ಬೆಳಿಗ್ಗೆ ಎದ್ದದ್ದು ತಡವಾಗಿತ್ತು. ಇನ್ನು ಆಲಸ್ಯ. ಇವತ್ತು ಕೆಲಸಕ್ಕೆ ಹೋಗಲು ಮನಸ್ಸೇ ಇಲ್ಲ. ಆದರೆ ರಜೆ ಇಲ್ಲದ ಕಾರಣ ಸೂರ್ಯ ಎದ್ದು ತನ್ನ ದೈನಂದಿನ ಕೆಲಸ ಮುಗಿಸಿ ಕೆಲಸಕ್ಕೆ ಹೊರಟ. ಸೂರ್ಯ ತನ್ನ ಊರನ್ನು ಬಿಟ್ಟು ಬಂದು ೮ ತಿಂಗಳು ಆಗಿತ್ತು. ಅಪ್ಪ ಅಮ್ಮನ ಹತ್ತಿರ ದುಡ್ಡಿಗಾಗಿ ಬೇಡುವುದು ಅವನಿಗೆ ಹಿಂಸೆ ಅನ್ನಿಸುತ್ತಿತ್ತು. ಮೊದಲೆಲ್ಲ ಹೀಗೆ ಆಡುತ್ತಿರಲಿಲ್ಲ ಅವರು. ಕೇಳುವುದಕ್ಕೆ ಮುಂಚೆಯೇ ಸೂರ್ಯನಿಗೆ ದೊಡ್ದು ಕೊಡುವುದು, ಬಟ್ಟೆ ಕೊಡಿಸುವುದು, ತಿಂಡಿ ತಿನಿಸು ಹೀಗೆ ಹಲವಾರು ವಿಷಯಗಳಲ್ಲಿ ಸೂರ್ಯನ ತಂಗಿ ಸಂಯುಕ್ತಳಿಗಿಂತ ಹೆಚ್ಚು ಸೌಕರ್ಯಗಳು ದೊರೆಯುತ್ತಿತ್ತು. ಇಬ್ಬರದೂ ಕಾಲೇಜು ಮುಗಿಯುತ್ತ ಬಂತು. ೨ ವರ್ಷಗಳ ಅಂತರ ಅವರಿಬ್ಬರಲ್ಲಿ. ಸೂರ್ಯ ಡಿಪ್ಲೋಮ ಮುಗಿಸಿ ಏನು ಕೆಲಸ ಮಾಡಬಹುದು ನಾನು ಎಂದು ಯೋಚನೆ ಮಾಡುತ್ತಿದ್ದ. ಅವನ ಸ್ನೇಹಿತರು ಕೆಲವರು ಅನುಕೂಲಸ್ಥರಿದ್ದರು. ಅವರು ತಮ್ಮದೇ ಸ್ವಂತ ಏನಾದರೂ ವ್ಯವಹಾರ ಮಾಡಬೇಕೆಂದು ಆಲೋಚಿಸುತ್ತಿದ್ದರು ಹಾಗು ಎಲ್ಲರು ಒಟ್ಟಿಗೆ ಸೇರಿದಾಗ ಅದರ ಬಗ್ಗೆ ಚರ್ಚೆ ನಡೆಯುತ್ತಿತ್ತು.
ಅಷ್ಟೇನೂ ಅನುಕೂಲವಿಲ್ಲದ ಮಧ್ಯಮ ವರ್ಗದ ಕುಟುಂಬ ಸೂರ್ಯನದ್ದು. ತಂದೆ ಚಿಕ್ಕದೊಂದು ಕಾರ್ಖಾನೆಯಲ್ಲಿ ಲೆಕ್ಕಿಗ. ಅಮ್ಮ ಮನೆಯಲ್ಲಿ ಇದ್ದು ಸೀರೆಗಳಿಗೆ ಫಾಲ್ಲ್ ಹಾಕುವ ಕೆಲಸ ಮಾಡಿ ಸಣ್ಣ ಪುಟ್ಟ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಅವನಿಗೆ ಇವರ ಜೀವನ ನಡೆಸುವ ಶೈಲಿಯನ್ನು ನೋಡಿ ಕೋಪ ಬರುತ್ತಿತ್ತು. ಅಪ್ಪ ಯಾಕೆ ಒಳ್ಳೆ ಕೆಲಸ ಮಾಡಬಾರದು.. ಯಾರದ್ದೋ ಮುಂದೆ ಕೈಕಟ್ಟಿ ನಿಲ್ಲುವ ಕೆಲಸ ಯಾಕೆ ಬೇಕು ನಮಗೆ?… ಆದರೆ ಇವನ ಮಾತು ಕೇಳುವವರು ಯಾರು ಇಲ್ಲ.. ಅಷ್ಟಕ್ಕೂ ಹೇಳುವ ಧೈರ್ಯ ಸಾಲದು ಅಂತ ಅವನಿಗೂ ಗೊತ್ತು. ಬೆಳಿಗ್ಗೆ ಹಾಲಿನವನು ಬಂದು ಮನೆಮುಂದೆ ಗಲಾಟೆ ಮಾಡುತ್ತಿದ್ದಾನೆ! "ಇದು ಮೂರನೇ ತಿಂಗಳು ಅಮ್ಮ.. ಇನ್ನು ಎಷ್ಟ್ ದಿನ ಹೀಗೆ ಹೇಳ್ತಿರ? ನಾನು ಜೀವನ ಮಾಡಬೇಕು, ನಿಮ್ಮಂಥೋರು ನಾಕು ಜನ ಸಿಕ್ಕುದ್ರೆ ಅಷ್ಟೇ ನನ್ ಕಥೆ" ಅಮ್ಮ ಅವನ್ನು ಮೆಲ್ಲಗೆ ಮಾತಾಡಲು ಹೇಳಿ ಮುಂದಿನ ವಾರ ಖಂಡಿತಾ ಕೊಡುವೆ ಅಂತ ಆಶ್ವಾಸನೆ ಕೊಟ್ಟು ಕಳಿಸಿದ್ರು. ಸೂರ್ಯ ಸೀದಾ ಎದ್ದು ಬಂದು "ಯಾಕಮ್ಮ, ಏನಾಯ್ತು ಅವನಿಗೆ ಕೊಡೋಕೆ ದುಡ್ಡಿಲ್ವಾ?" ಅನ್ನುತ್ತಾ ಸಿಡಿಮಿಡಿ ಮಾಡ್ಡುತ್ತಿದ್ದರೆ ಅಮ್ಮ ಅವನ ಮಾತು ತನ್ನ ಕಿವಿಗೆ ಕೇಳಿಸುತ್ತಿಲ್ಲವೇನೋ ಅನ್ನುವಂತೆ ಹೋಗಿ ಚಪಾತಿ ಲಟ್ಟಿಸುತ್ತಿದ್ದಾರೆ.
ಸೂರ್ಯನಿಗೆ ಏನಾಗುತ್ತಿದೆ ಅನ್ನುವುದೇ ತಿಳಿಯುತ್ತಿರಲಿಲ್ಲ. ಕೆಲವೊಮ್ಮೆ ನಾನು ಮಾತ್ರ ಹೀಗಾ ಅನ್ನೋ ಯೋಚನೆ. ಓದಿನಲ್ಲಿ ಅಷ್ಟೇ ಜಾಣನಿಲ್ಲಬಹುದು ಆದರೆ ಪ್ರಾಪಂಚಿಕ ಜ್ಞಾನ ಚೆನ್ನಾಗೆ ಇತ್ತು. ಆದರೆ ಯಾಕೆ ನನ್ನ ಜೀವನ ಹೀಗೆ ಒಗಟಾಗಿದೆ ಅನ್ನುವುದೇ ತಿಳಿಯುತ್ತಿರಲಿಲ್ಲ ಅವನಿಗೆ. ಇರುವುದರಲ್ಲೇ ಸುಖವಾಗಿ ಬೆಳೆದ ಜೀವ. ಹೆಚ್ಚಾಗಿಲ್ಲದಿದ್ದರು ಕೊರತೆ ಇರದ ಜೀವನ. ಆದರೆ ಇತ್ತೀಚಿಗೆ ತಂದೆ ತಾಯಿ ತನ್ನೊಂದಿಗೆ ತುಂಬ ದೂರ ಆಗುತ್ತಿದ್ದರೆ ಅನ್ನೋ ಭಾವನೆ. ಬೆಳಗ್ಗೆ ತನ್ನನ್ನು ಎಳಿಸಿ, ಬಿಸಿ ಬಿಸಿ ಕಾಫಿ ಕೊಡುತ್ತಿದ್ದ ಅಮ್ಮ ಈಗೇಕೋ ತಾನು ಏಳುವ ತನಕ ಸುಮ್ಮನಿರುತ್ತಿದ್ದರು. ಆಟೋಮೊಬೈಲ್ ಯೂನಿಟ್ ಮಾಡುವ ಸಲುವಾಗಿ ಅಪ್ಪನ ಹತ್ತಿರ ತಾನು ೫ ಲಕ್ಷ (ಸಾಲ ಅಂತ ಹೇಳಿ, ಪೀ ಎಫ್ )ತೆಗೆದುಕೊಂಡಿದ್ದಾಗಿತ್ತು. ಅದಕ್ಕಾಗಿ ಅವರ ಹತ್ತಿರ ಗೋಗರೆದು, ತಾನು ಅತ್ಯದ್ಭುತ ರೀತಿಯಲ್ಲಿ ಮೋಟಾರ್ ಸರ್ವಿಸ್ ಯೂನಿಟ್ ಮಾಡುತ್ತೇವೆ ಅಂತ ಆಶ್ವಾಸನೆ ಕೊಟ್ಟು, ಅದರಿಂದ ಬರುವ ಆದಾಯದ ಬಗ್ಗೆ ಹೇಳಿದ ಮೇಲೆ ಅಪ್ಪ ಕೊಟ್ಟಿದ್ದರು. ಹುಡುಗರೆಲ್ಲ ಸೇರಿ ಹಾಕಿದ್ದ ಹಣವನ್ನು ಒಬ್ಬ ಗೆಳೆಯ ತನ್ನ ಥೈಲ್ಯಾಂಡ್ ಬ್ಯಾಂಗ್ಕಾಕ್ ಪ್ರವಾಸಕ್ಕೆ ಹಾಕಿ ಕೈಮುಗಿದಿದ್ದ. ಅವರಪ್ಪ ದೊಡ್ಡ ಕಂಪನಿ ನಡೆಸುತ್ತಿದ್ದರು. ನಿಮ್ಮ ದುಡ್ಡೆಲ್ಲ ಇನ್ನೊಂದು ೩ ತಿಂಗಳಲ್ಲಿ ಕೊಡುತೀನಿ ಅಂತ ಹೇಳಿ ಕೈಗೆ ಸಿಗದೇ ಓಡಾಡುತ್ತಿದ್ದ. ಅವನನ್ನು ಹಿಡಿಯುವುದೇ ಈ ಹುಡುಗರ ನಿತ್ಯದ ಕೆಲಸ ಆಗಿತ್ತು. ಸೂರ್ಯನ ಮನೆಯಲ್ಲಿ ಇದನ್ನೆಲ್ಲಾ ಹೇಳುವುದಕ್ಕೆ ಆಗುವುದಿಲ್ಲ. ಸಂಯುಕ್ತ ಬಿ.ಕಾಂ ಮುಗಿಸಿ ಎಂಬಿಏ ಮಾಡುತ್ತೇನಿ ಎಂದು ಹಠ ಹಿಡಿದಿದ್ದಳು. ಅದಕ್ಕೆಂದು ಇಟ್ಟಿದ್ದ ದುಡ್ಡನ್ನು ಸೂರ್ಯ ತೆಗೆದುಕೊಂಡಿದ್ದ. ಅದು ಈಗ ಎಲ್ಲರ ಕೋಪಕ್ಕೆ ಕಾರಣವಾಗಿತ್ತು.
ಸಂಯುಕ್ತ ತನ್ನ ಪರಿಸ್ಥಿತಿ ಅರ್ಥಮಾಡಿಕೊಂಡು ಮನೆಯ ಹತ್ತಿರವೇ ಇದ್ದ ಒಂದು ಕೊರಿಯರ್ ಆಫೀಸ್ ನಲ್ಲಿ ಅಕೌಂಟೆಂಟ್ ಕೆಲಸಕ್ಕೆ ಹೋಗುತ್ತಿದ್ದಳು. ತಾನು ಮುಂದೆ ಓದುವುದಕ್ಕೆ ತಾನೇ ದುಡ್ಡು ಹೊಂದಿಸುತ್ತೇನೆ ಅನ್ನೋ ಹಠ. ಅಪ್ಪನೂ ಸಹ ಅವಳ ಮದುವೆಗೆ ಅಂತ ಇಟ್ಟಿರುವ ಹಣವನ್ನು ಕೊಡಲು ತಯಾರಿಲ್ಲ."ಈಗಲೇ ಹೀಗೆ ನನ್ನ ಮಗ, ಇನ್ನು ನನಗೇನಾದ್ರೂ ಆದ್ರೆ, ನನ್ನ ಮಗಳ ಮಾಡುವೆ ಮಾಡುವ ಶಕ್ತಿ ಇದ್ದೀಯ ಅವ್ನಿಗೆ" ಅನ್ನೋ ಮಾತು ಅವರದ್ದು. ಇದೆಲ್ಲದರ ಮಧ್ಯ ಅಮ್ಮ ನಿಸ್ಸಹಾಯಕಳು.
ಸೂರ್ಯನಿಗೆ ತನ್ನ ಗೆಳೆಯ ಮಾಡಿದ ಮೋಸ ಅರ್ಥವಾಗಲು ಬಹಳ ದಿನ ಹಿಡಿಯಲಿಲ್ಲ. ಹುಡುಗರೆಲ್ಲ ಒಟ್ಟಾಗಿ ಹೋಗಿ ಅವನ ಅಪ್ಪನ ಬಳಿ ಕೇಳಿದ್ದಾಯಿತು. ಅವರಪ್ಪ "ನೋಡಿ,ನೀವು ನನ್ನ ಕೇಳಿ ದುಡ್ಡು ಕೊಟ್ಟಿದ್ದೀರಾ? ಅವನು ಇನ್ನೂ ಎಷ್ಟೊಂದ್ ಕಡೆ ಏನೇನೋ ಮಾಡಿದ್ದಾನೆ ಅದನ್ನೆಲ್ಲ ನಾನು ನನ್ನ ತಲೆಮೇಲೆ ಹಾಕ್ಕೋಬೇಕಾ?" ಅಂತ ಒಂದೇ ಮಾತಲ್ಲಿ ಎಲ್ಲರಿಗೂ ನಿರಾಸೆ ಮಾಡಿದ್ದರು. ದೊಡ್ಡವ್ಯಕ್ತಿ ಅಂತ ಜನ ಅಂದ ಮಾತ್ರಕ್ಕೆ ಅವರು ಹಾಗೆ ಇರಬೇಕೆಂದಿಲ್ಲವಲ್ಲ. ಅದು ಸ್ಪಷ್ಟವಾಗಿತ್ತು ಮತ್ತು ಅವರ ಮಾತನ್ನು ಕೇಳಿದಮೇಲೆ ತಿಳಿಯಿತು ದುಡ್ಡು ಮಾಡಬೇಕಾದರೆ ಎಷ್ಟು ನಿಷ್ಠುರವಾಗಿರಬೇಕು ಎಂದು. ಆದರೆ ಇದನ್ನೆಲ್ಲಾ ತಿಳಿದು ಈಗ ಮಾಡುವುದಾರು ಏನು…..
ತಾನು ಬೆಳೆದ ಹುಡುಗನಾಗಿ ಮನೆಯ ಜವಾಬ್ದಾರಿ ತೆಗೆದುಕೊಳ್ಳಬೇಕೆಂಬ ಬಯಕೆಯೇನೋ ಇದೆ. ಆದರೆ ಏನೋ ತಪ್ಪು ಮಾಡಿದ್ದೀನಿ ಅನ್ನೋ ಯೋಚನೆ ಅವನನ್ನು ಕಾಡಿ ಅವನ ಉತ್ಸಾಹಕ್ಕೆ ತಣ್ಣೇರೆರೆಚುತ್ತಿತ್ತು. ಇದೆ ಕೊರಗಿನಲ್ಲಿ ಮನೆ ಬಿಟ್ಟು ಬಂದದ್ದಾಯ್ತು. ಗೆಳೆಯನ ಜೊತೆ ಒಂದು ರೂಮ್ ನಲ್ಲಿ ಇದ್ದುಕೊಂಡು ಒಂದು ಚಿಕ್ಕ ಕಂಪನಿಯಲ್ಲಿ ಕೆಲಸ ಪಡೆದುಕೊಂಡ. ತಿಂಗಳಿಗೆ ಸಂಬಳ ಅಪ್ಪನ ಸಂಬಳಕ್ಕಿಂತ ಸ್ವಲ್ಪ ಹೆಚ್ಚು ಅನ್ನಿಸಿ ಖುಷಿಯಾಯಿತು. ಆದರೆ ಅಪ್ಪ ದುಡ್ಡು ಇನ್ನೂ ತೀರಿಸಿಲ್ಲ ಅನ್ನೋ ಕೊರಗು ಹಾಗೆ ಇತ್ತು. ಮನೆಯಲ್ಲಿ ಹೇಳದೆ ಬಂದಿದ್ದರಿಂದ ಒಂಥರಾ ಹಿಂಸೆ. ಅಮ್ಮ ಬಹಳ ನೊಂದಿರುತ್ತಾಳೆ, ಅವಳಿಗೆ ಹೇಗೆ ಸಮಾಧಾನ ಮಾಡುವುದು. ಸಮಯ ಬಂದಾಗ ನೋಡಿದರಾಯಿತು..
ಸೂರ್ಯನ ಕಂಪನಿ ಡೈರೆಕ್ಟರ್ ನ ಕಾರ್ ಕೆಟ್ಟು ರೈಲ್ವೆ ಗೇಟ್ ಮಧ್ಯದಲ್ಲಿ ನಿಂತಿದೆ. ಹಿಂದೆ ನಿಂತ ಗಾಡಿಗಳು ಒಂದೇ ಸಮ ಹಾರ್ನ್ ಮಾಡುತ್ತಿದ್ದವು. ರೈಲ್ವೆ ಗಾರ್ಡ್ ಬಂದು ಗಲಾಟೆ ಮಾಡುತ್ತಿದ್ದಾನೆ. ಸೂರ್ಯ ಇದ್ದ ಬಸ್ ಕೂಡ ಅದೇ ಟ್ರಾಫಿಕ್ ನಲ್ಲಿ ಇದ್ದರಿಂದ ಅವನು ಬಸ್ನಿಂದ ಇಳಿದು ಹೊರಗೆ ಬಂದ. ಹತ್ತಿರ ಹೋಗಿ ತನ್ನ ಕಂಪನಿ ಡೈರೆಕ್ಟರ್ ಎಂದು ಅವರನ್ನು ಮಾತನಾಡಿಸಿ ಅವರ ಕಾರ್ ಚೆಕ್ ಮಾಡಿದ. ಅವನ ಅದೃಷ್ಟ. ಅವನ ಕೈ ತಾಗಿದ ತಕ್ಷಣ ಕಾರ್ ಶುರುವಾಯಿತು. ಇನ್ನೇನು ೨ ನಿಮಿಷದಲ್ಲಿ ರೈಲು ಬರುವುದರಿಲ್ಲಿತ್ತು. ಕಾರ್ ಹಿಂದೆ ತೆಗೆಯಲು ಆಗದ ಪರಿಸ್ಥಿತಿಯಲ್ಲಿತ್ತು. ಹಾಗಾಗಿ ಸೂರ್ಯ ಅಲ್ಲಿ ಹೀರೋ ಆಗಿದ್ದ. ಅವರು ಅವನನ್ನು ತಮ್ಮ ಕಾರ್ ನಲ್ಲಿ ಕೂರಿಸಿಕೊಂಡರು. ಅವರ ಪಕ್ಕ ತಾನು ಕೂತಿರುವುದು ಅವನಿಗೆ ಒಂದು ರೀತಿ ಸಂಕೋಚ. ಅವರು ತನ್ನ ಬಗ್ಗೆ, ತನ್ನ ಕುಟುಂಬದ ಬಗ್ಗೆ ಕೇಳಿದಾಗ ಅವನಿಗೆ ಅವನ ಪರಿಸ್ಥಿತಿಯ ಬಗ್ಗೆ ಹೇಳಲು ಕಷ್ಟವಾಗಿ ಕಣ್ಣು ತುಂಬಿತ್ತು. ಅದನ್ನು ಗಮನಿಸಿದ ಅವರು ಅವನ ಭುಜ ಸವರಿ ಸಮಾಧಾನ ಮಾಡಿದರು. ನಿಧಾನವಾಗಿ ತನ್ನ ಬಗ್ಗೆ ಹೇಳಿದ ಸೂರ್ಯ, ತಾನು ತುಂಬ ತಪ್ಪು ಮಾಡಿದ್ದೇನೆಂದು ಅಳುತ್ತಿದ್ದ. ಸ್ವಲ್ಪ ಹಿರಿಯರಾದ ಅವರು ತಾವು ಇಂಥ ತಪ್ಪನ್ನು ಮಾಡಿದ್ದೇವೆ ಎಂದು ತಿಳಿಸುತ್ತಾ, ಅವನಿಗೆ ಧೈರ್ಯ ಹೇಳಿದರು. ಮತ್ತು ಅವರು ಅಂದು ಆ ನಿರ್ಧಾರ ತೆಗೆದುಕೊಂಡಿದ್ದು ಅವರ ಇಂದಿನ ಏಳ್ಗೆಗೆ ಕಾರಣ ಎಂದು ವಿವರಿಸಿದರು. ಎಷ್ಟು ಕಷ್ಟ ಪಟ್ಟು ಮುಂದೆ ಬಂದಿದ್ದಾರೆ ಅನ್ನಿಸುತ್ತಿತ್ತು ಸೂರ್ಯನಿಗೆ. ಹಾಗೆ ತನ್ನ ಪಿಳಿ ಪಿಳಿ ಕಣ್ಣು ಬಿಟ್ಟು ಅವರ ಮಾತು ಕೇಳುತ್ತಿದ್ದಂತೆ ಆಫೀಸ್ ಬಂದಿದ್ದು ತಿಳಿಯಲೇ ಇಲ್ಲ. ಅವರು ಅವನ ಹೆಗಲ ಮೇಲೆ ಕೈ ಹಾಕಿ ಒಳಗೆ ಕರೆದುಕೊಂಡು ಹೋದರು. ಎಲ್ಲರಿಗೂ ಆಶ್ಚರ್ಯ. ಹೊಸದಾಗಿ ಸೇರಿರುವ ಸೂರ್ಯ ಇವರಿಗೆ ಹೇಗೆ ಇಷ್ಟೊಂದು ಪರಿಚಯ ಎಂದು. ತಮ್ಮ ಕ್ಯಾಬಿನ್ ಗೆ ಕರೆದುಕೊಂಡು ಹೋಗಿ ಕಾಫಿ ತರಿಸಿ ಮಾತನಾಡಿಸಿದರು. ಅವನಿಗೆ ಏನು ಹೇಳಬೇಕೆಂದು ತಿಳಿಯದಾಗಿತ್ತು. ಆದರೆ ಅವರಿಗೆ ಅವನ ವಿನಯ, ನೇರ ನುಡಿ ಮತ್ತು ಮೃದು ಸ್ವಭಾವ ತುಂಬ ಹಿಡಿಸಿತ್ತು. ಹತ್ತು ನಿಮಿಷ ಮಾತನಾಡಿ ಹೊರಗೆ ಬರಲು ಎದ್ದು ನಿಂತ, ಅವರು ಅವನ ನಂಬರ್ ತೆಗೆದು ಕೇಳಿ ತೆಗದು ಕೊಂಡರು.
ಭಾನುವಾರವಾಗಿದ್ದರಿಂದ ತಡವಾಗಿ ಏಳುವುದು ಸೂರ್ಯನಿಗೆ ರೂಢಿ.ಅಮ್ಮನ ನೆನಪು ತುಂಬ ಕಾಡುತ್ತಿತ್ತು. ಅವಳ ಕೈ ಊಟ ಮಾಡಿ ಸುಮಾರು ೪ ತಿಂಗಳಾಗಿರಬಹುದು. ಭಾನುವಾರದ ಅಡುಗೆಗಳಂತೂ ತನಗೆ ಅಚ್ಚುಮೆಚ್ಚು. ತನಗೆ ಅರಿವಿಲ್ಲದೆ ಕಣ್ಣು ಹನಿಹಾಕುತ್ತಿತ್ತು. ಅಷ್ಟರಲ್ಲಿ ಫೋನ್ ರಿಂಗಿಸಿತ್ತು. ಅತ್ತಕಡೆಯಿಂದ "ಗುಡ್ ಮಾರ್ನಿಂಗ್ ಸೂರ್ಯ. ಹೋಪ್ ಯು ಆರ್ ಡುಯಿಂಗ್ ಗುಡ್. ನಾನು ಶೇಷಗಿರಿ ರಾವ್ ಮಾತಾಡ್ತಿರೋದು, ನಿಮ್ ಕಂಪನಿ ಡೈರೆಕ್ಟರ್. ಇವತ್ತು ಸಂಜೆ ಸ್ವಲ್ಪ ಬರೋದಿಕ್ಕೆ ಆಗುತ್ತಾ? ಅರ್ಧ ಗಂಟೆ ಕೆಲಸ ಇದೆ" ಸೂರ್ಯ ಹೇಗೆ ಇಲ್ಲ ಅಂತ ಹೇಳುತ್ತಾನೆ. "ಆಗ್ಲಿ ಸರ್, ಎಲ್ಲಿಗೆ ಬರಬೇಕು" ಅಂತ ವಿಳಾಸ ತೆಗೆದುಕೊಂಡ. ನಿಧಾನವಾಗಿ ಊಟ ಮಾಡಿ ಸಂಜೆಗೆ ತಯಾರಾದ. ಹೇಳಿದ್ದ ವಿಳಾಸಕ್ಕೆ ಸರಿಯಾದ ಸಮಯಕ್ಕೆ ಬಂದಿದ್ದ ಸೂರ್ಯ ನನ್ನ ಕಂಡು ರಾವ್ ಅವರು ಖುಷಿ ಪಟ್ಟರು. ಕಾಫಿ ಹಾಗು ಲಘು ಉಪಹಾರ ಮಾಡುತ್ತಾ "ನಿಮ್ಮನ್ನು ನನ್ನ ಅಸಿಸ್ಟೆಂಟ್ ಆಗಿ ನೇಮಕ ಮಾಡಿಕೊಳ್ಳಬೇಕೆಂದಿದ್ದೇನೆ, ನಿಮ್ಮ ಅಭಿಪ್ರಾಯ ಏನು" ಎಂದಾಗ ಅವನಿಗೆ ಅವರ ಮಾತಿಗಿಂತ ಸಿಹಿಯಾದದ್ದು ಇನ್ನೇನು ಇರಲಾರದು ಅನ್ನಿಸುತ್ತಿತ್ತು. ತಕ್ಷಣ ಸಮ್ಮತಿಸಿ ಅವರ ಕಾಲಿಗೆ ನಮಸ್ಕರಿಸಿದ.
ಅಮ್ಮನ ಹತ್ತಿರ ಫೋನ್ ನಲ್ಲಿ ಮಾತಾಡಿ, ಅಪ್ಪ ಮತ್ತು ಸಂಯುಕ್ತಳ ಬಗ್ಗೆ ವಿಚಾರಿಸಿದಾಗ ಮನಸ್ಸು ಹಗುರವಾಯಿತು. ಅಮ್ಮನಿಗೆ ತನ್ನ ಬಗ್ಗೆ ಹೇಳಿ, ಮನೆಗೆ ಸ್ವಲ್ಪ ದಿನದಲ್ಲೇ ರಜೆ ಹಾಕಿ ಬರುತ್ತೇನೆ ಎಂದು ಹೇಳುವಾಗ ಒಂದು ರೀತಿಯ ಸಮಾಧಾನ. ಅವರಿಗೆಲ್ಲ ಪ್ರಿಯವಾದ ವಸ್ತುಗಳನ್ನು ತೆಗದುಕೊಂಡು ಮನೆಗೆ ಹೋದಾಗ, ಅಪ್ಪನ ಕೋಪ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿತ್ತು. ಅವರಿಗೂ ಗೊತ್ತು ತನ್ನ ಮಗ ತನ್ನ ನಂಬಿಕೆಯನ್ನು ಸುಳ್ಳು ಮಾಡುವುದಿಲ್ಲ ಎಂದು. ಸೂರ್ಯ ತನ್ನ ಸಂಬಳವನ್ನು ಒಟ್ಟುಗೂಡಿಸಿ ತಂದು ಅಮ್ಮನ ಕೈಗಿತ್ತು, "ಅಮ್ಮ, ಇವತ್ತಿನಿಂದ ಮನೆ ಜವಾಬ್ದಾರಿ ನಂದು. ಸಂಯುಕ್ತ ಗೆ ಕಾಲೇಜು ಸೇರಲು ಹೇಳು" ಎಂದು ಹೇಳಿದ. ಸಂಯುಕ್ತ ಮಾತ್ರ ತನ್ನ ಇಷ್ಟದ ಸಿಹಿ ತಿನ್ನುವುದರಲ್ಲಿ, ಮತ್ತು ತನ್ನ ಅಣ್ಣ ತನಗಾಗಿ ತಂದಿದ್ದ ಉಡುಗೊರೆಗಳನ್ನು ನೋಡಿ ಸಂಭ್ರಮ ಪಡುತ್ತಿದ್ದಳು.
A True Middle Class today's Story. Nowadays Children's believe there friends but not Life Experienced Parents. But good thing is Surya repented his mistake and Shouldered his Family and took care of his Family understanding his responsibility in the Family..
ಮದ್ಯಮ ವರ್ಗದಲ್ಲಿ ಬೆಳೆದ ಮಕ್ಕಳು ಮಾಡುತ್ತಿರುವ ಈ ರೀತಿಯ ತಪ್ಪುಗಳು ಈಗೀಗ ಸಾಮಾನ್ಯವಾಗುತ್ತಿವೆ.ಧಿಡೀರ್ ಶ್ರೀಮಂತಿಕೆಯ ಆಸೆ ಇದಕ್ಕೆ ಕಾರಣ.ಪಾಪ ಸುತ್ತಲಿನ ಪರಿಸರವೂ ಇದಕ್ಕೆ ಕಾರಣವಾಗಿರಬಹುದು.ಸಮಾಧಾನಕರ ಮುಕ್ತಾಯ ಸಂತಸ ತಂದಿತು.ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿವೇಚನೆ ಮಕ್ಕಳಿಗೆ ಬರಲಿ ಎಂದು ಆಶಿಸೋಣ.ಕಥೆಯ ಆಶಯ ಚೆನ್ನಾಗಿದೆ.