ಅದು ಎರಡಂಕಣದ ಗುಡಿಸಲು.
ಅಲ್ಲಲಿ ಸುಣ್ಣದ ಚಕ್ಕೆಎಡೆದು ಕೆಂಪಗೆ ಗಾಯಗೊಂಡಂತೆ ಕಾಣುತ್ತಿದೆ.
ಛಾವಣಿಯ ಗರಿಗಳು ಮಳೆ-ಬಿಸಿಲಿನ ಹೊಡೆತಕ್ಕೆ ಜೀರ್ಣವಾಗಿ ಬೂದಿ ಬಣ್ಣಕ್ಕೆ ತಿರುಗಿದೆ.
ಒಂದು ಕೆಂಚಬೆಕ್ಕು ಛಂಗನೆ ಛಾವಣಿ ಮೇಲೆ ನೆಗೆಯಿತು. ಅದು ನೆಗೆದು ಕೂತ ರಭಸಕ್ಕೆ ಛಾವಣಿ ಮೇಲೆ ಜಲಿಜಿಲಿಜಲಿಜಲಿ ಅಂತಾ ಸದ್ದಾಯಿತು.
''ತತ್ತದ ಇಲ್ಲಿ ಇಟ್ಟನ್ದೊಣ್ಯಾ, ಮನಗಸ್ಬುಡ್ತಿನಿ ಒಂದೇ ಏಟ್ಗಾ.. ಇಲ್ಲ್ಯಾರ್ ಆಟ್ ಇದ್ದದು ಅಂತ್ಯಾಕಣಿ ಗಳ್ಗಸೊತು ಬಂದದು''
ಎಂದು ಬೈಯುತ್ತಾ ಕಾಳಮ್ಮ ಗುಡಿಸಿಲಿನಿಂದ ಆಚೆ ಬಂದಳು.
ಅವಳ ಸದ್ದು ಕೇಳುತ್ತಲೇ ಬೆಕ್ಕು ಛಂಗನೆ ಹಾರಿ ಗುಡಿಸಲಿನ ಹಿಂದಿರುವ ಓಣಿಯೊಳಗೆ ಮಾಯವಾಯಿತು.
ಕೆಂಚಬೆಕ್ಕು ಪ್ರತಿದಿನವೂ ಗುಡಿಸಲೊಳಗೆ ಅಡ್ಡಾಡಿ ಹೋಗುತ್ತಿತ್ತು.
ಅದು ಬರುತ್ತಿದ್ದರಿಂದ ಫಾಯಿದೆಯೂ ಇತ್ತು.
ಬಟ್ಟೆಗಳನ್ನು ಬಗೆಬಗೆಯಾಗಿ ಕಡಿದು ಹಾಕುತ್ತಿದ್ದಂತಹ , ರಾತ್ರಿಯೆಲ್ಲಾ ಮೈಮೇಲೆ ಹರಿದು ನಿದ್ರಾಭಂಗ ಮಾಡುತ್ತಿದ್ದಂತಹ ಇಲಿಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು.
ಆದ್ರೆ ಮುಂಜಾವಿನಿಂದ ಮನಸ್ಸಿನಲ್ಲಿ ಹೆಪ್ಪುಗಟ್ಟುತ್ತಿರುವ ತಳಮಳ ಕಾಳಮ್ಮನನ್ನು ಸಿಟ್ಟಿಗೇಳುವಂತೆ ಮಾಡಿದೆ.
ಆ ತಳಮಳಕ್ಕೆ ಕಾರಣ ತನ್ನ ಒಬ್ಬಳೇ ಮಗಳು ಸಾವಿತ್ರಿ, ತುಂಬಿದ ಬಸುರಿ.
ಇದ್ಯಾವುವರ ಪರಿವೆ ಇಲ್ಲದೇ ಕಾಳಮ್ಮನ ಗಂಡ ಕಟ್ಟುಗಾಜಿನೊಳಗೆ ಕೂತು ನಗುತ್ತಿದ್ದಾನೆ.
ಗಟ್ಟಿಮುಟ್ಟಾಗಿಯೇ ಇದ್ದ ಪಾರ್ಟಿ- ಅದೇನು ಮಾಯಶಾಪವೋ ಏನೋ-ವರ್ಷದ ಹಿಂದೆ ಮಗಳ ಕೈಗೆ ಧಾರೆನೀರು ಬಿಟ್ಟ ವಾರದಲ್ಲೇ ಕಣ್ಣುಮುಚ್ಚಿದ.
ಇನ್ನೊಬ್ಬರಾಗಿದ್ದಿದ್ದರೆ ಕಣ್ಣುಕಟ್ಟಿ ಕಾಡಿಗೆ ಬಿಟ್ಟಂತಾಗಿ ಕುಸಿದು ಕೂತುಬಿಡುತ್ತಿದ್ದರು.
ಆದ್ರೆ ಕಾಳಮ್ಮಯಾರ ಹಂಗಿಗೂ ಬೀಳದೇ , ಕಳಕೊಟ್ಟು ಕುಡುಗೋಲುಗಳಿಗೆ ಒಂದು ದಿನವೂ ಬಿಡುವು ಕೊಡದೇ ದುಡಿದು ಬದುಕುತ್ತಿದ್ದಾಳೆ.
ಸಾವಿತ್ರಿ ಎದುರುಮನೆಯ ಅಜ್ಜಿಯೊಂದಿಗೆ ಹೊರಗಡೆ ಜಗುಲಿಯ ಮೇಲೆ ಅಲಗುಳಿಮನೆ ಆಡುತ್ತಾ ಕುಳಿತಿದ್ದಳು.
ಪಕ್ಕದ ಮನೆಯ ಪುಟ್ಟ ಹುಡುಗಿಯೊಂದು ಓಡಿ ಬಂದು,
''ಅಕ್ಕ ಅಕ್ಕ ಇಸ್ಕೂಲ್ಗ ಹೊತ್ತಾಯ್ತು ತಲ ಬಾಚ್ಗೊಡಕ್ಕ '' ಅಂದಿಂತು.
ಜಡೆ ಎಣೆಯುವುದರಲ್ಲಿ ತನ್ಮಯಳಾಗಿದ್ದ
ಸಾವಿತ್ರಿಯನ್ನು ಅಜ್ಜಿ ಎವೆಯರಳಿಸಿ ನೋಡತೊಡಗಿದಳು.
ಅಜ್ಜಿಯ ಕಣ್ಣು ತನ್ನ ಮೇಲೆ ನೆಟ್ಟಿರುವುದನ್ನು ಗಮನಿಸಿದ ಸಾವಿತ್ರಿ,
''ಇದ್ಯಾಕಮ್ಮ ಹಾಗ್ ನೋಡ್ದೈ''
ಅಂದಳು.
''ಪಾರೊತಿದೇವಿ ಕಣಗ ಕಾಣ್ತಿದೈ ಕನಮ್ಮವ್ವ.. ಈ ಮುದ್ಕಿ ಕಣ್ಣೇ ಅರ್ದ್ಯ ತಾಗುತ್ತ ನಿನ್ಗ !''
ಎಂದು ನೆಟಿಕೆ ತೆಗೆದಳು.
ಎದುರಿನಿಂದ ಗೆಳತಿ ಕವಿತಾ ಬರುತ್ತಿದ್ದಳು.
ಸಾವಿತ್ರಿಯನ್ನು ನೋಡಿ ಮುಗುಳುನಗೆ ಬೀರಿ, ಬರುವಾಗ ಸಿಗುತ್ತೇನೆ ಎಂಬಂತೆ ಕೈಸನ್ನೆ ಮಾಡಿ ಬಸ್ಟಾಂಡಿನತ್ತ ಬಿರುಸಿನಿಂದ ಹೆಜ್ಜೆ ಹಾಕಿದಳು.
ಸಾವಿತ್ರಿ ಪ್ರತಿಯಾಗಿ ಮುಗಳುನಗುತ್ತಾ ಕೈಬೀಸಿದಳು.
''ಶಿವಮ್ಮನ ಮಗಳು ನರ್ಸಿ ಕೆಲಸ್ಕ ಓದಿಳಂತಲ್ಲವ್ವ''
ಅಂದಳು ಅಜ್ಜಿ .
ಅದಕ್ಕೆ ಸಾವಿತ್ರಿ , ''ಓದ್ಲಿತಕಮ್ಮ ನನ್ ಫ್ರೆಂಡು ತಾನೇ''
ಅಂದಳು.
ಒಂದು ಕ್ಷಣ ಸುಮ್ಮನಿದ್ದು ,
''ನನ್ ಕೂಸ್ನ ಡಾಕ್ಟರ್ಗೇ ಓದುಸ್ತಿನಿ ನೋಡ್ತಾಯಿರು''
ಎಂದು ನಕ್ಕಳು.
ಅದಕ್ಕೆ ಅಜ್ಜಿ , '' ಅಲ್ಲೀಗಂಟ ನಾ ಇದ್ದನ ಕಂದಾ '' ಅಂದಳು.
ಸಾವಿತ್ತಿ,''ಇರ್ತಿದ್ದೈ.. ಇರ್ಲೇಬೇಕು'' ಎಂದು ಜೋರಾಗಿ ನಕ್ಕಳು.
ಅಜ್ಜಿಯೂ ನಗತೊಡಗಿದಳು.
*****
ಸಾವಿತ್ರಿಯ ಓದು ಬಡತನದೊಂದಿಗೆ ಫೈಟು ಮಾಡಲಾಗದೇ ಹೈರಾಣಾಗಿ , ಸುಸ್ತಾಗಿ ಕೊನೆಗೆ ಎಸ್ಸೆಲ್ಸಿಗೇ ಅಸುನೀಗಿತ್ತು .
ಒಂದು ವರ್ಷದ ನಂತರ ಮದುವೆಯೂ ಆಗಿ ಹೋಯ್ತು .
ಸಾವಿತ್ರಿಯ ಗಂಡನ ಮನೆ ತವರಿಗಿಂತೇನೂ ಭಿನ್ನವಾಗಿರಲಿಲ್ಲ. ನಾಲ್ಕು ಜನ ಸೋದರರ ಪೈಕಿ
ಕಿರಿಯವನಾಗಿದ್ದ ಸಾವಿತ್ರಿ ಗಂಡನ ಪಾಲಿಗೆ ಮೂವತ್ತು ಗುಂಟೆ ಜಮೀನು ಬಂದಿತ್ತು ಅಷ್ಟೇ .
'ತೇರೆ ಪಾಸ್ ಕ್ಯಾ ಹೈ ?'
ಎಂದರೆ
'ಮೇರೆ ಪಾಸ್ ಮಾ ಹೈ'
ಎನ್ನುವ ಹಾಗೆ ಮೂರು ಜನ ಅಣ್ಣಂದಿರೂ ಸೇರಿ ' ಮಾ'ಳನ್ನೂ ಕಿರಿಯ ತಮ್ಮನ 'ಪಾಸ್ ' ಬಿಟ್ಟು ಕೈತೊಳೆದುಕೊಂಡಿದ್ದರು !
ಈ ಉದಾರ ಕೃತ್ಯದಲ್ಲಿ ಅವರ ಹೆಂಡಂದಿರ ಕಾಣಿಕೆಯೇ ಹೆಚ್ಚಿತ್ತು.
ಹಾಗಾಗಿ ಇಳಿವಯಸ್ಸಿನ ಅತ್ತೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಸಾವಿತ್ರಿಯ ಮೇಲೆ ಬಂತು.
ಬಡತನದಲ್ಲಿ ಮಿಂದು ಎದ್ದವಳಾದ್ದರಿಂದಲೋ ಏನೋ, ಯಾವುದೇ ಬಿಮ್ಮು ಬಿನ್ನಾಣ ತೋರದೇ ಅಜ್ಜಿ ವಯ್ಸಿನ ಅತ್ಯಮ್ಮಳನ್ನು ಬಯಲಿಗೆ ಕರೆದೊಯ್ಯುವುದು, ನೀರು ಮೀಯ್ಸುವುದು, ಆಕೆಯ ಸೀರೆ ಒಗೆದು ಮಡಿ ಮಾಡುವುದು -ಎಲ್ಲವನ್ನೂ ಮನಃಪೂರ್ವಕವಾಗಿ ತಪಸ್ಸಿನಂತೆ ಮಾಡಿದ್ದಾಳೆ.
ಸಾವಿತ್ರಿ ಮದುವೆಯಾದ ಹೊಸದರಲ್ಲಿ ಯಾವುದೇ ಕುಂದುಕೊರತೆಯಿಲ್ಲದೇ ಮನೆಕೆಲಸ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು .
ಆದ್ರೆಗೆ ತಿಂಗಳ ನಂತರ ಪರಿಸ್ಥಿತಿ ಬೇರೆಯದೇ ಸ್ವರೂಪ ಪಡೆದು ಬಡತನದ ಕಾವು ತಟ್ಟತೊಡಗಿತು.
ಹಾಗಂತ ಗಂಡನೇನು ಕುಡಿತವೋ , ಜೂಜೋ ಇನ್ಯಾವುದನ್ನೋ ಮೈಗಂಟಿಸಿಕೊಂಡಿರಲಿಲ್ಲ. ಅವನೂ ತನ್ನ ಶಕ್ತ್ಯಾನುಸಾರ ಗೇಯ್ದು ತಂದು ಹಾಕುತ್ತಿದ್ದ.
ಆದರೂ ಅದು ಯಾತಕ್ಕೂ ಸಾಲುತ್ತಿರಲಿಲ್ಲ.
ಮಳೆ ಕೈಕೊಟ್ಟಿದ್ದರಿಂದ ಸೂರ್ಯಕಾಂತಿ ತಟ್ಟೆಗಳು ಕಮರಿ ಹೋಗಿ ರೂಪಾಯಿ ಅಗಲಕ್ಕೆ ತಿರುಗಿದ್ದವು.ಬಡಿದು ಉದುರಿಸಿ ಒಪ್ಪಾಯಿಸಿದರೆ ಐದಾರು ಕೊಳಗಗಳಾದರೆ ಹೆಚ್ಚು ಎಂಬಂತಿತ್ತು. ಏನನ್ನು ನಂಬಿ ಸಾಲ ಮಾಡುವುದು ?
ಯಾತರಲ್ಲಿ ತೀರಿಸುವುದು?
ಹೀಗಾಗಿ ಸಾವಿತ್ರಿ ಒಂದು ದಿನ ಮನಸ್ಸು ಗಟ್ಟಿ ಮಾಡಿ ತಾನೂ ಕೂಲಿಗೆ ಹೋಗುವುದಾಗಿ ನಿರ್ಧರಿಸಿದಳು.
ಗಂಡನಿಗೂ ತಿಳಿಸಿದಳು; ಪಾಪ ಅವನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ.
ತವರಿನಲ್ಲಿ ಒಂದು ದಿನವೂ ಕಳಕೊಟ್ಟು ಕುಡುಕೋಲು ಮುಟ್ಟದಿದ್ದ ಸಾವಿತ್ರಿ ಹೀಗೆ ಅನಿವಾರ್ಯವಾಗಿ ಕೂಲಿಗೆ ಹೋಗಬೇಕಾಗಿಬಂತು.
ಪರವೂರಿನಲ್ಲಿ – ಬಂದ ಮೇಲೆ ಅದು ತನ್ನೂರೇ ಆದರೂ – ಕೂಲಿಗೆ ಒಗ್ಗಿಕೊಳ್ಳುವ ಮುಂಚಿನ ದಿನಗಳಲ್ಲಿ ಆಗುವ ನೋವು ಅದನ್ನು ಅನುಭವಿಸಿದ ಹೆಣ್ಣುಗಳಿಗಷ್ಟೇ ಗೊತ್ತು .
ಎಲ್ಲವನ್ನೂ ನುಂಗಿಕೊಂಡು ಸಾವಿತ್ರಿ ಕೂಲಿಕೆಲಸಕ್ಕೆ ಒಗ್ಗಿಕೊಂಡಳು.ಎಷ್ಟಾದರೂ ಗಟ್ಟಿಗಿತ್ತಿ ಕಾಳಮ್ಮನ ಮಗಳಲ್ಲವೇ.
ಹೀಗೆ ಸಾವಿತ್ರಿಗೆ ಐದು ತಿಂಗಳು ತುಂಬಿ ಹೂಮುಡಿಸಿಕೊಂಡು ತವರಿಗೆ ಹೊರಡುವಾಗ ಒಂದು ಸಮಸ್ಯೆ ಎದುರಾಯಿತು.
ಸಮಸ್ಯೆ ಏನಪ್ಪಾ ಅಂದ್ರೆ , ಅಜ್ಜಿಯನ್ನು ಯಾರ ಸುಪರ್ದಿಗೆ ವಹಿಸುವುದು ಎಂಬುದು .
ಕೊನೆಗೆ ಮೂರೂ ಅಣ್ಣಂದಿರೂ ಸೇರಿ -ಸಾವಿತ್ರಿಗೆ ವರ್ಷದ ಗಡುವು ಕೊಟ್ಟು- ಯಾರಿಗೂ ಹೊರೆಯಾಗದಂತೆ 20-20 ಸರ್ಕಾರದಂತೆ ತಲಾ ನಾಲ್ಕು ತಿಂಗಳು 'ಮಾ'ಳನ್ನು 'ಪಾಸ್' ನಲ್ಲಿ ಇಟ್ಟುಕೊಳ್ಳುವ ತೀರ್ಮಾನಕ್ಕೆ ಬಂದರು. ಇದರಲ್ಲಿಯೂ ಅವರ ಹೆಂಡಂದಿರ ಬ್ರೇನು ಕೆಲಸ ಮಾಡಿತ್ತು .
ಇನ್ನು ಸಾವಿತ್ರಿಯ ಗಂಡನ ಕತೆ?
ಅವನು ಯಾವಾಗಾದರೂ ಒಮ್ಮೆ ಅಣ್ಣಂದಿರ ಮನೆಯಲ್ಲಿ ತಿನ್ನುತ್ತಿದ್ದ..ಹೆಚ್ಚಿನಂತೆ ಊರಿನ ಕ್ಯಾಂಟೀನೊಂದರಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ, ತೀರಾ ಅನಿವಾರ್ಯತೆ ಎದುರಾದಾಗ ತಾನೇ ಅರೆಬರೆ ಬೇಯಿಸಿಕೊಂಡು ಹೇಗೋ ಕಾಲ ಕಳೆಯುತ್ತಿದ್ದ..
*****
ಬೆಳಗಿನಿಂದ ಸಾವಿತ್ರಿಯ ವಾತಾವರಣ ನೋಡಿದರೆ ಎಷ್ಟೊತ್ತಿಗಾದರೂ ಹೆರಿಗೆನೋವು ಕಾಣಿಸಿಕೊಳ್ಳುವ ಸಂಭವವಿತ್ತು.
ಹಾಗಾಗಿ ಕಾಳಮ್ಮನಿಗೆ ಅಂದು ಅನಿವಾರ್ಯ ರಜೆ..ಕಳಕೊಟ್ಟು ಕುಡುಗೋಲುಗಳಿಗೆ ಅಪರೂಪದ ಬಿಡುವು.
ಬಡತನವನ್ನು ಹಾಸಿಹೊದ್ದವರಿಗೆ ಈ ರಜೆಯೆಂಬುದು ಒಂದು ಬಗೆಯ ಸಜೆ.
ಮನೆಯಲ್ಲಿ ಖರ್ಚಿಗೆ ಒಂದು ರೂಪಾಯಿಯಲ್ಲ. ಸಾವಿತ್ರಿಗೆ ಹೆರಿಗೆಯಾದ ಮೇಲೆ ಖರ್ಚಿಗೇನು ಗತಿ?
ಕಾಳಮ್ಮ ಇದೇ ಚಿಂತೆಯಲ್ಲಿ ತನ್ನ ಸಂಬಂಧಿ ನಾಗಮ್ಮನ ಮನೆ ಬಾಗಿಲಿಗೆ ಹೋಗಿ ಆಕೆಯ ಗಂಡ ಇಲ್ಲವೆಂಬುದನ್ನು ಖಾತ್ರಿಪಡಿಸಿಕೊಂಡು ನಡುಮನೆ ಹೊಕ್ಕಳು .
''ಇವತ್ತು ಕೂಲಿಗ್ವಾಗ್ನಿಲ್ಲ ಕನಿಅಕ್ಕಯ್ಯ, ನಿನ್ ಪಾಡ್ಗ ಹೋಗವ್ವ ,ವಟ್ಟನಂವು ಕಾಣಸ್ಕಂಡೊತ್ಗ ಯ್ಯೋಳ್ ಕಳಿಸ್ತಿನಿ ಅಂತಳ.. ಹಾಗಂದ್ಬುಟ್ಟು ನಾ ಯಾವ್ ದೈರ್ಯದ ಮ್ಯಾಲ್ ವಾಗ್ಲಿ ಅಕ್ಕಯ್ಯ''
ಎಂದು ಕಣ್ಣೀರುಕಚ್ಚಿಕೊಂಡಳು.
'' ಸರಿ ಕಣ್ ಸುಮ್ನಿರು ಕಾಳವ್ವ ..ನಿನ್ ಮಗಳ ಮಾತ್ ಕಟ್ಗಬೇಡ..ನೀನು ಪಕ್ಕದಲ್ಲಿದ್ರ ಅವಳ್ಗೂ ಸಟ್ಗ ದೈರ್ಯ ಬತ್ತದ.. ನೀನು ಅಟ್ಟಿಲಿರು ಮನ ಖರ್ಚ್ಗ ನಾ ಕೊಡ್ತಿನಿ''
ಎಂದು ಟ್ರಂಕಿನಿಂದ ಐನೂರರ ನೋಟೊಂದನ್ನು ತಂದು ಕೊಟ್ಟಳು..
''ನಾ ಉಳಿಸ್ಕಮಲ್ಲ , ಬ್ಯಾಗ್ನ್ ವಾಪಸ್ ಕೊಟ್ಬುಡ್ತಿನಿ ಕನಿಅಕ್ಕಯ್ಯ''
ಎಂದು ಜಿನುಗುತ್ತಿದ್ದ ಕಣ್ಣುಗಳನ್ನು ಸೀರೆ ಸೆರಗಿನಿಂದ ಒರಸಿಕೊಂಡು ಅಲ್ಲಿಂದ ತನ್ನ ಗುಡಿಸಲಿನತ್ತ ಹೆಜ್ಜೆ ಹಾಕಿದಳು ..
ಮಾರ್ಗಮಧ್ಯದಲ್ಲಿ ಬೇಲಿ ಬದಿಯಲ್ಲಿದ್ದ ಪೀಕಿ ಮರದಲ್ಲಿ ನಾಲ್ಕೈದು ಪೀಕಿ ಸೊಪ್ಪಿನ ರೆಕ್ಕೆಗಳನ್ನು ಈಜಿ ಕಂಕುಳಿಗೆ ಹಾಕಿಕೊಂಡಳು.
ಗುಡಿಸಲು ತಲುಪಿ ತನ್ನ ಕಂಕುಳಲ್ಲಿದ್ದ ನಾಲ್ಕು ಪೀಕಿರೆಕ್ಕೆಗಳಲ್ಲಿ ಎರಡು ರೆಕ್ಕೆಗಳನ್ನು ಸೂರಿಗೆ ಕಟ್ಟಿ ಉಳಿದೆರಡನ್ನು ಮೇಲೆಸೆದು ಗುಡಿಸಲು ಹೊಕ್ಕಳು.
ವತಾರೆಯಿಂದ ಮೇವಿಲ್ಲದೆ ಬರಗೆಟ್ಟು ನಿಂತಿದ್ದ ಆಡುಮರಿಯು ಸೂರಿಗೆ ಕಟ್ಟಿದ್ದ ಪೀಕಿ ರೆಕ್ಕೆಗೆ ಮುತ್ತಿಗೆ ಹಾಕಿತು.
ಇತ್ತ ಸಾವಿತ್ರಿ ಆಟವನ್ನು ಬರ್ಖಾಸ್ತು ಗೊಳಿಸಿ ಚೆನ್ನಮ್ಮನ ಮನೆಗೆ ಹೋಗಿಬಿಟ್ಟಿದ್ದಳು.
ಹೊಲಿಗೆ ಮಷೀನು ಇಟ್ಟುಕೊಂಡಿದ್ದಂತಹ ಚೆನ್ನಮ್ಮನ ಮನೆಯಲ್ಲಿ ಒಂದಷ್ಟು ಹೊತ್ತು ಕಳೆಯುವುದು ಸಾವಿತ್ರಿಯ ಮಾಮೂಲಿ ದಿನಚರಿಯಾಗಿತ್ತು.
ಚೆನ್ನಮ್ಮ ಯಾರದೋ ಸೀರೆಯ ಹರಕುಗಳನ್ನು ಒಂದೊಂದಾಗಿ ಹುಡುಕಿ ಮುಚ್ಚುತ್ತಿದ್ದರೆ, ಸಾವಿತ್ರಿ ರವಿಕೆಯೊಂದಕ್ಕೆ ಪಿನ್ನು ಹಾಕುತ್ತಿದ್ದಳು.
ಅಷ್ಟರಲ್ಲಿ ಒಬ್ಬ ಹೆಂಗಸು ಬಂದು ಸಾವಿತ್ರಿಯ ಗಂಡ ಬಂದಿರುವ ಸುದ್ದಿ ಮುಟ್ಟಿಸಿದಳು.
ಯಾರದೋ ಹಳೆಯ ಎಕ್ಸೆಲೊಂದನ್ನು ತಂದಿದ್ದ ಸಾವಿತ್ರಿಯ ಗಂಡ ಅದನ್ನು ಜಗಲಿ ಮುಂದೆ ನಿಲ್ಲಿಸಿ ಒಳಗಿ ಕೂತಿದ್ದ.
ಗಂಡನ ಬಳಿ ಕುಳಿತು ಸಾವಿತ್ರಿಯು ಕಷ್ಟಸುಖ ಮಾತಾಡುತ್ತಿದ್ದಾಗ
ಸೆರಗಿನೊಳಗೆ ಅದೇನನ್ನೋ ಅವಿಸಿಕೊಂಡು ಬಂದ ಕಾಳಮ್ಮ ಗುಡುಗುಡನೆ ಒಲೆ ಮುಂದಕ್ಕೆ ಹೋಗಿ ಸಾವಿತ್ರಿಗೆ ಸನ್ನೆ ಮಾಡಿದಳು.
ಸಾವಿತ್ರಿಯು ಒಂದು ಕೈನಲ್ಲಿ ಟೀಲೋಟ ಮತ್ತೊಂದು ಕೈನಲ್ಲಿ ಬಿಸ್ಕೇಟು ಖಾರಕಳ್ಳೇಪುರಿ ತುಂಬಿದ್ದ ತಟ್ಟೆಯನ್ನು ಹಿಡಿದು ತಂದು ಗಂಡನ ಮುಂದಿಟ್ಟು ಉಸ್ಸೆಂದು ಕುಳಿತಳು.
ಸಾವಿತ್ರಿಯು ಅತ್ಯಮ್ಮ ಹೇಗಿದ್ದಾರೆ ಎಂದು ಗಂಡನನ್ನು ವಿಚಾರಿಸಲಾಗಿ, ಅತ್ಯಮ್ಮ ಎರಡನೇ ಅಣ್ಣನ ಸುಪರ್ದಿನಲ್ಲಿ ಇದ್ದಾಳೆಂದೂ , ಆದರೆ ಸೊಲ್ಲಿಗು ಸ್ವರಕ್ಕೂ ನಿನ್ನ ಹೆಸರು ಎತ್ತಿ ಅತ್ತಿಗೆಮ್ಮನವರಿಗೆ ಇರುಸುಮುರಿಸು ಉಂಟುಮಾಡುತ್ತಿದ್ದಾಳೆಂದೂ ಇದರಿಂದ ಅತ್ತಿಗೆಮ್ಮನವರು ಉರಿದುಬೀಳುತ್ತಿದ್ದಾರೆಂದು ಹೇಳಿ ನಕ್ಕನು.
ಸಾವಿತ್ರಿಯು ನಗತೊಡಗಿದಳು.
*****
ಹೊ
ಸಾವಿತ್ರಿಗೆ ಹೆರಿಗೆನೋವು ಶುರುವಾಯಿತು.
ಎದುರುಮನೆಯ ಅಜ್ಜಿಯ ಸಮಕ್ಷಮದಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತಳು.
ಹೆರಿಗೆಯಾದ ಐದಾರು ನಿಮಿಷಗಳಲ್ಲೇ ಮೂರ್ಛೆ ಹೋದಳು. ಮುಖವೆಲ್ಲಾ ಬಿಳಿಚಿಕೊಂಡು ಬೆವರುತ್ತಿತ್ತು.
ಆಂಬುಲೆನ್ಸನ್ನು ಕರೆಸಿಕೊಂಡು ಮೈಸೂರಿನ ದೊಡ್ಡಾಸ್ಪತ್ರೆಗೆ ಕರೆದೊಯ್ಯಲಾಯ್ತು.
ಎಮರ್ಜನ್ಸಿ ವಾರ್ಡಿನಲ್ಲಿ ದಾಖಲು ಮಾಡಿಕೊಂಡು ರಕ್ತಪರೀಕ್ಷೆ ಮಾಡಿದ ವೈದ್ಯರು , ಹಿಮಗ್ಲಬಿನ್ ಎಂಬುದು ಕೇವಲ ಐದಾರು ಪಾಯಿಂಟುಗಳಷ್ಟಿದೆ ತುರ್ತಾಗಿ ರಕ್ತನೀಡಬೇಕಾಗಿದೆ ಎಂದರು.
ರಕ್ತ ಕಟ್ಟಲು ಅರೇಂಜು ಮಾಡಿಕೊಳ್ಳುತ್ತಿರುವಾಗಲೇ ಸಾವಿತ್ರಿ ಕೊನೆಯುಸಿರೆಳೆದಳು..
ಕಾಳಮ್ಮ, '' ಅನ್ನಾಯ್ಕಾತೀ s … ಎಂಥಾ ಕೆಲ್ಸ ಮಾಡ್ಬುಟ್ ಹೋದ್ಯೇ ಅನ್ನಾಯ್ಕಾತೀ.. ಈ ಪಾಪಿ ಮುಂಡ ಬಾಯ್ಗ ಮೊಣ್ಣಾಕ್ಬುಟ್ಟು ಹೊಂಟೋದ್ಯೆಲ್ಲೇ ಅನ್ನಾಯ್ಕಾತೀ … '' ಎಂದು ಮಗಳನ್ನು ತಬ್ಬಿಕೊಂಡು ರೋದಿಸತೊಡಗಿದಳು.
ಸಾವಿತ್ರಿಯ ಮಗುವು ಆ ಸದ್ದಿಗೆ ಬೆಚ್ಚಿಬಿದ್ದು ತಾನೂ ಅಳತೊಡಗಿತು..
ಚೆಂದದ ಕಥೆಯ ಅಂತ್ಯ ಮಾತ್ರ…..ದುರಂತದ್ದು ! ಮನಸ್ಸು ಬಾರವಾದಂತೆನಿಸಿತು !