ನಾನು ಕೆಲಸವಿಲ್ಲದೆ ಅಲೆದಾಡುತ್ತಿದ್ದೆ. ಆದ್ರೆ ಯಾರೂ ನನಗೆ ನಿರುದ್ಯೋಗಿ ಅಂದಿರಲಿಲ್ಲ.ಪಾಪ..! ನಮ್ಮೂರ ಜನರು ನನ್ನ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದರು. ನಮ್ಮ ಅಪ್ಪನಿಗಂತೂ ಒಬ್ಬನೆ ಮಗಾ. ಹಿಂಗಾಗಿ ನಾ ಮಾಡಿದ್ದೆ ಮಾರ್ಗ ಎಂದು ನನ್ನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ನಾಲ್ಕು ಸಾರಿ ಹತ್ತನೇ ತರಗತಿ ಪೇಲಾದರೂ ನನ್ನ ಅಪ್ಪ ಮಗಾ ಮನಸಿಗೆ ಬೇಜಾರ ಮಾಡ್ಕೊಂಡಿತು ಎಂದು ತಿಳಿದು “ಮಗನೇ ನಿನ್ನ ಪಾಸ ಮಾಡಿದ್ರೆ ಎಲ್ಲಿ ನೀ ಡಿ.ಸಿ ಅಕ್ಕಿ ಅನ್ನೋ ಹೊಟ್ಟೆ ಕಿಚ್ಚು ಆ ಮಾಸ್ತರ ಮಂದಿಗೆ, ನೀ ಹತ್ತ ಚಾನ್ಸ ತಗೊಂದಾದ್ರೂ ಪಾಸ್ ಆಗೀ ತೋರ್ಸು” ಎಂದು ಅಪ್ಪ ನನಗೆ ಆಶಿರ್ವಾದ ಮಾಡಿದಾಗಿನಿಂದ. ನಾನು ಊರಲ್ಲಿ ಎದಿ ಉಬ್ಬಿಸಿ ಅಡ್ಡಾಡುತ್ತಿದ್ದೆ. ಆದ್ರೆ ನಮ್ಮ ಮನೆಯ ಕೆಲಸದ ಆಳು ನಾನು ನೀಟಾಗಿ ಇಸ್ತ್ರೀ ಮಾಡಿದ ಪ್ಯಾಂಟು ಶರ್ಟ ತೊಟ್ಟು ನಡೆದರೆ ಸಾಕು ನನ್ನ ದುರಗುಟ್ಟುತ್ತಿದ್ದ
ಚಿಕ್ಕ ಯಜಮಾನ್ರ ನಿಂವ ‘ಹೂಂ’ ಅಂದ್ರ ನಿಮ್ಮ ಜಾಗದಾಗ ನಾ ಕುಂತ ಹೆಂಗರ ‘ಗಿಲ್ಲಾ ಮಾಡಿ’ ನಿಮ್ಮನ್ನ ಪಾಸ್ ಮಾಡ್ತಿನಿ. ಆದ್ರ ನಿಂವ ನಂದೊಂದ ಶರತ್ತ ನಡಿಸಿ ಕೊಡಬೇಕ. ಅದೇನ ನಿಮಗ ದೊಡ್ಡದಲ್ಲ ಬಿಡ್ರಿ. ಆ ಶರತ್ತ ಏನಂದ್ರ ನನಗ ನಿಮ್ಮ ದನದ ಕೊಟ್ಟಗಿಯಿಂದ ಜೀಪ ಡ್ರಾವರ್ ಆಗೂ ಚಾನ್ಸ್ ಕೊಡ್ರಿ ಎಂದು ವಿನಮ್ರವಾಗಿ ಕೇಳಿಕೊಂಡ.
ನನಗೆ ಈ ರೀತಿ ವಿನಮ್ರವಾಗಿ ನಡೆದುಕೊಳ್ಳವರಂದ್ರೆ ತುಂಬಾ ಇಷ್ಟ. ನಮ್ಮ ಆಳಮಗನ ಆಸೆಗೆ ಏಕೆ ಮಣ್ಣು ಎರಚೋದು? ಗೌಡರ ಮಗನಾಗಿ ಹಿಂತಾ ಕಾಂಜಿಪಿಂಜಿ ಕೆಲಸ ಮಾಡದಿದ್ರೆ ನಮ್ಮ ಗೌಡ್ಕಿ ಗತ್ತಿನ ಮರ್ಯಾದೆ ಏನಾಗಬಾರದೆಂದು. ಹೂಂ.. ಎಂದು ನಮ್ಮ ಆಳಮಗನಿಗೆ ಆಸ್ವಾಸನೆ ಕೊಟ್ಟೆ.
ಆರು ತಿಂಗಳಲ್ಲಿ ನಾನು ಹತ್ತನೇತೆ ಪಾಸಾದ ಕೂನಕ್ಕೆ ಒಂದು ಬಣ್ಣ ಬಣ್ಣದ ಮಾರ್ಸಕಾರ್ಡ ತಗೊಂಡು ಬಂದು ನಮ್ಮ ಆಳಮಗ ನನ್ನ ಕೈಗಿಟ್ಟಾಗ ‘ಎಲಾ ಇಂವ್ನ’ ಎಂದು ಬಾಳ ಗಾಬಾಗಿ ಅಂವನ ಮಕಾನೇ ನೋಡಿದೆ. ನಾ ಪೆದ್ದನಂತೆ ಅವನ ಮುಂದ ಕಾಣಬಾರದೆಂದು ಇದನ ತಗೊಂಡ ಹೋಗಿ ನಮ್ಮ ಅವ್ವನ ಕೈಯಾಗ ಕೊಟ್ಟು ಕೈ ಕರ್ಚಿಗೆ ಹತ್ತಿಪ್ಪತ್ತ ರೂಪಾಯಿ ಚಿಕ್ಕ ಯಜಮಾನ್ರೂ ಕೊಡ ಅಂದಾರಂತ ಹೇಳಿ ಇಸ್ಕೊಂಡ ಹೋಗ. ನಾ ಹತ್ತನೇತೆ ಪಾಸಾದ ಸುದ್ದಿ ಇಂದ ಸಂಜಿಕ ಊರಾಗ ಡಂಗರ ಹಾಕಿ ಸುದ್ದಿ ಮಾಡು. ಹಂಗ ವಾಟ್ಸಪ್, ಪೇಸಬುಕ್ಕಿಗೂ ಸುದ್ದಿ ಕಳಿಸು ಹೂನೇ ಹೋಗು. “ಮತ್ತ.. ಹಾಂ.. ಏನಂದ್ರ ಒಂದ ಚಲೋ ದಿನಾ ನೋಡಿ ಇಡೀ ಊರಿಗೆ ಊಟಾ ಹಾಕ್ಸಿದ್ರಾತೂ, ತಪ್ಪದ ನನಗ ಅಕ್ಷರ ಕಲಿಸಿದ ಆ ದೇವ್ರಂತ ಮಾಸ್ತರಗಳನ್ನೂ ತಪ್ಪದೆ ಕರಿಬೇಕು, ಅವರ ಪುಣ್ಯದ ಕೈಗಳಿಂದ ಸನ್ಮಾನ ಮಾಡಿಸಿಕೊಳ್ಳು ಆಸೆ ಬಾಳ ಐತಿ” ಎಂದು ಗೌಡಕಿ ಗತ್ತಿನಲ್ಲಿ ಆಳ ಮನಸ್ಯಾಗ ಹೇಳಿದೆ. ನಾ ಹೇಳಿದಕ್ಕೆಲ್ಲ ಹೂಂ.. ಗುಡೂತ್ತ ಆಳು ಮನಿಯತ್ತ ನಡೆದ.
ಆದ್ರ ಒಂದು ಎಡವಟ್ಟು ಆಗಿತ್ತು. ಅದೇನಪಾ ಅಂದ್ರ ನಾ ಪಾಸಾದ ಸುದ್ದಿ ತಿಳದ ಮ್ಯಾಲ ನಮ್ಮ ಅಪ್ಪಗ ಸಂತೋಷ ಹೆಚ್ಚಾಗಿ ಸಣ್ಣಂಗ ಹೃದಯಘಾದತ ಆಗಿ ನಗರದ ಆಸ್ಪತ್ರೆಯಲ್ಲಿ ಎಡ್ಮಿಟ್ ಆಗಿದ್ರು. ಅವ್ವ ಅಪ್ಪನ ಬಳಿ ಕುಳಿತು ಕಣ್ಣೀರು ಹರಿಸುತ್ತಿದ್ದಳು. ಸಂಕಟ ತಾಳದಕ್ಕ ಅವ್ವ “ ಅಯ್ಯೋ ಪುಣ್ಯಾತ್ಮ ನೀ ಹಿಂಗ್ಯಾಕ ಮಾಡಿದೋ..ನನ್ನ ತಾಳಿ ಊಳಿಸಿಕೊಡು ಇಲ್ಲಂದ್ರ ನನ್ನ ಮಗಾ ಯಾವ ಪರಿಕ್ಷೆದಾಗೂ ಪಾಸ್ ಆಗದಂಗ ಒಂದ ಚಲೋ ಆಶಿರ್ವಾದ ಕೊಟ್ಟು ನನ್ನ ಗಂಡಗ ಹೃದಯಘಾತ ಆಗದಂಗ ನೋಡ್ಕೊಳ್ಳು ಜವಾಬ್ದಾರಿ ನಿಂದನೋಡ ಎಂದು ಊರ ಹನಮಪ್ಪನ ಗುಡಿ ಮಟಾ ಹೋಗಿ ತಾಕಿತುಮಾಡಿ ಬಂದಿದ್ಳು.
ಈ ಸುದ್ದಿ ತಿಳದ ನಮ್ಮ ಬಿಗ್ರೂ ಬಿಜ್ಜರೂ ಗುಬಗೂಡಕೋತ ಬಂದ ಮನಿ ತುಂಬಕೊಂಡ್ರ. ಅಂತೂ ನಿಮ್ಮ ಕುಲದಾಗ ಒಬ್ಬನಾರ ಹತ್ತನೇತೆ ಪಾಸ ಆಗಿ ನಿಮ್ಮ ಕುಲದ ಗೌರವ ಉಳಸಿದ ಅಂತ ಬಂದ ಬೀಗರೆಲ್ಲ ನನ್ನ ಕುರಿತು ಒಂದೆರಡು ಅಭಿಮಾನದ ಮಾತುಗಳನ್ನು ಆಡಿದರು. ಆಗ ನನಗ ಆಕಾಶ ಮೂರಗೇನಿನಷ್ಟ ಉಳದಿತ್ತು. ಅಪ್ಪ ಸುದಾರಿಸಿಕೊಂಡ.
ನನ್ನ ಜೋಡಿ ಸಾಲಿ ಕಲಿತ್ತಿದ್ದ ವಿಶಾಲ, ರಾಘವೇಂದ್ರಾ, ಅಮೇರಿಕಾದಲ್ಲಿ ದೊಡ್ಡ ದೊಡ್ಡ ಇಂಜಿನೀಯರ ಆಗಿ ಕೈತುಂಬ ಸಂಬಳಾ ತಗೊಂಡು ಹೆಂಡತಿ ಮಕ್ಕಳೊಂದಿಗೆ ಆರಾಮಾಗಿದ್ರು. ಫೇಸಬುಕ್ಕನ್ಯಾಗ ನಾ ಹಾಕೀದ ಸ್ಟೇಟಸ್ಸ ನೋಡಿ ಅವರಿಗೆ ನಾ ಎಲ್ಲಿ ಅವರಿಗೆ ಕಾಂಪಿಟೇಟ್ ಮಾಡ್ತಿನಂತ ಹೇದರಿ ನನಗೆ ಅಭಿನಂದನೆ ಅಂತ ಕಮೆಂಟ್ ಹೇಳದೆ ಬರೀ ಲೈಕ್ ಮಾಡಿದ್ರು.
ಅಪ್ಪ ಪ್ಯಾಟಿಗೆ ಹೋಗಿ ನನ್ನ ಹತ್ತನೇತೆ ಮಾಕ್ರ್ಸಕಾಡಿಗೆ ಗೋಲ್ಡನ್ನ ಕಲರ್ ಕಟ್ಟ ಹಾಕಿಸಿ ಮನೆಯ ಪಡಸಾಲೆಯಲ್ಲಿ ತೂಗುಬಿಟ್ಟು ನನ್ನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದ.
ಇದ ಹವಾದಾಗ ನನಗೊಂದ ಹೆಣ್ಣ ತಗದ ಮದವಿ ಮಾಡಿದ್ರ ಆತಂತ ನನ್ನ ಸರಿ ಸಮಾ ಓದಿದ ಹುಡುಗಿ ಹುಡಕಾಕ ದಿನಾ ಜೀಪ ಹತ್ತಿ ಹೊಕ್ಕಿದ್ದ. ಆದ್ರ ನನ್ನ ಸರಿ ಸಮಾ ಓದಿದವರು ಇರದೆ ಡಿಗ್ರಿ, ಎಮ್ ಎ, ಓದಿದವರು ಇರುವವರನ್ನು ಕಂಡು ಯಾವ ಹೆಣ್ಣು ನನ್ನ ಮಗನ ಸರಿ ಸಮಾ ಓದಿಲ್ಲ ಎಂದು ಮೀಸಿ ತಿರವುತ್ತ ಹುಮ್ಮಸದಿಂದ ಕಂಡ ಕಂಡವರಿಗೆ ಈ ವಿಷಯ ಹೇಳುತ್ತ ಗೌಡಕಿಯ ದಿಮಾಕಿನಲ್ಲಿ ನಗುತ್ತಿದ್ದ.
ನನಗೋ ಆ ಹೊತ್ತಿಗೆ ನೆತ್ತಿಯ ಮೇಲೆ ಬಿಳಿ ಕೂದಲು ಕಾಣುತ್ತಿದ್ದವು. ನನ್ನ ವಾರಿಗೆಯ ಗೆಳೆಯರೆಲ್ಲ ಮೂರ್ನಾಲ್ಕು ಮಕ್ಕಳನ್ನು ಹೆತ್ತು ಸಂಸಾರ ಸಾಗರದಲ್ಲಿ ಸಿಲುಕಿ ವಿಲಿವಿಲಿ ವದ್ದಾಡುತ್ತಿದ್ದರು. ನಾನು ಇನ್ನೂ ಬ್ಯಾಚುಲರ್ ಇದ್ದದ್ದು ಕಂಡು ಗೆಳೆಯರೆಲ್ಲ ಹೊಟ್ಟೆ ಕಿಚ್ಚು ಪಡುತ್ತಿದ್ದರು.
ಅಪ್ಪ ತುಂಬಾ ಪರಿಶ್ರಮ ಪಟ್ಟು ನನಗೆ ಮದುವೆ ಮಾಡಲು ತುದಿಗಾಲಲ್ಲೆ ಓಡಾಡುತ್ತಿದ್ದ. ನನ್ನ ಓದಿನ ಲೆಕ್ಕಾಚಾರ ಹಾಕಿ ಕರ್ನಾಟಕದ ಬೌಂಡ್ರಿ ದಾಟಿಹೋಗಿ ಆಂದ್ರದ ಗಡಿರೇಖೆಯಲ್ಲಿರುವ ಊರೊಂದರಲ್ಲಿ ಹಾಪ್ ತಲೆಗೂದಲಿನ ಚಲುವ ಕನ್ನೆಯೊಂದನ್ನು ಪಾಸ್ ಮಾಡಿದ್ದ. ಅವಳು ಹತ್ತನೆ ತರಗತಿ ಕಲಿಸುವ ಮೇಡಂ ಎಂದು ನನಗೆ ಮದುವೆಯಾದ ಮೇಲೆ ಗೊತ್ತಾಯಿತು. ಅಂದಿನಿಂದ ನನ್ನ ಮನೆಯ ಪಡಸಾಲಿಯೇ ನನಗೆ ಸಾಲಿಯಾಯಿತು.
ಚೆನ್ನಾಗಿದೆ ಸರ್
ಧನ್ಯವಾದಗಳಿ, ದೇಸಾಯಿ ಸರ್ ಮತ್ತು ಚಂದನ ಸರ್
ಸರಳ ಸುಂದರ. ಚೆನ್ನಾಗಿದೆ 🙂