ಪ್ರಶಸ್ತಿ ಅಂಕಣ

ಸಾಮಾಜಿಕ ಮಾಧ್ಯಮಗಳು ಮತ್ತು ಸಮಾಜ:ಪ್ರಶಸ್ತಿ ಅಂಕಣ

ಈ ಫೇಸ್ಬುಕ್ಕು, ಟ್ವಿಟ್ಟರ್ರು, ಆರ್ಕುಟ್ಗಳಂತಹ ಸಾಮಾಜಿಕ ಮಾಧ್ಯಮಗಳು ಅಂದರೆ ಬರೀ ಟೈಂಪಾಸಿಗೆ ಅನ್ನೋ ಮನೋಭಾವ ಹಲವರಲ್ಲಿದೆ. ಏನಪ್ಪಾ ಇಪ್ಪತ್ನಾಲ್ಕು ಘಂಟೆ ಫೇಸ್ಬುಕ್ಕಲ್ಲಿ ಇರ್ತೀಯ ಅನ್ನೋದು ಮುಂಚೆ  "ಇಡೀ ದಿನ ಊರೂರು ಅಲಿತಿರ್ತಾನೆ, ಅಬ್ಬೇಪಾರಿ .. "ಅಂತ ಬಯ್ತಿದ್ದ ಶೈಲಿಯ ಬಯ್ಗುಳವಾಗಿಬಿಟ್ಟಿದೆ. ಒಟ್ನಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸ್ತಾ ಇರೋರು ಅಂದ್ರೆ ಬರೀ ಕಾಲಹರಣ ಮಾಡೋರು, ಬೇರೆ ಯಾವ್ದೂ ಕೆಲಸ ಇಲ್ದೇ ಇದ್ದೋರು ಅನ್ನೋ ಭಾವ. ಅವು ತಕ್ಕಮಟ್ಟಿಗೆ ನಿಜವಾದ್ರೂ ಅದೇ ನಿಜವಲ್ಲ. ಈ ಸಾಮಾಜಿಕ ಮಾಧ್ಯಮಗಳಿಂದ ಸಖತ್ ಲಾಭಗಳಾಗೋದೂ ಇವೆ. ನನ್ನ ಮಾತನ್ನು ಒಪ್ಪೋಕೂ ಬಿಡೋಕೂ ಮುಂಚೆ ಕೆಳಗಿನ ಕೆಲವು ಘಟನೆಗಳನ್ನೊದಿ ಬಿಡಿ.. ಆಮೇಲಿನ ಅಭಿಪ್ರಾಯ ಮತ್ತೆ ನಿಮಗೇ ಬಿಟ್ಟಿದ್ದು. 

ಸನ್ನಿವೇಶ ೧ :

ಹುಷಾರಿಲ್ಲವೆಂದು ಆಸ್ಪತ್ರೆಗೆ ದಾಖಲಾದ ನನ್ನ ನೆಂಟರೊಬ್ಬರಿಗೆ ಡೆಂಗ್ಯೂ ಆಗಿದೆ ರಕ್ತ ಕೊಡಬೇಕಂತೆ ಅನ್ನೋ ಸುದ್ದಿ ಗೊತ್ತಾಯ್ತು. ಅವರದ್ದು ಬಿ ನೆಗೆಟಿವ್. ಮೊದಲೇ ತೀರಾ ಕಮ್ಮಿ ಜನ ಇರೋ ರಕ್ತದ ಗುಂಪು.  ಎಲ್ಲಿ ಕೇಳಿದ್ರೂ ಸಿಗ್ತಿರಲಿಲ್ಲ ಪಾಪ. ಬ್ಲಡ್ ಬ್ಯಾಂಕುಗಳಲ್ಲಿ ಬೇರೆ ಗ್ರೂಪಿನ ರಕ್ತದೊಂದಿಗೆ ನಮಗೆ ಬೇಕಾದ ಗ್ರೂಪಿನ ರಕ್ತವನು ಎಕ್ಸ್ ಚೇಂಜ್ ಮಾಡಬಹುದು (ನಮಗೆ ಬಿ ನೆಗೆಟಿವ್ ಬೇಕೂಂದ್ರೆ ನಮ್ಮ ಕಡೆಯವರ ಬೇರೆ ಯಾವುದಾದರೂ ಗ್ರೂಪಿನ ರಕ್ತ ಕೊಟ್ಟು ಅದರ ಬದಲು ಬಿ ನೆಗೆಟಿವ್ ಪಡೆಯುವುದು) ಸರಿ. ಆದರೆ ೨-೩ ಬ್ಲಡ್ ಬ್ಯಾಂಕಿಗೆ ಫೋನ್ ಮಾಡಿದ್ರೂ ಊಹೂಂ.. ಬಿ ನೆಗೆಟಿವ್ ಇಲ್ಲವೆಂಬ ಉತ್ತರ. ಸಂಬಂಧಿಗಳಲ್ಲೂ ಯಾರದ್ದೂ ಅದಿಲ್ಲ. ಓ ನೆಗೆಟಿವ್ ಆದ್ರೂ ಕೊಡಬಹುದಿತ್ತೇನೋ ಆದರೆ ಅದೂ ಸಿಕ್ತಿರಲಿಲ್ಲ.. ಹೇಳಿಕೇಳಿ ಭಾನುವಾರ ಬೇರೆ. ಸ್ನೇಹಿತರನ್ನು ಕೇಳಿದರೂ ಸಿಗಲಿಲ್ಲ. ಆಫೀಸು ಸಹೋದ್ಯೋಗಿಗಳನ್ನಾದರೂ ಕೇಳೋಣ ಅಂದ್ರೆ ಆಫೀಸಿಗೆ ರಜೆ. ಈ ಸಂದಿಗ್ದತೆಯಲ್ಲಿದ್ದಾಗಲೇ ನೆನಪಾಗಿದ್ದು ಫೇಸ್ಬುಕ್ಕು. ಹಿಂದೊಮ್ಮೆ ಗೆಳೆಯನೊಬ್ಬ ಇದೇ ತರದ ಸನ್ನಿವೇಶದಲ್ಲಿ ಫೇಸ್ಬುಕ್ಕಿನ ಮೊರೆ ಹೊಕ್ಕಿದ್ದು ನೆನಪಾಯ್ತು. ಫೇಸ್ಬುಕ್ ಸ್ಟೇಟಸ್ ಹಾಕಾಯ್ತು.. ಹೀಗಿದೆ ಪರಿಸ್ಥಿತಿ. ಯಾರಾದ್ರೂ ಇದ್ರೆ ಮೆಸೇಜ್/ಕಾಲ್ ಮಾಡಿ ಅಂತ ಒಂದು ಸ್ಟೇಟಸ್ ಹಾಕಾಯ್ತು. ಅಲ್ಲೇ ಆನ್ಲೈನ್ ಇದ್ದ ಒಂದು ಐವತ್ತು ಜನಕ್ಕೆ ಮೆಸೇಜ್ ಮಾಡಿಯೂ ಆಯ್ತು. ಅವರು ಅವರ ಸ್ನೇಹಿತರಿಗೆ ಕೇಳಿ.. ಅಂತೂ ಒಬ್ಬ ಓ ನೆಗೆಟಿವ್ ಅವನು ಸಿಕ್ಕಿದ. ಆದರೆ ಅವನದು ತೂಕ ಕಡಿಮೆ, ಕೊಡೋಕಾಗಲ್ಲ ಅನ್ಸತ್ತೆ. ಕೊಡೋಕೆ ಹೋದ್ರೂ ತಗೋಳಲ್ಲ, ಸಾರಿ ಕಣೋ ಅಂದ. ಚೇ, ಏನ್ ಮಾಡೋದು. ಹೀಗೇ ಹುಡುಕಾಟದಲ್ಲಿದ್ದಾಗ ನೆನಪಾಗಿದ್ದು ಫೇಸ್ಬುಕ್ಕಿನ ಒಂದು ಗುಂಪು ಮತ್ತು ಅದರಲ್ಲಿದ್ದ ರಕ್ತದ ಗುಂಪುಗಳು ಅನ್ನೋ ಕಡತ. ಅದರಲ್ಲಿ ಹುಡುಕಿದಾಗ ಬೆಂಗಳೂರಿನಲ್ಲಿದ್ದ ಒಂದು ನಾಲ್ಕು ಜನರ ಫೋನ್ ನಂಬರ್ ಸಿಕ್ಕಿತು!! ಅವರಲ್ಲಿ ಫೋನ್ ಮಾಡಿದ ಮೊದಲನೆಯವರೇ ರಕ್ತ ಕೊಡೋದಾಗಿ ಒಪ್ಪಿದ್ರು. ಬೆಳಗಿನಿಂದ ಹುಡುಕಿ ಬೇಜಾರಾಗಿದ್ದ ನೆಂಟರ ಮನೆಯವರು ಕೊನೆಗೂ ಸಿಕ್ತಲ್ಲ, ದೇವರು ದೊಡ್ಡೋನು ಅಂತ ಸಮಾಧಾನ ಪಟ್ರು. ಇದೆಲ್ಲಾ ಆಗಿದ್ದು ಒಂದು ಹದಿನೈದು-ಇಪ್ಪತ್ತು ನಿಮಿಷದ ಅವಧಿಯಲ್ಲಿ.. ಎಲ್ಲರಿಗೂ ಹೀಗೆ ಉಪಯೋಗ ಆಗುತ್ತೆ ಅಂತಲ್ಲ. ಫೇಸ್ಬುಕ್ಕಿಂದಲೇ ಎಲ್ಲಾ ಕೆಲಸಗಳೂ ಆಗುತ್ತೆ ಅಂತಲ್ಲ. ಆದ್ರೆ ಹೀಗೂ ಆಗುತ್ತೆ ಅನ್ನೋದಕ್ಕೆ ಒಂದು ಉದಾಹರಣೆ.ಹಿಂದೊಮ್ಮೆ ಚಿಕ್ಕ ಮಗುವೊಂದಕ್ಕೆ ಹೀಗೇ ಡೆಂಗ್ಯೂ ಬಂದು ಅದಕ್ಕೆ ರಕ್ತ ಬೇಕಾದಾಗ ನನ್ನ ಮುಖವನ್ನೇ ನೋಡದಿದ್ದರೂ ನನ್ನ ಫೇಸ್ಬುಕ್ ಗೆಳೆಯರ ಮೂಲಕ ಒಬ್ಬರು ನನ್ನ ಸಂಪರ್ಕಿಸಿದ್ದರು. ಗೆಳೆಯನ ಜೊತೆ ರಕ್ತ ಕೊಡಲು ಹೊರಟರೂ ನಾವು ಹೋಗೋ ಹೊತ್ತಿಗೆ ಬೇರೆಲ್ಲಿಂದಲೋ ರಕ್ತ ಸಿಕ್ಕಿದ್ದು ಬೇರೆ ವಿಚಾರ. ಒಟ್ನಲ್ಲಿ ಫೇಸ್ಬುಕ್ಕು ಬರಿ ಗಾಸಿಪ್ ಮಾಡೋಕೆ, ಪಟ್ಟಂಗೆ ಹೊಡ್ಯೋಕಷ್ಟೇ ಸಹಾಯವಾಗತ್ತೆ ಅನ್ನೋ ಬದ್ಲು ಇಂತಹ ಅನಿವಾರ್ಯತೆಯ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ನೆರವಾಗೋ ಮಾನವೀಯ ಮುಖವನ್ನೂ ಹೊಂದಿದೆ ಅನ್ನದನ್ನೂ ಒಪ್ಪಬಹುದೇನೋ.

ಸನ್ನಿವೇಶ ೨: 

ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಹೋಗಿದ್ದ ಭವ್ಯಭಾರತಕ್ಕೆ ತನ್ನ ಮೇಲಿನ ದೌರ್ಜನ್ಯಗಳನ್ನು ಖಂಡಿಸಲೊಂದು ಮುಖ ಬೇಕಾಗಿತ್ತು. ಹಿಂದಿನ ವರ್ಷದಲ್ಲಿ ಆ ಬಹುನಿರೀಕ್ಷಿತ ಮುಖವಾಗಿ  ಕಂಡವರು ಅಣ್ಣಾ ಹಜಾರೆ. ಉಪವಾಸ, ಪ್ರತಿಭಟನೆಗಳಂತಹ ಅವರ ಅಸ್ತ್ರಗಳಿಗೆ ಕೇಂದ್ರ ಸರ್ಕಾರವೇ ಥರಗುಟ್ಟುವಂತೆ ಮಾಡಿದ್ದು ಅವರಿಗೆ ದೇಶಾದ್ಯಂತ ಸಿಕ್ಕ ಅಪಾರ ಬೆಂಬಲ. ಮನೆ ಮನೆಗೆ ಅಣ್ಣಾ ಮಾತು ತಲುಪವಂತೆ ಮಾಡಿದ್ದು, ಏಕಾಏಕಿ ಚಳುವಳಿಯ ಕಾವೇರಿಸಿದ್ದರಲ್ಲಿ ಸುದ್ದಿ ಮಾಧ್ಯಮಗಳಷ್ಟೇ ಸಾಮಾಜಿಕ ಮಾಧ್ಯಮಗಳದ್ದೂ ಪಾತ್ರವಿದೆ.ಹಜಾರೆಯವರ ಹಜಾರ್(ಸಾವಿರ) ಪೋಸ್ಟುಗಳು ಫೇಸ್ಬುಕ್ಕು, ಆರ್ಕುಟ್ಟು, ಟ್ವಿಟ್ಟರಿನಲ್ಲಿ ಹರಿಯತೊಡಗಿ ಅಣ್ಣಾಗೆ ಯುವ ಶಕ್ತಿಯ ಅಪಾರ ಬೆಂಬಲ ಸಿಕ್ಕಿತು. ಯುವ ಜನತೆಯ ಈ ಪಾಟಿ ಬೆಂಬಲ ಕಂಡು ಕಂಗೆಟ್ಟ ಸರ್ಕಾರ ಅಣ್ಣಾಜಿಯ ಲೋಕಪಾಲ ಮಸೂದೆಯನ್ನು ತರಲು ಸಹಮತಿಸಬೇಕಾಯ್ತು. ಅದರಲ್ಲಿನ ಅಂಶಗಳಿಗೆ ಕ್ಯಾತೆ ತೆಗೆದು ಆ ಮಸೂದೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ್ದು ಬೇರೆ ಪ್ರಶ್ನೆ. ಆದರೆ ದೇಶದಲ್ಲಿ ಏನೋ ಆಗುತ್ತಿದೆ ಅಂದಾಗ ನಮ್ಮ ಪಾಡಿಗೆ ನಾವಿದ್ದುಬಿಡೋಣ ಎಂದು ಸುಮ್ಮನಿರದೇ ಅದರಲ್ಲಿ ಜನ ಸಕ್ರಿಯವಾಗುವಂತಹ ಆಸಕ್ತಿ ಬೆಳೆಸಿದ್ದು ಇದೇ ಸಮಾಜ ಮಾಧ್ಯಮಗಳು..

ಸನ್ನಿವೇಶ ೩:

ದೆಹಲಿಯಲ್ಲಿ ಬಾಲಕಿಯ ಮೇಲೆ ಅಮಾನವೀಯ ಘಟನೆ ನಡೆದಾಗ, ಉತ್ತರ ಭಾರತದಲ್ಲಿ ಭ್ರಷ್ಟರಿಗೆ ಕಂಟಕವಾಗಿದ್ದ ಐಎಸ್ ಅಧಿಕಾರಿಣಿಯ ಅಚಾನಕ್ಕಾದ ವರ್ಗಾವಣೆ,   ಗಡಿಯಲ್ಲಿ ಪಾಪಿ ಪಾಕಿಗಳು ಐವರು ಭಾರತೀಯ ಸೈನಿಕರನ್ನು ಕೊಂದಾಗ ಮಾರನೇ ದಿನ ಪೇಪರಿನಲ್ಲಿ ಬರೋ ಮೊದಲೇ ರಾತ್ರೋ ರಾತ್ರಿ ದೇಶವ್ಯಾಪಿ ಸುದ್ದಿಯಾಗಿ ಆಕ್ರೋಶ ಮುಗಿಲು ಮುಟ್ಟುವಂತಾಗಿದ್ದು, ನೆರೆಯಲ್ಲಿ, ಉತ್ತರಾಖಂಡದಲ್ಲಿ ಜನ ಘೋಳಿಡುತ್ತಿದ್ದಾಗ ದೇಶವ್ಯಾಪಿ ಸಹಾಯಹಸ್ತ ಚಾಚೋ ಭಾವವನ್ನು ಬಿತ್ತಿದ್ದು ಇದೇ ಸಾಮಾಜಿಕ ಮಾಧ್ಯಮಗಳಿಂದ. 

ಸನ್ನಿವೇಶ ೪: 

ಹೈಸ್ಕೂಲಿನಲ್ಲಿ ಜೊತೆಗೆ ಓದಿದ್ದ ಗೆಳೆಯರೆಲ್ಲಾ ಎಸ್ಸೆಸ್ಸೆಲ್ಸಿಯ ನಂತರ ಎಲ್ಲೆಲ್ಲಿ ಹೋದರೋ ತಿಳಿದಿರಲಿಲ್ಲ. ಒಂದು ನಾಲ್ಕೈದು ಜನ ಮಾತ್ರ ಸಂಪರ್ಕದಲ್ಲಿದ್ದರಷ್ಟೇ. ಜೀವನದ ಪಯಣದಲ್ಲಿ ಹೀಗೆ ಸಂಪರ್ಕಗಳು ತುಂಡಾಗೋದು ಸಹಜವೇ ಅಂದಿರಾ. ಹೌದೇನೋ. ಇತ್ತೀಚೆಗೆ ಹೈಸ್ಕೂಲಲ್ಲಿ ನಮ್ಮ ಗುರುಗಳಾಗಿದ್ದೋರು ಫೇಸ್ಬುಕ್ಕಿನಲ್ಲಿ ಒಂದು ಗ್ರೂಪು ಮಾಡಿದ್ರು. ಅವರ ಶಿಷ್ಯರ ಸಮೂಹ ಅಂತ.. ಆಶ್ಚರ್ಯ ಅಂದ್ರೆ ನಾನು ನನಗೆ ಗೊತ್ತಿದ್ದೋರನ್ನು ಸೇರಿಸೋದು, ಅವರು ಅವರಿಗೆ ಗೊತ್ತಿದ್ದೋರನ್ನ.. ಹೀಗೆ.. ಆ ಗ್ರೂಪಿನಲ್ಲಿ ೩೫ಕ್ಕೂ ಹೆಚ್ಚು ಜನ ಸೇರಿದ್ರು.. ಪರಸ್ಪರ ನೋಡದೇ ವರ್ಷಗಳೇ ಆಗಿದ್ರೂ  ಫೇಸ್ಬುಕ್ಕಲ್ಲಾದ್ರೂ ಮಾತಾಡಿ ಖುಷಿ ಪಟ್ಟೆವು. ಬೇರಾದ ಬಂಧಗಳನ್ನು ಮತ್ತೆ ಬೆಸೆದ ಈ ಫೇಸ್ಬುಕ್ಕಿಗೆ ಎಷ್ಟು ಧನ್ಯವಾದ ಹೇಳಿದ್ರೂ ಕಮ್ಮೀನೆ ಅನಿಸ್ತು.

ಇದರಿಂದ ಸಮಯ ಪೋಲಾಗೋಲ್ಲ ಅಂತ ಹೇಳೋಲ್ಲ. ಪೋಲೂ ಆಗುತ್ತೆ. ಉಪಯೋಗನೂ ಆಗುತ್ತೆ. ಆದ್ರೆ ನಾವು ಇದನ್ನ ಹೇಗೆ ಬಳಸಿಕೊಳ್ತೀವಿ ಅನ್ನೋದ್ರ ಮೇಲೆ ಅದು ನಿರ್ಧರಿತವಾಗುತ್ತೆ. ಫೇಸ್ಬುಕ್ಕಿನಲ್ಲಿ ಫೇಕ್ ಅಕೌಂಟ್ ಮಾಡಿ ಮೋಸ ಮಾಡೋರೂ ಇರ್ತಾರೆ. ಹೃದಯಗಳ ತಟ್ಟೋರು, ಆತ್ಮೀಯ ಗೆಳೆಯರಾಗೋರೂ ಇರ್ತಾರೆ. ನನ್ನ ಬೆಂಗಾಳಿ ಗೆಳೆಯನೊಬ್ಬನದು ಇದೇ ತರದ ಪ್ರೇಮ್ ಕಹಾನಿ. ಆರ್ಕುಟ್ಟಿನಲ್ಲಿ ಈತನ ಬಾಲ್ಯದ ಸ್ನೇಹಿತನೊಬ್ಬ ಗೆಳೆಯನಾಗಿದ್ದ. ಹಾಗೇ ಹೀಗೆ ಅವನ ಅಕೌಂಟಿನಲ್ಲಿದ್ದ ಆತನ ತಂಗಿಯೂ ಪರಿಚಯವಾದಳು. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗಿ ಈಗ ಪ್ರೀತಿಗೆ ಎರಡೂ ಮನೆಯವರೂ ಒಪ್ಪಿದ್ದಾರೆ ! ಹಾಗಾಗಿ ಇದೊಂತರ ಲವ್ ಕಮ್ ಆರೇಂಜ್ಡ್ ಸ್ಟೋರಿ .

ಇನ್ನು ಈ ಬರಹದ ಪ್ರಪಂಚಕ್ಕೆ ಮತ್ತೆ ಕರೆತಂದಿದ್ದು ಫೇಸ್ಬುಕ್ಕು ಅಂತಲೇ ಹೇಳಬಹುದೇನೋ. ಪದವಿಗೆ ಬಂದಾಗಿಂದ ಬರೆಯೋದು ಅಂದ್ರೆ ಕಿರು ಪರೀಕ್ಷೆ, ಪರೀಕ್ಷೆಯಲ್ಲಿ ಮಾತ್ರವಾಗಿದ್ದ ನನಗೆ ಮತ್ತೆ ಸಾಹಿತ್ಯ ಲೋಕಕ್ಕೆ ಕರೆತಂದದ್ದು ಫೇಸ್ಬುಕ್ಕು. ಇಲ್ಲಿ ಖಾತೆ ತೆಗೆದು ಕೆಲ ದಿನಗಳಲ್ಲೇ ಗೆಳತಿಯೊಬ್ಬಳು ಒಂದು ಗುಂಪಿಗೆ ಸೇರಿಸಿದಳು. ಅಲ್ಲಿನ ಆತ್ಮೀಯ ಗುರು ಸಮಾನ ಗೆಳೆಯರು ಬರೆದುದ ಸುಮ್ಮನೇ ಓದುತ್ತಿದ್ದ ಅಲ್ಲಿನವರ ಬರೆಯೋ ಪ್ರಯತ್ನ ಓದುತ್ತಿದ್ದ ನನಗೆ ಮತ್ತೆ ಬರೆಯೋ ಆಸಕ್ತಿ ಚಿಗುರಿತು. ಮುಂಚೆ ಬರೆದಿದ್ದೇ ಇಲ್ಲವೆಂದಲ್ಲ. ಆದರೆ ಪೀಯುಸಿ ನಂತರ ಬರೆಯೋ ಆಸಕ್ತಿ ಯಾಕೋ ಕುಂದಿ ಹೋಗಿತ್ತು. ಸಮಯ ಪೋಲು ಎಂದು ಸುಮಾರು ಜನ ಅಂದರೂ ದಂಡಿಯಾಗಿ ಬರೆಯೋ ಹುಚ್ಚು ಹತ್ತಿದ್ದು , ಸಾಹಿತ್ಯಾಸಕ್ತರ ನಡುವಿನ ಚರ್ಚೆಗಳಲ್ಲಿ ಭಾಗಿಯಾಗುವ ಯೋಗ ಸಿಕ್ಕಿದ್ದು ಇದೇ ಫೇಸ್ಬುಕ್ಕಿಂದ. ಹೆಗ್ಗೋಡಿಗೆ ಥಟ್ ಅಂತ ಹೇಳಿ ಖ್ಯಾತಿಯ ನಾ ಸೋಮೇಶ್ವರ ಬರ್ತಾರೆ ಅಂತ ಗೊತ್ತಾಗಿದ್ದೂ , ಅವರ ರಸಪ್ರಶ್ನೆಯ ಮೊದಲ ಸುತ್ತಿನಲ್ಲಿ ಗೆದ್ದು ಅವರನ್ನು ಭೇಟಿಯಾಗುವ ಯೋಗ ಸಿಕ್ಕಿದ್ದೂ ಈ ಫೇಸ್ಬುಕ್ಕಿನಲ್ಲಿ ಸಿಕ್ಕಿದ ಮಾಹಿತಿಯಿಂದಲೇ.

ಕೆಲವೊಂದು ಕಂಪೆನಿಗಳಲ್ಲಿ ಸಂದರ್ಶನಕ್ಕೆ ಹೋಗ್ಬೇಕೂಂದ್ರೆ ಅಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವವರ ರೆಫೆರೆನ್ಸ್ ಬೇಕು. ಯಾಹೂವಿನಲ್ಲಿರುವ ಗ್ರೂಪೊಂದು ಇಂತಹ ಕೆಲಸ ಮಾಡುತ್ತೆ ಅಂತ ಕೇಳಿದ್ದೇನೆ. ಫೇಸ್ಬುಕ್ಕಿನ ಗ್ರೂಪುಗಳಲ್ಲೂ ತಮ್ಮ ಕಂಪೆನಿಯಲ್ಲಿ ನಡೆಯುತ್ತಿರುವ ನೇಮಕಾತಿಯ ಬಗ್ಗೆ ಹಲವರು ಹಾಕುತ್ತಿರುತ್ತಾರೆ. ಎಲ್ಲಾ ಸರಿ, ಇದರಿಂದ ಸಮಾಜದ ಒಂದು ವರ್ಗಕ್ಕೆ ಲಾಭವಾಗಬಹುದು. ಸಮಾಜದ ಬಡ, ಮಧ್ಯಮ ಸ್ಥರದಲ್ಲಿರೋ ಜನಕ್ಕೆ ಈ ಸಾಮಾಜಿಕ ಮಾಧ್ಯಮ ಅಂದರೇನು ಅಂತಲೇ ಗೊತ್ತಿಲ್ಲವಲ್ಲ. ಅಂತದ್ದರಲ್ಲಿ ಈ ಸಾಮಾಜಿಕ ಮಾಧ್ಯಮಗಳು ಸಮಾಜಕ್ಕೆ ನಿಜವಾಗ್ಲೂ ಕಾಣಿಕೆ ಕೊಟ್ಟಿದ್ಯಾ ಅನ್ನೋ ಪ್ರಶ್ನೆ ಹಲವರದ್ದು. ಸಹಜವೇ. ರಾಜ್ಯದ ಒಂದು ಭಾಗದಲ್ಲಿ ಕೂತುಕೊಂಡು ಎಲ್ಲೆಡೆ ಬದಲಾವಣೆ ತರ್ತೀನಿ ಅನ್ನೋದು ಅಸಾಧ್ಯವೆಂಬುದು ಒಪ್ಪತಕ್ಕಂತಹ ಮಾತೇ ಸರಿ. ಆದರೆ ಯಾವ ವರ್ಗದ ಜನ ದೇಶದ ಆಗುಹೋಗುಗಳಿಗೂ ನಮಗೂ ಸಂಬಂಧವಿಲ್ಲವೆಂದು ಕುಳಿತಿದ್ದರೋ ಅವರಲ್ಲಿ ಈ ಮಾಧ್ಯಮಗಳು ಬದಲಾವಣೆ ತರುತ್ತಿದೆಯಾ ಎಂಬುದು ಗಮನಿಸತಕ್ಕ ಅಂಶ ಅನಿಸುತ್ತೆ. ಬದಲಾವಣೆ ಅನ್ನೋದು ಮಧ್ಯರಾತ್ರಿಯಲ್ಲೋ , ದಿನವೊಂದರಲ್ಲೋ ನಡೆಯುವ ಕ್ರಾಂತಿಯಲ್ಲ. ಅದು ನಿಧಾನಗತಿಯ ಸಹಜ ಕ್ರಿಯೆ. ಇಂದು ತಮ್ಮ ಕಾಲೇಜಿನ, ನಗರದಲ್ಲಿನ ಅನ್ಯಾಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳ ಪೋಸ್ಟುಗಳ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಯುವ ಜನತೆ ಇನ್ನು ಹಂತಹಂತವಾಗಿ ಸಾಮಾಜಿಕ ಪ್ರಜ್ನೆಯನ್ನು ಮೂಡಿಸಿಕೊಳ್ಳುವ ಆಶಾಕಿರಣ ಮೂಡಿಸುತ್ತಿದ್ದಾರೆ. ಬರೀ ರಾಜಕೀಯ ಕಿತ್ತಾಟಗಳ ಸುದ್ದಿಯಲ್ಲೇ ಕಳೆದುಹೋಗೋ ಪತ್ರಿಕೆಗಳ ಮಧ್ಯೆ ಎಲ್ಲೋ ನಡೆದ ಅನ್ಯಾಯವನ್ನ, ಎಲೆಮರೆ ಕಾಯಿಯಾಗಿದ್ದ ಯಾರದೋ ಸಾಧನೆಯನ್ನ ಹಟಾತ್ತಾಗಿ ದೇಶಾದ್ಯಂತ ಪಸರಿಸೋ ಈ ಮಾಧ್ಯಮಗಳು ಎಷ್ಟೋ ವಾಸಿಯೆನಿಸುತ್ತವೆ. ಸಮಾನಾಸಕ್ತಿಯ ಜನ ಒಗ್ಗೂಡಿ  VRZ Group, ಹತ್ತು ಜನ 'ಹತ್ತು ತುತ್ತು'ವಿನಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನ ಮಾಡೋಕೆ ಸಹಕಾರಿಯಾಗುತ್ತಿವೆ. ಮುಂಚೆಯೇ ಹೇಳಿದಂತೆ ಇದೇ ಎಲ್ಲ ಅಲ್ಲ. ಆದ್ರೆ ಇಂತದ್ದೂ ಇವೆ ಅಷ್ಟೆ. ಮುಂಚೆಯೇ ಹೇಳಿದಂತೆ ಕೆಲವು ನಿದರ್ಶನಗಳನ್ನು ಕೊಟ್ಟಿದ್ದೇನಷ್ಟೇ. ಆದರೆ ಇವು ಹೀಗೇ ಎಂದು ಹೇಳಹೋಗುವುದಿಲ್ಲ. ಇದರ ಬಗೆಗಿನ ಅಭಿಪ್ರಾಯಗಳು ನಿಮ್ಮವೇ..


ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಸಾಮಾಜಿಕ ಮಾಧ್ಯಮಗಳು ಮತ್ತು ಸಮಾಜ:ಪ್ರಶಸ್ತಿ ಅಂಕಣ

Leave a Reply

Your email address will not be published. Required fields are marked *