ಸಾವಿರದ ಸರದಾರ ರವಿ ಭಜಂತ್ರಿಯವರ “ನಗೆ ರತ್ನಮಂಜರಿ” ವಿಡಿಯೋ ಸಿ.ಡಿ.: ಗುಂಡೇನಟ್ಟಿ ಮಧುಕರ

gundenatti madhukar
ಅಂದು ಹುಕ್ಕೇರಿ ಬಾಳಪ್ಪನವರನ್ನು ಸಾವಿರ ಪದಗಳನ್ನು ಹಾಡಿದವರೆಂಬ ಹಿನ್ನೆಲೆಯಲ್ಲಿ ಬೇಂದ್ರೆಯವರು ‘ಸಾವಿರದ ಸರದಾರ’ ಅಂದರೆ ‘ಸಾವು’ ಇರದ ಸರದಾರ ಎಂಬ ಅರ್ಥದಲ್ಲಿ ಹೊಗಳಿದ್ದರಂತೆ. ಹುಕ್ಕೇರಿ ಬಾಳಪ್ಪನವರು ತಮ್ಮ ಹಾಡುಗಳಿಂದ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅಂದು ಬೇಂದ್ರೆಯವರು ಹೇಳಿದ ಮಾತು ಇಂದು ಮಾತಿನ ಮೋಡಿಗಾರ ರವಿ ಭಜಂತ್ರಿಯವರಿಗೆ ಅನ್ವಯಿಸುತ್ತದೆ. ಸಾವಿರ ಹಾಸ್ಯಭಾಷಣಗಳ ಧಾಖಲೆ ಮಾಡುವ ಮೂಲಕ ಭಜಂತ್ರಿಯವರು ಸಾವಿರದ ಸರದಾರರಾಗಿದ್ದಾರೆ. ಇವರ ಭಾಷಣಗಳೂ ‘ಸಾವು’ ಇರದ ಭಾಷಣಗಳೆಂಬುದರಲ್ಲಿ ಎರಡು ಮಾತಿಲ್ಲ. 
     
ರವಿ ಭಜಂತ್ರಿ ಹಾಸ್ಯಲೋಕದಲ್ಲಿ ಚಿರಪರಿಚಿತ ಹೆಸರು. ಕರ್ನಾಟಕ ಉದ್ದಗಲಕ್ಕೂ ರವಿ ಭಜಂತ್ರಿ ಎಂದೊಡನೆ ಅವರನ್ನು ಗುರುತಿಸುವುದು ಅವರ ವೃತ್ತಿಯಿಂದಲ್ಲ, ಅವರ ಪ್ರವೃತ್ತಿಯಿಂದ. ರವಿಯವರು ತಮ್ಮ ನಗೆಮಾತುಗಳಿಂದ ಅಷ್ಟೊಂದು ಎಲ್ಲರ ಮನಸ್ಸಿನ ಮೇಲೆ ಅಚ್ಚೊತ್ತಿಬಿಟ್ಟಿದ್ದಾರೆ. ರವಿ ಭಜಂತ್ರಿಯವರ ಭಾಷಣದ ಶೈಲಿಯೇ ವಿಶಿಷ್ಟವಾದದ್ದು. ಅವರ ಆ ಮಾತಿನ ಏರಿಳಿತ, ಆ ಕಂಚಿನ ಕಂಠ, ಹಾವಭಾವವೆಲ್ಲ ನೋಡಿದಾಗ ಅವರ ಮಾತಿನಲ್ಲಿ ಸ್ವಂತಿಕೆ ಇದೆ. ಕೆಲ ಹಾಸ್ಯಭಾಷಣಕಾರರ ಮಾತುಗಳನ್ನು ಕೇಳಿದಾಗ ಇವರ ಮಾತಿನಲ್ಲಿ ರವಿ ಭಜಂತ್ರಿಯವರ ಮಾತಿನ ಛಾಯೆಯಿದೆಯೆಂದು ಹಲವರು ಮಾತನಾಡಿರುವುದನ್ನು ನಾನು ಕೇಳಿದ್ದೇನೆ. ಆದರೆ ಭಜಂತ್ರಿಯವರ ಮಾತುಗಳು ಮಾತ್ರ ಭಜಂತ್ರಿಯವರದ್ದೇ. ಅವರಲ್ಲಿ ಯಾರದೇ ಅನುಕರಣೆಯಿಲ್ಲ. ಎರಡು–ಮೂರು ತಾಸುಗಳವರೆಗೆ ನಿರರ್ಗಳವಾಗಿ ಹಾಸ್ಯಧಾರೆ ಹರಿಸುವ ಭಜಂತ್ರಿಯವರ ಮಾತಿನಲ್ಲಿ ಜನರನ್ನು ಸೆರೆಹಿಡಿಯುವ ಚುಂಬಕ ಶಕ್ತಿಯಿದೆ.  ಅಲ್ಲದೇ ಇವರ ಮಾತುಗಳು ಕೇವಲ ಹಾಸ್ಯ ಮಾತಾಗಿರದೇ ಸಮಾಜಕ್ಕೊಂದು ಸಂದೇಶ ಕೊಡುತ್ತವೆಂಬುದರಲ್ಲಿ ಎರಡು ಮಾತಿಲ್ಲ.
    
ಇದೇ ದಿ. 13 ಶನಿವಾರದಂದು ಸಾಯಂಕಾಲ 4-30 ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭನವ ವಿಶ್ವಸ್ತ ಮಂಡಳಿಯವರು ರವಿ ಭಜಂತ್ರಿಯವರ ‘ನಗೆ ರತ್ನಮಂಜರಿ’  ಎಂಬ ವಿಡಿಯೋ ಸಿ.ಡಿ. ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನಿವೃತ್ತ ಪ್ರಾಚಾರ್ಯರಾದ ಡಾ| ಬಸವರಾಜ ಜಗಜಂಪಿಯವರು ಈ ವಿಡಿಯೋ ಸಿ.ಡಿ.ಯನ್ನು ಬಿಡುಗಡೆಗೊಳಿಸಿದರು. 
     
“ನಗೆ ರತ್ನಮಂಜರಿ” ಓಂಕಾರ ಮ್ಯೂಜಿಕ್ ಸಂಸ್ಥೆಯವರು ಹೊರತರುತ್ತಿರುವ ನಗೆಮಾತುಗಾರ ರವಿಯವರ ಎರಡನೇ ವಿಡಿಯೋ ಸಿ.ಡಿ. ಒಂದು ಗಂಟೆಯ ಕಾಲ ರವಿಯವರು ಈ ಮುದ್ರಿಕೆಯಲ್ಲಿ ನಗೆಮದ್ದುಗಳನ್ನು ಸಿಡಿಸಿ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    
ಇಂದಿನ ಯಾಂತ್ರಿಕ ಬದುಕಿನಲ್ಲಿ ದೂರದರ್ಶನ ನೋಡುವುದು ಮನರಂಜನೆಯಾಗದೇ ಅದೂ ಕೂಡ ಒಂದು ಯಾಂತ್ರಿಕ ಜೀವನದಲ್ಲೊಂದಾಗಿ ಬಿಟ್ಟಿದೆ! ಈ ಏಕತಾನತೆಯಿಂದ ಮನುಷ್ಯ ಹೊಸತನ್ನು ಬಯಸುತ್ತಾನೆ. ರವಿ ಭಜಂತ್ರಿಯವರ ಈ ‘ನಗೆ ರತ್ನಮಂಜರಿ’ ಯನ್ನು ಒಂದು ಗಂಟೆ ವೀಕ್ಷಿಸುವುದರಿಂದ ಮನುಷ್ಯ ತನ್ನೆಲ್ಲ ಬೇಸರವನ್ನು ಮರೆತು ಮತ್ತೆ ರಿಫ್ರೆಶ್ ಆಗುವುದರಲ್ಲಿ ಸಂದೇಹವಿಲ್ಲ. 
    
ಹಾಸ್ಯ ಭಾಷಣಕಾರನಿಗೆ ಮಾತಿನಷ್ಟೇ ಸಾಹಿತ್ಯದ ಓದೂ ಅತ್ಯವಶ್ಯವಾಗಿದೆ. ಭಜಂತ್ರಿಯವರು ದ.ರಾ. ಬೇಂದ್ರೆ, ಡಿ.ವಿ.ಜಿ. ಮುಂತಾದ ಖ್ಯಾತನಾಮರ ಸಾಹಿತ್ಯದ ಉದಾಹರಣೆಯನ್ನು ತಮ್ಮ ನಗೆ ಮಾತುಗಳಲ್ಲಿ ಸೇರಿಸುವುದರಿಂದ ನಗೆಯೊಂದಿಗೆ ತಲೆಯೂ ಕೆಲಸ ಮಾಡಲು ಇವರ ಭಾಷಣದಲ್ಲಿ ಅವಕಾಶವಿದೆ. ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಬಿಡುವಂತಹ ಮಾತುಗಳು ಇವರ ಭಾಷಣವಲ್ಲ. ಗಂಡ ಹೆಂಡಿರ ಸಂಬಂಧ ಎಷ್ಟು ಪವಿತ್ರವಾದದ್ದೆಂಬ ಮಾತನ್ನು ಹೇಳುತ್ತ ಭಜಂತ್ರಿಯವರು ಬೇಂದ್ರೆಯವರ ಸುಂದರವಾದ ಉಕ್ತಿಯೊಂದನ್ನು ತಮ್ಮ ಭಾಷಣದಲ್ಲಿ ಹಂಚಿಕೊಂಡಿದ್ದಾರೆ. ‘ನಿನ್ನ ಸಂಗ ನಂಗ- ನನ್ನ ಸಂಗ ನಿಂಗ – ಬಂಗಾರದ ಬಿಂದಿಗೆ ಗಂಗಾ ತುಂಬಿದಂಗ’ ಎಂಬ  ಮಾತನ್ನು ಯಾರು ತಾನೆ ಮರೆಯಲು ಸಾಧ್ಯ. ಅಲ್ಲದೇ ಡಿ.ವಿ.ಜಿ. ಯವರನ್ನೂ ನೆನಪಿಸಿಕೊಂಡಿದ್ದಾರೆ. ಎಲ್ಲವನ್ನೂ ನಾನಿಲ್ಲಿ ಹೇಳುವುದಿಲ್ಲ. ನೀವು ‘ನಗೆ ರತ್ನಮಂಜರಿ’ ವಿಡಿಯೋವನ್ನು ಕೊಂಡು ಕೇಳುವುದರ ಮೂಲಕ ಕಲಾವಿದರ ಹಾಗೂ ನಿಮ್ಮ ತಲೆಯನ್ನು ಹಗುರಮಾಡಿಕೊಳ್ಳಿ. ಜೇಬಿಗೆ ಭಾರವಾಗುವಂತಹ ಬೆಲೆಯನ್ನೇನು ಅವರಿಟ್ಟಿಲ್ಲ. ಕೇಳುಗರಿಗೆ ಹೊರೆಯಾಗದಂತೆ ಕೇವಲ ಅರವತ್ತು ರೂಪಾಯಿ ವಿಡಿಯೋ ಸಿ.ಡಿ. ಬೆಲೆಯನ್ನಿಟ್ಟಿದ್ದು ಕೇಳುಗರು ನಗುನಗುತ್ತ ಕೊಂಡುಕೊಂಡು ಕುಟುಂಬ ಸಮೇತರಾಗಿ ಹಾಸ್ಯಧಾರೆಯಲ್ಲಿ ಮೀಯಬಹುದಾಗಿದೆ.

Ravi Bhajranthi
    
ಕರ್ನಾಟಕವಷ್ಟೇ ಅಲ್ಲದೇ ಹೊರದೇಶಗಳಾದ ದುಬೈ, ಅಬುದಾಬಿ, ಕತಾರ್, ಇಂಡೋನೇಷಿಯಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮುಂತಾದೆಡೆ ತಮ್ಮ ನಗೆಮಾತುಗಳಿಂದ ರಂಜಿಸುತ್ತ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ಕೊಟ್ಟಿರುವ ರವಿ ಭಜಂತ್ರಿಯವರ  ಈ ‘ನಗೆ ರತ್ನಮಂಜರಿ’ಯಲ್ಲಿ ಯಾವ ಅಶ್ಲೀಲತೆ, ದ್ವಂದ್ವಾರ್ಥದ ಮಾತುಗಳಿಲ್ಲದ, ಆರೋಗ್ಯಕರ ಹಾಸ್ಯವನ್ನು ಜನರಿಗೆ ನೀಡಿದ್ದಾರೆ. ಬೀಚಿಯವರ ‘ನಗಬೇಕು ಅವರಿವರನ್ನು ನೋಡಿಯಲ್ಲ ಮೊದಲು ನಿನ್ನನ್ನು ನೀನು ನೋಡಿ ನಗಲು ಕಲಿ’ ಎಂಬ ಮಾತಿನಂತೆ ಇಲ್ಲಿ ರವಿ ಭಜಂತ್ರಿಯವರು ತಮ್ಮನ್ನೇ ತಾವು ಹಾಸ್ಯಕ್ಕೆ ಗುರಿ ಮಾಡಿಕೊಂಡಿದ್ದಾರೆ. ಈ ಸಧ್ಯ ಸರ್ಕಾರಿ ಬಿಎಡ್ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆಲ್ಲಿಸುತ್ತಿರುವದರಿಂದ ಸಹಜವಾಗಿ ವಿದ್ಯಾರ್ಥಿ ಹಾಗೂ ಗುರುಗಳ ನಡುವಿನ ನಗೆಬುಗ್ಗೆಗಳು ಹೆಚ್ಚಾಗಿ ಕಂಡು ಬಂದರೂ ಸಮಾಜದ ಎಲ್ಲ ಮಗ್ಗಲುಗಳತ್ತಲೂ ತಮ್ಮ ವಾರೆನೋಟ ಬೀರಿದ್ದಾರೆ.
    
ಗಂಡನ ಮನೆಗೆ ಮದುಮಗಳನ್ನು ಕಳುಹಿಸುವ ಸಂದರ್ಭ,  ವೈದ್ಯರು, ಮಕ್ಕಳು, ತಂದೆ-ತಾಯಿ ಹೀಗೆ ಎಲ್ಲ ವಿಷಯಗಳ ಕುರಿತು  ಮಾತನಾಡಿರುವ ಭಜಂತ್ರಿಯವರ ಮಾತು ಎಷ್ಟು ಮಾತನಾಡಿದರೂ ಅವರ ಮಾತೇಕೆ ಮುಗಿಯಿತೆಂದು ಕೇಳುಗನಿಗೆ ಅನ್ನಿಸದೇ ಇರಲಾರದು.
    
ರವಿ ಭಜಂತ್ರಿಯವರ  ವಿಡಿಯೋ ಸಿ.ಡಿ ಕೇಳಿ ಹೊಟ್ಟೆ ಹುಣಾಗುಂತೆ ಕುಟುಂಬ ಸದಸ್ಯರೊಡಗೂಡಿ ನಕ್ಕು ನಲಿದಿರುವ ನಾನು ಹಲವಾರು ನಗೆಹನಿಗಳನ್ನು ನಿಮ್ಮೊಂದಿಗೆ ಈ ಲೇಖನದಲ್ಲಿ ಹಂಚಿಕೊಳ್ಳಬೇಕೆಂದು ಮನಸ್ಸು ತುಡಿಯುತ್ತಲಿದೆಯಾದರೂ ನನ್ನ ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದೇನೆ. ಓದಿ ಆನಂದಿಸುವ ವಿಷಯಗಳೇ ಬೇರೆ. ಕೇಳಿ ಆನಂದಿಸುವ ವಿಷಯಗಳೇ ಬೇರೆ. ಏಕೆಂದರೆ ಆ ವಿಡಿಯೋ ಸಿ.ಡಿ.ಯನ್ನು ಕೊಂಡು ಕೇಳವುದರಲ್ಲಿರುವ ಆನಂದ ಓದುವುದರಲಿಲ್ಲ.
    
ಈ ವಿಡಿಯೋ ಸಿ.ಡಿ.ಯಲ್ಲಿ ರವಿ ಭಜಂತ್ರಿಯವರ ಪರಿಚಯವನ್ನು ಅಕ್ಷರದಲ್ಲಿ ಮಾಡಿಕೊಟ್ಟಿದ್ದಾರೆ. ಅದಕ್ಕಿಂತಲೂ ಯಾರಾದರೂ ಪರಿಚಯಿಸುವುದರೊಂದಿಗೆ ಭಜಂತ್ರಿಯವರ ಮಾತುಗಳು ಪ್ರಾರಂಭವಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೆಂದು ನನ್ನ ಅನಿಸಿಕೆ. ಇರಲಿ, ಹಾಸ್ಯ ಚಕ್ರವರ್ತಿ ರವಿ ಭಜಂತ್ರಿಯವರನ್ನು  ಹಾಗೂ ಅವರ ದೃಶ್ಯಸುರಳಿಯನ್ನು ಹೊರತಂದಿರುವ ಓಂಕಾರ ಮ್ಯುಸಿಕ್ ಸಂಸ್ಥೆಯವರನ್ನು ಮತ್ತೊಮ್ಮೆ ಮುಗದೊಮ್ಮೆ ಅಭಿನಂದಿಸುತ್ತೇನೆ.

-0-0-0-

“ನಗೆರತ್ನಮಂಜರಿ” ವಿಡಿಯೋ ಸಿ.ಡಿ.
ಹಾಸ್ಯಭಾಷಣ: ರವಿ ಭಜಂತ್ರಿ
ಓಂಕಾರ ಮ್ಯೂಜಿಕ್ ಸಂಸ್ಥೆ
ಬೆಲೆ: ರೂ. 60
ಮೊ: 9900672800    


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x