ಅದು ಅಖಿಲ ಭಾರತ ಮಟ್ಟದ ಸಂಗೀತದ ಅಂತಿಮ ಕಾರ್ಯಕ್ರಮ. ಕನ್ನಡದ ಆ ವಾಹಿನಿ ಅನೇಕ ವರ್ಷಗಳಿಂದ ಈ ಸ್ಫರ್ಧೆ ಏರ್ಪಡಿಸುತ್ತ ಬಂದಿದೆ. ಇಂದು ಅಂತಿಮ ಸುತ್ತು. ಎಲ್ಲ ಸ್ಫರ್ಧಿಗಳಲ್ಲೂ ವಿಚಿತ್ರ ತಳಮಳ ಈಗಾಗಲೇ ಈ ವಾಹಿನಿಯ ಈ ಅಂತಿಮಸ್ಫರ್ಧೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಂತೆಯೇ ಇತರೇ ಸುದ್ದಿವಾಹಿನಿಗಳಲ್ಲಿ ಈ ಕುರಿತು ಅನೇಕ ಚರ್ಚೆಗಳಾಗಿವೆ…ಯಾರು ಗೆಲ್ಲಬಹುದು ಪ್ರಶಸ್ತಿಯನ್ನು ಈ ಕುರಿತಾಗಿ ಅಲ್ಲಲ್ಲಿ ಬೆಟಿಂಗ್ ಕೂಡ ನಡೆಯುತ್ತಿದೆ ಎಂಬ ಸುದ್ದಿಯೂ ಅನೇಕ ವಾಹಿನಿಗಳಲ್ಲಿ ಹರಿದಾಡುತ್ತಿತ್ತು. ಸ್ಫರ್ಧಿಗಳಲ್ಲಿ ತಳಮಳವಿತ್ತು ನಿಜ ಅಂತೆಯೇ ಅವರ ಹತ್ತಿರದ ಬಳಗದವರ ಹಾಗೆಯೇ ಬೆಂಬಲಿಸಲು ಬಂದವರಲ್ಲೂ ಅದು ಇಣುಕುತ್ತಿತ್ತು……ಆ ಕಾರ್ಯಕ್ರಮ ಚಿತ್ರೀಕರಣವಾಗುತ್ತಿರುವ ಸ್ಟುಡಿಯೋದ ಹೊರಗಡೆ ಅದಾಗಲೇ ಜನ ಜಮಾಯಿಸಿದ್ದರು…ಅಂತಿಮ ಸುತ್ತಿನಲ್ಲಿ ಇರೋದು ಕೇವಲ ಮೂರು ಜನ…ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಫರ್ಧಿಗಳ ಹೆಸರಿದ್ದ ಪ್ಲೇಕಾರ್ಡ ಹಾಗೆಯೇ ಅವರ ಫೋಟೋ ಅಂಟಿಸಿದ ಪೋಸ್ಟರ್ ಹಿಡಿದು ಒಳಗೆ ಬಿಡುವ ದಾರಿಯನ್ನೇ ಕಾಯುತ್ತಿದ್ದರು….ಮೂರು ಮಂದಿಗೆ ಹೋಲಿಸಿದರೆ ಸೌಭಾಗ್ಯ ಈ ಸ್ಫರ್ಧಿಯ ಪ್ಲೇಕಾರ್ಡು ಹಾಗೂ ಪೋಸ್ಟರ್ ಗಳು ತೀರ ಕಮಿಸಂಖ್ಯೆಯಲ್ಲಿದ್ದವು…ಇದು ಆತಂಕಕ್ಕೆ ಕಾರಣವಾಗಿತ್ತು ಸೌಭಾಗ್ಯಳ ಮಗಳು ಮೀರಾಳಿಗೆ.
ಹಾಗೆ ನೋಡಿದರೆ ಮೀರಾಳೇ ಒತ್ತಾಯ ಮಾಡಿ ಸೌಭಾಗ್ಯಳಿಗೆ ಈ ಸ್ಫರ್ಧೆಗಾಗಿ ಹುರಿದುಂಬಿಸಿದ್ದು ಈ ಹಾಡುವ ಕಾಂಪಿಟೇಶನ್ ನಿಯಮದ ಪ್ರಕಾರ 5 ರಿಂದ 55 ವಯಸ್ಸು ಇರುವ ಯಾರೇ ಆಗಲಿ ಭಾಗವಹಿಸಬಹುದಾಗಿತ್ತು… ಮೀರಾಗೆ ತನ್ನ ತಾಯಿ ಚೆನ್ನಾಗಿ ಹಾಡುತ್ತಾಳೆ ಅಂತೆಯೇ ಮದುವೆ ಮೊದಲು ಸಂಗೀತ ಕಲಿತವಳು ಎಂಬ ಅರಿವಿತ್ತು…ಆದರೆ ಅವಳಿಗಾಗಲೀ ಅಥವಾ ಅವಳ ತಾಯಿ ಸೌಭಾಗ್ಯಳಾಗಲಿ ಈ ತರಹದ ಕಾಂಪಿಟೇಶನ್ ಬಗ್ಗೆ ಕನಸೂ ಕಂಡವರಲ್ಲ…ಮೀರಾಳ ಸಹೋದ್ಯೋಗಿಯ ಕಸಿನ್ ಒಬ್ಬಳು ಈ ಚಾನೆಲ್ಲಿನಲ್ಲಿ ಮೆಂಟರ್ ಅಂತ ಕೆಲಸ ಮಾಡುತ್ತಿದ್ದಳು ಒಂದು ಸಮಾರಂಭದಲ್ಲಿ ಸೌಭಾಗ್ಯಳ ಹಾಡು ಕೇಳಿದವಳು ತನ್ನ ಕಸಿನ್ ಮೂಲಕ ಮೀರಾಳನ್ನು ಸಂಪರ್ಕಿಸಿದ್ದಳು…ಸ್ಫರ್ಧೆಗೆ ಹೆಸರುಕೊಡಲು ಕೇಳಿದ್ದಳು….ಮೊದಮೊದಲು ಹಿಂಜರಿದರೂ ಸೌಭಾಗ್ಯ ಒತ್ತಾಯಕ್ಕೆ ಕಟ್ಟುಬಿದ್ದು ಪೂರ್ವಆಯ್ಕೆಯ ಸುತ್ತಿಗೆ ಹೋಗಿದ್ದಳು….ಈ ವಯಸ್ಸಿನಲ್ಲಿ ಇದು ಬೇಕಿತ್ತೇ ಅನ್ನುವ ಕೊಂಕುಮಾತು ಕೇಳಿಸಿಕೊಂಡು ಕ್ಯಾರೇ ಎನ್ನದೇ ಹಾಡಿದ್ದಳು…ಆಶ್ಚರ್ಯ ಅನ್ನುವಂತೆ ಮುಂದಿನ ಸುತ್ತಿಗೆ ಅವಳು ಆಯ್ಕೆಯಾಗಿದ್ದಳು…ಹಾಗೂ ಆ ನಂತರ ಅವಳು ಹಿಂದೆ ನೋಡಲಿಲ್ಲ…ಎರಡು ತಿಂಗಳು ಹಾಡು, ಅಭ್ಯಾಸ ಹಾಗೂ ಇತರೇ ಗಾಯಕ/ಗಾಯಕಿಯರ ನಡುವಿನ ಒಡನಾಟದಿಂದ ಸೌಭಾಗ್ಯ ಅನೇಕ ಹೊಸ ವಿಷಯ ಕಲಿತುಕೊಂಡಿದ್ದಳು ಅಂತೆಯೇ ತೀರ್ಪುಗಾರರ ಟೀಕೆ, ಟಿಪ್ಪಣಿ ಗಮನಿಸಿ ಅವರು ಸೂಚಿಸಿದ ಬದಲಾವಣೆಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡ ಫಲ ಅವಳು ಇಂದು ಅಂತಿಮ ಸುತ್ತು ಪ್ರವೇಶಿಸಿದ್ದಳು.
**
ಧಾರವಾಡದ ಕಲಾವಂತ ಮಣ್ಣಿನಲ್ಲಿ ಸಾಧಾರಣ ಆದಾಯದ ಕುಟುಂಬದಲ್ಲಿ ಹುಟ್ಟಿದ ಸೌಭಾಗ್ಯಳ ದನಿಯ ಇಂಪು ಗಮನಿಸಿದ ಅವಳ ಸೋದರಮಾವ ತನ್ನ ಕೈಯಾರೇ ಖುರ್ಚುಮಾಡಿ ಅವಳಿಗೆ ಸಂಗೀತದ ಪಾಠ ಕಲಿಯಲು ಅನುವುಮಾಡಿಕೊಟ್ಟ. ಸಾಲೆ, ಅಭ್ಯಾಸಗಳ ನಡುವೆಯೂ ಶ್ರಧ್ದೆಯಿಂದ ಸಂಗೀತ ಕಲಿತಳು…ಕಲಿತದ್ದನ್ನು ಗುರುವಿನ ಮುಂದೆ ಹಾಡಿ ಒಪ್ಪಿಸಿ ಭೇಷ್ ಅನಿಸಿಕೊಂಡಿದ್ದಳು. ಆಗಾಗ ಆಕಾಶವಾಣಿಗೆ ಹೋಗಿ ಹಾಡುವ ಮಟ್ಟಕ್ಕೂ ಬೆಳೆದಳು. ರೇಡಿಯೋದಲ್ಲಿ ಇವಳ ಹಾಡು ಕೇಳಿದವರು ಇವಳ ತಂದೆ ತಾಯಿಗೆ ಪ್ರೋತ್ಸಾಹದ ಮಾತು ಆಡುತ್ತಿದ್ದರು…ಅಂತೆಯೇ ಇವಳಿಗೆ ಹೆಚ್ಚಿನ ಸಂಗೀತ ಕಲಿಸಿ ಅಂತ ಒತ್ತಾಯ ಮಾಡುತ್ತಿದ್ದರು…ಆದರೆ ಸೌಭಾಗ್ಯಳ ತಂದೆ ಮಹಾಬಲ ಆರ್ಥಿಕವಾಗಿ ಸಬಲನಲ್ಲ ಮೇಲಾಗಿ ಇಷ್ಟು ಕಲಿತಳಲ್ಲ ಸಾಕು ಅನ್ನುವ ಧೋರಣೆ ಮುಂದೆ ಮದುವೆಯಾಗಿ ಅವಳ ಈ ಸಂಗೀತ ಪೋಷಿಸುವ ಗಂಡ ಸಿಕ್ಕರೆ ಮುಂದುವರೆಯಲಿ ಇದು ಅವನ ಹಂಬಲ. ಅಂತೆಯೇ ಒಂದು ಬಳಗದ ಮದುವೆಯಲ್ಲಿ ಇವಳ ನೋಡಿದ ಸಂಬಂಧಿ ಒಬ್ಬ ಮದುವೆಯ ಪ್ರಸ್ತಾಪ ತಗೊಂಡು ಬಂದಿದ್ದ. ಹುಡುಗ ಎಂಎ ಓದುತ್ತಿದ್ದಾನೆ ಓದು ಮುಗಿದ ನಂತರ ಕೆಲಸ ಸಿಗುವುದು..ಹಾಗೆ ನೋಡಿದರೆ ಅವರದು ಹೆಸರಾಂತ ಕುಟುಂಬ ..ಜೀವನ ನಿರ್ವಹಣೆಗೆ ತಲಾಂತರದಿಂದ ಬಂದ ಕಿರಾಣಿ ಅಂಗಡಿಯಿದೆ….ಮಾವ, ಅತ್ತೆ, ನಿಗೆಣ್ಣಿ ಭಾವ ನಾದಿನಿ ಹೀಗೆ ದೊಡ್ಡ ಕೂಡು ಕುಟುಂಬ ಬೆಂಗಳೂರಿನ ಹಳೆಯ ಬಡಾವಣೆ ಹನುಮಂತನಗರದಲ್ಲಿ ಸ್ವಂತ ದೊಡ್ಡ ಮನೆ ಇದೆ. ಸಂಬಂಧಿ ಹೇಳಿದ ವಿವರ ಬಾಯಿತೆರೆದು ಕೇಳಿಸಿಕೊಂಡ ಸೌಭಾಗ್ಯಳ ತಂದೆ ತಾಯಿ ಈ ಸಂಬಂಧ ಕೂಡಿದರೆ ತಮ್ಮ ಪೂರ್ವ ಜನ್ಮದ ಪುಣ್ಯ ಅಂದುಕೊಂಡರು. ಸೌಭಾಗ್ಯ ಮೂರ್ತಿಯ ಜೊತೆ ಸಪ್ತಪದಿ ತುಳಿದು ಬೆಂಗಳೂರು ಸೇರಿಕೊಂಡಳು…ತನ್ನ ಗುರುಗಳು ಮೆಚ್ಚಿ ಕೊಟ್ಟ ತಂಬೂರಿ ಜೊತೆ.
ಸೌಭಾಗ್ಯಳ ಗಂಡ ಮೂರ್ತಿಯ ಓದು ಮುಗಿದು ಒಂದು ಕಾಲೇಜಿನಲ್ಲಿ ಲೆಕ್ಚರರ್ ಕೆಲಸ ಸಿಕ್ಕಿತ್ತು. ಸ್ವಭಾವತಃ ಮೂರ್ತಿ ಬಹಳ ಶಿಸ್ತುಪ್ರಿಯ. ತಾನು ಅಷ್ಟಾಗಿ ಪಾಲಿಸದಿದ್ದರೂ ಹೊಸ ಹೆಂಡತಿಯ ಮೇಲೆ ಅದರ ಅಪೇಕ್ಷೆಇತ್ತು. ಅದೇನೋ ಗೊತ್ತಿಲ್ಲ ಸೌಭಾಗ್ಯ ಮೂರ್ತಿಯ ಸ್ವಭಾವಕ್ಕೆ ಹೊಂದಿಕೊಂಡಳು ಕಾಲೇಜಿಗೆ ಹೋಗುವವರೆಗೂ ಅವನ ಬೆನ್ನ ಹಿಂದೆ ಸುತ್ತುತ್ತ ಅವನ ಬೇಕು ಬೇಡ ಗಮನಿಸುತ್ತಿದ್ದಳು ಅವ ಕೇಳುವ ಮೊದಲೇ ಅವನ ಕರ್ಚಿಫು, ಪರ್ಸು ಹೀಗೆ ಕೈಯಲ್ಲಿಯೇ ಕೊಡುತ್ತಿದ್ದಳು ಅದೆಷ್ಟೋ ಸಲ ಅವನ ಬೂಟು ಪಾಲಿಶ್ ಮಾಡಿ ಸಾಕ್ಸ ಹಾಕಿಡುತ್ತಿದ್ದಳು.ಇದೆಲ್ಲ ಮಾಡುವಾಗ ಅವಳಿಗೆ ಬೇಸರ ಅನಿಸುತ್ತಿರಲಿಲ್ಲ ನಾ ಅವನ ಹೆಂಡತಿ ಅವನ ಬೇಕು ಬೇಡ ಗಮನಿಸುವುದು ನನ್ನ ಕರ್ತವ್ಯ ಅಂತಾನೇ ತಿಳಿದಿದ್ದಳು. ಗಂಡ ಕಾಲೇಜಿಗೆ ಹೋದ ಅಂದರೆ ಸಾಕು ಅಡಿಗೆಮನೆಗೆ ಹೋಗಿ ಅತ್ತೆ ಓರಗಿತ್ತಿ ಶಾರದೆ ಜೊತೆ ಕೆಲಸ ಹಂಚಿಕೊಳ್ಳುತ್ತಿದ್ದಳು…. ಇದು ರೂಢಿಗತ ಕೆಲಸ ..ಆಗೊಮ್ಮೆ ಈಗೊಮ್ಮೆ ಟೀವಿಯಲ್ಲಿ ಬರುವ ಇಷ್ಟದ ಹಾಡು ಕಿವಿಗೆ ಬಿದ್ದಾಗ ಮನಸ್ಸು ಆಗಾಗ ಪಿಚ್ಚೆನಿಸುವುದು. ಅದೆಷ್ಟೋ ಸಲ ಗಂಡನಿಗೆ ಆಸೆ ಹೇಳಿಕೊಂಡಿದ್ದಿದೆ…..ಆದರೆ ಅವ ಕೇಳಿಯೂ ಕೇಳದೇ ಇದ್ದಾಗ ನಿರಾಶೆ ಆಗಿದ್ದು ಸುಳ್ಳಲ್ಲ… ಮರುಕ್ಷಣ ತಾನೇ ಸಮಾಧಾನ ಮಡಿಕೊಂಡಿದ್ದು ಇತ್ತು ಸಂಗೀತ ಇನ್ನು ಮುಂದೆ ಗಗನಕುಸುಮವಾಗಲಿದೆ ತಾನು ಪಡೆದು ಬಂದಿದ್ದು ಇಷ್ಟೇ ಅಂತ. ಮನೆಯ ಪೂಜೆ ಆರತಿ ವೇಳೆಯಲ್ಲಿ ಇವಳದೇ ಹಾಡು …ಕೇಳಿದವರು ತಲೆದೂಗುತ್ತಿದ್ದರು ಅತ್ತೆ ಮಾವ ಓರಗಿತ್ತಿ ಮೆಚ್ಚುತ್ತಿದ್ದರು ಅಷ್ಟೇ . ಅವಾಗಿವಾಗ ಬಳಗದವರ ಮದುವೆಯಲ್ಲಿ ಹಾಡು ಅಂತ ಅತ್ತೆ ಒತ್ತಾಯ ಮಾಡಿದಾಗ ಹಾಡುವ ಹಾಡಿಗಷ್ಟೇ ಸೀಮಿತ ವಾಗಿತ್ತು ಸಂಗೀತ. ಇಷ್ಟಾಗಿಯೂ ಆಗೀಗ ಮೂಲೆಯಲ್ಲಿಟ್ಟ ತಂಬೂರಿ ತೆಗೆದು ಧೂಳು ಒರೆಸಿ ಒಂದು ಸಲ ಮೀಟಿದಾಗ ಹೊಮ್ಮುತ್ತಿದ್ದ ರಾಗ ತನ್ನದೇ ದುಃಖದ ಪ್ರತಿರೂಪ ಅನಿಸುತ್ತಿತ್ತು. ಮಕ್ಕಳು ಹುಟ್ಟಿದ ಮೇಲೆ ತಂಬೂರಿ ಧೂಳು ತಿನ್ನುತ್ತಲೆ ಉಳಿದುಬಿಟ್ಟಿತು.
ಮಗ ಮಗಳು ಈಗ ಹೈಸ್ಕೋಲಿಗೆ ಹೊರಟಿದ್ದಾರೆ. ಗಂಡ ಮೂರ್ತಿ ಈಗ ಪ್ರೊಫೆಸರ ಹುದ್ದೆ ಅಲಂಕರಿಸಿದ್ದಾನೆ ಓರಗಿತ್ತಿಯ ಮಕ್ಕಳು ಕಾಲೇಜಿನ ಕೊನೆ ವರ್ಷದಲ್ಲಿದ್ದಾರೆ. ಮನೆಯಲ್ಲಿ ಈಗ ಮಾವನಿಲ್ಲ ಅತ್ತೆ ಎಂದೂ ದರ್ಪ ತೋರಿದವರಲ್ಲ…ಆಗಾಗ ಸೌಭಾಗ್ಯಳನ್ನು ಹತ್ತಿರ ಕೂಡಿಸಿಕೊಂಡು ದೇವರನಾಮ ಹೇಳಿಸಿ ಸಂತೋಷ ಪಡುತ್ತಾರೆ. “ಅದೆಷ್ಟು ಚೆಂದ ಹಾಡ್ತೀಯೇ….ಸಂಸಾರದ ಜಂಜಾಟದಲ್ಲಿ ಹಾಡುವುದ ನೀ ಮರೆತರೂ ಸಂಗೀತ ನಿನ್ನ ಬಿಟ್ಟು ಹೋಗಿಲ್ಲ…” ಎಂಬ ಅವರ ಮಾತು ಸೌಭಾಗ್ಯಳಲ್ಲಿ ಹೊಸ ಹುರುಪು ತಂತು. ಮಧ್ಯಾಹ್ನ ನಿದ್ದೆ ಮಾಡುವುದ ಬಿಟ್ಟು ರೂಮು ಸೇರಿ ಬಾಗಿಲು ಹಾಕಿಕೊಂಡು ಶೃತಿ ಪೆಟ್ಟಿಗೆ ಪಕ್ಕ ಇಟ್ಟುಕೊಂಡು ಕಲಿತ ಸಂಗೀತವ ಮೆಲುಕು ಹಾಕುತ್ತಾಳೆ…ರಾಗಬದ್ಧವಾಗಿ…ತಾ ಹಾಡುವುದ ತಾನೇ ರೆಕಾರ್ಡ ಮಾಡಿಕೊಂಡು ತಪ್ಪು ಒಪ್ಪುಗಳ ತಿದ್ದಿಕೊಳ್ಳುತ್ತಾಳೆ. ಇದು ಅವಳ ರೂಟೀನ ಆಗತೊಡಗಿದೆ. ಮಕ್ಕಳು ಕಾಲೇಜು ಅವರ ಮುಂದಿನ ನೌಕರಿ ಓರಗಿತ್ತಿಯ ಮಗಳ ಮದುವೆ ಹೀಗೆ ಏನೆಲ್ಲ ಸಾಗಿಹೋದರೂ ಸೌಭಾಗ್ಯ ಹಾಡುವುದ ನಿಲ್ಲಿಸಲಿಲ್ಲ.
**
ಮೀರಾಳಿಗೆ ಅಮ್ಮನನ್ನು ಕಂಡರೆ ವಿಶೇಷ ಅಕ್ಕರೆ. ತಮ್ಮ ಸಲುವಾಗಿ ಮನೆಯ ಸಲುವಾಗಿ ಅಮ್ಮ ಪಟ್ಟ ಕಷ್ಟ ಅವಳಿಗೆ ಅರಿವಿತ್ತು.ಅದರ ಬಗ್ಗೆ ಕನಿಕರವೂ ಇತ್ತು. ಮೀರಾ ಆಧುನಿಕ ವಿಚಾರದ ಯುವತಿ. ಹೆಣ್ಣು ತನ್ನ ಸ್ವಂತ ವ್ಯಕ್ತಿತ್ವ ಮರೆತು ಗಂಡ, ಮಕ್ಕಳು ಸಂಸಾರ ಮನೆತನ ಹೀಗೆ ತೊಳಲಾಡುವುದು ಅಷ್ಟಾಗಿ ರುಚಿಸದಾಕೆ. ಅದರಲ್ಲೂ ಅಮ್ಮ ಕಲಿತ ಸಂಗೀತ ಮುಂದುವರೆಸಲಾಗದೇ ತಮ್ಮ ಸಲುವಾಗಿ ಹೀಗೆ ಬಡಿದಾಡುವುದರ ಬಗ್ಗೆ ಅವಳಿಗೊಂದು ಅಪರಾಧೀ ಭಾವ ಕಾಡುತ್ತಿತ್ತು. ಹಲವು ಸಲ ಅಮ್ಮ ನಿಗೆ ಹಾಡು ಮುಂದುವರೆಸಲು ಕೇಳಿಕೊಂಡಿದ್ದಳು. ತಂದೆ ಜೊತೆ ಸಹ ವಾದ ಮಾಡಿದ್ದಳು ಆದರೆ ಇಬ್ಬರಿಂದಲೂ ಸಿಕ್ಕ ನಿರುತ್ಸಾಹದ ಪ್ರತಿಕ್ರಿಯೆ ಅವಳಿಗೆ ನಿರಾಸೆ ತಂದಿತ್ತು. ಹಾಗಂತ ಅವಳು ತನ್ನ ಪ್ರಯತ್ನ ನಿಲ್ಲಿಸಿರಲಿಲ್ಲ. ಸದಾ ಮನೆಯಲ್ಲಿಯೇ ಕೂಡುವ ಅಮ್ಮನನ್ನು ಜೊತೆಗೆ ಕರೆದುಕೊಂಡು ವೀಕೆಂಡಿನಲ್ಲಿ ಶಾಪಿಂಗಗೋ ಸಿನೇಮಾಗೋ ಅಥವಾ ಗೆಳತಿಯರ ಮನೆಯಲ್ಲಿ ನಡೆಯುವ ಸಮಾರಂಭಗಳಿಗೋ ಕರೆದುಕೊಂಡು ಹೋಗುವುದಿದೆ. ಹೀಗೆ ತನ್ಸಹೋದ್ಯೋಗಿಯ ಮನೆ ಸಮಾರಂಭಕ್ಕೆ ಹೋದಾಗಲೇ ಸೌಭಾಗ್ಯಳ ಪ್ರತಿಭೆ ಬಯಲಾಗಿದ್ದು.ಮೀರಾಳೇ ಒತ್ತಾಯ ಮಾಡಿ ಅಮ್ಮನಿಗೆ ಹಾಡು ಅಂತ ಹೇಳಿದ್ದು……ಅವಳ ಹಾಡು ಕೇಳಿ ಮೆಚ್ಚಿದವರೆಲ್ಲ ಒನ್ಸಮೋರ್ ಕೂಗಿದಾಗ ಇನ್ನೊಂದು ಹಾಡು ಹಾಡಲೇಬೇಕಾತು ಸೌಭಾಗ್ಯಳಿಗೆ. ಈ ಘಟನೆ ಮುಂದಿನ ತಿರುವಿಗೆ ಕಾರಣವಾದೀತು ಅಂತ ಮೀರಾಳಾಗಲಿ ಸೌಭಾಗ್ಯಳಾಗಲಿ ಊಹಿಸಿರಲಿಲ್ಲ.
ಕಾಂಪಿಟೇಶನ್ ವಿಷಯ ಕೇಳಿ ಮೂರ್ತಿ ನಗಾಡಿದ್ದ….ಅಲ್ಲದೇ ಅಲ್ಲಿ ಕೂಡುವ ಜಡ್ಜ ತೀರ ತಿಕ್ಕಲಾಗಿ ಪ್ರಶ್ನೆ ಕೇಳುತ್ತಾರೆ ಅಲ್ಲಿಯ ನಿರೂಪಕಿ ಹಾಗೆ ಮಾಡಬಹುದು ಹಿಗೆ ಮಾಡಬಹುದು ಅಂತೆಲ್ಲ ಹೇಳಿ ಹೆದರಿಸಿದ..ಕೊನೆಯ ಆಯುಧ ಎಂಬಂತೆ ಸೌಬಾಗ್ಯಳ ವಯಸ್ಸಿನ ಬಗ್ಗೆಯೂ ಮಾತಾಡಿದ್ದ…ತನ್ನ ಗಂಡನೇ ಈ ರೀತಿ ಲೇವಡಿ ಮಾಡಿದ್ದು ಅವಳಿಗೆ ಸರಿ ಅನಿಸಿರಲಿಲ್ಲ…ಆದರೆ ಮೀರಾಳ ಬೆಂಬಲ ಇತ್ತಲ್ಲ….ಧೈರ್ಯತಾಳಿದ್ದಳು.
**
ಮಹಾ ಅಂತಿಮ ಸುತ್ತಿಗೆ ನಾಡಿನ ಖ್ಯಾತ ಗಾಯಕ ವಿಷೇಷ ಆಹ್ವನಿತರಾಗಿದ್ದರು. ಮೊದಲ ಸುತ್ತಿನಲ್ಲಿ ಪ್ರಸ್ತುತ ಕಾಲದ ಹಾಡು ಹಾಡಬೇಕಾಗಿತ್ತು. ಕಷ್ಟಪಟ್ಟು ಒಂದೆರಡು ಹಾಡು ಬಾಯಿಪಾಠ ಮಾಡಿದ್ದಳು ಸೌಭಾಗ್ಯ…ಐಟಂ ಸಾಂಗ್ ಗಳು ಒಗ್ಗದವು ಆದರೆ ನೀಭಾಯಿಸಲೇ ಬೇಕಾಗಿತ್ತು….ಇವಳ “ಪ್ರಯತ್ನ” ಚೆನ್ನಾಗಿತ್ತು ಅಂತ ನಿರ್ಣಾಯಕರು ಹೇಳಿದರು. ಮುಂದಿನ ಸುತ್ತುಗಳಲ್ಲಿ ಒಂದು ಭಾವಗೀತೆ ಅಂತೆಯೇ ರಾಗದ ಆಧಾರಿತ ಹಾಡು ಹಾಡಬೇಕಾಗಿತ್ತು. ಮಿರಾ ಹಾಗೂ ಕೆಲವೇ ಬೆಂಬಲಿಗರು ಚಪ್ಪಾಳೆ ಹೊಡೆದು ಅಂತೆಯೇ ಪ್ಲೇಕಾರ್ಡ ತೋರಿಸುತ್ತ ಹುರಿದುಂಬಿಸುತ್ತಿದ್ದರು. ಇವಳ ಪ್ರತಿಸ್ಫರ್ಧಿಯಾಗಿ ಮಾಲಾ ಇದ್ದಳು ನೋಡಲು ಸೂಮದರ ಅದರಲ್ಲು ಅವಳದು ಕಂಚಿನ ಕಂಠ ಬೇರೆ ಮೊದಲ ಸುತ್ತು ಮುಗಿದಾಗ ತಕ್ಕಡಿ ಅವಳೆಡೆಯೇ ವಾಲಿದೆ ಇದು ಎಲ್ಲರಿಗೂ ವೇದ್ಯವಾದ ಸಂಗತಿ.
ತಾ ಸಣ್ಣವಳಿದ್ದಾಗಿನಿಂದಲೂ ಕೇಳಿದ ಹಾಡುತ್ತಲೇ ಬಂದ ಬೇಂದ್ರೆ ಅವರ “ಗಮ ಗಮಾಡಸತಾವ ಮಲ್ಲಿಗಿ” ಈ ಹಾಡು ಭಾವಗೀತೆ ಸುತ್ತಿನಲ್ಲಿ ಹಾಡಿದಳು. ನಿರ್ಣಾಯಕರಿಂದ ಮೆಚ್ಚುಗೆ ಹಾಗೂ ನೆರೆದವರ ಕರತಾಡನ ಹೇಳುತ್ತಿತ್ತು ಅವಳ ಗೆಲುವಿನ ಕತೆಯನ್ನು. ಅದೇಕೋ ಮಾಲಾ ಹಾಡುವಾಗ ಕೆಲವು ಕಡೆ ಶೃತಿ ತಪ್ಪಿದಳು ಹಲವು ಕಡೆ ಉಚ್ಚಾರ ಕೈ ಕೊಟ್ಟಿತ್ತು. ಮುಂದಿನದು ತೀರ ತುರುಸಿನ ಸುತ್ತು ಅಸಲು ಮೂರನೇ ಸ್ಫರ್ಧಿ ಲೆಕ್ಕಕ್ಕೇ ಇರಲಿಲ್ಲ…ಮಾಲಾ ಸಹ ಕ್ಲಾಸಿಕಲ್ ಅಭ್ಯಾಸ ಮಾಡಿದವಳೇ….ಅವಳದು ಕರ್ನಾಟಕಿ ಶೈಲಿ ಯಾದರೆ ಸೌಭಾಗ್ಯಳದು ಹಿಂದುಸ್ತಾನಿದು. ಮೊದಲು ಮಾಲಾ ಹಾಡಿದಳು..ಕೂತುಕೊಂಡು ಪಕ್ಕವಾದ್ಯಗಳ ಮೇಳದಲ್ಲಿ ಶಂಕರಾಭರಣ ರಾಗದ ಕೀರ್ತನೆ ಅವಳು ಹಾಡಿದ ರೀತಿ ಅಪ್ಯಾಯಮಾನವಾಗಿತ್ತು. ತಕ್ಕಡಿ ಮತ್ತೊಮ್ಮೆ ಅವಳ ಪರ ವಾಲಿತ್ತು. ಸೌಭಾಗ್ಯ ಆಯ್ದುಕೊಂಡಿದ್ದು ಅಕ್ಕಳ ವಚನ “ಅಕ್ಕ ಕೇಳವ್ವ…..” ಆಲಾಪದಿಂದ ಸುರುಮಾಡಿ ವಚನ ಸುಶ್ರಾವ್ಯವಾಗಿ ಹಾಡಿ ಮುಗಿಸಿದಾಗ ನಿರ್ಣಾಯಕರು ಮಾಲಾಳಿಗೆ ಮಾಡಿದಂತೆಯೇ ಇವಳಿಗೂ ಎದ್ದುನಿಂತು ಚಪ್ಪಾಳೆ ಹೊಡೆದರು. ಒಳಗಡೆ ಮಾಲಾಳಿಗೆ ಅಪ್ಪಿಕೊಂಡು ಅಭಿನಂದನೆ ಹೇಳಿದಾಗ ಮಾಲಾಳ ಕಣ್ಣಲ್ಲಿ ನೀರು..ತುಂಬಿತ್ತು. ವಿಜೇತರನ್ನು ಘೋಷಣೆ ಮಾಡುವ ಸಲುವಾಗಿ ಇಬ್ಬರಿಗೂ ವೇದಿಕೆಗೆ ಆಹ್ವಾನಿಸಿದರು.
ಇಬ್ಬರ ಬಗ್ಗೆಯೂ ಒಳ್ಳೆಯ ಮಾತಾಡಿದರು ನಿರ್ಣಾಯಕರು ವಿಷೇಷ ಆಹ್ವಾನಿತರಾಗಿ ಬಂದ ಖ್ಯಾತ ಗಾಯಕ ಸೌಭಾಗ್ಯಳ ಹೆಸರು ಘೋಷಿಸಿದಾಗ ನೆರೆದವರೆಲ್ಲ ಚಪ್ಪಾಳೆ ಹೊಡೆದರು…ಮೀರಾ ಕುಣಿದಾಡುತ್ತಿದ್ದಳು….ಅವಳು ಕಂಡ ಕನಸು ಸಫಲವಾಗಿತ್ತು.
–ಉಮೇಶ್ ದೇಸಾಯಿ
ಹತ್ತಿಕ್ಕಿದ ವಾತಾವರಣದಲ್ಲಿ ಪುಟಿದೆದ್ದವಳ ಕತೆ, ಚೆನ್ನಾಗಿದೆ.