ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಎದುರಿಸುವುದು ಒಂದು ಕಲೆ!: ಸಹನಾ ಪ್ರಸಾದ್

” ಯಾಕ್ರೀ ಜಾನಕಿ, ಎಫ್ ಬಿ ಯಲ್ಲಿ ಕಾಣುತ್ತಾನೇ ಇಲ್ಲ, ಈಚೀಚಿಗೆ. ನಿಮ್ಮ ನಿಲುಮೆಗಳು, ಪಟಗಳು ಇಲ್ಲದೆ ಫ಼ೇಸ್ಬುಕ್ಕು ಸೊರಗಿದೆಯಲ್ಲಾ!” ನನ್ನ ಮಾಮೂಲಿ ಹಾಸ್ಯದ ಧಾಟಿಯಲ್ಲಿ ಕಾಲೆಳೆದಾಗ ಜಾನಕಿಯ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ” ಈ ಮುಖಪುಟ ಒಂದೇ ಸಾಕು, ನಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಕ್ಕೆ ಇಲ್ಲಿ ಜನರು ಬಹಳ ಭಯಂಕರ. ನನ್ನ ಮುಂದೆ ಒಂದು ರೀತಿ, ಬೆನ್ನ ಹಿಂದೆ ಮತ್ತೊಂದೇ ತರಹ. ಅಲ್ಲಿ ಕಾಮೆಂಟ್ ಹಾಕುವುದು ಬೇರೆ, ಇನ್ಬಾಕ್ಸಲ್ಲಿ ಬರೀ ದೂಷಣೆ, ಜಾನಕಿ ಹಾಗೆ, ಅವಳ ಪಟ ನೊಡಿದ್ರಾ, ಯಾವ ತರ ಡ್ರೆಸ್ಸ್ ಮಾಡಿಕೊಂಡಿದಾಳೆ, ಯಾವ ರೀತಿ ಪೋಸ್ ಕೊಟ್ಟಿದ್ದಾಳೆ, ಅವಳ ವಯಸ್ಸೇನು, ನಿಲುಮೆಗಳೇನು..ಒಂದೇ ಎರಡೇ..” ಅವಳ ವಾಗ್ಝರಿಗೆ ಸುಸ್ತಾದೆ. ಏನಾಗಿರಬಹುದೆಂದು ಊಹಿಸಲು ಕಷ್ಟವಾಗಲಿಲ್ಲ. ನಿಮಗೂ ಸಹ, ಅಲ್ಲವೇ?

ಇದು ನಮ್ಮ, ನಿಮ್ಮ ಜೀವನದಲ್ಲಿ ನಡೆದಿರುತ್ತದೆ, ನಡೀತ ಇರುತ್ತದೆ. ಸಾಮಾಜಿಕ ಜಲತಾಣದಲ್ಲಿ ಸಕ್ರಿಯರಾಗಿರುವವರಿಗೆ ಇದು ಸಾಮಾನ್ಯವಾಗಿ ಅಭ್ಯಾಸವಾಗಿರುವಂತಹುದ್ದು. ಮೊದ ಮೊದಲು ಹೊಸತರಲ್ಲಿ ನಾವೆಲ್ಲರೂ ಸುಮಾರು ತಪ್ಪುಗಳನ್ನು ಮಾಡಿರುವವರೇ. ಇದರಲ್ಲಿ ಹಳಬರಾಗುತ್ತಾ ಏಟು ತಿನ್ನುತ್ತಾ ಈಗ ಸ್ವಲ್ಪ ಮಟ್ಟಿಗೆ ಜಾಣ/ಜಾಣೆಯರಾಗಿದ್ದೀವಿ. ಜನರ ಜತೆ ಮಾತಾಡುವುದು, ವ್ಯವಹಾರ ಮಾಡುವುದನ್ನು ಕಲಿತು ತಕ್ಕಮಟ್ಟಿಗೆ ಮನಃಶಾಂತಿ ದೊರಕಿಸಿಕೊಂಡಿದ್ದೇವೆ. ಹೊಸತರಲ್ಲಿ, ಯಾರ ಹತ್ತಿರ, ಹೇಗೆ ವ್ಯವಹರಿಸಬೇಕೆಂದು ತಿಳಿಯುತ್ತಿರಲಿಲ್ಲ. ಎಲ್ಲರ ಹತ್ತಿರ ಏನೋ ಒಂದು ಮಾತಾಡುವುದು, ಅದರಿಂದ ವಿರಸ, ಯಾವುದೋ ನಿಲುಮೆಗೆ ಏನೋ ಬರೆದು ಕಾಮೆಂಟ್ ಮಾಡಿ ತೊಂದರೆಗೊಳಗಾಗುವುದು, ನಾವು ಹೇಳಿದ್ದೇ ಬೇರೆ, ಅವರು ಅರ್ಥೈಸಿಕೊಂಡಿದ್ದು ಬೇರೇನೊ..ಅಬ್ಬಾ ಇದರ ಬಗ್ಗೆ ಪೇಜುಗಟ್ಲೆ ಬರೀಬಹುದು! ಅಲ್ಲವೇ?

ಜನರ ಸಂಪರ್ಕ ಇದ್ದಾಗ ಇವೆಲ್ಲ ನಿರೀಕ್ಷಿಸುವಂತಹುದ್ದು.. ಮುಂಚೆ ವಠಾರ ವಾಸದಲ್ಲಿ ಯಾವ ರೀತಿ ಮಾತುಕತೆಗಳು, ಮನಸ್ಸು ನೋಯುವಂತಹ ಕಲಾಪಗಳು ನಡೆಯುತ್ತಿದ್ದವು, ಅದರಿಂದ ಎಷ್ಟು ಜನರ ಬಾಳೇ ಹಾಳಾಗುತ್ತಿತ್ತು, ಜನರ ಬಾಯಿಗೆ ಬಿದ್ದವರ ನೋವು, ಹಿಂಸೆ ಆ ದೇವರಿಗೆ ಪ್ರೀತಿ ಎಂಬುದು ಬಹಳಷ್ಟು ಕತೆ, ಕಾದಂಬರಿಗಳಲ್ಲಿ, ಸಿನೇಮಾದಲ್ಲಿ ನೋಡಿದ್ದೇವೆ. ಅದರಲ್ಲೂ ಹೆಣ್ಣು ಮಕ್ಕಳ ಬಗ್ಗೆ, ಅವರ ಉಡುಗೆ-ಉಡುಪಿನ ಬಗ್ಗೆ, ಅವರು ಯಾರ ಜತೆಗಾದರೂ ಸ್ನೇಹದಿಂದಿದ್ದರೆ ಅದರ ಬಗ್ಗೆ ಕೀಳಾಗಿ ಮಾತಾಡುವುದು…ಇದು ಸರ್ವೇ ಸಾಮಾನ್ಯ. ಇದೆಲ್ಲಾ ಪ್ರಬುದ್ದ ರೀತಿಯಲ್ಲಿ ನಿಭಾಯಿಸುವುದು ಕಲಿಯಲು ಸ್ವಲ್ಪ ತಾಳ್ಮೆ, ಜಾಣತನ, ಒಂದಷ್ಟು ಹಾಸ್ಯಪ್ರಜ್ಞೆ ಇರಬೇಕು.

ಮೊಟ್ಟಮೊದಲನೆಯದಾಗಿ, ಯಾರಾದರೂ ನಮ್ಮನ್ನು ಟೀಕಿಸಿದರೆ ಅದಕ್ಕೆ ಪ್ರತಿಕ್ರಿಯಿಸಬೇಕೇ? ಇದು ಎಲ್ಲಿ, ಯಾವಾಗ ಹೇಳಿದರು ಅನ್ನುವುದರ ಮೇಲೆ ಅವಲಂಬಿಸಿರುತ್ತದೆ. ಕೆಲವು ಬಾರಿ ಅದಕ್ಕೆ ಬೇರೆಯವರು ಉತ್ತರಿಸಿ, ನಿಮ್ಮ ಪಾಲಿನ ಕೆಲಸವನ್ನು ಕಡಿಮೆ ಮಾಡಿಬಿಟ್ಟಿರುತ್ತಾರೆ. ಆಗ ನೀವು ತಲೆ ಕೆಡಿಸಿಕೊಳ್ಳುವ ಪ್ರಮೇಯವೇ ಇರುವುದಿಲ್ಲ. ಸಮೂಹಿಕವಾಗಿ ಹೊಗಳಿ, ಹಿಂದೆ ತೆಗಳಿದರೆ ಅದನ್ನು ಅಲಕ್ಷ್ಯ ಮಾಡುವುದೇ ಒಳ್ಳೆಯದು. ಅದಕ್ಕಾಗಿಯೇ ಬಹಳಷ್ಟು ಜನ ಇನ್ಬಾಕ್ಸ್ ಅಲ್ಲಿ ಬರುವ ಸಂದೇಶಗಳನ್ನು ಓದುವುದೇ ಇಲ್ಲ. ತಮ್ಮ ಹಿಂದೆ ಮಾತಾಡುವುದನ್ನು ತಡೆಯಲು ಇದು ಬಹಳ ಸಹಾಯಕಾರಿ.
ಇನ್ನು, ಎಲ್ಲರಿಗೂ ಕಾಣುವಂತೆ ಬರೆದ ಟಿಪ್ಪಣಿಗಳಿಗೆ ಏನು ಮಾಡುವುದು? ತೀರ ಅಸಹ್ಯವಾಗಿದ್ದಲ್ಲಿ ಅದನ್ನು ಅಳಿಸುವುದು ಉತ್ತಮ. ಕೆಲವೊಂದಕ್ಕೆ ಪ್ರತಿಕ್ರಿಯೆ ನೀಡುವುದು ಕೊಚ್ಚೆಗೆ ಕಲ್ಲು ಹಾಕಿದ ಹಾಗೆ. ಅದರ ಬದಲು ಅದನ್ನು ಅಳಿಸಿ ಮಿಕ್ಕಿದ್ದರ ಬಗ್ಗೆ ಗಮನ ಹರಿಸುವುದೊಳ್ಳೆಯದು.ಇನ್ನು ಕೆಲವೊಂದಕ್ಕೆ ಹಾಸ್ಯಮಯವಾಗಿ ಉತ್ತರಿಸಿ ಕೈ ತೊಳೆದುಕೊಳ್ಳಬಹುದು. ಇಲ್ಲ, ಅವರಿಗೆ ಅಲ್ಲೇ ಚುರುಕು ಮುಟ್ಟಿಸಿ ಸುಮ್ಮನಾಗುವುದು. ಆದರೆ ಇದರಲ್ಲಿ ಅಪಾಯವಿದೆ. ಮಾತಿಗೆ ಮಾತು ಬೆಳೆದು, ಜಗಳ, ವಿರಸವಾಗುವ ಸಾಧ್ಯತೆಗಳು ಜಾಸ್ತಿ. ಅವರು ತೀರ ಆಪ್ತರಾಗಿದ್ದರೆ ಅವರಿಗೆ ವೈಯಕ್ತಿಕವಾಗಿ ಸಂದೇಶ ಕಳಿಸಬಹುದು. ಸಾರ್ವಜನಿಕವಾಗಿ ಅದನ್ನು ಅಲ್ಲಿಗೆ ನಿಲ್ಲಿಸಿ, ಮತ್ತೆ ಯಾವಾಗಲಾದರೂ ಇದರ ಚರ್ಚೆ ಮುಂದುವರಿಸೋಣ ಎಂದು ಇತಿಶ್ರೀ ಹಾಡಿದರೆ ಒಳ್ಳೆಯದು.

ಕೆಲವು ಬಾರಿ ನಾವು ಕಠಿಣ ನಿಲುವು ತಾಳಿದರೆ ಎದುರಾಳಿ ಸುಮ್ಮನಾಗುವ ಸಾಧ್ಯತೆ ಹೆಚ್ಚು. ನಮ್ಮ ನಿಲುವಿಗೆ ನಾವು ಬದ್ದ ಎಂಬುದು ಅವರಿಗರಿವಾದಾಗ ಬಹುತೇಕ ಜನರು ಸುಮ್ಮನಾಗುವರು. ನಮ್ಮ ಭಾಷೆ, ಕೆಲಸ ಮಾಡುವ ಜಾಗ, ಧರ್ಮ, ನಂಬುಕೆ ಇವುಗಳ ಬಗ್ಗೆ ಯಾರಾದರೂ ಕೆಟ್ಟದಾಗಿ ಟೀಕಿಸಿದರೆ ಸುಮ್ಮನಿರುವುದು ಯುಕ್ತವಲ್ಲ. ಆದರೆ ಅವರ ಮಟ್ಟಕ್ಕೆ ಇಳಿದು ಅವಾಚ್ಯ ಶಬ್ದ ಉಪಯೋಗಿಸುವುದು, ಅವರು ನಮಗೆ ಮಾಡಿದಂತೆ ದೂಷಣೆ ಮಾಡುವುದು ಖಂಡಿತ ತರವಲ್ಲ.

ನಮ್ಮ ಸ್ನೇಹಿತರ ವಲಯವನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಂಡರೆ ಈ ರೀತಿಯ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ನಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಗುಂಪುಗಳು, ಜನರನ್ನು ಆಯ್ಕೆ ಮಾಡಿದರೆ ಸಂಘರ್ಷನೆಗಳಿಂದ ತಪ್ಪಿಸಿಕೊಳ್ಳಬಹುದು.

ನಮ್ಮ ಹಿಂದೆ ಮಾತಾಡಿಕೊಳ್ಳುವುದು, ಟೀಕಿಸುವುದು ಇವೆಲ್ಲರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಮೇಲು. ನಮ್ಮ ಮಾತು-ವರ್ತನೆ, ಉಡುಗೆ, ಹವ್ಯಾಸಗಳು, ಆಚಾರ ವಿಚಾರಗಳು ಇತ್ಯಾದಿಗಳ ಬಗ್ಗೆ ಮಾತುಗಳು ನಡೆಯುತ್ತವೇ ಇರುತ್ತದೆ. ಜನರ ಹೊತ್ತು ಹೋಗುವುದಾದರೂ ಹೇಗೆ ಎಂದು ಉದಾರ ಮನೊಭಾವ ಬೆಳೆಸಿಕೊಳ್ಳುವುದು ಇದಕ್ಕೊಳ್ಳೆ ಪರಿಹಾರ!

– ಸಹನಾ ಪ್ರಸಾದ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x