ಪ್ರಶಸ್ತಿ ಅಂಕಣ

ಸಾವು: ಪ್ರಶಸ್ತಿ

ಸಾವೆಂಬುದು ಬೆನ್ನ ಹತ್ತಿ ಬರುತ್ತಿದೆಯಾ ಎಂಬ ಭಾವ ಪದೇ ಪದೇ ಕಾಡತೊಡಗಿತ್ತವನಿಗೆ. ಯದ್ವಾತದ್ವಾ ಟ್ರಾಫಿಕ್ ಜ್ಯಾಂನಿಂದ ರೈಲು ತಪ್ಪಿಸಿಕೊಂಡ ಬೇಜಾರಲ್ಲಿ ಬಸ್ಸಿಗೆ ಹೋದ ದಿನವೇ ರೈಲಿನ ಅಪಘಾತವಾಗಿ ಅದೆಷ್ಟೋ ಜನ ಅಸುನೀಗಿದ್ದರು. ಆ  ಆಘಾತ ಮನಸ್ಸಿನಿಂದ ಅಳಿಸೋ ಮುನ್ನವೇ ಇವ ರಿಸರ್ವ ಮಾಡಿಸಿದ್ದ ಬಸ್ಸು ಆಯತಪ್ಪಿ ಕೊರಕಲಿಗೆ ಜಾರಿದ ಸುದ್ದಿ ಕೇಳಿಬಂದಿತ್ತು. ಬೇಗ ಹೋಗಬೇಕಂದುಕೊಂಡ್ರೂ ಆ ಶುಕ್ರವಾರವೇ ವಿಪರೀತ ಲೇಟಾಗಿ ರಿಸರ್ವ್ ಮಾಡಿಸಿದ ಬಸ್ಸಿಗೆ ಹೋಗಲಾಗದ್ದಕ್ಕೆ ಅದೆಷ್ಟೋ ಶಾಪ ಹಾಕಿದ್ದವನಿಗೆ ಮಾರನೇ ದಿನದ ಪೇಪರ್ ನೋಡಿದಾಗ ಮತ್ತೊಮ್ಮೆ ಶಾಕ್. ಅವತ್ತೇನಾದ್ರೂ ಹೆಚ್ಚಿನ ಕೆಲಸವಿಲ್ಲದಿದ್ರೆ ನಾನೂ ಕೊರಕಲಿಗೆ ಜಾರಿದ ಬಸ್ಸಲ್ಲಿ ಪ್ರಾಣಬಿಟ್ಟವರ ಸಾಲಲ್ಲಿ .. ! ಊರಿಗೆಂತೂ ಹೋಗ್ಲಿಲ್ಲ, ಜಾಗಿಂಗಿಗಾದ್ರೂ ಹೋಗಿಬರೋಣ್ವಾ ಅಂತ ಟೈಂ ನೋಡಿದ್ರೆ ಘಂಟೆ ಎಂಟೂಕಾಲು ತೋರಿಸುತ್ತಿತ್ತು. ದಿನಾ ಆರೂವರೆಗೆ ಜಾಗಿಂಗ್ ಹೋಗುವವ ಇವತ್ತು ಎಂಟರ ಮೇಲೆ ಹೋಗೋದೋ ಬೇಡ್ವೋ ಅಂತ ಯೋಚಿಸುತ್ತಿರುವಾಗ್ಲೇ ಫೋನಿನ ಘಂಟೆ ರಿಂಗಣಿಸಿತು. ನೋಡಿದ್ರೆ ತನ್ನ ಜಾಗಿಂಗ್ ಪಾರ್ಟನರ್. ದಿನಾ ತಾನೇ ಅವನಿಗೆ ಫೋನ್ ಮಾಡಿ ಕರೀತಿದ್ದೆ. ಇವತ್ತು ತಾ ಬರದ್ದನ್ನ ನೋಡಿ ಅವನೇನಾದ್ರೂ ಫೋನ್ ಮಾಡಿದ್ನಾ ಅಂತಂದುಕೊಳ್ಳುತ್ಲೇ ಫೋನ್ ಎತ್ತಿದ್ರೆ ಆ ಕಡೆಯಿಂದ ಗಾಬರಿ, ಗಡಿಬಿಡಿಯ ದನಿ ! 

ಎಲ್ಲಿದ್ಯಾ ? ಊರಿಗೆ ಹೋಗಿಲ್ಲ ಅಂತ ಹೇಳಿದ್ದೆ ಜಾಗಿಂಗ್ ಟ್ರಾಕ್ ಕಡೆ ಹೋಗಿರ್ಲಿಲ್ಲ ತಾನೇ ಅಂತ ಗಾಬರಿಯಲ್ಲಿ ಕೇಳ್ತಿದ್ದ ಅವ. ಇಲ್ಲಪ್ಪ. ಸ್ವಲ್ಪ ಹೊತ್ತಾಯ್ತಷ್ಟೆ. ಹೋಗ್ಬೇಕು ಅಂತಿದೀನಿ ಇನ್ನೂ ಜಾಗಿಂಗಿಗೆ. ಏನಾಯ್ತು ಅಂದ ಇವ. ಏ ಪುಣ್ಯಾತ್ಮ, ನೀನು ಲೇಟಾಗಿ ಎದ್ದಿದ್ದು ಒಳ್ಳೇದಾಯ್ತು. ದೇವರು ದೊಡ್ಡವ.  ಇನ್ನೊಂದು ನಾಲ್ಕು ದಿನ ಜಾಗಿಂಗ್ ಟ್ರಾಕ್ ಕಡೆ ತಲೆ ಹಾಕ್ಬೇಡ. ಇವತ್ತಿನ ಬೆಳಗ್ಗಿನ ಜಾವ ಅಲ್ಲಿ ಓಡಾಡ್ತಾ ಇದ್ದ ಕೆಲವರಿಗೆ ಚಿರತೆ ಕಾಣಿಸಿಕೊಂಡಿದೆಯಂತೆ! ಅವರು ಫಾರೆಸ್ಟಿನವರಿಗೆ ಹೇಳೊ ಹೊತ್ತಿಗೆ ಅದು ಅಲ್ಲೇ ಎಲ್ಲೋ ಅಡಗಿಕೊಂಡಿದೆಯಂತೆ.ಈಗ ಅದು ಎಲ್ಲಿದ್ಯೋ ಏನೋ. ನೀನಂತು ಮನೆಯಿಂದ ಹೊರಗೇ ಬರ್ಬೇಡ ಅಂದ  ಅವ. ಭಯದ ಬಾವಿಯಲ್ಲಿ ಬಿದ್ದೇ ಈಜಲಾಗದೇ ಒದ್ದಾಡುತ್ತಿದ್ದವನಿಗೆ ಸಮುದ್ರಕ್ಕೆ ಎತ್ತಿ ಎಸೆದಂತಾಯ್ತು !!

ತಾನು ಸಾಯೋದು ನ್ಯಾಯವಲ್ಲ ಅನ್ನೋ ತರವೇ ಗಡಿಯ ಕಾವ ಯೋದ ಪಾಪಿ ಪಾಕಿಗಳು ಮಧ್ಯರಾತ್ರಿ ಹಾರಿಸಿದ ಗುಂಡಿಗೆ ಬಲಿಯಾಗೋದು ನ್ಯಾಯವಲ್ಲ. ಬೆಳೆದ ಬೆಳೆಗೆ ಬೆಲೆ ಸಿಗದ ರೈತ ನೇಣಿಗೆ ಕೊರಳೊಡ್ಡುವುದೂ ನ್ಯಾಯವಲ್ಲ.ಆದ್ರೂ ಸಾಯುತ್ತಿರೋ ಅವರ ಬಗ್ಗೆ ಯಾರಾದ್ರೂ ಏನಾದ್ರೂ ಮಾಡುತ್ತಿದ್ದಾರಾ ಅನ್ನೋ ಆಲೋಚನೆಯೊಮ್ಮೆ ಬಂತವನಿಗೆ. ಯಾರ್ಯಾಕೆ ತಾನೂ ಆಲೋಚಿಸಿಲ್ಲ ಅವರ ಬಗ್ಗೆ! ಅವರಿಗೆಲ್ಲಾ ಬರೋ ಬದಲು ದೇಶಕ್ಕಾಗಿ ಏನೂ ಮಾಡದ ತನಗೇ ಸಾವು ಬಂದರೆ ತಪ್ಪೇನು ಅಂತಲೂ ಅನಿಸಿತೊಮ್ಮೆ ಅವನಿಗೆ. ಮನೆ ಪಕ್ಕದಲ್ಲೇ ಇರೋ ಜೋಪಡಿಗಳ ಜನ ಹೊಟ್ಟೆಗಿಲ್ಲದೇ ಅಂಗಲಾಚುತ್ತಿದ್ದರೂ ದರಿದ್ರ ಭಿಕ್ಷುಕರು ಅಂತ ಬಯ್ಯೋ ತಾನು ಬರ್ತಡೇ ಪಾರ್ಟಿ ಅಂತ ಅದ್ಯಾವ್ದೋ ಹೋಟೇಲಲ್ಲಿ ಕೇಕ್ ಕಟ್ ಮಾಡಿ ಅಂದು ಆರ್ಡರ್ ಮಾಡಿದ್ದ ಊಟದಲ್ಲಿ ಅರ್ಧಕ್ಕರ್ಧ ಚೆಲ್ಲಿದ್ದಕ್ಕೆ ತಾಯಿ ಅನ್ನಪೂರ್ಣೇಶ್ವರಿಯೇನಾದ್ರೂ ಶಾಪ ಕೊಟ್ಟಳೇ ? ಬಸ್ಸಲ್ಲಿ ಹೋಗುತ್ತಿದ್ದಾಗ ತನ್ನ ಬಳಿಯಿದ್ದ ದೊಡ್ಡ ಬಾಟಲಿಯಲ್ಲಿ ಒಂದು ಗುಟುಕಾದ್ರೂ ಕೊಡುತ್ತಿನೇನೋ ಅಂತ ನೋಡುತ್ತಿದ್ದ ಪಕ್ಕದ ಸೀಟಿನ ಅಜ್ಜನಿಗೆ ಕರುಣೆಗಾದರೂ ಕೇಳದೇ ಕೊನೆಗೆ ಆ ಬಾಟಲಿಯ ನೀರನ್ನ ಮುಖ ತೊಳೆಯೋಕೆ ಬಳಸಿದ್ದಕ್ಕೆ ಕಾವೇರಿ ತಾಯೇನಾದ್ರೂ ಸಿಟ್ಟಿಗೆದ್ದಳೇ ಅಂತಲೂ ಅನಿಸಿತೊಮ್ಮೆ. ಬರ್ರೋ ಅಂತ ಒಬ್ಬನೇ ಗಾಡಿಯಲ್ಲಿ ಹೋಗುತ್ತಿದ್ದವನ ದಿನಾ ನೊಡುತ್ತಾ ಲಿಫ್ಟ್ ಕೊಡುತ್ತೀನೇನೋ ಎಂಬ ಆಸೆಗಂಗಳಲ್ಲಿ ತನ್ನತ್ತ ನೋಡೋ ಭಾರದ ಬ್ಯಾಗುಗಳ ಮಕ್ಕಳು ನೆನಪಾದರು. ಡೊನೇಷನ್ ಕೇಳೋಕೆ ಅಂತ ಬಂದುಬಿಡ್ತಾರೆ. ನಂಗೆ ಯಾರಾದ್ರೂ ಒಂದು ನಯಾಪೈಸಾ ಕೊಟ್ಟಿದ್ದುಂಟಾ ಅಂತ ಅನಾಥಾಶ್ರಮಕ್ಕೆ ದೇಣಿಗೆ ಕೇಳೋಕೆ ಬಂದವರನ್ನು ಬೈದಿದ್ದು, ಆ ಸಮಯದಲ್ಲಿ ಚಿಕ್ಕಂದಿನಲ್ಲಿ ತನ್ನ ಬೆಳೆಸಿದ ಸ್ಕಾಲರ್ ಶಿಪ್ಪು, ವಾರಾನ್ನಗಳ ನೆನಪಿಗೆ ಬರದಿದ್ದುದು ನೆನಪಾಯ್ತು ! ಗೂಡಲ್ಲಿ ಜಾಗವಿಲ್ಲದಂತೆ ತುರುಕಿರೋ ಅದೆಷ್ಟೋ ಹಳೇ ಬಟ್ಟೆಗಳಿದ್ದವು. ತಾನೊಬ್ಬ ಬೆಚ್ಚಗೆ ಹೊದ್ದು ಮಲಗಿದ ದಿನಗಳಲ್ಲಿ ಅವುಗಳನ್ನೊಂದು ಅನಾಥಾಶ್ರಮಕ್ಕಾದರೂ ಕೊಡೋಣ್ವಾ ಎಂಬ ಭಾವ ಕೆಲಸಲ ಕಾಡಿದ್ರೂ ಅದಕ್ಯಾಕೋ ಮನಸ್ಸು ಮಾಡಿರಲಿಲ್ಲ. ಈ ಎಲ್ಲಾ ಭಾವಗಳು ಒಟ್ಟಾಗಿ ಕಾಡತೊಡಗಿದಾಗ ತನ್ನಂಥಾ ಪರಮಸ್ವಾರ್ಥಿ ಸತ್ತರೇ ಸರಿಯಾ ಅನಿಸತೊಡಗಿತವನಿಗೆ.. 

ಮತ್ತರೆಕ್ಷಣದಲ್ಲಿ ತಪ್ಪಾಗ್ತಿದ್ದಿದ್ದು ಸರಿ. ಸಾಯೋ ಬದ್ಲು ಅದನ್ನು ಸರಿಪಡಿಸೋಕೆ ಪ್ರಯತ್ನ ಮಾಡ್ಬೋದು ನಾನು.  ಸಾಯೋದೇ ಆದ್ರೆ ಸಾಯಬೇಕಾದ ಅದೆಷ್ಟೋ ಭ್ರಷ್ಟರಿದ್ದಾರೆ. ದೇಶದ್ರೋಹಿಗಳಿದ್ದಾರೆ! ಅವರನ್ನೆಲ್ಲಾ ಬಿಟ್ಟು ನಾನೇ ಯಾಕೆ ? ದೇಶಕ್ಕಾಗಿ ಏನೂ ಮಾಡದಿದ್ದರೂ ಬೇರೆಯವರಿಗೆ ಯಾವ ತೊಂದರೆಯನ್ನೂ ಕೊಡದೇ ನನ್ನ ಪಾಡಿಗೆ ಬದುಕುತ್ತಿರುವ ನನಗೇ ಯಾಕೆ ಹೀಗಾಗ್ತಿದೆ ಇತ್ತೀಚಿಗೆ ಅಂತ ಎಷ್ಟು ಯೋಚಿಸಿದ್ರೂ ಉತ್ತರ ಹೊಳೆಯಲಿಲ್ಲ. ಸಿಕ್ಕಾಪಟ್ಟೆ ಟೆನ್ಷನ್ನಾಗ್ತಿದೆಯಲ್ಲಾ ಅಂತ ಗೂಡಿಗೆ ಕೈಹಾಕಿದವನಿಗೆ ಅಲ್ಲಿದ್ದ ಹೊಗೆಬತ್ತಿಯನ್ನು ನೋಡುತ್ತಿದ್ದ ಹಾಗೆಯೇ ಏನೋ ಹೊಳೆದಂತಾಯ್ತು. ಹಾಗೆಯೇ ಸ್ವಲ್ಪ ಈ ಕಡೆ ತಿರುಗಿದ . ಮೊಳೆಯಲ್ಲಿ ನೇತಾಡುತ್ತಿದ್ದ ಎಂದೂ ತಲೆಗೇರದ ಶಿರಸ್ತ್ರಾಣ ಅಣಕಿಸಿ ನಕ್ಕಂತಾಯಿತು !. ರೂಮಿನ ಮತ್ತೊಂದು ಮೂಲೆಗೆ ಕತ್ತು ಹೊರಳಿಸಿದ್ರೆ ಅಲ್ಲಿದ್ದ ಖಾಲಿ ಬೀರು ಬಾಟಲಿಗಳು ತನ್ನ ಕಂಡು ಬಿದ್ದೂ ಬಿದ್ದೂ ನಕ್ಕಂತಾಯಿತು. ನಾವೇ ಕೊಲ್ಲಬೇಕಂತಿದ್ವಿ ನಿನ್ನ. ಮೂರು ಅಪಘಾತಗಳಿಂದ ಹೆಂಗೋ ಬದಿಕಿದ್ದೀಯ, ಗಟ್ಟಿಜೀವ ನೀನು. ಆದ್ರೆ ನಿನ್ನ ಕೊಲ್ಲೋಕೆ ನಾವೇ ಸಾಕು ಬಿಡೋ. ಹಹಹ ಅಂತ ಕೇಕೆ ಹಾಕಿ ನಕ್ಕಂತಾಯಿತು ಅವು. ತನ್ನ ಹಿಂಬಾಲಿಸಿ ಬರುತ್ತಿರೋ ಸಾವು ಇನ್ನೆಲ್ಲೋ ಅಲ್ಲ, ತನ್ನ ಅವಿವೇಕ, ಸ್ವಾರ್ಥ, ದುಷ್ಚಟಗಳಲ್ಲೇ ಅಡಗಿ ಕುಳಿತಿದೆ ಎಂದರಿತ ಅವ. ಅವುಗಳನ್ನು ತಿದ್ದಿಕೊಳ್ಳಲು ಮುಂದಾದ ಎಂಬಲ್ಲಿಗೆ ಅವನ ಕಾಡಹತ್ತಿದ್ದ ಸಾವಿನವತಾರಗಳ ಗುರಿಯೂ ಬದಲಾಯ್ತು.  
ದುಷ್ಚಟಗಳೇ ಕತ್ತಲು ಸ್ವಾರ್ಥವೇ ಸಾವು, 
ವಿವೇಕವೇ ಬೆಳಕು,ನಿಸ್ವಾರ್ಥವೇ ಬದುಕು ಎಂದು ಮನದ ಮೂಲೆಯಲ್ಲೆಲ್ಲೋ ಅನುರಣಿಸಿದಂತಾಯಿತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಸಾವು: ಪ್ರಶಸ್ತಿ

  1. ವಿವೇಕವೇ ಬೆಳಕು,ನಿಸ್ವಾರ್ಥವೇ ಬದುಕು ಎಂದು ಮನದ ಮೂಲೆಯಲ್ಲೆಲ್ಲೋ ಅನುರಣಿಸಿದಂತಾಯಿತು.

    ಆಹಾ! ಎಂಥ ಮಾತು!

     

Leave a Reply

Your email address will not be published. Required fields are marked *