ನೀರಿದ್ದಲ್ಲೆಲ್ಲಾ ಹೋಗದಾದ್ರೆ ಹೋಗ್ಲೇಬೇಡ ಅನ್ನೋ ಅಮ್ಮ, ಹುಡುಗ್ರು.. ಏನೋ ಆಸೆ ಪಟ್ತಿದಾರೆ ಸೇಫಾಗಿ ಹೋಗ್ಬರ್ಲಿ ಬಿಡು ಅನ್ನೋ ಅಪ್ಪ, ಹುಚ್ಚುಕೋಡಿ ಮನಸು.. ಇದು ಹದಿನಾರರ ವಯಸು ಎಂಬೋ ಕವಿವಾಣಿಯ ತರಹದ ಹುಚ್ಚು ಮನಸಿನ ಸ್ವಲ್ಪ ಹೆಚ್ಚೇ ಧೈರ್ಯದ , ರೋಚಕ ಕನಸುಗಳ ಹುಡುಗರು… ಯಾವುದೇ ಚಾರಣ ಅಂದಾಗ ಈ ಮೂರು ಚಿತ್ರಗಳು ಮನಸ್ಸಿಗೆ ಬಂದೇ ಬರುತ್ತೆ. ಚಾರಣದಲ್ಲಿ ಸಾಹಸ ಮತ್ತು ಸಾವುಗಳ ನಡುವೆ ಕೂದಲೆಳೆಯ, ಕೆಲವಕ್ಷರಗಳ ವ್ಯತ್ಯಾಸವಷ್ಟೇ. ಕುಮಾರಪರ್ವತದಿಂದ ಕೊಡಚಾದ್ರಿಯವರೆಗಿನ ಚಾರಣಗಳಲ್ಲಿ, ಜಲಪಾತದ ಜಾರುಗಳಲ್ಲಿ, ನೀರ ಮಡುಗಳಲ್ಲಿ ಹೀಗೇ ಆಗುತ್ತೆ ಅಂತ ಹೇಳುವಷ್ಟು ದೊಡ್ಡ ಚಾರಣಿಗ ನಾನಲ್ಲದಿದ್ದರೂ ಚಾರಣದ ಮೈ ಜುಮ್ಮೆನ್ನಿಸಿದ ಕ್ಷಣಗಳ, ತಲ್ಲಣಗಳನ್ನು ಅನುಭವಿಸಿ, ಕೇಳುತ್ತಲೇ ಬೆಳೆಯುತ್ತಿರೋ ನೂರಾರರಲ್ಲೊಬ್ಬ. ಚಾರಣದ ಅಸಂಖ್ಯ ಸಾಧ್ಯತೆಗಳ ಮಧ್ಯೆ ಸಾವಿಗೆರವಾಗೋ ಕೆಲವು ಕಾಮನ್ ಸಂಗತಿಗಳ ಬಗ್ಗೆ ಹೀಗೊಂದು ಲೇಖನ.
ಎಡಕುಮೇರಿ:
ಟ್ರಿಕ್ಕಿಂಗ್ ಅಂತ ಸುಮಾರ್ ಗೊತ್ತು. ಆದ್ರೆ ರೈಲ್ವೆ ಟ್ರೆಕ್ಕಿಂಗ ಅಂದ್ರೆ.. ಅದು ಎಡಕುಮೇರಿನೇ ಸರಿ. ಜೀವಮಾನದ ಅಧ್ಬುತ ಅನುಭವ ಅಂತ ಎಡಕುಮೇರಿ ಚಾರಣ ಮುಗಿಸಿದ ಗೆಳೆಯರೊಬ್ಬರು ಹೇಳ್ತಿದ್ದರು. ರೈಲೇ ಮುಚ್ಚಿ ಹೋಗುವಷ್ಟು ಉದ್ದುದ್ದದ ಸುರಂಗಗಳು, ಅದರಾಚೆಯ ಹಸಿರ ಸ್ವರ್ಗದ ಚಿತ್ರಣವನ್ನು ಅಲ್ಲಿ ಹೋಗೇ ಅನುಭವಿಸಬೇಕು ಎಂಬುದು ಅವರ ಅಂಬೋಣ. ಮುಗಿಯದ ಕತ್ತಲ ಕೂಪದಂತಹ ಸುರಂಗಗಳು, ಉದ್ದುದ್ದದ, ಕೆಳಗೆ ನೋಡಿದರೆ ತಲೆತಿರುಗುವಷ್ಟೆತ್ತರದ ಬ್ರಿಡ್ಜ್ ಗಳ ನಡುವೆ ನಿಂತು ಪ್ರಕೃತಿಯ ಸೌಂದರ್ಯ ಸವಿಯುವುದೇನೋ ಚಂದ. ಆದರೆ ಈ ಬ್ರಿಜ್ಗಳಲ್ಲೋ, ಸುರಂಗದಲ್ಲೋ ಇದ್ದಾಗ ಟ್ರೈನ್ ಬಂದರೆ ? !!! ನಮ್ಮ ಗೆಳೆಯರದ್ದೂ ಅದೇ ಕತೆ ಆಗಿತ್ತು. ಸುರಂಗದ ಮಧ್ಯ ಇದ್ದಾಗ ರೈಲ್ ಪ್ರವೇಶ. ಟ್ರಾಕಿನ ಅಕ್ಕ ಪಕ್ಕ ಇರೋ ಸ್ವಲ್ಪವೇ ಜಾಗದಲ್ಲಿ ಗೋಡೆಗೆ ಒರಗಿ ಸಾಧ್ಯವಾದಷ್ಟೂ ಮುದುರಿ ನಿಂತಿದ್ದರಂತೆ. ಕೈಕಾಲು ಆಚೀಚೆ ಅಲ್ಲಾಡಿಸಲಾಗದಂತ ಪರಿಸ್ಥಿತಿ! ಏನಾದರೂ ಅಲ್ಲಾಡಿದರೆ ಆ ಅಂಗ ಕತ್ತರಿಸಿ ಹೋಗುವ ಇಲ್ಲಾ ಜೀವವೇ ಹೋಗುವ ಅಪಾಯ ! ಹೋದ ಆರು ಜನರಲ್ಲಿ ಒಬ್ಬ ಎತ್ತ ಹೋದ ಎಂದೇ ಗೊತ್ತಾಗಿರಲಿಲ್ಲವಂತೆ. ರೈಲ್ ಹೋಗಿ ನಾಲ್ಕೈದು ನಿಮಿಷದ ನಂತರ ಅವನ ಧ್ವನಿ ಕೇಳಿದ ಮೇಲೆಯೇ ಎಲ್ಲರಿಗೂ ಹೋದ ಜೀವ ಬಂದಂತಹ ಅನುಭವ. ಸಾಹಸ ಮಾಡಕ್ಕೆ ಹೋಗಿ ಒಬ್ಬ ಸತ್ತೇ ಹೋದ ಅಂತಾಗೋ ಸಂದರ್ಭದಿಂದ ಕೂದಲೆಳೆಯಲ್ಲಿ ಪಾರಾದ ಖುಷಿ 🙂 ಇನ್ನೂ ಆ ಎತ್ತರೆತ್ತರದ ಬ್ರಿಜ್ಗಳಲ್ಲಿದ್ದಾಗ ರೈಲೇನಾದ್ರೂ ಬಂದಿದ್ರೆ !! ದೇವ್ರೆ ಗತಿ. ಎಡಕುಮೇರಿಗೆ ಹೋಗ್ಬೇಬೇಡಿ ಅಂತ ಹೇಳೋಕೆ ಹೊರಟಿದೀನಿ ಅಂತ್ಕಂಡ್ರೆ ಖಂಡಿತಾ ತಪ್ಪು 🙂 ಹೋಗ್ಬನ್ನಿ, ಆದ್ರೆ ರೈಲ್ವೇ ವೇಳಾಪಟ್ಟಿ ವಿಚಾರಿಸಿಕೊಳ್ದೇ ಇಂತ ಹುಚ್ಚಾಟಕ್ಕೆ ಸಿಕ್ಕಾಕೋಬೇಡಿ ಅಂತಷ್ಟೇ. ನೀಟಾಗಿ ಪ್ಲಾನ್ ಮಾಡಿ ಎಡಕುಮೇರಿಯಲ್ಲಿ ಎಳೆಯಷ್ಟೂ ತೊಂದರೆಯಿಲ್ದೇ ಸಖತ್ ಎಂಜಾಯ್ ಮಾಡಿದ ಅದೆಷ್ಟೋ ಗೆಳೆಯರು ಎದುರೇ ಇದ್ದಾರೆ, ಆಗಾಗ ಸಿಗ್ತಿರ್ತಾರೆ 🙂
ಮಲ್ಲಳ್ಳಿ ಜಲಪಾತ:
ಕುಮಾರ ಪರ್ವತಕ್ಕೆ ಸೋಮವಾರಪೇಟೆಯ ಕಡೆಯಿಂದ ಹೋಗುವಾಗ ಸಿಗೋ ಒಂದು ಸುಂದರ ಜಲಪಾತ. ತೀರಾ ಸುಂದರ ಅಂತ ಹೇಳೋ ಹಾಗಿಲ್ದೇ ಇದ್ರೂ ಮಲ್ಲಳ್ಳಿಯಿಂದ್ಲೇ ಕುಮಾರಪರ್ವತದೆಡೆಗಿನ ಚಾರಣ ಶುರು ಮಾಡುವವರಿಗೆ ಇದು ಸಖತ್ ಸ್ಪಾಟ್. ತೀರಾ ಎತ್ತರದಿಂದ ನೀರು ಬೀಳದಿದ್ದರೂ ನೀರಿನ ರಭಸಕ್ಕೆ ಅನೇಕ ಕುಳಿಗಳೆದ್ದಿದೆ. ಜಲಪಾತದ ಬುಡಕ್ಕೆ ಸೀದಾ ಹೋಗೋದು ಸಾಧ್ಯವಿಲ್ಲದ ಮಾತು. ಹಲವಾರು ಕಡೆ ನೀರು, ಬಂಡೆಗಳನ್ನ ದಾಟಿ ಸಾಹಸದಿಂದ ಜಲಪಾತದ ಬುಡಕ್ಕೆ ಸಾಗಬೇಕು. ಜಾರೋ ಪಾಚಿಗಟ್ಟಿದ ಕಲ್ಲುಗಳಲ್ಲಿ , ನೀರಿನ ರಭಸಕ್ಕೆ ಸ್ವಲ್ಪ ಕಾಲು ಜಾರಿದರೂ ಸಾಕು. ಸೊಂಟಕ್ಕಿಂತ ಸ್ವಲ್ಪ ಎತ್ತರದ ನೀರಾದರೂ ಆಧಾರ ಸಿಗದೇ ಅಪಾಯ ಕಟ್ಟಿಟ್ಟ ಬುತ್ತಿ. ನಾವಲ್ಲಿಗೆ ಹೋದಾಗ ಅಲ್ಲಿನ ಗೈಡ್ ಸಿರಸಿಯ ಅಶ್ವಥ್ ಹೆಗ್ಡೆ ಅನುವವರ ಕತೆ ಮತ್ತು ಹುಣಸೂರಿನ ಪೋಲೀಸೊಬ್ರ ಜತೆ ಹೇಳ್ತಿದ್ರು. ಇಬ್ರೂ ನೀರು ಅಂತ ಕಂಡ ಕೂಡ್ಲೇ ಧುಮುಕಿದ್ರಂತೆ. ದಾರೀಲೇ ಬಂಡೆಯೊಂದು ತಲೆಗೆ ಹೊಡ್ದು ಪ್ರಜ್ನೆ ತಪ್ಪಿ ನೀರ ತಳ ಸೇರಿದ್ರಂತೆ. ನೀರೊಳಗೆ ತಪ್ಪಿದ ಪ್ರಜ್ನೆ, ಬಂಡೆಯ ಆಘಾತದಿಂದಾದ ರಕ್ತಸ್ರಾವದಿಂದ ಎರಡೂ ಯುವ ಜೀವಗಳ ದುರಂತ ಅಂತ್ಯ 🙁 ಜಲಪಾತದಲ್ಲಿ ನೀರಿಗಿಳಿಯಲೇ ಬಾರದೆಂಬ ಪುಕ್ಕಲುತನದ ಮಾತುಗಳಲ್ಲ. ಎಷ್ಟೋ ಜಲಪಾತಗಳ ಕೆಳಗಿಳಿದಿದ್ದೇವೆ. ನೀರಲ್ಲಿ ಸಾಕಷ್ಟು ಆಟವಾಡಿದ್ದೇವೆ. ಆದರೆ ನೀರು ಕಂಡ ತಕ್ಷಣ ಹಿಂದುಮುಂದಿಲ್ಲದೇ ಧುಮುಕುವ ಹುಚ್ಚುತನ, ಹೇಗಿದ್ರೂ ಈಜು ಬರುತ್ತೆಂಬ ಹುಂಬತನ ಇರಬಾರದಷ್ಟೇ..
ಸಾವನದುರ್ಗ:
ಬೆಂಗಳೂರಿಗೆ ತೀರಾ ಹತ್ತಿರದಲ್ಲಿರೋದ್ರಲ್ಲಿ ಸಖತ್ತಾಗಿರೋ ಚಾರಣದ ನೆನಪುಳಿಸುವಂತ ತಾಣ ಸಾವನದುರ್ಗ. ಹತ್ತಿದಷ್ಟೂ ಮುಗಿಯದಂತ, ಇದೇ ತುದಿಯೆಂದಾಗ ಇನ್ನೂ ಮೇಲೆ ದಾರಿ ಕಾಣುವಂತ ಬೆಟ್ಟ ಇದು. ಬೆಟ್ಟದ ಆಕಾರ ನೋಡಿ ಹತ್ತುವುದೇ ಅಸಾಧ್ಯ ಅನಿಸಿದರೂ ಸ್ವಲ್ಪಎಚ್ಚರದಿಂದ ಹೆಜ್ಜೆಯ ಮೇಲೆಯೇ ಗಮನವಿಟ್ಟು ಹತ್ತುತ್ತಾ ಸಾಗಿದಂತೆ ನಮಗೇ ಆಶ್ಚರ್ಯವಾಗುವಂತೆ ಮೇಲೆ ಸಾಗುತ್ತಾ ಸಾಗುತ್ತೇವೆ. ಇಲ್ಲಿರೋ ಹತ್ತುವ ಮಾರ್ಕುಗಳ, ಕರೆಂಟ್ ಲೈನುಗಳ ಹಾದಿಯಲ್ಲೇ ಸಾಗಿ ಅಂತ ಅನೇಕ ಬ್ಲಾಗುಗಳಲ್ಲಿ, ಹೋಗಿ ಬಂದವರ ಅಂಬೋಣ. ಸಖತ್ ಸುಲಭ ಅಂತಲ್ಲ ಇದು. ಆದ್ರೆ ಇರೋ ಮಾರ್ಗಗಳಲ್ಲಿ ಸ್ವಲ್ಪ ಸೇಫು ಅಂತ ಅಷ್ಟೇ. ಆದ್ರೆ ಕೆಲವರಿಗೆ ಎಲ್ಲಾ ಹೋದಂಗೆ ನಾವು ಹೋದ್ರೆ ಏನು ಥ್ರಿಲ್ಲಿದೆ ಅಂತ ! ಹಂಗೇ ಹತ್ತಿದ್ದ ನಮ್ಮ ಗುಂಪಿನ ಗೆಳೆಯರು ದಾರಿ ತಪ್ಪಿ ಹಂಗೇ ಮುಂದೆ ಹೋಗಿಬಿಟ್ಟಿದ್ರು. ಬೆಟ್ಟದ ಮೇಲೆ ಅಡ್ಡ ನಡೆಯುತ್ತಾ ಸಾಗಿದ ಅವ್ರಿಗೆ ಮುಂದೆ ಒಂದ್ಕಡೆ ಮುಂದೆ ಹೋಗೋಕೆ ಸಾಧ್ಯನೇ ಇಲ್ಲ ಅಂತ ಅನಿಸೋಕೆ ಶುರು ಆಯ್ತು. ಕಾಲೆಲ್ಲಾ ಬೆವರೋಕೆ ಶುರು ಆಯ್ತು !! ಕೂರೋ ಹಾಗೂ ಇಲ್ಲ. ನಡೆದು ಬಂದ ದಾರಿಯಲ್ಲಿ ವಾಪಾಸ್ ಸಾಗೋಕೂ ಕಾಲು ನಡುಗ್ತಾ ಇದೆ, ಕೆಳಗೆ ನೋಡಿದ್ರೆ ಮತ್ತೂ ಭಯ ! ಚೂರು ಕಾಲು ಜಾರಿದ್ರೂ ಏನೂ ಆಧಾರವಿಲ್ಲ. ಬಂಡೆಗಳೇ ಅಧಾರ! ಸಾವನಗುರ್ಗ, ತಮ್ಮ ಸಾವಿನ ದುರ್ಗವಾಗುವುದೋ ಎಂಬ ಭಯದಿಂದ ಅವರು ಕಿರುಚಕ್ಕಿಡುದ್ರು. ಅದನ್ನ ನೋಡಿದ ನಮಗೂ ಭಯ ! ಕೊನೆಗೆ ಕರೆಂಟ್ ಕಂಬದ ದಾರಿಯಿಂದ ಮುಂದೆ ಬಂದಿದ್ದ ನಾವು ಮತ್ತೆ ಹಿಂದೆ ನಾಗಿ ಹೇಗೋ ತ್ರಿಶಂಕು ಸ್ವರ್ಗದಲ್ಲಿದ್ದ ಅವರ ಬಳಿ ಸಾಗಿ ಸಮಾಧಾನ ಪಡಿಸುತ್ತಾ ನಿಧಾನವಾಗಿ ಕೆಳಗಿಳಿಸಿದೆವು. ಸ್ವಲ್ಪ ಹೊತ್ತು ಕೆಳಗೇ ಕುಳಿತು ಭಯ, ಕಾಲು ನಡುಗುವಿಕೆ ಕಮ್ಮಿ ಆದ ನಂತರ ಮತ್ತೆ ಕರೆಂಟ್ ಕಂಬದ ದಾರಿಯಲ್ಲಿ ಚಾರಣ ಮುಂದುವರಿಸಿದೆವು. ಬೆಟ್ಟ ಹತ್ತೋದೇ ತಪ್ಪು, ಸುಮ್ನೇ ಕೆಳಗೆ ಕೂತು ನೋಡ್ಬೇಕು ಅಂತಲ್ಲ. ಬೆಟ್ಟ ಹತ್ತೋಕೆ ಅಂತ ಹೋಗಿದ್ದೇ ಹೊರ್ತು ರಾಕ್ ಕ್ಲೈಂಬಿಂಗ್ ನಂತಹ ಸಾಹಸ ಮಾಡೋಕೆ ಹೋಗಿದ್ದಾಗಿರ್ಲಿಲ್ಲ ನಾವು. ರಾಕ್ ಕ್ಲೈಂಬಿಂಗ್ ಗೆ ಬೇಕಾದ ಶೂ, ಕೊಡಲಿ, ಹಗ್ಗಗಳಂತ ಯಾವುದೇ ಪರಿಕರಗಳಿಲ್ಲದೇ ತಮ್ಮನ್ನ ತಾವು ಕೋತಿ ರಾಮ ಅಂತ್ಕೊಂಡು ಸಿಕ್ಕ ಸಿಕ್ಕ ಬಂಡೆ ಏರಿ ಸಾಹಸ ತೋರ್ಸೋಕೆ ಹೋದ್ರೆ..ಸಾವನ ದುರ್ಗ ಅಂತಲ್ಲ ಯಾವ ಬೆಟ್ಟವಾದ್ರೂ ಸಾವೆಂಬ ಮೋಹಿನಿ ಮುತ್ತಿಕ್ಕೋಕೆ ಕಾಯ್ತಾ ಇರ್ತಾಳೆ.
ಬನ್ನೇರು ಘಟ್ಟ:
ಸಫಾರಿ, ಮೃಗಾಲಯ, ಚಿಟ್ಟೆ ಪಾರ್ಕ್.. ಹೀಗೆ ಬನ್ನೇರುಘಟ್ಟ ಒಂದು ದಿನದ ಪಿಕ್ನಿಕ್ಕಿಗೆ ಒಳ್ಳೇ ಜಾಗ. ಆದರೆ ಇದೇ ಬನ್ನೇರುಘಟ್ಟ ಕೆಲ ಸಮಯದ ಹಿಂದೆ ಟ್ರೆಕ್ಕಿಂಗಿಗೆ ಹೋದ ಟೆಕ್ಕಿಗಳ ಸಾವು ಎಂದು ಕುಖ್ಯಾತವಾಗಿತ್ತು.ಯಾರ ಮಾತೂ ಕೇಳದೆ ಟ್ರೆಕ್ಕಿಂಗು ಅಂತ ನಿಷೇಧಿತ ಕಾಡಿನಲ್ಲಿ ಹೊರಟಿದ್ದ ಟೆಕ್ಕಿಗಳು ಆನೆಯ ಕಾಲಿಗೆ ಬಲಿಯಾಗಿದ್ದರು.ಸಾಹಸ ಬೇಕು ಸರಿ, ಆದರೆ ನಿಷೇಧ ಅನ್ನೋ ಪದಕ್ಕೂ ಅದರದ್ದೇ ಆದ ಅರ್ಥವಿರುತ್ತೆ ಅಲ್ವೇ ?
ಜೋಗ:
ಭೂಮಿ ಮೇಲೆ ಹುಟ್ಟಿದ ಮೇಲೆ ಏನೇನ್ ಕಂಡಿ..ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ ಅನ್ನೋ ಕವಿವಾಣಿಯೇ ಇದೆ. ಉಕ್ಕಿ ಹರಿಯೋ ವೇಳೆ ಜೋಗ ಜಲಪಾತದ ಸಿರಿ ನೋಡಿಯೇ ಸವಿಯಬೇಕು. ಮುಂಗಾರು ಮಳೆಯಲ್ಲಿ ಜೋಗವನ್ನು ಹಲವು ಕೋನಗಳಲ್ಲಿ ತೋರಿಸಿದ ಮೇಲಂತೂ ಜೋಗಕ್ಕೆ ಭೇಟಿ ನೀಡೋ ಪ್ರವಾಸಿಗರ, ಚಿತ್ರ ವಿಚಿತ್ರ ಫೋಟೋ ಹುಚ್ಚಿನ ಸಾಹಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಲಪಾತವಾಗಿ ಶರಾವತಿ ಧುಮುಕುವ ಜಾಗಕ್ಕಿಂತ ಸ್ವಲ್ಪ ಹಿಂದಿರೋದು ಬ್ರಿಟಿಷ್ ಬಂಗಲೋ. ಅಲ್ಲಿಂದ ಜಲಪಾತದ ತಲೆಯವರೆಗೂ ಬರಬಹುದು. ಜಲಪಾತದ ಕೆಳಗೆ ನಿಂತು, ಎದುರಿನಿಂದ ನೋಡಿದರೆ ಸಾಕಾಗದ ಗಂಡೆದೆಯ(?) ಯುವಕರ ತಂಡವೊಂದು ಮುಂಗಾರು ಮಳೆಯ ಶೂಟಿಂಗಿನಂತೆ ಜಲಪಾತದ ತಲೆಯ ಮೇಲಿಂದ ಪೋಸ್ ಕೊಡೋಕೆ ಹೊರಟಿತ್ತು ! ಸಿನಿಮಾ ಅಂದರೆ ಕ್ರೇನ್ಗಳನ್ನು ಬಳಸಿಯೋ, ಜೂಮಿಂಗ್ ಕ್ಯಾಮರಾಗಳಿಂದಲೋ ಜಲಪಾತಕ್ಕೆ ತೀರಾ ಹತ್ತಿರದಲ್ಲಿದ್ದಂತೆ ಜೀವ ಹಾನಿಯಿಲ್ಲದಂತೆ ಚಿತ್ರ ತೆಗೆಯಬಹುದು..ಆದರೆ ನಿಜ ಜೀವನದಲ್ಲಿ ? ನದಿ ಅಂದ ಮೇಲೆ ಜಾರಿಕೆ ಇದ್ದೇ ಇರುತ್ತೆ. ಹಾಗೆಯೇ ಜಲಪಾತದ ತುದಿಗೆ ಹೋಗೋ ಹುಚ್ಚಿನಲ್ಲಿದ್ದವನೊಬ್ಬ ನೀರಿಗೆ ಜಾರಿದ. ನೀರಿನ ರಭಸಕ್ಕೆ ಹತೋಟಿಯೇ ಸಿಗದೆ ಜೀವ ಗೆಳೆಯರ ಕಣ್ಣೆದುರೇ ಜೀವಕ್ಕೆರವಾದ ! ೯೦೦ ಅಡಿ ಎತ್ತರದಿಂದ ಧುಮುಕೋ ಜಲಪಾತದ ರಭಸಕ್ಕೆ ಮಧ್ಯ ಮಧ್ಯ ಅನೇಕ ನೀರ ಕುಳಿಗಳಾಗಿದ್ದವಂತೆ. ಅಂತದ್ದೇ ಒಂದು ಕುಳಿಯನ್ನು ಹೊಕ್ಕಿದ್ದ ಆತನ ದೇಹ ಜಲಪಾತದ ತಳವನ್ನೂ ಸೇರದೆ, ಹುಡುಕ ಬಂದ ಕ್ರೇನ್ಗಳಿಗೂ ಸಿಕ್ಕದೇ ಅನೇಕ ದಿನಗಳ ಕಾಲ ಅತಂತ್ರವಾಗಿತ್ತು 🙁
ಮಳೆಗಾಲ ಕಳೆಯುತ್ತಾ ಬಂದಂತೆ ಜೋಗ ಜಲಪಾತದ ರಭಸ ಕಮ್ಮಿಯಾಗುತ್ತಾ ಬರುತ್ತೆ. ಆಗ ಜಲಪಾತದ ಕೆಳಗಿನವರೆಗೂ ಇಳಿಯಬಹುದು. ಧುಮುಕೋ ಜಲಪಾತದ ಹನಿಗಳು ಮತ್ತೆ ಚಿಮ್ಮಿ ಒಂತರಾ ತುಂತುರು ಮುತ್ತುಗಳ ಸಿಂಚನ. ಜಲಪಾತದ ಕೆಳಗೆ ಒಂದು ದೊಡ್ಡ ಬಂಡೆ, ಅದರ ಮುಂದೆ ನೀರ ಕುಳಿ. ಅದರ ಆಳ ಎಷ್ಟಿದೆಯೆಂದು ನಿಖರವಾಗಿ ತಿಳಿಯದಿದ್ದರೂ ಎಂಭತ್ತು ಅಡಿ ಇರಬಹುದೆಂದು ಅಲ್ಲಿನವರು ಹೇಳುತ್ತಾರೆ. ಬಂಡೆಯ ಹತ್ತಿರ ಹೋಗುವಷ್ಟರಲ್ಲೇ ಪೂರ್ತಿ ಸ್ನಾನವಾಗುವಷ್ಟು ನೀರಿದ್ದರೂ ನಮ್ಮ ಜೊತೆ ಬಂದ ಕೆಲವರಿಗೆ ನೀರ ಕುಳಿಗೆ ಧುಮುಕುವ ಹುಚ್ಚು. ಅಲ್ಲಿನ ಸುಳಿಗಳ ಬಗ್ಗೆ ಗುಂಪಲ್ಲಿ ಮುಂಚೆ ಬಂದಿದ್ದವರು ಎಚ್ಚರಿಸದೇ ಹೋಗಿದ್ದರೆ ಇನ್ನೆಷ್ಟು ಜೀವಗಳು ಮೃತ್ಯುಮೋಹಿನಿಯ ಆಲಿಂಗನಕ್ಕೆ ಸಿಕ್ಕುತ್ತಿದ್ದವೋ.. ಮೇಲೇ ನಿಂತು ನೋಡಬೇಕು ಅಂತಲ್ಲ. ಬದಲು ಮಳೆ ಕಡಿಮೆಯಾದಾಗ ಜಲಪಾತದ ಬುಡದ ತನಕ ಇಳಿಯುವುದು ಕಮ್ಮಿ ಸಾಹಸವೇನಲ್ಲ(ಮುಂಚೆ ಮೆಟ್ಟಿಲುಗಳಿರಲಿಲ್ಲ. ಈಗ ಸಿಮೆಂಟ್ ಮೆಟ್ಟಿಲುಗಳನ್ನು ಮಾಡಿ ಅಪಾಯ ಬಹಳವೇ ಕಮ್ಮಿ ಆಗಿದೆ). ಜಲಪಾತದ ಬುಡಕ್ಕೆ ಬಂದು ಅಲ್ಲಿನ ನೀರಲ್ಲಿ ಆಟವಾಡಿದರೂ ಸಾಲದು ಎಂದು ಕಂಡ ಕುಳಿಗಳಲ್ಲಿ ಧುಮುಕಿ ತಮ್ಮ ಈಜು ಪ್ರಾವಿಣ್ಯತೆ ಪ್ರದರ್ಶನ ಬೇಕೇ ಎಂಬ ಪ್ರಶ್ನೆ ಅಷ್ಟೆ.
ಕುಮಾರಪರ್ವತ :
ಎರಡು ದಿನದ ಈ ಟ್ರೆಕ್ಕಿಂಗ್ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಇಲ್ಲಿ ಅಪಾಯ ಅಂತೇನಾದ್ರೂ ಇದ್ರೆ ಅದು ರಾತ್ರಿ ವೇಳೆ ಟ್ರೆಕ್ಕಿಂಗ್ ಸಾಹಸ ಅಂತ ಹೊರಡೋ ಗುಂಪುಗಳಿಗೆ. ಅರಣ್ಯ ಇಲಾಖೆ ಚೆಕ್ ಪೋಸ್ಟ್ ಗಳಲ್ಲಿ ಬಿಡದಿದ್ದರೂ ಹೇಗೋ ಕಣ್ಣುತಪ್ಪಿಸಿಯೋ, ಅಲ್ಲಿಂದ ಬೇಗ ಹೊರಟರೂ ಮಧ್ಯೆ ಕಾಲಹರಣ ಮಾಡಿ ಸಂಜೆಯೊಳಗೆ ಬೆಟ್ಟದ ತುದಿ ತಲುಪಲಾಗದೇ ಮಧ್ಯವೇ ಸಿಕ್ಕಿಹಾಕಿಕೊಳ್ಳೋ ಗುಂಪುಗಳಿಗೆ ಅಪಾಯ ತಲೆಮೇಲೆ ತೂಗುತ್ತಿರೋ ಕತ್ತಿಯಂತೆಯೇ. ಬೆಟ್ಟದ ಬುಡದಲ್ಲಿ, ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಅಥವಾ ಬೆಟ್ಟದ ತುದಿಯ ಬಯಲಲ್ಲಿ ಟೆಂಟ್ ಹಾಕಬಹುದು. ಅದರೆ ಕಾಡ ಮಧ್ಯದಲ್ಲಿ ? !! ಕಷ್ಟಪಟ್ಟು ಟೆಂಟ್ ಹಾಕಿದರೂ ಯಾವ ಕಾಡು ಪ್ರಾಣಿ ಯಾವಾಗ ಧಾಳಿ ಮಾಡಬಹುದು ಅಂತ ಆ ದೇವನೇ ಬಲ್ಲ ! ಇದಾದರೂ ಬೇಕು. ಇನ್ನೂ ಹೆಚ್ಚಿನ ಅಪಾಯ ತರೋದು,ಅಸಹ್ಯ ಹುಟ್ಟಿಸೋದು ಬೀರ್ ಬಾಟಲ್ ಟ್ರೆಕ್ಕಿಗರು(? )!. ಕೈಯಲ್ಲೊಂದು ಬೀರ್ ಬಾಟ್ಲು(ಬ್ಯಾಗಲ್ಲೆಷ್ಟೋ ) ಹಿಡಿದೇ ಸಾಗೋ , ಹೋದಲ್ಲೆಲ್ಲಾ ಹಲತರದ ಸಾಹಸ(?) ಪ್ರದರ್ಶಿಸೋ ಇವರು ಟ್ರೆಕ್ಕಿಂಗಿಗೆ ಅಂತಲೇ ಯಾಕೆ ಬರ್ತಾರೋ ಗೊತ್ತಾಗಲ್ಲ. ಕಂಡಲ್ಲೆಲ್ಲಾ ಒಡೆದ ಗ್ಲಾಸು, ಬಾಟಲು, ಪ್ಲಾಸ್ಟಿಕ್ ಕವರು ಬಿಸಾಕೋ, ಸುತ್ತಮುತ್ತಲ ಪರಿಸರವನ್ನೆಲ್ಲಾ ಗಬ್ಬೆಬ್ಬಿಸಿ, ಗಲಾಟೆಯೆಬ್ಬಿಸಿಯೇ ಮುಂದೆ ಸಾಗುವ ಇಂತಹವರಿಂದ ಸ್ಥಳೀಯರು ಟ್ರೆಕ್ಕಿಗರು ಅಂದರೆ ಅಸಹ್ಯಿಸುವಂತಾಗಿದೆ. ನಾನು ಒಬ್ಬ ಟ್ರೆಕ್ಕರ್ ಅಂತ ಹೇಳಲೇ ಅಸಹ್ಯಪಡುವಂತೆ ಮಾಡಿರೋ ಇಂತ ಟ್ರೆಕ್ಕಿಗರಿಗೆ (? ) ಎಲ್ಲಿ ಹೋದಾರೂ ಅಪಾಯ ಗ್ಯಾರಂಟಿಯೇ.
ಬರೀತಾ ಬರೀತ ತುಂಬಾನೇ ಆಯ್ತು ಅನ್ಸತ್ತೆ. ಕೊಡಚಾದ್ರಿಯಿಂದ, ಮುಳ್ಳಯ್ಯನಗಿರಿವರೆಗೆ, ಸ್ಕಂಧಗಿರಿಯಿಂದ ಮಧುಗಿರಿಯವರೆಗೆ ಹೀಗೆ ಬರೆಯುತ್ತಾ ಹೋದರೆ ತುಂಬಾ ಇದೆ. ಆದರೆ ಅವೆಲ್ಲಾ ಕಡೆ ಸಾಹಸಗಳು ಸಾವಲ್ಲಿ ಕೊನೆಯಾಗ್ತಿರೋ ಸಂದರ್ಭಗಳಲ್ಲಿನ ಸಾಮಾನ್ಯ ಅಂಶ ಒಂದೇ. ನಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಬೇಕು ನಿಜ, ಆದ್ರೆ ಅದೇ ಅತಿಯಾಗಿ ನಾನು ಏನು ಬೇಕಾದ್ರೂ ಮಾಡಬಲ್ಲೆ, ಸೂಪರ್ ಹೀರೊ ಅಂದ್ಕೋಬಾರ್ದಷ್ಟೆ. ಇಲ್ಲಿ ನನ್ನ ಖುಷಿಗೆ ನಾನು ಏನು ಮಾಡಿದ್ರೂ ನಡ್ಯತ್ತೆ. ಯಾರೂ ಕೇಳೊಲ್ಲ, ಏನೂ ಆಗಲ್ಲ ಅನ್ನೋ ಭ್ರಮೆ ದೂರಾಗ್ಬೇಕಷ್ಟೆ. ಇವಿದ್ರೆ ಸಾಹಸವೆಂಬ ಭಾವ ಎಂದೂ ಮಾಸದ ಸೂಪರ್ ಅನುಭವಗಳನ್ನ, ಮಧುರ ನೆನಪುಗಳನ್ನು ನೀಡೊತ್ಯೆ ಹೊರತು ಸಾವು ನೋವುಗಳನ್ನಲ್ಲಾ ಎಂಬ ಭಾವದೊಂದಿಗೆ ವಿರಾಮ.
ವಿವರಣೆ ಚೆನ್ನಾಗಿದೆ . ಕಾಲೇಜಿನಲ್ಲಿದ್ದಾಗ ಬ್ರಹಗಿರಿ ಬೆಟ್ಟ ಹತ್ತಿದ್ದು ನೆನಪಾಯಿತು .
ರೈಲ್ವೇ ಸುರಂಗದ ಬಗ್ಗೆ ಓದುವಾಗ ತೇಜಸ್ವಿಯವರು ಜುಗಾರಿ ಕ್ರಾಸ್ ಪುಸ್ತಕದಲ್ಲಿ ನೀಡಿರುವ ಸುರಂಗ ಮಾರ್ಗದ ವಿವರಣೆ ನೆನಪಿಗೆ ಬಂತು .
ಹೊಗೆನಕಲ್ ಫಾಲ್ಸ್ ನಲ್ಲಿ ಮೊನ್ನೆ ಮೊನ್ನ ನಾಲ್ಕು ಯುವಕರು ಮೃತರಾಗಿದ್ದಾರೆ.
ಸಂತಸ ಅರಸಲು ಹೋದವರು ಹೆಣವಾಗಿ ಬಂದಾಗ ಅವರ ತಂದೆ ತಾಯಿಗಳ ನೋವನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ . ಚಾರಣಿಗರು ಅತ್ಯುತ್ಸಾಹಕ್ಕೆ ಬಲಿಯಾಗದೇ ಎಚ್ಚರವಹಿಸುವುದು ಒಳ್ಳೆಯದು .
ಒಳ್ಳೆಯ ಬರಹ !
ನಾನು ಮತ್ತೊಂದು ಕಲ್ಪಿತ ಚಾರಣದ ಕತೆಯ ಬಗ್ಗೆ ಕತೆ ಕಳಿಸಿರುವೆ ಬಹುಷಃ ಪಂಜು ಸಂಪಾದಕರು ಹಾಕಬಹುದು ನೋಡೋಣ 🙂
eshtellaa suttutteerappa….:) neevu kaalige chakra kattikondiddeno houdu….!
NIce and informative 🙂
ಮಾಹಿತಿಪೂರ್ಣ ಲೆಖನ ; ಧನ್ಯವಾದಗಳು