ಸಾವನ್ ಕೆ ಸಿಂಧನೂರು ರವರ ಮಗರಿಬ್‌ ಗಜಲ್‌ ಸಂಕಲನ: ಶಿವಕುಮಾರ ಮೋ ಕರನಂದಿ

ಕೃತಿ: ಮಗರಿಬ್ ಗಜಲ್ ಸಂಕಲನ
ಲೇಖಕರು: ಸಾವನ್ ಕೆ ಸಿಂಧನೂರು
ಪ್ರಕಾಶನ: ಅಮ್ಮಿ ಪ್ರಕಾಶನ

ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದು. ಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ.

ಗಜಲ್ ರಾಣಿಯ ಹುಚ್ಚು ಹಿಡಿಸಿಕೊಂಡು ಅವಳದೇ ಧ್ಯಾನದಲ್ಲಿ ತಲ್ಲಿನರಾದವರ ಸಾಲಿನಲ್ಲಿ ಸಾವನ್ ಕೆ ಸಿಂಧನೂರು ಅವರು ಹೊಸ ಸೇರ್ಪಡೆಯಾಗುತ್ತಿದ್ದಾರೆ. ಸಾವನ್ ಕೆ ಸಿಂಧನೂರು ಅವರು ರಸಾಯನಶಾಸ್ತ್ರದಲ್ಲಿ ಪದವಿ ಪಡೆದು ಪ್ರೌಢಶಾಲೆಯಲ್ಲಿ ಲೆಕ್ಕಾಚಾರದ ಗಣಿತ ಶಿಕ್ಷಕರಾದ ಇವರಿಗೆ ಕನ್ನಡ ಸಾಹಿತ್ಯದ ಸೆಳೆತ ತೀರ್ವವಾಗಿ ಕಾಡಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು, ಪದವಿ ಓದುತ್ತಿರುವಾಗಲೇ ಸಾಹಿತ್ಯದ ಅಭಿರುಚಿ ಹಚ್ಚಿಸಿಕೊಂಡಿದ್ದ ಇವರಿಗೆ ವೃತ್ತಿಯ ಒತ್ತಡ, ಸಾಂಸಾರಿಕ ಜೀವನ ಕಟ್ಟಿಹಾಕಿತ್ತು, ಮತ್ತೆ ಇವರಿಗೆ ಸಾಹಿತ್ಯದ ಜೀವಸೆಲೆ ಪುಟಿದೇಳುವಂತೆ ಮಾಡಿದ್ದು ವಾಟ್ಸಪ್ ಬಳಗವಾದ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗ.

ಗಜಲ್ ರಾಣಿಯ ಹುಚ್ಚು ಇವರಿಗೆ ಅಷ್ಟಿಷ್ಟು ಹಿಡಿಯಲಿಲ್ಲ ತೀರ್ವವಾಗಿ ಹುಚ್ಚು ಹಿಡಿಸಿಕೊಂಡ ಪರಿಣಾಮ ಇವರ ಚೊಚ್ಚಲ ಗಜಲ್ ಸಂಕಲನವಾದ ಮಗರೀಬ್ ಗಜಲ್ ಸಂಕಲನ. ಈ ಗಜಲ್ ಸಂಕಲನದಲ್ಲಿ ಒಟ್ಟು ೫೨ ಗಜಲ್ ಗಳಿವೆ. ಇವರೇ ಹೇಳಿಕೊಂಡಂತೆ ನನ್ನ ಪಾಲಿನ ದ್ರೋಣಾಚಾರ್ಯ ಶ್ರೀ ಅಲ್ಲಾಗಿರಿರಾಜ್ ರವರು ಎಂದು , ಅಲ್ಲಾಗಿರಿರಾಜ್ ಅವರ ಗಜಲ್ ಗಳ ಓದು, ಹಾಗೂ ಹನಿ ಹನಿ ಇಬ್ಬನಿ ಬಳಗದಿಂದ ನನ್ನಲ್ಲೂ ಗಜಲ್ ಬರೆಯುವ ಶಕ್ತಿ ಇದೆ ಎಂದು ಹುರಿದುಂಬಿಸಿದ ಪರಿಣಾಮ ಈ ಗಜಲ್ ಗಳು. ಇವರ ಗಜಲ್ ಸಂಕಲನದಲ್ಲಿ ವಾಸ್ತವದಲ್ಲಿ ನಡೆಯುವ ಘಟನೆಗಳೇ ವಸ್ತುವಿಷಯಗಳಾಗಿವೆ, ಪ್ರೀತಿ ಪ್ರೇಮದ ಕಡೆ ವಾಲಿದರೂ ವಾಸ್ತವದಲ್ಲಿ ನಡೆಯುವ ಘಟನೆಗಳಿಗೂ ಧ್ವನಿಯಾಗಿದ್ದಾರೆ. ಮಹಾತ್ಮಾ ಗಾಂಧಿಯವರು ಇವರನ್ನು ಕಾಡಿ ಗಜಲ್ ಬರೆಸಿದ್ದಾರೆಂದೆ ಹೇಳಬೇಕು, ಗಾಂಧಿಯ ಕೋಲು, ಕನ್ನಡಕ ರೂಪಕಗಳನ್ನಾಗಿ ಬಳಸಿಕೊಂಡಿದ್ದಾರೆ. ಸ್ತ್ರೀ ಸಂವೇದನೆ, ವಿರಹ, ರೈತನ ದಾರುಣ ಸ್ಥಿತಿ, ಹೆಣ್ಣಿನ ಮುಟ್ಟಿನ ಬಗ್ಗೆ, ಜಾತಿ ,ಧರ್ಮ, ಪ್ರೀತಿ, ದ್ವೇಷ ಹೀಗೆ ಪ್ರತಿಯೊಂದು ವಿಷಯ ವಸ್ತುವಿನಿಂದ ಈ ಗಜಲ್ ಸಂಕಲನ ಗಮನ ಸೆಳೆಯುತ್ತದೆ.

“ಕಾದಿರುವನು ಸಾವನ್ ನಿನ್ನ ಪ್ರೇಮ ತುಂಬಿದ ಸುರಪಾನಕ್ಕೆ
ಸುರಿದುಬಿಡು ಅಮರವಾಗಲಿ ಜೀವ ಉಳಿಸಿಬಿಡು ಮರಳಬೇಡ ಚಿನ್ನ”
ಪ್ರೇಮ ಎಲ್ಲರನ್ನೂ ಕಾಡುತ್ತದೆ ಅದರಂತೆ ಸಾವನ್ ಅವರನ್ನು ಕಾಡಿದ ಪರಿಣಾಮ ಈ ಮೇಲಿನ ಶೇರ್

“ಹಾಡುವ ಹಕ್ಕಿಗೂ ಗಂಟಲು ಕಟ್ಟಿದೆ ಕಣ್ಣೀರಿನಿಂದ ಕಟ್ಟಬೇಕಿದೆ ಜಲಾಶಯ
ಕೇಡುಗಾಲಕ್ಕೂ ಸೋಬಾನೆ ಹಾಡೆಂದರೆ ಮದ್ದು ಬೇಡಿದ್ದೇ ತಪ್ಪಾ”
ಹಾಡುವ ಹಕ್ಕಿಗೂ ನೋವಿದೆ ಎನ್ನುವ ಆಶಯ ವ್ಯಕ್ತಪಡಿಸುವ ಗಜಲ್ ಇದಾಗಿದೆ. ಗಂಟಲು ಕಟ್ಟಿದೆ ಕಣ್ಣೀರಾಗಿ ಹೊರಗೆ ಬಂದರೆ ಜಲಾಶಯವಾಗಬಹದು ಎನ್ನುವಲ್ಲಿ ನೋವು ಎಷ್ಟಿದೆ ಎನ್ನುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ

“ಇದಹದೊಳಗೆ ಪರ ಹುಡುಕುವ ಊರಿನೊಳು ಒಬ್ಬಂಟಿ ಪಯಣಿಗ ನಾನು
ಮಧು ಪಾತ್ರೆಗೆ ತುಟಿ ತಾಕದೆ ನಶೆ ಏರಿದ ವ್ಯಸನಿ ಮಧುಮಗ ನಾನು”
ಒಬ್ಬಂಟಿ ಪಯಣಿಗ ನಾನು ಪ್ರೀತಿ ಪ್ರೇಮವನ್ನೆ ಹಂಚುತ್ತಾ ಸಾಗುವವನು, ಜಾತಿ ಧರ್ಮ ಎನ್ನುತ್ತಾ ತಿರುಗುವವರ ಮಧ್ಯೆ ಪ್ರೀತಿ ಹಂಚುವೆ ಎನ್ನುತ್ತಾರೆ ಈ ಗಜಲ್ ನಲ್ಲಿ.

“ನಿದಿರೆ ಇಲ್ಲದೆ ಹೆಣೆದ ಕನಸುಗಳಿಗೆ ಪ್ರಸವ ಪೂರ್ವ ಗರ್ಭಪಾತ
ಜನ್ನತ್ ಗೂ ನಿನಗೂ ಒಂದೇ ಹೆಸರು ನರಕಕ್ಕೆ ತಳ್ಳುವ ಹುನ್ನಾರವೇ ಗೆಳತಿ”
ಬಡತನವನ್ನು ನೋಡಿ ತೊರೆದು ಹೋದ ಅವಳ ಬಗೆಗೆ ಎದೆಯಾಳದ ನೋವು ಹೊರಚೆಲ್ಲಿದ್ದಾರೆ, ಅದೇಷ್ಟು ಸುಂದರವಾದ ರೂಪಕ ಕೊಟ್ಟಿದ್ದಾರೆ ಈ ಗಜಲ್ ನಲ್ಲಿ, ನಿದಿರೆಯಿಲ್ಲದೆ ಹೆಣೆದ ಕನಸುಗಳನ್ನು ಕೊಂದುಹೋದವಳು ಎಂದು ಅವಲತ್ತುಕೊಳ್ಳುತ್ತಾರೆ.

“ಹಸಿರ ಸಿರಿಯ ಸೊಬಗು ನೋಡವ್ವ ಗೆಳತಿ
ಕರುನಾಡು ಇದು ಸ್ವರ್ಗಕ್ಕೆ ಸಮನವ್ವ ಗೆಳತಿ”
ಕನ್ನಡನಾಡಿನ ವರ್ಣನೆ, ಕನ್ನಡದ ಲಿಪಿ, ಜ್ಞಾನ, ಧ್ಯಾನ, ಕನ್ನಡ ನಾಡಲ್ಲೇ ಹುಟ್ಟಬೇಕು ಎಂಬ ಅಭಿಮಾನ ಮೂಡಿಸುವ ಗಜಲ್ ಇದಾಗಿದೆ.

“ಉಸಿರು ಬಿಡುವಾಗಲು ರಾಮನನ್ನೇ ನೆನೆದು ರಾಮರಾಜ್ಯ ಕಂಡ ಕನಸುಗಾರ
ರಘುಪತಿ ರಾಜನ ಜೊತೆ ಈಶ್ವರ ಅಲ್ಲಾನನ್ನೇ ಸೇರಿಸಿ ತಿರಂಗ ಲೆಹರಾಯಿಸಲು ಗಾಂಧಿಯಲ್ಲದೆ ಇನ್ನಾರು?”
ಗುಂಡಿಗೂ ಗುಂಡಿಗೆ ಒಡ್ಡಲು ಗಾಂಧಿಯಿಂದ ಮಾತ್ರ ಸಾಧ್ಯ ಎನ್ನುವ ಇವರ ಗಜಲ್ ಗಾಂಧಿಯ ಬಗೆಗೆ ಹೆಮ್ಮೆಯ ಭಾವ ಮೂಡುಸುತ್ತದೆ

“ದೇಹವಷ್ಟೆ ಬೇಕಿದ್ದರೆ ಬಿಸಿ ತಾಕಿಸಿ ಕುಲುಮೆ ಲೋಹಕ್ಕೆ ನೀರು ಕುಡಿಸುತ್ತಿದ್ದೆ
ಸುರಪಾನದಂತ ಮೊಹಬ್ಬತಿಗೆ ಈಗಲೂ ಬೊಗಸೆಯಿದೆ ವಿಷಕಾರಿದವಳೇ ನನ್ನ ತಪ್ಪೇನು”
ಮೋಸ ಮಾಡಿದ ಅವಳ ಬಗ್ಗೆ ಮಾರ್ಮಿಕವಾಗಿ ರೂಪಕಗೊಂದಿಗೆ ಮೂಡಿಬಂದ ಗಜಲ್ ಇದು ವಿರಹ ವೇದನೆಯನ್ನು ಅದೇಷ್ಟು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

“ಬೀಜ ಬಿತ್ತುವ ಹಿಮ್ಮತ್ ಇದೆ ಎಂದು ಸೆಟೆದು ಸಾಗುವ ಯಜಮಾನರೇ
ಹಡೆವ ಬ್ಯಾನಿಯ ಜಹನ್ನುಮ್ಮಿನ ಪಡೆಯಲು ನೋವು ಯಾರು ಸಿದ್ದರಿಹರಿಲ್ಲಿ ಸಖಿ”
ಪುರುಷ ಸಮಾಜದ ಮೇಲೆ ಹೆಣ್ಣಿನ ಆಕ್ರೋಶ ವ್ಯಕ್ತವಾಗುವ ಈ ಗಜಲ್ ನಲ್ಲಿ ಬೀಜ ಬಿತ್ತುವದೇ ಯೋಗ್ಯತೆಯಾ ಎಂದು ಪ್ರಶ್ನಿಸುತ್ತಲೆ ಹಡೆವ ಬ್ಯಾನಿ ನಿಮಗೆ ಗೊತ್ತಿದೆಯಾ ಎಂದು ಪ್ರಶ್ನಿಸುತ್ತಾ ಹೆಣ್ಣಿನ ನೋವಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ.

“ಇರುವುದೊಂದು ಗೋಳ ಅದೆಷ್ಟು ಬೇಲಿ ಹಾಕುವಿರಿ ನೀವು
ಬಿತ್ತಿದ್ದೆ ಬೆಳೆಯುವಿರಿ ಬೇವ ರಾಶಿಯ ಜಾಗದಲ್ಲಿ ಜೇನಿಲ್ಲ ಯಾಕೇ?”

ಇರುವುದೊಂದೆ ಭೂಮಿ ಅದೆಷ್ಟು ಬೇಲಿ ಹಾಕುವಿರಿ ಎಂದು ಮನುಜನನ್ನು ಪ್ರಶ್ನಿಸುತ್ತಾರೆ, ಜಾತಿ, ಧರ್ಮದದಿಂದ ಬೇಲಿಯಾಕುವ ಮಂದಿಯನ್ನು ತಣ್ಣಗೆ ಕುಟುಕಿದ್ದಾರೆ.

“ಸತ್ತ ದೇಹದ ಕಫನಿನ ಮೇಲೆ ಅವರು ಎಸೆಯಬಲ್ಲರು ಪರಿಹಾರ ಸಾವನ್
ಅನ್ನ ಬೆಳೆವ ಮಣ್ಣ ಕಲೆಗೆ ಇನ್ನಾರು ಗತಿ ಆಳಿದ ನೋಡು ಭೂಮಿ ಪುತ್ರ”
ರೈತನ ಶವದ ಮೇಲೆ ಪರಿಹಾರದ ಎಂಜಲು ಕಾಸನ್ನು ಮಾತ್ರ ರಾಜಕಾರಣಿಗಳಿಂದ ಕೊಡಲು ಸಾಧ್ಯ, ಉತ್ತಿ ಬಿತ್ತಿ ಬೆಳೆಯಲು ಅವರಿಂದ ಸಾಧ್ಯವಿಲ್ಲ ಅದು ಭೂಮಿಪುತ್ರನೆಂಬ ರೈತನಿಂದ ಮಾತ್ರ ಎಂದು ರೈತನ ಬಗ್ಗೆ ಒಂದೊಳ್ಳೆ ಗಜಲ್ ರಚಿಸಿದ್ದಾರೆ.

ಸಲಿಂಗಿಗಳ ಕುರಿತಾಗಿ ಮೂಡಿಬಂದ ಗಜಲ್ ಅವರ ಬಗ್ಗೆ ಕರುಣೆಯ ನೋಟ ಬೀರುವಂತೆ ಮಾಡುತ್ತದೆ. ಅವರು ಮನುಷ್ಯರಲ್ಲವೇ ಎಂದು ಚಿಂತಿಸುವಂತೆ ಮಾಡುತ್ತದೆ.
ಮದುವೆಗೆ ಹೆಣ್ಣು ಹುಡುಕುವ ಬ್ರಹ್ಮಚಾರಿ ಹುಡುಗರ ಮನದ ಅಳಲನ್ನು ದೇವರಿಗೆ ಮುಟ್ಟಿಸುತ್ತಿದ್ದಾರೆ. ಒಳ್ಳೆಯ ಸತಿಯನ್ನು ಕರುಣಿಸು ಎಂದು ಹುಡುಗರ ಪರವಾಗಿ ಮೊರೆಯಿಡುತ್ತಿದ್ದಾರೆ. ಮುಟ್ಟಿನ ಬಗ್ಗೆ ಮೂಡಿಬಂದ ಗಜಲ್ ಹಾಗೂ ಭಾರತದ ಬಗೆಗಿನ ಪ್ರೇಮದ ಗಜಲ್ ಗಳು ಗಮನ ಸೆಳೆಯುತ್ತವೆ. ಮಾತೃಭಾಷೆ ಹಿಂದಿ ಇರುವುದರಿಂದ ಉರ್ದು ಪದಗಳನ್ನು ಗಜಲ್ ಗಳಲ್ಲಿ ಬಳಸುವುದರ ಮೂಲಕ ಗಜಲ್ ಪಂಚ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಯುತ ಸಾವನ್ ಕೆ ಸಿಂಧನೂರು ಅವರ ಮೊದಲ ಗಜಲ್ ಸಂಕಲನವಾದ್ದರಿಂದ ಹಾಗೂ ಅಧ್ಯಯನದ ಕೊರತೆ ಇರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಬಹುತೇಕ ಗಜಲ್ ಗಳು ಮುರದ್ದಪ್ಪ ಗಜಲ ಗಳಾಗಿದ್ದು ಕೆಲವು ಗಜಲ್ ಗಳು ಆಜಾದಿ ಗಜಲ್ ಗಳಾಗಿವೆ. ಗಜಲ್ ಲೋಕದಲ್ಲಿ ಭರವಸೆಯ ಗಜಲ್ ಕವಿಯಾಗಿ ಭಾಗಶಃ ಯಶಸ್ವಿಯಾಗಿದ್ದಾರೆಂದೆ ಹೇಳಬಹುದು. ಗಜಲ್ ಬಗೆಗೆ ಅಧ್ಯಯನ ಮಾಡಲಿ ಇನ್ನೂ ಹೆಚ್ಚು ಗಜಲ್ ಸಂಕಲನಗಳನ್ನು ನಾಡಿಗೆ ಕೊಡುಗೆಯಾಗಲಿ ನೀಡಲಿ ಎಂದು ಹಾರೈಸುತ್ತೇನೆ.

ಶಿವಕುಮಾರ ಮೋ ಕರನಂದಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x