ಸಾವ ಅರಸುತ್ತಾ……..: ರೋಷನ್ ಪೂಜಾರಿ

ಮರಳನ್ನ ಅಗೆದು ಅಗೆದು ರಾಶಿ ಮಾಡಿದ ಕಡೆಯಲ್ಲಿ  ನಿಧಾನವಾಗಿ ಹತ್ತುತ್ತಿರುವ, ಇರುವೆಗಳ ಸಾಲನ್ನ ತುಂಡರಿಸಿ ಹೋಗಿದ್ದು ಸಮುದ್ರದ ನೀರು ….

ಅದೆಷ್ಟೋ ಬಾರಿ ಸಾರಿಕಾಳ ಕಾಲುಗಳನ್ನ ಮುಟ್ಟಿ ಹಿಂತಿರುಗಿ ಹೋದರು ಸಹ, ಸಮುದ್ರವನ್ನ ಕ್ಷಮಿಸುವ ಮನಸ್ಸು ಅವಳಿಗಿಲ್ಲವಾಗಿತ್ತು…..ಮದುವೆಯ ನಂತರದ ದಿನಗಳು , ಅವಳು ತನ್ನ ಜೀವನದಲ್ಲಿ ಕಳೆದ ಅತ್ಯಮೂಲ್ಯ ಕ್ಷಣ. ಹನಿಮೂನಿಗೆ ಒಂದು ವಾರ ಮುಂಚೆಯೇ ಇದ್ದ ಖುಷಿ, ಹನಿಮೂನು ಮುಗಿಸಿದ ಒಂದು ವಾರದ ನಂತರ ಇರಲಿಲ್ಲ. ವಿಧಿವಶರಾಗಿದ್ದ ತನ್ನ ಗಂಡನ ನೆನಪನ್ನ ಮರೆಯಲು, ಸಮುದ್ರದ ತಟಕ್ಕಿಂತ ಬೇರೆ ಯಾವ ಸ್ಥಳವು ಅವಳಿಗೆ ಸೂಕ್ತವೆನಿಸಲಿಲ್ಲ. ಒಮ್ಮೊಮ್ಮೆ ಸಮುದ್ರದ ಅಲೆಗಳನ್ನು ನೋಡುವಾಗ, ಮನಸ್ಸಿಗೆ ಖುಷಿವೆನಿಸುತ್ತಿತ್ತು. ಕೆಲವೊಮ್ಮೆ ಅಲೆಗಳು ಬ್ರಹದಾಕಾರದ ಸ್ಥಿತಿ ತಲುಪಿದಾಗ , ಗಂಡನ ಮರಣದ ಛಾಯೆ ಮುಸುಕುತಿತ್ತು. ಹನಿಮೂನು ಮುಗಿಸಿದ ಒಂದು ವಾರದ ನಂತರ, ಗಂಡನ ಒತ್ತಾಯಕ್ಕೆ ಮಣಿದು ಇದೇ ಕಲ್ಲು ಹಾಸಿನ ಮೇಲೆ ಬಂದು ಕುಳಿತಿದ್ದೆ . ಮೂರು ವರ್ಷಗಳ ಕಾಲ ಬೆನ್ನ ಹಿಂದೆ ತಿರುಗಿಸಿದವನನ್ನ, ಮದುವೆಯಾಗುದರ ಮೂಲಕ ತನ್ನ ಪಾಪಕ್ಕೆ,  ಪರಿಹಾರವನ್ನ ಮಾಡಿಕೊಂಡಿದ್ದೆ. ಅವನು ಕೂಡಾ ಅದೆಷ್ಟೋ ವರ್ಷಗಳಿಂದ , ಅದುಮಿ ಹಿಡಿದಿದ್ದ ಆಸೆಗಳನ್ನ … ಜೀವರಸದ ಮೂಲಕ ನನಸಾಗಿಸಿಕೊಂಡಿದ್ದ.

ದೊಡ್ಡ ದೊಡ್ಡ ಅಲೆಗಳನ್ನ ಲೆಕ್ಕಿಸದೆ ಅವುಗಳ ನಡುವೆ, ಈಜಾಡುತ್ತಾ ಖುಷಿಯಾಗಿದ್ದ ಗಂಡನನ್ನ ನೋಡಿ ಸಾರಿಕಾ ಮುಗುಳ್ನಕ್ಕಿದ್ದಳು. ಕೆಲವೊಮ್ಮೆ ಪತಿಮಹಾಶಯನ ಚೇಷ್ಟೆಗಳು ಸಾರಿಕಾಳನ್ನಲ್ಲದೇ, ಅಲ್ಲಿದ್ದವರನೆಲ್ಲ ನಗೆಗಡಲಿಗೆ ದೂಡಿತ್ತು. ಒಮ್ಮೊಮ್ಮೆ ನೀರಿನಲ್ಲಿ ಮುಳುಗಿದವರು ಮೇಲೆದ್ದು ಬರುತ್ತಿರಲಿಲ್ಲ! ಏನಾಯಿತು ಎಂದು ಹತ್ತಿರ ಹೋಗಿ ನೋಡಿದರೆ….. ಉಪ್ಪು ನೀರಿನ ಅಭಿಷೇಕ ನನ್ನನ್ನ ಕಾದಿತ್ತು! ಕೋಪಿಸಿಕೊಂಡು ಕೂತರೆ, ನಗಿಸುವ ಪ್ರಯತ್ನ ಇನ್ನಿಲ್ಲದಂತೆ ಸಾಗಿತ್ತು. ಅದೇ ಕೊನೆಯ ಬಾರಿ….. ಮುಳುಗಿದವರು ಏಳಲೇ ಇಲ್ಲ! ನನ್ನ ಮುಖವೂ ಕೂಡಾ ಅವರ ಕಡೆ ತಿರುಗಿಸಲಿಲ್ಲ… ಮನದಲ್ಲೇ ನಿರ್ಧರಿಸಿದ್ದೆ. ಈ ಬಾರಿ ಹತ್ತಿರ ಹೋಗಿ ನೋಡಬಾರದು ಅಂತ. ಮೊಬೈಲ್ನ ಬೀಪ್ ಸೌಂಡ್ ಕೇಳಿ, ಮೆಸೇಜ್ ಓದಿದೆ. "ಬೇಗ ಬನ್ನಿ " ಎನ್ನುವ ಸಂದೇಶ ಅತ್ತೆಯದಾಗಿತ್ತು. ಅದಾಗಲೇ ಸಮಯ 64800 ಸೆಕೆಂಡುಗಳನ್ನ ದಾಟಿತ್ತು. ಚದುರಿದ್ದ ಜನರೆಲ್ಲಾ ಒಂದೇ ಕಡೆ ಸೇರಿರುದನ್ನ ನೋಡಿ, ಹ್ರದಯದ ಬಡಿತ ನಿಧಾನವಾಗಿ ಎರತೊಡಗಿತು. ನಡಿಗೆಯ ವೇಗವೂ ತನ್ನಿಂದ ತಾನೇ ಕುಸಿದು ಹೋಗಿತ್ತು. ಬ್ರಹತ್ ಗಾತ್ರದ ಅಲೆಯೊಂದರ ಹೊಡೆತಕ್ಕೆ ಸಿಕ್ಕಿದ ಇವರನ್ನ ಅಲ್ಲಿಯ ಮೀನುಗಾರಿಕೆಯ ಬೋಟೋಂದು ಕರೆತರುತ್ತಿತ್ತು. ಕಣ್ಣಲ್ಲಿ ಬಂದಂತಹ ನೀರನ್ನ ಒರೆಸಲು, ಒಂದೆರಡು ಕೈಗಳು ಹತ್ತಿರ ಬಂದವು. ಚೇಷ್ಟೆ ಮಾಡುತ್ತಲೇ ಜೀವನಪೂರ್ತಿ ನಗಿಸಬೇಕು ಎಂದುಕೊಂಡು ಬಂದವ, ಇವತ್ತು ತೊಡೆಯ ಮೇಲೆ ಹೆಣವಾಗಿ ಮಲಗಿದ್ದ.

ಹಣೆಯ ಕುಂಕುಮ ಅಳಿಸುವ ಸಮಯ, ಬಿಳಿದಾದ ಬಟ್ಟೆ ಉಡುವ ಸಮಯ ಬೇಗನೆ ಅರಸಿ ಬಂದಿತ್ತು. ಒಂದೊಮ್ಮೆ ಹಳೆಯ ಸಂಪ್ರದಾಯಗಳ ನೆನಪಾದರು, ಆಚರಿಸುವ ಮನಸ್ಸು ನನಗಿಲ್ಲ ….. ಹಾಗಂತ ಎರಡನೆಯ ಮದುವೆಯಾಗುವ ಮನಸ್ಸು ಇರಲಿಲ್ಲ. ಮೂರು ವರ್ಷಗಳ ಕಾಲ ಬೆನ್ನ ಹಿಂದೆ ತಿರುಗಿಸಿದವನಿಗೆ, ಮೂವತ್ತು ವರ್ಷಗಳ ಕಾಲ ಖುಷಿಯನ್ನ ನೀಡಲಾಗಲಿಲ್ಲವಲ್ಲ ಎನ್ನುವ ದುಃಖ ಸೀಮೋಲ್ಲಂಘನ ಮಾಡಿತ್ತು. ಮಗನನ್ನ ಕಳೆದುಕೊಂಡು ಕೂತಿರುವ ಅತ್ತೆಯ ಎದುರು ಹೋಗಿ ಏನೆಂದು ಹೇಳಲಿ? ತವರು ಮನೆಯ ಋಣ, ಊರಿನವರಿಗೆ ಊಟ ಹಾಕಿಸಿದ ಮರುಕ್ಷಣದಲ್ಲಿ ಮುಗಿದಿತ್ತು. ಇನ್ನೇನಿದ್ದರು ಅತ್ತೆ ಮನೆಯ ದಾರಿಯೇ ಅಂತಿಮ.

"ಅತ್ತೆ ಅವನ ಹೆಸರು "ಅಥರ್ವ". ಹುಟ್ಟಿದ ನಂತರ ತಂದೆಯ ಮೊದಲ ಸಿಹಿಮುತ್ತಲ್ಲಿ , ನಗುವನ್ನ ತೋರಿಸಿದವನು. ಅಜ್ಜಿಯ ಮುದ್ದಿನ ಮೊಮ್ಮಗ. ಅವನ ತುಂಟಾಟಗಳು ಯಾರ ತಾಳ್ಮೆಯನ್ನ ಕೆಡಿಸುತ್ತಿರಲಿಲ್ಲ. ತೊದಲು ಮಾತನಾಡುತ್ತಲೇ ಮನೆಯ ಸಂಭ್ರಮ ಹೆಚ್ಚಿಸಿದ್ದ ಅವನನ್ನ ಇಂಜಿನಿಯರ್ ಮಾಡಬೇಕು ಅಂತ ಕನಸು ಕಂಡಿದ್ದರು.ಆದರೆ ಇವರೇ ಈಗ ಇಲ್ಲ ಅತ್ತೆ……ಇದು ನನ್ನ ತಪ್ಪಾ? ಇಲ್ಲ ಅವರ ಹಣೆಬರಹವೇ ಇಷ್ಟೇಯಾ? ಆಸೆಗಳನ್ನ ತುಂಬಿಸಿ ಹೋದ, ಇವರೇ ಇಲ್ಲದಿರುವ ಈ ಮನೆಯಲ್ಲಿ ನನಗೆ ಜಾಗ ಸಿಗಬಹುದಾ? ಸೊಸೆಯ ಧೈರ್ಯದ ಹಿಂದೆ ಅಡಗಿರುವ  ನೋವನ್ನ ಗಮನಿಸಿದವರಿಗೆ , ಸಾರಿಕಾಳನ್ನ ಬೈಯಲು ಮನಸ್ಸಾಗಲಿಲ್ಲ. ಬದಲಿಗೆ ಮಗಳೇ ಎಂದು ಅಪ್ಪಿಕೊಂಡಳು. ಮೊದಲೆರಡು ವರ್ಷ ಸಾರಿಕಾಳಿಗೆ , ಸಮುದ್ರದ ಅಲೆಗಳೆ ಉತ್ತಮ ಸ್ನೇಹಿತನಾದವು. ಜೊತೆಗೆ ಸೇಡನ್ನ ತೀರಿಸಿಕೊಳ್ಳಲಾಗದಿರುವ ಹಿತಶತ್ರು.

ಅದಾವ ಗಳಿಗೆಯಲ್ಲಿ ಇವಳನ್ನ ನೋಡಿ ಆಕರ್ಷಿತನಾದನೋ ಗೊತ್ತಿಲ್ಲ ….. ಅವನ ಪ್ರೀತಿಯ ಜ್ವರ ಎರಡು ವರ್ಷದಿಂದ ಏರುತ್ತಲೇ ಇತ್ತು ….. ಅತಿ ಹತ್ತಿರದಲ್ಲಿದ್ದರೂ ತನ್ನ ಪ್ರೀತಿಯನ್ನ ವ್ಯಕ್ತಪಡಿಸಲಾಗದೇ, ಅದೆಷ್ಟೋ ಸಾರಿ ಹತಾಶನಾಗಿದ್ದ…… ಬೇರಾವ ದಾರಿಕಾಣದೆ ಬ್ಲಾಕ್‌ಮೇಲ್ ಮಾಡಲು ತಯಾರಿಗಿದ್ದ. ಅವನ ಪ್ರೀತಿಯ ಜ್ವರ ಎರಿದಷ್ಟು,  ಇವಳಿಗೆ ಸಿಗುವ ತೊಂದರೆಗಳು ಜಾಸ್ತಿಯಾದವು. ಅನಾಮಧೇಯದ ಹೆಸರಿನಲ್ಲಿ ಬರುತ್ತಿದ್ದ ಉಡುಗೊರೆಗಳ ಸಂಖ್ಯೆ, ಗುಲಾಬಿಯ ಹೂಗುಚ್ಚಗಳ ಪರಿಮಳ, ಎಲ್ಲವೂ ಮನವನ್ನ ಕಂಗೆಡಿಸಿತ್ತು. ಬೇರೆ ಮದುವೆಯಾಗು ಎಂದು ಪದೇ ಪದೇ ಅತ್ತೆ ದಂಬಾಲು ಬಿದ್ದರೂ  "ನಿನ್ನ ಮಗನ ನೆನಪೇ ಶಾಶ್ವತ " ಎಂದವಳ ಮಾತು ಪೇಲವ ರೂಪ ತಾಳಿತ್ತು. ಪ್ರೇಮಪತ್ರ, ಉಡುಗೊರೆ, ಗುಲಾಬಿಯ ಹೂಗುಚ್ಚಗಳ ಸಂಖ್ಯೆ ಮಿತಿಮೀರಿದಾಗ ಮನೆಯಲ್ಲಿ ರಾದ್ದಾಂತದ ಪರಿಸ್ಥಿತಿ. ಪೋಲೀಸರ ಮೊರೆ ಹೋದರೆ ಇರುವ ಮಾನ ಮರ್ಯಾದೆಯನ್ನ ತೆಗೆಯುವ ಜನ. ಮನೆಯಲ್ಲಿ ಮಾತುಗಳಿಗಿಂತ ಮೌನವೇ ಜಾಸ್ತಿಯಾಗಿತ್ತು. ವಿಪರೀತವಾಗಿ ನೊಂದಿದ್ದ  ಸಾರಿಕಾ ಅವತ್ತು ನಿರ್ಧರಿಸಿಬಿಟ್ಟಿದ್ದಳು….. "ನನ್ನಿಂದ ನಿಮಗ್ಯಾರಿಗು ತೊಂದರೆಯಾಗುವುದು ಬೇಡ.ನಾನೇ ಎಲ್ಲಾದರೂ ಹೋಗ್ತೇನೆ." ಇದನ್ನೆಲ್ಲ ಕಳುಹಿಸುತ್ತಿರುವ ವ್ಯಕ್ತಿಗೆ ನನ್ನ ಪ್ರತಿ ವಿಷಯವು ತಿಳಿದಿರುತ್ತದೆ. ಹಾಗಾಗಿ ಈ ಮನೆಯ ಮುಂದೆ ಇನ್ನು ಗುಲಾಬಿ ಗಿಡಗಳ ತೊಂದರೆ ಬರುದಿಲ್ಲ ಬಿಡಿ. ಅತ್ತೆ ನಾನು ಹೋಗ್ತೇನೆ ಎಂದವಳನ್ನ ತಡೆದದ್ದು "ಮೈದುನ". ಮೂಕನೆಂದೆಣಿಸಿದ ಅವನು ಮೊದಲ ಬಾರಿಗೆ ಅತ್ತಿಗೆಯ ಪರ ವಹಿಸಿ ಮಾತನಾಡಿದ್ದ. "ನೋಡಮ್ಮ, ಅತ್ತಿಗೆ ಅಣ್ಣ ಸತ್ತಾಗಿನಿಂದ ಅವನ ನೆನಪಲ್ಲೇ ಇದ್ದಾಳೆ. ಇದನ್ನೇ ನೋಡಿದ ಯಾರೋ ಈ ರೀತಿಯಾಗಿ ಕೆಲಸ ಮಾಡ್ತಾ ಇದ್ದಾರೆ. ಇದೆಲ್ಲ clear ಆಗ್ಬೇಕು ಅಂದರೆ ಒಂದೇ ದಾರಿ ….. ನಿನಗೆ ಅಭ್ಯಂತರ ಇಲ್ಲದ್ದಿದ್ದರೆ…….. ಬಿದ್ದ ಎರಡೇ ಏಟಿಗೆ ಅವನು ಅಲ್ಲಿ ನಿಲ್ಲಲಿಲ್ಲ. ಊಟ ಮುಗಿಸಿದ ಎರಡು ತಾಸಿನ ನಂತರ ಮಲಗಿದ ಅತ್ತೆ, ಮರುದಿನ ಸೊಸೆಯನ್ನ ಎದುರು ಕುಳಿಸಿದ್ದಳು. "ಇಷ್ಟು ದಿನ ಕೇಳಿ ಕೇಳಿ ನನಗೆ ಸಾಕಾಯಿತು. ಈಗ ಕೊನೆಯ ಬಾರಿ. ನನ್ನ ಎರಡನೇ ಮಗನನ್ನ ಮದುವೆಯಾಗಿ ನೀನು ಈ ಮನೆಯಲ್ಲಿ ಇರುದಾದರೆ ಇರು, ಇಲ್ಲದಿದ್ದರೆ ಹೋಗು."

ಮಾತು ಇಷ್ಟು ಧ್ರಡವಾಗಿದ್ದಾಗ ಅನಿವಾರ್ಯವಾಗಿ ಸಾರಿಕಾ ಒಪ್ಪಿಕೊಳ್ಳಬೇಕಿತ್ತು.ಅನಾಮಧೇಯದ ಹೆಸರಿನಲ್ಲಿ ಬರುತ್ತಿದ್ದ ಈ ತೊಂದರೆಗಳನ್ನ ನಿವಾರಿಸಲು, ಇದುವೇ ಸೂಕ್ತ ಅಂತ ಯೋಚಿಸಿರಬೇಕು.ತಮ್ಮನಂತೆ ಕಾಣುತ್ತಿದ್ದವನನ್ನ ಹೇಗೇ ಮದುವೆಯಾಗಲಿ ಎಂಬ ಗೊಂದಲಕ್ಕೆ ಬಿದ್ದವಳಿಗೆ ಬೇರೆ ದಾರಿ ಇರಲಿಲ್ಲ. ಆಕಸ್ಮಿಕವೋ ಎಂಬಂತೆ ಉಡುಗೊರೆಗಳ ಹಾವಳಿಯು ಕಮ್ಮಿಯಾಯಿತು….. ಗಂಡನನ್ನು ಕೇಳಿದರೆ "ನಾನು ಅವನನ್ನ ಹುಡುಕಿ ಬುದ್ಧಿ ಕಲಿಸಿದ್ದೇನೆ " ಎನ್ನುತ್ತಿದ್ದ. ಆವತ್ತೇಕೊ ಅವಳು ಸಮುದ್ರದ ತಟದಲ್ಲಿ ಕುಳಿತಿದ್ದಳು. "ಒಂದು ಮಾಂಸದ ತುಂಡು, ಇನ್ನೊಂದು ಮಾಂಸದ ತುಂಡಿನಲ್ಲಿ ಐಕ್ಯವಾಗಬೇಕು "ಎಂದರೆ ಮನುಷ್ಯ ಇಷ್ಟೇಲ್ಲಾ ಮಾಡುತ್ತಾನಾ? ಎನ್ನಿಸಿತು.

ಮರಳನ್ನ ಅಗೆದು ಅಗೆದು ರಾಶಿ ಮಾಡಿದ್ದಳು. ಅಲೆಗಳ ಆಕಾರ ಬ್ರಹತ್ ಗಾತ್ರಕ್ಕೆ ತಲುಪಿದಾಗ ಸತ್ತ ಗಂಡನ ನೆನಪಾಗಿತ್ತು. "ಅಣ್ಣನ ನೆನಪೇ ಶಾಶ್ವತ ಎಂದು ತಿಳಿದವನಿಗೆ" ಪಕ್ಕ ಮಲಗುವ ಆಸೆ ಎಲ್ಲಿಂದ ಬಂತು? ಥೂ…. ಇರುವೆಗಳ ಸಾಲನ್ನ ತುಂಡರಿಸಿದ ನೀರಿನ ನೊರೆಯ ಸಮೀಪಕ್ಕೆ ಹೋದವಳಿಗೆ ಸತ್ತ ಗಂಡನ ಹಾದಿ ಎಷ್ಟು ದೂರ ಎನಿಸಿತು …..ನಡಿಗೆಯ ಹಾದಿ ತೀವ್ರತೆಯನ್ನ ಕಂಡಾಗ ಬ್ರಹತ್ ಅಲೆಯೊಂದು ಕಾದಿತ್ತು …..

"ನಿನಗಾಗಿ " ಎನ್ನುವ ಪತ್ರದ ಆರಂಭ, ನೋಡಿದಾಗಲೇ ಗೊತ್ತಾಗಿತ್ತು. ಸಾರಿಕಾ ಎಲ್ಲವನ್ನ ತೊರೆದಿದ್ದಳು. ತನ್ನ ಮೋಸದ ಪ್ರತಿ ಜಾಲವನ್ನ ಕೆದಕಿ ಕೆದಕಿ ಬರೆದವಳಿಗೆ ಉತ್ತರ ನೀಡುವ ಮನಸ್ಸು ಅವನಿಗಿಲ್ಲ……ಕೇವಲ ಲೈಂಗಿಕ ವಸ್ತುವಾಗಿ ನೋಡಿದವನು ಕಣ್ಣೀರು ಹಾಕುವ ಪ್ರಮೇಯವೇ ಇರಲಿಲ್ಲ. ಅವಳೊಬ್ಬಳೇ ಹೋಗಿದ್ದರೆ ಪರವಾಗಿಲ್ಲ, ಜೊತೆಗೆ ಹುಟ್ಟದೇ ಇರುವ ಆರು ತಿಂಗಳ ಮಗುವನ್ನೂ ಕರೆದುಕೊಂಡು ಹೋಗಿದ್ದನ್ನ ನೋಡಿ ಅತ್ತೆ ಮೌನಿಯಾಗಿದ್ದಳು. ಪತ್ರವನ್ನ ಹರಿದು ಮತ್ತೊಂದು ಬೇಟೆಗೆ ತಯಾರಾದ ಅವನನ್ನ ತಡೆಯುವವರಾರು…….?

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x