ಸಾವಿರದ ನೋಟು: ಗಣೇಶ್ ಖರೆ

ಬೆಂಗಳೂರಿನ ರಸ್ತೆಯ ಮೂಲೆಯಲ್ಲಿ ಡೊಂಬರಾಟದವರು ತಮ್ಮ ಕಸರತ್ತು ತೋರಿಸುವಲ್ಲಿ ನಿರತರಾಗಿದ್ದರು. ನೋಡಿದರೆ ಯಾವುದೋ ಹಳ್ಳಿಯ ಮೂಲೆಯಿಂದ ಬಂದವರಂತೆ ಅವರ ವೇಶ ಭೂಶಣವಿತ್ತು. ಹಗ್ಗದ ಮೇಲೆ ನಡೆಯುವುದು, ಗೋಲಕದೊಳಗೆ  ತಮ್ಮ ಮೈಯ್ಯನ್ನು ತೂರಿಸುವುದು, ತಲೆ ಕೆಳಗಾಗಿ ಕೈಯ್ಯ ಮೇಲೆ ನಡೆಯುವುದು ಹೀಗೆ ಕಸರತ್ತು ಸಾಗಿತ್ತು. ಸಿಗುವ ಬಿಡಿ ಕಾಸಿಗಾಗಿ ಜೀವವನ್ನು ಪಣಕ್ಕಿಟ್ಟು ಮಾಡುವ ಕಸರತ್ತು ಜನರನ್ನು ಅವರತ್ತ ಆಕರ್ಷಿಸುತ್ತಿತ್ತು. ಡೊಂಬರಾಟದ ಗುಂಪಲ್ಲಿ ಇದ್ದದ್ದು ಮೂರು ಜನ, ಎಲ್ಲರೂ ಹೆಂಗಸರೇ. ಒಬ್ಬಳಿಗೆ ಸುಮಾರು ಮೂರರಿಂದ ನಾಲ್ಕು ವಯಸ್ಸಿರರಬಹುದು, ನೋಡೊಕೆ ಮುಗ್ಧ ಮಗು ಆದರೆ ಆಟದಲ್ಲಿ ಬಲು ಜೋರಿತ್ತು, ಇನ್ನೊಬ್ಬಳಿಗೆ ಸುಮಾರು ಹತ್ತು ಹನ್ನೆರೆಡರಿಬಹುದು, ಮಾಸಿದ ಬಟ್ಟೆಯಲ್ಲೂ ಆಕೆ ಸುಂದರಿ. ಮತ್ತೊಬ್ಬಳು ಅವರಿಬ್ಬರ ತಾಯಿ, ನೋಡೊಕೆ ಚಿಕ್ಕ ವಯಸ್ಸು ತುಂಬಿದ ಮೈಕಟ್ಟು.  ಜನರ ಗುಂಪು ಸ್ವಲ್ಪ ಹೊತ್ತು ಕಸರತ್ತು ನೋಡಿ ಎದುರಿಗೆ ಹಾಸಿದ್ದ ಬಟ್ಟೆ ತುಂಡಿನ ಮೇಲೆ ನಾಲ್ಕು ಕಾಸು ಚೆಲ್ಲಿ ಮಾಯವಾಗುತ್ತಿದ್ದರು. ಅವರ ಕಸರತ್ತು ನಿರಂತರ ನಡೆದಿತ್ತು, ಮಧ್ಯ ಸ್ವಲ್ಪ ವಿಶ್ರಮಿಸಿ ಮತ್ತೆ ತಮ್ಮ ತಮ್ಮ ಕಸರತ್ತು ತೋರಿಸುವಲ್ಲಿ ನಿರತವಾಗಿದ್ದರು. ಹೀಗೆ ದಿನವಿಡೀ ದುಡಿದಾಗ ಸಿಗುತ್ತಿದ್ದದ್ದು ನೂರೋ ಇನ್ನೂರೋ. ಅದರಲ್ಲೇ ಊಟಕ್ಕಾಗಿ ಖರ್ಚು ಮಾಡಿ ಸ್ವಲ್ಪ ಕೂಡಿಡುತ್ತಿದ್ದಳು ಆ ತಾಯಿ.

ಒಂದು ದಿನ ಮುಂಜಾನೆ ಹೊತ್ತು ಅವರ ಕಸರತ್ತು ನಡೆದಿತ್ತು, ಜನಜಂಗುಳಿ ಕಡಿಮೆಯಿತ್ತು. ಕೆಲಸದ ದಿನವಾದ್ದರಿಂದ ಎಲ್ಲರೂ ತಮ್ಮ ತಮ್ಮ ಕೆಲಸದ ಗಡಿಬಿಡಿಯಲ್ಲಿ ಇವರತ್ತ ಗಮನ ಹರಿಸದೇ ಮುಂದೆ ಸಾಗುತ್ತಿದ್ದರು. ದೂರದಿಂದ ಒಬ್ಬ ಇವರ ಆಟವನ್ನು ಬಹಳ ಹೊತ್ತಿನಿಂದ ನೋಡುತ್ತಿದ್ದ, ಸುಮಾರು ಮೂವತ್ತರ ಆಸುಪಾಸಿನವನಿರಬಹುದು. ಜನರೆಲ್ಲ ಅವರಿಂದ ದೂರವಾದಂತೆ ಅತ್ತಿತ್ತ ಗಮನಿಸಿ ಇವರತ್ತ ಆಗಮಿಸಿದ. ಇಬ್ಬರೂ ಹೆಣ್ಣು ಕೂಸುಗಳು ಎಂದಿನಂತೆ ತಮ್ಮ ಆಟ ಪ್ರದರ್ಶಿಸತೊಡಗಿದರು. "ದಿನವಿಡೀ ಹೀಗೆ ಕಸರತ್ತು ಮಾಡಿದರೆ ಎಷ್ಟು ಸಿಗುತ್ತೆ?" ನೇರ ಪ್ರಶ್ನಿಸಿದ. "ಏನೋ ನೂರಿನ್ನೂರು ಸಿಗತೈತೆ ಸಾಮಿ" ಎನ್ನುವ ಉತ್ತರ. "ನಾನು ಸಾವಿರ ಕೊಡ್ತೇನೆ ಈಕೆಯನ್ನು ಒಂದು ದಿನ ನನ್ನ ಜೋತೆ ಕೆಲಸಕ್ಕೆ ಕಳಿಸ್ತೀಯಾ?" ಮಧ್ಯ ವಯಸ್ಸಿನ ಹುಡುಗಿಯತ್ತ ಬೊಟ್ಟು ಮಾಡಿದ. "ಎಂತ ಕೆಲ್ಸಾ ಸಾಮಿ? ಇಲ್ಲಾ ಒಬ್ಬೊಬ್ಬಳನ್ನ ಹಾಗೆ ಕಳ್ಸಲ್ಲಾ, ಬೇಕಾದ್ರೆ ಎಲ್ಲರೂ ಬತ್ತೀವಿ…" ಪ್ರಶ್ನಾರ್ತಕವಾಗಿ ಅವನತ್ತ ನೋಡಿದಳು ಆ ತಾಯಿ. "ನಮ್ಮದು ಸರ್ಕಸ್ ಕಂಪನಿ ಇದೆ, ಅಲ್ಲಿ ಒಬ್ಬಳು ಹುಡುಗಿ ನಾಪತ್ತೆ ಆಗಿದಾಳೆ, ಅವಳ ಬದಲಿಗೆ ಹುಡುಗಿ ಬೇಕಷ್ಟೆ ಹಾಗೆ ಎಲ್ಲರನ್ನೂ ಕರ್ಕೊಂಡು ಹೋಗೊಕೆ ಆಗಲ್ಲ. ಅಲ್ಲಿ ಇವಳು ಚೆನ್ನಾಗಿ ಕೆಲಸ ಮಾಡಿದ್ರೆ ಖಾಯಂ ಆಗಿ ಕೆಲ್ಸ ಸಿಗುತ್ತೆ ತುಂಬಾ ದುಡ್ಡು ಮಾಡಬಹುದು. ಇವತ್ತಿಗೆ ಇಷ್ಟು ಕೊಡ್ತೆನೆ" ಅಂತ ಸಾವಿರದ ನೋಟನ್ನು ಎದುರಿಗೆ ಹಿಡಿದ. ಮೂವರೂ ಮುಖ ಮುಖ ನೋಡತೊಡಗಿದರು. ಕೊನೆಗೂ ದುಡ್ಡಿನ ಆಸೆಗಾಗಿ ಹಿಂದೆ ಮುಂದೆ ವಿಚಾರಿಸದೇ ಮಗಳನ್ನು ಅವನೊಟ್ಟಿಗೆ ಕಳಿಸಿಕೊಡಲು ಆಕೆ ತಯಾರಾದಳು. ಸಂಜೆ ಹೊತ್ತಿಗೆ ಇಲ್ಲೇ ತಂದು ಬಿಡುತ್ತೇನೆ ಅಂತ ಆಕೆಯನ್ನು ಜೊತೆಗೆ ಕರೆದುಕೊಂಡು ಹೊರಟನಾತ. ಅಮ್ಮನತ್ತ ಒಮ್ಮೆ ದಿಟ್ಟಿಸಿ ನೋಡಿ ಅವನೊಟ್ಟಿಗೆ ಹೆಜ್ಜೆ ಹಾಕಿದಳು ಆ ಮುಗ್ಧೆ.

ಸಂಜೆ ಕಳೆದು ರಾತ್ರಿಯಾದರೂ ಮಗಳ ಪತ್ತೆಯಿಲ್ಲ, ಭಯ ದುಗುಡ ಆಕೆಯಲ್ಲಿ ಆವರಿಸತೊಡಗಿತ್ತು. ದಿನವಿಡಿ ಆಕೆಯಿಲ್ಲದೇ ಕಳೆದಿದ್ದು ಇದೇ ಮೊದಲ ಬಾರಿಯಾಗಿತ್ತು. ಈ ದಿನ ಎಷ್ಟೋ ವರುಶ ಕಳೆದಂತೆ ಆಕೆಗೆ ಭಾಸವಾಗತೊಡಗಿತ್ತು. ಒಂಚೂರು ತಿಂದು ಪುಟ್ಟ ಮಗು ನಿದ್ರಿಸಿತ್ತು. ರಾತ್ರಿಯೆಲ್ಲ ಮಗಳ ನಿರೀಕ್ಷೆಯಲ್ಲಿ ಕಳೆದಿತ್ತು. ನಿದ್ರೆಯೂ ಆಕೆಯನ್ನು ಆವರಿಸಲಿಲ್ಲ. ಬೆಳಗಾಯಿತು, ನಿತ್ಯದಂತೆ ಜನರೆಲ್ಲ ತಮ್ಮ ತಮ್ಮ ಕೆಲಸದಲ್ಲಿ ಮಗ್ನವಾಗತೊಡಗಿದ್ದರು. ಸಂಜೆ ಬರಬೇಕಿದ್ದ ಮಗಳು ರಾತ್ರಿ ಕಳೆದು ಬೆಳಗಾದರು ಬರದಿದ್ದದ್ದು ಆಕೆಯಲ್ಲಿ ಪ್ರಶ್ನೆಯಾಗೇ ಉಳಿದಿತ್ತು. ಎಲ್ಲಿ ಅವಳ ಕಸರತ್ತು ಇಷ್ಟವಾಗಿ ಆಕೆಯನ್ನು ಖಾಯಂ ಕೆಲಸಕ್ಕೆ ಇಟ್ಟುಕೊಂಡರೋ ಹೇಗೇ ಅನ್ನುವ ಅನುಮಾನ ಮನದಲ್ಲಿ ಮೂಡಿತ್ತು. ಕಾಯದೇ ಬೇರೆ ಯಾವ ದಾರಿಯೂ ಇರಲಿಲ್ಲ ಅವಳಲ್ಲಿ, ಕರೆದುಕೊಂಡು ಹೋದವನ ತಲೆ ಬುಡವೂ ತಿಳಿದಿರಲಿಲ್ಲ. ಸಂಜೆಯ ವರೆಗೂ ಮಗಳ ದಾರಿ ನೋಡುವುದರಲ್ಲೇ ಕಳೆಯಿತು. ಅಕ್ಕ ಎಲ್ಲಿ ಅನ್ನುವ ಪುಟ್ಟ ಮಗುವಿನ ಪ್ರಶ್ನೆಗೆ ಅವಳಲ್ಲಿ ಯಾವುದೇ ಉತ್ತರವಿರಲಿಲ್ಲ. ಬಡತನದ ತಳಮಳ ಒಂದು ಕಡೆಯಾದರೆ, ಬಟ್ಟೆಯ ಗಂಟಿನಲ್ಲಿ ಸುತ್ತಿಟ್ಟಿದ್ದ ಸಾವಿರ ರೂಪಾಯಿ ನಗೆ ಬೀರಿತ್ತು.

ಸಂಜೆಯವರೆಗೂ ದಾರಿ ನೋಡಿದ ಆಕೆಗೆ ದುಃಖ ಉಮ್ಮಳಿಸಿ ಬರತೊಡಗಿತ್ತು, ಕಣ್ಣುಗಳು ಒದ್ದೆಯಾಗಿತ್ತು. ಗೊತ್ತಿರದ ಈ ಊರಲ್ಲಿ ಎಲ್ಲಿ ಅಂತ ಮಗಳನ್ನು ಹುಡುಕೋದು ಅನ್ನುವುದೇ ತಿಳಿಯದಾಗಿತ್ತು. ಅಲ್ಲಿ ಓಡಾಡುತ್ತಿದ್ದ ಜನರನ್ನು ಕೇಳತೊಡಗಿದಳು. ಎಲ್ಲರಿಂದಲೂ ಒಂದೇ ಉತ್ತರವಾಗಿತ್ತು "ಇಲ್ಲಿ ಯಾವುದೂ ಸರ್ಕಸ್ ಕಂಪನಿ ಇಲ್ಲಮ್ಮ, ಸದ್ಯ ಬೆಂಗಳೂರಲ್ಲಿ ಯಾವುದೇ ಸರ್ಕಸ್ ಕಂಪನಿ ನಡಿತಾ ಇಲ್ಲ". ಇದನ್ನೆಲ್ಲ ಕೇಳಿದ ಅವಳಿಗೆ ಮಗಳನ್ನು ಆತ ಕದ್ದೊಯ್ದ ಅಂತನಿಸತೊಡಗಿತು. ರಾತ್ರಿಯಾಗಿತ್ತು, ಕೊನೆಗೆ ಯಾವುದೇ ದಾರಿ ತೋರದೇ ಹತ್ತಿರವಿದ್ದ ಪೋಲಿಸ್ ಠಾಣೆಯತ್ತ ಹೆಜ್ಜೆ ಹಾಕಿದಳು. ಎಂದೂ ಪೋಲಿಸ್ ಠಾಣೆ ನೋಡದ ಆಕೆ ಹೆದರುತ್ತಲೇ ಹೆಜ್ಜೆ ಇಡತೊಳಗಿದಳು. ಅಲ್ಲೆ ಇದ್ದ ಪೇದೆಯೊಬ್ಬ "ಏನಮ್ಮ ಭಿಕ್ಷೆ ಬೆಡೊಕೆ ಪೊಲೀಸ್ ಠಾಣೆನೂ ಬಿಡಲ್ವಾ, ಹೋಗಾಚೆ" ಅಂತ ಬಯ್ಯತೊಡಗಿದ. ಅವನತ್ತ ಭಾರದ ದೃಷ್ಟಿಯಿಟ್ಟು "ಅಣ್ಣಾ ನನ್ ಮಗಾ ಕಾಣೆಯಾಗದೆ ಸಲ್ಪ ಹುಡುಕ್ಕೊಡ್ತೀರಾ" ಅಂತ ಭಯದಿಂದಲೇ ನುಡಿದಳು. "ನಮ್ಗೇನು ಬೇರೆ ಕೆಲ್ಸಾ ಇಲ್ವಾ, ಮಕ್ಕಳನ್ನ ಎಲ್ಲಾರೂ ಬಿಟ್ಟು ಬರ್ತೀರಾ, ಆಮೇಲೆ ಇಲ್ಲಿ ಬಂದು ಗಲಾಟೆ ಮಾಡ್ತೀರಾ. ಸುಮ್ನೇ ಹೊಗಮ್ಮ" ಪೊಲೀಸ ಪೇದೆಯ ಮಾತಿಗೆ ಅವಕ್ಕಾದಳು. "ಅಣ್ಣ ಹಂಗೆ ಹೇಳ್ ಬ್ಯಾಡ, ಹೆಣ್ ಕೂಸು. ನಿನ್ನೆಯಿಂದ ಕಾಣ್ತಾ ಇಲ್ಲ. ಹುಡುಕ್ಕೊಡಿ ಪುಣ್ಯ ಬತ್ತದೆ. ಇಲ್ಲಾ ಅನ್ ಬ್ಯಾಡಿ" ಹೇಳುವಷ್ಟರಲ್ಲಿ ಕಣ್ಣೀರ ಕಟ್ಟೆ ಒಡೆದಿತ್ತು. ಅವಳ ಕಾಟ ತಾಳಲಾರದೇ ಅವಳನ್ನು ಬಾ ನನ್ ಜೋತೆ ಅನ್ನುತ್ತ ಒಳಗಡೆ ಕರೆದೊಯ್ದು ಸಾಹೇಬರ ಎದುರಿಗೆ ನಿಲ್ಲಿಸಿದ. "ಈ ಯಮ್ಮ ಬಿಡೊ ಹಾಗೆ ಕಾಣ್ತಿಲ್ಲ, ಮಗು ಕಾಣೆಯಾಗಿದೆ ಹುಡುಕಿ ಕೋಡೀ ಅಂತ ಒಂದೇ ಸಮನೇ ಕಾಡ್ತಾ ಇದಾಳೆ" ಸಿಗರೇಟಿನ ಹೊಗೆಯ ಮಧ್ಯದಿಂದ ಸಾಹೇಬರ ಮಖ ಅಸ್ಪಷ್ಟವಾಗಿ ಕಾಣುತ್ತಿತ್ತು. "ಏನಮ್ಮ ನಿಮ್ಮ ಗೋಳು" ಅನ್ನುತ್ತ, ಪುಕ್ಕಟೆ ಕೇಸು ಅನ್ನುವ ತಿರಸ್ಕಾರದ ನೋಟ ಬೀರಿದರು ಸಾಹೇಬರು. ಒಂದೇ ಸಮ ಅಳುತ್ತಿದ್ದ ಆಕೆಯನ್ನು "ಸಾಕು ಅಳೊದು ನಿಲ್ಸಿ ಏನಾಯ್ತು ಅಂತ ಹೇಳಿದ್ರೆ ತಾನೆ ಹುಡುಕೋದು, ಮಕ್ಕಳನ್ನ ಎಲ್ಲಾದ್ರೂ ಭಿಕ್ಷೆ ಬೇಡೊಕೆ ಬಿಡ್ತೀರ ಆಮೇಲೆ ಕಾಣೆ ಆಯ್ತು ಅಂತ ನಮ್ಮ ತಲೆ ತಿಂತೀರಾ… ದಿನಾ ಹೀಗೆ ನಿಮ್ಮಂತ ಪುಕ್ಕಟೆ ಕೇಸು ಬರ್ತಾ ಇದ್ರೆ ನಾವು ಉದ್ಧಾರ ಆದ ಹಾಗೆ. ಕೈಯ್ಯಲ್ಲಿ ಒಂದು ಕಾಸಿರೊಲ್ಲ ಬಂದು ಬಿಡ್ತೀರ ಠಾಣೆಗೆ" ಅನ್ನುತ್ತ ಗದರಿದ ಆ ಪೊಲೀಸಪ್ಪ. ಸಾಹೇಬರ ಉತ್ತರಕ್ಕೆ ಹೆದರಿ ಬಾಯಿ ಮುಚ್ಚಿದಳಾಕೆ. "ಏನಾದ್ರೂ ಕಾಸು ಮಡಗಿದೀಯಾ, ಅದಿದ್ರೆ ನಿನ್ ಮಗಳನ್ನ ಹುಡುಕೊಕೆ ಆಗೋದು" ಪೇದೆ ಉತ್ತರಿಸಿದ. ಸೀರೆಯ ಸೆರಗಿನ ಅಂಚು ಬಿಚ್ಚಿ ಸಾವಿರದ ಒಂದು ನೋಟು, ನೂರರ ಮೂರ್ನಾಲ್ಕು ನೋಟನ್ನು ಟೆಬಲಿನ ಮೇಲಿಟ್ಟು "ಇಷ್ಟೇ ಐತೆ ಬುದ್ದಿ, ನನ್ ಮಗಳನ್ನು ಹುಡುಕ್ಕೊಡಿ ನಿಮ್ ಕಾಲಿಗೆ ಬೀಳ್ತೀನಿ" ಅಂದಳಾಕೆ. ಸಾವಿರದ ನೋಟು ಕಾಣುತ್ತಿದ್ದಂತೆ ಪೊಲೀಸ್ ಸಾಹೇಬರ ಕಣ್ಣು ದೊಡ್ಡದಾಯಿತು. ಎಲ್ಲ ನೋಟನ್ನು ಬಾಚಿ ಕಿಸೆ ಸೇರಿಸಿಕೊಂಡು ಏನಾಯಿತು ಹೇಳಮ್ಮ ಅಂತ ವಿನಯದಿಂದ  ನುಡಿದ ಆ ಸಾಹೇಬ.

ಆಕೆಯ ಎಲ್ಲ ವಿವರಣೆ ಕೇಳಿದ ಸಾಹೇಬ "ಅಲ್ಲಮ್ಮ ಹಿಂದೆ ಮುಂದೆ ನೋಡ್ದೆ ಅವನ ಜೋತೆ ಮಗಳನ್ನ ಕಳ್ಸಿದಿಯಲ್ಲ, ಇನ್ನೂ ಹನ್ನೆರಡೋ ಹದಿಮೂರೋ ವಯಸ್ಸು ಅಂತೀಯಾ ಅವಳನ್ನ ಯಾರಿಗಾದ್ರೂ ಮಾರಿರ್ತಾನೆ ಬಿಡು" ಅಂತ ಬಡಬಡನೆ ನುಡಿದ. ಸಾಹೇಬರ ಮಾತು ಕೇಳುತ್ತಿದ್ದಂತೆ ಗೊಳೋ ಅಂತ ಅಳತೊಡಗಿದಳಾಕೆ. "ಈಗ ಅತ್ತು ಏನು ಪ್ರಯೋಜನ? ಸುಮ್ನಿರು ಏನಾದರೂ ಮಾಡಿ ಹುಡುಕೋಣ ನಿನ್ನ ಮಗಳನ್ನ, ಆದರೆ ಅದಕ್ಕೆ ಇನ್ನೂ ಸ್ವಲ್ಪ ಖರ್ಚಾಗುತ್ತೆ".ನುಡಿದನಾತ. ಆಕೆ ಕಣ್ಣೊರೆಸುತ್ತ "ಬುದ್ದಿ ಏನಾರ ಮಾಡಿ ಮಗಳನ್ನ ಹುಡುಕ್ಕೋಡಿ, ಈಗ ನನ್ ಹತ್ರಾ ಎನಿಲ್ಲಾ ಬುದ್ದಿ, ಇರೋದೆಲ್ಲ ನಿಮಗೆ ಕೊಟ್ಟೀವ್ನಿ. ಮಗ ಸಿಕ್ ಮ್ಯಾಗೆ ಆಟ ಆಡಿ ನಿಮ್ಗೆ ತಂದ್ ಕೋಡ್ತೀನಿ ಬುದ್ದಿ, ಇಲ್ಲಾ ಅನ್ ಬ್ಯಾಡಿ ಬುದ್ದಿ". ತಿರಸ್ಕಾರದ ನೋಟ ಬೀರಿದ ಸಾಹೇಬ. "ಅಯ್ಯಾ ಏನಾರ ಮಾಡಿ… ನನ್ ಮಗಾ ನಂಗೆ ಬೇಕು, ನೀವ್ ಎನ್ ಹೇಳಿದ್ರೂ ನಾ ಮಾಡತೀವ್ನಿ, ಇಲ್ಲಾ ಅನಬ್ಯಾಡಿ." ಗೊಗರೆಯತೊಡಗಿದಳಾಕೆ. ಒಮ್ಮೆ ಆಕೆಯನ್ನ ಮೇಲಿಂದ ಕೆಳವರೆಗೂ ನೋಡಿ "ಏನು ಬೇಕಾದ್ರೂ ಮಾಡ್ತೀಯಾ" ಮರು ಪ್ರಶ್ನಿಸಿದ. "ಹೂಂ ಬುದ್ದಿ" ಅಂದಳಾಕೆ. ಅತ್ತಿತ್ತ ನೋಡಿ "ಸರಿ ನಡೀ ಆ ಕಡೆ, ಮಗೂನ ಪೇದೆ ಹತ್ರ ಕೋಡು" ಅನ್ನುತ್ತ ಕಿಸೆಯಿಂದ ನೂರರ ಎರಡು ನೋಟು ಪೇದೆಯ ಕೈಗಿಡುತ್ತ ಪಾಪ ಮಗೂಗೆ ಹಸಿವೆಯಾಗಿರಬೇಕು ಏನಾದ್ರೂ ತಿನ್ನೊಕೆ ಕೊಡ್ಸು, ನೀನೂ ಚಾ ಕುಡ್ಕೊಂಡು ಬಾ" ಅಂದು ಕಣ್ಣ ಸನ್ನೆ ಮಾಡಿದ. ಪೇದೆ ಅರ್ಥವಾದವನಂತೆ ಮಗುವನ್ನು ಎತ್ತಿಕೊಂಡು ಠಾಣೆಯ ಬಾಗಿಲು ಎಳೆದುಕೊಂಡು ಹೊರ ನಡೆದ. ಅರ್ಧ ಘಂಟೆಯಲ್ಲಿ ಲಾಕಪ್ ಒಳಗಿಂದ ಮೈ ಕೊಡವುತ್ತ ಸಾಹೇಬ ಹೊರಬಂದ, ಹಿಂದಿನಿಂದ ಆಕೆಯೂ ಸೆರಗು ಸರಿ ಮಾಡುತ್ತ ಕಣ್ಣೀರೊಂದಿಗೆ ಹೊರಬಂದಳು. ಠಾಣೆಯ ಬಾಗಿಲು ತೆರೆದು ಸನ್ನೆ ಮಾಡಿದ. ಕ್ಷಣದಲ್ಲಿ ಪೇದೆ ಮಗುವಿನೊಂದಿದೆ ಒಳಬಂದ. ಕೈಯ್ಯಲ್ಲಿ ಮಿಠಾಯಿ ಹಿಡಿದು ಪೇದೆಯೊಂದಿಗೆ ನಗುತ್ತಿದ್ದ ಮಗುವನ್ನು ಎತ್ತಿಕೊಂಡು ತಬ್ಬಿದಳಾಕೆ. "ಬುದ್ದಿ ನೀವ್ ಹೇಳ್ದಾಗೆ ಕೇಳಿವ್ನಿ, ಇನ್ನಾರ ನನ್ ಮಗೀನ….??" ಪ್ರಶ್ನಾರ್ಥಕ ನೋಟ ಬೀರಿದಳಾಕೆ. ಸರಿ ಸರಿ ಅನ್ನುತ್ತ ಮಗಳ ಗುರುತಿನ ಬಗ್ಗೆ ವಿಚಾರಿಸತೊಡಗಿದ.

ಕಾಣೆಯಾದ ಹುಡುಗಿಯ ವಿವರಣೆ ಕೇಳಿದ ಪೊಲೀಸನ ಮುಖದಲ್ಲಿ ಏನೋ ಸಂದೆಹ ಮೂಡಿತ್ತು. "ಇದೇ ತರಹದ ಹುಡುಗಿ ಒಬ್ಬಳು ಇವತ್ತು ಬೆಳಿಗ್ಗೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಅಂತ ಸುದ್ದಿ ಬಂದಿದೆ, ರಸ್ತೆಯಲ್ಲಿ ಎಲ್ಲೋ ಅನಾಥವಾಗಿ ಬಿದ್ದಿದ್ಲು ಅಂತ ಹೇಳಿದ್ರು, ಅವಳೇ ಇರಬಹುದು ನಡಿ ಹೊಗೋಣ" ಅಂತ ಹೆಜ್ಜೆಹಾಕಿದ. ಆಕೆಯೂ ಅತನೊಂದಿಗೆ ಹೆಜ್ಜೆಗೂಡಿಸಿದಳು. ಅಲ್ಲಿಂದ ಹೊರಟ ಪೊಲೀಸ್ ವಾಹನ ಸೀದಾ ಆಸ್ಪತ್ರೆಯ ಎದುರಲ್ಲಿ ನಿಂತಿತ್ತು. ಹೆದರುತ್ತಲೆ ಸಾಹೇಬರೊಂದಿಗೆ ಹೆಜ್ಜೆ ಇಟ್ಟಳು. ಇಲ್ಲೇ ಇರು ವಿಚಾರಿಸಿಕೊಂಡು ಬರ್ತೇನೆ ಅಂತ ಅತ್ತ ನಡೆದು ಕೆಲ ಕ್ಷಣದಲ್ಲಿ ಮತ್ತೆ ಪ್ರತ್ಯಕ್ಷನಾದ. "ಬಾ ನನ್ ಜೋತೆ, ಬೆಳಿಗ್ಗೆ ಸಿಕ್ಕ ಹುಡುಗಿ ಸತ್ತೋಗಿದಾಳೆ, ನೋಡು ಅವಳೇನಾ ನಿನ್ನ ಮಗಳು" ಅಂತ ಅವಳನ್ನ ಜೋತೆಗೆ ಬರುವಂತೆ ಸೂಚಿಸಿದ. ಭಾರವಾದ ಮನದೊಂದಿಗೆ ಅವಳು ಹೆಜ್ಜೆ ಹಾಕತೊಡಗಿದಳು, ಮನದಲ್ಲಿ ನೂರಾರು ವಿಚಾರಗಳು ಸುಳಿಯತೊಡಗಿದವು. ಆಕೆ ನನ್ನ ಮಗಳು ಇರಲು ಸಾಧ್ಯವೇ ಇಲ್ಲ ಅನ್ನುವಂತೆ ಶವಾಗಾರದೊಳಗೆ ಹೆಜ್ಜೆ ಇರಿಸಿದಳು. ಮಲಗಿಸಿದ್ದ ಶವದ ಮೇಲಿನ ಬಟ್ಟೆ ತೆಗೆಯುತ್ತಿದ್ದಂತೆ ಚಿಟ್ಟನೇ ಚೀರಿದಳು. "ಅಯ್ಯೋ ಸಿವನೆ, ಏನಾತು ನಿಂಗೆ? ಯಾಕ್ ನನ್ ಬಿಟ್ ಹೋದೊ? ನನ್ ಕಂದಾ" ಅಂದು ಗೋಳಿಡತೊಡಗಿದಳು. ಏನೂ ಅರಿಯದ ಆ ಪುಟ್ಟ ಮಗು ಅಕ್ಕಾ ಅಂತ ಅಳತೊಡಗಿತು. ಏನಾಗಿತ್ತು ನನ್ ಮಗೀಗೇ ಅಂತ ಗೊಗರೆಯತೊಡಗಿದಳಾಕೆ. ವೈದ್ಯರತ್ತ ಕಣ್ಣುಹರಿಸಿದ ಸಾಹೇಬ. "ಯಾರೋ ಇವಳ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ, ಅಲ್ಲೇ ಬಿಟ್ಟು ಹೋಗಿದ್ದಾರೆ. ಪಾಪ ಚಿಕ್ಕ ಹುಡುಗಿ ತಡೆದುಕೊಳ್ಳಲಾರದೇ ಸಾವನ್ನಪ್ಪಿದೆ."ವೈದ್ಯರ ಮಾತು ಕೇಳುತ್ತಿದ್ದಂತೆ ಆಕೆ ಅಲ್ಲೇ ಕುಸಿದಳು. ಪೊಲೀಸ್ ಸಾಹೇಬ ವೈದ್ಯರ ಬಳಿ ಮಾತನಾಡಿ ಶವವನ್ನು ಆಕೆಯ ಕೈಗಿಟ್ಟು ತನ್ನ ದಾರಿ ಹಿಡಿದ. ಮುದ್ದು ಮಗಳ ಶವ ಹಿಡಿದು ಕಣ್ಣೆರೊಂದಿಗೆ ಆ ಪುಟ್ಟ ಮಗುವಿನ ಜೋತೆ ಕತ್ತಲಲ್ಲಿ ಮಾಯವಾದಳಾಕೆ. 

ಒಂದೆಡೆ ಕಿತ್ತು ತಿನ್ನುವ ಬಡತನ, ತನ್ನವರನ್ನು ಕಳೆದುಕೊಂಡ ನೋವು. ಇನ್ನೊಂದೆಡೆ ಅಮಾಯಕರ ಮೇಲೆ ಅತ್ಯಾಚಾರ, ಕಾನೂನನ್ನು ರಕ್ಷಿಸುವರಿಂದಲೇ ಅದರ ದುರುಪಯೋಗ. ಇದೆಲ್ಲದರ ನಡುವೆ ಸಾವಿರದ ನೋಟು ಕೇಕೆ ಹಾಕುತ್ತಿತ್ತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Roopa Satish
Roopa Satish
9 years ago

ಇ೦ತಹ ಘಟನೆಗಳು ನಮ್ಮ ಸಮಾಜದ ದುರ್ಗತಿಗಳನ್ನು ಬಿ೦ಬಿಸುತ್ತವೆ… ಅಮಾಯಕರ ಮೇಲೆ ದೌರ್ಜನ್ಯ ಅ೦ದಿಗೂ – ಇ೦ದಿಗೂ, ಇದಕ್ಕೆಲ್ಲ ಪರಿಹಾರವೆ೦ತೊ? 
ಸತ್ಯ ಘಟನೆಯನ್ನವ೦ಬಿಸಿದ೦ತೆ ಬರೆದಿದ್ದೀರ, ಅಭಿನ೦ದನೆಗಳು ಗಣೇಶ್…. 

Kushi
Kushi
8 years ago

Nijakku nanna hrudaya dravisi hoythu..entha daridra jathi namma manushya jathi…pranigale nooru palu vasi..namagintha….kathe antha annusale illa…prasthuta naditirode heege.

2
0
Would love your thoughts, please comment.x
()
x