ಸಾಮಾಜಿಕ ಸ್ಪಂದನೆ:ಪ್ರಶಸ್ತಿ ಅಂಕಣ

ನಾಳೆಯಿಂದ ಪೆಟ್ರೋಲ್ ದರ  ಮತ್ತೆ ತುಟ್ಟಿ.ಪಾಕಿಸ್ತಾನದಲ್ಲಿ ಅಷ್ಟಿದೆ, ಇನ್ನೆಲ್ಲೋ ಮತ್ತೆಷ್ಟೋ ಇದೆ. ಇಲ್ಲಿ ಮಾತ್ರ ಹೆಚ್ಚೆಂಬ ಮಾತು ಎಲ್ಲರ ಬಾಯಲ್ಲೂ. ಪೆಟ್ರೋಲ್ ದರ ಹೆಚ್ಚಳ, ಪದವೀಧರರಿಗೆ ಹೆಚ್ಚುತ್ತಿರೋ ನಿರೂದ್ಯೋಗ ಸಮಸ್ಯೆ,  ಹೆಚ್ಚುತ್ತಿರೋ ತಲೆಗಂದಾಯ, ಕೆಟ್ಟಿರೋ ರಸ್ತೆ  ಹೀಗೆ ಹುಡುಕ್ತಾ ಹೋದ್ರೆ ನೂರೆಂಟು ಅವ್ಯವಸ್ಥೆಗಳು ಇಲ್ಲಿ. ಭ್ರಷ್ಟ ಅಧಿಕಾರಿಗಳಿಂದ ಹಿಡಿದು ಬೇಜವಬ್ದಾರಿ ಸಹೋದ್ಯೋಗಿಯ ತನಕ , ಅಭಿವೃದ್ಧಿ ಸಹಿಸದ ನೆರೆಯವರಿಂದ ಹೆಜ್ಜೆಹೆಜ್ಜೆಗೂ ಮೂಗು ತಿವಿಯೋ ಜನರ ತನಕ  ಈ ಸಮಾಜದ ಬಗ್ಗೆ ಬಯ್ತಾ ಹೋದ್ರೆ ಅದು ಮುಗಿಯದ ಪಟ್ಟಿ. ಆದ್ರೂ ಒಮ್ಮೆ ಈ   ದೇಶ ನಮಗೆ ಏನು ಕೊಟ್ಟಿದೆ ಅನ್ನೋದಕ್ಕಿಂತ ನಾವು ಅದಕ್ಕೆ ಏನು ಕೊಟ್ಟಿದೀವಿ ಅನ್ನೋ ಹಿರಿಯರ ಮಾತಿನಂತೆ ಯೋಚಿಸಬಾರ್ದಾ ? 

ಪೆಟ್ರೋಲ್ ದರ ಹೆಚ್ಚಳ ಅಂತೀವಿ. ಸರಿ. ಅದಕ್ಕೆ ಕಾರಣ ? ಮೊನ್ನೆ ಬಸ್ಸಲ್ಲಿ ಬರ್ತಾ ಎಫ್ ಎಮ್ಮಲ್ಲಿ ಹೇಳ್ತಿದ್ದ ಮಾತೊಂದು ಮನಕ್ಕೇ ನಾಟಿತು. ಮನೆಗೊಂದು ಮಗು ಅನ್ನೋ ತರ ಮನೆಗೊಂದು ವೆಹಿಕಲ್ ಅಂತ ನಿರ್ಧಾರ ತಗೋಳಣ್ವಾ ಸ್ನೇಹಿತರೇ? ಹತ್ತಾರು ವರ್ಷಗಳಾದ್ರೂ, ಈ ಗಾಡಿಗಳು ಹಾಳಾಗಿ ಹೊಗೆಯುಗುಳ್ತಾ ಇದ್ರೂ ಅದನ್ನೇ ಉಪಯೋಗುಸ್ತಾ ಇರ್ತೀವಿ. ಗುಜರಿಗೂ ಹಾಕಲ್ಲ.

ಎಷ್ಟೊಂದು ಪೆಟ್ರೋಲು ಪೋಲು.. ಹೀಗೇ ಸಾಗ್ತಾ ಇತ್ತು ಮಾತು. ಅಷ್ಟರಲ್ಲಿ ಐಟಿಪಿಎಲ್ ರಸ್ತೆ ಬಂತು. ಬಸ್ಸಿಗೆ ಬಿದ್ದ ಬ್ರೇಕಿನಂತೆಯೇ ಆಲೋಚನೆಗಳಿಗೂ ಬ್ರೇಕು ಬಿತ್ತು. ಎದುರಿಗೆ ನೋಡಿದ್ರೆ ಸುಮಾರು ಅರ್ಧ ಕಿಲೋಮೀಟರು ಉದ್ದ ಟ್ರಾಫಿಕ್ಕು. ಬೆಂಗ್ಳೂರಂದ್ರೆ ಟ್ರಾಫಿಕ್ಕು ಅಂದ್ರಾ? ಹೌದು. ಅದಕ್ಕೆ ದರಿದ್ರ ಸರ್ಕಾರನಾ, ಇನ್ಯಾರನ್ನೋ ಎಂದಿನಂತೆ ಬಯ್ಯದೇ ? ಅದರಲ್ಲಿ ನಮ್ಮ ಪಾತ್ರದ ಬಗ್ಗೆ ಚೂರು ನೋಡೋಣ. ಆ ಟ್ರಾಫಿಕ್ಕಲ್ಲಿ ಏನಿತ್ತಪ ಅಂತ ನೋಡಿದ್ರೆ ಒಂದು ಐದು ಬಸ್ಸು, ಒಂದು ಐವತ್ತು ಬೈಕುಗಳು, ಒಂದು ಮೂವತ್ತು ಕಾರು !!! ಕಾರಲ್ಲೇನಿದೆ ಸ್ಪೆಷಾಲಿಟಿ ಅಂದ್ರಾ ? ಅಲ್ಲೇ ಇರೋದು. ನಾಲ್ಕು ಜನ ಹೋಗ್ಬಹುದಾದ ಕಾರಲ್ಲಿ ಒಬ್ಬೊಬ್ಬರೇ. ದೊಡ್ಡ ಕಾರುಗಳಲ್ಲಿ ದೊಡ್ಡಸ್ತಿಕೆಯ ಪ್ರದರ್ಶನ. ಸ್ವಾಮಿ , ಪಕ್ಕದಲ್ಲೇ ಸಾಲಲ್ಲಿ ನಿಂತಿದ್ದ ಆಫೀಸು ಕ್ಯಾಬುಗಳು, ಆಫೀಸು ಬಸ್ಸುಗಳು . ಅದ್ರಲ್ಲಿ ಬರ್ತಿರೋ ಬುದ್ದಿಯಿಲ್ಲದ(ಇವರ ಲೆಕ್ಕದಲ್ಲಿ) ಜನ. ನಿಂತಿರೋ ವೋಲ್ವೋದಲ್ಲಿ ನೇತಾಡುತ್ತಾದರೂ ಸಾರ್ವಜನಿಕ ವ್ಯವಸ್ಥೆ ಬಳಸಬೇಕೆಂಬ ಸಾಮಾನ್ಯ ತಿಳುವಳಿಕೆ ಇರೋ(ಇವರ ಪಾಲಿನ ಕಂಜೂಸ್) ಜನ, ಪಬ್ಲಿಕ್ ಬಸ್ಸಲ್ಲಿ ಹೋಗೋದು ಮರ್ಯಾದೆಗೆ ಸುಮಾರೆಂದರೆ ಆಫೀಸ್ ಬಸ್ಸಲ್ಲಾದ್ರೂ ಹೋಗ್ಬೋದಲ್ವೇ ? ಊಹೂಂ. ಕಾರೇ ಬೇಕು. ಸರಿ ಸ್ವಾಮಿ. ಒಂದೇ ಅಪಾರ್ಟಮೆಂಟಿನ ಜನ, ಅದೇ ದಾರಿಯ ಜನ ಒಂದೊಂದಿನ ಒಬ್ಬೊಬ್ಬರ ಕಾರಲ್ಲಿ ಬರ್ಬೋದಲ್ವಾ ? ಆ ಮೂಲಕ ಮೂರು ಕಾರುಗಳ ಟ್ರಾಫಿಕ್ಕು, ಪೆಟ್ರೋಲು ಉಳಿಸ್ಬೋದಲ್ವಾ ? ಈ ತತ್ವದ ಕಾರ್ ಪೂಲಿಂಗಿಗೆ ಜೈ ಅನ್ನೋಣವಾ ಅಂದ್ರೆ ಊಹೂಂ. ನನ್ನ ದುಡ್ಡು, ನನ್ನ ಕಾರು, ನನ್ನ ಪೆಟ್ರೋಲು.. ನಂಗೆ ಬೇಕಾದಂಗೆ ನಾನಿರ್ತೀನಿ. ಕೇಳೋಕೆ ನೀನ್ಯಾರು ?  ಎಂಬ ಧೋರಣೆ. ಸ್ವಾಮಿ ಕಾರೂ ನಿಮ್ಮದೇ. ಪೆಟ್ರೋಲೂ ನಿಮ್ಮದೇ, ಅದೇ ತರ ಅದು ಉಗುಳ್ತಾ ಇರೋ ಹೊಗೆನೂ ನಿಮ್ಮದೇ. ಅದನ್ನ ಊರು ತುಂಬಾ ಯಾಕೆ ಉಗುಳೋಕೆ ಬಿಡ್ತೀರಾ ? ಅದನ್ನೊಂದು ಕವರಲ್ಲಿ ತುಂಬಿಕೊಂಡು ತಗೊಂಡು ಹೋಗಿ ಅಂತ ಹೇಳೋಣ ಅನ್ನಿಸ್ತು. ಇದೇ ತರದ ಬೇರೆ ಘಟನೆಗಳು ನೆನಪಾಗಿ ಬರೀ ಐಟಿಪಿಎಲ್ ರೋಡಲ್ಲಿ ಜಗಳ ಕಾದು ಉಪಯೋಗಿಲ್ಲ ಅಂತ ಸುಮ್ಮನಾದೆ.

ಮನೆಯಲ್ಲಿ ನಾಲ್ವರಿದ್ರೆ ನಾಲ್ಕು ಗಾಡಿ. ಮಗನಿಗೊಂದು ಪಲ್ಸರ್, ಮಗಳ ಕಾಲೇಜಿಗೊಂದು ಲೂನಾ. ಮನೇಲಿರೋ ಅಮ್ಮನಿಗೆ ತರಕಾರಿ ತರೋಕೆ ಹೋಗೋಕಂತ ಒಂದು ಲೂನಾ. ಇನ್ನು ಅಪ್ಪನಿಗೆ ಮತ್ತೆ ಮನೆಯವ್ರು ಎಲ್ಲಾ ಒಟ್ಟಿಗೆ ಹೋಗೋಕೆಂತ ಒಂದು ಕಾರು! ಕೆಲವು ಮನೆಗಳಲ್ಲಿ ನಾಲ್ಕಲ್ಲದಿದ್ದರೂ ಮೂರೆಂತೂ ಕಾಯಮ್ಮು ! ಅಲ್ಲೇ ನೂರು ಹೆಜ್ಜೆ ದೂರದಲ್ಲಿರೋ ಅಂಗಡಿಗೆ ಹೋಗೋಕೆ ಒಂದು ಬೈಕು. ಕಾಲೇಜು ಬಸ್ಸಿದ್ರೂ ಬೇಕೊಂದು ಬೈಕು. ಆಫೀಸಿಗೆ ಹದಿನೈದು ನಿಮಿಷದಲ್ಲೇ ನಡೆದು ಹೋಗಬಹುದಾದ್ರೂ ವ್ಯಾಯಾಮ ಸಲ್ಲ. ಸಮಯ ಸಿಕ್ಕಾಪಟ್ಟೆ ಪ್ರೀಶಿಯಸ್ಸು. ಬೇಕೊಂದು ಕಾರು. ಯಾರಾರೂ ನೋಡಿದ್ರೆ ನಮ್ಮ ಕುಟುಂಬದ ಘನತೆ ಏನಾಗ್ಬೇಡ.. ಸಂಬಳ ಸಾಲದಿದ್ದರೂ, ಸಾಲ ಮಾಡಾದ್ರೂ ತಗೋ ಒಂದು ಕಾರು.. ಹಿಂಗೇ ಸಾಗ್ತಾ ಹೋಗುತ್ತೆ ನಮ್ಮ ಆಸೆಗಳ ಮಹಾಪೂರ. ಈತರ ಇರೋ ಬರೋ ಪೆಟ್ರೋಲ್ ಬಳಸ್ತಾ ಹೋದ್ರೆ ಅದ್ರ ಬೆಲೆ ಏರ್ದೇ ಇನ್ನೇನಾಗ್ಬೇಡ. ಅಷ್ಟಕ್ಕೂ ಪೆಟ್ರೋಲೇನು ಬಗೆದಷ್ಟೂ ಸಿಕ್ತಾ ಹೋಗಲ್ಲ. ಅದು ನವೀಕರಿಸಲಾಗದ ಇಂಧನ ಮೂಲ ಅಂತ ಹೈಸ್ಕೂಲಲ್ಲೇ ಓದಿದ್ವಿ. ಅದು ಇನ್ನು ೨೫ ವರ್ಷದಲ್ಲಿ, ೫೦ ವರ್ಷದಲ್ಲಿ ಗ್ಯಾಸು.. ಹೀಗೆ ಖಾಲಿಯಾಗುತ್ತಾ ಸಾಗುತ್ತೆ ಅಂತಲೂ ಅವಾಗ್ಲೇ ಓದಿದ್ವಿ. ಆದ್ರೆ ಹೀಗೆ ಓದಿದ ನಾವುಗಳೇ ಇನ್ನೂ ಮುಂದುವರಿದಿದ್ರೆ ಹೇಗೆ ? ಬರೀ ವಯಸ್ಸು ಮಾತ್ರ ಆಗಿ ಬೆಳೆದಿರೋ ಬುದ್ದೀನ ಈ ನಿಟ್ಟಿನಲ್ಲಿ ಉಪಯೋಗಿಸ್ದಿದ್ರೆ ಹೇಗೆ ? ಇದು ಗೊತ್ತಿಲ್ವಾ ಅಥವಾ ಗೊತ್ತಿದ್ದೂ ಜಾಣ ಮರೆವೋ ಅರ್ಥ ಆಗಲ್ಲ.. ಹಾಗಾಗಿ ಪ್ರತೀ ಸಲವೂ ದರಿದ್ರ ಸರ್ಕಾರ ಪೆಟ್ರೋಲು ದರ ಏರಿಸುತ್ತಿದೆ ಅನ್ನೋ ತರದ ಮಾತುಗಳನ್ನ ಕೇಳಿದಾಗ ಅದಕ್ಕೆ ಕಾರಣರಾದ ನಮ್ಮ ಬಗ್ಗೆಯೇ ನಾಚಿಕೆಯಾಗುತ್ತೆ.  ಯಾರು ಏನೇ ಇರ್ಲಿ.. ನಾವೇನು ಅನ್ನೋ ಭಾವ ತಲೆತಗ್ಗಿಸೋ ಹಾಗೆ ಮಾಡುತ್ತೆ.

ಇನ್ನು ಕೆಟ್ಟಿರೋ ರಸ್ತೆ, ಲೈಟಿಲ್ಲದ ಬೀದಿ ದೀಪ. ಯಾವನೋ ಪುಡಾರಿ ಮಾಡೋಕೆ ಕೆಲ್ಸ ಇಲ್ಲ ಅಂತ ಯಾವ್ದೋ ಬೀದಿ ದೀಪಕ್ಕೆ ಕಲ್ಲು ಹೊಡೆದು ಹಾಳು ಮಾಡ್ತಾನೆ. ಅದನ್ನ ದುರಸ್ತಿ ಮಾಡದ ಸರ್ಕಾರಕ್ಕೆ ಶಾಪ ಹಾಕೋದ್ರಲ್ಲೆ ನಮ್ಮ ಜೀವನ ಕಳಿತಾ ಇರ್ತೀವಿ. ರಸ್ತೆ ಹೊಂಡ ಬಿದ್ದಿದೆ. ಯಾವುದೋ ಕಂಟ್ರಾಕ್ಟ್ರು ಎಷ್ಟೋ ತಿಂದ ಅಂತ ಬೈಕೊಳ್ತಾ ಇರ್ತೀವಿ. ಮನೇಲಿ ಅರ್ಧ ಘಂಟೆ ಕರೆಂಟು ಹೋದ್ರೆ ಕೆ.ಯಿ.ಬಿಗೆ ವಾಚಾಮಗೋಚರ ಬಯ್ಯೋರೂ ಇದಾರೆ. ಆದ್ರೆ ನಾವು ಮಾಡಿದ್ದೇನು. ಬೀದಿಯಲ್ಲಿ ಅದೇ ದೀಪ ಹಗಲೊತ್ತಿನಲ್ಲಿ ಉರಿತಾ ಇದ್ರೂ ಅದನ್ನು ಅಲ್ಲೇ ಇರೋ ಸ್ವಿಚ್ಚಲ್ಲಿ ಆಫ್ ಮಾಡಿ ಮುಂದೆ ಸಾಗಲ್ಲ. ನಾವ್ಯಾಕೆ ಮಾಡ್ಬೇಕು. ಸರ್ಕಾರ ಸಂಬಳ ಕೊಟ್ಟಿದೆಯಲ್ಲ ಜನರಿಗೆ, ಅವರು ಮಾಡ್ತಾರೆ ಬಿಡು ಅಂತ.. ಯಾವನೋ ಬೀದಿ ದೀಪಕ್ಕೆ ಕಲ್ಲೊಡಿತಾ ಇದ್ರೆ ಅವನಿಗೆ ತಟ್ಟಿ ಬುದ್ದಿ ಹೇಳೋ ಬದ್ಲು ಇಲ್ಲದ ಉಸಾಬರಿ ನಮಗ್ಯಾಕೆ. ಸರ್ಕಾರ ಹೆಂಗಿದ್ರೂ ಹೊಸದು ಹಾಕತ್ತೆ ಬಿಡು ಅಂತ. ರಸ್ತೆ ಹೊಂಡ ಬಿದ್ದಿದೆ, ಮನೆಯೆದುರೇ ಇರೋ ಹೊಂಡಕ್ಕೆ ಹಿಡಿ ಮಣ್ಣಾದ್ರೂ ಹಾಕೋಣ ಅಂತಿಲ್ಲ. ಸರಕಾರ ದುಡ್ಡು ಕೊಡೋದು ಯಾಕೆ, ರಿಪೇರಿ ಮಾಡೋಕೆ ತಾನೆ. ಮಾಡ್ಕೊಳ್ಲಿ ಬಿಡು ಅಂತ.. ಹೀಗೆ ಎಲ್ಲದಕ್ಕೂ ಸರ್ಕಾರನ ಅವಲಂಬಿಸೋದು ಬೆಳಿತಾನೇ ಹೋಗತ್ತೆ. ಎಲ್ಲದನ್ನೂ ಅವ್ರು ಕೊಡ್ಲಿ ಅಂತ ಬಯಸೋ ನಾವು ಎಲ್ಲಾ ಕಣ್ಣು ಮುಚ್ಚಿ ಬಿಡೋದ್ರೊಳಗೆ ಮಾಡೋಕೆ ಸರ್ಕಾರವೇನು ದೇವ್ರ  ಅಥವಾ ಸರ್ಕಾರಕ್ಕೆ ಇದಕ್ಕೆಲ್ಲಾ ದುಡ್ಡೆಲ್ಲಿಂದ ಬರುತ್ತೆ ಅನ್ನೋ ತರದಲ್ಲಿ ಯೋಚನೆ ಮಾಡಿದೀವಾ ? ಬರಿ ಅವರು ಅಷ್ಟು ನುಂಗಿದ್ರು. ಇವ್ರು ಇಷ್ಟು ನುಂಗಿದ್ರು ಅಂತ ಬಯ್ಯೋದೇ ಆಯ್ತು. ಆತ್ರು ಈ ನುಂಗೋದು ಕಲ್ಸಿದ್ದು ಯಾರು ? ನಾವೇ ತಾನೆ ? ಲೈಸನ್ಸಿಲ್ಲದೇ ರಾಂಗ್ ಸೈಡಲ್ಲಿ ಬೇರೆ ಹೋಗೋದು. ಯಾರಾದ್ರೂ ಹಿಡಿದ್ರೆ ಅವ್ರಿಗೊಂದಿಷ್ಟು. ಕಾಯೋಕೆ ಟೈಮಿಲ್ಲದೇ ನಮ್ಮ ಅಪ್ಲಿಕೇಶನ್ನು ಬೇಗ ಮೇಲೆ ಬರ್ಲಿ ಅಂತೊಂಡಿಷ್ಟು ಕೊಡೋದು.. ಹೀಗೆ ಕೊಟ್ಟು ಕೊಟ್ಟು ಸಮಾಜದ ದುರ್ವ್ಯವಸ್ಥೆಗೆ ಕಾರಣವಾಗಿರೋದು ನಾವೇ ತಾನೆ ? 

ಇನ್ನು ಸರ್ಕಾರಕ್ಕೆ ಬರೋ ದುಡ್ಡಿನ ಸುದ್ದಿ. ನಾವು ಕಟ್ಟೋ ತೆರಿಗೆ ಇಂದ ತಾನೇ ದುಡ್ಡು ಬರ್ಬೇಕು. ಲಕ್ಷಗಟ್ಟಲೇ ಕೋಟಿಗಟ್ಟಲೇ ದುಡಿಯೋ ಜನರಿಗೆ ಅದರಲ್ಲಿ ಸ್ವಲ್ಪ ದುಡ್ಡು ಸರ್ಕಾರಕ್ಕೆ ಕಟ್ಟೋಕೆ ಅಳು. ಬೇಜಾನ್ ನಾಟಕ. ಸರ್ಕಾರ ತೆರಿಗೆ ಕಟ್ಟಿ ಅಂತ ವೆಬ್ ಸೈಟ್ ಮಾಡಿಕೊಟ್ಟು ಅದರಲ್ಲಿ ನೂರೆಂಟು ಪ್ರಯೋಜನ ಮಾಡಿಕೊಟ್ಟರೂ ಊಹೂಂ.. ನನ್ನ ಸ್ನೇಹಿತನಿಗೇ ಒಬ್ಬನಿಗೆ ಕೇಳಿದೆ ಈ ಬಗ್ಗೆ. 

ಅ: ನಿನ್ನ ತೆರಿಗೆ ಕಟ್ಟಿದೆಯೇನೋ ಈ ಸಲದ್ದು .

: ಇಲ್ಲ ಕಣೋ. ಐದು ಲಕ್ಷದ ಮೇಲಿರೋರು ಮಾತ್ರ ಕಟ್ಬೇಕು. ನಾನು ಕಟ್ಟಲ್ಲ

ಅ: ಲೇ, ಈ ದೇಶದ ಜವಾಬ್ದಾರಿಯುತ ನಾಗರೀಕನಾಗಿ ಇದು ನಿನ್ನ ಕರ್ತವ್ಯ ಕಣೋ. ನಿನ್ನ ಬದ್ಲಿಗೆ ನಾನೇ ಕಟ್ಲೇನೋ.. ಡಿಟೈಲ್ ಕೊಡೋ.

: ಏ. ಬೇಡೋ. ಇಷ್ಟು ಬೇಗೆಲ್ಲ ಕಟ್ಟೊಲ್ಲ ನಾನು.

ಅದು ಅಂತಹ ಘನಕಾರ್ಯವಲ್ಲ. ವರ್ಷದಲ್ಲಿ ನಮಗೆ ಬಂದ ಆದಾಯವೆಷ್ಟು ಅಂತ ತೋರ್ಸೋದು ಅಷ್ಟೇ. ಕಂಪೆನಿಗಳಲ್ಲಿರೋರಿಗೆ ಫಾರ್ಮ್ ೧೬ ಅಂತ ಇರೋತ್ತೆ. ಅದ್ರಲ್ಲೇ ಇರೋ ರೆಡಿ ಮೇಡ್ ಮಾಹಿತಿಯನ್ನು ತುಂಬೋದು ಹದಿನೈದು ನಿಮಿಷಗಳ ಕೆಲಸ. ಜೀವವಿಮೆ, ಆರೋಗ್ಯ ವಿಮೆ ಹೀಗೆ ಉಳಿತಾಯ ಮಾಡಿದೋರಿಗೆ, ಬರ/ಪ್ರವಾಹ ಪರಿಹಾರ ನಿಧಿ, ಪ್ರಧಾನ ಮಂತ್ರಿ ಪರಿಹಾರ ನಿಧಿ.. ಹೀಗೆ ದಾನ ಮಾಡಿದೋರಿಗೆ ಕಟ್ಟಾಗಿರೋ ತೆರಿಗೆಯಲ್ಲಿ ಸುಮಾರಷ್ಟು ವಾಪಾಸು ಬರೋದು ಇದೆ. ಇದನ್ನು ಮಾಡ್ರೋ ಅಂದ್ರೆ. ಊಹೂಂ.. ಕಂಪೆನಿಗಳಲ್ಲೇ ಟ್ಯಾಕ್ಸ್ ಕೊಡೋ ಸಂಬಳದಲ್ಲಿ ಕಟ್ಟಾಗುತ್ತೆ ನಿಜ. ಆದ್ರೆ ಸರ್ಕಾರಕ್ಕಂತ ಕೊಡೋ ಪೈಸೆ ಪೈಸೆ ಉಳಿಸೋಕೆ ನೋಡೋ ಇಂತವ್ರಿಗೆ ಸರ್ಕಾರ ಅದ್ನು ಮಾಡಿಲ್ಲ ಇದು ಮಾಡಿಲ್ಲ ಅಂತ ಮಾತಾಡೋ ನಯಾಪೈಸೆ ಹಕ್ಕಿದ್ಯಾ ? 

ಕೊನೆಯದಾದರೂ ಮಹತ್ವದ್ದು ಓಟಿನ ಸುದ್ದಿ. ನೋಟಿಗಾಗಿ, ಹೆಂಡಕ್ಕಾಗಿ .. ಮತ್ಯಾವುದಕ್ಕಾಗಿ ತಮ್ಮ ಅಮೂಲ್ಯವಾದ ಓಟು ಮಾರ್ಕಳ್ಳೋ ಅವಿದ್ಯಾವಂತರು, ತಾವು ಇನ್ನು ಓಟಾಕಿ ಸಾಧಿಸೋದೇನಿದೆ ಎಂಬ ದಿವ್ಯ ನಿರ್ಲಕ್ಷ್ಯದಿಂದ ಜೀವಮಾನದಲ್ಲೇ ಓಟಾಕದ ವಿದ್ಯಾವಂತರು !!. ಎಷ್ಟೊಂದು ಕಡೆ ಬರಿ ೫೦% ಮತದಾನ ಆಗಿರುತ್ತೆ. ೫೦% ಓಟು ಆಗಿದ್ರೂ ಆಯ್ಕೆಯಾದ ಪ್ರತಿನಿಧಿ ಬಹುಮತದಿಂದ ಆಯ್ಕೆ ! ಕುಡಿದು ತಮ್ಮ ಪರಿಸ್ಥಿತಿಯ ಬಗ್ಗೆಯೇ ಅರಿವಿರದಿದ್ದ ಜನರಿಂದ ಆಯ್ಕೆಯಾದವರಿಂದ ಇನ್ನೆಂತಹ ಸುಧಾರಣೆ ನಿರೀಕ್ಷಿಸಲು ಸಾಧ್ಯ. ೫೦% ಮತದಾನ ಆಗಿದ್ರೂ ಅಲ್ಲಿಗೆ ಬಂದಿರೋರು/ಬರೋರು ಅನಕ್ಷರಸ್ಥರೇ..ಅನಕ್ಷರಸ್ಥರೆಂದ ಮಾತ್ರಕ್ಕೆ ಹೆಡ್ಡರೆಂದಲ್ಲ. ಆದರೂ  ಸಮಾಜ, ಸುಧಾರಣೆ, ದರಿದ್ರ, ಅಲ್ಲಿ ಕಾಡುತ್ತಿರೋ ಜಾತಿ ಕೇಂದ್ರಿತ ಓಟು ಪದ್ದತಿ  ಅಂತ ಪೇಜುದ್ದ ಬರೆಯೋ, ಘಂಟೆಗಟ್ಟಲೇ ಭಾಷಣ ಬಿಗಿಯೋ ಬುದ್ದಿಜೀವಿಗಳು ಓಟೇ ಹಾಕಲ್ಲ. ಆಫೀಸು, ಕಾಲೇಜುಗಳಿಗೆ ರಜಾ ಕೊಟ್ರೂ ಓಟ್ ಹಾಕಲ್ಲ. ಅವತ್ತೇ ಔಟಿಂಗ್ ಹೋಗ್ತೀವಿ. ಒಂದು ಓಟು ಹಾಕಿ ಆಮೇಲೆ ಏನಾರು ಮಾಡ್ಕೊಳಿ ಸ್ವಾಮಿ ಅಂದ್ರೆ.. ಊಹೂ..  ಕೆಲವೊಮ್ಮೆಯಂತೂ ಹೇಳಿ ಹೇಳಿ ಬೇಜಾರಾಗುತ್ತೆ ಕೆಲವರಿಗೆ.. ಕೊನೆಗೆ ಸಾಕಪ್ಪ ಸಾಕು ಸವಹಾಸ ಅಂತ ನಮ್ಮ ಓಟಿನ ಕರ್ತವ್ಯ ಮುಗಿಸಿ ಬರ್ತೀವಿ.. ಹೀಗೆ ಹೇಳ್ತಾ ಹೋದ್ರೆ ದೇಶ ನಮಗೇನು ಕೊಟ್ಟಿದೆ ಅನ್ನೋ ಬದ್ಲು ನಾವದಕ್ಕೆ ಏನು ಕೊಟ್ಟಿದೀವಿ ಅನ್ನೋದು ಮುಖ್ಯವಾಗುತ್ತೆ. ಈ ಭವ್ಯ ಭಾರತದಲ್ಲಿ , ದಿವ್ಯ ಕರ್ನಾಟಕದಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ.. ಇಲ್ಲಿ ದಿನ ಬೆಳಗಾದರೆ ಯಾವುದೋ ಬಾಂಬ್ ಬೀಳೋ ಭೀತಿ ಇಲ್ಲ. ರಾತ್ರೋ ರಾತ್ರಿ ಪ್ರವಾಹ ಬಂದು ಕೊಚ್ಚಿ ಹೋಗೋ ಭಯವಿಲ್ಲ. ಇದ್ದ ಬದ್ದ ಆಸ್ತಿಯನ್ನೆಲ್ಲಾ ಮುಟ್ಟುಗೋಲು ಹಾಕಿಕೊಳ್ಳೋ ಸರ್ವಾಧಿಕಾರಿಗಳೆಂತೂ ಮೊದಲೇ ಇಲ್ಲ. ಹಾಗಾಗಿ ಸಾಮಾಜಿಕ ಸ್ಪಂದನೆ ಅಂದರೆ ಅದೇನು ಅನ್ನೋ ಹಾಗಿದೆ..  ಇನ್ನು ಹೆಚ್ಚು ಬರೆಯೋ ಬದಲು ನನ್ನ ಕೋರಿಕೆ ಇಷ್ಟೇ..ಪೆಟ್ರೋಲ್ ದರ ಹೆಚ್ಚಾಯ್ತು ಅಂತ ಗುಟುರು ಹಾಕೋ ಬದ್ಲು. ಸರಿ ಅದಕ್ಕೆ ನಾನೇನು ಮಾಡ್ಬೇಕಿತ್ತು, ಏನು ಮಾಡಿದೆ, ಇನ್ನೇನು ಮಾಡ್ಬೋದು ಅಂತ ಯೋಚ್ನೆ ಮಾಡೋಣ. ಪ್ರತಿಯೊಂದನ್ನೂ ದೂರೋ ಬದಲು ಅದನ್ನೇ ಒಂದು ಸವಾಲಾಗಿ ಸ್ವೀಕರಿಸ್ತಾ ಹೋದ್ರೆ ಉತ್ರಗಳು ಸಿಕ್ತಾ ಹೋಗುತ್ತೆ. ನಾನೊಬ್ನಿಂದ ಏನಾಗುತ್ತೆ ಅಂತ ಯೋಚನೆ ಮಾಡಿದ್ರೆ ಏನೂ ಆಗಲ್ಲ. ಹನಿ ಹನಿಗಳು ಕೂಡಿದ್ರೆ ಹಳ್ಳ. ಸಾಮಾಜಿಕ ಬದ್ದತೆಯಿರೋ ಬಂದುಗಳು ಕೈಜೋಡಿಸ್ತಾ ಹೋದ್ರೆ ಯಾವುದೂ ಅಸಾಧ್ಯವಲ್ಲ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

ಮನೆಯಲ್ಲಿ ನಾಲ್ವರಿದ್ರೆ ನಾಲ್ಕು ಗಾಡಿ.
ಪ್ರತಿಯೊಂದನ್ನೂ ದೂರೋ ಬದಲು ಅದನ್ನೇ ಒಂದು ಸವಾಲಾಗಿ ಸ್ವೀಕರಿಸ್ತಾ ಹೋದ್ರೆ ಉತ್ರಗಳು ಸಿಕ್ತಾ ಹೋಗುತ್ತೆ
ಆದ್ರೆ ಸುಖ ತ್ಯಾಗ ಮಾಡಲು ಕಷ್ಟ ಎಂದನಿಸುತ್ತೆ..prashasti..
ಒಳ್ಳೆಯ  ಲೇಖನ
ಓದಿಸುವಲ್ಲಿ  ಸಫಲವಾಯ್ತುಯ…

prashasti
11 years ago

ಧನ್ಯವಾದಗಳು ಶಾರದಕ್ಕ.. 🙂
ಛಲವಿದ್ದಲ್ಲಿ ಫಲವಿದೆ 🙂

2
0
Would love your thoughts, please comment.x
()
x