ಸಾಮಾನ್ಯ ತುಲಾಯಂತ್ರವು, ಅಸಾಮಾನ್ಯ ದ್ರವ್ಯರಾಶಿಯು !: ಕೆ ಟಿ ಸೋಮಶೇಖರ ಹೊಳಲ್ಕೆರೆ.

   somashekar-k-t

ಜಗತ್ತಿನಲ್ಲಿ ಕೈಗೆಟುಕುವ ಎಲ್ಲಾ ವಸ್ತುಗಳನ್ನು ಅಳೆದು ಬೆಲೆ ಕಟ್ಟುತ್ತಿದ್ದೇವೆ. ಪ್ರತಿಯೊಂದು ವಸ್ತುವನ್ನು  ಅಳೆಯಲು ಆ ವಸ್ತುವಿನ ದ್ರವ್ಯರಾಶಿಯ ಸ್ವರೂಪದ ಆಧಾರದ ಮೇಲೆ ಅಳೆಯುವ ಸಾಧನಗಳನ್ನು ರೂಪಿಸಿದ್ದೇವೆ. ಇನ್ನೂ ಕೆಲವು ಸಾಧನಗಳನ್ನು ರೂಪಿಸುತ್ತಿದ್ದೇವೆ.

ಎಲ್ಲಾ ತುಲಾ ಯಂತ್ರಗಳು ಅದರದೇ ಆದ ದ್ರವ್ಯರಾಶಿಯನ್ನು ಅಳತೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಅದರ ಸಾಮರ್ಥ್ಯಕ್ಕಿಂಥಾ ಹೆಚ್ಚು ದೊಡ್ಡದಾದ ವಸ್ತುವನ್ನು ಅವು ಅಳೆಯಲಾರವು. ಇದರಿಂದ ತಿಳಿಯುವುದೇನೆಂದರೆ ಎಲ್ಲಾ ತುಲಾ ಯಂತ್ರಗಳು ಎಲ್ಲಾ ಗಾತ್ರ, ತೂಕದ ದ್ರವ್ಯರಾಶಿಯನ್ನು ಅಳೆಯುವ ಸಾಮರ್ಥ್ಯ ಹೊಂದಿರುವುದಿಲ್ಲಾ, ಅವಕ್ಕೂ ಮಿತಿ ಇದೆ. ಅವುಗಳ ಮಿತಿಯಲ್ಲೇ ಅವು ಅಳೆಯಬೇಕಿದೆ ಎಂಬುದು.

ಅಗಾಧವಿರುವ ಅವಿಚ್ಛಿನ್ನವಾದ ದ್ರವ್ಯರಾಶಿಯನ್ನು  ಸಣ್ಣ ತುಂಡುಗಳಾಗಿಸಿ ಅಳೆಯಬಹುದಾದರೂ ಪೂರ್ಣತ್ವಕ್ಕೆ ದಕ್ಕೆ ಬರುವುದರಿಂದ ತೂಕ ಕಡಿಮೆಯಾಗುತ್ತದೆ. ಇರುವ ತೂಕಕ್ಕಿಂತ ತೂಕ ಹೆಚ್ಚು ಮಾಡುವುದಾಗಲಿ, ಕಡಿಮೆ ಮಾಡುವುದಾಗಲಿ ಅನ್ಯಾಯವಾಗುತ್ತದೆ. ಇಂದು ಬಹಳ ಕಡೆ ಹೀಗೇ ಆಗುತ್ತಿರುವುದರಿಂದ, ಜನರು ಅನ್ಯಾಯಕ್ಕೆ ಒಳಗಾಗುವಂತಾಗಿದೆ. ಆ ದ್ರವ್ಯರಾಶಿಯನ್ನು ಒಮ್ಮೆಗೆ ತೂಗಬಲ್ಲ ತುಲಾಯಂತ್ರದಿಂದ ಅಳತೆ ಮಾಡಿ, ಸರಿಯಾಗಿ ತೂಗಿ ಬೆಲೆ ಕಟ್ಟಬಹುದಾಗಿದೆ.  ಆದರೆ ಕೆಲವು ದ್ರವ್ಯರಾಶಿಗಳು ಸಿದ್ದವಿರುವ ಯಾವ ತುಲಾ ಯಂತ್ರಗಳ ಸಾಮರ್ಥ್ಯಕ್ಕೆ   ನಿಲುಕುವುದಿಲ್ಲ. ಅಂಥವುಗಳನ್ನು  ಸಾಮರ್ಥ್ಯವಿಲ್ಲದ ತುಲಾ ಯಂತ್ರಗಳು ಅಳತೆ ಮಾಡಲು ಹೋಗುವುದೆಂದರೇನು? ಆ ದ್ರವ್ಯಕ್ಕೆ ಅದು ಅವಮಾನವಲ್ಲವೇ?

ಇಂದು ನಮ್ಮ ಮಹಾಕಾವ್ಯಗಳನ್ನು, ಮಹಾ ಕೃತಿಗಳನ್ನು, ಮಹಾ ಪುರುಷರನ್ನು, ಐತಿಹಾಸಿಕ ಪ್ರಸಿದ್ದರನ್ನು, ಮಹಾ ವ್ಯಕ್ತಿಗಳನ್ನು, ನಾಯಕರನ್ನು, ಹಿರಿಯರನ್ನು ಮನಬಂದಂತೆ ಅರ್ಥೈಸುವುದು, ಟೀಕಿಸುವುದು ನಿರಂತರವಾಗಿ ನಡೆಯುತ್ತಿದೆ. ಅದರಿಂದ ಸಮಾಜದ ನೆಮ್ಮದಿಗೆ ಭಂಗವಾಗುತ್ತಿದೆ. ಕಿರಿಯರಿಗೆ ತಪ್ಪು ಸಂದೇಶ ಹೋಗುತ್ತದೆ. ಯಾವದೇ ಕೃತಿ, ವ್ಯಕ್ತಿ ದೋಷ ರಹಿತವಾಗಿರಲು ಸಾಧ್ಯವಿಲ್ಲ!  ಸಣ್ಣ ಪುಟ್ಟ ದೋಷಗಳು ಸಾಮಾನ್ಯ. ಅದನ್ನೇ ದೊಡ್ಡದು ಮಾಡಿ ಬೊಬ್ಬೆ ಹಾಕುವುದು ಅಸಾಧು! ಮಹಾನ್ ವ್ಯಕ್ತಿಗಳನ್ನು, ಕೃತಿಗಳನ್ನು ವಿಮರ್ಶಿಸುವಾಗ ಅವುಗಳನ್ನು ಬಿಡಿಯಾಗಿ ನೋಡದೆ,  ಇಡಿಯಾಗಿ ನೋಡಬೇಕಿದೆ.

ಮಹಾನ್ ಕೃತಿಗಳನ್ನು, ವ್ಯಕ್ತಿಗಳನ್ನು ಬೆಲೆಕಟ್ಟಬೇಕಾದಾಗ ಎಲ್ಲವನ್ನೂ, ಎಲ್ಲರನ್ನೂ ಲಘುವಾಗಿ ಭಾವಿಸಲಾಗುತ್ತಿದೆ. ತಕ್ಷಣ ಎಲ್ಲದಕ್ಕೂ  ಪ್ರತಿಕ್ರಿಯಿಸುತ್ತಾರೆ. ನಮಗೆ ಬೆಲೆ ಬರಬೇಕೆಂದರೆ, ನಮ್ಮ ಪ್ರತಿಕ್ರಿಯೆಗಳಿಗೆ  ಗುರುತ್ವ ಇರಬೇಕು. ಸ್ವಲ್ಪ ನಿಧಾನಿಸಿ, ಸಮಗ್ರ ದೃಷ್ಟಿಯಿಂದ ಪ್ರತಿಕ್ರೀಯಿಸಿದರೆ ಸರಿಯಾಗಿ ಬೆಲೆಕಟ್ಟಲು ಸಾಧ್ಯವಾಗಬಹುದೇನೋ! ವಿವೇಚನೆಯಿಂದ ಪ್ರತಿಕ್ರೀಯಿಸಿದರೆ ಗುರುತ್ವ ಲಭಿಸುತ್ತದೆ.

ಪ್ರತಿಯೊಂದು ಕೃತಿಯೂ ಕಾಲ, ಸ್ಥಳ, ಸಮಾಜಕ್ಕೆ ಬದ್ಧವಾಗಿರುತ್ತದೆ.  ಭದ್ದವಾಗಿರಬೇಕು.  ಆಯಾ ಕಾಲದ ನಂಬಿಕೆಗಳು, ಆಚಾರಗಳು, ಮೌಲ್ಯಗಳು ಆಯಾ ಕಾಲದ ಕೃತಿಗಳಲ್ಲಿ ಅಡಕವಾಗಿರುತ್ತವೆ. ಬದಲಾವಣೆ ಜಗದ ನಿಯಮ. ನಾವು ಯಾವುದೇ ಕೃತಿಯನ್ನು ಬೆಲೆ ಕಟ್ಟುವಾಗ ಅವುಗಳ ಬದಲಾದ ಆಚಾರ, ವಿಚಾರ, ಸಂಪ್ರದಾಯ, ಮೌಲ್ಯಗಳ, ಯುಗಧರ್ಮದ ಹಿನ್ನೆಲೆಯಲ್ಲಿ ಬೆಲೆ ಕಟ್ಟಿದರೆ ಅವುಗಳಿಗೆ ನ್ಯಾಯ ದೊರಕಿಸಿದಂತಾಗುತ್ತದೆ.

ಹಾಗೇ ವಸ್ತುಗಳ ತೂಕ ಸಹ ಋತುಗಳಿಗೆ ಅನುಗುಣವಾಗಿ ಮತ್ತು ಸ್ಥಳಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಭೂಮಿಯ ಮೇಲೆ 100 kg ತೂಕ ಹೊಂದಿರುವ ವ್ಯಕ್ತಿ ಚಂದ್ರನ ಮೇಲೆ 16.67 kg ತೂಕ ಹೊಂದಿರುತ್ತಾನೆ. ಅಷ್ಟೇ ಏಕೆ ಈ ಭೂಮಿಯ ಬೇರೆ ಬೇರೆ ಭಾಗಗಳಲ್ಲಿ ಭೂಮಿಯ ಗುರುತ್ವಾಕರ್ಷಣ ಬಲ ಒಂದೇ ರೀತಿ ಇಲ್ಲದಿರುವುದರಿಂದ ಸ್ಥಳದಿಂದ ಸ್ಥಳಕ್ಕೆ ವಸ್ತುಗಳ ತೂಕದಲ್ಲಿ ವ್ಯತ್ಯಾಸ ಆಗಬಹುದು. ಹಾಗೇ ಚಳಿಗಾಲದಲ್ಲಿ ಕೆಲವು ವಸ್ತುಗಳು ಕುಗ್ಗಿದರೆ, ಕೆಲವು ಬಣ್ಣಗೆಟ್ಟರೆ, ಬೇಸಿಗೆಯಲ್ಲಿ ಕೆಲವು ವಸ್ತುಗಳು ಹಿಗ್ಗುತ್ತವೆ! ಹೀಗೆ ಋತುಗಳಿಗನುಗುಣವಾಗಿ ಬದಲಾಗುತ್ತವೆ. ಆಗ ಅವುಗಳ ಬೆಲೆಗಳಲ್ಲಿ ವ್ಯತ್ಯಾಸವಾಗುತ್ತದೆ.

ಪುರಾಣದ ರಾಮನ ಬಗ್ಗೆ  ಅವನೊಬ್ಬ ಮೂರ್ಖ, ಮೋಸಗಾರ, ಅಧರ್ಮಿ ಹೀಗೆಲ್ಲಾ ಕೆಲವರು ದೂರುತ್ತಾರೆ. ಅದು ಎಷ್ಟು ಸರಿ?  ನಾವು ರಾಮನ ಹಾಗೆ ಬದುಕಲು ಪ್ರಯತ್ನಿಸಿದಾಗ ಅವನದು ಎಷ್ಟು ದೊಡ್ಡ ಆದರ್ಶದ ಬದುಕೆಂಬುದು ತಿಳಿಯುತ್ತದೆ.ಅವನನ್ನು ಬೆಲೆ ಕಟ್ಟಲು ನಮಗೆ ಎಷ್ಟು ಯೋಗ್ಯತೆ ಇದೆ ಎಂದು ನಾವು ಯೋಚಿಸಬೇಕಿದೆ. ಮಹಾಪುರುಷರ ಬಗ್ಗೆ ಬೇಡದ ವಿವಾದಗಳನ್ನು ಕೆಲವರು ಸದಾ ಸೃಷ್ಟಿಸುತ್ತಾರೆ. ಹಾಗೇ ದೊಡ್ಡವರು ಅನ್ನಿಸಿಕೊಂಡವರ ಬಗ್ಗೆ ಪ್ರತಿಕ್ರೀಯಿಸುವಾಗ ಯೋಚಿಸಬೇಕಿದೆ. ಇಂದು ಯೋಚಿಸದೆ ಪ್ರತಿಕ್ರೀಯಿಸುತ್ತಿರುವುದರಿಂದ, ಅನೀತಿಯುತ ಸಮಾಜದ ಸೃಷ್ಟಿಗೆ, ಸಮಾಜದ ಅಶಾಂತಿಗೆ ಕಾರಣವಾಗುತ್ತಿದ್ದೆ. ಅದು ನಿಲ್ಲಬೇಕಿದೆ.

ಯಾವುದೇ ವಸ್ತು, ಕೃತಿ, ವ್ಯಕ್ತಿ ಸ್ವಲ್ಪವೂ ದೋಷರಹಿತ ಆಗಿರಲು ಸಾಧ್ಯವಿಲ್ಲ. ರಾಮಾಯಣ ಏಕ ವ್ಯಕ್ತಿ ವಿರಚಿತ ಕೃತಿ. ಅನೇಕ ವಿದ್ವಾಂಸರು ರಚಿಸಿದ ಸಂವಿಧಾನ ನೂರಕ್ಕೂ ಹೆಚ್ಚು ಸಾರಿ ತಿದ್ದುಪಡಿಯಾಗಿದೆ. ಇದು ಏನನ್ನು ಸೂಚಿಸುತ್ತದೆ. ಕಾಲ ಬದಲಾದಂತೆ ಕೆಲವು ನಂಬಿಕೆಗಳು, ಭಾವನೆಗಳು ಮೌಲ್ಯಗಳು, ಆರ್ಥಿಕ ಸ್ಥಿತಿ, ನಡವಳಿಗಳು ಬದಲಾಗುತ್ತಿರುವುದಲ್ಲದೆ ಮತ್ತೇನು? ಹೀಗೆ ಏನನ್ನೇ ಅಳೆಯಲು ಪ್ರಯತ್ನಿಸಿದಾಗ ಎಲ್ಲಾ ದೃಷ್ಟಿ ಯಿಂದ ನೋಡಿ ಅಳೆಯಬೇಕು. ಜತೆಗೆ ಯೋಗ್ಯ ತುಲಾಯಂತ್ರದಿಂದ ಅಳೆಯುವುದು ಅಗತ್ಯ! ಪರಿಪೂರ್ಣ ಎಂಬ ಕೃತಿ, ವ್ಯಕ್ತಿ, ವಸ್ತು ಜಗತ್ತಿನಲ್ಲೇ ಇಲ್ಲ! ಹೆಚ್ಚು ಪೂರ್ಣತ್ವ ಹೊಂದಿರುವುದರ ಗರಿಮೆಯನ್ನು ಪ್ರಶಂಸಿಸಬೇಕೇ ಹೊರತು ಮೊಸರಲ್ಲಿ ಕಲ್ಲು ಹುಡುಕುವ ಕೀಳುತನ ತೋರಬಾರದು!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x