ಸಾವಿನ ನಂತರ ಏನು? ಸ್ವರ್ಗ, ನರಕ, ಇದೆಲ್ಲ ಇದೆಯಾ? ಇದೆ ಅನ್ನುತ್ತದೆ ಪುರಾಣ. ಪುರಾಣ ಹೇಳುತ್ತದೆ ಸತ್ತ ವ್ಯಕ್ತಿ ಒಳ್ಳೆಯವನು ಆಗಿದ್ದರೆ ಸ್ವರ್ಗಕ್ಕೆ ಹೋಗುತ್ತಾನೆ. ಕೆಟ್ಟವನು ನರಕಕ್ಕೆ ಹೋಗುತ್ತಾನೆ? ಈ ಸ್ವರ್ಗ, ನರಕ,ಪಾಪ, ಪುಣ್ಯ, ಸಾವಿನ ನಂತರ ಏನು? ಇದೆಲ್ಲವನ್ನೂ ನೋಡಿದವರು ಯಾರು? ಸಾವು ಎಂದರೇನು? ಹುಟ್ಟಿದವನು ಸಾಯಲೇಬೇಕೆ? ಇದೆಲ್ಲವನ್ನೂ ಮನುಷ್ಯ ಆಳವಾಗಿ ಚಿಂತಿಸಿ ವಿಮರ್ಶೆ ಮಾಡುತ್ತಾನೆ. ವೇದ ಮಹರ್ಷಿಗಳಿಂದ ಹಿಡಿದು ಜಗತ್ತಿನ ಮೇಧಾವಿಗಳೆಲ್ಲ ಸಾವಿನ ಬಗ್ಗೆ ಅದರ ಅನುಭವದ ಬಗ್ಗೆ ಬರೆದಿದ್ದಾರೆ. ಈ ಭೂಮಿ ಮೇಲಿನ ಪ್ರತಿ ಜೀವಿಗೂ ಒಂದು ಅಂತ್ಯ ಇದ್ದೇ ಇರುತ್ತದೆ. ಹುಟ್ಟು ನಿಶ್ಚಿತವಾದಾಗಲೇ ಸಾವು ಖಚಿತವಾಗಿರುತ್ತದೆ. ಅವರವರ ಕರ್ಮಾನುಸಾರವಾಗಿ ಸಾವುಗಳು ಸಂಭವಿಸುತ್ತದೆ. ಮರಣ ಹೇಗೆ ಬೇಕಾದರೂ ಬರಬಹುದು. ಅಕಾಲ ಮರಣ, ಸಹಜ ಮರಣ, ಹೀಗೆ ಸಾವಿಗೊಂದು ಕಾರಣ ಬೇಕು. ಕಾರಣವಿಲ್ಲದೇ ಸಾವು ಸಂಭವಿಸದು. ಅದು ಅಪಘಾತದ, ರೂಪದಲ್ಲಿ ಇಲ್ಲವೇ ಜ್ವರದಲ್ಲಿ, ಹೃದಯಘಾತದಲ್ಲಿ, ಯಾವುದಾರಲ್ಲದರೂ ಬರಬಹುದು.ಹುಟ್ಟಿನ ಜೊತೆ ಬೆಸೆದುಕೊಂಡ ಸಾವು ಅವರವರ ಕರ್ಮಾನುಸಾರವಾಗಿ ಬರುತ್ತದೆ.
ಸತ್ತವರ ಬಗ್ಗೆ ನಮಗೆ ಯಾವ ಮಾಹಿತಿಗಳು ಸಿಗದು. ಸತ್ತ ಮೇಲೆ ನಾವೇನೂ ಆಗುತ್ತೇವೆ. ಅನ್ನುವ ಯಾವ ಸುಳಿವು ಯಾರಿಗೂ ಸಿಗದು. ಅದನ್ನು ಭೇಧಿಸಲು ಇಲ್ಲಿವರೆಗೂ ಯಾರಿಂದಲೂ ಆಗಲಿಲ್ಲ. ಸಾವನ್ನು ಗೆದ್ದು ಬದುಕಿರುವವರು ಯಾರು ಇಲ್ಲ. ಆಯುಷ್ಯ ಮುಗಿಯುವವರೆಗೆ ಮಾತ್ರ ಈ ಭೂಮಿ ಮೇಲಿನ ವಾಸ. ಮತ್ತೆ ಇರುವುದು ಬರಿ ದೇಹ ಒಂದೆರಡು ದಿನಕ್ಕೆ ಕೊಳೆತು ನಾರುವ ಈ ಜನ್ಮಕ್ಕೆ ಉಸಿರೊಂದೆ ಸಂಜೀವಿನಿ. ಎಂದಿಗೆ ಉಸಿರು ನಿಲ್ಲುವುದೋ ಅಂದಿಗೆ ದೇಹದ ಅವಧಿ ಮುಗಿಯುವುದು. ನಂತರ ಈ ದೇಹವೂ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಸಾವಿನ ಬಗೆಗಿನ ಹಲವಾರು ಸಂಗತಿಗಳು ಎಲ್ಲ ಧರ್ಮಗಳಲ್ಲೂ ಉಲ್ಲೇಖವಿದೆ. ಎಲ್ಲದರಲ್ಲೂ ಸಾವಿನ ಕುರಿತಾದ ಕಲ್ಪನೆಗಳು ಚಿಂತನೆಗಳು ಇದೆ. ಆದಕ್ಕೆ ಮನುಷ್ಯ ಇರುವಷ್ಟು ದಿನ ಸಾವಿನ ಬಗ್ಗೆ ಯೋಚಿಸುತ್ತಾನೆ. ಸತ್ತ ಮೇಲೆ ನಾನು ಏನಾಗುತ್ತೇನೆ ಎಂದು ಪ್ರತಿಕ್ಷಣವೂ ಚಿಂತಿಸುತ್ತಾನೆ. ಈ ಆತ್ಮ ಅಂತರಾತ್ಮದ ಕತೆಯಲ್ಲಿ ಸತ್ಯವನ್ನು ಹುಡುಕುತ್ತಾನೆ. ಆದರೆ ಆ ಸತ್ಯ ಯಾರಿಗೂ ಗೋಚರವಾಗುವುದಿಲ್ಲ ಈ ಅಂತೆ ಕಂತೆಗಳ ಕತೆಗಳು ನಂಬಿಕೆಗಳು ಮಾತ್ರ ನಮ್ಮ ಸುತ್ತ ಗಿರಕಿ ಹೊಡೆಯುತ್ತಿರುತ್ತದೆ.
ನಾವು ಇಹದ ಮಿತಿಯಲ್ಲಿ ಇದ್ದರೂ ಅದರಾಚೆಗೂ ಏನೊ ಇದೆ ಅನ್ನುವ ತುಡಿತದಲ್ಲಿ ಇರುತ್ತೇವೆ. ಊಹೆಗೂ ಮೀರಿದ ಕಲ್ಪನೆಗಳು ಕತೆಗಳಾಗಿವೆ. ಮನುಷ್ಯ ಏನೇ ಮಾಡಿದರೂ ಇಂದಿಗೂ ಭೇಧಿಸಲಾಗದ ವಿಸ್ಮಯವೆಂದರೆ ಅದು ಸಾವು. ಸಾವಿಗೊಂದು ಸರಿಯಾದ ವ್ಯಾಖ್ಯಾನ ಯಾರಿಗೂ ಕೊಡಲಾಗದು. ಹುಟ್ಟು ಆರಂಭ ಸಾವು ಅಂತಿಮ. ಇದರ ನಡುವೆ ಬದುಕು. ಇವಿಷ್ಟೆ ಮನುಷ್ಯನ ಪರಿಧಿಯೊಳಗಿನ ಅರಿವು. ಅದೆಷ್ಟೋ ಬಾರಿ ಈ ಸಾವು ಆತ್ಮ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳ ಬೇಕು ಅಂದುಕೊಳ್ಳುವಾಗ “ಗರುಡ ಪುರಾಣ” ದ ನೆನಪಾಗುತ್ತದೆ. ಸಾವಿನ ನಂತರ ಏನು ? ಆತ್ಮ ಎಲ್ಲಿರುತ್ತದೆ? ಇವೆಲ್ಲವನ್ನೂ “ಗರುಡ ಪುರಾಣ”ದಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ. ಗರುಡ ಪುರಾಣ ಎಂದರೆ ಶ್ರೇಷ್ಠ ಪುರಾಣ ಎಂದು ಅನ್ನಿಸಿಕೊಂಡಿದೆ. ಅಷ್ಟೇ ಅಲ್ಲ ಇದನ್ನು ಯಾರು ಶ್ರದ್ಧೆಯಿಂದ ಓದುತ್ತಾರೋ ಅವರಿಗೆ ಅಪಾರವಾದ ಜ್ಞಾನ ಶಕ್ತಿಯು, ಸಿದ್ಧಿಸುತ್ತದೆ ಅನ್ನುವ ನಂಬಿಕೆಯಿದೆ. ಅದರೆ ನಂಬಿಕೆ ಮೂಢನಂಬಿಕೆಗಳ ಮಧ್ಯೆ ಬದುಕುವ ನಮಗೆ ಕೆಲವೊಂದು ವಿಚಿತ್ರವಾಗಿಯೂ ಇನ್ನು ಕೆಲವೂ ವಿಶೇಷವಾಗಿಯೂ ಗೋಚರವಾಗುತ್ತದೆ.
ಸತ್ತವರ ಆತ್ಮ ನಿಜಕ್ಕೂ ಕಾಣಿಸುತ್ತದೆಯಾ? ಈ ಆತ್ಮಕ್ಕೆ ಯಾವ ರೂಪ ಇದೆ. ಆಯುಷ್ಯ ಮುಗಿದ ವ್ಯಕ್ತಿಯ ಆತ್ಮವನ್ನು ತೆಗೆದುಕೊಂಡು ಹೋಗಲು ಯಮದೂತರೂ ಬಂದಿರುತ್ತಾರ.? ಇವರು ಮರಣ ಶಯ್ಯೆಯಲ್ಲಿ ಮಲಗಿರುವವರ ಕಣ್ಣಿಗೆ ಗೋಚರವಾಗುತ್ತಾರಂತೆ? ಇದನ್ನೆಲ್ಲ ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ಈ ಆತ್ಮಗಳ ಬಗ್ಗೆ ಮತ್ತು ಸಾವಿನ ನಂತರ ಏನೂ. ಸತ್ತ ವ್ಯಕ್ತಿಯ ಶ್ರಾದ್ಧ ಕಾರ್ಯ ಇವುಗಳ ಬಗ್ಗೆಯೆಲ್ಲ ಗರುಡ ಪುರಾಣದಲ್ಲಿ ಉಲ್ಲೇಖವಿದೆ. ಅಷ್ಟೇ ಅಲ್ಲ ಈ ಗರುಡ ಪುರಾಣವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕೆ ಬೇಡವೇ ಅನ್ನುವುದರ ಬಗ್ಗೆ ಅತಿಯಾದ ಗೊಂದಲಗಳಿವೆ. ಸಾವಿನ ಮನೆಯಲ್ಲಿ ಓದುವ ಈ ಗ್ರಂಥವನು ಯಾರು ಇಟ್ಟುಕೊಳ್ಳಬಾರದು ಅನ್ನುತ್ತಾರೆ. ಇನ್ನು ಕೆಲವರು ಅದೆಲ್ಲ ಸುಳ್ಳು ಗರುಡ ಪುರಾಣ ಎಂದರೆ ಅದು ವಿಷ್ಣುವಿನ ವಾಣಿ. ಇದನ್ನು ಓದುವುದರಿಂದ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಯಾವುದೇ ಅಶುಭಗಳು ಆಗುವುದಿಲ್ಲ ಅನ್ನುವವರು ಇದ್ದಾರೆ. ಮನುಷ್ಯ ಹುಟ್ಟು ಸಾವಿನ ಚಕ್ರದಲ್ಲಿ ತಿರುಗುತ್ತಾ ನರಳುತ್ತಾ ಇರುತ್ತಾನೆ. ಸಾವು ಭಯವನ್ನು ತರುತ್ತದೆ. ಅದಕ್ಕೆ ಸಾವಿನ ಯೋಚನೆ ಕೂಡ ಒಂದು ವಿಚಿತ್ರವಾದ ಸಂಕಟವನ್ನು ತರುತ್ತದೆ. ಸಾಯುವವನಿಗೆ ಸಾವಿನ ಭಯ ಬರದೆ ಇರಬಹುದು. ಆದರೆ ಅವನ ಜೊತೆಯಲ್ಲಿ ಇರುವವರಿಗೆ ಆ ಸಾವು ಅತಿಯಾದ ನೋವನ್ನು ಭಯವನ್ನು ಕೊಡುತ್ತದೆ. ಅದರಲ್ಲೂ ಹತ್ತಿರದವರ ಮೃತ್ಯುವಿನ ಶೋಕ ನಿರಂತರದ್ದಾಗಿರುತ್ತದೆ.
ಪಂಚಭೂತಗಳಲ್ಲಿ ಸೃಷ್ಟಿಯಾದ ದೇಹವು ಇಲ್ಲಿಯೇ ಮಣ್ಣಾಗಿ ಹೋಗುತ್ತದೆ. ಸತ್ತ ನಂತರ ಸುಟ್ಟ ಬೂದಿಯನ್ನು ನೀರಿನಲ್ಲಿ ಬಿಟ್ಟಾಗಲೇ ದೇಹವೂ ಪಂಚಭೂತಗಳಲ್ಲಿ ಲೀನವಾಗಿ ಆತ್ಮಕ್ಕೆ ವಿಮುಕ್ತಿ ದೊರೆಯುವುದಂತೆ. ಯಾರು ಸಾವಿನ ನಂತರದ ಸತ್ಯವನ್ನು ಇಲ್ಲಿವರೆಗೂ ಅರಿತಿಲ್ಲ. ಸ್ವರ್ಗ ನರಕಗಳನ್ನು ನೋಡಿ ಬಂದವರಿಲ್ಲ. ಸಾವಿನ ನಂತರದ ಅಗೋಚರಗಳು ಗೋಚರವಾಗುವುದಿಲ್ಲ. ಈ ಭೂಮಿ ಮೇಲಿನ ಬದುಕಷ್ಟೆ ಸ್ವರ್ಗ ನರಕಗಳು. ಹುಟ್ಟು ಸಾವುಗಳು ನಮ್ಮ ಕರ್ಮಗಳಲ್ಲಿ ನಿರ್ಧಾರವಾಗಿರುತ್ತದೆ ಅನ್ನುವುದು ತಾತ್ತ್ವಿಕ ಸಿದ್ಧಾಂತವಾಗಿದೆ. ಭೂಮಿ ಮೇಲೆ ಜನ್ಮ ತಾಳಿದ ಪ್ರತಿಯೊಂದು ಜೀವಿಗೂ ಸಾವು ಬೆನ್ನಲ್ಲಿ ಬಂದಿರುತ್ತದೆ.. ಅದು ಜಗದ ನಿಯಮ. ಈ ಸತ್ಯದ ಅರಿವಿದ್ದರೂ ಸಾವು ಕಾಲಡಿಯಲ್ಲಿ ನಿಂತಿದ್ದರೂ ಮತ್ತೆ ಬದುಕಬೇಕು ಅನಿಸುತ್ತದೆ. ಸತ್ತ ನಂತರ ನಾವೇನೂ ಆಗುತ್ತೇವೆ.? ಆತ್ಮ ಎಲ್ಲಿಗೆ ಹೋಗುತ್ತದೆ ? ಸ್ವರ್ಗ ನರಕಗಳ ಕತೆ ನಿಜವೇ? ಇದು ಮತ್ತೆ ಮತ್ತೆ ಕಾಡುವ ಪ್ರಶ್ನೆಯಾಗಿಯೇ ಉಳಿದು ಹೋಗುತ್ತದೆ.
–ಪೂಜಾ ಗುಜರನ್. ಮಂಗಳೂರು.