ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ: ಉದಯ ಪುರಾಣಿಕ

Udaya Puranika
ಪ್ರಾಚೀನ ಕರ್ನಾಟಕದ ಪ್ರಮುಖ ಅಗ್ರಹಾರಗಳಲ್ಲಿ ಕುಕನೂರು ಕೂಡಾ ಒಂದಾಗಿತ್ತು. ಶಾಸನಗಳ ಪ್ರಕಾರ “ಶ್ರೀಮನ್ಮಹಾಗ್ರಾರ ಕುಕ್ಕನೂರು” ಎಂದು ಕರೆಯುವ ಈ ಅಗ್ರಹಾರದ ಉತ್ತರದಲ್ಲಿ ಸುಮಾರು ಒಂದು ಮೈಲಿ ದೂರದಲ್ಲಿ ದ್ಯಾಂಪುರ (ದೇವಿಪುರ)ವನ್ನುವ ಪುಟ್ಟ ಗ್ರಾಮವಿದೆ. ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲೂಕಿನಲ್ಲಿರುವುದು ಈ ದ್ಯಾಂಪುರ.

ಕನ್ನಡ ಭಾಷೆಯಲ್ಲಿ 12 ಪುರಾಣಗಳನ್ನು ರಚಿಸಿರುವ, ವೇದಾಂತಿ, ದಾರ್ಶನಿಕ ಮತ್ತು ಪ್ರಸಿದ್ಧ ಪ್ರವಚನಕಾರರಾದ ಚೆನ್ನಕವಿಗಳು ಮತ್ತು ಅವರ ಅಣ್ನನ ಮಗನಾದ ಕವಿರತ್ನ ಕಲ್ಲಿನಾಥ ಶಾಸ್ತ್ರಿ ಪುರಾಣಿಕರವರು ಕನ್ನಡ ನಾಡು-ನುಡಿಗಾಗಿ ಅವಿರತ ಮತ್ತು ಅನುಪಮ ಸೇವೆಯನ್ನು ಸಲ್ಲಿಸಿದವರಾಗಿದ್ದಾರೆ. ವೇದೋಪನಿಷತ್ತು, ಕಾವ್ಯ, ಪುರಾಣ, ಶಾಸ್ತ್ರಗಳಲ್ಲಿ ಪಾಂಡಿತ್ಯ ಹೊಂದಿದ್ದ ಕಲ್ಲಿನಾಥ ಶಾಸ್ತ್ರಿಗಳು, ಕನ್ನಡ ಶಾಲೆಯನ್ನು ತೆರೆಯಲು ಹೈದರಾಬಾದು ನಿಜಾಮನ ಸರ್ಕಾರದ ವಿರೋಧವಿದ್ದರೂ, ಸಂಗನಾಳದಲ್ಲಿ ಕನ್ನಡ ಶಾಲೆಯನ್ನು ತೆರೆದು ನೆಡೆಸಿದವರು, ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಮಕ್ಕಳಿಗೆ ಉಚಿತವಾಗಿ ಈ ಕನ್ನಡ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಸಾಮಾಜಿಕ ಪಿಡುಗಗಳ ವಿರೋಧಿಯಾಗಿ, ಆರ್ಯುವೇದ ಪಂಡಿತರಾಗಿ, 8 ಪುರಾಣಗಳನ್ನು ರಚಿಸಿದವರಾಗಿ, ನಾಟಕಗಳು ಮತ್ತು ರಂಗ ಗೀತೆಗಳನ್ನು ರಚಿಸಿದವರಾಗಿ ಕರ್ನಾಟಕದಲ್ಲಿ ಜನಪ್ರಿಯರಾದವರು ಕಲ್ಲಿನಾಥ ಶಾಸ್ತ್ರಿ ಪುರಾಣಿಕರು. ಇವರ ಎರಡನೆಯ ಮಗನಾಗಿ, 8 ಮಾರ್ಚ 1928ರಂದು ದ್ಯಾಂಪುರದಲ್ಲಿ ಜನಿಸಿದವರು ಅನ್ನದಾನಯ್ಯ ಪುರಾಣಿಕರವರು.

Annadanayya Puranik

ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ ವಿದ್ಯಾರ್ಥಿಗಳ ಮುಖಂಡನಾಗಿದ್ದ ಅನ್ನದಾನಯ್ಯನವರು, ಮಹಾತ್ಮಾ ಗಾಂಧೀಜಿಯವರ ಕರೆಗೆ ಓಗೋಟ್ಟು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಅಂದು ಖಾದಿ ಧರಿಸಿ, ಗಾಂಧಿವಾದಿಯಾದ ಅವರು ತಮ್ಮ ಕೊನೆಯ ಉಸಿರಿನವರೆಗೂ ಖಾದಿ ಮತ್ತು ಗಾಂಧಿವಾದವನ್ನು ಪಾಲಿಸಿದವರು.  ಕೊಪ್ಪಳ ಜಿಲ್ಲೆಯಲ್ಲಿ ಚಲೇ ಜಾವ್ ಚಳುವಳಿ ನೆಡೆಸಿದ್ಧಕ್ಕಾಗಿ ಅನ್ನದಾನಯ್ಯನವರನ್ನು ಪೋಲಿಸರು ದಸ್ತಗಿರಿ ಮಾಡಿ, ಚಿತ್ರಹಿಂಸೆ ನೀಡಿದರು. ಪೋಲಿಸರಿಂದ ಬಿಡುಗಡೆಯಾದ ನಂತರ ಅನ್ನದಾನಯ್ಯವರು ಹೈದರಾಬಾದಿನಲ್ಲಿ ತಮ್ಮ ಶಿಕ್ಷಣ ಮುಂದುವರೆಸಿದರು. 15 ಆಗಷ್ಟ್ 1947ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತರೆ, ಹೈದರಾಬಾದಿನ ನಿಜಾಮ ಸ್ವತಂತ್ರ ರಾಷ್ಟ್ರವಾಗಿರಲು ಬಯಸಿದ. ನಿಜಾಮನ ಪೋಲಿಸರು ಮತ್ತು ರಜಾಕಾರರ ದಾಳಿಯಿಂದ ರಕ್ಷಿಸಿಕೊಳ್ಳಲು ಸಾವಿರಾರು ಕುಟುಂಬಗಳು ಹೈದರಾಬಾದಿನಿಂದ ವಲಸೆ ಹೊರಟವು. ಹೈದರಾಬಾದು ಪ್ರಾಂತ್ರ್ಯ ವಿಮೋಚನೆಗೊಳಿಸಿ, ಭಾರತದೊಡನೆ ವಿಲೀನಗೊಳಿಸಬೇಕು ಎಂದು ಕರ್ನಾಟಕದಲ್ಲಿ ನೆಡೆದ ಹೋರಾಟದಲ್ಲಿ ಪ್ರಮುಖ ಸ್ಥಾನವನ್ನು ಮುಂಡರಗಿ ಶಿಬಿರ ಪಡೆದಿದೆ. ಈ ಶಿಬಿರದಿಂದ ಹೋರಾಟ ಪ್ರಾರಂಭಿಸಿ, 17 ಸೆಪ್ಟೆಂಬರ್ 1948ರಂದು ಹೈದರಾಬಾದು ಪ್ರಾಂತ್ಯವು ಭಾರತದೊಡನೆ ವಿಲೀನವಾಗಲು ಅನ್ನದಾನಯ್ಯನವರ ನಾಯಕತ್ವ ಮತ್ತು ಹಗಲಿರಳು ನೆಡೆಸಿದ ಹೋರಾಟ ಪ್ರಮುಖ ಕಾರಣವಾಗಿದೆ. ನಿಜಾಮ್ ಪೋಲಿಸರು ಮತ್ತು ರಜಾಕಾರರ ಪ್ರಮುಖ ನೆಲೆಗಳಲ್ಲಿ ಒಂದಾಗಿದ್ದ ಕುಕನೂರು ಠಾಣೆಯ ಮೇಲೆ ತಮ್ಮ ಸಹಚರರೊಂದಿಗೆ ದಾಳಿ ನೆಡೆಸಿದ ಅನ್ನದಾನಯ್ಯನವರು ಗೆಲವು ಸಾಧಿಸಿದ್ದು ಹೈದರಾಬಾದು ಸಂಸ್ಥಾನದಲ್ಲಿ ಸಂಚಲನವುಂಟು ಮಾಡಿತ್ತು. ನಿಜಾಮನ ಅಡಳಿತದಿಂದ 35 ಹಳ್ಳಿಗಳನ್ನು ಬಿಡುಗಡೆ ಮಾಡಿ, ಭಾರತದ ಧ್ವಜ ಹಾರಿಸಿದಾಗ ಅನ್ನದಾನಯ್ಯನವರ ಸಾಹಸವನ್ನು ರಾಷ್ಟ್ರೀಯ ಪತ್ರಿಕೆಗಳೂ ಕೊಂಡಾಡಿದವು. ಹೈದರಾಬಾದು ಪ್ರಾಂತ್ಯ ವಿಮೋಚನೆಯ ಹೋರಾಟದ ನಂತರ ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದರು. 7-4-1953ರಂದು ಹುಬ್ಬಳ್ಳಿಯಲ್ಲಿ ಅವರು ಏಕೀಕರಣದ ಪರವಾಗಿ ನೆಡೆಸಿದ ಬೃಹತ್ ಮತ್ತು ಶಾಂತಿಯುತ ಪ್ರತಿಭಟನೆ ಏಕೀಕರಣ ವಿರೋಧಿಗಳ ಬಾಯಿ ಮುಚ್ಚಿಸಿತ್ತು. ಅಮೇರಿಕಾದ ನ್ಯೂಯಾರ್ಕ ಟೈಮ್ಸ್ ಈ ಪ್ರತಿಭಟನೆ ಮತ್ತು ಅನ್ನದಾನಯ್ಯವರ ನಾಯಕತ್ವವನ್ನು ಮೆಚ್ಚಿ ಪ್ರಕಟಿಸಿತು. ಅನ್ನದಾನಯ್ಯನವರ ಜನಪ್ರಿಯತೆ ಸಹಿಸದ ಕಾಂಗ್ರೆಸ್ ನಾಯಕ ಹಳ್ಳಿಕೇರಿ ನೆಡೆಸಿದ ಪಿತೂರಿಯಿಂದಾಗಿ, ಪೋಲಿಸರು ಅನ್ನದಾನಯ್ಯನವರನ್ನು ಬಂಧಿಸಿದರು. ಸ್ವತಂತ್ರ ಭಾರತದಲ್ಲಿ ಏಕೀಕರಣಕ್ಕಾಗಿ ಹೋರಾಡಿದ ನಾಯಕ ಮತ್ತು ಸ್ವಾತಂತ್ರಹೋರಾಟಗಾರನನ್ನು ಬಂಧಿಸಿ 6 ದಿನಗಳ ಕಾಲ ಯಾವುದೇ ವಿಚಾರಣೆ ನೆಡೆಸದೆ ಸೆರೆಮನೆಯಲ್ಲಿರಿಸಿದ ಕುಖ್ಯಾತಿ ಕರ್ನಾಟಕ ಸರ್ಕಾರದ ಪಾಲಾಯಿತು. ಪೋಲಿಸರ ಕ್ರಮವನ್ನು ಖಂಡಿಸಿ, ಅನ್ನದಾನಯ್ಯನವರನ್ನು ನಿರ್ದೋಷಿಯಂದು ಕೋರ್ಟು ಬಿಡುಗಡೆ ಮಾಡಿದ ನಂತರ, ಅವರು ಮತ್ತೆ ಏಕೀಕರಣ ಹೋರಾಟ ಮುಂದುವರೆಸಿದರು. ಗಡಿ ಜಿಲ್ಲೆಗಳಾದ ಬೀದರ, ಗುಲ್ಪರ್ಗಾ, ಬಳ್ಳಾರಿ ಮತ್ತು ಚಾಮರಾಜನಾಗರಗಳ ಕನ್ನಡ ಪ್ರದೇಶಗಳು ಕರ್ನಾಟದಲ್ಲಿ ಉಳಿಯಲು ಅನ್ನದಾನಯ್ಯನವರು ಮಾಡಿದ ಹೋರಾಟವನ್ನು ಮತ್ತು ಏಕೀಕರಣ ಚಳುವಳಿಯ ನಾಯಕತ್ವವನ್ನು ಗೌರವಿಸಿ ಕರ್ನಾಟಕ ಸರ್ಕಾರವು 2006ರಲ್ಲಿ “ ಏಕೀಕರಣ ಸುವರ್ಣ ಪುರಸ್ಥಾರ” ಯನ್ನು ನೀಡಿದೆ. 

ರಾಜ್ಯವು ಕರ್ನಾಟಕ ಏಕೀಕರಣದ 60 ವರ್ಷಗಳ ಸಂಭ್ರಮ ಆಚರಣೆಯ ಸಂದರ್ಭದಲ್ಲಿ ಅನ್ನದಾನಯ್ಯನವರ ಕೊಡುಗೆಯನ್ನು ಕನ್ನಡಿಗರು ಸ್ಮರಿಸಬೇಕಾಗಿದೆ. 1960-68ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಅನ್ನದಾನಯ್ಯನವರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಪರಿಷತ್ತಿಗೆ ಸರ್ಕಾರದಿಂದ ವಾರ್ಷಿಕ ಅನುದಾನ ದೊರೆಯುವಂತೆ ಮಾಡಿದರು. ಕನ್ನಡ ನಿಘಂಟು ಮೊದಲ ಬಾರಿಗೆ ಮುದ್ರಣವಾಗಿದ್ದು ಇವರ ನಿರಂತರ ಪ್ರಯತ್ನದಿಂದಾಗಿ. ಪರಿಷತ್ತಿಗೆ ಗ್ರಂಥಾಲಯ, ಮುದ್ರಣಾಲಯ ಮತ್ತು ಸಭಾಮಂದಿರ ದೊರೆಯುವಲ್ಲಿ ಇವರು ಶ್ರಮಪಟ್ಟಿದ್ದಾರೆ. ಮಣಿಪಾಲ, ಗದಗ ಮತ್ತು ಬೀದರನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ,  ಬೆಂಗಳೂರು, ಬೀದರ ಮತ್ತು ಕಲ್ಬುರ್ಗಿಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಹಾಕವಿ ಕಾಳಿದಾಸ ಮಹೋತ್ಸವ, ಹೀಗೆ ಹಲವಾರು ಕಾರ್ಯಕ್ರಮಗಳನ್ನು ಅನ್ನದಾನಯ್ಯನವರು ಯಶಸ್ವಿಯಾಗಿ ನೆರವೇರಿಸಿದ್ದಾರೆ. 1966ರಿಂದ 1969ವರೆಗೆ ಭಾಷಾ ಆಯೋಗದ ಸದಸ್ಯ, 1971ರಿಂದ 1993ರವರೆಗೆ ಕರ್ನಾಟಕ ಗೆಝೆಟೀಯರ್ ಸಲಹಾ ಸಮಿತಿಯ ಸದಸ್ಯ, ಹೀಗೆ ಹಲವಾರು ಕನ್ನಡ ಪರ ಕೆಲಸಗಳನ್ನು ಅನ್ನದಾನಯ್ಯನವರು ಮಾಡಿದ್ದಾರೆ.

50 ವರ್ಷಗಳ ಕಾಲ ಹೈಕೋರ್ಟ ಹಿರಿಯ ನ್ಯಾಯವಾದಿಯಾಗಿದ್ದ ಅನ್ನದಾನಯ್ಯನವರು, ಮೈಸೂರು ಅರಸರಿಗೆ ಸೇರಿದ್ದ ಅನೇಕ ಆಸ್ತಿಗಳು ಭೂಗಳ್ಳರ ಪಾಲಾಗದಂತೆ ರಕ್ಷಿಸಿದ್ದಾರೆ. 1964ರಿಂದ 1991ರವರೆಗೆ ಬಸವ ಸಮಿತಿಯ ಸಂಸ್ಥಾಪಕರಾಗಿ ಮತ್ತು ದತ್ತಿಯ ಗೌರವ ಕಾರ್ಯದರ್ಶಿಯಾಗಿದ್ದ ಅನ್ನದಾನಯ್ಯನವರು, ಬೆಂಗಳೂರಿನ ಬಸವ ಭವನ ನಿರ್ಮಾಣ, ಕೆಂಗೇರಿ ಬಳಿಯ ಬಸವಾಶ್ರಮ ಸ್ಥಾಪನೆ, ರಷ್ಯನ್ ಮತ್ತು  ಭಾರತದ ಪ್ರಮುಖ ಭಾಷೆಗಳಲ್ಲಿ ವಚನಗಳ ಮುದ್ರಣ, ಕೇರಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಬಸವ ತತ್ವ ಪ್ರಚಾರ ಮಾಡಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಯ ವಿದ್ವಾಂಸರಾದ ಅನ್ನದಾನಯ್ಯನವರವರು, 30 ಕನ್ನಡ ಕೃತಿಗಳನ್ನು 3000 ವಚನಗಳನ್ನು ರಚಿಸಿದ್ದಾರೆ ಮತ್ತು ನೂರಾರು ಲೇಖನಗಳನ್ನು ಬರೆದಿದ್ದಾರೆ. ಇವರು 1956ರಲ್ಲಿ ಕನ್ನಡ ಸಾಹಿತ್ಯ ಅಕೆಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತೀಯ ರೆಡ್ ಕ್ರಾಸ್, ಹಲವಾರು ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನ್ನದಾನಯ್ಯನವರು ಕನ್ನಡ ನಾಡು-ನುಡಿಗಾಗಿ ನಿರಂತರ 6 ದಶಕಗಳ ಸೇವೆಯನ್ನು ಸಲ್ಲಿಸಿ, 20-10-2015ರಂದು ಶಿವೈಕ್ಯರಾದರು. ಮಕ್ಕಳಾದ ಪ್ರೋ ಚಂದ್ರಿಕಾ ಪುರಾಣಿಕ ಮತ್ತು ಉದಯ ಶಂಕರ ಪುರಾಣಿಕ ಹಾಗೂ ಮೊಮ್ಮಗಳು ದೀಪ್ತಿ, ಪುರಾಣಿಕ ಕುಟುಂಬದ ನಾಡು-ನುಡಿಯ ಸೇವೆಯನ್ನು ಮುಂದುವರೆಸಿದ್ದಾರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x