ಸಾಬ್ಯ: ಶ್ರೀಮಂತ ರಾಜೇಶ್ವರಿ ಯನಗುಂಟಿ

                         

ಅವನ ಹೆಸರು ಸಾಹೇಬಗೌಡ ಅಂತ. ಅವನನ್ನು ಪ್ರೀತಿಸುವವರು ಪ್ರೀತಿಯಿಂದ ಸಾಬು ಅಂತ ಕರೀತಾರೆ. ಮೊನ್ನೆ ಸಿಕ್ಕಿದ್ದ. ನಮ್ಮ ಪರಿಚಯದವರೊಬ್ಬರ ಮದುವೆಯಲ್ಲಿ. ಅವನೂ ಸಹ ನಮ್ಮ ಊರಿನವನೇ ಆದ್ದರಿಂದ ಊರಿನವರೆಗೂ ಹೋಗಿ ಎಲ್ಲರಿಗೂ ಆಮಂತ್ರಣವನ್ನು ಕೊಟ್ಟು ಅವನೊಬ್ಬನಿಗೆ ಕೊಡದಿರುವುದು ಸರಿಯೆನಿಸುವುದಿಲ್ಲವೆಂಬ ದೃಷ್ಟಿಯಿಂದ ಅವನಿಗೂ ಮದುವೆಗೆ ಆಹ್ವಾನಿಸಿ ಬರಲಾಗಿತ್ತು. ನಮ್ಮ ಪಾಡಿಗೆ ನಾವೂ ಆ ಕೆಲಸ ಈ ಕೆಲಸ ಅಂತ ಓಡಾಡಿಕೊಂಡಿದ್ವಿ. ಮೊದಲೇ ಮದುವೆ ಮನೆ. ಕೆಲಸಕ್ಕೆ ಬಾರದವರೂ ಸಹ ಕೆಲಸ ಮಾಡಬೇಕಾದಂಥ ಸಂದರ್ಭವದು. ಹಾಗಾಗಿ ಮದುವೆಗೆ ಬರುತ್ತಿರುವವರಿಗಾಗಿ ಕುರ್ಚಿಗಳನ್ನೆಲ್ಲಾ ಸರಿಯಾಗಿ ಜೋಡಿಸುತ್ತಿದ್ದೆವು. ಅಷ್ಟರಲ್ಲಿ ಹಿಂದಿನಿಂದ ಯಾರೋ ಒಬ್ಬರು ಬಂದು ನನ್ನ ಜೇಬಿನೊಳಗೆ ಅವಸರವರಸವಾಗಿ ಕೈ ಹಾಕಿದಂತಾಯ್ತು. ಸ್ವಲ್ಪ ಗಾಬರಿಯಿಂದ ಯಾರು ಅಂತ ತಿರುಗಿ ನೋಡುತ್ತಿನಿ, ಸಾಬು. ನನಗೊಂದು ಕ್ಷಣ ಖುಷಿ ಮತ್ತೆ ಗಾಬರಿ. ಬಹಳಷ್ಟು ದಿನಗಳ ಬಳಿಕ ನನ್ನ ಚಡ್ಡಿ ದೋಸ್ತನನ್ನು ಮತ್ತೆ ನೋಡುತ್ತಿದ್ದೆನಲ್ಲ ಎನ್ನುವ ಖುಷಿಯೊಂದುಕಡೆಯಾದರೆ, ಇನ್ನೊಂದು ಕಡೆ ಇವನು ಹೀಗೇಕೆ ಹುಚ್ಚುಹುಚ್ಚಾಗಿ ಆಡುತ್ತಿದ್ದಾನೆ ಎಂದು ಗಾಬರಿ. ನಾನು ತಕ್ಷಣ ಅವನಿಗೆ ಮಾತನಾಡಿಸಲಿಲ್ಲ. ಒಂದು ಕ್ಷಣ ಅವನನ್ನು ತೀವ್ರವಾಗಿ ಗಮನಿಸಿದೆ. ಆಗಲೇ ನನಗನಿಸಿತು ಬಹುಶ: ಅವನಿಗೆ ಮಾನಸಿಕ ಆರೋಗ್ಯ ಸರಿಯಿಲ್ಲ ಅಂತ. 

ರಜೆಯ ಸಮಯ ಬರುವುದೇ ತಡ ನಾನು ನಮ್ಮ ಮನೆಯಲ್ಲಿ ನಮ್ಮ ಊರಿಗೆ ಹೋಗಲು ನನ್ನ ಪುಟ್ಟ ಬ್ಯಾಗೊಂದನ್ನು ರೆಡಿ ಮಾಡಿಡುತ್ತಿದ್ದೆ. ಹಾಗಂತ ಊರಲ್ಲೆನೂ ನನ್ನನ್ನು ಆಕರ್ಷಿಸುವಂತಹ ದೊಡ್ಡ ವಿಷಯಗಳಾವುವೂ ಇರಲಿಲ್ಲ. ಬದಲಿಗೆ ನನ್ನ ಕೆಲವೇ ಕೆಲವು ಗೆಳೆಯರಿದ್ದರು. ಹೋದಾಗಲೊಮ್ಮೆ ಅವರ ಜೊತೆ ಕಳ್ಳ-ಪೋಲಿಸ್ ಆಟವೋ, ಚಿತ್ತು-ಟಪ್ ಆಟವೋ ಅಥವ ಗೋಟಿ ಆಡಿಬರುವುದು ನನಗೆ ರೂಢಿ. ಅದೇನೋ ಅಂತಾರಲ್ಲ ಗಂಟೆಗೊಮ್ಮೆ ಸಿಗರೇಟು ಸೇದುವವರಿಗೆ ಸಮಯ ಬಂದಾಗ ಸೇದದಿದ್ದರೆ ಮನಸಿನಲ್ಲಿ ಒಂಥರ ತಳಮಳ ಆಗುತ್ತಂತೆ. ಹಾಗೇಯೇ ವರ್ಷದ ಬೇಸಿಗೆಯ ರಜಾ ಸಂದರ್ಭದಲ್ಲಿ ನನಗೆ ಊರಿಗೆ ಹೋಗಿ ಇವರ ಜೊತೆಯಲ್ಲಿ ಈ ಆಟಗಳಾಡದಿದ್ದರೆ ತಳಮಳವಾಗುತ್ತಿತ್ತು! ಹಾಗೆ ನನ್ನ ಜೊತೆ ಸೇರಿ ಆಡುತ್ತಿದ್ದ ಕೆಲವು ಗೆಳೆಯರಲ್ಲಿ ಈ ಸಾಬು ಕೂಡ ಒಬ್ಬ. ಪ್ರಸ್ತುತ ನಾನು ಅವನ ಬಗ್ಗೆ ಏನಾದರೂ ಬರೆಯುತ್ತಿರುವೆನೆಂದರೆ ಅದಕ್ಕೆ ಕಾರಣ ಅವನ ಜೊತೆ ಆಡಿ ಕಳೆದ ಆ ಬಾಲ್ಯದ ಕ್ಷಣಗಳು ಮತ್ತೆ ಅವನ ಬದಲಾದ ಪರಿಸ್ಥಿತಿ. ಹಾಗೆ ಕಳ್ಳ ಪೋಲಿಸ್ ಆಟವಾಡುತ್ತಿದ್ದಾಗಲೊಮ್ಮೆ ನಾನು ಪೋಲಿಸ್ ಆಗುತ್ತಿದ್ದೆ ಹಾಗೂ ಸಾಬುಗೆ ನನ್ನ ಅಸಿಸ್ಟೆಂಟ್ ಆಗಿ ಇಟ್ಟುಕೊಳ್ಳುತ್ತಿದ್ದೆ. ಯಾಕೆಂದರೆ ಈ ಕದ್ದು ಬಚ್ಚಿಟ್ಟುಕೊಳ್ಳುವವರನ್ನು ಪತ್ತೆ ಹಚ್ಚುವುದರಲ್ಲಿ ಸಾಬೂನ ಮೆದುಳು ಬಹಳ ಚುರುಕಾಗಿ ಕೆಲಸ ಮಾಡುತ್ತಿತ್ತು. ಕಳ್ಳನ ಪಾತ್ರವಹಿಸಿದ್ದ ಗೆಳೆಯರೆಲ್ಲಾ ಎಲ್ಲೆಲ್ಲೋ ಹೋಗಿ ಬಚ್ಚಿಟ್ಟುಕೊಂಡ ಹತ್ತು ನಿಮಿಷದ ಮೇಲೂ ಸಹ ಅವರನ್ನು ಕ್ಷಣದಲ್ಲೇ ಹಿಡಿಯುವ ಚಾಕಚಕ್ಯತೆ ಅವನಲ್ಲಿತ್ತು. ನಾನು ಅದೆಷ್ಟೋ ಸಲ, "ಏ ಸಾಬ್ಯಾ ಜಲ್ದಿ ಬಾರೊ, ಅವರು ಎಲ್ಲೆಲ್ಲೋ ಓಡಿಹೋದರೆ ಸಿಗೋದೇ ಇಲ್ಲ" ಅಂತ ಅವರನ್ನು ಹಿಡಿಯಲು ಒತ್ತಾಯಿಸಿದರೆ ಅವನು "ಏ, ನಿ ಸುಮ್ನ ಕುಂದ್ರು. ಅವರವ್ನ ಅವರೆಲ್ಲಿ ಹೋಗ್ತಾರ. ಐದು ನಿಮಿಷನ್ಯಾಗ ಎಲ್ರಿಗೂ ಹಿಡೆಮ್ಮು" ಅಂತ ಧೈರ್ಯ ಹೇಳುತ್ತಿದ್ದ. ಅಷ್ಟೊಂದು ಆತ್ಮವಿಶ್ವಾಸವಿತ್ತು ಅವನಿಗೆ. 

ಆದರೆ ಅದು ಯಾಕೋ ಮಾರನೆಯ ಬೇಸಿಗೆಯಲ್ಲಿ ಹೋದಾಗ ಸಾಬು ಸಿಗಲೇ ಇಲ್ಲ. ಯಾಕೆ ಅಂತ ಊರಿನಲ್ಲಿ ನನಗೆ ಗೊತ್ತಿದ್ದವರನ್ನೆಲ್ಲಾ ಕೇಳಿದೆ. ಒಬ್ಬೊಬ್ಬರೂ ಒಂದೊಂದು ಕಥೆ ಹೇಳಿದರು. ಅವರ ಅವ್ವ ಯಾರ ಜೊತೆಗೋ ಅಕ್ರಮ ಸಂಬಂಧವಿಟ್ಟುಕೊಂಡಿದ್ದು ಏಡ್ಸ ಆಗಿ ಸತ್ತು ಹೋದದ್ದರಿಂದ ಸಾಬು ಊರು ಬಿಟ್ಟು ಹೋದ ಅಂತ ಒಬ್ಬರು ಹೇಳಿದರೆ, ಇನ್ನೊಬ್ಬರು ಅವನು ಮನೆಗಾಗಿ ದುಡಿಯಲು ಬಾಂಬೆಯಲ್ಲಿ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದರು. ಯಾರು ಏನೇ ಹೇಳಿದರೂ ಒಂದು ಮಾತ್ರ ನಿಜ. ಅವನ ತಾಯಿ, ಬಹುಶ: ನನಗೆ ನೆನಪಿರುವ ಮಟ್ಟಿಗೆ ಹೆಸರು ಭಾಗಮ್ಮ ಇರಬಹುದು, ಮಾತ್ರ ಊರಿನಲ್ಲಿ ಕೆಲವು ಗಂಡಸರೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದಳು. ಅದು ಸಮಾಜದ ಪಾಲಿಗೆ ಅನೈತಿಕವಾದರೆ ಅವಳ ಪಾಲಿಗೆ ನೈತಿಕವಾಗಿತ್ತು. ಕಾರಣವಿಷ್ಟೆ ಅವಳ ಗಂಡ ಯಾವತ್ತೂ ಸಹ ಒಂದು ಕಡೆ ಮೈಮುರಿದು ಕೆಲಸ ಮಾಡಿ ಮನೆ ನಡೆಸಲು ನಾಲ್ಕು ಕಾಸು ತಂದುಕೊಟ್ಟವನಲ್ಲ. ಮನೆಂiÀiಲ್ಲಿ ನೋಡಿದರೆ ಸಾಬು ಮತ್ತೆ ಅವನ ಇಬ್ಬರು ತಂಗಿಯರು. ಹೀಗಾಗಿ ಇಡೀ ಮನೆ ನಡೆಸಲು, ಒಬ್ಬ ಅನಕ್ಷರಸ್ಥೆಯಾಗಿ, ಭಾಗಮ್ಮ ಸ್ವಲ್ಪ ದುಡ್ಡು ಮಾಡಲು ಈ ದಾರಿ ಹಿಡಿದ್ದಿದ್ದಳಷ್ಟೆ. ಆದರೆ ಈ ದಾರಿ ಏಡ್ಸ್ ನಂತಹ ಮಾರಕ ರೋಗ ತರುತ್ತದೆಂದು ಅವಳಿಗೆ ಖಂಡಿತವಾಗಿಯೂ ತಿಳಿದಿರಲಿಲ್ಲ. ಅಲ್ಲದೆ ಆ ಸಂದಂರ್ಭದಲ್ಲಿ ಈ ರೋಗದ ಬಗ್ಗೆ ಇವತ್ತಿರುವಷ್ಟು ಮಾಹಿತಿಯೂ ಅವಳಿಗಿರಲಿಲ್ಲ. ಹಾಗಾಗಿ ಅವಳ ಸಾವಿಗೆ ರೋಗದ ಬಗ್ಗೆ ಮಾಹಿತಿ ನೀಡದ ಸರ್ಕಾರವೇ ಕಾರಣವೆನ್ನುತ್ತಿರೋ ಅಥವ  ಪರಿಸ್ಥಿತಿಯ ಕಾರಣದಿಂದಾಗಿ ಅವಳು ಬೆಳೆಸಿಕೊಂಡ ಸಂಬಂಧವೇ ಕಾರಣವೆನ್ನುತ್ತಿರೋ ನಿಮಗೆ ಬಿಟ್ಟದ್ದು. 

ಅದೇನೇ ಇದ್ದರೂ ಇಷ್ಟು ವರ್ಷಗಳ ಮೇಲೆ ನಾನು ನೋಡುತ್ತಿರುವ ಸಾಬೂಗೂ ಹಾಗೂ ಅವತ್ತು ನನ್ನ ಜೊತೆ ಕಳ್ಳ ಪೋಲಿಸ್ ಆಟವಾಡಿದ ಸಾಬೂಗೂ ಮಾತ್ರ ಬಹಳಷ್ಟು ವ್ಯತ್ಯಾಸವಿದೆ. ಅವತ್ತು ಕಳ್ಳರನ್ನು ಹಿಡಿಯುವಲ್ಲಿ ಬಹಳ ಚುರುಕಾಗಿದ್ದ ಸಾಬು ಇವತ್ತು ಇನ್ನೊಬ್ಬರ ಜೇಬಿನೊಳಗಡೆ ಕೈಹಾಕುವಷ್ಟು ಬದಲಾಗಿದ್ದಾನೆ. ಖಂಡಿತವಾಗಿಯೂ ಮೇಲ್ನೊಟಕ್ಕೆ ಅಥವ ಅವನ ಬಗ್ಗೆ ಏನನ್ನೂ ತಿಳಿಯದೆ ಅವನ ಈ ಕೆಲಸವನ್ನು ನೋಡಿದರೆ ಇತರರಿಗೆ ಇದು ಕಳ್ಳತನವೆಂದೇ ಕಾಣಿಸುತ್ತದೆ. ಆದರೆ ಅವನ ಜೊತೆ ಅವನ ಹಿಂದಿನ ದಿನಗಳನ್ನು ಕಳೆದ ನನಗೆ ಮಾತ್ರ ಇದು ಕಳ್ಳತನವೆಂಬಂತೆ ಕಾಣಿಸಲಿಲ್ಲ. ಬದಲಾಗಿ ಅವನ ಇಡೀ ಇಪ್ಪತ್ತೇರಡು ವರ್ಷದ ಬದುಕಿನಲ್ಲಿ ಅವನು ಅನುಭವಿಸಿದ ಆ ಮಾನಸಿಕ ತೊಳಲಾಟದ ಕನ್ನಡಿಯಂತೆ ಕಾಣಿಸುತ್ತಿತ್ತು. ಪರಿಸ್ಥಿತಿಗಳು ಮನುಷ್ಯನನ್ನು ಹೇಗೆ ಬೇಕಾದರೂ ಬದಲಿಸಬಲ್ಲವಂತೆ. ಇವತ್ತು ಒಬ್ಬ ವ್ಯಕ್ತಿ ತುಂಬಾ ಉತ್ಸಾಹದಿಂದ, ಚಟುವಟಿಕೆಯಿಂದ, ಪ್ರಾಮಾಣಿಕತೆಯಿಂದ ಇದ್ದಾನೆಯೆಂದರೆ ಅವನ ಸುತ್ತಮುತ್ತಲಿನ ಆ ಸಕರಾತ್ಮಕ ಪರಿಸರ ಕಾರಣವಾಗಿರುತ್ತದೆ. ಅದೇ ವ್ಯಕ್ತಿ ಅದೇ ರೀತಿಯ ಪರಿಸರವನ್ನು ಪಡೆಯಲಾರದ ಕ್ಷಣ ಅವನ ಸಕರಾತ್ಮಕ ಮನಸಿನಲ್ಲಿ ಕೆಲವು ನಕಾರಾತ್ಮಕ ಬದಲಾವಣೆಗಳಾಗುತ್ತವೆ. ಅಂಥದ್ದೇ ಒಂದು ಸನ್ನಿವೇಶ ಈ ಸಾಬೂನ ಬದುಕಿನಲ್ಲೂ ನಡೆದಿರಬಹುದು ಎಂದು ನನಗನಿಸಿತು. ಹಾಗೆ ಅವನು ಇದ್ದಕ್ಕಿದ್ದ ಹಾಗೆ ಹಿಂದೆ ಬಂದು ನನ್ನ ಜೇಬಿನೊಳಗಡೆ ಕೈ ಹಾಕಿದಾಗ ನನಗೆ ಅವನ ಮೇಲೆ ಸಿಟ್ಟು ಬರಲಿಲ್ಲ. ಬದಲಾಗಿ ಅವನನ್ನು ಹೀಗೆ ಪರಿವರ್ತಿಸಿದ ಆ ಪರಿಸರ, ಸಮಾಜದ ಮೇಲೆ ಸಿಟ್ಟು ಮತ್ತು ಅವನ ಮೇಲೆ ಕರುಣೆ ಬಂತು. 

ಸ್ವಲ್ಪ ಸಮಯದ ನಂತರ ಅವನನ್ನು ನನ್ನ ಪಕ್ಕ ಕುಳ್ಳಿರಿಸಿಕೊಂಡು, "ಸಾಬೂ ಊಟ ಮಾಡಿದಿಯೆನೋ" ಅಂತ ಕೇಳಿದೆ. ಅದಕ್ಕವನು, "ಊಟಾ? ಹುಂ, ಮಾಡಿನಿ. ಇಲ್ಲಾ ಇಲ್ಲಾ ಈಗ ಮಾಡ್ತಿನಿ ರಕ್ಕಾ ಎಷ್ಟವಾ ತಾ" ಅಂತ ಏನೇನೋ ಕೇಳಿದ. ಅವನ ಮಾತುಗಳನ್ನು ಕೇಳಿ ನನ್ನ ಜೊತೆಗಿದ್ದವರು ಮತ್ತು ಸುತ್ತಮುತ್ತಲಿದ್ದವರು ತಮ್ಮತಮ್ಮಲ್ಲೇ ನಗತೊಡಗಿದರು. ಆದರೆ ಆ ಮಾತುಗಳ ಹುಟ್ಟಿನ ಹಿಂದಿನ ಕಾರಣಗಳೆಲ್ಲವೂ ನನಗೆ ಮಾತ್ರ ತಿಳಿದಿತ್ತು. ನಾನು ಮರುಕದಿಂದ "ರಕ್ಕಾ ಕೊಡ್ತಿನೊ ಸಾಬ್ಯ, ಊಟಾರೆ ಮಾಡು ನಡೀ" ಅಂತ ಹೇಳಿದೆ. ಅವನು ಕೇಳಲಿಲ್ಲ. "ಇಲ್ಲ ಇಲ್ಲ. ಮದ್ಲ ರಕ್ಕಾ ಕೊಡು. ಎಲ್ಲರೂ ಹಿಂಗೆ ಅಂತಾರ. ಯಾರೂ ರಕ್ಕಾ ಕೊಡಲ್ಲ" ಎನ್ನುತ್ತಾ ಎಲ್ಲಿಗೋ ಹೋಗಲು ಎದ್ದು ನಿಂತ. ಮತ್ತೆಲ್ಲಿ ಹೋಗಿ ಮದುವೆ ಮನೇಲಿ ಏನು ಮಾಡ್ತಾನೋ ಎನ್ನುವ ಗಾಬರಿಯಾಗಿ, "ಎಲ್ಲಿ ಹೋಗ್ತಿಯೋ ಸಾಬ್ಯ, ಇಲ್ಲೇ ಕುಂದ್ರು ಬೇಕಾದರ ನಾನೇ ಊಟ ತಂದು ಕೊಡ್ತಿನಿ. ಮಾಡಿ ಹೋಗು" ಎನ್ನುತ್ತಾ ಒಂದು ತಟ್ಟೆ ಊಟ ತಂದು ಕೊಟ್ಟೆ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x