ಜೂನ್ ತಿಂಗಳಲ್ಲಿ ಮುಂಗಾರು ಪ್ರಾರಂಭವಾಗದೆ, ಈ ವರುಷದ ಗಿಡ ನೆಡುವ ಕಾರ್ಯಕ್ರಮ ಮುಂದಕ್ಕೆ ಹೋಯಿತು. ಅಂತೂ ಜುಲೈ ತಿಂಗಳಲ್ಲಿ ಮಳೆಗಾಲ ಶುರುವಾಯಿತೇನೊ ಎನಿಸಿ, ಗಿಡ ನೆಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಮಳೆ ಬಂದು ಇಳೆಯೇನೋ ತಂಪಾಯಿತು. ಗಿಡ ನೆಟ್ಟ ಮೇಲೆ ಬಿರು ಬೇಸಿಗೆ ಶುರುವಾಯಿತು. ನೆಟ್ಟ ಗಿಡಗಳು ಇನ್ನೆರೆಡು ದಿನ ಮಳೆ ಬಾರದಿದ್ದಲ್ಲಿ ಸತ್ತೇ ಹೋಗುವ ಸಂದರ್ಭ. ಮನುಷ್ಯರ ಕತೆ ಹೀಗಾದರೆ, ಮಳೆಗಾಲದಲ್ಲೇ ಜನ್ಮ ತಳೆಯುವ ಅದೆಷ್ಟೋ ಕೀಟಗಳು ಸಂಕಷ್ಟಕ್ಕೆ ಸಿಲುಕಿದ್ದವೋ. ನಮ್ಮಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಮಳೆ-ಜಿರಲೆ ಅಥವಾ ಮಳೆ ಹಕ್ಕಿ ಅಥವಾ ಸಿಕಾಡ ಎನ್ನಲಾಗುವ ಕೀಟದ ಭೂಮಿಯ ಮೇಲಿನ ಜೀವನ ಚಕ್ರ ಮಳೆಗಾಲದ ಪ್ರಾರಂಭದಲ್ಲಿ ಶುರುವಾಗಿ ಮಳೆಗಾಲ ಮುಗಿಯುವ ಹೊತ್ತಿಗೆ ಮುಗಿದು ಹೋಗುತ್ತದೆ. ಅಗಣಿತ ಸಂಖ್ಯೆಯಲ್ಲಿ ಮರಕ್ಕೆ ಕಚ್ಚಿಕೊಂಡು ಕುಳಿತ ಗಂಡು ಕೀಟಗಳು ಸಂಗಾತಿಗಾಗಿ ಕರೆಯುವ ಕೂಗು ಕೆಲವರಿಗೆ ಕರ್ಣಕಠೋರವಾಗಿದ್ದರೆ, ಕೆಲವರಿಗೆ ಕರ್ಣಾನಂದವಾಗಿರುತ್ತದೆ. ಮಳೆಗೂ, ಸಿಕಾಡಕ್ಕೂ ಹಾಗೂ ಇವುಗಳ ಮಿಲನಕ್ಕೂ ನೇರ ಸಂಬಂಧವಿದೆ.
ಮಧ್ಯಾಹ್ನ ಊಟ ಮಾಡಿ ಕುಳಿತು, ಮನೆಯಲ್ಲೇ ಬೆಳೆದ ಅಡಿಕೆ-ಎಲೆ ಮೆಲ್ಲುತ್ತಿದ್ದೆ. ಸಿಕಾಡ ಕೀಟಗಳ ಜುಗಲಬಂಧಿ ಶುರುವಾಗಿ ಮಾರ್ಧನಿಸುತ್ತಲೇ ಇತ್ತು. ಮಡದಿಗೆ ಕೇಳಿದೆ. ಈಗ ಕೂಗ್ತಾ ಇರೋದು ಯಾವ ಕೀಟ ಗೊತ್ತಾ?, ಅದರ ಜೀವನ ಚಕ್ರ ಗೊತ್ತಾ? ಅಡುಗೆ ಮನೆಯಲ್ಲಿದ್ದವಳಿಗೆ, ಸಿಕಾಡ, ಅದರ ಜೀವನಚಕ್ರ ಪಾಠ ಮಾಡಲು ಹೊರಟೆ. ಈ ವರ್ಷ ಕೂಗುತ್ತಿರುವ ಈ ಕೀಟಗಳು 13 ವರ್ಷಗಳ ಕೆಳಗೆ ನೆಲದಾಳಕ್ಕೆ ಸೇರಿದವು, ಈಗ ಹೊರಬಂದು ಈ ಪಾಠೀ ಕೂಗುತ್ತಿವೆ ಎಂದೆ. ನಂಬಿಕೆ ಬರಲಿಲ್ಲ, ಕಣ್ಣರಳಿಸಿ, ನನಗೆ ಗೊತ್ತಿಲ್ಲ ಎಂದು ಎನೇನೋ ಹೇಳಿ ರೈಲು ಹತ್ತಿಸಬೇಡ ಎಂದಳು. ಅಲ್ಲಾ ಮಾರಾಗಿತ್ತಿ ಎನ್‍ಸೈಕ್ಲೋಪೀಡಿಯಾದಲ್ಲಿ ಓದಿದ್ದೇನೆ, ಇದರ ಬಗ್ಗೆ ಸುಧಾದಲ್ಲೋ, ತರಂಗದಲ್ಲೋ ಲೇಖನ ಕೂಡ ಬಂದಿತ್ತು ಎಂದೆ. ನಂಬಿಕೆ ಬಂದ ಹಾಗೆ ಕಾಣಲಿಲ್ಲ. ನನ್ನವಳ ದೃಷ್ಟಿಯಲ್ಲಿ ನಾನೊಬ್ಬ ಯಾವಾಗಲೂ ಅನುಮಾನಸ್ಪಾದ ವ್ಯಕ್ತಿಯೇ ಆಗಿದ್ದೇನೆ!! ಹೀಗೆ ಈ ವಾರದ ಲೇಖನ ಬರೆಯಲು ಚಾಲೇಂಜ್ ಮಾಡಿದ ನನ್ನ ಹೋಮಿನಿಸ್ಟ್ರಿಗೆ ಒಂದು ಧನ್ಯವಾದ.
ಪಶ್ಚಿಮಘಟ್ಟಗಳ ಕಾಲಬುಡದಲ್ಲಿ ನೆಲೆಸಿದ ನಮಗೆ, ಮನೆಯ ಒಳಗಿದ್ದರೂ, ಕಾಡಿನ ಸಂಗೀತ ಕೇಳುವ ಭಾಗ್ಯ, ಬೆಳಗ್ಗೆ ಅಷ್ಟೊತ್ತಿಗೆ ಕೂಗುವ ಕಾಜಾಣ, ಅದರ ಹಿಂದೆ ಕುಂಡೆಕುಸ್ಕದ ಸೀಟಿ, ಮಂಗಟ್ಟೆ ಹಕ್ಕಿಯ ತುತ್ತೂರಿ, ಬಿಟ್ಟು-ಬಿಟ್ಟು ಕೂಗುವ ನವಿಲುಗಳ ಕ್ಯಾಂಕೋ, ಕ್ಯಾಸಣಿಲಿನ ಠೀೀೀೀೀೀ ಠಿಠ್. . ಠಿಠ್. . ಠಿಠ್.. ಇವುಗಳ ಮುಮ್ಮೇಳಕ್ಕೆ ಮರಕುಟಿಗದ ಡಮರುಗದ ಹಿಮ್ಮೇಳ. ನಡು-ನಡುವೆ ಹೂಹಕ್ಕಿಗಳ ಚೀಕ್-ಚೀಕ್, ಹೆಜ್ಜೇನಿನ ಝೇಂಕಾರ ಜೊತೆಗೆ ಕಾಗೆಯ ಕಾಕಾಕಾರ! ಇನ್ನೂ ಹಲವಾರು.
ಮಳೆಗಾಲದ ಸಂಜೆಯ ಸೊಬಗನ್ನು ವರ್ಣಿಸುವುದು ತುಸು ಕಷ್ಟವೇ. ದಿವಾಚರಿಗಳೆಲ್ಲಾ ನೇಪಥ್ಯಕ್ಕೆ ಸರಿದಂತೆ, ನಿಶಾಚರಿಗಳ ಚಲನೆ ಶುರುವಾಗುತ್ತದೆ. ಅದರಲ್ಲೂ ಅಸಂಖ್ಯ ಕೀಟ ಸಾಮ್ರಾಜ್ಯದ ವಿಶಿಷ್ಟವಾದ ವಿವಿಧ ಸ್ತರಗಳ ಲಯಬದ್ಧವಾದ ಸ್ವರಮೇಳಗಳಿಗೆ ಸಾಟಿಯೇ ಇಲ್ಲ. ಸೊಳ್ಳೆಯ ಕಡಿತವನ್ನು ನಿರ್ಲಕ್ಷಿಸಿ ಕೂತದ್ದೇ ಆದರೆ, ನಿಮ್ಮ ಕೈಯಲ್ಲಿ ಪಟ್ಟಿ ಮಾಡಲಾಗದಷ್ಟು ಸ್ವರಗಳು ಕೇಳಿ ಬರುತ್ತವೆ. ಇನ್ನು ಕಪ್ಪೆಗಳ ಸಾಮ್ರಾಜ್ಯದ ಕತೆಯೇ ಬೇರೆ. ಎಮ್ಮೆ ಕರುವಿನಷ್ಟೇ ಜೋರಾಗಿ ಕೂಗುವ ಮಲ್ನಾಡ್ ಬುಲ್ ಫ್ರಾಗ್ ನಮ್ಮಲ್ಲೂ ಅಪರೂಪವಾಗಿದೆ. ಸಂಗಾತಿಯ ಮನವೊಲಿಸಲು ಧ್ವನಿಸುವ ಮತ್ತಿತರ ಚಿಕ್ಕ-ಪುಟ್ಟ ಕಪ್ಪೆಗಳು, ಇರಲಿ ಈ ಲೇಖನಕ್ಕೆ ಮೂಲವಾದ ಸಿಕಾಡಗಳ ಬಗ್ಗೆ ಒಂದಿಷ್ಟು ತಿಳಿಯೋಣ.
ಸಿಕಾಡವೆಂಬುದು ಒಂದು ಜಾತಿಯ ಕೀಟ. ದಟ್ಟಾರಣ್ಯಗಳಲ್ಲಿ ಮಳೆಗಾಲದ ಹೊತ್ತಿನಲ್ಲಿ ಇದರ ಕೂಗನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಮರದ ತೊಗಟೆಯ ಮೇಲೆ ಕುಳಿತ ಇದನ್ನು ಪತ್ತೆ ಹಚ್ಚಿ ನೋಡುವುದು ಕಷ್ಟ. ಹೊಟ್ಟೆಯ ಕೆಳಭಾಗದಲ್ಲಿರುವ ಟಿಂಬಲ್ ಎಂಬ ಅಂಗವನ್ನು ನಿರಂತರವಾಗಿ ಹಿಗ್ಗಿಸಿ-ಕುಗ್ಗಿಸಿ ಈ ಶಬ್ಧವನ್ನು ಹೊರಡಿಸುತ್ತದೆ. ಕೆಲವೊಂದು ಸಿಕಾಡಗಳ ಈ ಶಬ್ಧ 120 ಡೆಸಿಬಲ್‍ಗಳಷ್ಟಿರುತ್ತದೆ. ಅಂದರೆ ಮನುಷ್ಯನ ಶ್ರವಣದ ಗರಿಷ್ಟ ಮಿತಿ 80 ಡೆಸಿಬಲ್‍ಗಳು ಎಂದರೆ, ಸಿಕಾಡ ಹೊರಡಿಸುವ ಶಬ್ಧದ ತೀವ್ರತೆ ಅರ್ಥವಾಗುತ್ತದೆ. ತಾಂತ್ರಿಕವಾಗಿ 120 ಡೆಸಿಬಲ್‍ನಷ್ಟು ಶಬ್ಧವನ್ನು ಸಿಕಾಡವು ಹೊರಡಿಸುತ್ತದಾದರೂ, ಸಿಕಾಡದ ಸಂಗೀತದಿಂದ ಕಿವುಡಾದ ಯಾರೊಬ್ಬರ ಉದಾಹರಣೆಯೂ ಸಿಗುವುದಿಲ್ಲ. 2,500 ವಿವಿಧ ಜಾತಿಗಳಿರುವ ಈ ಕುಟುಂಬದ ಕೆಲವು ಸಿಕಾಡಗಳು ರೆಕ್ಕೆಯಿಂದ ಶಬ್ಧವನ್ನು ಹೊರಡಿಸುವ ಸಾಮಥ್ರ್ಯ ಹೊಂದಿವೆ. ಈ ಮೊದಲೇ ಹೇಳಿದಂತೆ, ಗಂಡು ಕೀಟ ಹೆಣ್ಣು ಕೀಟವನ್ನು ಆಕರ್ಷಿಸಲು ಈ ಶಬ್ಧವನ್ನು ಹೊರಡಿಸುತ್ತದೆ. ಮಿಲನದ ನಂತರದಲ್ಲಿ ಹೆಣ್ಣು ಕೀಟ ಅಕ್ಕಿಕಾಳಿನ ಗಾತ್ರದ ಮೊಟ್ಟೆಯನ್ನು ಮರದ ತೊಗಟೆಯಲ್ಲಿ ಇಡುತ್ತದೆ. ಮೊಟ್ಟೆಯಿಂದ ಹೊರಬರುವ ಮರಿ ಥೇಟ್ ಗೆದ್ದಲು ಹುಳುವಿನಂತೆ ಇರುತ್ತದೆ ಮತ್ತು ಮರದ ಟೊಂಗೆಯ ರಸವನ್ನು ಹೀರಿ ಬದುಕುತ್ತದೆ. ಈ ತರಹ ಮರದ ಟೊಂಗೆಯ ರಸ ಹೀರುವುದರಿಂದ ಆ ಭಾಗದ ಚಿಕ್ಕ ಟೊಂಗೆಗಳು ಕೆಲವೊಮ್ಮೆ ಒಣಗಿಹೋಗುತ್ತವೆಯಾದರೂ, ಇಡೀ ಮರಕ್ಕೆ ಧಕ್ಕೆಯಾದ ಉದಾಹರಣೆಗಳಿಲ್ಲ.
ಒಂದು ಬಾರಿ ಮರದ ರಸ ಹೀರಿ ಮರಿಯಲ್ಲಿ ಚಲನೆ ಕಾಣಿಸಿಕೊಂಡ ನಂತರದಲ್ಲಿ ಅದು ಮರದಿಂದ ನೆಲಕ್ಕೆ ಬೀಳುತ್ತದೆ. ಇನ್ನು ಅದರ ಊಟ ಮರಗಳ ಬೇರಿನಲ್ಲಿ. ನೆಲಕ್ಕೆ ಬಿದ್ದ ಮರಿ ಅಲ್ಲೇ ಮಣ್ಣಿನಲ್ಲಿ ಬೇರು ಸಿಗುವವರೆಗೂ ಹೊಂಡ ತೋಡುತ್ತದೆ. ಒಮ್ಮೆ ಬೇರು ಸಿಕ್ಕನಂತರ ಬೇರಿನ ರಸವನ್ನು ಹೀರುತ್ತಾ, ಬೇರನ್ನು ತಿನ್ನುತ್ತಾ 17 ವರ್ಷ ಭೂಗತವಾಗಿಯೇ ಇರುತ್ತದೆ. ಕೆಲವೊಂದು ಜಾತಿಯ ಸಿಕಾಡಗಳು 2 ವರ್ಷಕ್ಕೆ ನೆಲದಿಂದ ಎದ್ದು ಬಂದರೆ ಇನ್ನು ಕೆಲವು ಜಾತಿ 13 ವರ್ಷ ತೆಗೆದುಕೊಳ್ಳುತ್ತವೆ. ಭೂಗತವಾಗಿ ಇರುವಷ್ಟು ವರ್ಷಗಳು ಕೀಟಗಳ ಬಾಲ್ಯಾವಸ್ಥೆ ಎನ್ನಬಹುದು. ಒಮ್ಮೆ ನೆಲದಿಂದ ಮೇಲೆ ಬಂದಿತೆಂದರೆ ಅದು ಯೌವನಾವಸ್ಥೆಗೆ ಬಂದಿತೆಂದೇ ಅರ್ಥ. ಮೇಲೆ ಬಂದ ಕೀಟಕ್ಕೆ ರೆಕ್ಕೆಗಳು ಇರುವುದಿಲ್ಲ. ನೆಲದಿಂದ ಮೇಲೆ ಬರುವ ಮರಿ ಸಿಕಾಡ, ಮರದ ತೊಗಟೆಯ ಮೇಲೆ ಕುಳಿತು ಹಳೆಯ ಚರ್ಮವನ್ನು ಅಥವಾ ಪೊರೆಯನ್ನು ಕಳಚುವುದರ ಮೂಲಕ ತನ್ನ ಜೀವನದ ಇನ್ನೊಂದು ಚಕ್ರವನ್ನು ಪೂರೈಸಿ, ಹೊಸ ಜೀವನಕ್ಕೆ ಕಾಲಿಡುತ್ತದೆ. ಇದು ಈಗ ರೆಕ್ಕೆ ಮೂಡುವ ಹೊತ್ತು, ಒಂದು ರೆಕ್ಕೆ ಮೂಡಿತೆಂದರೆ, ಅದು ಮಿಲನ ಸಿದ್ಧತೆಗೆ ಅಣಿಯಾಗಿದೆ ಎನ್ನಬಹುದು.
ವಿಚಿತ್ರವೆಂದರೆ, ಹದಿನೇಳು ಅಥವಾ ಹದಿಮೂರು ವರ್ಷಗಳ ದೀರ್ಘ ಬಾಲ್ಯಾವಸ್ಥೆಯನ್ನು ಹೊಂದಿರುವ ಸಿಕಾಡದ ಯೌವಾನವಸ್ಥೆ ಮಾತ್ರ 3-4 ತಿಂಗಳು ಮಾತ್ರ, ಈ ಹೊತ್ತಿನಲ್ಲಿ ಹೆಣ್ಣು ಕೀಟದೊಡನೆ ಮಿಲನವಾಗಿ ತನ್ನ ಜೀವನ ಚಕ್ರವನ್ನು ಪೂರೈಸುತ್ತದೆ. ತನ್ಮಧ್ಯೆ ಒಂದು ಬಾರಿ ರೆಕ್ಕೆ ಸಮೇತದ ದೇಹವನ್ನೂ ಕಳಚಿ ಮರುಜೀವ ಪಡೆಯುತ್ತದೆ. ಮಲೆನಾಡಿನ ಕಾಡಿನಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ಮರಕ್ಕೆ ಅಂಟಿಕೊಂಡ ಬೆನ್ನು ಭಾಗದಲ್ಲಿ ಸೀಳಾದ ಸಿಕಾಡದ ದೇಹವನ್ನು ಕಾಣಬಹುದು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವರು, ಸಿಕಾಡವು ಕೂಗಿ-ಕೂಗಿ ಹೊಟ್ಟೆಯೊಡೆದು ಸತ್ತು ಹೋಗಿದೆ ಎಂದು ತಿಳಿಯುತ್ತಾರೆ. ಅಂಟಾರ್ಕಿಟಾ ಹೊರತು ಪಡಿಸಿ ಪ್ರಪಂಚದಲ್ಲ ಎಲ್ಲಾ ಭಾಗಗಳಲ್ಲೂ ಸಿಕಾಡ ಕುಟುಂಬಗಳಿವೆ. ಮಲೇಷ್ಯಾ ಹಾಗೂ ಅಮೇರಿಕಾದಲ್ಲಿ ಇವುಗಳ ಸಂಖ್ಯೆ ಹೆಚ್ಚು ಎಂದು ಕೀಟಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. ಯಥಾಪ್ರಕಾರ ಭಾರತದ ಕಾಡುಗಳ ವೈವಿಧ್ಯದ ಪೂರ್ಣ ಅಧ್ಯಯನ ಸಾಧ್ಯವಾಗಿಲ್ಲವಾದ್ದರಿಂದ, ಮಳೆಗಾಲದಲ್ಲಿ ನಮ್ಮಲ್ಲಿ ಬರುವ ಎಲ್ಲಾ ಅತಿಥಿಗಳಂತೆ ಸಿಕಾಡವೂ ಅಷ್ಟಾಗಿ ಗಮನಸೆಳೆಯದ ಮಳೆಗಾಲದ ಅತಿಥಿಯಷ್ಟೇ ಆಗಿದೆ.
ಇಷ್ಟೆಲ್ಲಾ ವಿವರಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ಲೇಖನ ತಯಾರಾದ ಮೇಲೆ ಮಡದಿಗೆ ತೋರಿಸಿದೆ. ಮತ್ತೇ ಕಣ್ಣರಳಿಸಿ ಹೌದಾ ಎಂದು ಆಶ್ಚರ್ಯ ತೋರಿ, ಮರಗೆಸದಿಂದ ಮಾಡಿದ ಬಿಸಿ-ಬಿಸಿಯಾದ ಪತ್ರೊಡೆ ಗುಡ್ಡವನ್ನು ಮುಂದಿಟ್ಟಳು. ಅದಕ್ಕೆ ಸ್ವಲ್ಪ ಬೆಣ್ಣೆ ಸವರಿ ಚಪ್ಪರಿಸಿದೆ ಎಂದರೆ ಓದುಗರಿಗೆ ಹೊಟ್ಟೆಕಿಚ್ಚು ಆಗದು ಎಂಬ ಭದ್ರ ನಂಬಿಕೆಯೊಂದಿಗೆ.
******
ಮಳೆಗಾಲದ ಅತಿಥಿಯನ್ನು ಚೆನ್ನಾಗಿ ಪರಿಚಯ ಮಾಡ್ಕೊಟ್ರಿ..:) ಪತ್ರೊಡೆ ನೆನಪಿಸಿದ್ದರ ಜೊತೆಗೆ ಆಟಿ ತಿಂಗಳು ಬೇರೆ.. ನಾನು ಹೊರಟೆ ಕೆಸುವಿನ ಎಲೆ ತರಲು..
ಧನ್ಯವಾದಗಳು ಅನಿತಾಜೀ