ಸಾಲದ ವಿಷಯ (ಕೊನೆಯ ಭಾಗ): ಸೂರಿ ಹಾರ್ದಳ್ಳಿ


(ಇಲ್ಲಿಯವರೆಗೆ)

ಈ ಘಟನೆಯ ನಂತರ ನಿಮಗೆ ನನ್ನ ರೂಪ ಅಸಹ್ಯವಾಗಿ ಕಾಣಿಸುತ್ತದೆ. ನಾನು ಎಲ್ಲಾ ದುರ್ಗುಣಗಳ ಘನೀಕೃತ ರೂಪವಾಗಿ, ಕೀಚಕನಾಗಿ, ವೀರಪ್ಪನ್ ಆಗಿ ಕಾಣುತ್ತೇನೆ. ಆದರೆ ಏನೂ ಮಾಡಲಾಗದ ಪರಿಸ್ಥಿತಿ ನಿಮ್ಮದು.

ನನ್ನದು ಮೃದು ಹೃದಯ. ಇಲ್ಲ ಎಂದು ಹೇಳಿ ನಿಮ್ಮನ್ನು ಗಾಸಿಗೊಳಿಸಲು ಇಷ್ಟವಿಲ್ಲ. ಅದಕ್ಕಾಗಿ ನಾನು, ’ರೀ, ಗೆಳೆಯನೊಬ್ಬನಿಗೆ ಎರಡು ಲಕ್ಷ ಕೊಟ್ಟಿದ್ದೆ. ಎರಡು ವಾರ ಬಿಟ್ಟು ಕೊಡ್ತೀನಿ ಎಂದು ಹೇಳಿದ್ದಾನೆ. ನೀವು ಎರಡು ವಾರ ಬಿಟ್ಟು ಬನ್ನಿ, ಕೊಟ್ಟರೆ ನಿಮಗೆ ಖಂಡಿತಾ ಹತ್ತು ಸಾವಿರ ರೂಪಾಯಿ ಕೊಡುತ್ತೇನೆ,’ ಎನ್ನುತ್ತೇನೆ. ಇದು ಹಸಿ ಸುಳ್ಳು ಎನ್ನವುದು ನಿಮಗೂ ಗೊತ್ತು, ನನಗೂ ಗೊತ್ತು.

ಕೋಪಿಷ್ಟರಾದ ನಿಮಗೇನಾದರೂ ಶಾಪಾನುಗ್ರಹ ಶಕ್ತಿ ಇದ್ದರೆ ನಾನು ಭಸ್ಮವಾಗಿಬಿಡಬೇಕು.

ನನ್ನಲ್ಲಿ ಒಂದಿಷ್ಟು ಅನುಕಂಪ ಇದೆ, ನಾನು ನಿಮಗೆ ಹಣ ಕೊಟ್ಟೆ ಎನ್ನಿ, ಆಗ ಏನಾಗುತ್ತದೆ? ನಿಮ್ಮ ಬಾಯಿ ಬೊಂಬಾಯಿ. ಊರಿಗೆಲ್ಲಾ ನನ್ನ ’ದೊಡ್ಡ’ ಅರ್ಥಾತ್ ’ದಡ್ಡ’ ಗುಣಗಳ ಬಗ್ಗೆ ಹೇಳಿಕೊಂಡು ಬರುತ್ತೀರಿ. ಆಗ ನೂರಾರು ಜನ ನಮ್ಮ ಮನೆಯ ಮುಂದೆ ಸಾಲಾಗಿ ನಿಲ್ಲುತ್ತಾರೆ, ಸಾಲ ಕೊಡಿ, ಎಂದು. ಹಣ್ಣಿರುವ ಮರಕ್ಕೇ ಕಲ್ಲಿನ ಏಟು ಜಾಸ್ತಿ. ಅವರಿಗೆಲ್ಲಾ ಸಾಲ ಕೊಟ್ಟರೆ ಸೋಪಿಲ್ಲದೇ ಬೋಳಿಸಿಕೊಂಡ ಪೆದ್ದಣ್ಣ ಭಟ್ಟರ ಕತೆ ನನ್ನದಾಗುತ್ತದೆ. ಈ ಪೆದ್ದಣ್ಣ ಭಟ್ಟರು ಯಾರು, ಅವರ ಕುಲ-ಗೋತ್ರ-ಪ್ರವರಗಳೇನು ಎಂದೆಲ್ಲಾ ನಿಮಗೆ ಗೊತ್ತೇ? ಇಲ್ಲವೇ? ನನಗೂ ಗೊತ್ತಿಲ್ಲ., ಹೋಗಲಿ ಬಿಡಿ. ಬೇರೆಯವರ ವಿಷಯ ನಮಗೆ ಯಾಕೆ?

ನನ್ನಲ್ಲಿ ಪ್ರೀತಿ, ಕಷ್ಟಕ್ಕೆ ಸ್ಪಂದಿಸುವ ಗುಣ, ಮಾನವೀಯತೆ ಮುಂತಾದ ಸವಕಲು ಧೋರಣೆಗಳಿದ್ದರೆ, ಇದ್ದರೆ ಎನ್ನುವುದಕ್ಕಿಂತ ಇದ್ದಿದ್ದರೆ ಎನ್ನುವುದೇ ಸೂಕ್ತ, ನಾನು ನಿಮಗೆ ಹೇಗಾದರೂ ಹಣ ಹೊಂದಿಸಿ ಕೊಡುತ್ತೇನೆ. ಆಮೇಲಾಗುತ್ತದೆ?

ಕೈಗೆ ಹಣ ಬರುತ್ತಲೇ ನಿಮ್ಮ ನೆನಪಿನ ಶಕ್ತಿ ಮಾಸುತ್ತದೆ. ನನ್ನ ಮುಖ, ನನ್ನ ಹೆಸರು, ನಾನಿರುವ ಬೀದಿ, ನಾನು ನಿಮಗೆ ಕೊಟ್ಟ ಹಣ, ನೀವು ಹಿಂತಿರುಗಿಸಬೇಕಾದ ಅವಧಿ, ಎಲ್ಲವೂ ನಿಮ್ಮ ಸ್ಮೃತಿಯಿಂದ ಮಾಸಿಬಿಡುತ್ತದೆ. ಅವಧಿ ತೀರಿದ ನಂತರ ನಾನು ನಿಮಗೆ ದೂರವಾಣಿ ಕರೆ ಮಾಡಿದರೆ ನೀವು ಸಿಗುವುದೇ ಇಲ್ಲ. ಸಿಕ್ಕರೂ ಆ ಸಮಯ ಯಾವುದೋ ಮೀಟಿಂಗಿನದೋ, ಡ್ರೈವ್ ಮಾಡುತ್ತಿರುವುದೋ ಆಗಿರುತ್ತದೆ. ನೀವು ಸಲಹಿಸುತ್ತೀರಿ, ’ಅರ್ಧ ಗಂಟೆ ಬಿಟ್ಟು ಫೋನ್ ಮಾಡು, ಮಾತಾಡೋಣ,’ ಎಂದು. ಅದು ಬರೀ ಸುಳ್ಳು. ಮತ್ತೆ ಕರೆ ಮಾಡಿದರೆ ಅವನು ಕರೆ ಸ್ವೀಕರಿಸುವುದೇ ಇಲ್ಲ. ಅಥವಾ ಬೇಕೆಂತಲೇ ’ಕಟ್’ ಮಾಡುತ್ತಾನೆ. ನನಗದು ಗೊತ್ತಾಗುತ್ತದೆ. ಕೊನೆಗೆ ನಿಮ್ಮ ಗೆಳೆಯರ ಚರ ದೂರವಾಣಿಯಿಂದ ಪ್ರಯತ್ನಿಸುತ್ತೇನೆ.

ನಿಮ್ಮ ಮಗನೋ, ಮಗಳೋ, ಹೆಂಡತಿಯೋ ಫೊನ್ ತೆಗೆದುಕೊಳ್ಳುತ್ತಾರೆ. ’ಯಾರ್ರೀ ಅದು?’ ಗದರುವ ದನಿ.

ನಾನು ನನ್ನ ಕುಲ-ಗೋತ್ರಗಳನ್ನೆಲ್ಲಾ ಹೇಳಿಕೊಳ್ಳುತ್ತೇನೆ. ನೀವು ಹಿಂದುಗಡೆಯಿಂದ ’ಮನೆಲಿ ಇಲ್ಲ ಅಂತ ಹೇಳೋ,’ ಎಂದು ಪಿಸುಗುಟ್ಟುವುದು ನನಗೆ ಕೇಳಿಸುತ್ತದೆ. ನಾನು ಮತ್ತೂ ಗೋಗರೆದರೆ, ’ಏನು, ಹಣ ನೋಡದವನ ಹಾಗೆ ಆಡ್ತಾನೆ, ಒಂದಿಷ್ಟು ಸಾಲ ಕೊಟ್ಟಿರಬಹುದು, ನನ್ನನ್ನೇ ಕೊಂಡುಕೊಂಡವನಂತೆ ಮಾತನಾಡ್ತಾನೆ,’ ಎಂದು ನೀವು ನನಗೆ ಕೇಳುವಂತೆ ಇದ್ದರೂ, ಕೇಳದವನಂತೆ ನಟಿಸುತ್ತಾ ಹೇಳುತ್ತೀರಿ. ನನಗೆ ಪಿಚ್ಚೆನಿಸುತ್ತದೆ. ಆದನೇನು ಮಾಡುವುದು? ನನ್ನ ಹಣ.

ಕೊನೆಗೆ ನಾನೇ ದ್ರಾಬೆ ಮುಖ ಹೊತ್ತು ನಿಮ್ಮನ್ನು ನೋಡಲು ನಿಮ್ಮ ಮನೆಗೆ ಬರಬೇಕು.

ತಮಾಷೆಯೆಂದರೆ ನಾನು ಯಾವಾಗ ಹೋದರೂ ನೀವು ಮನೆಯಲ್ಲಿ ಇರೋಲ್ಲ. ನನ್ನ ಗ್ರಹಚಾರ ಚೆನ್ನಾಗಿದ್ದು ನೀವು ಸಿಕ್ಕಿರಿ ಅನ್ನಿ, ಆಗ ನಿಮ್ಮ ಮುಖಚರ್ಯೆ ಹೇಗಿರುತ್ತದೆ, ನಿಮ್ಮ ಮಾತುಗಳು ಹೇಗಿರುತ್ತವೆ ಎಂದರೆ ಮೃದು ಹೃದಯಿಗಳಾದ ನಾನು ಅಯ್ಯೋ ಅನ್ನಬೇಕು. ಘಟಾನುಘಟಿಗಳಾದ ನಟರ ಬಳಗಕ್ಕೆ ಹೋಲಿಸಿದರೆ ನಿಮಗೆ ಭಾರತರತ್ನವೋ, ನೊಬೆಲ್ಲೋ, ಅಥವಾ ಆಸ್ಕರ್ ಪ್ರಶಸ್ತಿಯೇ ಸಿಗಬೇಕು. ಅಂತಹ ಸಂದರ್ಭಗಳಲ್ಲಿಯೇ ಸಾಲ ಪಡೆದುಕೊಂಡವರಾದ ನಿಮ್ಮ ತಾಪತ್ರಯಗಳು ಹಲವಾರು ಪಟ್ಟು ಹೆಚ್ಚಾಗಿರುತ್ತವೆ. ’ಎರಡು ವಾರ ಬಿಟ್ಟು ಬನ್ನಿ ಸೂರಿ, ಗೆಳಯನೊಬ್ಬ ಎರಡು ಲಕ್ಷ ಕೊಡ್ತೀನಿ ಎಂದು ಹೇಳಿದ್ದಾನೆ. ನಿಮ್ಮ ಹಣ ಕೊಟ್ಟೇಬಿಡುತ್ತೀನಿ,’ ಎನ್ನುತ್ತೀರಿ. ಕೆಟ್ಟ ಶಬ್ದಗಳನ್ನು ಬದುಕಿನಿಂದ ಬಹಿಷ್ಕರಿಸಿದ ನಾನು ಕಠಿಣವಾಗಿ ಮಾತನಾಡಿದೆ, ಎನ್ನಿ. ಆಗ ನಿಮ್ಮಿಂದ ಬರುವ ಮಾತುಗಳು ಹೀಗಿರುತ್ತವೆ, ’ಕೊಡ್ತೀನ್ರೀ. ಕೊಡೋಲ್ಲ ಎಂದ್ನಾ? ಮನುಷ್ಯನಿಗೆ ಕಷ್ಟ ಬರುತ್ತೆ. ನಿಮಗೆ ಬರೋಲ್ಲವಾ? ಸ್ವಲ್ಪ ಟೈಮ್ ಕೊಡಿ. ಬಡ್ಡಿ ಸಹಿತ ತೀರಿಸ್ತೀನಿ.’ ’ಮುಖದ ಮೇಲೆ ಬಿಸಾಕ್ತೀನಿ,’ ಎಂದರೂ ತಪ್ಪಿಲ್ಲ.

ಈಗ ನಾನು ಬಾಲ ಮುದುರಿಕೊಂಡ ಶ್ವಾನ. ಕೃತಘ್ನ ಸಮಾಜವನ್ನು ಮನಸ್ಸಿನಲ್ಲಿಯೇ ದೂಷಿಸಿಕೊಳ್ಳುತ್ತೇನೆ. ನಂತರ ನನ್ನ ಕಷ್ಟಗಳ ಸರಣಿಯನ್ನು ಬಿಚ್ಚಿಡುತ್ತೇನೆ. ’ನೋಡ್ರೀ, ನನ್ನ ಮಗಳ ಮದುವೆ ಮಾಡಬೇಕು, ಮನೆ ಸಾಲ ಬಾಕಿ ಇದೆ, ಬ್ಯಾಂಕಿನವರ ತಗಾದೆ, ಅಮ್ಮನಿಗೆ ಆರೋಗ್ಯ ಸರಿಯಿಲ್ಲ,’ ಎಂದೆಲ್ಲಾ. ಅದೂ ಸುಳ್ಳಿನ ಸರಣಿ ಎಂಬುದು ನಿಮಗೂ ಗೊತ್ತು. ಆಗ ನಿಮ್ಮ ಮನ ಕರಗಿದರೆ ಅದರ ಕತೆಯೇ ಬೇರೆ. ಇಲ್ಲವಾದರೆ?

’ನಿಮ್ಮ ಋಣ ಯಾರಿಗ್ರೀ ಬೇಕು? ಇಂದಿನ ಜನ್ಮದಲ್ಲಿ ಅಲ್ಲದಿದ್ದರೆ ಮುಂದಿನ ಜನ್ಮದಲ್ಲಾದರೂ ತೀರಿಸ್ತೀನಿ. ನಿಮ್ಮ ಹಣ ಇರಿಸಿಕೊಂಡರೆ ನನ್ನ ಉದ್ಧಾರ ಆಗುತ್ತ?’ ಎಂದು ರೇಗುತ್ತೀರಿ. ಜೊತೆಗೊಂದು ಗಾದೆಯನ್ನೇ ಸೇರಿಸಬಹುದು, ’ಹಾಲು ಕುಡಿದ ಮಕ್ಕಳೇ ಸಾಯೋ ಕಾಲ ಇದು, ವಿಷ ಕುಡಿದ ಮಕ್ಕಳು ಬದುಕ್ತಾವಾ? ನನ್ನ ಹತ್ತಿರ ಇರೋವಾಗ ಹೇಳ್ತೀನಿ, ಬಂದು ತೆಗೆದುಕೊಂಡು ಹೋಗಿ.’ ಸಾಲ ತೆಗೆದುಕೊಂಡವನು. ಮುಂದಿನ ಜನ್ಮದಲ್ಲಿ ತಾನು ಖಂಡಿತವಾಗಿಯೂ ಮನುಷ್ಯನಾಗಿಯೇ ಹುಟ್ಟುತ್ತೇನೆಂಬ ನಂಬಿಕೆ ಅವನದು. ಸತ್ತ ನಂತರವೂ ತನ್ನ ಆಸ್ತಿ-ಪಾಸ್ತಿ-ಹಣಗಳನ್ನು ಮನುಷ್ಯ ತೆಗೆದುಕೊಂಡು, ಮುಂದಿನ ಜನ್ಮದಲ್ಲಿ ಖರ್ಚು ಮಾಡಬಹುದಾಗಿದ್ದರೆ ರಾಜಕಾರಣಿಗಳ ಬೆಲೆ ಮಾರುಕಟ್ಟೆಯಲ್ಲಿ ಇನ್ನಷ್ಟು ಹೆಚ್ಚುತ್ತಿತ್ತು.

ಇನ್ನು ನನಗೆ ದೇವರೇ ದಿಕ್ಕು, ಅನಾಥೋ ದೈವ ರಕ್ಷಕಃ ಎಂಬಂತೆ. ಹೆಚ್ಚೆಂದರೆ ನಾನು ನನ್ನ ಸ್ವತಃ ಹೆಂಡತಿಯ ಮೇಲೆ ರೇಗಬಹುದು, ಅಥವಾ ಸಂಜೆ ಎರಡು ಪೆಗ್ ಏರಿಸಿ ನಿಮ್ಮ ಕುಲವನ್ನೇ ದೂಷಿಸಬಹುದು. ಅಷ್ಟೆ. ಮೂರೂ ಬಿಟ್ಟವನಿಗೆ ಇದೇನು ಮಹಾ.

ಸಾಲ ಎಂದರೆ ಇಬ್ಬರು ವ್ಯಕ್ತಿಗಳ ನಡುವಿನ ಹಣಕಾಸು ವ್ಯವಹಾರ ಮಾತ್ರ ಎನ್ನಬೇಡಿ. ಚೀಟಿ ನಡೆಸುವವರು, ಬ್ಯಾಂಕಿನವರು ಬೇರೆ ರೀತಿಯಲ್ಲಿ ಅದೇ ಕೆಲಸವನ್ನು ಬೇರೆ ಬೇರೆ ಹೆಸರುಗಳಲ್ಲಿ ಮಾಡುತ್ತಾರೆ.

ಕೆಲವೇ ವರ್ಷಗಳ ಹಿಂದೆ, ನನಗೆ ಒಂದು ಸಾವಿರ ರೂಪಾಯಿಗಳ ಜರೂರಿತ್ತು. ಬ್ಯಾಂಕ್ ಒಂದಕ್ಕೆ ಹೋದೆ. ಮೇನೇಜರರ ಕ್ಯಾಬಿನ್‌ನ ಕದ ತಟ್ಟಿದೆ. ’ಏನು?’

’ಸರ್, ಸ್ವಲ್ಪ ಸಾಲ ಬೇಕಿತ್ತು,’ ಎಂದೆ. ಕುಳಿತುಕೊಂಡಿರಿ, ಎಂದರು.

ಆ ಕಡೆ ನೋಡಿದೆ, ಈ ಕಡೆ ನೋಡಿದೆ, ಗಡಿಯಾರ ಗಮನಿಸಿದೆ, ಕ್ಲರ್ಕಿಣಿಯರನ್ನು ಕಂಡೆ, ಮೊನ್ನೆಯ ಪತ್ರಿಕೆ ಮತ್ತೆ ಓದಿದೆ. ಈಗ ಬ್ಯಾಂಕಿಂಗ್ ಸೇವೆ ತುಂಬಾ ಸುಧಾರಿಸಿದೆ. ಪತ್ರಿಕೆ ಓದಿದರೆ ಶುಲ್ಕ, ಚೆಕ್ ಬುಕ್ ಕೊಂಡರೆ ಹಣ, ಚೆಕ್ ಡಿಸ್‌ಹಾನರ್ ಮಾಡಲೂ ಕಾಸು, ಮುಂದೊಂದು ದಿನ ಬ್ಯಾಂಕಿನೊಳಗೆ ಬಂದರೂ ಹಣ ಕೊಡಬೇಕಾಗಿ ಬರಬಹುದು.

ಅರ್ಧ ಗಂಟೆಯ ನಂತರ ಮೇನೇಜರರಿಂದ ಕರೆ ಬಂತು. ’ಎಷ್ಟು ಸಾಲ ಬೇಕಿತ್ತು?’ ಕೇಳಿದರು.

’ಬರೀ ಒಂದು ಸಾವಿರ ಸರ್,’ ಎಂದೆ.

ಅವರು ನನ್ನ ಬೋಳು ಕತ್ತನ್ನು ನೋಡಿದರು, ನನ್ನ ಕಳೆಯಿಲ್ಲದ ಮುಖ ನೋಡಿದರು. ನನ್ನ ಮಸುಕಾದ ಬಟ್ಟೆ ನೋಡಿದರು. ಇವನೊಬ್ಬ ವೇಸ್ಟ್ ಬಾಡಿ ಎಂದು ಆಗಲೇ ನಿರ್ಧರಿಸಿಬಿಟ್ಟಿದ್ದರು. ’ಏನ್ರೀ ಸೆಕ್ಯುರಿಟಿ ಕೊಡ್ತೀರಿ?’

ನನಗೆ ಅರ್ಥವಾಗಲಿಲ್ಲ. ಅವರೆಂದರು, ’ಅಲ್ಲರೀ, ಚಿನ್ನ, ಸೈಟು, ಮನೆ, ಇತ್ಯಾದಿ..’

’ಏನೂ ಇಲ್ಲ ಸರ್…’

’ಹಾಗಾದ್ರೆ ಹೇಗ್ರೀ ಸಾಲ ಕೊಡೋದು? ಹೋಗಲಿ ಯಾರದ್ದಾದ್ರೂ ಶ್ಯೂರಿಟಿ?’

ನನಗೆ ಯಾರು ಶ್ಯೂರಿಟಿ ಕೊಡ್ತಾರೆ? ಯಾರ ಮನೆಗಾದರೂ ಹೋದರೆ ಒಂದು ಲೋಟ ಕಾಫಿ ಕೂಡಾ ಕೊಡದ ಬಂಧುಗಳು. ತಪ್ಪದೇ ಕಿವಿ ತಮಟೆ ಹರಿದುಹೋಗುವಷ್ಟು ಉಪದೇಶಗಳನ್ನು ಉಚಿತವಾಗಿ ಕೊಡುತ್ತಾರೆ. ಆದರೂ ಪ್ರಯತ್ನಿಸುವ ನಂಬಿಕೆ ನನ್ನದು.

ಮೆನೇಜರು ಎಂಟು ಪುಟಗಳ ಫಾರ್ಮ್ ಒಂದನ್ನು ಕೊಟ್ಟರು. ’ಇದರ ಮೂರು ಪ್ರತಿ ಮಾಡಿಸಿ ತನ್ನಿ. ನೂರು ರೂಪಾಯಿಗಳ ಬಾಂಡ್ ಪೇಪರಿನ ಮೇಲೆ ಟೈಪ್ ಮಾಡಿಸಿ, ಬಾಂಡ್ ಪೇಪರು ಮೆಜೆಸ್ಟಿಕ್‌ನ ಬ್ಯಾಂಕಿನಲ್ಲಿ ಸಿಗುತ್ತದೆ. ಸ್ಟಾಕ್ ಇರೋದು ಕಡಿಮೆ, ಬೆಳಗ್ಗೆ ಮೂರು ಗಂಟೆಗೆ ಹೋಗಿ ಕ್ಯೂ ನಿಂತುಕೊಂಡು ಕೊಳ್ಳಿ…

’ನಂತರ ನಿಮ್ಮ ಶ್ಯೂರಿಟಿದಾರದಿಂದ, ಇಬ್ಬರು, ನಮ್ಮ ಬ್ಯಾಂಕಿನಲ್ಲಿ ತಲಾ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣ ಡಿಪಾಸಿಟ್ ಮಾಡಿರಬೇಕು, ಅವರಿಂದ ಸಹಿ ಮಾಡಿಸಿ, ನೋಟರಿಯಿಂದ ಅಪ್ರೂವ್ ಮಾಡಿ, ನಾಲ್ಕು ಪ್ರತಿ ಮಾಡಿಸಿ ತನ್ನಿ. ನಿಮ್ಮ ಮೂರು ಫೊಟೋಗಳು, ನಿಮ್ಮ ಶ್ಯೂರಿಟಿದಾರರ ತಲಾ ಮೂರು ಫೋಟೋಗಳು, ಇವನ್ನು ತನ್ನಿ. ಪ್ರೊಸೆಸಿಂಗ್ ಫೀ ಇನ್ನೂರು ರೂಪಾಯಿ ಬ್ಯಾಂಕ್ ಡಿಡಿ ಮಾಡಿ. ಐವತ್ತು ರೂಪಾಯಿಗಳ ಸ್ಟಾಂಪ್ ಅಂಟಿಸಿದ ಎನ್ವಲಪ್ ಇರಿಸಿ, ನೋಡೋಣ,’ ಎಂದರು. ಇಷ್ಟೆಲ್ಲಾ ಮಾಡಲು ಐದುನೂರು ರೂಪಾಯಿ ವೆಚ್ಚವಾಗುತ್ತದೆ. ’ಎನಿ ಡೌಟ್?’

ಅಷ್ಟರಲ್ಲಿ ನನ್ನ ತರಲೆ ಬುದ್ಧಿ ತಲೆ ಎತ್ತಿತು. ’ಸರ್, ನನ್ನ ಮನೆ ಕೆಲಸದವಳ ಫೊಟೊ ಅಂಟಿಸಿ ಸಹಿ ಮಾಡಿಸಲೇ?’ ಎಂದು ಕೇಳಿದೆ.

’ಯಾಕ್ರೀ, ಯಾಕ್ರೀ ನಿಮ್ಮ ಮನೆ ಕೆಲಸದವಳು?’ ಮೆನೇಜರರಿಗೆ ತಲೆ ಬಿಸಿಯಾಯಿತು.

’ಇನ್ನೇನೂ ಇಲ್ಲ ಸರ್, ಅವಳು ನೋಡೋಕೆ ಚೆನ್ನಾಗಿದ್ದಾಳೆ. ನಗುನಗುತ್ತಾ ಇರೋ ಫೊಟೋ ಅಂಟಿಸಿದರೆ ನನ್ನ ಸಾಲದ ಅರ್ಜಿಯ ಲುಕ್ಕೇ ಬೇರೆಯಾಗುತ್ತದೆ. ನನ್ನ ಅಪ್ಲಿಕೇಶನ್‌ಗೆ ಒಂದಿಷ್ಟು ಗ್ಲಾಮರ್ ಆಡ್ ಆಗುತ್ತದೆ.’

ಬೈಯಲು ಸಾಧ್ಯವಿಲ್ಲ, ಯಾಕೆಂದರೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಕೋಪ ಬಂದರೂ ನಾಜೂಕಾಗಿ ನಡೆದುಕೊಳ್ಳಬೇಕು. ಮೆನೇಜರ್ ಹೇಳಿದರು,  ’ಅರ್ಥ ಆಯ್ತಲ್ಲಾ? ಹಾಗೇನೇ ನಿಮ್ಮ ಬರ್ತ್ ಸರ್ಟಿಫಿಕೇಟು, ರೇಶನ್ ಕಾರ್ಡು, ಎಂಪ್ಲಾಯ್‌ಮೆಂಟ್ ಲೆಟರ್ ಇವುಗಳ ತಲಾ ಎರಡೆರಡು ಕಾಪಿ ಮಾಡಿ, ಗೆಜೆಟೆಡ್ ಆಫೀಸರ್ ಸಹಿ ಮಾಡಿಸಿ ಸಬ್‌ಮಿಟ್ ಮಾಡಿ.’

ನಾನು ಮತ್ತೆ ಮುಂದುವರಿಸಿದೆ, ’ಸರ್, ನೀವು ಜಯನಗರದಲ್ಲಿ ವಾಸ ಮಾಡೋದಾ?’ ಅನವಶ್ಯಕ ಪ್ರಶ್ನೆ ಎಸೆದೆ.

’ಇಲ್ಲವಲ್ಲ, ಯಾಕೆ?’

’ಏನಿಲ್ಲ, ಮೊನ್ನೆ ಮಾಧವನ್ ಪಾರ್ಕಿನಲ್ಲಿ ಯಾವುದೋ ಹೆಂಗಸಿನ ಜೊತೆ ನಿಮ್ಮನ್ನ ನೋಡಿದ ಹಾಗಿತ್ತು, ಸಂಜೆಯ ಹೊತ್ತು. ಅದೂ ಮೂಲೆಯಲ್ಲಿ, ಬಿದಿರು ಮರಗಳ ಕೆಳಗಿನ ಕತ್ತಲಲ್ಲಿ,’ ಎಂದೆ. ’ನಿಮ್ಮ ಕೈಲಿ ಕಡಲೆಕಾಯಿಯೋ, ಪಾಪ್‌ಕಾರ್ನೋ ಇತ್ತು.’

ಅವರ ಮುಖ ಕೆಂಪಾಯಿತು. ಬೇರೆಲ್ಲಿಯಾದರೂ ನಾನು ಹೀಗಂದಿದ್ದರೆ ಹೊಡೆದೇಬಿಡುತ್ತಿದ್ದರೋ ಏನೋ. ಏನು ಉತ್ತರ ಹೇಳಬೇಕೆಂದು ತೋರದೆ ಪರದಾಡುವಾಗ ನಾನೆಂದೆ, ’ಹೋಗಲಿ ಬಿಡಿ, ಯಾರು ಯಾರ ಜೊತೆಗೆ ಹೋದರೇನು, ಮಲಗಿದರೇನು, ನನಗೂ ಅದಕ್ಕೂ ಸಂಬಂಧವಿಲ್ಲ. ಅದನ್ನು ಕಟ್ಟಿಕೊಂಡು ನನಗೇನಾಬೇಕಿದೆ ಅಲ್ಲವೇ?’ ಎಂದು ಅವರನ್ನೇ ಹೇಳಿದೆ, ಪಾಪದ ಮನುಷ್ಯನ ಹಾಗೆ. ಅವರ ದೇಹದ ಶಾಖ ಎಷ್ಟು ಉಲ್ಬಣಿಸಿದೆ ಎಂಬುದು ಅವರ ಮುಖದಿಂದಲೇ ನನಗೆ ತಿಳಿಯುತ್ತಿತ್ತು. 

ನಾನು ಕೇಳಿದ ಸಾಲ ಸಾವಿರ ರೂಪಾಯಿ ಮಾತ್ರ. ಅದನ್ನು ಪಡೆಯಲು ಸುಮಾರು ಐದುನೂರು ರೂಪಾಯಿ ವೆಚ್ಚ ಮಾಡಬೇಕು. ನಾನು ಬುದ್ಧಿವಂತ, ಸಾಲ ಪಡೆಯಲೇ ಇಲ್ಲ. 

ಅದೇ ನಾನು ನನ್ನ ರೂಪ ಬದಲಿಸಿಕೊಂಡು, ಹಳೆಯ ಅಂಗಿಯ ಬದಲು ಹೊಸ ಹೊಳೆಯುವ ಸೂಟ್-ಟೈ ಧರಿಸಿ, ದುಬಾರಿ ಬೆಲೆಯ ಷೂ ತೊಟ್ಟು, ಕತ್ತಿನಲ್ಲಿ ಕಿಲೋ ಭಾರವಿರುವ ಸರ ಧರಿಸಿ, ಕಾರಲ್ಲಿ ಹೋಗಿದ್ದರೆ? ಪಟಪಟ ಅಂತ ವಿದೇಶೀ ಭಾಷೆಯಾದ ಇಂಗ್ಲಿಷಿನಲ್ಲಿ ಶುಭಾಶಯ ಹೇಳಿದ್ದರೆ? ಕೆಲವು ಲಕ್ಷ ಅಥವಾ ಕೆಲ ಕೋಟಿ ರೂಪಾಯಿ ಸಾಲ ಬೇಕು ಎಂದು ಕೇಳಿದ್ದರೆ?

ನನಗೆ ಅವರು ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳುತ್ತಿದ್ದರು. ಅವನು ನನಗೆ ಕಾಫಿಯನ್ನೊ, ಲಘು ಪಾನೀಯವನ್ನೋ ಕೊಡಿಸುತ್ತಿದ್ದರು. ಅವರೇ ತನ್ನ ಪಿಯೋನನನ್ನು ಕಳುಹಿಸಿ ಅರ್ಜಿಯ ಪ್ರತಿ ಮಾಡಿ ತರಿಸುತ್ತಿದ್ದರು, ಅವರೇ ಅರ್ಜಿಯನ್ನು ಭರ್ತಿಮಾಡುತ್ತಿದ್ದರು. ನನಗೆ ಸಹಿ ಮಾಡುವುದಷ್ಟೇ ಉಳಿದ ಕೆಲಸ. ನನಗೆ ಅಲ್ಲೇ ಚೆಕ್ ಕೊಟ್ಟು ಕಳುಹಿಸುತ್ತಿದ್ದರು.

ನಂಬಿಕೆ ಮುಖ್ಯ. ನಂತರ ನಾನು ಮರುಪಾವತಿಸಲಿ, ಬಿಡಲಿ, ಅದು ನಂತರದ ವಿಷಯ. 

ಮೊದಲಿನ ಘಟನೆಗೇ ಬರೋಣ, ನನ್ನ ಮುಖವೇ ಹಾಗೆ ಸ್ವಾಮಿ. ಯಾರೂ ನನ್ನನ್ನು ನಂಬುವುದಿಲ್ಲ. ಬಸ್ಸಿನಲ್ಲಿ ಪಿಕ್‌ಪಾಕೆಟ್ ಆದರೆ ಪೊಲೀಸರು ನನ್ನನ್ನೇ ಬಂಧಿಸುತ್ತಾರೆ. ಗುಂಪಿನಲ್ಲಿ ಯಾರೋ ಯಾರಿಗೋ ಬೈದರೆ ಅದು ನಾನೇ ಇರಬಹುದು ಎಂದು ಭಾವಿಸುತ್ತಾರೆ. ನನ್ನ ಮುಖ ನೋಡಿದವರು ಇವನು ಮೋಸಗಾರನೇ ಇರಬಹುದು ಎಂದು ಭಾವಿಸುತ್ತಾರೆ. ಬೀದಿಯ ನಾಯಿಗಳಿಗೆ ನನ್ನ ಮುಖ ಕಂಡರೆ ಆಗದು. ನನ್ನನ್ನು ಕಾಣುತ್ತಲೇ ಅಟ್ಟಿಸಿಕೊಂಡು ಬರುತ್ತವೆ. ಗಾಂಧಿಬಜಾರಿನ ಕಾಗೆಗಳಿಗೂ ನನ್ನ ಬೋಳು ತಲೆ ತುಂಬಾ ಇಷ್ಟ. ಅವು ಕೂಡಾ ನನ್ನ ತಲೆಯ ಮೇಲೇ ಹಿಕ್ಕೆ ಹಾಕುತ್ತವೆ. ನನ್ನ ದುರದೃಷ್ಟ!

ವಿಶೇಷದ ಊಟಕ್ಕೆ ಹೋದರೆ ನನಗೆ ಇಷ್ಟವಾದ ಕುಸುಂಬರಿ ಬೀಳುವುದು ಎರಡೇ ಕಾಳು, ಅದೇ ಪಕ್ಕದವನಿಗೆ ಒಂದು ಗುಪ್ಪೆ. ನನ್ನ ತಟ್ಟೆಗೆ ಬೀಳುವ ಹಪ್ಪಳ ಒಂದೋ ಅರ್ಧ ಬೆಂದಿರುತ್ತದೆ ಅಥವಾ ಅರ್ಧ ಕರಟಿರುತ್ತದೆ. ನನ್ನ ಎಲೆಗೆ ಬೀಳುವ ಜಿಲೇಬಿ ಒಂದು ಸುತ್ತು ಕಡಿಮೆಯೇ ಇರುತ್ತದೆ ಪಕ್ಕದವನಿಗಿಂತ. ನಾನು ವಾಹನದಲ್ಲಿ ಸಾಗುತ್ತಿದ್ದರೆ ಪೊಲೀಸರು ನನ್ನನ್ನೇ ಮೊದಲು ನಿಲ್ಲಿಸಿ ದಾಖಲೆ ಪರೀಕ್ಷೆ ಮಾಡುವುದು. ಅಂಗಡಿಗೆ ಹೋದರೆ ನನ್ನನ್ನು ಕೊನೆಗೇ ವಿಚಾರಿಸಿಕೊಳ್ಳುವುದು. ಇದು ನನ್ನ ಮುಖಲಕ್ಷಣದಿಂದಾಗುತ್ತಿದೆ ಎಂದು ಭಾವಿಸಿದ್ದೇನೆ. ಕ್ಷಮಿಸಿ, ಲಕ್ಷಣ ಅಲ್ಲ, ಅವಲಕ್ಷಣ.

’ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ,’ ಎಂಬಂತೆ ದುಡ್ಡಿದ್ದವರು ಇನ್ನಷ್ಟು ಧನಿಕರಾಗುವ, ಬಡವರು ಮತ್ತಷ್ಟು ನಿರ್ಗತಿಕರಾಗುವ ಕಾಲ ಇದು. ಹೀಗೆ ’ಅಪ್ಪಂಥವರಿಗೆ’ ಕೊಟ್ಟ ಸಾಲ ವಾಪಾಸು ಬರುತ್ತದೆಯೇ? ಇಲ್ಲ, ಇಲ್ಲವೇ ಇಲ್ಲ. ಕೋರ್ಟು-ಕಚೇರಿ, ನೋಟೀಸುಗಳು, ಹೀಗೆ ಹಲವಾರು ಪ್ರಕ್ರಿಯೆಗಳು ಮುಗಿಯುವಷ್ಟರಲ್ಲಿ ಹತ್ತಾರು ವರ್ಷ ಕಳೆದುಬಿಡುತ್ತದೆ. ಫಲಿತಾಂಶ ಆ ಇಲ್ಲದ ಭಗವಂತನಿಗೆ ಮಾತ್ರ ಗೊತ್ತು.

ಕೆಲ ಮೂರ್ಖರಿರುತ್ತಾರೆ, ಅವರು ತೆಗೆದುಕೊಂಡ ಸಾಲವನ್ನು ತೀರಿಸಬೇಕೆಂಬ ಪೊಳ್ಳು ವಾದ ಹೊಂದಿರುತ್ತಾರೆ- ಶತಮಾನದ ಹಿಂದಿನ ಕಾಲದವರು, ಅಂದಿನ ಮನಃಸ್ಥಿತಿಯವರು. ಅವರ ವಿಷಯ ಬೇಡ. ಅವರಿಗೆ ನಾನು ಅಡ್ವೈಸಿಸುತ್ತೇನೆ, ’ಕಾಲಕ್ಕೆ ತಕ್ಕಂತೆ ಬದಲಾಗು, ತಾಳಕ್ಕೆ ತಕ್ಕಂತೆ ಕುಣಿದಾಡು,’ ಎಂದು. 

ಸಾಲದ ಬಗ್ಗೆ ಬರೆದಷ್ಟೂ ಸಾಲದು. ಅದಕ್ಕೇ ಈ ಪದ ಟಂಕಿಸಿದ ಅನಾಮಧೇಯನನ್ನು ಸ್ಮರಿಸುತ್ತಾ, ’ಸಾಲಾಯ ತಸ್ಮೈ ನಮಃ’ ಎಂದು ಹೇಳಿ ಮುಗಿಸುತ್ತೇನೆ.

*****
(ಮುಗಿಯಿತು)
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x