ಪ್ರಶಸ್ತಿ ಅಂಕಣ

ಸಾರಿ ರೀ.. ಥ್ಯಾಂಕ್ಯೂ: ಪ್ರಶಸ್ತಿ ಅಂಕಣ


ತಪ್ಪು ಮಾಡದೋರು ಯಾರವ್ರೇ, ತಪ್ಪೇ ಮಾಡದವ್ರು ಯಾರವ್ರೇ ಅಂತ ನಮ್ಮ ಜಗ್ಗೇಶ್ ಮಠ ಫಿಲ್ಮಲ್ಲಿ ಕುಣಿದಿದ್ದು ಎಲ್ರಿಗೂ ಗೊತ್ತಿದ್ದೆ. ತಿಳಿದೋ, ತಿಳೀದೆನೋ ಏನಾರೂ ತಪ್ಪು ಮಾಡ್ತಾನೆ ಇರ್ತೀವಿ. ನಮಗೆ ಸರಿಯೆನಿಸಿದ್ದು ಯಾರಿಗೋ ತಪ್ಪೆನಿಸಿ ಅವರ ಮನ ನೋಯಿಸಿರ್ತೀವಿ. ಸುಮ್ಮನೇ ತಪ್ಪೆಣಿಸಿ ಮುಗ್ದ ಮನವನ್ನ ನೋಯಿಸಿರ್ತೀವಿ. ಯಾರೋ ತಪ್ಪು ತಿಳೀಬೋದೆಂದು ತಪ್ಪಾಗಿ ಭಾವಿಸಿ ಹೇಳಬೇಕಾದ ಮಾತು, ಮಾಡಬೇಕಾದ ಕೆಲಸ ಮಾಡದೇ ತಪ್ಪೆಸಗಿರ್ತೀವಿ. ಹೀಗೇ ಹೆಜ್ಜೆ ಹೆಜ್ಜೆಗೆ ತಪ್ಪು, ಕೂತಿದ್ದು-ನಿಂತಿದ್ದು ತಪ್ಪೆಂದು ಕಾಡಿ ಎಷ್ಟೋ ಜೀವಗಳ ಕಣ್ಣೀರಿಳಿಸಿರ್ತೀವಿ. ಕೆಲವೊಮ್ಮೆಯಂತೂ ನಾವು ಮಾಡಿದ್ದೆಲ್ಲಾ ತಪ್ಪೆಂದೇ ನಿರೂಪಿಸಲು ಕಾಯುತ್ತಿರುವ(?) ತಪ್ಪಪ್ಪರೇ ಹಾದಿಯಲ್ಲೆಲ್ಲಾ ಅಡ್ಡಸಿಗುತ್ತಾರೆ. ಅಪ್ಪಿ ತಪ್ಪಿ ಬಂದ ಈ ತಪ್ಪ ಹಾದಿಗೆ ಕೊನೆಯಿಲ್ಲವೇ ? ಇದೆ. ಸಾರಿ ರೀ..

ಲೇಖನವನ್ನು ತಪ್ಪಾಗಿ ಪ್ರಾರಂಭಿಸಿದ್ದಕ್ಕೆ ಸಾರಿ ಕೇಳ್ತಿದ್ದೀನಿ ಅಂದ್ಕೊಂಡ್ರಾ. ಹಾಗೇನಿಲ್ಲ. ನಿಮ್ಮನ್ನ ಗೊಂದಲಕ್ಕೀಡೇನಾದ್ರಾ ಮಾಡಿದ್ರೆ ಸಾರಿ ರೀ 🙂 ಹಾಂ. ಅಂದಂಗೆ ಮೊದಲನೇ ಪ್ಯಾರಾದ ಪ್ರಶ್ನೆಗಳಿಗುತ್ತರ ? ಸಾರಿ ರೀ 🙂 

ಸಾರೀ ರೀ ಅನ್ನೋದೆ ಉತ್ರ ಕಣ್ರಿ 🙂 ಒಂದು ಸಾರಿಯಿಂದ ಮಾಡಿದ ನೂರು ತಪ್ಪುಗಳು ಮುಚ್ಚಿಹೋಗದೇ ಇರಬಹುದು. ನಮ್ಮ ತಪ್ಪಿಂದ ಬೆಂದುಹೋದ ಮನಸ್ಸುಗಳು, ಶುರುವಾದ ಅಪನಂಬಿಕೆ, ಬೇಜಾರಿನ ಪ್ರವಾಹಗಳು ನಿಲ್ಲದೇ ಇರಬಹುದು. ಆದರೂ ನಿಲ್ಲದಾ ನೀರ ಝರಿಗೆ, ಬುಸುಗುಟ್ಟೋ ಸಿಟ್ಟ ಉರಿಗೆ ತಾತ್ಕಾಲಿಕ ತಣ್ಣೀರಂತೂ ಇದೇ ಸಾರಿ. ಗೆಳೆತನ ಅಂದ ಮೇಲೆ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತೆ. ಜಗಳಗಳಿಲ್ಲದ ಗೆಳೆಯರುಂಟೇ ಎಂದೂ ಹೇಳಬಹುದೇನೋ… ಆದರೆ ಈ ಜಗಳಗಳು ಜೀವ ತೆಗೆಯದೇ ಸ್ನೇಹವನ್ನ ಜತನ ಮಾಡೋದಕ್ಕೆ ಕಾರಣ ಸಾರಿ. ಈ ಸಾರಿಯ ಸುತ್ತೊಂದಿಷ್ಟು ನೆನಪುಗಳು ಈ ಬಾರಿ.

ಇಂಜಿನಿಯರಿಂಗ್ ಮೊದಲನೇ ವರ್ಷದ ಮೊದಲ ದಿನ. ಹೀಗೇ ಬಸ್ಸಿಗೆ ಕಾಯ್ತಿದ್ದ ಹೊಸಬರಿಬ್ರು. ಒಂದೇ ಕಾಲೇಜು ಅಂತ ಗೊತ್ತಾಯ್ತು. ಹಾಗೇ ಪರಿಚಯ ಆಯ್ತು. ನಿಧಾನವಾಗಿ ಮಾತು ಸ್ನೇಹಕ್ಕೆ ತಿರುಗಿತು. ಹೀಗೇ ದಿನಗರುಳ್ತಾ ಇದ್ವು. ಮಾತೇ ಮುತ್ತು, ಮಾತೇ ಮೃತ್ಯು ಅನ್ನೋ ಹಾಗೇ ಎತ್ತಲೋ ಶುರುವಾದ ಮಾತು ಇವರಿಬ್ರ ಮಧ್ಯೆ ತಿರುಗಿ ವೈಮನಸ್ಯ ಬೆಳೆಸಿತು. ಒಮ್ಮೆ ಬೆಳೆದ ಮುನಿಸು ಬೆಳೆಯುತ್ತಲೇ ಹೋಗಿ ಒಬ್ಬರ ಮುಖ ಕಂಡರಾಗದಷ್ಟು ದ್ವೇಷ ತಂತು. ಒಂದೇ ಬಸ್ಟಾಪಲ್ಲಿ ನಿಂತರೂ ಒಬ್ಬರನ್ನು ಕಂಡರಾಗದಂತ, ಮಾತನಾಡಿಸದಂತ ದ್ವೇಷ. ಎರಡು ಸೆಮ್ಮಾದ್ರೂ ಸರಿಯಾಗದ ದ್ವೇಷದಿಂದ ಸಾಧಿಸಿದಿದ್ದಾರೂ ಏನು ? ಇಬ್ಬರಿಗೂ ತಿಳಿದಿರಲಿಲ್ಲ. ಕೊನೆಗೆ ಒಬ್ಬ ಇನ್ನೊಬ್ಬನತ್ರ ಅಂದ. ಸಾರಿ ಕಣೋ.. ಏನೋ ಆದದ್ದಾಯ್ತು ಮರೆತುಬಿಡೋಣ. ಏನೋ ಸಿಟ್ಟಲ್ಲಿ ಅಂದುಬಿಟ್ಟೆ. ಅನ್ನಬಾರದಿತ್ತು, ಸಾರಿ. ಪ್ರೆಂಡ್ಸ್.. ? ಅಂತ ಕೈ ಚಾಚಿದ. ಮತ್ತೊಬ್ಬ ಸುಮ್ನೆ ಕೇಳ್ತಾ ನಿಂತಿದ್ದ. ಕೊನೆಗೆ ಅವ್ನಿಗೂ ತಡ್ಯೋಕೆ ಆಗ್ಲಿಲ್ಲ. ನಂದೂ ಸಾರಿ ಲೇ. ಇನ್ನಾದ್ರೂ ಪ್ರೆಂಡ್ಸಾಗಿರೋಣ ಅಂತ ಕೈ ಚಾಚಿದ. ಯಾವುದೋ ಫಿಲ್ಮಿನ ಕಥೆಯಾಗಿದ್ರೆ ಹಿನ್ನೆಲೆಯಲ್ಲಿ ಮ್ಯೂಸಿಕ್ಕು, ಅಪ್ಪುಗೆ, ಚಪ್ಪಾಳೆ ಎಲ್ಲಾ ಇರ್ತಿತ್ತೇನೋ.. ಆದರೆ ನಿಜ ಜೀವನ ಆಗಿದ್ರಿಂದ ಅವೇನೂ ಇರ್ಲಿಲ್ಲ. ಇದ್ದದ್ದು ಅವರಿಬ್ಬರ ಮೊಗದಲ್ಲಿನ ನಗೆ. ಕಳೆದುಕೊಂಡದ್ದು ಮರಳಿ ಸಿಕ್ಕ ಖುಷಿ. ಆಮೇಲೆ ಅವರ ಸ್ನೇಹ. ಹೊಂದಾಣಿಕೆ, ಕಾಂಪಿಟೇಷನ್ನುಗಳಲ್ಲಿ ಗೆಲ್ತಿದ್ದ ಜೋಡಿ. ಎಲ್ಲಾ ಕಾಲೇಜಿಗೆ ಫೇಮಸ್ಸಾಗಿದ್ದು ಬೇರೆ ವಿಚಾರ 🙂 ಇಲ್ಲಿ ತಪ್ಪು ಯಾರದಾಗಿತ್ತು ಅನ್ನೋದು ಮುಖ್ಯವಲ್ಲ. ತಪ್ಪನ್ನೇ ತಪ್ಪಾಗಿ ಕಾಣೋ ತಪ್ಪನ್ನ ಪುನರಾವರ್ತಿಸೋ ತಪ್ಪನ್ನು ಕೊನೆಗೂ ತಿದ್ದುಕೊಳ್ಳಲು ತಯಾರಾಗಿದ್ದು ಮತ್ತು ಹಾಲು ನೀರುಗಳಲ್ಲಿ ನೀರು ಬಿಟ್ಟು ಹಾಲು ಮಾತ್ರ ಕುಡಿಯೋ ಬಕ ಪಕ್ಷಿಯಂತೆ ಸರಿ-ತಪ್ಪುಗಳ ಸಮರದಲ್ಲಿ ತಪ್ಪುಗಳ ಮರೆತು ಸರಿಗೆ ಸಾಥ್ ನೀಡೋ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದು ಮುಖ್ಯ ಅಷ್ಟೇ. ಮುರಿದ ಮನಗಳ ಬೆಸೆದ ಫೆವಿಕಾಲ್ 'ಸಾರಿ'.

ಅಮ್ಮನ ಹುಟ್ಟಿದಬ್ಬ. ಇರುವಬ್ಬ ಮಗ ದೂರದೂರಲ್ಲಿ ಓದುತ್ತಿದ್ದಾನೆ. ದಿನವಿಡೀ ಕುಟುಂಬಕ್ಕಾಗಿ ದುಡಿಯೋ ಆ ಮಾತೆಯ ಹುಟ್ಟಿದಬ್ಬ ಆಕೆಯ ಹೆತ್ತವರಿಗೆ, ಒಡಹುಟ್ಟಿದ ಅಣ್ಣ-ತಮ್ಮಂದಿರಿಗೂ ಮರೆತುಹೋಗಿದೆ. ಯಾರದೋ ಕರೆಯ ನಿರೀಕ್ಷೆಯಲ್ಲಿ ಆಕೆ ಖಂಡಿತಾ ಇಲ್ಲ. ಆದರೆ ತನ್ನ ಸುಪುತ್ರನ ಕರೆಗಾಗಿ ಬೆಳಗಿನಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾಳೆ. ಬೆಳಗಾಯಿತು. ಮಧ್ಯಾಹ್ನ ಕಳೆಯಿತು. ಬರಬೇಕಾದ ಕರೆ ಬರಲಿಲ್ಲ. ಮಗನೋ ಕಾಲೇಜಿನ ಅದ್ಯಾವುದೋ ಅಸೈನುಮೆಂಟಿನ ತಲೆಬಿಸಿಯಲ್ಲಿ ತಲ್ಲೀನ. ಬೆಳಗಾಗೆದ್ದು ಕಾಲೇಜಿಗೆ ಹೋದರೆ ಬರುವುದು ಸಂಜೆ. ಇಡೀ ದಿನ ತನ್ನನ್ನೇ ತಾನು ಮರೆತಂತಿದ್ದ, ಅಸೈನುಮೆಂಟಿನಲ್ಲಿ ಮುಳುಗಿಹೋಗಿದ್ದ ಮಗನಿಗೆ ತಾನು ಮೊಬೈಲು ಮನೆಯಲ್ಲೇ ಮರೆತುಬಿಟ್ಟಿದ್ದೂ ಗೊತ್ತಾಗಿರಲಿಲ್ಲ. ಬಂದವ ನೋಡಿದರೆ ತಾಯಿಯ ಮೂರು ಮಿಸ್ ಕಾಲುಗಳು. ಅದೂ ಆಕೆ ಜೀವವನ್ನೆಲ್ಲಾ ಸಣ್ಣದಾಗಿ ಮಾಡಿಕೊಂಡು, ಮಾಡಲೋ ಬಿಡಲೋ ಎಂದು ಮಗನಿಗೆ ಮಾತ್ರ ಮಾಡಿದ ಕರೆಗಳು 🙁 ಇದೇನು ಪರಿವೆಯಿಲ್ಲದ ಆತ ಏನಮ್ಮಾ ಕಾಲ್ ಮಾಡಿದ್ದೆ, ಸಾರಿ ಮೊಬೈಲ್ ಬಿಟ್ಟು ಹೋಗಿದ್ದೆ ಮನೆಯಲ್ಲಿ ಅಂದ. ಇವತ್ತು ದಿನ ಎಷ್ಟಪ್ಪಾ ಅನ್ನಲೂ ಆತ ಕ್ಯಾಲೆಂಡರ್ ಕಡೆ ತಿರುಗೋದಕ್ಕೂ ಸರಿ ಆಯ್ತು. ಅವತ್ತು ತಾಯಿಯ ಬರ್ತಡೆ !!! ರಾತ್ರೆ ನಿದ್ದೆಗೆಟ್ಟು ರೂಢಿಯಿರದಿದ್ದರೂ ಮಧ್ಯರಾತ್ರಿಯವರೆಗೆ ಎದ್ದು ತನ್ನ ಹುಟ್ಟಿದಬ್ಬಕ್ಕೆ ಎಬ್ಬಿಸುತ್ತಿದ್ದ, ದೂರದೂರಿಗೆ ಬಂದಾಗ ಕಾಲ್ ಮಾಡುತ್ತಿದ್ದ ಹೆತ್ತಬ್ಬೆಯ ಹುಟ್ಟಿದಬ್ಬ ತನಗೆ ಮರೆತದ್ದಾದರೂ ಹೇಗೆಂದು ಭಾರೀ ಬೇಸರ. ಆ ಬೇಸರದಲ್ಲಿ ಮಾತುಗಳೇ ಹೊರಡುತ್ತಿಲ್ಲ. ಕಣ್ಣಲ್ಲಿ ತಾಳಲಾಗದಂತೆ ನೀರ ಧಾರೆ. ನೋವೆಂಬುದು ಮನದಾಳದಿಂದ ಹೊರಡಲೇಬೇಕಲ್ಲವೇ…

ನಿಂತ ಮಾತುಗಳಿಂದ ಹೊರಡದ ನೋವು ಅಶ್ರುಧಾರೆಯಾಗಿ ಹರಿಯುತ್ತಿತ್ತು.  ಅತ್ತಲಿಂದಲೂ ಯಾವುದೇ ಮಾತಿಲ್ಲ.ಬಹುಶಃ ಆಕೆಯೂ ಕೊನೆಗೆ ಮಗನ ಮಾತು ಕೇಳಿದ ಖುಷಿಯಲ್ಲಿ ಅಥವಾ ಯಾರೂ ಇಲ್ಲದಂತಾದ ತನ್ನ ಅನಾಥತನವನ್ನು ನೆನೆದೋ ಕಣ್ಣೀರಿಡುತ್ತಿರಬಹುದು. ಕೊನೆಗೆ ಆಕೆಗೂ ತನ್ನ ಮಗ ಅಳುತ್ತಿರುವುದು ತಿಳಿದಿರಬೇಕು. ಎಷ್ಟದಂರೂ ಹೆತ್ತ ಕರುಳಲ್ಲವೇ ? ಯಾಕೋ ಮಗನೇ, ಅಳುತ್ತಿದ್ದೀಯ. ನೀನು ವಿಷ್ ಮಾಡದಿದ್ದರೂ ನಿನ್ನ ವಿಷ್ ನನಗೆ ಇದ್ದೇ ಇರುತ್ತೆ ಅಂತ ಗೊತ್ತಿತ್ತು ಕಣೋ ಅನ್ನುತ್ತಿರುವಂತೆಯೇ ಸಾರಿ ಅಮ್ಮಾ ಅಂದ.. ಮುಂದೇನು ಮಾತುಗಳೇ ಹೊರಡದೇ ಅಳುವೇ ದನಿಯಾಯ್ತು. ಅತ್ತೂ ಅತ್ತೂ ಮನ ಹಗುರಾದ ಮೇಲೆ ತಾಯಿಯೇ ಸಾಂತ್ವನಕ್ಕೆ ಮೊದಲಾದರು. ಕಾಲ್ ಮಾಡಿ ಅಳುಸ್ಬಿಟ್ನಲ್ಲೋ ನಿನ್ನ.. ಅಳ್ಬೇಡೋ, ಸಮಾಧಾನ ಮಾಡ್ಕಳೋ ಅಂದ್ಳು.. ನನಗೆ ನೀನು, ನಿನಗೆ ನಾನು ಅಲ್ವೇನೋ ಮಗನೇ ನೀನು ಅತ್ತರೆ ನನಗೂ ಅಳುಬರುತ್ತೆ ಕಣೋ. ಎಲ್ಲಿ ಸ್ವಲ್ಪ ನಗು ನೋಡೋಣ ಅಂದ್ರು.. ಅಂತೂ ಮಾತಿಗೆ ಶುರುವಿಟ್ಟ ಮಗನಿಂದ ವಾತಾವರಣ ತಿಳಿಯಾಯ್ತು..  ಇಲ್ಲಿ ತಪ್ಪು ಯಾರದೆಂಬುದು ಮುಖ್ಯವಲ್ಲ. ವಯಸ್ಸಾದವರಿಗೆ ತಪ್ಪು ಮಗನದಂತೆಯೂ, ಹುಡುಗರಿಗೆ ಸರಿಯಾಗಿ ನೆನೆಪಿಸದೇ ಹಾಳಾದ ಮೊಬೈಲ್ ಅಲರಾಮಿನ ತಪ್ಪಾಗಿಯೋ, ತಂತ್ರಜ್ನಾನ ಸರಿಯಾಗಿ ಬಳಸದ ಹುಡುಗನ ಪೆದ್ದುತನದಂತೆಯೋ, ಇನ್ಯಾರಿಗೋ ವಿಧಿಯದ್ದೋ(?) ತಪ್ಪಾಗಿ ಕಾಣಬಹುದು.. ಆದರೆ ಆ ತಪ್ಪುಗಳ ಸರಿಪಡಿಸೋ ಭೂಮಿಕೆಗೆ ನಾಂದಿ ಹಾಡಿದ್ದು ಎರಡು ಸಾರಿಗಳೆಂದು ಒಪ್ಪಲೇಬೇಕು.

ಗೆಳೆಯನಿಗೆ ಆಫೀಸಲ್ಲಿ ಸಂಜೆ ಲೇಟಾಗಿ ಹೋಗಿದೆ. ಸಂಜೆ ಹೋಗಿ ರಾತ್ರೆ ಒಂಭತ್ತೂವರೆಯಾಗಿದೆ. ಹೇ ಊಟ ತಂದಿಡೋ ಅಂತ ರೂಂ ಮೇಟಿಗೆ ಫೋನ್ ಮಾಡಿದ್ದಾನೆ. ಆದರೆ ಆ ರೂಂ ಮೇಟು ಚಿತ್ರವೊಂದನ್ನು ನೊಡೋದ್ರಲ್ಲಿ ಬಿಸಿ. ಆಮೇಲೆ ಎಚ್ಚೆತ್ತು  ನೋಡೋದ್ರೊಳಗೆ ಲೇಟಾಗಿ ಬಿಟ್ಟಿದೆ. ಊಟ ಖಾಲಿ 🙁 ಇದ್ಯಾವ್ದೂ ಅರಿವಿಲ್ಲದ ಫೋನ್ ಮಾಡಿದ ಗೆಳೆಯ ಇನ್ನೂ ಅರ್ಧ ಘಂಟೆ ಲೇಟಾಗಿ ಹಸಿದು ರೂಮಿಗೆ ಬಂದರೆ ರೂಂಮೇಟಿನ ಪೆಚ್ಚು ಮೊರೆಯ ಸ್ವಾಗತ. ಊಟ ತೆಗೆದಿಡೋಕೆ ಲೇಟಾಗಿ ಹೇಳಿದ್ದು ಆತನ ತಪ್ಪೇ ಅಥವಾ ಊಟ ಖಾಲಿ ಆಗಿರೋದ ಬಗ್ಗೆ ತಿಳಿಸದ್ದು ಈತನ ತಪ್ಪೇ ಅಥವಾ ಬೇಗ ಊಟ ಖಾಲಿ ಆಗಿದ್ದು ಪೀಜಿ ಓನರನ ತಪ್ಪೇ.. ? ಗೊತ್ತಿಲ್ಲ. ಆದರೆ ಒಂದು ಹೊಟ್ಟೆ ಹಸಿದಿದ್ದು ಅದರಿಂದ ಮತ್ತೊಂದಕ್ಕೆ ಅಪರಾಧಿ ಪ್ರಜ್ನೆ ಕಾಡಿದ್ದೆಂತೂ ಸತ್ಯ. ಹೇ ಸಾರಿ ಕಣೋ, ನಾ ಹ್ಫ್ಗೋ ಹೊತ್ತಿಗೆ ಖಾಲಿಯಾಗಿತ್ತು  ಎಂದ ಈತ. ಆತನೂ ತೀರ ಮನಸಿಗೆ ಹಚ್ಚಿಕೊಳ್ಳದೇ ಹೋಗ್ಲಿ ಬಿಡೋ ಎಂದು ಹೊರಗಡೆ ಊಟಕ್ಕೆ ಹೋದ. ಆತನ ಊಟವಾದ ನಂತರ ಮತ್ತೊಮ್ಮೆ ಸಾರಿ ಸಮಾರಾಧನೆ ಆಗೋ ಹೊತ್ತಿಗೆ ಪರಿಸ್ಥಿತಿ ತಿಳಿಯಾಗಿತ್ತು 🙂

ಒಂದು ಸಾರಿಯಿಂದ ವರ್ಷಗಳ ಬಾಂಧವ್ಯ ಮತ್ತೆ ಬೆಸೆಯುತ್ತೆ ಅಂತಾದ್ರೆ, ಸಾವಿರ ತಲೆನೋವುಗಳು ಕಮ್ಮಿಯಾಗುತ್ತೆ ಅಂದ್ರೆ ಒಂದು ಸಾರಿ ಕೇಳೋದ್ರಲಿ ತಪ್ಪೇನಿದೆ? ಏನೂ ಇಲ್ಲ ಅಲ್ವೇ ಅಂತ ಹಿರಿಯರೊಬ್ರು ಹೇಳ್ತಾ ಇದ್ರು. ಬರೀ ಸಾರಿಗಳ ಕಥೆಯನ್ನೇ ಹೇಳಿ ಕಣ್ಣೀರು ತರೆಸಿದ್ನಾ. ಸಾರಿ ರೀ ಮತ್ತೆ 🙂 ಮುಗಿಸೋ ಮುನ್ನ ಸ್ವಲ್ಪ ಖುಷಿಯನ್ನೂ ಹಂಚೋಣ. ಸಾರಿಯ ಒಡನಾಡಿ ಅಂತ್ಲೇ ಹೇಳ್ಬಹುದಾದ ಮತ್ತೊಂದು ಪದ ಥ್ಯಾಂಕ್ಯೂ. ಆಂಗ್ಲ ದ್ವೇಷಿಗಳೇ, ಕ್ಷಮಿಸಿ. ..ಧನ್ಯವಾದ.  ಈ ಕ್ಷಮೆ, ಧನ್ಯವಾದಗಳನ್ನು ಹೇಳೋ ಸಮಯದಲ್ಲಿ ಹೇಳಿಬಿಡಬೇಕಂತೆ. ತಡವಾದರೆ ಎರಡಕ್ಕೂ ಬೆಲೆಯಿರಲ್ಲ. ಒಂದು ಸಾರಿ, ಥ್ಯಾಂಕ್ಯೂಗಳಿಂದ ನಾವು ಕಳೆದುಕೊಳ್ಳೋದೇನಿದೆ ?  ಆಫೀಸಿಗೆ ಹೋಗ್ತಾ ಬಾಗ್ಲು ತೆಗ್ದು ಒಳಗೆ ಕಳಿಸೋ, ಐಡಿ ಚೆಕ್ ಮಾಡೋ ಸೆಕ್ಯುರಿಟಿ ಅವ್ನಿಗೆ, ಬ್ಯಾಗ್ ಸ್ಕ್ಯಾನ್ ಮಾಡೋ ಎಕ್ಸ್ ರೇ ಮಿಷನ್ ನಿರ್ವಾಹಕನಿಗೆ ಒಂದು ಥ್ಯಾಂಕ್ಯೂ ಹೇಳಿ ಮುಂದೆ ಹೋಗಿ. ಅವರ ಮುಖ ಎಷ್ಟು ಅರಳುತ್ತೆ ನೋಡಿ ಅಂತಿದ್ರು. ಎಷ್ಟು ಸತ್ಯ ಅಲ್ವಾ. ಜೀವನದಲ್ಲಿ ದುಃಖಗಳನ್ನು ಹಂಚ್ತಾನೆ ಇರ್ತೀವಿ. ಸಾಧ್ಯವಾದಷ್ಟೂ ಖುಷಿ ಹಂಚೋಣ ಅಲ್ವಾ ? ಹೊದ್ದು ಮಲಗಿ ಕಾಲೇಜಿಗೆ ಲೇಟಾಗೋದನ್ನ ತಪ್ಪಿಸಿದ ಅಮ್ಮನಿಗೆ , ಒಂದು ದಿನವೂ ಲೇಟಾಗದಂತೆ ಕಾಲೇಜ್ ಫೀಜ್ ಕಟ್ಟೋ ಅಪ್ಪನಿಗೆ ಸುಮ್ನೆ ಒಂದು ಥ್ಯಾಂಕ್ಸ್ ಹೇಳಿ ಅಂತ.. ಅವೆಲ್ಲಾ ಅವರವರ ಕರ್ತವ್ಯ , ಒಂದು ಧನ್ಯವಾದ ಹೇಳಿದಾಕ್ಷಣ ನಮ್ಮ ಕರ್ತವ್ಯಗಳು ಮುಗಿದುಬಿಡುತ್ತೆ ಅಂತಲ್ಲ. ಆದರೆ ಆ ಕ್ಷಣಕ್ಕೆ ಅವರ ಕಣ್ಣುಗಳಲ್ಲಿ ಮಿನುಗೋ ನಲಿವಿದ್ಯಲ್ಲಾ.. ಅದು ನಿಜ್ವಾಗ್ಲೂ ಸೂಪರ್ ಕಣ್ರಿ. ಈ ತರ ಸಾರಿ , ಥ್ಯಾಂಕ್ಯೂಗಳ ಸಾವಿರ ನೆನಪುಗಳು ನಿಮ್ಮಲ್ಲೂ ಸಾಕಷ್ಟಿರಬಹುದು. ಅದನ್ನೆಲ್ಲಾ ನೆನೆಸಿ ನಗು ತರಿಸಿದ್ದರೆ , ಲೇಖನ ಹಿಡಿಸಿದ್ದರೆ ಒಂದು ಥ್ಯಾಂಕ್ಯೂ.. ಬದಲಿಗೆ ಮರೆಯಾಗಿದ್ದ ನೆನೆಪುಗಳ ಕಾಡಿ ರಾಡಿ ಎಬ್ಬಿಸಿದ್ದರೆ ಮತ್ತೊಂದು ಸಾರಿ ಸಾರಿ. 

ಶುಭದಿನ.  

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಸಾರಿ ರೀ.. ಥ್ಯಾಂಕ್ಯೂ: ಪ್ರಶಸ್ತಿ ಅಂಕಣ

 1. ಸಾರಿ…ರೀ….ನಿಮ್ಮ ಲೇಖನ ಸಖತ್ತಾಗಿದೆ ಕಣ್ರೀ !!!

 2. ಲೇಖನ ಚೆನ್ನಾಗಿದೆ .
  ಸಾರಿ..ಥ್ಯಾಂಕ್ಯೂ ಎಂಬ ಪದಗಳು ಕಲ್ಲು ಬಂಡೆಯಂತ ಸಮಸ್ಯೆಗಳನ್ನೂ ಕರಗಿಸಿಬಿಡುತ್ತವೆ.

  ಸಾರಿ ಎನ್ನುವುದರಿಂದ ಏನೂ ಕಳೆದುಹೋಗುವುದಿಲ್ಲ, ನಮ್ಮ 'ಅಹಂ'  ನ ಹೊರತಾಗಿ. 

 3. ಲೇಖನ ಮತ್ತು ನಿಮ್ಮ ಚಿಂತನೆಗಳು ತುಂಬ ಚೆನ್ನಾಗಿ ಮೂಡಿ ಬಂದಿವೆ. ಮಾನವೀಯತೆಯನ್ನೇ ಮರೆತಿರುವ ಈ ಕಾಲದಲ್ಲಿ ಕೊನೆ ಪಕ್ಷ ಕ್ಷಮೆ- ಧನ್ಯವಾದಗಳ ಬಳಕೆಯಿಂದಾಗಿಯಾದರೂ ಮನುಷ್ಯತ್ವ ಜಾಗೃತವಾಗಬಹುದೆನೋ? ನಿಮ್ಮೀ ಪ್ರಯತ್ನಕ್ಕೆ ಧನ್ಯವಾದಗಳು. ಇನ್ನಷ್ಟು ಧನಾತ್ಮಕ ಚಿಂತನೆಗಳನ್ನು ಬಿಂಬಿಸುವಂತಹ ಲೇಖನಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ. ಧನ್ಯವಾದಗಳು  ಸರ್ 🙂

 4. ತುಂಬಾ ಧನ್ಯವಾದಗಳು ದಿವ್ಯಾ ಅವರೇ 🙂 ನಿಮ್ಮ ಮೆಚ್ಚುಗೆಯ ಮಾತುಗಳಿಂದ ತುಂಬಾ ಖುಷಿಯಾಯಿತು.ನೀವೆಂದ ನಿಟ್ಟಿನಲ್ಲೊ ಪ್ರಯತ್ನಿಸುತ್ತೇನೆ.
  ಸಾರ್ ಎನ್ನಬೇಡಿ.. ಪ್ರಶಸ್ತಿ ಅನ್ನಿ ಸಾಕು.. 🙂 🙂
   

 5. ಪ್ರಶಸ್ತಿ.. ನಿಮ್ಮ ಮಾತು ಅಕ್ಷರಶಃ ಸತ್ಯ..!
  ಕ್ಷೌರಿಕನಿಗೆ ನಿಮ್ಮ ಶೇವಿಂಗ್ ಆದ ಮೇಲೆ ತ್ಯಾಂಕ್ಸ್ ಹೇಳಿದ್ದೀರಾ ಯಾವತ್ತಾದರೂ?
  ಇಂತ ಹಲವಿವೆ.. ಪ್ರಯತ್ನಿಸಿ ನೋಡಿ ಒಮ್ಮೆ.. ಜೀವನವನ್ನ ಆನಂದಿಸಿ…! 🙂
  ಸಂತೋಷ, ಒಲವಿನೊಂದಿಗೆ,
  ಸತ್ಯ..,!

 6. ಹೌದು ನಮ್ಮ ಅಹಂ ಬಿಟ್ಟು ಒಂದು ಹೆಜ್ಜೆ ಕೆಳಗೆ ಬಂದು ಸಾರಿ ಕೇಳಿದ್ರೆ ಎಷ್ಟೋ ಸಂಭಂದಗಳು ಸರಿ ಆಗುತ್ತೆ, ಎಷ್ಟೋ ತಲೆಬಿಸಿಗಳು ಕಡಿಮೆಯಾಗುತ್ತೆ ಅಂತ ಆದ್ರೆ ಕಂಡಿತಾ ಸಾರಿ ಕೇಳೋದ್ರಲ್ಲೂ ಒಂದು ಕುಶಿ ಇದೆ.

Leave a Reply

Your email address will not be published. Required fields are marked *