ಸಿಂಗಿನ್ ಇನ್ ದ ರೈನ್:ವಾಸುಕಿ ರಾಘವನ್ ಅಂಕಣ


ಜಾಗತಿಕ ಸಿನಿಮಾಗಳಲ್ಲಿ “ಮ್ಯೂಸಿಕಲ್” ಅನ್ನುವ ಪ್ರತ್ಯೇಕ ಪ್ರಕಾರವುಂಟು. ಅದರ ವಿಶೇಷವೆಂದರೆ ಚಿತ್ರಗಳಲ್ಲಿ ಹೆಚ್ಚಾಗಿ ಹಾಡು-ಕುಣಿತದ ಬಳಕೆ. ಹಲವು ಬಾರಿ ಈ ಹಾಡುಗಳು ಪಾತ್ರಗಳನ್ನು ಪರಿಚಯಿಸಲೋ ಅಥವಾ ಕಥೆಯನ್ನು ಮುಂದುವರಿಸಲೋ ಸಹಾಯ ಮಾಡಿದರೆ, ಕೆಲವು ಸಲ ಕಥೆಗೆ ಸಂಬಂಧವಿರದಿದ್ದರೂ ಬರೀ ರಂಜನೆಯ ದೃಷ್ಟಿಯಿಂದ ಇರುತ್ತದೆ. ಭಾರತೀಯ ಚಿತ್ರಗಳನ್ನು ನೋಡಿ ಬೆಳೆದಿರುವವರಿಗೆ ಇದೂ ಒಂದು ಚಿತ್ರಪ್ರಕಾರವೇ ಅಂತ ತಮಾಷೆಯಾಗಿ ಕಾಣಬಹುದು. ನಮ್ಮ ಸಿನಿಮಾಗಳಲ್ಲಿ ಹಾಡು-ಕುಣಿತ ಅಷ್ಟೊಂದು ಅವಿಭಾಜ್ಯ ಅಂಗಗಳಾಗಿವೆ. ಅವಿಲ್ಲದೆಯೂ ಚಿತ್ರಗಳನ್ನು ಮಾಡಬಹುದು ಅನ್ನುವ ಆಲೋಚನೆಗಳೂ ಕೂಡ ಇತ್ತೀಚಿನವರೆಗೆ ಅಪರೂಪವಾಗಿದ್ದವು.

ಭಾರತೀಯ ಸಿನಿಮಾಗಳು ನಾಟಕಗಳ ಮುಂದುವರಿದ ಭಾಗಗಳಂತೆ ಬಂದವು. ಆಯ್ದುಕೊಳ್ಳುವ ವಸ್ತುಗಳು, ನಿರೂಪಣಾ ಶೈಲಿ, ತಾಳುವ ನಿಲುವುಗಳು – ಇವ್ಯಾವುದರಲ್ಲೂ ಸಿನಿಮಾಗಳು ತಮ್ಮದೇ ಆದ ವಿಭಿನ್ನವಾದ ದನಿಯನ್ನು ಹೊರಡಿಸಲಿಲ್ಲ. ಈ ಪ್ರಭಾವ ಎಷ್ಟು ಜೋರಾಗಿದೆ ಅಂದರೆ, ಇವತ್ತಿಗೂ ಈ ವ್ಯಾಕರಣ ಬದಲಾಗಿಲ್ಲ. ಜಾಗತಿಕ ಮಟ್ಟದಲ್ಲೂ ಮೊಟ್ಟಮೊದಲ ಸಿನಿಮಾಗಳು ಥಿಯೇಟರ್ ಪ್ರಭಾವದಿಂದ ಮಾಡಲ್ಪಟ್ಟಿದ್ದವು. ಅದರ ಅತಿದೊಡ್ಡ ಉದಾಹರಣೆ ಈ “ಮ್ಯೂಸಿಕಲ್” ಚಿತ್ರಗಳು. ಆದರೆ ಅಲ್ಲಿನ ಸಿನಿಮಾಗಳು ಬಹುಬೇಗ ಥಿಯೇಟರ್ ಛಾಯೆಯಿಂದ ಹೊರಬಂದು ತಮ್ಮದೇ ಆದ ವ್ಯಾಕರಣ ಕಂಡುಕೊಂಡವು. ಆದರೂ ಸಿನಿಮಾ ಹಾಗು ಥಿಯೇಟರ್ ಎಂಬೆರಡು ಕಲಾಪ್ರಕಾರಗಳ ನಡುವೆ ಕೊಂಡಿಯಾಗಿ ಇವತ್ತಿಗೂ ಉಳಿದುಕೊಂಡಿರುವುದು “ಮ್ಯೂಸಿಕಲ್” ಚಿತ್ರಗಳು.

“ಮ್ಯೂಸಿಕಲ್” ನನ್ನ ನೆಚ್ಚಿನ ಚಿತ್ರಪ್ರಕಾರವಲ್ಲ. ಆದರೂ “ಸಿಂಗಿನ್ ಇನ್ ದ ರೈನ್” ನನಗೆ ತುಂಬಾ ಪ್ರಿಯವಾದ ಚಿತ್ರಗಳಲ್ಲಿ ಒಂದು. ಚಿತ್ರದ ಕಥೆ ಮೂಕೀ ಚಿತ್ರಗಳ ಕಾಲದ್ದು. ಡಾನ್ ಲಾಕ್ವುಡ್ ಮೂಕೀ ಚಿತ್ರಗಳ ಪ್ರಸಿದ್ಧ ನಾಯಕ. ಲೀನಾ ಲೆಮಾಂಟ್ ಮತ್ತು ಅವನದು ಬೆಳ್ಳಿತೆರೆಯ ಯಶಸ್ವೀ ಜೋಡಿ. ಲೀನಾಳಿಗೆ ಡಾನ್ ಮೇಲೆ ಪ್ರೀತಿ, ಆದರೆ ಡಾನ್ ಗೆ ಲೀನಾಳನ್ನು ಕಂಡರೆ ಅಷ್ಟಕ್ಕಷ್ಟೇ. ಅಚಾನಕ್ಕಾಗಿ ಕ್ಯಾತಿ ಅನ್ನು ಭೇಟಿಯಾಗುವ ಡಾನ್ ಮೊದಲ ನೋಟದಲ್ಲೇ ಅವಳಿಗೆ ಮನಸೋಲುತ್ತಾನೆ. ಸ್ವಲ್ಪ ಸಮಯ ನಂತರ ಆಕೆಯೂ ಡಾನ್ ಅನ್ನು ಇಷ್ಟಪಡುತ್ತಾಳೆ. ಅಷ್ಟರಲ್ಲಿ ವಾಕ್ಚಿತ್ರಗಳ ಧಾಳಿ ಶುರುವಾಗಿರುತ್ತದೆ. ಮೊದಮೊದಲು “ಮಾತುಗಳಿರುವ ಸಿನಿಮಾಗಳನ್ನು ಯಾರು ತಾನೆ ನೋಡುತ್ತಾರೆ” ಅಂತ ಎಲ್ಲರೂ ಅಂದುಕೊಂಡರೂ, ಒಂದು ವಾಕ್ಚಿತ್ರ ಜನರ ಮನ್ನಣೆ ಗಳಿಸುತ್ತಿದ್ದಂತೆ ಡಾನ್ ಮತ್ತು ಲೀನಾ ನಟಿಸುತ್ತಿರುವ ಮೂಕೀ ಚಿತ್ರವನ್ನು ವಾಕ್ಚಿತ್ರವನ್ನಾಗಿ ಮಾಡಲು ನಿರ್ಧರಿಸುತ್ತಾರೆ. ಈ ಬದಲಾವಣೆ ಹಲವಾರು ತಮಾಷೆಯ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಡಬ್ಬಿಂಗ್ ಮಾಡಿ ಅಭ್ಯಾಸವಿರದಿದ್ದರಿಂದ ಮಾತುಗಳಿಗೂ, ದೃಶ್ಯಕ್ಕೂ ತಾಳೆಯಾಗುವುದಿಲ್ಲ. ದೃಶ್ಯಗಳನ್ನು ಚಿತ್ರೀಕರಿಸುವಾಗ ಮೈಕ್ ಎಲ್ಲಿ ಇಡಬೇಕು ಅನ್ನುವುದು ದೊಡ್ಡ ಸಮಸ್ಯೆ ಆಗುತ್ತದೆ. ಬಟ್ಟೆಯೊಳಗೆ ಮೈಕ್ ಇಟ್ಟುಕೊಂಡರೆ, ನಟಿಸುವಾಗ ತಲೆಯನ್ನು ಅತ್ತಿತ್ತ ಆಡಿಸಿದರೆ ಶಬ್ದ ಹೆಚ್ಚು ಕಮ್ಮಿ ಆಗುತ್ತದೆ. ಗಿಡಗಳ ಸಂದಿಯಲ್ಲಿ ಮೈಕ್ ಇಟ್ಟರೆ, ಬೇರೆ ಬೇರೆ ಸದ್ದುಗಳೂ ರೆಕಾರ್ಡ್ ಆಗುತ್ತವೆ. ಡಾನ್ ಒಂದಷ್ಟು ತರಬೇತಿಯ ನಂತರ ವಾಕ್ಚಿತ್ರಕ್ಕೆ ಒಗ್ಗಿಕೊಳ್ಳುತ್ತಾನೆ. ಆದರೆ ಲೀನಾಳ ಕರ್ಕಶ ಧ್ವನಿ ಚಿತ್ರಕ್ಕೆ ದೊಡ್ಡ ಸವಾಲಾಗಿಬಿಡುತ್ತದೆ. ಮೂಕೀ ಚಿತ್ರಗಳಲ್ಲಿ ಅವಳನ್ನು ಮೆಚ್ಚಿಕೊಂಡ ಅಭಿಮಾನಿಗಳಿಗೆ ನಿರಾಶೆಯಾಗಬಾರದು ಅಂತ, ಡಾನ್ ಸುಮಧುರ ಕಂಠದ ಕ್ಯಾತಿಯನ್ನು ಲೀನಾಳಿಗೆ ಡಬ್ ಮಾಡಲು ಒಪ್ಪಿಸುತ್ತಾನೆ.

ಸಿನಿಮಾ ಅನ್ನುವುದು ನಿಜಕ್ಕೂ ಒಂದು ಮಾಯಾಲೋಕ. 1920ರ ಆಸುಪಾಸಿನ ಸಮಯದ ಕಥೆಯನ್ನು ಆಧರಿಸಿ ಬಂದ ಈ 1952ರ ಚಿತ್ರವನ್ನು ನಾವು 2013ರಲ್ಲೂ ನೋಡಿ ಆನಂದಿಸಬಹುದು. ಕಾಲ, ಸ್ಥಳ ಎಲ್ಲವನ್ನೂ ದಾಟಿದ ಅನುಭವ, ಟೈಮ್ ಮಷೀನ್ ಸಹಾಯವಿಲ್ಲದೇ! ಎಲ್ಲಾ ಮ್ಯೂಸಿಕಲ್ ಚಿತ್ರಗಳಂತೆ, ಇದರಲ್ಲೂ “ನಾಟಕೀಯ” ಅನ್ನಿಸುವಂತಹ ನಟನೆ ಮತ್ತು ಪಾತ್ರಗಳಿವೆ. ಆದರೆ ಚಿತ್ರ ಇಷ್ಟವಾಗಲು ಕಾರಣ, ಇದು ಅಂತಹ ಕಾಲಘಟ್ಟದ ಸಿನಿಮಾಗಳ ನೈಜ ಚಿತ್ರಣವೂ ಆಗಿರುವುದರಿಂದ. ಇದು “ಮ್ಯೂಸಿಕಲ್” ಚಿತ್ರಗಳ ಸುವರ್ಣಯುಗವನ್ನು ಬಿಂಬಿಸಿರುವ “ಮ್ಯೂಸಿಕಲ್” ಚಿತ್ರವೂ ಹೌದು! ಚಿತ್ರದಲ್ಲಿನ ಹಾಡುಗಳೂ, ಕುಣಿತಗಳೂ ಅಷ್ಟೇ ಸೊಗಸಾಗಿವೆ!

ಮ್ಯೂಸಿಕಲ್ ಚಿತ್ರಗಳ ಪಾತ್ರಗಳಲ್ಲಿ ಸಂಕೀರ್ಣತೆ ಇರುವುದಿಲ್ಲ. ನಿರೂಪಣೆಯಲ್ಲಿ ಪ್ರಯೋಗಗಳಾಗುವುದು ಕಡಿಮೆ. ಪಾತ್ರಗಳೂ ಸನ್ನಿವೇಶಗಳೂ ಸ್ವಲ್ಪ “ಫಿಲ್ಮಿ” ಅನ್ನಿಸುವ ಸಾಧ್ಯತೆಗಳೂ ಇವೆ. ಹಾಗಾಗಿ ಕೆಲವರಿಗೆ ಈ ಚಿತ್ರಪ್ರಕಾರ ಇಷ್ಟವೇ ಆಗದಿರಬಹುದು. “ಇದೇನಿದು ಇದ್ದಕ್ಕಿದ್ದಂತೆ ಹೋ ಅಂತ ಹಾಡಲು ಶುರು ಮಾಡಿಕೊಂಡರು” ಅನ್ನಿಸುತ್ತದೆ. ಸಿನಿಮಾಗಳಲ್ಲಿ ಸರಳತೆಯನ್ನು ಬಯಸುವವರಿಗೆ ಬಹಳ ಇಷ್ಟವೂ ಆಗುತ್ತದೆ. ಇದರ ಸೀಮಿತತೆಯೇ ಇದರ ಚಾರ್ಮ್ ಕೂಡ!

ಇನ್ನೊಂದು ವಿಚಾರದಲ್ಲಿ “ಮ್ಯೂಸಿಕಲ್” ಚಿತ್ರಗಳು ಮುಖ್ಯ ಅಂತ ನನಗೆ ಅನ್ನಿಸುತ್ತದೆ. ಚಿಕ್ಕವಯಸ್ಸಿನ ಮಕ್ಕಳಿರುವ ಚಿತ್ರಪ್ರೇಮಿಗಳಿಗೆ ಇದೊಂದು ಗೊಂದಲ ಸದಾ ಕಾಡುತ್ತಿರಬಹುದು. ಅತ್ಯುತ್ತಮವಾಗಿದ್ದರೂ ಯಾವ ಚಿತ್ರಗಳನ್ನು ಮಕ್ಕಳಿಗೆ ಯಾವ ಹಂತದಲ್ಲಿ ಪರಿಚಯಿಸಬಹುದು, ಒಳ್ಳೆಯ ಚಿತ್ರಗಳಲ್ಲೂ ಆಯಾ ವಯಸ್ಸಿನ ಮಕ್ಕಳಿಗೆ ಸರಿಬರದ ಅಂಶಗಳಿದ್ದರೆ ಅನ್ನುವ ಯೋಚನೆ ಇದ್ದೇ ಇರುತ್ತದೆ. ಕೇವಲ “ರೇಟಿಂಗ್ ಸಿಸ್ಟಮ್” ಅನ್ನು ಆಧರಿಸಲು ಆಗುವುದಿಲ್ಲ. “ಮ್ಯೂಸಿಕಲ್” ಚಿತ್ರಗಳು ಆಗ ಸಹಾಯಕ್ಕೆ ಬರುತ್ತವೆ. ತಿಳಿಹಾಸ್ಯ, ಹಾಡು-ಕುಣಿತ, ಸರಳ ಕಥೆ ನಿರೂಪಣೆಯಿದ್ದು ಮಕ್ಕಳಿಗೆ ಇಷ್ಟವಾಗುವ ಸಾಧ್ಯತೆ ಹೆಚ್ಚು; ಯಾವುದೇ ಆಕ್ಷೇಪಾರ್ಹ ಅಂಶಗಳು ಇರುವುದಿಲ್ಲ ಅನ್ನುವ ಸಮಾಧಾನವೂ ಇರುತ್ತದೆ. ಆ ದೃಷ್ಟಿಯಿಂದ ಇದು ನಾನು ಮೆಚ್ಚುವ ಚಿತ್ರಪ್ರಕಾರವೂ ಹೌದು!


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x