ಆವತ್ತು ಸೋಮಾರ ರಾತ್ರಿ ನಾನು ಒಬ್ಬಾಕೆ ಕತ್ತಲಾಗ ಹುಲಿಕಲ್ಲು ಕಾಡಾಗ ಒಣಗಿದ ಮರನಾ ಕಡೀತಿದ್ನ, ಆ ಬೆವರ್ಸಿ ಹುಲಿ ಗಿಡದ ಮಟ್ಟಿಂದ ಬಂದು ನನ್ನ ನೋಡಿ… ಘರ್… ಅಂತ ಘರ್ಜಿಸ್ತು…!!.. ಹಂಗೆ ಕತ್ತೀನ ಕೈಯಿಂದ ಹಿಡಿದು ಮೇಲಕ್ಕೆತ್ತಿ, ದೊಡ್ಡ ಕಣ್ಣುಬಿಡುತ್ತಾ, ಅಡ್ಡಿಡಿಡಿ……. ಅಡ್ಡಿಡಿಡಿ…… ಅಡ್ಡಿಡಿಡಿ…. ಅಂದೇ ನೋಡು……!!!ಅಹ್..ಹ್….ಹ್…ಹ್..ಹ್…ಹ…. ಇಲಿ ಮರಿತರ ಹೆದರಿ ಹಂದಿ ತರ ಬಿದ್ದು, ಕಾಡೊಳಗೆ ಓಡೋಯಿತು ನೋಡು…….ಅಹ್..ಹ್…ಹ್….ಹ್….ಹ್…ಹ….. ಅಂತ ನಗ್ತಾ,…… ಹುಲಿ ಮುಂದೆ ತಾನು ಒಬ್ಬಂಟಿಯಾಗಿ ತೋರಿದ ಪೌರುಷಾನ ಮುಂಜಾನೆ ತನ್ನ ಅಂಗೈ ಅಗಲದ ಗುಡಿಸಲ ಮುಂದಿನ ಕಟ್ಟೆಯ ಮೇಲೆ ಕೂಡಿಸಿಕೊಂಡು ಎಲ್ಲರಿಗೂ ಕಾಫಿ ಮಾಡಿಕೊಟ್ಟು ಸಾವಿತ್ರಕ್ಕ ನಗುನಗುತ ಹೇಳುವ ಮಾತುಗಳನ್ನು ಸರಕ್ ಸರಕ್ ಅಂತ ಕಾಫಿ ಕುಡಿತಾ, ಮಧ್ಯ ಮಧ್ಯೆ ಅವಳ ತರಾನೇ ನಗುತ್ತಾ… ತನ್ನ ಕಟ್ಟಿಗೆ ಕಡಿಯುವ ಜೊತೆಗಾರರಾದ ಪಕ್ಕದಮನೆ ಶಾಂತಕ್ಕ, ಎದುರುಮನೆಯ ಲಕ್ಷ್ಮಕ್ಕ, ಹಿಂದಣ ಮನೆ ಅಂಜಲಕ್ಕ, ಮೂಲಿಮನೆ ಗೀತಕ್ಕ, ಕಮಲಕ್ಕ ಅಯ್ಯೋ….. ಈ ಸಾವಿತ್ರಕ್ಕನ ಧೈರ್ಯ ಅಂದ್ರೆ ಧೈರ್ಯ,…!! ಎನ್ನುತ್ತಾ ಅವಳ ಗಂಡದೇನಾ ಮೆಚ್ಚುತ್ತ, ಹೊಗಳುತ್ತಾ, ಕರ್ಗತ್ತಲ ಮುಂಜಾವಿನ ಕಟ್ಟಿಗೆ ತರುವ ಯೋಜನೆ ರೂಪಿಸಿ ಕೊಳ್ಳುತ್ತಿದ್ರು.
ಸಾವಿತ್ರಕ್ಕ ಮತ್ತು ಜೊತೆಗಾರರು ಎಲೆ ಅಡಿಕೆ ಹೊಗೆಸೊಪ್ಪು ಹಾಕುತ್ತಾ, ಯೋಜನೆ ರೂಪಿಸಿ ದಾಪು ಬಿಟ್ರಂದ್ರೆ ಆ ದಿನ ಮುಂಜಾನೆ ಕೊಕ್ಕಡ ಕೋ ಅಂತ ಅಗಸಿ ಮೇಲಿನ ಹುಂಜ ಎಚ್ಚರವಾಗಿ ಕೂಗೋದ್ರೊಳಗಾಗಿ ಒಂದು ಮರದ “ಕಟ್ಟಿಗೆ ಹೊರೆ” ಕಾಡಿಂದ ಮನೆಗೆ ಬಂದು ಬಿದ್ದು ಬಿಡುತ್ತಿತ್ತು. ಹಾಗೆ ತಂದ ಕಟ್ಟಿಗೆಯನ್ನು ಬಂಡೆ ಸಾಹುಕಾರಗಳಿಗೆ ದುಡ್ಡಿಗೆ ಮಾರಿ, ಹಣದ ವ್ಯವಹಾರ ಸರಿಯಾಗಿ ತಿಳಿಯದ ಕಾರಣ ಕೊಟ್ಟಂತ ಹಣವನ್ನು ತಿಳಿದಷ್ಟು ಪಾಲು ಮಾಡಿಕೊಂಡು ಜೀವನ ಸಾಗಿಸುವುದೇ ಇವರ ನಿತ್ಯದ ಕಾಯಕ.
ತನ ಗುಡಿಸಿಲಿನ ಬಲಕ್ಕೆ ಸರಿಸುಮಾರು ನಾಲ್ಕು ಫರ್ಲಾಂಗು ದೂರದ ದುರ್ಗಮ್ಮ ಕಾಡನ್ನ ಮುಟ್ಟಿ ಒಳಹೊಕ್ಕ ಬೇಕಾದರೆ ನಡುವೆ ನಾಲ್ಕು ಎಕರೆ ಅಡಿಕೆ ತೋಟ, ಒಂದು ಹಳ್ಳ, ಬಿದಿರ ಮುಳ್ಳಿನ ದಾರಿ, ಮತ್ತು ಆರು ಎಕರೆ ಭತ್ತದ ಗದ್ದೆಯನ್ನು ದಾಟಿ ಹೋಗಬೇಕಾಗುತ್ತದೆ. ಇವು ಅಷ್ಟು ಸುಲಭದ ಹಾದಿಯಾಗಿರಲಿಲ್ಲ. ಗುಡಿಸಲು ಬಿಟ್ಟು ಮೊದಲು ಎದುರಾಗುವ ಅಡಿಕೆ ತೋಟದಲ್ಲಿ ಕಾಳಿಂಗ ಸರ್ಪ ಎಂಬ ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಿದ್ದು, ದಾರಿಗೆ ಬಹಳಷ್ಟು ಜನರ ಕಣ್ಣಿಗೆ ಕಂಡು ಹೆದರಿದ್ದರೆ, ಕೆಲವಷ್ಟು ಜನಕ್ಕೆ ಕಚ್ಚಿ ಅದನ್ನು ನೋಡುವ ಮೊದಲೇ ವಿಷವೇರಿ ಜೀವ ಕಳೆದುಕೊಂಡಿದ್ದರು.
ಬೇಸಿಗೆಯಲ್ಲಿ ಮೊಣಕಾಲವರೆಗೆ ತುಂಬಿರುವ ಹಳ್ಳವು ಮಳೆಗಾಲ ಬಂದಾಗ ತನ್ನ ಪರಿವೇ ಇಲ್ಲದೆ ಅಳತೆ ಮೀರಿ ಮೈದುಂಬಿ ಹರಿಯುತ್ತಿತ್ತು. ಮಳೆಗಾಲದಲ್ಲಿ ಪಕ್ಕದ ಗದ್ದೆಗೆ ಈಜಿಕೊಂಡೇ ಹೋಗಬೇಕಾದ ಪರಿಸ್ಥಿತಿ ಇತ್ತು. ಕೆಲವೊಮ್ಮೆ ಹಳ್ಳ ಇಳಿಯುವವರೆಗೂ ದಡದಲ್ಲಿ ಗಂಟೆಗಟ್ಟಲೇ ಕೂತು ದಾಟಿ ಹೋಗಬೇಕಾಗುತ್ತದೆ.
ಬಿದಿರ ಮರದಿಂದ ಆಗಾಗ ಒಣಗಿ ಕಾಲುದಾರಿಯಲ್ಲಿ ಬೀಳುವ ಮೊನಚಾದ ಬಿದಿರು ಮುಳ್ಳುಗಳಂತೂ ಸ್ವಲ್ಪ ಕಣ್ ತಪ್ಪಿದರೆ ಕಾಲಿನ ಪಾದಗಳಿಗೆ ಮುತ್ತಿಕ್ಕಿ ರಕ್ತ ಹರಿಸುತ್ತದೆ. ಪೀಠಭೂಮಿಗಳಂತೆ ಬಾಳಷ್ಟು ದಾರಿ, ದಿಣ್ಣೆಗಳಿಂದ ಸಾಲು ಸಾಲಾಗಿ ಕೊಬ್ಬರಿ ಮಿಠಾಯಿಯಂತೆ ಚೌಕಾಕಾರವಾಗಿ ಕಾಣುವ ಗದ್ದೆಗಳಲ್ಲಿ ಮಳೆಗಾಲದಲ್ಲಿ ನೀರಿನ ರಭಸ, ಕಾರಾಡಿ ಏಡಿಗಳಿಂದಾದ ಸಣ್ಣ ಸಣ್ಣ ಕುಳಿಗಳ ಗುಣಿಗಳಿಂದ ನಾಗರಹಾವುಗಳು ತಮ್ಮ ತಲೆಯನ್ನು ಹೊರಹಾಕಿ ಬೇಟೆಗಾಗಿ ಕಾದು ಕುಳಿತಿರುತ್ತವೆ. ಇದೆಲ್ಲವನ್ನೂ ದಾಟಿ, ಕಾಡಿನ ಸಮೀಪ ಧಾವಿಸಿದರೆ ಕಾಡು ಪ್ರಾಣಿಗಳು ಕಾಡಿಂದ ಹೊರಗೆ ಬಾರದಂತಿರಲು ಹಾಕಿದ ಕಬ್ಬಿಣದ ಮುಳ್ಳುತಂತಿಗಳು ನಮ್ಮ ಕೈಕಾಲನ್ನು ತಿವಿಯಲು ಕಾದು ಕುಳಿತಿರುತ್ತವೆ. ಮುಂಜಾವಿನ ಕತ್ತಲೆಯಲ್ಲಿ ಹೋಗೋ ಕಾರಣ, ಅರಣ್ಯ ರಕ್ಷಕರ ಕಣ್ಣು ತಪ್ಪಿಸಲು. ಹೀಗೆ ‘ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ’…. ಎಂಬಂತೆ ಈ ಮಾರ್ಗ ಬಿಟ್ಟು ಕಾಡಿಗೆ ಬೇರೆ ದಾರಿ ಇರಲಿಲ್ಲ.
ಆದಿನ ಮುಂಜಾವು ಮೂರು ಗಂಟೆಗೆದ್ದು, ಕಾಫಿ ಮಾಡುತ್ತಾ,ಸಾವಿತ್ರಕ್ಕ ತನ್ನ ಎಲೆಯಡಿಕೆ ಚೀಲದಿಂದ ವಿಲೆದೆಲೆ,ಅಡಿಕೆ, ಸುಣ್ಣ ತೆಗೆದು ಎಲೆಗೆ ಸುಣ್ಣ ಹಾಕಿ ತಿಕ್ಕುತ್ತಾ, ತಂಬಾಕಿನ ಎಸಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಅಡಿಕೆಯೊಂದಿಗೆ ಸೇರಿಸಿ, ಬಾಯಿಗೆ ಹಾಕೋಂತ, ಜಗೆಯುತ್ತಾ ಅಂಜಲಕ್ಕ, ಕಮಲಕ್ಕ, ಗೀತಕ್ಕ ಲಕ್ಷ್ಮಕ್ಕ, ಶಾಂತಕ್ಕನ ಬರವಿಕೆಗಾಗಿ ಕಾದು ಕುಳಿತಿದ್ದಳು.
ಸ್ವಲ್ಪ ಸಮಯದ ನಂತರ ಗುಡಿಸಲ ಬಾಗಿಲ ಬಡಿದಂತಾಗಿ ತೆರೆದಾಗ ಎದುರು ನೋಡುತ್ತಿದ್ದವರೆಲ್ಲ ಕೈಯಲ್ಲೊಂದು ಕತ್ತಿ, ಕಟ್ಟಿಗೆ ಹೊರೆ ಕಟ್ಟಲು ಹಗ್ಗ, ಕಟ್ಟಿಗೆ ಹೊರಲು ತಲೆಗೆ ರುಮಾಲು ಮಾಡಿಕೊಳ್ಳಲು ಬಟ್ಟೆಯೊಂದನ್ನು ಹಿಡಿದುಕೊಂಡು ಗುಸು ಗುಸು ಮಾತನಾಡುತ್ತಾ, ನಡೀರಿ…….ಬೇಗ ನಡೀರೆ….. ಲೇಟಾದರೆ ಬೆಳಕರೆಯುತ್ತೆ, ಅಂತ ಸಾವಿತ್ರಕ್ಕ ಕೊಟ್ಟ ಬಿಸಿ ಬಿಸಿ ಕಾಫೀನ ಕುಡಿದು, ಸ್ವಲ್ಪ ಎಲೆ ಅಡಿಕೆ ಹೊಗೆಸೊಪ್ಪು ಹಾಕೊಂಡು, ಕರ್ಗತ್ತಲ ಕತ್ತಲೆಯಲ್ಲಿ ಲೀನವಾದಂತೆ ಕಾಡಿನ ದಾರಿ ಹಿಡಿದು ಹೋಗುವಾಗ ದೂರದಲ್ಲೆಲ್ಲೋ ನರಿಗಳು ಊಳಿಡುತ್ತಿದ್ದಂತೆ ಸಾವಿತ್ರಕ್ಕ ಬೇವರ್ಸಿಗಳು ಇವು, ರಾತ್ರಿ ನಿದ್ದೇನೆ ಮಾಡಲ್ಲ,,ಯಾವನಾರ ಮಣ್ಣಾಗ ಹೆಣ ಊಳಿದ್ರಾ ಅದನ್ನು ತೋಡಿ ಎಳಕೊಂಡು ತಿಂತಾವೆ, ಅಂತ ಬೈಕೊಂತ, ಅರ್ಧ ಚಂದ್ರನ ಬೆಳಕಿನ ಸಹಾಯದಿಂದ ಅಡಿಕೆ ತೋಟಕ್ಕೆ ಬಂದೊಡನೆ, ನೋಡ್ಕೊಂಡು ಬರ್ರಿ……ಬಳ್ಳಿ ಕಚ್ಚಿಬಿಟ್ಟಾವು…. ಎಂದೊಡನೆ ಗೀತಕ್ಕ ಹೂ ಕಣೆ ಸಾವಿತ್ರಕ್ಕ, ಒಮ್ಮೆ ನಮ್ಮ ಪಕ್ಕದ ಮನೆ ಸಬೀನಾ ಸಗಣಿ ತರಕಂತ ಗದ್ದೆಗೆ ಹೋಗುವಾಗ ಬಳ್ಳಿ ಕಚ್ಚಿ, ಆಸ್ಪತ್ರೆಗೆ ಹೋಗಿದ್ದರೂ ಉಳೀಲಿಲ್ಲ ಅಂದ್ಲು. ಸಾಕು ಬಣ್ರೇ ಮಾತು ಎನ್ನುತ್ತಾ ಮುಂದುವರೆದು ತಮ್ಮ ತಮ್ಮ ಸೀರೆಯನ್ನು ಹಳ್ಳ ಬಂದಕಾರಣ ಮೊಣಕಾಲಿನವರೆಗೆ ಎತ್ತಲು ಅಣಿಯಾಗಿ ದಾಟಿ, ಕಗ್ಗತ್ತಲೆಯಲ್ಲಿ ಅಂದಾಜಿನಂತೆ ಹೆಜ್ಜೆಯಿಡುತ್ತಾ, ಗದ್ದೆಯ ದಿಣ್ಣೆಗಳ ಮೇಲೆ ಕಾಲಿಡುತ್ತಾ, ಸಮೀಪದ ಮುಳ್ಳು ತಂತಿಯ ಬೇಲಿಯನ್ನು ದಾಟಿ ಕಾಡಿನೊಳಗೆ ಪ್ರವೇಶ ಮಾಡುತ್ತಿದ್ದಂತೆ “ಬರ್ಮುಡಾ ಟ್ರಯಾಂಗಲ್” ನಲ್ಲಿ ಸಿಕ್ಕ ನೂರಾರು ವಿಮಾನ, ಹಡಗುಗಳು ಇದ್ದಕ್ಕಿದ್ದಂತೆ ಕಣ್ಣಿಗೆ ಕಾಣದಂತೆ ಮಾಯವಾಗಿ ಸಮುದ್ರದಲ್ಲಿ ಕಣ್ಮರೆಯಾಗುವಂತೆ, ದುರ್ಗಮ ಕಾಡಿನೊಳಗೆ ಪ್ರವೇಶಿಸಿದಾಗ ಎಲ್ಲರೂ ಮಾಯವಾಗುತ್ತಿದ್ದರು.
ಕಾಡಿನ ಸ್ಮಶಾನ ಮೌನಸಾಗರಕ್ಕೆ ಗುಡಿಸಲ ಬಳಿಯಿದ್ದ ಬೀದಿ ನಾಯಿಯೊಂದು ಬೌ ಬೌವಂತ ಬೊಗಳುತ್ತಾ ಕಲ್ಲು ಎಸೆಯುವಂತ್ತಿತ್ತು… ಈ ಹಡ್ಬೇಗುಟ್ಟಿದ ನಾಯಿ….. ಯಾವಾಗಲೂ ಬೊಗಳುತ್ತಿರುತ್ತೆ ಅಂತ ಬೈಕೊಂಡು, ನಿಧಾನವಾಗಿ ಕಾಡಿನ ಕತ್ತಲೆಯಲ್ಲಿ ಅಂದಾಜಿನೆಂಬಂತೆ ಹೆಜ್ಜೆಯಿಡುತ್ತಾ, ಗಡಿಯಲ್ಲಿ ಸೈನಿಕರು ಚದರುವಂತೆ ಒಬ್ಬೊಬ್ಬರು ಒಂದೊಂದು ಮೂಲೆಗೆ ಚದುರಿ, ಮರಗಳನ್ನು ಕಡಿದು ಹೊರೆ ಜೋಡಿಸಲು ಅಣಿಯಾದರು.
ಕತ್ತಲೆಯಲ್ಲಿ ಹೊತ್ತಾಗುವುದರೊಳಗಾಗಿ ಬೇಗ ಹೊರೆ ಕಟ್ರೇ ಅಂತ ಪಿಸು ಪಿಸು ಮಾತನಾಡುತ್ತಾ, ಮರವೊಂದಕ್ಕೆ ಕತ್ತಿಯ ಪೆಟ್ಟುಕೊಟ್ಟಾಗ, ಕಾಡಿನಲ್ಲಿ ಪ್ರಾಣಿ-ಪಕ್ಷಿಗಳ ವಿಚಿತ್ರ ವರ್ತನೆಯ ಶಬ್ದ ಉಂಟಾಗಿ, ಯಾವುದೋ ಮೂಲಿಗೊಂದು ಘರ್ಂತ ಹುಲಿಯ “ಘರ್ಜನೆ ಯಾದಂತೆ”……. ಕಮಲಕ್ಕ ಸಾವಿತ್ರಕ್ಕಳ ಬಳಿಬಂದು, ಕೇಳಿದ್ಯೇನೆ ಹುಲಿ ಗರ್ಜಿಸೋದನ್ನ….!!!????? ನಡೀರೆ ಸಾಕು ಕಟ್ಟಿಗೆ ಬೇಡ, ಏನು ಬೇಡ ಹೋಗಿಬಿಡೋಣ ಎಂದಾಗ, ನಾನು ಆ ಹುಲಿನ ಬಹಳಷ್ಟು ಸಾರಿ ನೋಡಿದೀನಿ, ಏನು ಮಾಡಲ್ಲ ಸುಮ್ನೆ ಹೊರೆ ಜೋಡ್ಸಿ, ಹುಲಿ ಬಂದ್ರೆ ನಾ ನೋಡ್ಕೋತೀನಂತ ಬಯಿದ್ಲು.
ಅಂತೂ ಆ ದಿನ ಹುಲೀನ ಹೆದರಿಸಿ, ಹೇಗೋ ಎಲ್ಲರೂ ಒಂದೊಂದು ಹೊರೆ ಕಟ್ಟಿಗೆ ಕಟ್ಟಿಕೊಂಡು ಮನೆ ಸೇರಿದ್ರು. ಆದ್ರೂ ಕಟ್ಟಿಗೆ ತರುವಾಗ ಎಲ್ಲಾದರೂ ಹುಲಿ ಹಿಂದೆ ಬಂದುಬಿಟ್ಟಾತೆಂಬ ಭಯದ ಆತಂಕದಿಂದಲೇ ಮನೆ ಮುಟ್ಟಿದ್ರು. ಹೇಗೆ ಸಾವಿತ್ರಕ್ಕನ ಧೈರ್ಯಕ್ಕೆ ಮೆಚ್ಚಿ, ಜೊತೆಗೆ ಬರುತ್ತಿದ್ದವರು ಕೊನೆಕೊನೆಗೆ ತಾವು ಕೂಡ ಕೆಲವೊಮ್ಮೆ ಹುಲಿಯನ್ನು ನೋಡಿದ ಭಯಕ್ಕೆ ಎಂಬಂತೆ, ಅವಳ ಜೊತೆ ಕಟ್ಟಿಗೆಗಾಗಿ ಹಿಂಬಾಲಿಸುವುದನ್ನು ಕ್ರಮೇಣ ಒಬ್ಬೊಬ್ಬರಾಗಿ ಬಿಟ್ಟಾಗ, ಜೊತೆಗೆಂಬಂತೆ ತನ್ನ ಮಗ ಈಶ್ವರನನ್ನು ಕರೆದುಕೊಂಡು ಕಾಡಿಗೆ ಹೋಗಿ ಕಟ್ಟಿಗೆ ತರ್ತಿದ್ಲು.
ಬಹಳಷ್ಟು ವರ್ಷ ತನಗೆ ಮಕ್ಕಳಾಗದ ಕಾರಣ ತನ್ನ ಇಷ್ಟದೇವರಾದ ‘ಈಶ್ವರ’ದೇವರಿಗೆ ಬೇಡಿ ನಂತರ ಮಗುವಾದ ಕಾರಣಕ್ಕೇನೋ ಮಗನಿಗೆ ಈಶ್ವರ ಅಂತಲೇ ನಾಮಕರಣ ಮಾಡಿದ್ಲು. ಗಂಡ ಕುಡುಕನಾಗಿದ್ದು ಸ್ವಲ್ಪ ಕಾಲದ ನಂತರ ‘ ಬಿಳಿ ಕಾಮಾಲೆ ‘ಕಾಯಿಲೆ ಯಿಂದ ಬದುಕುಳಿಯಳಾರನಾಗಿದ್ದ. ಗಂಡನ ಕಳಕೊಂಡು ಸಂಸಾರದ ವೈವಟನ್ನು ತಾನೇ ನಿರ್ವಹಣೆ ಮಾಡುತ್ತಿದ್ದ ಸಾವಿತ್ರಕ್ಕಳಿಗೆ ಅವಳ ಮಗನೇ ಜೀವನದ ಭವಿಷ್ಯವಾಗಿದ್ದ. ಮಗನನ್ನು ತುಂಬಾ ಪ್ರೀತಿ ಸಲುಗೆಯಿಂದ ಬೆಳೆಸಿದ್ಲು. ಅಂತೆಯೇ ಮಗ ಕೂಡ ತಾಯಿಯ ಕಷ್ಟದಲ್ಲಿ ಭಾಗಿಯಾಗುತ್ತಿದ್ದ. ಇಷ್ಟೆಲ್ಲಾ ಕಷ್ಟಪಟ್ಟು ಸ್ವಾವಲಂಬನೆ ಬದುಕು ಸಾಧಿಸುವ ಸಾವಿತ್ರಕ್ಕಳಿಗೆ ತಾನು ಗಳಿಸಿದ ಹಣವನ್ನು ಸಹ ಎಣಿಸಿ ತಿಳಿಯಲಾರದಷ್ಟು ಅನಕ್ಷರಸ್ಥರು. ಮಗ ದೊಡ್ಡವನಾದ ಮೇಲೆ ಅದೆಷ್ಟೋ ಸಾರಿ ಅವಳ ಜೀವ ಪಣಕ್ಕಿಟ್ಟು ಗಳಿಸಿದ ಹಣವನ್ನು ಎಣಿಸಿ ಹೇಳು ಎಂದಾಗ ಮಗ ಬೇಕಂತಲೇ ತಪ್ಪಾಗಿ ಎಣಿಸಿ ಐನೂರು ಇದ್ದರೆ ಮುನ್ನೂರು ರೂಪಾಯಿ ಮಾತ್ರ ಇದೆ ಅಂತ ಹೇಳಿ, ಕಟ್ಟಿಗೆ ತಗೊಂಡ ಸಾಹುಕಾರರಂತೆ ಯಾಮಾರಿಸಿ ಹೇಳಿ ಉಳಿದ ಹಣವನ್ನು ತಾನು ಇಟ್ಟುಕೊಳ್ಳುತ್ತಿದ್ದ.
ಒಮ್ಮೆ ಸಾವಿತ್ರಕ್ಕ ಕಟ್ಟಿಗೆಗಂತ ಕತ್ತಲೆ ಕಾಡಿನ ದಾರಿಯಲ್ಲಿ ಹೋಗುತ್ತಿರುವಾಗ ಯಾರು ಎದುರಿಗೆ ಬಂದು ಅಸ್ಪಷ್ಟವಾಗದ ರೂಪ ನಿಂತಂತೆ ಕಂಡು, ಯಾರೆಂದಾಗ……!!!????? ನಾನು ತೋಟದಮನೆ ಶ್ರೀನಿವಾಸ ಕಣೆ……!! ನಾನು ಸತ್ತು ಎರಡು ವರ್ಷ ಆಯಿತು, ನನಗೆ ಯಾರೂ ಎಲೆಅಡಿಕೆ ಕೊಡವಲ್ಲರು, ನೀನಾರು ಕೊಡು ಇಲ್ಲಂದ್ರೆ ನಿನಿಗೆ ದಾರಿ ಬಿಡಂಗಿಲ್ಲ ಅನ್ನೋ ಅಶರೀರವಾಣಿ ಬಂದಾಗ…
ಮರ್ಯಾದೆಯಿಂದ ದಾರಿ ಬಿಡು, ಇಲ್ಲಾಂದ್ರೆ ಕತ್ತೀಲಿ ಕಡೀತೀನಿ ನೋಡು ನಿನ್ನ…. ಬೆವರ್ಸಿ…. ದಾರಿ ಬಿಡೋ..ಅಂತ ಬೆದರಿಸಿದ್ಲು……!! ಎಲೆ ಅಡಿಕೆ ಕೊಟ್ಟರೆ ಬಿಡ್ತೀನಂತ ಕೇಳಿದೋನು, ಕೊಟ್ಟೊಡನೆ ಹಾಕೊಂಡು ಕಣ್ಣಿಗೆ ಕಾಣದಂಗ ಅದೃಶ್ಯನಾಗಿಬಿಟ್ಟ…. ಬೆವರ್ಸಿ ನನ್ಮಗಾಂತ ತನ್ನ ಗುಡಿಸಲ ಸುತ್ತಮುತ್ತಲ ನೆರೆಹೊರೆಯವರಿಗೆ ಅಹ್…..ಹ್…ಹ್……ಹ್…ಹ. ಅಂತ ನಗುನಗುತ್ತಾ ಹೇಳ್ತಿದ್ದುದನ್ನ ಆಶ್ಚರ್ಯವೆಂಬಂತೆ ಕೇಳುತ್ತಿದ್ದರು.
ಈ ಸಾವಿತ್ರಕ್ಕ ಒಮ್ಮೆ ಮೇಳಿಗೆ ಕಾಡಿಗೆ ಹೋದಾಗ ಯಾವನೋ ಬ್ರಾಹ್ಮಣ ದೆವ್ವ ಮೈಯಾಗ ಹಿಡ್ಕೊಂಡು ಆಗಾಗ ಮೈಮೇಲೆ ಬಂದು ಕಾಡುತ್ತಿದ್ದನಂತೆ…..!!!! ಒಮ್ಮೆ ಗಂಡನ ಜೊತೆ ಅಮಾವಾಸ್ಯೆಯ ಮಧ್ಯರಾತ್ರಿಯಲ್ಲಿ ಮಲಗಿದ್ದಾಗ ಸ್ವಲ್ಪ ಕಾಡಲ್ಲಿ ಚಪ್ಪಲಿ ಬಿಟ್ಟಿನಿ ತಗೊಂಡು ಬರೋಣ ಬನ್ನಿ ಹೋಗಿ ಬರೋಣ ಅಂತ ಕರೆಯುತ್ತಿದ್ದಳಂತೆ,…!! ಅದಕ್ಕೆ ಗಂಡ ಬೆನ್ನಿಗೆ ದಡಾರಂತ ಸರಿಯಾಗಿ ಬಾರಿಸಿ ಸುಮ್ನೆ ಮಲ್ಗಿಯೋ ಇಲ್ವೋ ಅಂದಾಗ…….ಹ್…ಹ್…..ಹ್….ಹ್…ಹ…. ಗೊತ್ತಾಯ್ತೆನೋ ನಾನು ಯಾರಂತ…..???….ಹ್…ಹ್….ಹ್…ಹ…ಅಂತ ರಾಕ್ಷಸ ನಗುವಂತೆ ನಗೋಳಂತೆ….!!!!
ಈ ಬೋಳಿಮಗನ ಬ್ರಾಹ್ಮಣ ದೆವ್ವ ಇವಳ್ನ ಬಿಟ್ಟು ಗೊತ್ತಿಲ್ವಲ್ಲ ಅನ್ನೋ ವೇದನೆಯಲ್ಲಿದ್ದವನಿಗೆ, ಅವರ ಅತ್ತೆ ಮಂಗಮ್ಮ ಬಂದು ಮಾರಿಕಾಂಬ ದೇವರ ಫೋಟೋ ತೋರಿಸಿ, ಎರಡು ಕೊಟ್ಟೆ ಸಾರಾಯಿ ತಂದು ಕುಡಿಸಿ, ಮತ್ತೆ ಮೈಮೇಲೆ ಬಂದು ತೊಂದರೆ ಕೊಡದಂತೆ ಆಣೆ ಮಾಡಿಸಿದ್ರು,… ಅವತ್ತಿಂದ ಆ ಬ್ರಾಹ್ಮಣ ಮೈಮೇಲೆ ಬರುತ್ತಿರಲಿಲ್ಲವಂತೆ…..!!!
ಒಮ್ಮೆ ಸಣ್ಣ ವಯಸ್ಸಿನಲ್ಲಿ ಸಾವಿತ್ರಕ್ಕ ಕುರಿ ಕಾಯುವಾಗ ಒಂದು ಕುರಿಗೆ ದೆವ್ವ ಬಡೀತಂತೆ, ಆಗ ಅವಳು ಅಲ್ಲಿಂದ ಓಡೋಡಿ ಬಂದು ಇವರಪ್ಪನ ಹತ್ತಿರ ಉಸಿರೆಳೆದುಕೊಂಡು ಹೇಳಿದ ತಕ್ಷಣ ಇವರಪ್ಪ ಓಡೋಗಿ ನಾಲ್ಕು ಕೊಟ್ಟ ಸಾರಾಯಿ ಕುಡಿದು ಕುರೀನ ತಂದು ಸುಲಿದು ಮಂಗಮ್ಮನ ಹತ್ತಿರ ಸಾಂಬಾರು ಮಾಡಿಸಿದನಂತೆ, ಆದರೆ ಸಾವಿತ್ರಕ್ಕ ದೆವ್ವ ಬಡಿದ ಕುರಿನಾ ತಿಂದ್ರೆ ನಮಗೂ ದೆವ್ವ ಹಿಡಿಯುತ್ತೆ ಅನ್ನೋ ಬಯಕ್ಕೆ ಆ ಖಂಡದ ಸಾರನ್ನು ಮುಟ್ಟುತ್ತಿರಲಿಲ್ಲವಂತೆ…..!!! ಹೀಗೆಲ್ಲಾ ಸಾವಿತ್ರಕ್ಕ ನ ಗುಡಿಸಲ ಸುತ್ತಮುತ್ತಲ ಜನ ಮಾತನಾಡುತ್ತಿದ್ರು.
ಊರ ಮಾರಿಕಾಂಬ ಜಾತ್ರೆ ನಡೆಯುವಾಗ ಒಂದು ರೀತಿಯ ವಿಶೇಷ ಡೋಲು ಪಂಭೈನ ಭದ್ರಾವತಿಯಿಂದ ತರಿಸುತ್ತಿದ್ದರಂತೆ, ಅದರ ಶಬ್ದ ಕೇಳಿದೊಡನೆ ಸಾವಿತ್ರಕ್ಕ ಮೈಮೇಲೆ ದೇವರು ಬಂದಂತೆ ಕೂದಲು ಕೆದರುತ್ತ,ದೇವಸ್ಥಾನಕ್ಕೆ ಓಡಿಬಂದು, ಕಣ್ಣುಗುಡ್ಡೆಗಳನ್ನು ದೊಡ್ಡದು ಮಾಡಿ, ಹೊರಗಿನ ಪರಿವಿಲ್ಲದೆ, ನಾಲಿಗೆಯನ್ನು ಹೊರಹಾಕುತ್ತಾ ಮಾರಮ್ಮ ಬಂದಿದ್ದೀನಿ ಅಂತ ಕುಣಿಯುತಿದ್ದವಳು ಪೂಜಾರಿ ಬಂದು ಕರ್ಪೂರ ಹಚ್ಚಿ ನಾಲಿಗೆ ಮೇಲಿಟ್ಟು, ಅಮ್ಮ…. ತಾಯೇ…. ಮಾರಮ್ಮ….. ಬೆಟ್ಟ ಹತ್ತಮ್ಮ ಸಾಕು…..ತಾಯೇ..,. ಅಂದೊಡನೆ ಸ್ವಲ್ಪ ಹೊತ್ತಾದ ನಂತರ ನಿಧಾನ ಯತಾಸ್ಥಿತಿಗೆ ಬಂದು ಮನೆಗೆ ಹೋಗುತ್ತಿದ್ದಳು. ಇದನ್ನೆಲ್ಲಾ ನೋಡುತ್ತಿದ್ದ ಊರ ಜನ ಕೆಲವರು ದೇವರು ಅಂದ್ರೆ, ಮತ್ತೆ ಕೆಲವರು ನೋಡು ಡ್ಯಾನ್ಸ್ ಹೆಂಗೆ ಮಾಡ್ತಾವ್ಳೆ ಅಂತ ನೋಡಿಕೊಂಡು ಕಿಸಿಕಿಸಿ ಅಂತ ನಗ್ತಿದ್ರು.
ಕೆಲವೊಮ್ಮೆ ಕರ್ಪೂರ ಇಟ್ಟಾಗಲೂ ದೇವರು ನಿಲ್ಲದಿದ್ದಾಗ ಗುಡಿ ಪೂಜಾರಿ ಚಾಟಿಯಿಂದ ರಪರಪಾಂತ ಸಾವಿತ್ರಕ್ಕ ಗೆ ಬಡಿಯೋ ಏಟಿಗೆ ಮೈಯೆಲ್ಲಾ ಬಾಸುಂಡೆ ಬಂದು ಅದನ್ನು ಆರಿಸಿಕೊಳ್ಳಲು ಅವಳಿಗೆ ತಿಂಗಳುಗಟ್ಟಲೆ ಬೇಕಾಗಿತ್ತು.
ಒಂದು ದಿನ ಮಗ ಈಶ್ವರ ಸಾರಾಯಿ ಕುಡಿದು ಬಂದು ಅಮ್ಮನ ಹತ್ತಿರ ನನಗೂ ವಯಸ್ಸಾಗ್ತಾ ಇದೆ, ಮದುವೆ ಮಾಡಿಸಂದ. ಅವಳಿಗೂ ಅದೇ ಆಸೆ ಇದ್ರೂ, ಮಗನಿಗೆ ಇನ್ನೂ ಸ್ವಲ್ಪ ಜವಾಬ್ದಾರಿ ಬಂದಮೇಲೆ ಮಾಡಿಸೋಣಾಂತ ಮನಸ್ಸಲ್ಲೇ ಅಂದುಕೊಂಡು…..ತಡಿ ಈಸ್ವರ, ನಿನಗೆ ಇನ್ನೂ ವಯಸ್ಸಾಗಿಲ್ವೋ..,…ಸ್ವಲ್ಪ ವರ್ಷ ಆದ್ಮೇಲೆ ಮಾಡೋಣ ಅಂದ್ಲು. ಸಿಟ್ಟಿಗೆದ್ದ ಮಗ ನಾನು ಮನೆ ಬಿಟ್ಟು ಹೋಗ್ತೀನಂತ ಹೇಳಿ ಎಷ್ಟು ಸಾರಿ ಹಂಗೆ ಹೋಗಿ ಮತ್ತೆ ತಿರುಗಿ ಮನೆಗೆ ಬರುತ್ತಿದ್ದವನು, ಈ ಸಾರಿ ಹೋಗಿಯೇ ಬಿಟ್ಟಿದ್ದ.
ಯಾಕೋ ಗಂಡ, ಮಗನಿಲ್ಲದ ಕೊರಗಿನಲ್ಲಿ ಸ್ವಲ್ಪ ಸೊರಗಿ, ಕೆಲಸಕ್ಕೂ ಹೋಗದೆ, ಸರಿಯಾಗಿ ಊಟ ಮಾಡದೆ, ಚಿಂತೆಗೀಡಾಗಿ ಕಾಲ ಕಳೀತಿದ್ಲು. ಕೈಯಾಗಿನ ಹಣವೆಲ್ಲಾ ಖಾಲಿಯಾದ ಮೇಲೆ, ಸಾವಿತ್ರಕ್ಕ ಬಹಳ ದಿನಗಳ ನಂತರ ಆ ದಿನ ಕಟ್ಟಿಗೆ ತರಲು ಕತ್ತಿ,ರುಮಾಲಿಗೆ ಬಟ್ಟೆ ಹಿಡಿದು, ಕಾಡಿಗೆ ಯಾರೂ ಜೊತೆಗಿಲ್ಲದೆ ಒಬ್ಬಳೇ ಹೊರಟಿದ್ದಳು. ತನ್ನ ಗಂಡನಿದ್ದಾಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಪರಿಯನ್ನು, ಮಗನಿಗೆ ಹೆಂಗಾರ ಮಾಡಿ ಈ ವರ್ಷ ಮದುವೆ ಮಾಡಿ ಕಣ್ತುಂಬ ನೋಡಬೇಕೆನ್ನುವ ಆಸೆಯಿಂದ, ತಾನು ಸಾಯೋದ್ರೊಳಗೆ ತನ್ನ ಮಗನಿಗೆ ಏನಾರು ಆಸ್ತಿಯನ್ನು ಮಾಡಿಟ್ಟು ಹೋಗಬೇಕು ಅನ್ನೋ ಯೋಚನೆ ಮಾಡುತ್ತಾ, ಕತ್ತಲ ದಾರಿಯಲ್ಲಿ ಅಲ್ಲಲ್ಲಿ ಎಡವಿಬೀಳುತ್ತಾ ಅಡಿಕೆ ತೋಟ, ಮಳೆಗಾಲದಲ್ಲಿ ನೀರು ತುಂಬಿ ಹರಿದು ಈಜಾಡಿ ಕಟ್ಟಿಗೆ ತರುತ್ತಿದ್ದ ಹಳ್ಳಾನಾ ದಟ್ತಾ, ಗದ್ದೆಯ ದಿನ್ನೆಗಳ ಮೇಲೆ ಮುಂಜಾನೆಯ ರಾತ್ರಿಯಲ್ಲಿ, ಅರ್ಧ ಚಂದ್ರನ ಬೆಳಕಲ್ಲಿ ಬರುತ್ತಿರಬೇಕಾದರೆ ಎದುರಿಗೆ ಅಸ್ಪಷ್ಟವಾದ ಅಶರೀರವಾಣಿಯಿಂದ ಬಂದಂತಹ ಮಾತುಗಳು, ಆಕಾರಗಳು ಕಣ್ಣಿಗೆ ಕಂಡು ಮಾಯವಾದಂತೆ ಭಾಸವಾಗಿ, ಗುಡ್ಡದಮೇಲೆ ನರಿಗಳು ತುಂಬಾ ಜೋರಾಗಿ ಗೀಳಿಡುತ್ತಾ ಅರ್ತನಾದದ ಧ್ವನಿ ಹೊರಡಿಸುತ್ತಿತ್ತು. ಕಾಲಲ್ಲಿ ಯಾವುದು ಬೆಳ್ಳಿ ಸಿಕ್ಕಿ (ನಾಗರ ಹಾವು) ಒದ್ದಾಡಿ,ಕಾಲ ಸುತ್ತಿದಂತೆ ಭಾಸವಾಗಿ ಸಾವಿತ್ರಕ್ಕ ಸರಕ್ಕಂತ ಕಾಲನ್ನು ಮೇಲಕ್ಕೆತ್ತುಕೊಂಡು ಹಾರಿ ತಪ್ಪಿಸಿಕೊಂಡು, ಗಂಡ, ಮಗನ ನೆನಪಲ್ಲಿ ಮೈಮರೆತು, ಕಾಡಿನ ಸಮೀಪದ ಕಬ್ಬಿಣದ ಮುಳ್ಳುಬೇಲಿ ತಂತಿಯನ್ನು ದಾಟಬೇಕಾದರೆ ಕೈಕಾಲುಗಳಿಗೆ ಅದು ತಿವಿದು, ದಾರೀಲಿ ಬರಬೇಕಾದರೆ ಯಾವುದೋ ಯೋಚನೆಯಲ್ಲಿ, ಎಂದೂ ತುಳಿಯದ ಬಿದಿರ ಮುಳ್ಳು ತುಳಿದು ರಕ್ತ ಹರಿದಿತ್ತು.
ಕಬ್ಬಿಣದ ಮುಳ್ಳು ಬೇಲಿ ದಾಟಿ ಕಾಡೊಳಗೆ ಬಂದವಳೇ, ಒಣ ಮರಾನ ಹುಡುಕುತ್ತಾ ಹೋದ್ಲು,. ಕಾಡಿನ ನೀರವ ಮೌನ ಸ್ಮಶಾನ ಸದೃಶದಂತಾಗಿ, ಸ್ವಲ್ಪ ಹೊತ್ತು ಮರದ ಬುಡದ ಬಳಿ ಕೂತು ಎಲೆಯಡಿಕೆ ತಂಬಾಕು ಹಾಕುತ್ತಾ, ಸಮಾಧಾನಿಸಿಕೊಂಡು ಕತ್ತಿಹಿಡಿದು ಒಣ ಮರ ಕಡಿಯಲು ಶುರುಮಾಡಿದರೆ ಶಬ್ದ ಬಂದ ಕೂಡಲೇ ತಕ್ಷಣ ಕಾಡಿನ ಗಿಡ-ಮರಗಳಿಂದ ಪಶುಪಕ್ಷಿಗಳು, ವಿಚಿತ್ರವಾಗಿ ಕೂಗುತ್ತಾ ವರ್ತಿಸಿದಾಗ ಸಾವಿತ್ರ ಆ ಬೆವರ್ಸಿ ಹುಲಿ ಬಂದಿದ್ದು ಖಾತ್ರಿಯಾಗಿ ಕತ್ತಿಹಿಡಿದು ಮೇಲಕ್ಕೆತ್ತಿ ಧೈರ್ಯ ಮಾಡಿ ನಿಂತ್ಲು.
ಆಕೆಯ ನಿರೀಕ್ಷೆಯಂತೆ ಹೆಬ್ಬುಲಿಯೊಂದು ನಿಧಾನವಾಗಿ ನಿಘೋ೯ಷ ಧ್ವನಿಯೊಂದಿಗೆ ಘರ್ಜಿಸುತ್ತಾ ಅವಳ ಎದುರು ಸಿಟ್ಟಿನಿಂದ ಕ್ರೂರವಾಗಿ ಬಂದು ನಿಂತಿತು.
ಅದೆಷ್ಟೋ ಸಾರಿ ಆಕಿಗೆ ಕಂಡಿದ್ದ ಅದು, ಅವಳು ಕತ್ತಿಹಿಡಿದು ಕೈಯೆತ್ತಿದೊಡನೆ ಓಡುತ್ತಿತ್ತು. ತುಂಬಾ ದಿನಗಳ ಕಾಲ ಹಸಿದಿದ್ದಕ್ಕೋ ಏನೋ, ಈ ಸಲ ಸಾವಿತ್ರಮ್ಮನ ಹತ್ತಿರ ಹೆದರದ ಹೆಜ್ಜೆ ಇಡುತ್ತಾ ಇನ್ನೇನು ಅವಳ ಮೈಮೇಲೆ ಜಿಗಿಯುವಷ್ಟರಲ್ಲಿ, ಹಿಂದೆಯಿಂದ ಎಗರಿ ಬಂದಂತಹ ಮತ್ತೊಂದು ಹುಲಿ ಅವಳ ಕುತ್ತಿಗೆಯನ್ನು ಹಿಡಿದು ಸ್ವಲ್ಪವೂ ಕನಿಕರ ವಿಲ್ಲದಂತೆ, ದರದರಾಂತ ಕಾಡೊಳಗೆ ಎಳೆದುಕೊಂಡು ಹೋಯಿತು. ಜೊತೆಗಿದ್ದ ಮತ್ತೊಂದು ಹುಲಿ ಅವಳ ಕಾಲುಗಳನ್ನು ಹಿಡಿದು ಎಳೆದಾಡುತ್ತಿತ್ತು.
ಯಾರು ಇಲ್ಲದ ಕಾಡಲ್ಲಿ ಒಮ್ಮೆ ಜೋರಾಗಿ ” ಈಸ್ವರ”……ಈಸ್ವರ….. ಅಂತ ಕೂಗಿದ್ದು ಬಿಟ್ಟರೆ ಬೇರೆ ಮಾತು ಕೇಳಿ ಬರಲಿಲ್ಲಂತ ಆ ದಿನ ರಾತ್ರಿ ಅಡಿಕೆ ತೋಟದ ಮಂಗಗಳನ್ನು ಓಡಿಸೋಕಂತ ಹೋಗಿದ್ದ ಭಟ್ರು ಊರಾಗೆ ಬಂದು ಹೇಳಿದಾಗ, ಅಂಜಲಕ್ಕ, ಕಮಲಕ್ಕ, ಗೀತಕ್ಕ,ಶಾಂತಕ್ಕ, ಲಕ್ಷ್ಮಕ್ಕ ಇದೇ ಬಡಿದುಕೊಳ್ಳುತ್ತ…..ಅಯ್ಯೋ…. ಸಾವಿತ್ರಕ್ಕ…… ಅಯ್ಯೋಂತ.. ಕಾಡಿನ ದಾರಿ ಹಿಡಿದು ಎದ್ದುಬಿದ್ದು ಓಡೋಡಿ ಕಾಡು ಸೇರುವುದರೊಳಗಾಗಿ ಹುಲಿಕಲ್ಲುಬೆಟ್ಟದ ಮೇಲೆ ಗಂಡಸರೆಲ್ಲಾ ಸೇರಿದ್ರು. ಅದಾಗಲೇ ವಿಷಯ ಊರೆಲ್ಲ ಅಲೆದಾಡಿ ಎಲ್ಲರನ್ನೂ ಕಾಡಿಗೆ ಬರುವಂತೆ ಮಾಡಿತ್ತು. ಹುಲಿಗಳೆರಡು ಸಾವಿತ್ರಮ್ಮನ ಮೇಲೆ ರಾಕ್ಷಸರಂತೆ ಎಗರಾಡಿ, ದೇಹವನ್ನು ಚಿದ್ರಚಿದ್ರವಾಗಿಸಿದ್ದ ಕಳೇಬರದಂತಿದ್ದ ದೇಹವನ್ನು ಊರಜನ ಅವಳ ಗುಡಿಸಲ ಬಳಿ ತಂದು, ಕಟ್ಟೆಯಲ್ಲಿರಿಸಿ, ಮೃತದೇಹಕ್ಕೆ ಮಾಡಬೇಕಾದ ಸತ್ಕಾರ,ಸಂಸ್ಕಾರವನ್ನು ಮಾಡುತ್ತಾ ಅವಳ ಮಗನ ಬರವಿಕೆಗಾಗಿ ಕಾದಿದ್ದರು.
ಮನೆ ಬಿಟ್ಟು ಹೋಗಿದ್ದ ಮಗ ಈಶ್ವರನಿಗೆ ಯಾಕೋ ಮನಸ್ಸು ಸರಿಯಿಲ್ಲದೆ, ಸರಿಯಾದ ಕೆಲಸ ಸಿಗದೆ ಸಮಯಕ್ಕೆ ಸರಿಯಾದ ಕೂಳಿಲ್ಲದೆ, ಹೊಟ್ಟೆ ಹಸಿವಿನಿಂದ ಅಮ್ಮನ ನೆನಪಾಗಿ, ಅವನಿಗೆ ಎಲ್ಲವನ್ನೂ ಕೇಳುವುದಕ್ಕೆ ಮುಂಚೆಯೇ ಕೊಡುತ್ತಿದ್ದ ತಾಯಿಯ ಪ್ರೀತಿಯ ನೆನಪಾಗಿ, ತಪ್ಪಿನ ಅರಿವಾಗಿ, ಸಂಜೆಗತ್ತಲಲ್ಲಿ ಅಮ್ಮನ ನೋಡಲು ಊರಿಗೆ ಓಡೋಡಿ ಬಂದು, ಸಮೀಪಿಸಿದಾಗ ಊರ ಜನರೆಲ್ಲ ಗುಡಿಸಲಿನ ಬಳಿ ಸೇರಿ ಹೊಗೆಯಾಕಿಸಿ, ಕಟ್ಟೆಯ ಮೇಲೆ ಊರ ಹೆಂಗಸರೆಲ್ಲ ಅಳುತ್ತಿದ್ದುದನ್ನು ಕಂಡು, ತನ್ನ ಚೀಲವನ್ನು ದೂರ ಎಸೆದು, ಜನರನ್ನು ದೂರದ ದಬ್ಬುತ್ತ, ಏನಾತು ಅಮ್ಮನಿಗೆ……!!!!!!!???? ಏನಾತು ಹೇಳ್ರಿ……..!!!!! ಅಂತ ಕಣ್ಣಲ್ಲಿ ನೀರು ತುಂಬಿಕೊಂಡು ಅಮ್ಮನ ಕಟ್ಟೆಯ ಬಳಿ ಬಂದವನು ಒಂದು ಕ್ಷಣ ಮೃತದೇಹ ನೋಡಿ, ತಲೆ ತಿರುಗಿ ಬಿದ್ದಂತಾಗಿ, ಎದ್ದು ಗುಡಿಸಲ ಒಳಗೆ ಹೋಗಿ ಎದೆಗುಂದಿ, ಆಕಾಶವೇ ತಲೆಮೇಲೆ ಬಿದ್ದಂತೆ, ತನ್ನ ದೇಹ ಭಾರಕ್ಕಿಂತ ಮನಸ್ಸಿನ ಭಾರ ಹೆಚ್ಚಾಗಿ, ಕುಸಿದು ಮೂಲೆಯಲ್ಲಿ ಕೂತು, ಎದ್ದು ಓಡಿಬಂದು ಅಮ್ಮನ ಕಾಲ ಹಿಡಿದು, ಅಮ್ಮಾ…….. ಅಮ್ಮಾ…..ನನ್ನಮ್ಮಾ… ಅಯ್ಯೋ…. ಅಮ್ಮಾ… ಅಂತ ಕರುಳು ಕಿತ್ತು ಬರೋಹಾಗೆ ಜೋರಾಗಿ ಅಳತೊಡಗಿದ. ನಾನು ನಿನ್ನ ಜೊತೆಗೆ ಇದ್ದಿದ್ದರೆ ಹೀಗೆಲ್ಲ ಆಗ್ತಿರಲಿಲ್ಲ. ಅಯ್ಯೋ…. ಅಮ್ಮಾ…… ಅಮ್ಮಾ…. ನನ್ನ ಕ್ಷಮಿಸಿ ಬಿಡಮ್ಮಾಂತ ಬಿಕ್ಕಳಿಸಿ ಅಳುತ್ತಿದ್ದ ಮಗನನ್ನು ನೋಡಿ ಕಮಲಕ್ಕ ನಿನ್ನ ಮದುವೆ ಬಗ್ಗೆ ಮಾತಾಡ್ತಾ ಸಾಯೋದರೊಳಗೆ ನನ್ನ ಮಗನ ಮದುವೆ ನೋಡಬೇಕಂತ ಹೇಳ್ತಿದ್ಲು. ಅಷ್ಟರೊಳಗೆ ಹೀಗೆಲ್ಲಾ ಆಗಿಬಿಡ್ತು.
ಅಲ್ಲಿದ್ದ ಮುದುಕಿಯೊಬ್ಬಳು ಸಾಯೋಕು ಮುಂಚೆ ನಿನ್ನ ಹೆಸರನ್ನೇ ಕಾಡಲ್ಲ ಕೇಳಿಸೋತರ ಕೂಗಾಡಿದ್ದಾಳೆ ಕಣೋ… ನಿನ್ನಮ್ಮ….. ಬೆವರ್ಸಿ ರಾಕ್ಷಸ ಹುಲಿ ಎಲ್ಲಿಂದ ಬಂತೋ…… ದೇವರೇ ಸಾವಿತ್ರೀ….. ನಿನಗೇ ಇಂತಿ ಸಾವು ಬರಬೇಕಾಗಿತ್ತ……?????
ರುಂಡವಿಲ್ಲದ ಬರಿಯ ಮುಂಡವಿದ್ದ ಮೃತದೇಹವ ಈಶ್ವರ ಕಂಡೊಡನೆ, ಅಯ್ಯೋ…..!!! ಅಮ್ಮನ ಮುಖ….. ಅಮ್ಮನ ಮುಖ…… ನಾನು ನೋಡ್ಬೇಕಂತ ಎದೆ ಬಡ್ಕೊಂಡು ಕಾಡಿನಲ್ಲಿ ಹುಲಿ ಅಮ್ಮನನ್ನು ಕೊಂದ ಜಾಗಕ್ಕೆ ಆ ಕತ್ತಲ ರಾತ್ರಿಯಲ್ಲಿ, ಎದ್ದು ಬಿದ್ದು, ಅಮ್ಮಾ….. ಅಮ್ಮಾ…… ನನ್ನಮ್ಮಾ….. ಅಯ್ಯೋ….. ನನ್ನ ಬಿಟ್ಟು ಹೋದೆಯಾಂತ…. ಸಣ್ಣ ಮಗುವಿನಂತೆ ಅಳುತ್ತಾ ಓಡುತ್ತಿದ್ದರೆ, ನಿಲ್ಲು ಈಸ್ವರ ಹೋಗಬೇಡಪ್ಪ ನಿಲ್ಲಂತ ಇಡೀ ಊರಿಗೆ ಊರೇ ಅವನನ್ನು ಹಿಂಬಾಲಿಸುತ್ತಾ ಕಾಡಿನ ಕಡೆ ಓಡುತ್ತಿದ್ದರು.
-ಸುರೇಶ್ ಮಲ್ಲಿಗೆ ಮನೆ