ಕಥಾಲೋಕ

ಸಾಲ: ಅನಂತ ರಮೇಶ್

1

ಹದಿನೈದು ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ. ಲತಾಳ ಅದೇ ವ್ಯಂಗ್ಯದ ಮಾತು. “ಸಾಹೇಬರ ಸವಾರಿ ಈವತ್ತು ಯಾವ ಕಡೆಗೆ?”. ನಾನು ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ.

ತಿಂಡಿಯೊಟ್ಟಿಗೆ ಕಾಫಿ ಲೋಟ ಟೇಬಲ್‌ಮೇಲೆ ಬಡಿಯುತ್ತಾಳೆ. ಸಾವಕಾಶ ತಿಂದು ಹೊರಡುತ್ತೇನೆ. ಆ ಸಮಯ ಮೀರುವುದಿಲ್ಲ. ಈಗ ಬೆಳಗಿನ 9:30. ಸಾಮಾನ್ಯವಾಗಿ ಎಲ್ಲರೂ ಆಫೀಸಿಗೆ ಹೊರಡುವ ಸಮಯ!

ಹೊರಗೆ ರಸ್ತೆಯಲ್ಲಿ ನಡೆಯುವಾಗ, ಲತಾಳ ಬಗೆಗೆ ಕನಿಕರ ಅನ್ನಿಸುತ್ತೆ. ಅವಳಾದರೂ ಏನು ಮಾಡಿಯಾಳು? ನನಗಂತೂ ತಿಂಗಳಿಗೊಮ್ಮೆ ಸಂಬಳ ತರುವ ಕೆಲಸವಿಲ್ಲ. ಯಾವುದಾದರೂ ಮನೆ ಬಾಡಿಗೆ, ಖರೀದಿ, ಸೈಟು ಮಾರಾಟಗಳು ಕುದುರಿದರೆ ಒಂದಷ್ಟು ಕಮೀಷನ್. ಅದು ಯಾವತ್ತೂ ತಿಂಗಳಿಗೆ ಹತ್ತು ಸಾವಿರ ಮೀರುವುದೇ ಇಲ್ಲ. ಲತಾ ಟೇಲರಿಂಗ್‌ಮನೆಯಲ್ಲೇ ಮಾಡುವುದರಿಂದ ನಾಲ್ಕೈದು ಸಾವಿರ ದುಡಿಯುತ್ತಾಳೆ. ರವಿಗೀಗ ಹದಿಮೂರು ವರ್ಷ ತುಂಬಿದೆ. ಅವನೇ ನಮ್ಮ ಮನೆಯ ಕುಡಿ ಮತ್ತು ಕೊಂಡಿ.

ಈಗಾಗಲೇ ಒಂದು ವಾರ ಆಯ್ತು. ಯಾವುದೂ ವ್ಯವಹಾರ ಕುದುರಲೇ ಇಲ್ಲ. ನೂರು ರೂಪಾಯಿಯೂ ಈಗ ಜೇಬಲ್ಲಿಲ್ಲ. ಹಾಳು ಜರದಾ ಚಟ. ಇದನ್ನ ಹೇಗಾದರೂ ಬಿಡಬೇಕು. ಕೈಗಡ ಅಂತ ಸುಮಾರು ನಲ್ವತ್ತು ಸಾವಿರ ಮೀರಿದೆ. ಈಗ ಸಣ್ಣಪುಟ್ಟದು ಅಂತ ಕೇಳಲು ಯಾರೂ ಇಲ್ಲ.

ಯಾಕೋ ಸುರೇಶ ನೆನಪಾದ. ನನ್ನ ಹೈಸ್ಕೂಲ್‌ಮೇಟ್. ಬಹಳ ಬುದ್ಧಿವಂತನಿದ್ದ. ಚಿಕ್ಕವರಿದ್ದಾಗ ನಮ್ಮಿಬ್ಬರದೂ ಅಕ್ಕ ಪಕ್ಕದ ಮನೆ. ನಮ್ಮ ಪಿ.ಯು. ಓದು ಮುಗಿದ ಮೇಲೆ ಅವನು ಬೇರೆಲ್ಲೋ ಮನೆ ಮಾಡಿಕೊಂಡ. ಅವನ ತಂದೆ ತನ್ನ ಹಳ್ಳಿಗೆ ಹೋಗಿ ನೆಲೆಸಿದ್ದಾರೆ ಅಂತ ಗೊತ್ತಿತ್ತು. ಆದರೆ, ಇವನೇಕೋ ನನ್ನಿಂದ ದೂರವಾಗಿಬಿಟ್ಟ. ಕೆಲವು ತಿಂಗಳ ಹಿಂದೆ ಮಾಲ್‌ಒಂದರಲ್ಲಿ ಅಕಸ್ಮಾತ್‌ಸಿಕ್ಕಿದ್ದ. ಗುರುತು ಹಿಡಿದು ಮಾತಾಡಿದ್ದೆ. ತುಂಬಾ ಖುಷಿ ಪಟ್ಟಿದ್ದ. ಆಗಲೆ ಗೊತ್ತಾದದ್ದು ಅವನು ಕೆಇಬಿಯಲ್ಲಿ ಇಂಜಿನಿಯರ್. ತನ್ನ ಆಫೀಸಿನ ವಿಳಾಸ ಕೊಟ್ಟು ಹೋಗಿದ್ದ.

ಕೆಲ ತಿಂಗಳ ಹಿಂದೆ ಒಮ್ಮೆ ಅವನ ಆಫೀಸಿಗೆ ಹೋಗಿದ್ದೆ. ಸಾಕಪ್ಪಾ ಸಾಕು ಅವನ ಸಹವಾಸ ಅನಿಸಿಬಿಟ್ಟಿತ್ತು. ಬಹಳ ದರ್ಪದ ಜಾಯಮಾನ. ಹೈಸ್ಕೂಲಲ್ಲಿದ್ದಾಗ ಅವನು ಹಾಗಿರಲಿಲ್ಲ. ಕೈ ತುಂಬಾ ಹಣ ಸಿಕ್ಕುವ ಇಂಜಿನಿಯರ್‌ವೃತ್ತಿ ತಲೆಗೇರಿರಬೇಕು.

ಕಳೆದ ಸಲ ಸಿಕ್ಕಿದಾಗ ಮೊದ ಮೊದಲು ಸರಿಯಾಗೇ ಮಾತಾಡಿಸಿದ್ದ. ಅವನನ್ನ ಹುಡುಕಿ ಆಫೀಸಿಗೆ ಹೋದಾಗ ನನ್ನ ವಿಚಾರಿಸಿಕೊಂಡ. ತನ್ನ ಮೊಬೈಲು ನಂಬರನ್ನೂ ಕೊಟ್ಟ. ಯಾವಾಗ‌, ‘ʼಸುರೇಶ.. ಏನೂ ಅನ್ಕೊಳದಿದ್ರೆ, ಐದು ಸಾವಿರ ಸಾಲ ಅಂತ ಕೊಟ್ಟಿರ್ತೀಯ. ಸ್ವಲ್ಪ ಅರ್ಜೆಂಟ್‌ಇತ್ತು. ಮುಂದಿನ ತಿಂಗಳು ವಾಪಸ್‌ಕೊಡ್ತೀನಿ” ಅಂದೆನೊ, “ಎಂಥಾ ಭಂಡನೋ ನೀನು. ನನ್ನ ಹಳೇ ಸ್ನೇಹಿತ ನೋಡಲು ಬಂದ ಅಂತ ಖುಷಿ ಪಟ್ಟಿದ್ದೆ. ಬುದ್ಧಿ ತೋರ್ಸಿಬಿಟ್ಟೆ ಬಿಡು.” ಅಂತ ಮುಖ ಊದಿಸಿದ್ದ “ಅದು ಹಾಗಲ್ಲ…” ಅಂತ ಏನೋ ಸಮಜಾಯಿಷಿಗೆ ಪ್ರಯತ್ನಿಸಿದ್ದೆ. ಅವನು ವ್ಯಗ್ರನಾಗೇ ಇದ್ದ. ಕೊನೆಗೆ, ‘ʼನೋಡಪ್ಪ.. ಈಗಂತೂ ನನ್ನ ಹತ್ರ ಅಷ್ಟು ದುಡ್ಡು ಇಲ್ಲ. ಮುಂದಿನ ತಿಂಗಳು ಬಾ. ಆದ್ರೆ ಕೊಡ್ತೀನಿ” ಅಂತ ಯಾವುದೋ ಫೈಲ್‌ನೋಡುತ್ತಾ ಕುಳಿತುಬಿಟ್ಟ. ಮುಖಕ್ಕೆ ಹೊಡೆದ ಹಾಗಾಯ್ತು. “ಆಯ್ತು… ಬರ್ತೀನಿ” ಅಂದವನು ಮತ್ತೆ ಅತ್ತ ತಲೆ ಇಡಲಿಲ್ಲ. ಅವನು ಕೊಡುವ ಆಸಾಮಿ ಅಲ್ಲ ಅನ್ನುವುದು ಅವನ ಮಾತುಕತೆಯಿಂದಲೇ ಅಂದಾಜಿಸಿದ್ದೆ.

ಮನಸ್ಸಲ್ಲಿ ಸಣ್ಣ ಆಸೆ ಅಥವಾ ನನ್ನ ಭಂಡತನವೋ. ಈ ಬ್ರೋಕರ್‌ಕೆಲಸ ಅಂಟಿದ ಮೇಲೆ ಸಣ್ಣ ಪುಟ್ಟದನ್ನೆಲ್ಲ ತಲೆಗೆ ಅಂಟಿಸಿಕೊಳ್ಳದಿರುವುದನ್ನು ಕಲಿತುಬಿಟ್ಟಿದ್ದೇನೆ. ಆ ಅಹಂಕಾರಿ ಸುರೇಶನ್ನ ನೋಡಲು ಹೋಗಲೆ? ಏನು ಹೇಳಿಯಾನು? ನನ್ನ ನೋಡಿ ತಪ್ಪಿಸಿಕೊಂಡು ಹೊರಗೆ ಹೊರಟಾನು ಅಷ್ಟೆ.

ಅವನ ಬಳಿ ಏನು ಹೇಳಬಹುದು ಎಂದು ಯೋಚಿಸಿದೆ. ಅರೆ! ಇವತ್ತು ರವಿಯ ಹುಟ್ಟುಹಬ್ಬ ಅಲ್ಲವೇ? ತಲೆ ಬಿಸಿಯಾಯಿತು. ಛೆ! ಹೀಗೆ ಈ ದಿನವೇ ಕೈ ಖಾಲಿ ಮಾಡಿಕೊಂಡಿದ್ದೇನಲ್ಲ ಅನ್ನಿಸಿತು. ರಾತ್ರಿ ಲತಾ ಮೆಲ್ಲಗೆ ಹೇಳಿದ್ದಳು. “ನಾಳೆ ರವಿಗೆ ಸರ್ಪ್ರೈಸ್‌ ಕೊಡೋಣ. ಸಂಜೆ ಅವನಿಗಿಷ್ಟದ ಸ್ವೀಟ್‌ ತನ್ನಿ. ಹೊಸ ಡ್ರೆಸ್‌ ತೆಗೆದಿಟ್ಟಿದ್ದೇನೆ.” ನಾನಾದರೋ ಈ ಸ್ಥಿತಿಯಲ್ಲಿದ್ದೇನೆ. ಕಾಲು ಕಿಲೋ ಸಿಹಿಯನ್ನು ತೆಗೆದುಕೊಳ್ಳುವಷ್ಟು ಜೇಬಲ್ಲಿ ಹಣವಿಲ್ಲ!

ಸುರೇಶನ ಹತ್ತಿರವೇ ಹೋಗೋಣ. ಕೆಟ್ಟ ಧೈರ್ಯ ಮಾಡಿದೆ. ಅವನೊಡನೆ ಹೇಗೆ ಮಾತಾಡಬೇಕೆಂದು ತಲೆ ಸಲಹೆ ಕೊಡತೊಡಗಿತು. ʼಮುಂದಿನ ತಿಂಗಳಲ್ಲಿ ಇಪ್ಪತ್ತು ಸಾವಿರ ಕಮೀಷನ್‌ ಬರುವುದಿದೆ. ಈಗ ನನ್ನ ವ್ಯವಹಾರ ಒಳ್ಳೆ ಕುದುರಿದೆ. ಹತ್ತು ಸಾವಿರ ಬಹಳ ಅರ್ಜೆಂಟ್‌ ಬೇಕಾಗಿದೆ. ದೊಡ್ಡ ಮನಸ್ಸು ಮಾಡುʼ. ಒಂದು ಕಲ್ಲು ಹೊಡೆದೇಬಿಡೋಣ ಅಂತ ಭಂಡತನ ನನ್ನೊಳಗೆ ನುಡಿಯಿತು. ಐದು ಸಾವಿರದ ಬದಲು ಹತ್ತು ಸಾವಿರ ಕೇಳಿದರೆ, ಅದರ ಅರ್ಧದಷ್ಟಾದರೂ ಸೀಕ್ಕೀತು ಅನ್ನುವ ಬುದ್ಧಿವಂತಿಕೆಯ ಲೆಕ್ಕಾಚಾರ!

ಅವನ ಆಫೀಸಿಗೆ ಹೋದಾಗ ಸೀಟಲ್ಲಿ ಇರಲಿಲ್ಲ. ವಿಚಾರಿಸಿದೆ. “ಅವರು ಒಂದು ವಾರ ರಜಾ” ಅಂದರು. ನನ್ನ ಹಣೆ ಬರಹಕ್ಕೆ ಏನೆನ್ನಬೇಕೋ!

“ಹೌದಾ? ಅವರ ಮನೆ ಎಲ್ಲಿ ಬರುತ್ತೆ. ಸ್ವಲ್ಪ ನೋಡಬೇಕಿತ್ತು”

“ಅವರ ಮೊಬೈಲ್‌ಗೆ ಕಾಲ್‌ಮಾಡ್ರಿ”
ʻ
ನನ್ನ ಮೊಬೈಲಲ್ಲಿ ಕರೆನ್ಸಿ ಇಲ್ಲ! ಹೊರ ಬರುವಾಗ ಅಟೆಂಡರ್‌ ಮುಖ ನೋಡಿ ನಕ್ಕ, ” ಸರ್… ಅವ್ರ ಮನೆ ಇಲ್ಲೆ ಹಿಂದಿನ ಬೀದಿ. 112 ಡೋರ್‌ ನಂಬರು” ಅಂದ.

ಮನಸ್ಸು ಒಂದು ಕೈ ನೋಡು ಅಂದಿತು.

112, ಕಾಲಿಂಗ್‌ ಬೆಲ್‌ ಒತ್ತಿದೆ. ದೊಡ್ಡ ಮನೆಯೇ. ಬಾಗಿಲು ತೆಗೆದವರು ಹೆಂಗಸು. ಸುರೇಶನ ಹೆಂಡತಿ ಇರಬೇಕು.

“ನಾನು.. ಸುರೇಶನ ಫ್ರೆಂಡು. ಇದಾನಾ?”

“ಇದಾರೆ.. ಬನ್ನಿ..ಒಳಗೆ.. ಕರೀತೀನಿ”

ರೂಂನಿಂದ ಲುಂಗಿ, ಬನಿಯನ್ನಿನಲ್ಲೆ ಹೊರ ಬಂದ.

“ಓ..ನೀನಾ.. ಏನಪ್ಪಾ ವಿಶೇಷ? ಇದ್ದಕ್ಕಿದ್ದ ಹಾಗೆ?”

“ನಿನ್ನ ಆಫೀಸ್‌ ಹತ್ರಾನೇ ಕೆಲಸ ಇತ್ತು. ಇಷ್ಟು ದೂರ ಬಂದಮೇಲೆ, ನೋಡ್ಕೊಂಡು ಹೋಗೋಣ ಅನ್ನಿಸ್ತು. ಹೇಗಿದೀಯ? ಯಾಕೆ ರಜಾ ಹಾಕಿದೀಯ?”

ಅವನೇನೂ ಉತ್ತರ ಕೊಡಲಿಲ್ಲ. ಒಳಗಿನಿಂದ ಜ್ಯೂಸ್‌ ಲೋಟಗಳು ಬಂದವು. ಅದೂ ಇದೂ ಅಂತ ಹತ್ತು ನಿಮಿಷ ಮಾತಾಡಿದೆ. ಅವನು ಸುಮ್ಮನೇ ಕೂತಾಗ, ಮೆಲು ದನಿಯಲ್ಲೆ ಹೇಳಿದೆ, “ಸುರೇಶ, ಈ ತಿಂಗಳು ಬಹಳ ಕಷ್ಟವಾಗಿದೆ ಕಣಯ್ಯ. ನನ್ನ ವ್ಯವಹಾರ ಬಹಳ ಡಲ್‌ ಆಗಿದೆ. ಮನೆ ನಡ್ಸೋದು ಭಾಳ ಕಷ್ಟ. ನನಗೆ ಇಪ್ಪತ್ತು ಸಾವಿರದಷ್ಟು ಕಮಿಷನ್‌ ಬರೋದಿದೆ. ಸಿಕ್ಕಲೇ ಬೇಕಾದ ಹಣ ಯಾಕೊ ಮುಂದಕ್ಕೆ ಹೋಗ್ತಾ ಇದೆ. ನಿನಗೇನೂ ತೊಂದ್ರೆ ಇಲ್ಲ ಅಂದ್ರೆ ಹತ್ತು ಸಾವಿರ ಸಾಲ ಕೊಟ್ಟಿರ್ತೀಯ?”

ನಾನು ಇಷ್ಟೆಲ್ಲ ಹೇಳುವಾಗ, ಅವನು ಬೇರೆಲ್ಲೋ ದೃಷ್ಟಿ ಇಟ್ಟಿದ್ದ. ನನ್ನ ಕಡೆ ಒಮ್ಮೆ ತಿರುಗಿ, “ಕೂತ್ರೆ ದುಡಿಯೋಕ್ಕಾಗಲ್ಲಪ್ಪ. ನಿನ್ನ ವ್ಯವಹಾರದಲ್ಲಿ ಓಡಾಟವೇ ಜಾಸ್ತಿ. ಇನ್ನೊಂದು ವಿಷಯ. ನಿನ್ನ ಮಾತುಕತೆ ಬ್ರೋಕರ್‌ ಆಗಕ್ಕೆ ಲಾಯಕ್ಕಿಲ್ಲ. ಬೇರೆ ಏನಾದ್ರೂ ಮಾಡು” ಅಂತ ನಕ್ಕ.

ಅವನ ನಗು ನನಗೆ ರುಚಿಸಲಿಲ್ಲ. ಇವನು ಹಣದ ವಿಷಯ ಬಿಟ್ಟು ಬೇರೇನೋ ಮಾತಾಡಿ ವಿಷಯ ಮರೆಸ್ತಿದಾನೆ ಅನಿಸ್ತು. ʼಮಹಾ ಒರಟ.. ಮೊದಲಿಂದಲೂ ಧಿಮಾಕೆ ಇವನಿಗೆʼ ಮನಸ್ಸಲ್ಲಿ ಬಂತು. ಸ್ವಲ್ಪ ಕಾದಂತೆ ಮಾಡಿದೆ. ನಿಧಾನಕ್ಕೆ ಎದ್ದೆ.

“ಹೊರಡ್ತೀನಿ”

“ಹೊರಟೆಯಾ? ತಾಳು.. ನಾನೂ ಬರ್ತೀನಿ. ಹೊರಗೆ ನನಗೂ ಸ್ವಲ್ಪ ಕೆಲ್ಸ ಇದೆ”

ಪ್ಯಾಂಟು, ಷರಟು ಹಾಕಿ ನನ್ನೊಂದಿಗೆ ಹೊರಟ. ಅವನ ಮಡದಿಗೆ, “ಬರ್ತೀನಿ” ಅಂದವನು, ಹೆಜ್ಜೆ ನನ್ನೊಂದಿಗೆ ಹಾಕತೊಡಗಿದ.

ಇಬ್ಬರೂ ರಸ್ತೆಗೆ ಬಂದಾಗ ನೆನಪಾಯಿತು ರವಿಯ ಹುಟ್ಟು ಹಬ್ಬ ಈ ದಿನ. ತಲೆಗೇನೋ ಬಂದಿತು. ಸರಿ, ಪ್ರಯೋಗ ಮಾಡೇ ಬಿಡೋಣ ಅನಿಸ್ತು.

“ಸುರೇಶ, ನೀನು ಬೈದ್ರೂ ಪರವಾಯಿಲ್ಲಪ್ಪ. ನೋಡು, ಇವತ್ತು ನನ್ನ ಮಗನ ಬರ್ತ್‌ಡೇ. ಕೈಯಲ್ಲಿ ಕಾಸಿಲ್ಲ. ಮಕ್ಕಳಿಗ್ಯಾಕೆ ನಮ್ಮ ತಾಪತ್ರಯದ ಬಿಸಿ ಅಲ್ವ? ಅದಕ್ಕೇ ಅವನಿಗೇನಾದರೂ ಗಿಫ್ಟ್‌ ಕೊಡೋಣ ಅನ್ನಿಸಿ, ನಿನ್ನ ಹತ್ರ ಸ್ವಲ್ಪ ಸಾಲ ಕೇಳಿದೆ. ಯಾಕೋ ನಿನ್ನ ಹತ್ರ ಬಂದ್ರೆ ಸಾಲ ಸಿಕ್ಕಬಹುದು ಅನ್ಕೊಂಡೆ” ಅವನೇನೂ ಮಾತಾಡಲಿಲ್ಲ. ಎರಡು ನಿಮಿಷವಾದ ಮೇಲೆ, ಏನೋ ನೆನಪಾದವನಂತೆ, “ಮಗ ಏನು ಒದ್ತಾ ಇದಾನೆ ಅಂದೆ?” ಕೇಳಿದ.

“ಎಂಟನೇ ಕ್ಲಾಸ್… ಚೆನ್ನಾಗಿ ಓದ್ತಾನೆ” ಅಂದೆ ಅಭಿಮಾನದಿಂದ. ಮತ್ತೆ ಮೌನ.

ಅಂಗಡಿಗಳ ಸಾಲಲ್ಲಿ ಈಗ ನಡೆಯತೊಡಗಿದ್ದೇವೆ. ದೊಡ್ಡದೊಂದು ಸ್ವೀಟ್‌ ಅಂಗಡಿಯ ಹತ್ತಿರ ನಿಂತ. “ಬಾ.. ಏನಾದ್ರೂ ಮನೆಗೆ ತಗೊಳ್ಳೋಣ” ಅಂದ.

“ಇಲ್ಲಪ್ಪ.. ನನಗೇನೂ ಬೇಡ” ಅಂದೆ. ನನ್ನ ವಿಷಾದದ ನಗೆ ಮುಚ್ಚಿಕೊಂಡೆ.

“ಬಾ.. ಬಾ.. ಏನಾದ್ರೂ ಮನೆಗೆ ತಗೊಂಡು ಹೋಗು. ಬಿಲ್‌ ನಾನು ಕೊಡ್ತೀನಿ”

ನಾನು ಅವಾಕ್ಕಾದೆ. ಹಣ ಕೇಳಿದ್ರೆ ಸ್ವೀಟ್‌ ಕೊಡಿಸ್ತೀನಿ ಅಂತಿದಾನಲ್ಲ! ಏನು ಮಾಡಲೂ ತೋಚದೆ ಅಂಗಡಿಗೆ ಹೋದೆ. “ನಿನ್ನ ಮಗನಿಗೆ ಯಾವ ಸ್ವೀಟ್‌ ಇಷ್ಟ?” ನನ್ನ ಕಡೆ ತಿರುಗಿ ಕೇಳಿದ.
“ಬೇಡ..ಬೇಡ..ನಿನಗೆ ತಗೋ”

“ಅದ್ರಲ್ಲಿ ಏನು ಸಂಕೋಚ? ನಾನೂ ತಗೊಳ್ತೀನಿ. ನಿನಗೇನು ಬೇಕು ಹೇಳು”

“ಡ್ರೈ ಫ್ರೂಟ್‌ಬರ್ಫಿ ಅಂದ್ರೆ ಅವನಿಗಷ್ಟ. ಇನ್ನೂರು ಗ್ರಾಂ ಸಾಕು” ಸಂಕೋಚದಿಂದಲೇ ಮೆಲ್ಲಗೆ ಹೇಳಿದೆ.

“ಒಂದು ಕೆಜಿ ಡ್ರೈಫ್ರೂಟ್‌ಬರ್ಫಿ, ಒಂದು ಕೆಜಿ ಬಾದಾಮ್‌ಹಲ್ವ, ಕಾಲು ಕೆಜಿ ಮಸಾಲ ಗೋಡಂಬಿ ಪ್ಯಾಕ್‌ ಮಾಡಿ” ಅಂದ.

ಅಂಗಡಿ ಹುಡುಗನಿಗೆ “ಒಂದೇ ಪ್ಯಾಕ್‌ ಮಾಡಿ” ಅಂದವನು, ಅದರ ಹಣ ಪಾವತಿಸಿ ಬ್ಯಾಗ್‌ ತೆಗೆದುಕೊಳ್ಳುತ್ತಾ ಹೊರಗೆ ಬಂದ. ಪಕ್ಕದಲ್ಲಿ ಎಟಿಎಂ ಕಡೆ ನೋಡಿ, “ಒಂದ್ನಿಮಿಷ. ಈ ಬ್ಯಾಗ್‌ ಹಿಡ್ಕೊ. ಬಂದೆ” ಅನ್ನುತ್ತಾ ಎಟಿಎಂ ಕಡೆ ಹೋದವನು ಐದು ನಿಮಿಷದಲ್ಲಿ ಹಿಂತಿರುಗಿದ.

“ನೋಡು., ಈ ಸ್ವೀಟ್‌ಬ್ಯಾಗ್‌ಮನೇಗ್‌ತಗೊಂಡು ಹೋಗು. ಬಾದಾಮ್‌ಹಲ್ವ ನನ್ನ ಲೆಕ್ಕದಿಂದ ನಿನ್ನ ಮಗನಿಗೆ ಬರ್ತ್ಡೇ ಸ್ವೀಟ್. ಹಾಗೇ, ಈ ಹತ್ತು ಸಾವಿರ ಇಟ್ಟಕೊ” ಅನ್ನುತ್ತಾ ನೋಟು ಎಣಿಸಿ ಕೈಯಲ್ಲಿಟ್ಟ.

ನಾನು ಒಮ್ಮೆಲೆ ಕಕ್ಕಾಬಿಕ್ಕಿ. ಇವನೇನು ಹೀಗೆ ದಿಢೀರ್‌ ಬದಲಾಗಿಬಿಟ್ಟನಲ್ಲ!

“ತುಂಬಾ ಉಪಕಾರ ಆಯ್ತು ಸುರೇಶ. ಈ ಸಾಲ ಮುಂದಿನ ತಿಂಗಳು ಖಂಡಿತ ಕೊಟ್ಟುಬಿಡ್ತೀನಿ” ಅಂದುಕೊಂಡದ್ದಕ್ಕಿಂತ ಐದು ಸಾವಿರ ಹೆಚ್ಚಿನ ಹಣ ನೋಡಿ ಖುಷಿ ಗರಿಯೊಡೆದಿತ್ತು.

“ಪರವಾಯಿಲ್ಲ.. . ನಿನ್ನ ವ್ಯವಹಾರ ಸ್ವಲ್ಪ ಕುದುರಲಿ. ಅಂದಹಾಗೆ, ನಮ್ಮ ಆಫಿಸಲ್ಲಿ ನನ್ನ ಕಲೀಗ್‌ ನೀನಿರೋ ಏರಿಯಾದಲ್ಲಿ ಸೈಟ್‌ ಹುಡುಕ್ತಾ ಇದಾರೆ. ನಿನ್ನ ಪರಿಚಯ ಮಾಡಿಸ್ತೀನಿ. ಮುಂದಿನ ವಾರ ಬಾ”

ನಾನು ಅವನ ಮುಖ ನೋಡುತ್ತಾ ನಿಂತೆ.

“ಸರಿ.. ನಾ ಹೊರಡ್ಲಾ?” ಅಂತ ನಗು ಮುಖದೊಂದಿಗೆ ಸುರೇಶ ಹೊರಟೇ ಹೋದ.

ಮನೆಗೆ ಬಂದಾಗ ಗಂಟೆ ಮೂರಾಗಿಬಿಟ್ಟಿತ್ತು. “ಇದೇನಿದು ಇಷ್ಟೊಂದು ಸ್ವೀಟ್ಸ್?” ಅಂದಳು ಲತಾ.

ಊಟ ಬಡಿಸಿದಳು. ನನ್ನ ಯೋಚನೆ ಹಾಗೇ ಹರಿಯುತ್ತಿತ್ತು.

ಸುರೇಶ ಹೇಗೆ ಅಷ್ಟು ಬದಲಾದ? ಮಗನ ಬರ್ತಡೇ ಕೇಳಿ ಒಂದು ರೀತಿ ಭಾವುಕತನದಿಂದ ಹಾಗೆ ಮಾಡಿದನಾ? ಅಥವಾ ಕಳೆದ ಬಾರಿ ನನಗೆ ಹಣ ಕೊಡದಿದ್ದರಿಂದ ಸ್ವಲ್ಪ ಪಶ್ಚಾತ್ತಾಪವಿತ್ತಾ?

ಅರೆ! ಈಗ ಹೊಳೆಯಿತು. ನಾನು ಅವನ ಮಕ್ಕಳ ಬಗೆಗೆ ಏನನ್ನೂ ಕೇಳಿರಲಿಲ್ಲ. ಆಸುಪಾಸು ನನ್ನ ಮಗನ ವಯಸ್ಸಿನ ಮಗ ಅಥವಾ ಮಗಳು ಇರಬಹುದು. ಛೆ! ಅವನ ಮನೆಯಲ್ಲೇ ಕುಳಿತು ಏನೂ ವಿಚಾರಿಸದೇ ಬಂದೆನಲ್ಲ? ಆಥವಾ ಅವನಿಗೆ ಮಕ್ಕಳಿಲ್ಲವ? ಆ ಭಾವನೆಗಳಿಂದ ರವಿ ಹುಟ್ಟುಹಬ್ಬದ ವಿಷಯಕ್ಕೆ ಅವನು ಕರಗಿ ಇಷ್ಟೆಲ್ಲ ಉಪಚಾರ ಮಾಡಿ ಕಳಿಸಿದನಾ?

ಸಂಜೆ ರವಿ ಖುಷಿಯಾಗಿದ್ದ. ಬರ್ತಡೇಗೆ ಮಾಡಿದ ನಮ್ಮ ತಯಾರಿ ಅವನಿಗೆ ಬಹಳ ಸಂತೋಷ ಕೊಟ್ಟಿದ್ದು ಅವನ ಮಾತುಗಳಿಂದ ಗೊತ್ತಾಗುತ್ತಿತ್ತು.

2

ಇದಾಗಿ ಒಂದು ವಾರದ ನಂತರ ನಾನು ಮತ್ತೆ ಸುರೇಶನ ಆಫೀಸಿಗೆ ಹೊರಟೆ. ಅವನ ಕಲೀಗ್‌ ಒಬ್ಬರಿಗೆ ಸೈಟು ಬೇಕೆಂದಿದ್ದನಲ್ಲ. ಎರಡು ಮೂರು ಸೈಟುಗಳ ವಿವರ ಗುರುತು ಮಾಡಿಕೊಂಡು ಹೊರಟಿದ್ದೆ. ಸುರೇಶನನ್ನು ಸ್ವಲ್ಪ ಇಂಪ್ರೆಸ್‌ ಮಾಡು ಅಂತ ಒಳ ಮನಸ್ಸು ಹೇಳುತ್ತಿದ್ದುದು ಸುಳ್ಳಲ್ಲ.

ದೂರದಿಂದ ನಾನು ಬರುವುದು ನೋಡಿಯೇ ಸುರೇಶ ಯಾರಿಗೋ ಇಂಟರ್ಕಾಮ್‌ ಮಾಡಿ ಕರೆಯುತ್ತಿರುವುದು ನನಗೆ ಗೊತ್ತಾಯಿತು.

“ಬಾರಯ್ಯ ಬಾ. ನೀನು ಬರ್ತೀಯಾ ಇಲ್ವ ಅನ್ಕೊಂಡಿದ್ದೆ. ಪರವಾಯಿಲ್ಲ ಬಂದ್ಯಲ್ಲ. ನನ್ನ ಕಲೀಗ್‌ಈಗ ಬರ್ತಾರೆ. ಮಾತಾಡು” ಅಂದ. ಅವರು ಬರುವವರೆಗೆ ಅದೂ ಇದೂ ಅಂತ ಮಾತಾಡುತ್ತ ಕೂತೆವು.

ಸುರೇಶನ ಸ್ನೇಹಿತರಿಗೆ ನಾನು ತಿಳಿಸಿದ ಸೈಟುಗಳ ವಿವರಣೆ ಹಿಡಿಸಿತು ಅನ್ನಿಸುತ್ತೆ. “ಆಯ್ತು ಇವರೆ. ಭಾನುವಾರ ನಿಮ್ಮಲ್ಲಿಗೆ ಬರ್ತೀನಿ. ಆ ಸೈಟುಗಳನ್ನು ನೋಡೋಣ. ಹಾಗೇ ಅವುಗಳ ಪತ್ರಗಳಿದ್ದರೆ ತೋರಿಸಿ. ಯಾವುದಾದರೂ ಒಂದು ಫೈನಲ್‌ ಮಾಡೋಣ. ಅಂದಹಾಗೆ, ರೇಟಿನಲ್ಲಿ ಸ್ವಲ್ಪ ಕಡಿಮೆ ಮಾಡಿಸುವುದು ನಿಮ್ಮ ಜವಾಬ್ದಾರಿ” ಅಂದರು. ಮನಸ್ಸೊಳಗೇ, ಅಬ್ಬಾ ಒಳ್ಳೆ ಪಾರ್ಟಿ ಸಿಕ್ಕಿತು ಅಂದುಕೊಂಡೆ. ಇದೇನಾದರೂ ಸೆಟಲ್ ಆದರೆ ಮೂವತ್ತು ಸಾವಿರ ಕಮಿಷನ್‌ಗೆ ಮೋಸವಿಲ್ಲ.

ಅದೂ ಇದೂ ಮಾತಾಡಿ ಮುಗಿಸುವಾಗ ಸಮಯ ಒಂದು ಮೀರಿತ್ತು. ನಾನು ಎದ್ದೆ.

“ಬರ್ತೀನಿ ಸುರೇಶ”

“ಊಟದ ಸಮಯ. ಈಗೆಲ್ಲಿ ಹೋಗ್ತೀಯ. ಬಾ ಮನೆಗೆ. ಊಟ ಮಾಡೇ ಹೋಗು” ಒತ್ತಾಯ ಮಾಡಿ ಕರೆದುಕೊಂಡೇ ಹೋದ.

ಅವನ ಮನೆಯಲ್ಲಿ ಮನೆಯವರು ನಗುತ್ತಲೇ ಉಪಚರಿಸಿ ಊಟ ಹಾಕಿದ್ದು ನನಗೆ ನೆಮ್ಮದಿ ಅನ್ನಿಸಿತು. ಹೇಳದೆ ಕೇಳದೆ ಊಟಕ್ಕೆ ಹೋದರೆ ಎಷ್ಟು ಮುಜುಗರ ಹೆಂಗಸಿರಿಗಾಗುತ್ತೆ ಅನ್ನವುದು ನನಗೆ ಗೊತ್ತು.

ಅವನ ಮಕ್ಕಳ ವಿಷಯ ಕೇಳಿದೆ. ಅಂದುಕೊಂಡಂತೆ ಇಬ್ಬರು. ಮಗಳು 10ನೇ ತರಗತಿ ಮಗ 8 . “ಚೆನ್ನಾಗಿ ಓದ್ತಾರೆ” ಅಂದ.

ಕುತೂಹಲ ಹತ್ತಿಕ್ಕಲಾರದೆ ಕೇಳಿದೆ. “ಸುರೇಶ, ಅದೇನು ಹೋದವಾರ ನಾನು ಹಣ ಕೇಳಿದ್ದಕ್ಕೆ ಅಷ್ಟು ಧಾರಾಳತನದಲ್ಲಿ ಕೊಟ್ಟುಬಿಟ್ಟೆ? ಕೊಡಲ್ಲವೇನೋ ಅಂತ ಭಯ ಇತ್ತು. ಏನೇ ಅಗಲಿ, ನಿನ್ನಿಂದ ತುಂಬಾ ಉಪಕಾರವಾಯ್ತಪ್ಪ”

ಸುರೇಶ ನನ್ನ ಬೆನ್ನಮೇಲೆ ಸಣ್ಣದಾಗಿ ಹೊಡೆದು ನಕ್ಕ.

“ಮೂರು ತಿಂಗಳ ಹಿಂದೆ ನೀನು ಬಂದು ಐದು ಸಾವಿರ ಕೇಳಿದ್ದೆ. ನನಗೆ ನೆನಪಿದೆ. ನಾನು ಒರಟಾಗಿ ಉತ್ತರ ಕೊಟ್ಟಿದ್ದೆ. ಮುಂದಿನ ತಿಂಗಳು ನೋಡೋಣ ಅಂದಿದ್ದೆ. ಆದರೆ ನೀನು ಬರಲಿಲ್ಲ. ನೋಡು, ಸಾಲ ಕೇಳಿದ್ದರಲ್ಲಿ ತಪ್ಪಿಲ್ಲ. ನನ್ನ ಓದಿಗೆ ನನ್ನ ಅಪ್ಪ ಕೂಡ ಸಾಲ ಮಾಡಿದವರೇ. ಅದನ್ನು ನಿಧಾನಕ್ಕೆ ತೀರಿಸಿದವರೇ. ಅವರು ಯಾವಾಗಲೂ ಹೇಳುವ ಒಂದು ಮಾತು ನನ್ನ ಕಾಡುತ್ತದೆ. ನನ್ನ ಕಾಲೇಜು ಖರ್ಚಿಗೆ ಹಣ ಸಾಲದೆ ಅವರು ಮೂರು ನಾಲ್ಕು ಶ್ರೀಮಂತ ಸ್ನೇಹಿತರನ್ನು ಸಾಲ ಕೇಳಿದ್ದರಂತೆ. ಅವರಲ್ಲಿ ಯಾರೂ ಕೊಡದೇ ಹೋದರು. ಒಮ್ಮೆ ಕೇಳಿದವರು ಮತ್ತೆ ಕೇಳಲು ಅಪ್ಪನ ಸ್ವಾಭಿಮಾನ ಅಡ್ಡ ಬಂದಿದೆ. ಆದರೆ, ಕೇಳಿದವರು ಯಾರೂ ಸಾಲ ಕೊಡದೇ ಹೊಗಿದ್ದ ಕೊರಗು ಇವತ್ತಿಗೂ ಅಪ್ಪನ ಬಾಧಿಸುತ್ತಿದೆ. ಆಮೇಲೆ, ಬ್ಯಾಂಕೊಂದರಲ್ಲಿ ಸಾಲ ಸಿಕ್ಕಿ, ನನ್ನ ಓದು ಸರಾಗ ಸಾಗಿತು.

ನನಗೊಂದು ವಿಷಯ ಗೊತ್ತಿರಲಿಲ್ಲ. ನೀನು ಮನೆಗೆ ಬಂದೆಯಲ್ಲ ಅದಕ್ಕೆ ಎರಡು ವಾರದ ಮೊದಲು ನಾನು ಅಪ್ಪನನ್ನು ಮಾತಾಡಿಸಲು ಊರಿಗೆ ಫೋನ್‌ ಮಾಡಿದ್ದೆ. ಅಪ್ಪನಿಗೆ ನಿನ್ನ ಪರಿಚಯ ಮೊದಲಿಂದಲೂ ಇದೆಯಲ್ಲ? ಹಾಗಾಗಿ, ನಿನ್ನ ವಿಷಯ ನೆನಪಾಗಿ ಹೇಳಿದ್ದೆ. ನೀನು ಹಣಕಾಸಿನ ತೊಂದರೆಯಲ್ಲಿರುವುದನ್ನೂ ಹೇಳಿದೆ.

ಅಪ್ಪ ತುಂಬಾ ನೊಂದು ಹೇಳಿದ್ದರು. ʼಸುರೇಶ, ಅವನಿಗೆ ಆದಷ್ಟೂ ಸಹಾಯ ಮಾಡು. ಅವನ ತಂದೆ ನನಗೆ ಪ್ರಾಣ ಸ್ನೇಹಿತರಾಗಿದ್ದರು. ನಿನ್ನ ಇಂಜಿನಿಯರಿಂಗ್‌ ಕಾಲೇಜಿಗೆ ಸೇರಿಸುವಾಗ ನನಗೆ ಹಣದ ಅಡಚಣೆ ತುಂಬಾ ಇತ್ತು. ಆಗ ಈ ಸ್ನೇಹಿತನೇ ನನಗೆ ಧೈರ್ಯ ತುಂಬಿ, ತನಗೆ ಪರಿಚಯವಿರುವ ಬ್ಯಾಂಕ್‌ ಮ್ಯಾನೇಜರ್‌ ಬಳಿ ಕರೆದುಕೊಂಡು ಹೋಗಿದ್ದರು. ಆ ಬ್ಯಾಂಕಿನ ಸಾಲ ಸಿಕ್ಕಲು ಅವರು ಗ್ಯಾರಂಟರ್‌ ಕೂಡ ಆಗಲು ಒಪ್ಪಿದ್ದರು. ಅಷ್ಟೇ ಅಲ್ಲ, ಆ ಸಮಯದಲ್ಲಿ ಮೂರು ತಿಂಗಳ ಮಟ್ಟಿಗೆ ಅಂತ ನಾನವರಿಂದ ಹತ್ತು ಸಾವಿರ ಸಾಲ ಕೂಡ ತೆಗೆದುಕೊಂಡಿದ್ದೆ. ನಿನ್ನ ಓದು ಸಲೀಸು ಸಾಗಲು ಅವರದೂ ಪಾಲು ಇದೆ ʼ

ಅಪ್ಪನ ಆ ಮಾತುಗಳು ನನ್ನ ಚಿಕ್ಕವನನ್ನಾಗಿ ಮಾಡಿಬಿಟ್ಟಿತ್ತು. ಆಮೇಲೆ ಅನ್ನಿಸಿತು, ನೀನು ಮೊದಲ ಸಲ ಸಾಲ ಕೇಳಿದಾಗ ಅಪ್ಪನ ಗೆಳೆಯರಲ್ಲೊಬ್ಬನಂತೆಯೇ ನಾನೂ ಆಗಿಬಿಟ್ಟೆನಲ್ಲ ಎಂದು. ನೀನು ಮತ್ತೆ ಬರಲಿಲ್ಲ. ಸರಿ, ನಿನ್ನ ತೊಂದರೆ ಪರಿಹಾರ ಆಗಿದೆ ಅಂದುಕೊಂಡೆ. ಕಳೆದವಾರ ನೀನು ಮನೆಗೇ ಬಂದಾಗ, ಸಮಾಧಾನವಾಯ್ತು. ಮತ್ತೆ ನೀನು ಸಾಲ ಕೇಳಿದಾಗ ಅದೂ ಕಾಕತಾಳೀಯವಾಗಿ ಹತ್ತು ಸಾವಿರ ಅಂದಾಗ, ಕಳೆದುಕೊಂಡದ್ದು ಮತ್ತೆ ಸಿಕ್ಕಿದ ಖುಷಿ. ಅಪ್ಪ ಹಳೆಯ ಕತೆ ಹೇಳಿದ್ದು ನನಗೆ ಒಳ್ಳೆಯದೇ ಆಯಿತು.

ನನ್ನ ಅಪ್ಪ ಹೇಳುತ್ತಿದ್ದರು, ʼಒಬ್ಬ ಮನುಷ್ಯ ಸ್ವಾಭಿಮಾನಿ ಅಂತ ಅನ್ನಿಸಿದರೆ, ಅಂಥವರಿಗೆ ಕೇಳದೇ ಸಹಾಯ ಮಾಡಿಬಿಡಬೇಕು. ಮತ್ತೆ ಅಂಥ ಸಹಾಯವನ್ನು ಉಪಕಾರದ ಪಟ್ಟಿಗೆ ಸೇರಿಸಬಾರದು. ಸಹಾಯಕ್ಕೆ ಪ್ರತಿಫಲವನ್ನೂ ಕೇಳಬಾರದು.ʼ ಅದು ಸರಿ ಅನ್ನಿಸಿತು. ಹಾಗಾಗಿ ನಾನು ನಿನಗೆ ಕೊಟ್ಟ ಆ ಹಣ ಸಾಲ ಅಂತ ಕೊಟ್ಟಿಲ್ಲ. ಮುಂದೆಯೂ ನಿನಗೆ ಸಣ್ಣಪುಟ್ಟ ಹಣದ ಅಗತ್ಯವಿದ್ದರೆ ಕೇಳು. ಸಂಕೊಚ ಬೇಡ.ʼʼ

ನನಗೆ ನನ್ನ ಅಪ್ಪನ ನೆನಪು ಕಾಡಿತು. ತಾನು ಅಷ್ಟೇನು ಸ್ಥಿತಿವಂತನಲ್ಲದಿದ್ದರೂ ಪರೋಪಕಾರಿ ಅನ್ನಿಸಿಕೊಂಡವರು. ಸುರೇಶನ ಅಪ್ಪ ಇಂದಿಗೂ ಅವರ ನೆನಪಿಟ್ಟಿದ್ದಾರೆಂದರೆ ಎಂಥ ಸುಖದ ಭಾವ ತನಗೆ!

ಸುರೇಶನನ್ನು ಸುಮ್ಮನೆ ನೋಡುತ್ತಾ ಕುಳಿತೆ. ಇವನ ಬಗೆಗೆ ಏನೆಲ್ಲ ಅಂದುಕೊಂಡಿದ್ದೆನೋ ಅವೆಲ್ಲ ಆ ಕ್ಷಣಕ್ಕೆ ಅಷ್ಟೇ. ಈಗ ಇಲ್ಲಿ ಮಾತಾಡುತ್ತಿರುವವನು ನಿಜಕ್ಕೂ ನನ್ನ ಬಾಲ್ಯ ಗೆಳೆಯನೇ!

ಅವನ ಮನೆಯಿಂದ ಹೊರಡುವಾಗ, ಮನಸ್ಸಲ್ಲಿ ಥಟ್ಟನೆ ಬಂದದ್ದು ಅವನ ಸಾಲ ಆದಷ್ಟೂ ಬೇಗ ತೀರಿಸಲೇ ಬೇಕು!

-ಅನಂತ ರಮೇಶ್‌


ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಸಾಲ: ಅನಂತ ರಮೇಶ್

  1. ಕಥೆ ಇಷ್ಟವಾಯ್ತು. ಬದುಕಲ್ಲಿ ನಡೆಯುವಂತಹ ಘಟನೆ ಕಥೆಯಾಗಿ ಬಂದ ಹಾಗೇ

Leave a Reply

Your email address will not be published. Required fields are marked *