ಸಾವಿನ ಆಟ: ಜೆ.ವಿ.ಕಾರ್ಲೊ.

ಮೂಲ: ಇವಾನ್ ಹಂಟರ್

ಅನುವಾದ: ಜೆ.ವಿ.ಕಾರ್ಲೊ.

 

ಅವನ ಎದುರಿಗೆ ಕುಳಿತ್ತಿದ್ದ ಹುಡುಗ ಶತ್ರು ಪಾಳೆಯದವನಾಗಿದ್ದ. ಹೆಸರು ಟೀಗೊ. ಅವನು ಧರಿಸಿದ್ದ ಹಸಿರು ಬಣ್ಣದ ಜಾಕೆಟಿನ ಬಾಹುಗಳಿಗೆ ಕಿತ್ತಳೆ ಬಣ್ಣದ ಪಟ್ಟಿಯನ್ನು ಅಂಟಿಸಲಾಗಿತ್ತು. ಆ ಜಾಕೆಟ್ಟೇ ಅವನು ಶತ್ರು ಪಾಳೆಯದವನೆಂದು ಚೀರಿ ಚೀರಿ ಸಾರುತ್ತಿತ್ತು.

“ಇದು ಚೆನ್ನಾಗಿದೆ!” ಮೇಜಿನ ಮಧ್ಯದಲ್ಲಿದ್ದ ರಿವಾಲ್ವರಿಗೆ ಬೊಟ್ಟು ಮಾಡಿ ಡೇವ್ ಹೇಳಿದ. “ಅಂಗಡಿಯಲ್ಲಿ ಕೊಳ್ಳುವುದಾದರೆ 45 ಡಾಲರುಗಳಿಗೆ ಕಡಿಮೆ ಇಲ್ಲ ಅಂತ ನನ್ನ ಅನಿಸಿಕೆ.” ಅದು ಸ್ಮಿತ್ ಅಂಡ್ ವೆಸ್ಸನ್ .38 ಪೊಲಿಸ್ ಸ್ಪೆಶಲ್ ಆಗಿತ್ತು. ರಿವಾಲ್ವರಿನ ಸನಿಹದಲ್ಲೇ ಮೂರು ಸ್ಪೆಶಲ್ ತೋಟಾಗಳಿದ್ದವು.

ಡೇವ್ ನ ದೃಷ್ಠಿ ಮೇಜಿನ ಮೇಲಿದ್ದ ರಿವಾಲ್ವರಿನ ಮೇಲೆಯೇ ನೆಟ್ಟಿತ್ತು. ಅವನು ಒಳಗೊಳಗೇ ತಳಮಳಗೊಂಡಿದ್ದರೂ ಮುಖಭಾವದಲ್ಲಿ ತೋರಿಸಿಕೊಳ್ಳಲಿಲ್ಲ. ಟೀಗೋನಿಗೂ ಕೂಡ ತನ್ನೊಳಗಿನ ಆತಂಕ ತನ್ನ ಎದುರಾಳಿಯ ಮುಂದೆ ತೋರಿಸಿಕೊಳ್ಳುವಂತಿರಲಿಲ್ಲ.

“ಇಂತ ಬಹಳಷ್ಟು ಗನ್ನುಗಳನ್ನು ನಾನು ಈ ಮೊದಲು ನೋಡಿದ್ದೇನೆ. ಇದರಲ್ಲಿ ಅಂತ ವಿಶೇಷವೇನಿಲ್ಲ.” ಎಂದ ಡೇವ್ ತಾತ್ಸಾರದಿಂದ.

“ನೀನು ಹೇಳುವುದೂ ಸರಿಯೇ.. ಆದರೆ, ವಿಶೇಷತೆ ಇರುವುದು ನಾವು ಅದರಿಂದ ಆಡುವ ಆಟದೊಳಗೆ!” ಟೀಗೊ ಎಂದ. ಅವನು ತನ್ನ ಕಡು ಕಂದು ಬಣ್ಣದ ಕಂಗಳಿಂದ ಡೇವ್ ನನ್ನೇ ಗಮನಿಸುತ್ತಿದ್ದ. ಟೀಗೋನ ಕಣ್ಣುಗಳಲ್ಲಿ ಆರ್ದ್ರತೆ ಇದ್ದು, ನೋಡಲು ಚೆನ್ನಾಗಿಯೇ ಇದ್ದ. ಮೂಗು ಕೊಂಚ ಉದ್ದವೇ ಇತ್ತೇನೋ? ಅವನ ಮುಖ ಹಿಂದೆ ಸರಿಯುವವನ ಹಾಗೆ ಕಾಣಿಸುತ್ತಿರಲಿಲ್ಲ.

“ನಾವು ಯಾಕಾಗಿ ಕಾಯುತ್ತಿರುವುದು? ಶುರು ಮಾಡೋಣ?” ಒಣಗುತ್ತಿದ್ದ ತುಟಿಗಳ ಮೇಲೆ ನಾಲಿಗೆ ಆಡಿಸುತ್ತಾ ಡೇವ್ ಹೇಳಿದ.

“ನೋಡು, ನನಗೆ ನಿನ್ನ ಮೇಲೆ ವೈಯುಕ್ತಿಕ ದ್ವೇಷ ಅಂತ ಏನಿಲ್ಲ…”

“ನನಗೆ ಅರ್ಥವಾಗುತ್ತೆ..”

“ಇದನ್ನು ಬೀದಿ ಕಾಳಗಕ್ಕೆ ಬಳಸಿಕೊಳ್ಳದೆ ನಮ್ಮ ನಮ್ಮಲ್ಲೇ ತೀರಿಸಿಕೊಳ್ಳೊದು ಒಳ್ಳೇದು ಅಂತ ನಮ್ಮ ಗುಂಪಿನ ನಾಯಕರು ತೀರ್ಮಾನಿಸಿಕೊಂಡಿದ್ದಾರೆ..”

“ನಾವು ಹೀಗೆಯೇ ರಾತ್ರಿಯೆಲ್ಲಾ ಮಾತನಾಡುತ್ತಾ ಕೂರೋಣವೇ ಇಲ್ಲ ಇತ್ಯರ್ಥ ಮಾಡೋಣ?” ಡೇವ್ ಕೊಂಚ ಅಸಹನೆಯಿಂದಲೇ ಹೇಳಿದ.

“ನಾನು ಏನು ಹೇಳಲು ಪ್ರಯತ್ನಪಡುತ್ತಿದ್ದೇನೆಂದರೆ, ನಮ್ಮಿಬ್ಬರ ಗುಂಪುಗಳ ಮಧ್ಯದ ವ್ಯಾಜ್ಯವನ್ನು ಇತ್ಯರ್ಥಗೊಳಿಸಲು ನಾನು ಆಕಸ್ಮಿಕವಾಗಿ ಆಯ್ಕೆಗೊಂಡಿದ್ದೇನೆ. ನಿಜ ಹೇಳಬೇಕೆಂದರೆ, ನಿಮ್ಮ ಹುಡುಗರು ನಿನ್ನೆ ನಮ್ಮ ಸೀಮೆಯೊಳಗೆ ಬರಬಾರದಿತ್ತು. ಒಪ್ಕೋತೀಯಾ?”

“ನಾನು ಯಾವುದನ್ನೂ ಒಪ್ಕೊಳಕ್ಕೆ ತಯಾರಿಲ್ಲ.” ಡೇವ್ ಹೇಳಿದ.

“ನೋಡು, ನಮ್ಮಿಬ್ಬರ ಗುಂಪುಗಳ ಮಧ್ಯೆ ಕದನ ವಿರಾಮ ಜಾರಿಯಲ್ಲಿದ್ದರೂ ಕೂಡ ನಿನ್ನೆ ರಾತ್ರಿ ಐಸ್‌ಕ್ರೀಂ ಪಾರ್ಲರಿನ ಬಳಿ ನುಗ್ಗಿ ಗುಂಡು ಹಾರಿಸಿದಿರಿ. ಇದು ಸರಿಯೇ?”

“ಆಯ್ತು, ಆಯ್ತು ಬಿಡು.” ಡೇವ್ ಎಂದ.

“ಅದಕ್ಕೇ ನಮ್ಮ ವ್ಯಾಜ್ಯವನ್ನು ಇತ್ಯರ್ಥ ಪಡಿಸಲು ಈ ದಾರಿಯನ್ನು ಹಿಡಿಯಬೇಕಾಯಿತು. ನಮ್ಮ ಕಡೆಯವನೂ ಒಬ್ಬ, ನಿಮ್ಮ ಕಡೆಯವನೂ ಒಬ್ಬ. ಇದರಲ್ಲಿ ಯಾವುದೇ ದಗಲ್ಬಾಜಿಲ್ಲ. ನ್ಯಾಯೋಚಿತವಾಗಿದೆ. ಬೀದಿ ಕಾಳಗ, ಪೋಲಿಸೂ, ಲಾಯರುಗಳು, ನ್ಯಾಯಾಲಯ.. ಯಾವ ರಗಳೆಯೂ ಇಲ್ಲ.”

“ಸರಿಯಪ್ಪಾ, ಒಪ್ಕೊಂಡೆ. ಶುರು ಮಾಡೋಣವೇ?”

“ನಾನು ಏನು ಹೇಳ್ತಾ ಇದ್ದೀನೆಂದರೆ, ಈ ಮೊದಲು ನಾನು ನಿನ್ನನ್ನು ನೋಡಿದವನೇ ಅಲ್ಲ. ಇದರಲ್ಲಿ ವಯುಕ್ತಿಕವಾದುದೇನಿಲ್ಲ. ಏನೂ ಬೇಕಾದರೂ, ಹೇಗೆ ಬೇಕಾದರೂ ಈ ಆಟ ಕೊನೆಗೊಳ್ಳಬಹುದು.”

“ನಾನೂ ಕೂಡ ನಿನ್ನನ್ನು ಈ ಮೊದಲು ನೋಡಿದವನಲ್ಲ.” ಡೇವ್ ಹೇಳಿದ.

ಟೀಗೋ ಅವನನ್ನು ದೀರ್ಘವಾಗಿ ದಿಟ್ಟಿಸುತ್ತಾ, “ಯಾಕಂದ್ರೆ ನೀನು ಇಲ್ಲಿಗೆ ಹೊಸಬ. ನಿನ್ನ ಊರು?” ಎಂದ.

“ಬ್ರೋಂಕ್ಸ್.”

“ದೊಡ್ಡ ಕುಟುಂಬ ಇರಬೇಕು?”

“ಹಾಗೇನಿಲ್ಲ. ಒಬ್ಬಳು ತಂಗಿ, ಇಬ್ಬರು ತಮ್ಮಂದಿರು.”

“ಒಹ್, ನನಗೂ ಒಬ್ಬಳು ತಂಗಿ ಇದ್ದಾಳೆ.” ಟೀಗೊ ನಿಡುಸುಯ್ದ.

“ಸರಿ, ಶುರು ಮಾಡೋಣವೇ?”

“ನಾನು ರೆಡಿ!”

ಟೀಗೋ ಮೇಜಿನ ಮೇಲಿದ್ದ ರಿವಾಲ್ವರನ್ನು ಎತ್ತಿಕೊಂಡು ಸನಿಹದಲ್ಲೇ ಇದ್ದ ತೋಟಾವನ್ನೂ ಎತ್ತಿಕೊಂಡ. ರಿವಾಲ್ವರನ್ನು ಮುರಿದು ಹೊರಬಂದ ಸಿಲಿಂಡರಿನೊಳಗಿನ ಆರು ಖಾನೆಗಳೊಳಗೆ ಒಂದರಲ್ಲಿ ತೋಟಾವನ್ನು ತಳ್ಳಿದ. ಸಿಲಿಂಡರನ್ನು ಮತ್ತೆ ಒಳಕ್ಕೆ ತಳ್ಳಿ ತಿರುಗಿಸಿದ.

“ಈಗ ತೋಟಾ ಯಾವ ಖಾನೆಯೊಳಗಿದೆಯೋ ಯಾರಿಗೆ ಗೊತ್ತು! ಇದು ಅದೃಷ್ಟದ ಆಟ. ಗೊತ್ತಾಯ್ತಾ?”

“ಗೊತ್ತಾಯಿತು.”

“ನಾನೇ ಶುರು ಮಾಡುತ್ತೇನೆ!” ಎಂದ ಟೀಗೋ.

“ಅದೇನು?” ಡೇವ್ ಅನುಮಾನಿಸುತ್ತಾ ಕೇಳಿದ.

“ಹಾಗೇನಿಲ್ಲ! ನೀನೇ ಬೇಕಾದರೂ ಶುರು ಮಾಡಬಹುದು!”

ಡೇವ್ ತಡಬಡಾಯಿಸಿದ.

“ಇರಲಿ ಬಿಡು, ನಿನಗೊಂದು ಅವಕಾಶ ಕೊಡುತ್ತೇನೆ. ನನ್ನಿಂದಲೇ ಶುರುವಾಗಲಿ. ಮೊದಲ ಫೈರ್ ಗೆ ನನ್ನ ತಲೆಯೇ ಹೋಗುವುದಾದರೆ ಹೋಗಲಿ.”

“ಅದೇನು ನನಗೆ ಅವಕಾಶ ಕೊಡುವುದು?”

“ಹೀಗೇ ಸುಮ್ಮನೇ..” ಎನ್ನುತ್ತಾ ಟೀಗೋ ರಿವಾಲ್ವರಿನ ಸಿಲಿಂಡರನ್ನು ಮತ್ತೊಂದು ಸುತ್ತು ತಿರುಗಿಸಿದ.

“ಇದು ರಶ್ಯನರು ಕಂಡು ಹಿಡಿದ ಆಟವೆಂದು ಕೇಳಿದ್ದೆ.”

“ಹೌದು.”

“ಈ ರಶ್ಯನರಿಗೆ ತಲೆ ಸರಿ ಇಲ್ಲ!”

“ಖಂಡಿತ!” ಎಂದು ಟೀಗೋ ಮೌನವಾದ. ಸಿಲಿಂಡರ್ ತಿರುಗುವುದನ್ನು ನಿಲ್ಲಿಸಿ ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಂತಿತ್ತು. ಧೀರ್ಘವಾಗಿ ಉಸಿರನ್ನೆಳೆದು ಟೀಗೋ ಕಣ್ಣು ಮುಚ್ಚಿ ರಿವಾಲ್ವರಿನ ಬ್ಯಾರೆಲನ್ನು ತನ್ನ ಬಲಗಿವಿಯ ಮೇಲಕ್ಕೆ ಆನಿಸುತ್ತಾ ಟ್ರಿಗ್ಗರನ್ನು ಎಳೆದ. ರಿವಾಲ್ವರಿನ ಫೈರಿಂಗ್ ಪಿನ್ನು ಸಿಲಿಂಡರಿನ ಖಾಲಿ ಖಾನೆಗೆ ಹೊಡೆದ ಶಬ್ಧವಾಯಿತು.

“ನನ್ನ ಅದೃಷ್ಟ ಚೆನ್ನಾಗಿದೆ!.. ಈಗ ನಿನ್ನ ಸರದಿ.” ಎನ್ನುತ್ತಾ ರಿವಾಲ್ವರನ್ನು ಡೇವ್ ನ ಕೈಗಿತ್ತ.

ಡೇವ್ ರಿವಾಲ್ವರನ್ನು ಕೈಗೆತಿಕೊಂಡ. ಅವರು ಕುಳಿತ್ತಿದ್ದ ನೆಲಮಾಳಿಗೆಯಲ್ಲಿ ಥಂಡಿ ತುಸು ಹೆಚ್ಚೇ ಇತ್ತಾದರೂ ಅವನು ಬೆವರುತ್ತಿದ್ದ. ರಿವಾಲ್ವರನ್ನು ಮೇಜಿನ ಮೇಲಿಟ್ಟು ಬೆವರುತ್ತಿದ್ದ ಅಂಗೈಗಳನ್ನು ಪ್ಯಾಂಟಿಗೆ ಉಜ್ಜತೊಡಗಿದ. ನಂತರ ರಿವಾಲ್ವರನ್ನೆತ್ತಿ ಕೆಲ ಹೊತ್ತು ಅದನ್ನೇ ದಿಟ್ಟಿಸಿದ.

“ಒಳ್ಳೇ ಪೀಸು. ಅನುಮಾನವೇ ಇಲ್ಲ.” ಟೀಗೊ ಹೇಳಿದ.

“ಖಂಡಿತ. ಕೈಯಲ್ಲಿಡಿದಾಗಲೇ ಗೊತ್ತಾಗುತ್ತೆ.”

“ನಾನು ವಯಸ್ಸು ತುಂಬಿದ ಮೇಲೆ ಸೈನ್ಯಕ್ಕೆ ಸೇರಬೇಕೆಂದುಕೊಂಡಿದ್ದೇನೆ. ಗನ್ನುಗಳೆಂದರೆ ನನಗೆ ತುಂಬಾ ಇಷ್ಟ.” ಟೀಗೋ ಹೇಳಿದ.

“ನಾನೂ ಅಷ್ಟೆ. ಆದರೆ ನನ್ನವ್ವ ಬಿಡುತ್ತಿಲ್ಲ. ಅವಳ ಒಪ್ಪಿಗೆ ಪತ್ರವಿಲ್ಲದೆ ನನ್ನನ್ನು ಈಗ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿಲ್ಲ.”

“ಎಲ್ಲಾ ತಾಯಂದಿರದ್ದೂ ಇದೇ ಗೋಳು!” ಎಂದ ಟೀಗೊ.

“ಇರಲಿ, ಈಗ ನಾನು ಸಿಲಿಂಡರ್ ತಿರುಗಿಸುತ್ತೇನೆ” ಎನ್ನುತ್ತಾ ಡೇವ್ ಸಿಲಿಂಡರನ್ನು ಮೀಟಿದ. ಅದು ರೊಂಯ್ಯನೆ ತಿರುಗಿ ನಿಶ್ಚಲವಾಗಿ ನಿಂತಿತು. ಅವನು ನಿಧಾನವಾಗಿ ರಿವಾಲ್ವರನ್ನು ತಲೆಗೆ ಗುರಿ ಇಟ್ಟ. ಅವನಿಗೆ ಕಣ್ಣು ಮುಚ್ಚಿಕೊಳ್ಳಬೇಕೆಂದು ಬಯಕೆಯಾಗಿತ್ತಾದರೂ, ತನ್ನನ್ನೇ ಎವೆಯಿಕ್ಕದೆ ನೋಡುತ್ತಿದ್ದ ಟೀಗೋನ ಮುಂದೆ ಅದು ಪುಕ್ಕಲುತನದಂತೆ ಕಾಣಿಸಬಹುದೆಂದು ಸುಮ್ಮನಾದ. ಟೀಗೋನ ಕಣ್ಣುಗಳಲ್ಲಿ ಕಣ್ಣು ನೆಟ್ಟು ಅವನು ಟ್ರಿಗರನ್ನು ಎಳೆದ.

ಒಮ್ಮೆಲೆ ಅವನ ಹೃದಯ ಬಡಿತ ನಿಂತು ಹೋಗಿ, ದೇಹದೊಳಗಿನ ರಕ್ತವೆಲ್ಲಾ ತಲೆಗೆ ನುಗ್ಗಿಂತಾಯಿತು. ಮತ್ತೆ ಅದೇ, ಖಾಲಿ ಖಾನೆಗೆ ಟ್ರಿಗರ್ ಬಡಿದ ಒಣ ಶಬ್ಧ. ಅವನು ರಿವಾಲ್ವರನ್ನು ಕೆಳಗಿಳಿಸಿ ಮೇಜಿನ ಮೇಲಿಟ್ಟ.

“ಒಮ್ಮೆಲೇ ಹೇಗೆ ಬೆವರು ಕಿತ್ಕೊಂಡು ಬರುತ್ತೆ ಅಲ್ವಾ?” ಟೀಗೋ ಹೇಳಿದ.

ಡೇವ್ ಏನೂ ಮಾತನಾಡದೆ ತಲೆಯಲ್ಲಾಡಿಸಿ ಟೀಗೋನನ್ನೇ ನೋಡತೊಡಗಿದ. ಟೀಗೋ ರಿವಾಲ್ವರನ್ನೇ ದಿಟ್ಟಿಸುತ್ತಿದ್ದ.

“ಈಗ ನನ್ನ ಸರದಿಯಲ್ಲವೇ?” ಎನ್ನುತ್ತಾ ಟೀಗೋ ರಿವಾಲ್ವರನ್ನು ಎತ್ತಿಕೊಂಡು ಮತ್ತೊಮ್ಮೆ ತಲೆಗೆ ಗುರಿ ಇಟ್ಟು ಟ್ರಿಗ್ಗರನ್ನು ಎಳೆದ. ಮತ್ತೆ ಅದು ಸಿಲಿಂಡರಿನ ಖಾಲಿ ಖಾನೆಯನ್ನು ಬಡಿದ ಶಬ್ಧ ಕೇಳಿಸಿತು. ನಿಡಿದಾಗಿ ಸಮಧಾನದ ಉಸಿರನ್ನು ಬಿಡುತ್ತಾ ಟೀಗೋ ರಿವಾಲ್ವರನ್ನು ಮೇಜಿನ ಮೇಲಿಟ್ಟ.

“ಈ ಭಾರಿ ನಿಜವಾಗಿಯೂ ನಾನು ಸತ್ತೇ ಹೋದೆ ಅಂತೆನಿಸಿತ್ತು!” ಅವನೆಂದ.

“ಹೌದೌದು! ನನಗೂ ಸ್ವರ್ಗಲೋಕದಿಂದ ಸ್ವಾಗತ ಗೀತೆ ಕೇಳಿಸಿತ್ತು!”

“ಬೊಜ್ಜು ಕರಗಿಸಲು ಇದೊಂದು ಒಳ್ಳೇ ಆಟವಲ್ಲವೇ?” ಟೀಗೋ ನಗೆಯಾಡಿದ. ಡೇವ್ ಕೂಡ ಜತೆಗೂಡಿದಾಗ ಅವರು ಮನಸಾರೆ ನಕ್ಕರು.

“ನನ್ನಮ್ಮ ತುಂಬಾ ದಪ್ಪಗಾಗಿದ್ದಾಳೆ. ಅವಳೂ ಇಂತ ಆಟಗಳಲ್ಲಿ ಭಾಗಿಯಾಗಬೇಕು ಅಂತೆನಿಸುತ್ತದೆ!” ಡೇವ್ ತನ್ನ ಜೋಕಿಗೆ ತಾನೇ ಜೋರಾಗಿ ನಗೆಯಾಡಿದ.

“ಅಲ್ವಾ?! ಈ ಹೆಣ್ಮಕ್ಕಳ ಕತೆನೇ ಇಷ್ಟು. ತಳಕು ಬಳುಕಿನ ಚೆಂದುಳ್ಳಿ ಚೆಲುವೆ ಎಂದು ಹಿಂದೆ ಬಿದ್ದು ಇವರನ್ನು ಮದ್ವೆ ಆಗ್ತೀವಿ. ನೋಡಿದ್ರೆ ಕೆಲವೇ ವರ್ಷಗಳಲ್ಲಿ ‘ಆಂಟಿ’ಗಳಾಗಿಬಿಡ್ತಾರೆ!

“ನಿಂಗೊಬ್ಬಳು ‘ಡವ್’ ಇದ್ದಾಳೇನೋ?” ಕಣ್ಣು ಮಿಟುಕಿಸುತ್ತಾ ಡೇವ್ ಕೇಳಿದ.

“ಹ್ಞೂಂ.. ಇದ್ದಾಳೆ.”

“ಏನಪ್ಪಾ ಅವಳ ಹೆಸರು?”

“ನಿಂಗೊತ್ತಿಲ್ಲ ಬಿಡು.”

“ಗೊತ್ತಿರಲೂಬಹುದು!”

“ಜುವಾನಾ.” ಅವನನ್ನೇ ದಿಟ್ಟಿಸುತ್ತಾ ಹೇಳಿದ ಟೀಗೊ. “ಐದಡಿ ಎರಡಿಂಚು ಎತ್ತರ. ಕಂದು ಕಣ್ಣುಗಳು.”

“ಓಹ್, ನನಗೆ ಗೊತ್ತು. ಖಂಡಿತ ಗೊತ್ತು.”

“ಹೌದಾ? ಏನಂತೀಯಾ?” ಟೀಗೋ ಕುತೂಹಲದಿಂದ ಮುಂದೆ ಬಗ್ಗಿದ, ಅವನ ಅಭಿಪ್ರಾಯ ಅತ್ಯಮೂಲ್ಯವೆನ್ನುವಂತೆ.

“ತುಂಬಾ ಒಳ್ಳೆ ಹುಡುಗಿ.” ಡೇವ್ ಹೇಳಿದ.

“ಗುರೂಊ!! ನೀನು ಗ್ರೇಟ್!! ಅವಳ ಬಗ್ಗೆ ಈ ಸೂ…ಮಕ್ಳು ಏನಂತಾರೆ ಗೊತ್ತಾ?”

“ಬಿಡು.. ನಂಗೂ ಒಬ್ಳಿದ್ದಾಳೆ ಕಣೋ..!” ಡೇವ್ ನಾಚಿಕೆಯಿಂದ ಹೇಳಿದ.

“ಒಹ್! ನಾವು ಮುಂದೆ ಯಾವತ್ತಾದ್ರೂ..” ಟೀಗೋನ ದೃಷ್ಟಿ ಹಟಾತ್ತಾಗಿ ಮೇಜಿನ ಮೇಲಿದ್ದ ರಿವಾಲ್ವರಿನ ಕಡೆಗೆ ಹರಿಯಿತು. ಅವನ ಉತ್ಸಾಹ ಜರ್ರನೆ ಇಳಿಯಿತು. “ಹತ್ತ್, ತೆರಿ… ಈಗ ನಿನ್ನ ಸರದಿ!” ಎಂದ ಡೇವ್ ನಿಗೆ.

ಡೇವ್ ರಿವಾಲ್ವರನ್ನು ಎತ್ತಿ ಸಿಲಿಂಡರನ್ನು ಜೋರಾಗಿ ತಿರುಗಿಸಿದ. ನಿಲ್ಲುತ್ತಲೇ ತಲೆಗೆ ಗುರಿಯಿಟ್ಟು ಟ್ರಿಗ್ಗರನ್ನು ಎಳೆದ. ಮತ್ತೆ ಖಾಲಿ ಹೊಡೆತದ ಶಬ್ಧ.

“ಒಹ್!” ಡೇವ್ ಕುಣಿದಾಡಿದ.

“ನಮ್ಮಿಬ್ಬರ ಆಯುಷ್ಯ ಗಟ್ಟಿಯಾಗಿರುವಂತಿದೆ!” ಟೀಗೋ ಹೇಳಿದ.

“ಈವರೆಗಂತೂ ಹೌದು.” ಡೇವ್ ಹೇಳಿದ.

“ಇದರಲ್ಲಿ ಯಾಕೋ ಮಜಾ ಕಾಣುತ್ತಿಲ್ಲ. ನಮ್ಮ ಗುಂಪಿನವರೂ ಕೂಡ ಬೋ..ಮಕ್ಕಳು ಆಟ ಆಡ್ತಾ ಇದ್ದಾರೆ ಅಂತ ತಿಳಿದುಕೊಳ್ಳುತ್ತಾರೇನೋ!” ಎನ್ನುತ್ತಾ ಟೀಗೊ ರಿವಾಲ್ವರನ್ನು ಎತ್ತಿ ಸಿಲಿಂಡರಿನ ಖಾಲಿ ಖಾನೆಯೊಳಗೆ ಮತ್ತೊಂದು ತೋಟಾವನ್ನು ತುಂಬಿಸಿದ.

“ಈಗ ಆರು ಖಾನೆಗಳೊಳಗೆ ಎರಡು ಗುಂಡುಗಳು. 4:2 ರ ಅದೃಷ್ಟ! ಇಬ್ಬರಿಗೂ ಭಾಗಿಸಿದರೆ 2:1 ಏನಂತಿಯಾ?”

“ನಾವು ಬಂದಿರುವುದೇ ಅದಕ್ಕಾದರೆ, ಸುಮ್ಮನೆ ಎಳದಾಡಿಕೊಂಡು ಹೋಗುವುದ್ಯಾಕೆ? ಆದಷ್ಟು ಬೇಗ ಇತ್ಯರ್ಥವಾದರೆ ಒಳ್ಳೇದೇ.” ಎಂದ ಡೇವ್ ನಿಟ್ಟಿಸುರು ಬಿಡುತ್ತಾ.

“ನೀನು ನಿಜವಾಗಲೂ ಧೈರ್ಯಶಾಲಿ ಡೇವ್!”

“ಈಗ ನಿನ್ನ ಸರದಿ ಕಣಪ್ಪ! ನನಗಿಂತ ನಿನಗೆ ಹೆಚ್ಚು ಧೈರ್ಯ ಅಗತ್ಯ ಅಂತ ಅನಿಸುತ್ತೆ.”

ಟೀಗೋ ರಿವಾಲ್ವರನ್ನು ಎತ್ತಿಕೊಂಡು ಉಡಾಫೆಯಿಂದೆಂಬಂತೆ ಸಿಲಿಂಡರನ್ನು ತಿರುಗಿಸತೊಡಗಿದ.

“ನೀನು ಪಕ್ಕದ ಬೀದಿಯಲ್ಲೇ ವಾಸಿಸುತ್ತಿರುವುದು ಅಲ್ವಾ?” ಎಂದು ಡೇವ್ ಕೇಳಿದ.

“ಹೌದು.” ಸಿಲಿಂಡರನ್ನು ತಿರುಗಿಸುತ್ತಾ ಎಂದ ಟೀಗೋ.

“ಅದಕ್ಕೆ ಅನಿಸುತ್ತೆ ನಾವು ಈವರೆಗೆಂದೂ ಭೇಟಿಯಾಗಿಲ್ಲ. ಅಲ್ಲದೆ, ನಾನಿಲ್ಲಿಗೆ ಹೊಸಬ.”

“ಒಂದು ಗುಂಪಿಗೆ ಸೇರಿಕೊಂಡ ಮೇಲೆ ಅದಕ್ಕೇ ಸೀಮಿತರಾಗಿಬಿಡುತ್ತೇವೆ.”

“ನಿನ್ನ ಗುಂಪಿನ ಹುಡುಗರು ಹೇಗೆ? ಅವರನ್ನು ಇಷ್ಟಪಡುತ್ತೀಯಾ?” ಡೇವ್ ಕೇಳಿದ.

“ಪರವಾಯಿಲ್ಲ..” ಟೀಗೋ ರಾಗ ಎಳೆದ. ಅಷ್ಟರಲ್ಲಿ ಅವನ ಸಿಲಿಂಡರ್ ತಿರುಗುವುದು ನಿಂತಿತ್ತು. ಅವನು ರಿವಾಲ್ವರನ್ನು ತಲೆಗೆ ಗುರಿ ಇಟ್ಟ.

“ಸ್ವಲ್ಪ ತಾಳು!” ಡೇವ್ ಕೈಯನ್ನು ಮೇಲೆತ್ತಿದ.

ಟೀಗೋ ಆಶ್ಚರ್ಯಗೊಂಡವನಂತೆ, “ಏನು ಸಮಾಚಾರ?” ಎಂದ ಕಣ್ಣಗಲಿಸಿ.

“ಹ್ಞಾ.. ಹ್ಞಾ.. ಏನಿಲ್ಲ” ಎಂದು ಡೇವ್ ತಡಬಡಾಯಿಸುತ್ತಾ, “ನಮ್ಮ ಗುಂಪಿನ ಹುಡುಗರ ಬಗ್ಗೆ ನನಗೆ ಅಷ್ಟೊಂದು ಒಳ್ಳೆಯ ಅಭಿಪ್ರಾಯವಿಲ್ಲ.” ಎಂದ.

ಟೀಗೋ ಅರ್ಥವಾಯಿತು ಎಂಬಂತೆ ತಲೆಯಲ್ಲಾಡಿಸಿದ. ಕೆಲವು ಕ್ಷಣಗಳು ಅವರಿಬ್ಬರ ಕಣ್ಣುಗಳೂ ಬಂಧಿಯಾದವು. ನಂತರ ಟೀಗೋ ತನ್ನ ಭುಜಗಳನ್ನು ಕುಣಿಸಿ, ಟ್ರಿಗರನ್ನು ಎಳೆದ.

ಮತ್ತೊಂದು ಖಾಲಿ ಶಬ್ಧ ನೆಲಮಾಳಿಗೆಯೊಳಗೆ ಅನುರಣಿಸಿತು.

“ಒಹ್ಹ್…” ಅವನ ಬಾಯಿಂದ ಒಂದು ನೆಮ್ಮದಿಯ ಉಸಿರು ಹೊರಬಂದಿತು. ಅವನು ರಿವಾಲ್ವರನ್ನು ಮೇಜಿನ ಮೇಲೆ ತಳ್ಳಿದ.

ಈಗ ಡೇವ್ ಕೊಂಚ ಅಳುಕಿದಂತೆ ಕಂಡು ಬಂದ. ಈ ಭಾರಿ ರಿವಾಲ್ವರ್ ಎತ್ತಿಕೊಳ್ಳಲು ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ. ಈ ಭಾರಿ ಖಂಡಿತವಾಗಿಯೂ ಟ್ರಿಗರ್ ಗುಂಡಿದ್ದ ಖಾನೆಗೇ ಬಡಿಯುತ್ತದೆಂದು ಅವನ ಒಳಮನಸ್ಸು ಹೇಳುತ್ತಿತ್ತು.

‘ಕೆಲವೊಮ್ಮೆ ನಾನೊಬ್ಬ ಹೆದರುಪುಕ್ಕಲ ಅಂತ ಅನಿಸುತ್ತೆ.” ಎಂದ ಡೇವ್.

“ನಾನೂ ಕೂಡ!” ಟೀಗೊ ಹೇಳಿದ.

“ಇದನ್ನು ನಿನ್ನ ಎದುರಿಗೆ ಮಾತ್ರ ಹೇಳುತ್ತಿದ್ದೇನೆ. ನಮ್ಮ ಹುಡುಗರ ಎದುರಿಗೆ ಹೇಳಿದರಂತೂ ಮುಗಿಯಿತು ಕತೆ”

“ಕೆಲವು ಸಂಗತಿಗಳು ನಮ್ಮಲ್ಲೇ ಇರಬೇಕು. ಹೊರಗೆಡವಬಾರದು. ಯಾರನ್ನೂ ನಂಬೋಕ್ಕಾಗಲ್ಲ.”

ಟೀಗೋ ಜೋರಾಗಿ ನಕ್ಕ. “ಜಗತ್ತೇ ಹೀಗೆ, ಡೇವ್.”

“ಆದರೂ ನಮಗೆ ಗುಂಪಿನ ಸದಸ್ಯರಾಗಿರುವುದು ಅನಿವಾರ್ಯ. ಏನಂತೀಯಾ?”

“ಸರಿಯಾಗಿಯೇ ಹೇಳಿದೆ. ಸಂಶಯವೇ ಇಲ್ಲ.”

ಅವರಿಬ್ಬರ ಕಣ್ಣುಗಳು ಮತ್ತೊಮ್ಮೆ ಸಂಧಿಸಿದವು.

“ಸರಿ.” ಡೇವ್ ಮೇಜಿನ ಮೇಲಿದ್ದ ರಿವಾಲ್ವರನ್ನು ಎತ್ತಿಕೊಂಡ. ತಲೆಯನ್ನೊಮ್ಮೆ ಜೋರಾಗಿ ಅಲ್ಲಾಡಿಸಿಸುತ್ತಾ ಸಿಲಿಂಡರನ್ನು ಜೋರಾಗಿ ತಿರುಗಿಸಿದ. ಅದು ಸುತ್ತುವುದನ್ನು ನಿಲ್ಲಿಸುತ್ತಲೇ ಬ್ಯಾರೆಲನ್ನು ತಲೆಗಾನಿಸುತ್ತಾ ಕಣ್ಣು ಮುಚ್ಚಿ ಟ್ರಿಗ್ಗರನ್ನು ಎಳೆದ.

ಮತ್ತೊಮ್ಮೆ ಅದೇ ಖಾಲಿ ಶಬ್ಧ!

“ನೀನು ಈ ಭಾರಿ ತುಂಬಾ ಯಾಂತ್ರಿಕವಾಗಿ ಮುಗಿಸಿದೆ ಅಂತ ಅನಿಸಿತು.”

“ನಿಜ. ನಾನು ಬೇರೆ ಏನನ್ನೋ ಯೋಚಿಸುತ್ತಿದ್ದೆ.”

“ಆದರೂ, ನಿನ್ನ ಧೈರ್ಯ ಮೆಚ್ಚುವಂತದೇ ಡೇವ್!” ರಿವಾಲ್ವರನ್ನು ಎತ್ತಿ ಮುರಿಯುತ್ತಾ ಹೇಳಿದ ಟೀಗೋ.

“ಇದೇನು ಮಾಡ್ತಿದ್ದೀಯಾ ಟೀಗೋ?” ಡೇವ್ ಆಶ್ಚರ್ಯಪಡುತ್ತಾ ಕೇಳಿದ.

“ಏನಿಲ್ಲ, ಉಳಿದಿರುವ ಕೊನೆಯ ತೋಟಾವನ್ನು ತುಂಬಿಸುತ್ತಿದ್ದೇನೆ. ಆರು ಖಾನೆಗಳು, ಮೂರು ಗುಂಡುಗಳು! ನಿನ್ನ ಅಭ್ಯಂತರವಿಲ್ಲ ತಾನೇ?”

“ನಿನಗೆ ಇಲ್ಲದಿದ್ದರೆ ನನಗೂ ಇಲ್ಲ ಟೀಗೋ!… ಆದರೆ ಈಗ ನಿನ್ನ ಸರದಿ.” ಎಂದ ಡೇವ್.

“ ಒಕೆ, ಒಕೆ!”

“ನೀನು ಯಾವತ್ತಾದರೂ ಕೆರೆಯಲ್ಲಿ ದೋಣಿ ಸಡೆಸಿದ್ದೀಯಾ ಟೀಗೋ?” ಟೀಗೋ, ಡೇವ್ ನೆಡೆಗೆ ಕುತೂಹಲದಿಂದ ಕೆಲಹೊತ್ತು ನೋಡುತ್ತಾ ನಿಂತ. ಅವನ ಕಣ್ಣುಗಳು ಇಷ್ಟಗಲವಾಗಿದ್ದವು. “ಒಂದೇ ಒಂದು ಸಲ! ಜುವಾನ್ನಾಳ ಜೊತೆಗೆ!”

“ದೋಣಿ ವಿಹಾರ ಮಜಾ ಕೊಡುತ್ತಾ?” ಡೇವ್ ಕೇಳಿದ.

“ನನಗಂತೂ ತುಂಬಾ ಮಜಾ ಕೊಡ್ತು. ಹಾಗಾದರೆ ನೀನು ಯಾವತ್ತೂ ದೋಣಿ ವಿಹಾರ ಮಾಡಿಲ್ಲ ಅನ್ನು?”

“ಇಲ್ಲ.”

“ಒಮ್ಮೆ ಹೋಗು. ಖಂಡಿತ ನಿನಗೆ ಇಷ್ಟ ಆಗುತ್ತೆ.” ಉತ್ಸಾಹದಿಂದ ಹೇಳಿದ ಟೀಗೊ.

“ನಾನೂ ಅದನ್ನೇ ಯೋಚಿಸುತ್ತಿದ್ದೆ. ಸಾಧ್ಯವಾದರೆ ಮುಂದಿನ ಭಾನುವಾರ ಹೋಗಬೇಕು…” ಅವನು ಮಾತು ಮುಗಿಸುವ ಮೊದಲೇ ಟೀಗೊ, “ಈಗ ನನ್ನ ಸರದಿ..” ಉತ್ಸಾಹರಹಿತ ದನಿಯಲ್ಲಿ ಹೇಳುತ್ತಾ, ರಿವಾಲ್ವರನ್ನು ತಲೆಗೆ ಗುರಿ ಇಡುತ್ತಾ ಟ್ರಿಗ್ಗರನ್ನು ಎಳೆದ.

ಮತ್ತೆ ಅದೇ ಖಾಲಿ ಶಬ್ಧ!

ಡೇವ್ ನ ಮುಖದಲ್ಲೂ ಅಂತ ಉತ್ಸಾಹ ಎದ್ದು ಕಾಣುತ್ತಿರಲಿಲ್ಲ. “ನೀನು ನಿಜವಾಗಿಯೂ ಧೈರ್ಯಶಾಲಿಯೇ! ಆದರೆ, ನನಗಂತೂ ಇದನ್ನು ಮುಂದುವರೆಸಲು ಸಾಧ್ಯವೇ ಇಲ್ಲವೇನೋ ಅಂತ ಅನಿಸಿಬಿಟ್ಟಿದೆ.”

“ನನಗೇನು ಹಾಗಂತ ಅನಿಸುತ್ತಿಲ್ಲ..” ಅವನಿಗೆ ಉತ್ಸಾಹ ತುಂಬಿಸುವ ದನಿಯಲ್ಲಿ ಟೀಗೋ ಹೇಳಿದ. “ಅಲ್ಲದೆ ಇದರಲ್ಲಿ ಹೆದರಿಕೊಳ್ಳುವಂತಾದ್ದು ಏನಿದೆ?” ಎಂದು ರಿವಾಲ್ವರನ್ನು ಅವನ ಕಡೆಗೆ ತಳ್ಳಿದ.

“ನಾವು ರಾತ್ರಿಯಿಡೀ ಇದೇ ಆಟ ಆಡ್ತಾ ಇರೋಣ ಅಂತೀಯಾ? ನನಗಂತೂ ಈ ಆಟ ಬೋರ್ ಹಿಡಿಸಿಬಿಟ್ಟಿದೆ.”

“ಹೌದು. ಎಲ್ಲಿವರೆಗೆ ಇದನ್ನು ಮುಂದುವರಿಸಿಕೊಂಡು ಹೋಗುವುದು? ಇಲ್ಲಿಗೇ ನಿಲ್ಲಿಸಿದರೆ ನಮ್ಮ ಗುಂಪಿನವರಿಗೆ ಖಂಡಿತ ಇಷ್ಟವಂತೂ ಆಗುವುದಿಲ್ಲ. ಇರಲಿ. ಕಟ್ಟಕಡೆಯ ಒಂದು ಪ್ರಯತ್ನವನ್ನು ಮಾಡಿಬಿಡೋಣ. ಈ ಭಾರಿಯೂ ಏನೂ ಆಗದಿದ್ದರೆ ನಮ್ಮ ಗುಂಪಿನವರಿಗೆ ಮಾರೋ ಗೋಲಿ! ಸಮುದ್ರಕ್ಕೆ ಹಾರಿ ಸಾಯಲಿ…”

“ನಮ್ಮ, ನಮ್ಮ..” ಡೇವ್ ತಡವರಿಸಿದ. ಅವನ ದೃಷ್ಟಿ ಟೀಗೋನ ಮೇಲಿತ್ತು. “ನಮ್ಮ ನಮ್ಮ ಸ್ನೇಹಿತರನ್ನು ಆರಿಸಿಕೊಳ್ಳುವ ಸ್ವಾತಂತ್ರವೂ ನಮಗಿಲ್ಲವೇ?”

“ಯಾಕಿಲ್ಲ?, ಇರಲಿ. ಇದೇ ಕೊನೆಯ ಸುತ್ತು.” ಟೀಗೊ ಹೇಳಿದ.

“ನೀನು ಹೀಗೆ ಹೇಳಿದ್ದು ಕೇಳಿ ಎಷ್ಟು ಖುಶಿಯಾಯ್ತು ಗೊತ್ತಾ?” ಎನ್ನುತ್ತಾ ಡೇವ್ ರಿವಾಲ್ವರಿನ ಸಿಲಿಂಡರನ್ನು ಒಮ್ಮೆ ಜೋರಾಗಿ ತಿರುಗಿಸಿದ. “ಭಾನುವಾರ ದೋಣಿ ವಿಹಾರವಂತೂ ಖಾತ್ರಿ. ನೀನೂ, ನಿನ್ನ ಹುಡುಗಿ ಜೊತೆಗೆ ಬರಬೇಕು ಟೀಗೋ. ನಿನ್ನದೊಂದು ದೋಣಿ, ನನ್ನದೊಂದು ದೋಣಿ. ನಿನ್ನ ಅಭ್ಯಂತರವಿಲ್ಲದಿದ್ದರೆ ನಾವು, ನೀವು ಒಂದೇ ದೋಣಿಯಲ್ಲಿಯೂ ಹೋಗಬಹುದು! ಎಷ್ಟೊಂದು ಮಜಾ ಇರುತ್ತೆ ಅಲ್ವಾ? ಏನಂತೀಯಾ?”

“ಒಹ್, ಒಂದೇ ದೋಣಿ!! ಥ್ಯಾಂಕ್ಸ್ ಡೇವ್! ನನ್ನ ಹುಡುಗಿ ಜುವಾನ್ನಳನ್ನು ನಿನ್ನ ಹುಡುಗಿ ಖಂಡಿತ ಇಷ್ಟಪಡುತ್ತಾಳೆ.”

ಸಿಲಿಂಡರ್ ತಿರುಗುವುದು ನಿಂತು ನಿಶ್ಚಲವಾದಂತೆ ಡೇವ್ ರಿವಾಲ್ವರಿನ ಬ್ಯಾರೆಲ್ಲನ್ನು ತಲೆಗೆ ಗುರಿ ಇಟ್ಟು, “ಸರಿ. ಹಾಗಾದರೆ, ಭಾನುವಾರ ಖಾತ್ರಿ ತಾನೇ” ಎಂದು ಎಡಗೈ ಹೆಬ್ಬೆರಳನ್ನು ಮೇಲಕ್ಕೆತ್ತಿ ಬಲಗೈಯಿಂದ ಟ್ರಿಗ್ಗರನ್ನು ಎಳೆದ.

ಆದರೆ, ಈ ಭಾರಿ ರಿವಾಲ್ವರಿನಿಂದ ಹೊರಟ ಭೀಕರ ಸದ್ದಿನೊಂದಿಗೆ ನೆಲಮಾಳಿಗೆಯ ಕಟ್ಟಡ ಭೂಕಂಪವಾದಂತೆ ಅದುರಿತು. ಡೇವ್ ನ ಅರ್ಧ ತಲೆ ಛಿದ್ರಗೊಂಡು ಸುತ್ತಲೂ ಚದುರಿತು. ಟೀಗೋನಾ ಬಾಯಿಂದ ಭೀಕರ ಆರ್ತನಾದ ಹೊರಟು ಅವನು ಮೇಜಿನ ಮೇಲೆ ಕುಸಿದು ಬಿದ್ದ. ದುಃಖ ಉಮ್ಮಳಿಸಿ ಬಂದು ಅವನು ಬಿಕ್ಕಿ ಬಿಕ್ಕಿ ರೋಧಿಸತೊಡಗಿದ.

-ಜೆ.ವಿ.ಕಾರ್ಲೊ.

(Evan Hunter ನ  THE LAST SPIN ಕತೆಯ ಅನುವಾದ)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x