಮಿಕರನ್ನೂ ಗುರುತಿಸಬೇಕು” ಎಂಬುದನ್ನು ಇಲ್ಲಿ ಎತ್ತಿಹೇಳಲಾಯಿತು. 
  
ಬಾರಿಸು ಬದನವಾಳು ಭೇರಿಯನು!
> ಬದಲಿ ಬಾಳಿನೆಡೆಗೆ, ಬದನವಾಳಿನೆಡೆಗೆ!
> ಬಾಳಿಕೆಯ ಬಾಳ್ವೆಗೆ, ಬನ್ನಿರಿ ಬದನವಾಳಿಗೆ!
> ನೆಲೆಗೊಂಡ ನಾಳೆಗೆ, ನಡೆಯಿರಿ ಬದನವಾಳಿಗೆ!
> ಬದನೆ-ಬಾಳೆಗಳ ಸಸ್ಯಾಗ್ರಹವೂ ಸೇರಿದ ಬದನವಾಳು ಸತ್ಯಾಗ್ರಹ! 
> ಬದನವಾಳು ಜಾತ್ರೆ ~ ಬಡಬಾಳುಂಡವರ ಯಾತ್ರೆ!
> ಸರಳ ಜೀವನದಲ್ಲಿದೆ ಸಂತೋಷದ ಜೀವಾಳ!
> ಉದ್ವೇಗವಿಲ್ಲದ ಉದ್ಯೋಗ ~ ಸ್ವಸ್ಥ ಶ್ವಾಸಕೋಶ ~ ಸ್ವಚ್ಛ ವಿಶ್ವಾಸಕೋಶ! 
> ಸುಸ್ಥಿರ ಕೃಷಿ ~ ಸುಸ್ಥಿತ ಖುಷಿ!
> ಸುಸ್ಥಿರ ಬೇಸಾಯ ~ ಸುಸ್ಮಿತ ಬದುಕು!
> ಸುಸ್ಥಿರ ಬದುಕಿಗೆ, ಸುಸ್ಥಿತ ಬಗೆ!
> ಸುಸ್ಥಿರ ಸಂಸಾರಕ್ಕಾಗಿ ಸ್ವಸ್ತಿವಾಚನ!
> ಸುಸ್ಥಿರತೆಗೆ ನಿಮ್ಮ ಸುಸ್ವರಗೂಡಿಸಿ!
> ಸುಸ್ಥಿರತೆಯಲ್ಲಿದೆ ಸಂಪತ್ತು, ಸ್ವಾಸ್ಥ್ಯ, ಸೌಂದರ್ಯ!
> ಅದರಲ್ಲಿ ‘ಸುಸ್ತು ಇರತ್ತೆ’ ಎಂದರೆ, ಸುಸ್ಥಿರತೆ ಶ್ರಮವಿಲ್ಲದೇ ಬರತ್ಯೇ? 
> “ಸುಸ್ತಿನ ಜೀವನ” ಎಂದು ಕೈಚೆಲ್ಲಿ ಕೂತರೆ, ಸುಸ್ಥಿರ ಜೀವನ ಬಂದೀತೇ?
> ಸ್ವಸ್ಥಿರತೆಗಷ್ಟೇ ಅಲ್ಲ, ಇದು ಸಮಸ್ತಸಮಾಜದ ಸುಸ್ಥಿರತೆಗಾಗಿ!
> “ಸುಸ್ಥಿರಃ! ಸುಸ್ಥಿರಃ!” ಎಂದು ಮಂತ್ರಿಸಿದರೆ ಸುಸ್ಥಿರತೆಯು ಮರದಿಂದ ಉದುರದು, ಅದು ಸುಸ್ತು-ಕುಸ್ತಿಗಳಿಲ್ಲದ ಸುಸ್ಥಿರ ಸಂಘಟನೆಯಿಂದಷ್ಟೇ ಸಂಭವಿಸುವುದು!   
> ಅಸ್ಥಿರತೆ-ಅಸ್ತಾವಸ್ಥೆ, ದುಸ್ಥಿತಿ-ದುರವಸ್ಥೆಗಳಿನ್ನು ಸಾಕು, ಅಸ್ತವ್ಯಸ್ತ ರಸ್ತೆಗೀಗಲೇ ದುರಸ್ತಿ ಬೇಕು!
> ಮೈಬಗ್ಗಬೇಕು, ಮೈಮಗ್ಗದಿಂದ ಮೂಡಬೇಕು ಬಾಳನೇಯ್ಗೆ!  
> ದುಡಿಮೆಯೇ ದೊಡ್ಡಪ್ಪ ~ ದುಡಿಮೆಯಿಲ್ಲದ ದುಡ್ಡು, ಲೊಡ್ಡು-ಜಡ್ಡು ಮೈಯಂತೆ!
> ದುಡಿಮೆಯಿಂದಲೇ ಒಲವು-ಬಲವು, ಗೆಲವು-ನಲವು, ದುಡಿಮೆಯಿಲ್ಲದ ದುಡ್ಡಿಂದ ದುಡುಮನಾದವಗೆ ಸಿಗುವುದುಂಟೇ ಆ ಸಿರಿಯ ಸುಖವು?  
> ಕೈದುಡಿಮೆಯಿದ್ದವನು ಕೈಲಾಸದ ಕೈಸಾಲೆಯನ್ನು ಕೈಗೂಡಿಸಿಕೊಳ್ಳುವನು, ಕೈಕಟ್ಟಿ ಕುಳಿತವನು ಕೈಲಾಸವೇ ಕೈಕೊಟ್ಟಿತೆಂದು ಕೈಸಾಲ ಮಾಡಿಮಾಡಿ ಮಡಿಯುವನು| 
> ಕಾಯಕವೇ ಕೈಲಾಸ; ಕಾಯಕವಿಲ್ಲದಿರೆ ಅದು ಕೈಸಾಲದ ‘ವಿಲಾಸ’!  
> ಉಳುವವನೇ ಇಲ್ಲದೆಡೆ, ಉಳ್ಳವನು ಏನನುಣ್ಣುವನು?
> ಉಳುವವನನ್ನು ಅಳಿಸಿದರೆ, ಉಳ್ಳವನು ಉಳಿಯುವನೇ? 
> ಉಳುವವನಿಗಿತ್ತ ಉಳಿಪೆಟ್ಟು, ಉಳ್ಳವನ ಕಡೆಪೆಟ್ಟಿಗೆಗಿತ್ತ ಮೊಳೆಪೆಟ್ಟು 
> ಉಳ್ಳವನು-ಉಳುವವನು-ಊಳಿಗದವನು ಎನದೆ, ಉಣಲೆಲ್ಲರೂ ರಸಬಾಳ್ವೆಹಣ್ಣನು!
> ಬೇಳುವೆಯಿಂದ ಬಾಳುವೆಯ ಬೇಳೆ ಬೇಯದು, ದಿಟ-ದಿಟ್ಟ ದಾರಿಯಲಿ ಸಾಗಲಿ ಬಾಳ ಸಾಗುವಳಿ! 
> ಸಹಬಾಳ್ವೆಯುಂ ಬಾಳ್ಗೆ! ಸಹನಶೀಲಬಾಳ್ವೆಯುಂ ಗೆಲ್ಗೆ! 
> ಆಸ್ತಿಯ ಆಸ್ಥೆ-ಆಸೆಗಳು ಅತಿಯಾಗಿ, ಅಸ್ತಿತ್ವವು ಅಸ್ಥಿಪಂಜರ-ಆಸ್ತಿಪಂಜರ ಆಯ್ತು!
> ಸಮಾಜಕ್ಕೆ ಸಮಾನಭಾವವು ಅಡಿಪಾಯ; ಅದಿಲ್ಲದಿರೆ ತಪ್ಪದು ಅಪಾಯ!  

~ 0 ~

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x