ಸಾಮಾಜಿಕ ಜವಾಬ್ದಾರಿ ಮತ್ತು ಜವಾಬ್ದಾರಿಯುತರು: ಕೆ ಟಿ ಸೋಮಶೇಖರ ಹೊಳಲ್ಕೆರೆ.

      somashekar-k-t
      
ಪ್ರತಿಯೊಬ್ಬ ವ್ಯಕ್ತಿಯೂ ತಾನಿರುವ ಸಮಾಜದ, ನಾಡಿನ ಆಗು ಹೋಗಿಗೆ ಜವಾಬ್ದಾರಿಯಾಗಿರುತ್ತಾನೆ. ಹಾಗೆ ಇರಬೇಕಾದುದು ಅವನ ಕರ್ತವ್ಯ ಕೂಡ. ಜನಸಾಮಾನ್ಯರು ಇದಕ್ಕೆ ಹೊರತಲ್ಲ .ಇವರು ಹೊರತಾದರೆ ಬೆರಳೆಣಿಕೆಯಷ್ಟು ಜನಕ್ಕೆ ಹಾನಿ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಹೊರತಾದರೆ ಇಡೀ ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಹಾನಿ ಸಂಭವಿಸುತ್ತದೆ. ಆದ್ದರಿಂದ ಜನಸಾಮಾನ್ಯರಿಗಿಂತ ಸಾರ್ವಜನಿಕ ಕ್ಷೇತ್ರದಲ್ಲಿರುವವರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ.

ಪುರಾಣ, ಇತಿಹಾಸದಲ್ಲಿ ಅನೇಕರು ನುಡಿದಂತೆ ನಡೆದು ಆದರ್ಶವಾಗಿ ಬದುಕಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ! ಭರತ, ರಾಮ, ಪಾಂಡವರು, ಹರಿಶ್ಚಂದ್ರ, ವಚನಕಾರರು, ಗಾಂಧಿ … ಮುಂತಾದವರು ಉತ್ತಮ ನಡೆ ನುಡಿಗಳಿಂದ ಪ್ರಸಿದ್ದರಾಗಿದ್ದಾರೆ. ಹಾಗೇ ಸಮಾಜಕ್ಕೆ ಆದರ್ಶರಾಗಿದ್ದರಿಂದ ಉತ್ತಮ ಸಮಾಜ ಸೃಷ್ಟಿಗೆ ಕಾರಣರಾಗಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ. ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ್ದು ಸರಿನೋ ತಪ್ಪೋ ಸಮಾಜಕ್ಕೆ ತನ್ನ ಕಾರಣಕ್ಕೆ ತಪ್ಪು ಸಂದೇಶ ಹೋಗಬಾರದು ಎಂಬ ದಿಟ್ಟ, ತ್ಯಾಗದ ನಿರ್ದಾರ ಘನಘೋರ! ಒಬ್ಬ ಪ್ರಜೆಯ ಮಾತಿಗೆ ರಾಮ ಇಷ್ಟು ಪ್ರಾಮುಖ್ಯತೆ ಕೊಟ್ಟನೆ? ತಪ್ಪಿರದ ಸೀತೆಗಿಂತಹ ಶಿಕ್ಷೆ ಕೊಟ್ಟು ಆ ಮೂಲಕ ತಾನೂ ಶಿಕ್ಷೆಗೊಳಗಾದನೆ? ಸೀತೆಯನ್ನಗಲಿ ರಾಮ ಸಂತೋಷವಾಗಿದ್ದನೆ?  ಆ ಮೂಲಕ ತನ್ನ ದುಃಖಕ್ಕಿಂತ ಸಮಾಜದ ಮೌಲ್ಯಯುತವಾದ ಬದುಕೇ ಶ್ರೇಷ್ಠ ಎಂದು ಸಾರಿದನೆ ? ಇದು ಸಾಮಾಜಿಕ ಉತ್ತಮ ಜವಾಬ್ದಾರಿಯಲ್ಲವೆ? 

'ಯಥಾ ರಾಜ, ತಥಾ ಪ್ರಜಾ' ದಂತೆ ಸಮಾಜದ ಉಳಿವಿಗೆ, ಅಳಿವಿಗೆ, ಉನ್ನತಿ, ಅಧೋಗತಿಗಳಿಗೆ ನಾಡಿನ ನಾಯಕರು, ಸರ್ಕಾರಗಳು, ವಿವಿಧ ಕ್ಷೇತ್ರಗಳಲ್ಲಿನ ಪ್ರಮುಖರು ಕಾರಣರಾಗುತ್ತಾರೆ. ಇವರ ಆದರ್ಶ, ಮೌಲ್ಯಯುತ ಬದುಕು ಉತ್ತಮ ಸಮಾಜದ ಸೃಷ್ಟಿಗೆ ಕಾರಣವಾದರೆ, ಅನೈತಿಕ, ದುಷ್ಟ, ಭ್ರಷ್ಟ ಬದುಕು ಸಮಾಜದ ಅವನತಿಗೆ ಹಿಂಸೆಗೆ ಕಾರಣವಾಗುತ್ತದೆ.

ಹಿಂದೆ ಒಂದು ಊರಿನ ಕ್ಷೇಮಕ್ಕಿಂತ ಒಬ್ಬ ವ್ಯಕ್ತಿಯ,  ಅಥವಾ ಒಂದು ಮನೆಯ ಕ್ಷೇಮ ಮುಖ್ಯವಾಗುತ್ತಿರಲಿಲ್ಲ . ' ಭಾಗೀರಥಿ' ಇದಕ್ಕೆ ಉತ್ತಮ ಉದಾಹರಣೆ. ಇವರಂಥವರಿಂದ ಸಮಾಜ ಉನ್ನತವಾಗಿತ್ತು.

ಇವರು ಆದರ್ಶರಾಗಿ, ತ್ಯಾಗಮೂರ್ತಿಯೂ ಆಗಿದ್ದಾರೆ. ಇತ್ತೀಚೆಗೆ ಇಂಥವರ ನಾಡಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿರುವವರು, ಜನಪ್ರತಿನಿಧಿಗಳು,  ನಮ್ಮ ನಾಯಕರು ಜವಾಬ್ದಾರಿರಹಿತರಾಗಿ ನುಡಿದು, ನಡೆದು, ಅಡ್ಡ ನಡೆಯನ್ನು ಸಮರ್ಥಿಸುತ್ತ ಸಮಾಜದ ನೆಮ್ಮದಿ ಕದಡಿ, ಹಿಂಸೆಗೆ, ಆಸ್ತಿ ಮತ್ತು ಪ್ರಾಣ ಹಾನಿಗೆ ಕಾರಣವಾಗುತ್ತಿರುವುದು ಹೆಚ್ಚುತ್ತಿದೆ. ಇಂಥಾ ಸಂದರ್ಭಗಳಲ್ಲಿ ಹಿಂದಿನವರು ಆತ್ಮಪೂರ್ವಕ ಕ್ಷಮೆಯಾಚಿಸಿಯೋ, ಸ್ಥಾನ ತೆಜಿಸಿಯೋ ದೊಡ್ಡತನ ಮೆರೆಯುತ್ತಿದ್ದರು. ಇಂದು ಅಂಥವರ ವಿರುದ್ಧ ಕ್ಷಮೆಯಾಚಿಸುವಂತೆ ಧರಣಿ ನಡೆಸಿದರೆ, ಪ್ರತಿ ಧರಣಿ ನಡೆಯಿಸಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವವರಿಗೆ ಎಷ್ಟು ಸಾಮಾಜಿಕ ಜವಾಬ್ದಾರಿ ಇದೆಯೆಂದು ತಿಳಿಯಬೇಕು. ಇಂಥವರು ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದ ಮಾತ್ರಕ್ಕೆ ಅವರು ಮನಸ್ಸು ಪರಿವರ್ತನೆ ಮಾಡಿಕೊಂಡು ಜವಾಬ್ದಾರಿ ತಂದುಕೊಂಡರೆಂದು ಭಾವಿಸಬಹುದೆ ? ಧಂಗೆ , ಗಲಬೆ , ಹಿಂಸೆಗಳನ್ನು ಸರಿಯಾಗಿ ನಿಭಾಯಿಸಿ ಸಾಮಾಜಿಕ ಜವಾಬ್ದಾರಿ ಮೆರೆಯುವಲ್ಲಿ ಇತ್ತೀಚಿನ ಆಡಳಿತ  ವ್ಯವಸ್ಥೆಗಳು ಹೆಣಗುತ್ತಿವೆ. ಜತೆಗೆ ಜನರ ನೆಮ್ಮದಿಗೆ ಕಾರಣವಾಗಬೇಕಾದ ಸರಕಾರಗಳೂ ಜನರ ನೆಮ್ಮದಿಗೆ ಭಂಗ ತರುತ್ತಿರುವುದು ವಿಪರ್ಯಾಸ. ಲೋಕಾಯುಕ್ತ ಸಂಸ್ಥೆಯ ಉಳಿವಿನ ವಿಚಾರ, ಹೆಣ್ಣಿನ ಮೇಲಿನ ಅತ್ಯಾಚಾರ, ರೈತರ ಮತ್ತು ಪೋಲೀಸ್ ಅಧಿಕಾರಿಗಳ ಆತ್ಮಹತ್ಯೆ , ಟಿಪ್ಪು ಜಯಂತಿ ಘೋಷಣೆ ಮತ್ತು ನಿರ್ವಹಣೆ ,ಕಾರ್ಮಿಕ ಕಾಯಿದೆ ತಿದ್ದುಪಡಿ ವಿಧೇಯಕ ವಿರೋಧಿಸಿ ನಡೆಸಿದ ಮುಷ್ಕರ,  ಮಹದಾಯಿ , ಕಾವೇರಿ, ಎತ್ತಿನ ಹೊಳೆಹೊಳೆ ಹೋರಾಟ…  ಮುಂತಾದವುಗಳ ಸಂದರ್ಬಗಳಲ್ಲಿ ನಾಡಿನ ಮುಖಂಡರ ನಡೆ, ನುಡಿ, ಅದನ್ನು ನಿರ್ವಹಿಸಿದ ರೀತಿ ಗಮನಿಸಿದರೆ ಜವಾಬ್ದಾರಿ ಸ್ಥಾನದಲ್ಲಿರುವವರು,  ಸಾಮಾಜಿಕ ಜವಾಬ್ದಾರಿ ಎಷ್ಟರಮಟ್ಟಿಗೆ ನಿಭಾಯಿಸಿದ್ದಾರೆಂದು ಅರ್ಥವಾಗುತ್ತದೆ.

ವಿಚಾರವಂತರೆನಿಸಿಕೊಂಡವರು, ಬದ್ದಿಜೀವಿಗಳೆನಿಸಿಕೊಂಡವರು ಜವಾಬ್ದಾರಿ ಸ್ಥಾನದಲ್ಲಿರುವವರು ಸಮಾಜದ ಏಳಿಗೆ ಬಯಸಿ ಉತ್ತಮ ಮತ್ತು ನೆಮ್ಮದಿಯ ಸಮಾಜದ ಸೃಷ್ಟಿಗೆ ಕಾರಣರಾಗಬೇಕು.
ಇಂದು ಕೆಲವು ಸಾಹಿತಿಗಳು,  ವಿಚಾರವಂತರು  ಅನವಶ್ಯಕ ಹೇಳಿಕೆಗಳನ್ನು ನೀಡಿ,  ಸಮಾಜದ ನೆಮ್ಮದಿಯನ್ನು ಕದಡಿ, ಗಲಬೆಗೆ, ಹಿಂಸೆಗೆ ಕಾರಣರಾಗುತ್ತಿದ್ದಾರೆ. ಬುದ್ದಿವಂತರಾದವರ ವಿಚಾರಗಳು ಸಮಾಜವನ್ನು ಉನ್ನತ ಮಟ್ಟಕ್ಕೆ  ಒಯ್ಯುವಂತೆ ಇರಬೇಕು. ತಮ್ಮ ವಿಚಾರಗಳನ್ನು ಜನರ ನಂಬಿಕೆಗಳಿಗೆ, ನೆಮ್ಮದಿಗೆ ಭಂಗವಾಗದಂತೆ ,ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗದಂತೆ ತಿಳಿಸುವ ಬುದ್ದಿವಂತಿಕೆಯಿಲ್ಲದ ಮೇಲೆ ಅವರು ಬುದ್ಧಿಜೀವಿಗಳು ಹೇಗಾದಾರು? ಬುದ್ದಿಜೀವಿ, ವಿಚಾರವಂತರಿಗೆ  ಸಮಾಜಿಕ ಜವಾಬ್ದಾರಿ ಬೇಡವೆ? ಸಾಮಾಜಿಕ ಜವಾಬ್ದಾರಿ ಇಲ್ಲದವರು ಬುದ್ದಿ ಜೀವಿಗಳು, ವಿಚಾರವಂತರು ಹೇಗಾದಾರು? ಬುದ್ದಿವಂತರೆನಿಸಿಕೊಂಡವರು ಜ್ವಲಂತ ಸಮಸ್ಯೆಗಳಾದ ಮಹದಾಯಿ, ಕಾವೇರಿ, ರೈತರ ಮತ್ತು ಪೋಲೀಸ್ ಅಧಿಕಾರಿಗಳ ಆತ್ಮಹತ್ಯೆ, ಹೆಂಗಳೆಯರ ಅತ್ಯಾಚಾರ, ಬೆಳಗಾವಿ ಮರಾಠರ ನಡೆ…… ನೆಲ, ಜಲ, ನಾಡು ಸಮಸ್ಯೆಳಿಗೆ ಪರಿಹಾರ ಹುಡುಕಿ ಕೊಟ್ಟು, ನಾಡಿನ ನೆಮ್ಮದಿಗೆ ಕಾರಣರಾಗಿ, ಅವರ, ಮುಕ್ತ ಕಂಠಕ್ಕೆ ಸಿಲುಕಬೇಕು.ಗೌರವಕ್ಕೆ ಭಾಜನರಾಗಬೇಕಿದೆ.

ಮುಷ್ಕರ, ಗಲಬೆ, ದಂಗೆ…ಗಳಂದು  ಸಾರ್ವಜನಿಕರಿಗೆ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗದಂತೆ, ಬಡವರ, ನಿರಪರಾಧಿಗಳ ಬದುಕಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಆಡಳಿತ ವ್ಯವಸ್ಥೆಗಳ ಆದ್ಯಕರ್ತವ್ಯ. ಜನರ ಬೇಡಿಕೆಗಳು ನ್ಯಾಯೋಚಿತವಾಗಿವೆಯೇ ? ಈ ಸಮಸ್ಯೆ ಬಾಹುಳ್ಯವೆಷ್ಟು, ಅವುಗಳನ್ನು ಹೇಗೆ ಪರಿಹರಿಸುವುದು ಮುಂತಾಗಿ ಯೋಚಿಸಿ ಸೂಕ್ತ ರೀತಿಯಲ್ಲಿ ಜವಾಬ್ದಾರಿಯುತವಾಗಿ ತೀರ್ಮಾನಿಸಬೇಕಿದೆ. ಪ್ರತಿ ಸಮಸ್ಯೆಯನ್ನು ತಮ್ಮ ರಾಜಕೀಯ ಹಿತದೃಷ್ಟಿಯಿಂದ ನೋಡದೆ ಅದನ್ನು ಯಾರೇ ಪ್ರಸ್ತಾಪಿಸಿದರೂ ಅದರ ನೈಜತೆಗೆ ಸ್ಪಂದಿಸಬೇಕಿದೆ. ಪ್ರತಿಪಕ್ಷಗಳೂ ಆಡಳಿತ ವ್ಯವಸ್ಥೆಗಳೂ ಜನರನ್ನು ಬಲಿಪಶು ಮಾಡುವುದನ್ನು , ರಾಜಕೀಯ ದಾಳವಾಗಿ ಉಪಯೋಗಿಸಿಕೊಳ್ಳುವುದನ್ನು ನಿಲ್ಲಿಸಿ ವಸ್ತು ಸ್ಥಿತಿಯನ್ನು ಪರಿಗಣಿಸಿ ನ್ಯಾಯದೊರಕಿಸಿಕೊಡಬೇಕಿದೆ.

ಜನರು ಮುಷ್ಕರ ಮುಂತಾದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ ನಾಶ ಮಾಡುತ್ತಿರುವುದನ್ನು ನೋಡಿದರೆ ಅದು ತಮ್ಮದಲ್ಲ, ಯಾರದೋ ಪರಮ ಶತೃಗಳ ಆಸ್ತಿ ಎಂದು ಭಾವಿಸಿದಂತೆ ಕಾಣುತ್ತದೆ. ಸರ್ಕಾರದ್ದು ಎಂದರೆ ಪ್ರಜೆಗಳ ತೆರಿಗೆ ಹಣದಿಂದ ನಿರ್ಮಿಸಿದ್ದು ಎಂಬ ಸತ್ಯ ಎಲ್ಲರಿಗೂ ಸರಿಯಾಗಿ ತಿಳಿದಿರದ ಪ್ರಯುಕ್ತ ಅದರ ನಾಶ ಮಾಡುತ್ತಿದ್ದಾರೆ. ಇದನ್ನು ಮರು ನಿರ್ಮಾಣ ಮಾಡಲು ನಮ್ಮ ಹಣವನ್ನೇ ಮತ್ತೆ ಉಪಯೋಗಿಸುತ್ತಾರೆ, ಅದರಲ್ಲಿ ಭ್ರಷ್ಟತೆಗಿಷ್ಟೆಂದು ದುರುಪಯೋಗ ಆಗುತ್ತದೆಂದು, ಮಂತ್ರಿಗಳೇನು ಹೊಲ, ಮನೆ, ಕಾರ್ಖಾನೆಯಲ್ಲಿ ಬೆವರಿಳಿಸಿ ದುಡಿದು ತಂದು ಖರ್ಚು ಮಾಡುವುದಿಲ್ಲ ಅದು ನಮ್ಮದೇ ಹಣ ಎಂಬ ಸತ್ಯ ತಿಳಿಯಬೇಕಿದೆ. ತಿಳಿಯದಿದ್ದಲ್ಲಿ ದೇಶಕ್ಕೆ ನಷ್ಟವಾಗಿ ನಮ್ಮ ದೇಶ ಹಿಂದುಳಿಯುವಂತಾಗುತ್ತದೆ. ಆದ್ದರಿಂದ ಜನರು ಸಹ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡದೆ, ಜನರ ನಿತ್ಯದ ಬದುಕಿಗೆ ತೊಂದರೆ ಉಂಟುಮಾಡದೆ ಬೇರೆ ಮಾರ್ಗದಿಂದ ಹೋರಾಡಿ, ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳುವ, ಉತ್ತಮ ಭಾರತದ ಪ್ರಜೆಯ ಕರ್ತವ್ಯ ಪಾಲಿಸಿ, ತಮ್ಮ ಮುಷ್ಕರದ ಹಕ್ಕನ್ನೂ ಉಳಿಸಿಕೊಳ್ಳುವ ಅನಿವಾರ್ಯತೆ ಇಂದು ಬಂದೊದಗಿದೆ. ಇದನ್ನು ಜನರೂ ಅರಿಯಬೇಕಿದೆ. ಯಾರದೋ ಆಸೆ ಆಮಿಷಗಳಿಗೆ ಒಳಗಾಗದೆ ನಿರಪರಾಧಿಗಳಿಗೆ ತೊಂದರೆಯಾಗದಂತೆ ಹೋರಾಡಿ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ. ದಂಗೆ, ಗಲಬೆಗಳ ಸಮಯದಿ ಅನ್ಯ ಧ್ಯಾನದಲ್ಲಿ ತೊಡಗದೆ ಆಡಳಿತ ವ್ಯವಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಂಡು ಜನರ ನೆಮ್ಮದಿಗೆ ಕಾರಣವಾಗಬೇಕಿದೆ.ಅದು ಅವರ ಜವಾಬ್ದಾರಿ.

ಪ್ರತಿಯೊಬ್ಬರೂ ಸಮಾಜಿಕ ಜವಾಬ್ದಾರಿ ನಿಭಾಯಿಸುವುದು ಬಹು ಮುಖ್ಯ. ಯಾವುದೇ ಅಹಿತಕರ ಘಟನೆಗಳು ನಡೆದಾಗ ಎಲ್ಲರೂ ಅವಶ್ಯಕವಾಗಿ ಸ್ಪಂದಿಸಿ ಉತ್ತಮ ಸಮಾಜದ ಉಳಿವಿಗೆ, ಶಾಂತ, ಸ್ವಸ್ಥ ಸಮಾಜದ ಇರುವಿಕೆಗೆ ಕಾರಣರಾಗಬೇಕಿದೆ. ಅದರಲ್ಲೂ ಆಡಳಿತ ವ್ಯವಸ್ಥೆಗಳದ್ದು ಹೆಚ್ಚಿನ ಜವಾಬ್ದಾರಿ ಇರುತ್ತದೆ. ಪ್ರತಿಪಕ್ಷಗಳದ್ದೂ ಪಾಲಿರುತ್ತದೆಂಬುದನ್ನು ಮರೆಯಬಾರದು!
               
-ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x