ಪ್ರಶಸ್ತಿ ಅಂಕಣ

ಸಾಗರದ ಮಾರಿಕಾಂಬ ಜಾತ್ರೆ: ಪ್ರಶಸ್ತಿ ಪಿ.

ಸಾಗರದ ಹಬ್ಬಗಳು ಅಂದ್ರೆ ಮೊದಲು ನೆನಪಾಗೋದು ಮೂರು ವರ್ಷಕ್ಕೊಮ್ಮೆ ಬರೋ ಮಾರಿ ಜಾತ್ರೆ. ಸಾಗರದ ಮಧ್ಯಭಾಗದಲ್ಲಿರುವ ಶ್ರೀ ಮಾರಿಕಾಂಬೆ ದೇವಿಯ ಒಂಭತ್ತು ದಿನಗಳ ಜಾತ್ರೆಯೆಂದರೆ ಸಾಗರಿಗರ ಪಾಲಿಗೆ ಅಂದೊಂದು ದೊಡ್ಡ ಹಬ್ಬವೇ. ಮೊದಲನೇ ದಿನ ಅದೇ ಬೀದಿಯಲ್ಲಿರುವ ತನ್ನ ತವರು ಮನೆಯಲ್ಲಿರುತ್ತಾಳಂತೆ ತಾಯಿ. ಅವತ್ತು ಮಾಂಸ ಮಧ್ಯಗಳಿಲ್ಲದ ಸಸ್ಯಾಹಾರಿ ಪೂಜೆ. ಆಮೇಲಿನ ದಿನಗಳಲ್ಲಿ ಕುರಿ, ಕೋಳಿಗಳ ಕಡಿತವೆಂದು ಮಾಂಸಾಹಾರಿಗಳ ಹಬ್ಬ. ಆ ಬೀದಿಯ ಮಾಂಸದಂಗಡಿಯಲ್ಲಿ ಮೊದಲ ದಿನವೇ ಮೂವತ್ತೊಂದು ಕುರಿ ಕಡಿದರಂತೆ  ಆ ಮನೆಯಲ್ಲಿ ಬಂದ ನೆಂಟರ ಊಟದ ಕುರಿ, ಕೋಳಿಗಳಿಗೆಂದು ಇಪ್ಪತ್ತು ಸಾವಿರ ಖರ್ಚಾಯಿತಂತೆ ಅಂತ ಕುರಿ ಕೋಳಿಗಳ ಲೆಕ್ಕದಲ್ಲೇ ಹಬ್ಬ ಎಷ್ಟು ಗ್ರಾಂಡಂತ ಅಳೆಯುವವರುಂಟು ! ಸಾಲ ಸೋಲ ಮಾಡಿಯಾದರೂ ಮನೆಗೆ ಬರೋ ನೆಂಟರೆದುರು ದಾಂಧೂಂ ಅಂತ ಹಬ್ಬ ಮಾಡಬೇಕೆನ್ನುವವರ ನಡುವೆ ಮೂರುವರ್ಷಕ್ಕಾದರೂ ಈ ಖರ್ಚಿನ ಹಬ್ಬ ಯಾಕಾದ್ರೂ ಬರುತ್ತೋ ಅನ್ನುವವರೂ ಉಂಟು. ಊಟ, ಬಟ್ಟೆಗಳದ್ದೊಂದು ಕತೆ ಹೇಳ್ತಾ ಹೋದ್ರೆ ಮುಖ್ಯ ಆಕರ್ಷಣೆ ಜಾತ್ರೆಯ ವಿಷ್ಯನೇ ಮತ್ರೋಗಿ ಬಿಡಬಹುದು. ಜಾತ್ರೆಯೆಂದ್ರೆ ಬರೀ ಬೆಂಡು ಬತ್ತಾಸು, ಹೂವಿನ ತೇರುಗಳಲ್ಲ, ಒಂದೆರಡು ಗಿರಗಿಟ್ಲೆ , ಪುಗ್ಗಿ, ಐಸುಕ್ರೀಂಗಳಲ್ಲ. ನಾಟಕದಿಂದ ಭಜನೆಯವರೆಗೆ , ಸರ್ಕಸ್ಸಿನಿಂದ , ಗ್ರೀನ್ ಡ್ರೈವ್ ಸ್ಟೇಜ್ ಶೋವರೆಗೆ, ಕೋಲಂಬಸ್, ಸೋಲಂಬಸ್, ಅಕ್ಟೋಪಸ್, ಗ್ಲಿಪ್ಫಿ ಹೀಗೆ ಹೆಸರು ಹೇಳಬರದ ಸಣ್ಣಪುಟ್ಟ ಆಟಗಳಿಂದ ಬಾವಿಯೊಳಗಿನ ಮೋಟಾರ್ ಬೈಕಿನ ಕೊರ್ರೆಂಬ ಸದ್ದು, ಟೊರಟೊರಾ, ಎರಡು ಮಿನಿ ವೀಲು, ನಾಲ್ಕು ಜಾಯಿಂಟುವೀಲು, ಪ್ರತಿವರ್ಷ ತೇಲಿಬಿಡೋ ಮುಗಿಲೆತ್ತರ ಹಾರ್ತಿರೋ ಹಳದಿ ಜಾತ್ರಾ ಬಲೂನಲ್ಲದೇ ಹಲಬಣ್ಣದ ಮಿನಿ ಬಲೂನು, ಕೀಲಿ ಕೊಟ್ಟರೆ ತಿರುಗೋ ಬೊಂಬೆ ಕೋಳಿಗಳು, ಹಾರಾಡೋ ಹೆಲಿಕ್ಯಾಪ್ಟರ್ , ಹಾರಿ ಇಳಿದುಬರೋ ಪ್ಯಾರಾಚೂಟ್ಗಳು.. ಹೀಗೆ ಬರೆಯಹೋದರೆ ಮುಗಿವ ಪರಿಯಲ್ಲವೀ ಜಾತ್ರೆ. ಒಂದು ದಿನದಲ್ಲಿ ಹತ್ತಿ ಪೂರೈಸಲಾಗದ . ಮೊಗೆದು ಪೂರೈಸಲಾಗದ ಝರಿಯೀ ಜಾತ್ರೆ. 

ಸಾಗರದ ಪೋಸ್ಟಾಪೀಸು ಸರ್ಕಲ್ಲಿನಿಂದ ಬಲಕ್ಕೆ ತಿರುಗಿದರೆ ಬಸ್ಟಾಂಡು ಎಡಕ್ಕೆ ತಿರುಗಿದರೆ ಮಾರಿಕಾಂಬ ದೇವಸ್ಥಾನದ ಕಡೆಗೆ ಅಂತ ಹೇಳ್ತಾ ಹೊರಟ್ರೆ ಸಾಗರಿಗರೆಲ್ಲಾ ಬಿದ್ದು ಬಿದ್ದು ನಕ್ಕಾರು. ಇವನಿಗೇನಾಗಿದೆ ಅಂತ. ಇಲ್ಲಿ ಹೇಳಹೊರಟಿದ್ದು ಅದಲ್ಲ. ಗುರುವಾರ ಸಂಜೆ ಎಂಟೂವರೆ ಹೊತ್ತಿಗೆ ಆ ಸರ್ಕಲ್ಲಿನಲ್ಲಿ ನಿಂತಿದ್ದಷ್ಟೆ. ಹಿಂದಿನಿಂದ ತಳ್ಳೊರಷ್ಟು ಜನ. ಮುಂದಿಂದ ತಡೆಯೋರಷ್ಟು ಜನ. ನೀವು ಯಾವ ಕಡೆ ಮುಖ ಮಾಡಿ ನಿಂತಿದ್ದೀರೋ ಆ ಕಡೆ ಅಪ್ರಯತ್ನವಾಗೇ ಕಾಲು ಸಾಗಿಬಿಡುತ್ತೆ. ಬಾಲ್ಯದ ಗೆಳೆಯ ನಿಖಿಲ್, ಸುಕ್ಕು, ಜಿಂಗಾಡೆ ಹೀಗೆ ಒಂದು ಹೆಜ್ಜೆ ಮುಂದಿಡುವಷ್ಟರಲ್ಲೇ ಮೂರು ಜನ ಸಿಕ್ಕಬೇಕೇ ? ಅವರನ್ನು ಮಾತಾಡಿಸಿ ಮುಂದೆ ಬರುವಷ್ಟರಲ್ಲಿ ಮತ್ತೊಂದಿಷ್ಟು ಜನ ಗೆಳೆಯರು. ಪ್ರೈಮರಿ, ಮಿಡ್ಲಸ್ಕೂಲು, ಹೈಸ್ಕೂಲು, ಕಾಲೇಜು, ಪದವಿ ಹೀಗೆ ಜೊತೆಗೋದಿದ ಗೆಳೆಯರು, ಜೂನಿಯರ್, ಸೀನಿಯರ್ಗಳು, ಅವರ ಅಕ್ಕ-ತಂಗಿ ಅಣ್ಣತಮ್ಮಂದಿರು, ಅಪ್ಪ ಅಮ್ಮಂದಿರು ಹೀಗೆ ಎಲ್ಲಾ ಸಿಕ್ಕೋದು ಈ ಜಾತ್ರೇಲಿ ಮಾತ್ರವಾ ಅನಿಸಿಬಿಡುತ್ತೆ ಕೆಲೋ ಸಲ. ಅನಿರೀಕ್ಷಿತವಾಗಿ ಎಡತಾಕೋ ನೆಂಟರು, ಅಪ್ಪ ಅಮ್ಮಂದಿರ ಫ್ರೆಂಡುಗಳು, ಗುರುಗಳು.. ಹೀಗೆ ಹಲವು ಅನಿರೀಕ್ಷಿತಗಳ ಭೇಟಿಯನ್ನು ನಿರೀಕ್ಷಿಸೇ ಜಾತ್ರೆಯಲ್ಲಿ ಒಂದೆರಡು ಘಂಟೆ ಸುತ್ತಿದರೂ ತಪ್ಪಿಲ್ಲವೇನೋ. ಅದೇ ದಾರಿಯಲ್ಲಿ ಎರಡು ಸಲ ಹೋಗಿ ಬಂದರೆ ಹಿಂದಿನ ಸಲ ಕಾಣದ ಮಿನಿಮಂ ಹತ್ತು ಹೊಸ ನೆಂಟರೋ ಫ್ರೆಂಡ್ಸೋ ಸಿಗುತ್ತಾರೆ ಅನ್ನೋದು ನನ್ನ ಹಿಂದಿನ ಜಾತ್ರೆಯ ಅನುಭವ !

ಬಾಂಬೆ ಮಿಠಾಯಿ ಅಥವಾ ಪಟ್ಟಣಿಗರ ಬಾಯಿಯ ಕಾಟನ್ ಕ್ಯಾಂಡಿ, ಮೆಣಸಿನ ಜೋಳ ಮತ್ತು ಪೆಪ್ಪರ್ ಕಾರ್ನು!, ತರತರದ ಐಸ್ ಕ್ರೀಂ, ಕಬ್ಬಿನ ಹಾಲು, ಕಲ್ಲಂಗಡಿ, ಪೊಪ್ಪಾಳೆ, ಕರಬೂಜಗಳು. ಮಸಾಲೆ ಮಂಡಕ್ಕಿ, ಮಸಾಲೆಪುರಿ, ಗೋಬಿ, ಗಿರಮಿಟ್, ನಾಲ್ಕು ಕೈ ಸೇರಿಸಿ ಹಿಡಿಯಬೇಕಾದ ಸೈಜಿನ ಹಪ್ಪಳ, ತರ ತರದ ಬೋಂಡಾ, ಭವಿಷ್ಯವಾಣಿ ಹೇಳೋ ರೋಭೋ, ಶಾಸ್ತ್ರದ ಗಿಣಿ, ನಗಿಸೋ ಕನ್ನಡಿಗಳು, ಮಾತಾಡೋ ಕತ್ತೆ ಪನ್ನಾಲಾಲ್ , ಜಾದೂ ಶೋಗಳು ಎಲ್ಲೆಡೆಯಂತೆ ಇಲ್ಲೂ ಇದ್ದರೂ ಅವಕ್ಕೇ  ತರತರದ ಹೆಸರುಗಳು. ಹಿಂದಿನ ಜಾತ್ರೆಯಲ್ಲಿ ಅಮೃತವರ್ಷಿಣಿ ಬಳೆ, ಕಲವು ದಾರಿ ಬ್ಯಾಗು, ಮನೆಯೊಂದು ಮೂರು ಬಾಗಿಲು ಬ್ಲೌಸು ಅನುತ್ತಿದ್ದ ಬಳೆಯಂಗಡಿ  ,ಬಟ್ಟೆಯಂಗಡಿಯವರು ಈಗ ಹೆಸರೆಲ್ಲಾ ಎಲ್ಲಾ ಅನ್ನುವಂತೆ ಈಗಿನ ಧಾರಾವಾಹಿಗಳ ಹೆಸರೊಂದಿಗೆ ಅಪ್ಡೇಟ್ ಆಗಿದ್ದಾರೆ. ಹೃದಯದಿಂದಾ ಮಸಾಲೆಮಂಡಕ್ಕಿ( ಖಾರ ಜಾಸ್ತಿಯಾದ್ರೆ ನೆತ್ತಿಗೆ ಹತ್ತೋದು ಗೊತ್ತು. ಇದ್ಯಾವ ತರ ಹೃದಯದಿಂದವಪ್ಪಾ ಅಂತ ಯೋಚಿಸುತ್ತಲೇ ಒಂದ್ನಾಲ್ಕು ಪ್ಯಾಕೇಟ್ ಜಾಸ್ತಿ ಮಂಡಕ್ಕಿ ಖಾಲಿಯಾಗಿರುತ್ತೆ!), ಪ್ಯಾರೆಲಾಲ್ ಪಾಪ್ ಕಾರ್ನ್, ಶಂಭೋ ಫಲೂದಗಳ ಬದಲು ಅದೇ ಹೆಸರು, ಸವಿಗೆ ಒಂದಿಷ್ಟು ಮಾಡರ್ನ ಹೆಸರುಗಳ, ದೀಪಗಳ ಚಮಕ್ ಕೊಡೋ ಪ್ರಯತ್ನಗಳು ಪರವಾಗಿಲ್ವೇ ಅನಿಸುತ್ತೆ. ಕೇರಳ ಹಲ್ವಾ, ಬೆಳಗಾವಿ ಸ್ಪೆಷಲ್ ಖಾರಾ , ಧಾವಣಗೆರೆ ಸ್ಪೆಷಲ್ ಬೆಣ್ಣೆ ದೋಸೆ, ದೆಲ್ಲಿಯ ಜಾಯಿಂಟ್ ವೀಲು ಹೀಗೆ ಹೇಳೋಕೆ  ಯಾವುದೂ ಲೋಕಲ್ಲಲ್ಲಪ್ಪ. ಎಲ್ಲವೂ ಇಂಪೋರ್ಟೆಡ್ಡು !! ಮುಖ್ಯ ಸಾಲು ಬಿಟ್ಟು ಕೆಳಗೆ ಕಾಲಿಟ್ಟರೆ ಅಲ್ಲಿ ಹವ್ಯಕ ಸಂಘದ ರೊಟ್ಟಿ, ದೋಸೆ ಸ್ಟಾಲು, ಮಹಿಳಾ ಸಂಘದವರ ಮಂಡಕ್ಕಿ, ಮತ್ತೊಂದು ಸ್ವಸಹಾಯ ಸಂಘದವರ ನೆಲ್ಲಿಕಾಯಿ ಸೆಟ್ಟು, ಉಪ್ಪಿನಕಾಯಿ, ಹೀಗೆ ಹಲವು ಉತ್ಪನ್ನಗಳು ಕಾಣೋತ್ತೆ. ಕಾಣೋ ಕಾಮನ್ನು ಸಂಗತಿಗಳ ಬಗ್ಗೇನೇ ಬರದ್ರೆ  ಸಲದ ವಿಶೇಷಗಳ ಬಗ್ಗೆ ಬರೆಯೋದೇಗೆ? ಪ್ರತೀ ಸಲ ಜಾತ್ರೆಗೆ ಹೋದಾಗ್ಲೂ ಎಲ್ಲವೂ ಸ್ಪೆಷಲ್ಲಾಗಿ ಕಂಡ್ರೂ ಈ ಸಲದ ಸ್ಪೆಷಲ್ಲುಗಳು ಅಂತ್ಲೇ ಒಂದಿಷ್ಟಿವಿ. ಪುಟ ತುಂಬಿಬಿಡೋದ್ರೊಳಗೆ , ಓದುಗ ಮಹಾಪ್ರಭು ಬೇಸರಿಸಿ ನಿದ್ರಿಸೋದ್ರೊಳಗೆ ಅದರ ಬಗ್ಗೆ ಬರೆದೇ ಬಿಡುವೆ. 

ಬಸ್ಟಾಂಡ್ ಸರ್ಕಲ್ಲಿನಿಂದ ಜಾತ್ರೆ ಶುರು ಮಾಡುವಾಗ ಮೊದಲು ಕಣ್ಣಿಗೆ ಬಿದ್ದಿದ್ದು ಉಲ್ಲನ್ನಿನ್ನ ತೋರಣಗಳು. ಹಸಿರು-ಬಿಳಿ, ಹಳದಿ-ಹಸಿರು, ಬಿಳಿ-ಪಿಂಕು, ನೇರಳೆ.. ಹೀಗೆ ಹಲವು ಬಣ್ಣಗಳಲ್ಲಿ ಮಿಂಚುತ್ತಿದ್ವು. ಹಿಂದಿನ ಮಾರಿ ಜಾತ್ರೆಯಲ್ಲಿ ಕಾಣದಿದ್ದ ಹೊಸ ಟ್ರೆಂಡಿದು. . ಮೊದಲು ಸ್ವಲ್ಪ ದೊಡ್ಡದ್ದಕ್ಕೆ ನೂರು ರೂ ಕೊಟ್ಟು ತಗಂಡಾಯ್ತು. ಮತ್ತೆ ಸ್ವಲ್ಪ ಮುಂದೆ ಬಂದಾಗ ಮತ್ತೆ ಕಣ್ಣು ಸೆಳೆದಿದ್ದು ಮತ್ತಿದೇ ತೋರಣ. ಮೊದಲಿನದಕ್ಕಿಂತ ಸ್ವಲ್ಪ ಸಣ್ಣದಂತೆ ಕಂಡರೂ ಬೇರೆ ಬೇರೆ ಆಕರ್ಷಕ ಡಿಸೈನು. ಮನಸ್ಸು ತಡೆಯಲಾರದೇ ಎಷ್ಟಂತ ಕೇಳೇಬಿಟ್ರು ಅಮ್ಮ. ನೂರೆಂದ್ಲು ಮಾರುತ್ತಾ ಕೂತಿದ್ದವಳು.. ಎಪ್ಪತ್ತಕ್ಕೆ ಕೇಳೋಣ್ವಾ ಅಂದೆ ಅಮ್ಮಂಗೆ. ತಡಿ ಒಂದ್ನಿಮ್ಷ ಅಂತ ಐವತ್ತಕ್ಕೆ ಕೊಡ್ತೀಯಾ ಅಂದ್ರು ಅಮ್ಮ. ಅವ್ಳು ಹೇಗಿದ್ರೂ ಇಲ್ಲ ಅಂತಾಳೆ , ಮುಂದೆ ಹೋಗಬಹುದು ಅಂತ ಅಮ್ಮ ಹೀಗಂತಿದಾರೆ ಅಂತ ನನ್ನ ಆಲೋಚನೆ. ಆಕೆ ಅದನ್ನ ಕೊಟ್ಟೇ ಬಿಡೋದೆ ಐವತ್ತಕ್ಕೆ ?  ಅರೇ ಇದೇ ತರದ್ದಕ್ಕೆ ನೂರು ಕೊಟ್ವಲ್ಲಾ ಅಂತ ಬೇಜಾರಾದ್ರೂ ಹೋಗ್ಲಿ ಬಿಡು ಕಷ್ಟಪಟ್ಟು ದುಡೀತಿದಾರೆ ಬದುಕಿಕೊಳ್ಲಿ , ಆಗ ತಗಂಡಿದ್ದು ಸ್ವಲ್ಪ ದೊಡ್ಡದಿತ್ತು. ಹಾಗಾಗಿ ಅದಕ್ಕೆ ಎಂಭತ್ತು ಕೊಡಬಹುದಿತ್ತೇನೋ. ನೂರು ತೀರಾ ಜಾಸ್ತಿಯಾಗಲಿಲ್ವೇನೋ ಅಂತನೇಕ ಸಮಾಧಾನಗಳು ಹೊಕ್ಕು ಹೊರಟವು.ಇಲ್ಲೊಂದೇ ಅಲ್ಲದೇ ಜಾತ್ರೆಯ ತುಂಬೆಲ್ಲಾ ಇವನ್ನೇ ಹೊತ್ತು ಮಾರುತ್ತಿದ್ದ ಬಯಲು ಸೀಮೆಯ ಹಲವು ಮಂದಿ ಆಮೇಲೆ ಕಂಡದ್ದು ಚಿತ್ತಾಕರ್ಷಕ ದೊಡ್ಡ ದೊಡ್ಡ ಡಿಸೈನುಗಳಿಗೆ ಇನ್ನೂರವೈತ್ತರವರೆಗೆ ರೇಟು ಹೇಳುತ್ತಿದ್ದುದು ಬೇರೆ ಮಾತು.

ಹಂಗೇ ಕನ್ನಡಕದ, ಗೊಂಬೆಗಳ, ಹಚ್ಚೆ ಹಾಕಿಸುವವರ, ಜಟ್ ಫಟ್ ಮೆಹಂದಿಯವರ, ಖುರ್ಚಿ ಕೊಟ್ಟು ದೋಸೆ ತಿನ್ನಿಸುವವರ, ಕೋವಿ ಕೊಟ್ಟು ಬಲೂನಿಗೆ ಗುಂಡಿಡಿಸುವವರ, ಮೂವತ್ರೂಪಾಯಿ ಪಾತ್ರೆ, ನೂರಿಪ್ಪತ್ತರ ಚಪ್ಪಲಿ, ಯಾವದು ತಗೊಂಡ್ರೂ ಇನ್ನೂರೈವತ್ತು ಗ್ರಾಂಗೆ ಎಪ್ಪತ್ತು ಅನ್ನೋ ಕೇರಳದ ಸ್ವೀಟ್ಗಳ, ಎಳನೀರು, ಕಲ್ಲಂಗಡಿ, ಚೈನಲ್ಲಿ, ರಿಸ್ಟ್ ಬ್ಯಾಂಡಲ್ಲಿ, ಮಣಿಗಳಲ್ಲಿ ಹೆಸರು ಪೋಣಿಸಿ ಕೊಡುವವರ, ಐ ಲವ್ ಯೂ ಇಂದ ಐ ಮಿಸ್ ಯೂವರೆಗೆ ಹಲ ಬರಹದ ಬಲೂನ್ ಮಾರುವವರ, ಬೆಂಡು ಬತ್ತಾಸು ಜಿಲೇಬಿ ಖಾರಾ ಸೇವುಗಳ ಸಿಹಿಯಂಗಡಿಗಳ ದಾಟಿ ಸೀದಾ ಮುಂದೆ ಹೋದ್ರೆ ಮಾರಿಕಾಂಬೆಯ ದೇಗುಲದ ಲೈಟುಗಳು ಕಾಣುತ್ವೆ. ಅಲ್ಲೇ ಎಡದಲ್ಲಿ ಅನ್ನಸಂತರ್ಪಣೆಯ ಜಾಗ. ಸೀದಾ ಮುಂದೆ ಹೋದ್ರೆ ದೇಗುಲದ ಗೋಪುರಗಳನ್ನೂ ಬಿಡದಂತೆ ಲೈಟಿನ ಸರಗಳದ್ದೇ ಪೆಂಡಾಲು. ಆ ಪೆಂಡಾಲಿನ ಒಂದು ಬದಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ತಬಲಾ, ಭಜನೆ ಹೀಗೆ ಪ್ರತಿದಿನವೂ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ದೇಗುಲದ ಮುಖ್ಯ ದ್ವಾರದಲ್ಲಿ ದೇವಿ ಮಾರಿಕಾಂಬೆ. ಬೆಳಿಗ್ಗೆ ಏಳರಿಂದ ರಾತ್ರೆ ಹತ್ತರವರೆಗೆ ಭಕ್ತರ ದರ್ಶನಕ್ಕೆ ತೆರೆದಿರೋ ಆಕೆಯ ಕೆಂಪಗಿನ ಮೂರ್ತಿಯ ದರ್ಶನಕ್ಕೆ ಪ್ರತೀ ಬಾರಿಯೂ ನೂಕು ನುಗ್ಗಲಿದ್ದರೂ ನಿಯಂತ್ರಣಕ್ಕೆ ಸಾಕಷ್ಟು ಪೋಲಿಸರು, ಕ್ಯೂ ಪದ್ದತಿ ಇರೋದ್ರಿಂದ ಸಾವಕಾಶವಾಗಿ ದೇವಿಯ ದರ್ಶನ ಪಡೆಯೋಕೆ ತೊಂದರೆಯಿಲ್ಲ. 

ಸೋಪಿನ ನೊರೆಯಿಂದ ಗುಳ್ಳೆ ಮಾಡೋದು ಹಳೆದಾಯಿತು. ಈಗ ಪ್ಲಾಸ್ಟೀಕ್ ಅಂಟುಗುಳ್ಳೆಗಳ ಕಾಲ ! ಪ್ಲಾಸ್ಟೀಕಿನ ಅಂಟನ್ನ ಉಬಿಸಿ ಅದನ್ನ ಅದೇ ಸೋಪಿನ ಗುಳ್ಳೆ ಊದಲಿದ್ದದ್ದೇ ತರದ ತೆಳ್ಳನೇ ಊದುಕೊಳೊವೆಯಿಂದ ಊದಿ ಗುಳ್ಳೆ ಮಾಡೋದು ಈ ಜಾತ್ರೆಯ ಮತ್ತೊಂದು ಆಕರ್ಷಣೆ. ಆ ಗುಳ್ಳೆಗಳು ಒಂದಕ್ಕೊಂದು ಅಂಟೋದು ಮತ್ತೊಂದು ಆಕರ್ಷಣೆ. ಒಂದು ಪ್ಯಾಕಿನಲ್ಲಿ ಇಪ್ಪತ್ತು ಗುಳ್ಳೆಯಾಗುತ್ತೆ , ಇಷ್ಟೇ ರೂಪಾಯಿ  ಅಂತ ಮಾರ್ತಿದ್ರೆ ತಳೊಳ್ಲೇಬೇಕು ಅನಿಸುವಂತೆ ನಯ ಅವರ ಮಾತು. ಪೀಂ ಪೀವ್ ಅಂತ ಸಂಗೀತ ನುಡಿಸುತ್ತಾ ಸಾಗುತ್ತಿದ್ದ ಒಂದು ತಂತಿಯ ತಂಬೂರಿಗಳು, ಕಹೋನಾ ಪ್ಯಾರ್ ಹೈ ಕೊಳಲಿಗರು, ಢಂ ಢಂ ಡಿಗಾಡಿಗಾ ಜಾತ್ರೆ ತಬಲಿಗರು.. ಹೀಗೆ ಮಕ್ಕಳನ್ನು ಸೆಳೆಯೋ ಹಲವು ವಾದ್ಯದವರು ಜೊತೆಜೊತೆಗೇ ಸಾಗ್ತಿರುವಾಗ ಗೆಳೆಯರ ದಂಡು ಆಗಾಗ ಎಡತಾಕ್ತಿದ್ದರು. ಸುಮುಖ, ವಿನಯ, ತಿಮ್ಮಪ್ಪ, ಶ್ರೀವತ್ಸ, ಶ್ರೀಶ, ಕಾರ್ತೀಕ, ಹರೀಶ, ಯಾಲಕ್ಕಿ, ವಿಕ್ರಮಣ್ಣ, ಸಮರ್ಥ, ಗೌತಮ ಹೀಗೆ ಸಿಕ್ಕವರು ಹಲವರು. ಕೆಲವು ಹಿರಿಯರು ಸಿಗದೇ ವರ್ಷಗಳೇ ಆಗಿ ಆರಾಮ ಆರಾಮು ಎಂಬ ಮಾತುಕತೆಗಳೇ ಮತ್ತೆ ಪರಿಚಯ ನೆನಪಿಸಿಕೊಟ್ಟಿದ್ದೂ ಆಯ್ತು ಈ ಜಾತ್ರೆಯಲ್ಲಿ. ಎಲ್ಲೂ ಸಿಗದ ಜನ ಈ ಜಾತ್ರೆಯಲ್ಲಾದ್ರೂ ಸಿಕ್ಕಿ ಮತ್ತೆ ಸಂಬಂಧದ ಕೊಂಡಿಗಳು, ನೆಂಟಸ್ತಿಕೆಯ ನಂಟುಗಳು ಮತ್ತೆ ಗಟ್ಟಿಯಾಗುತ್ತೆ ಅಂದ್ರೆ ಈ ತರದ ಜಾತ್ರೆಗಳು ಆಗಾಗ ಬರ್ತಿರಬೇಕು ಅನಿಸ್ತು.

ಈ ಸಲ ಜಾತ್ರೆಯ ಮತ್ತೊಂದು ವಿಶೇಷತೆ ಕುಮಾರೇಶ್ವರ ನಾಟಕ ಮಂಡಳಿಯ ನಾಟಕ. ಮುಂಚಿನ ಜಾತ್ರೆಗಳಲ್ಲೂ ನಾಟಕ ಬರ್ತಿತ್ತೋ ಆದ್ರೆ ನಾವು ಹೋಗ್ತಿರಲಿಲ್ಲ ಅಷ್ಟೇ ಮಗಾ ಅಂತ ಅಮ್ಮ ಅಂದ್ರೂ ನಂಗ್ಯಾಕೋ ಆ ಕಡೆ ತಲೆಹಾಕೂ ನೆನಪಿರಲಿಲ್ಲ. ಈ ಸಲದ ನಾಟಕಗಳು ಸಖತ್ ಚೆನ್ನಾಗಿವೆ . ಒಂದ್ಸಲ ನೋಡ್ಲೇಬೇಕು ಅನ್ನೋ ನೋಡಿದವರ ಮಾತಿನ ಮೇಲೆ ನಾಟಕ ನೋಡ್ಲೇಬೇಕು ಅನ್ನೋ ಮೂಡು ಬಂದುಬಿಟ್ಟಿತ್ತು. ಆರು ಘಂಟೆಗೆ ನಾಟಕ ಅಂತ ಬಂದವರಿಗೆ ಆರೂವರೆಗೆ ಅದು ಅಂತ ಗೊತ್ತಾಯ್ತು. ಅಲ್ಲಿಯವರೆಗೆ ಅಲ್ಲೇ ಪಕ್ಕದಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನೋಡಿದ್ದಾಯ್ತು. ನಾವು ನೋಡಹೋದಾಗ ನವೀನ್ ಪವಾರ್ ಹಾರ್ನಹಳ್ಳಿ ಮತ್ತು ರಾಜು ಕೊಲ್ಲಾಪುರ ಅನ್ನುವವರ ನಡುವೆ ಕುಸ್ತಿ ನಡೆಯುತ್ತಿತ್ತು. ಸುಮಾರು ಹತ್ತು ಹನ್ನೆರಡು ನಿಮಿಷ ನಡೆದ ಪಂದ್ಯದಲ್ಲಿ ಕೊನೆಗೆ ಹಾರ್ನಳ್ಳಿ ನವೀನ್ ವಿಜಯಿಗಳಾದ್ರು. ಎಸ್ ಎಲ್ ಭೈರಪ್ಪನವರ ಒಂದು ಕಾದಂಬರಿಯೇ ಈ ಕುಸ್ತಿ ಪಂದ್ಯಗಳ ಬಗ್ಗೆ ಇದೆ ಅಂತ ಓದಿದ್ದಾದ್ರೂ ಈ ಕುಸ್ತಿಯನ್ನು ಹೈಸ್ಕೂಲಿನಲ್ಲಿದ್ದಾಗ ಶಿವಮೊಗ್ಗ ರಸ್ತೆಯ ಗಾಂಧಿ ಮೈದಾನದಲ್ಲಿ, ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ದಸರಾ ಕುಸ್ತಿಯನ್ನು ನೋಡಿದ್ದೇ ಕೊನೆಯಾಗಿತ್ತು. ಆಮೇಲೇನಿದ್ರೂ ಕುಸ್ತಿಯೆಂದರೆ ಟೀವಿ ಮತ್ತು ಪೇಪರಿನಲ್ಲಷ್ಟೇ. ಈ ಮಣ್ಣಿನಾಟದ ಝಲಕ್ ಮತ್ತೆ ಕಂಡಿದ್ದು ಜಾತ್ರೆಯಲ್ಲಿ. ಅಂದಾಗೆ ನಾಟಕದ ಬಗ್ಗೆ ಬರೋದಾದ್ರೆ ನಾವು ಹೋದ ದಿನ( ೨೨ ಫೆಬ್ರವರಿ) ನಡೆದಿದ್ದು ಮುದುಕನ ಮದುವೆ ಅನ್ನೋ ಹಾಸ್ಯ ನಾಟಕ.  ರಾಜ್ಯ ಪ್ರಶಸ್ತಿ ಪಡೆದ ಕುಮಾರ ಸ್ವಾಮಿ ಅನ್ನುವವರು ಮುದುಕನಾಗಿ ಪ್ರಧಾನ ಆಕರ್ಷಣೆ ಅಂತ ಇದ್ರೂ ನಾಟಕದ ಉಳಿದ ಪಾತ್ರಧಾರಿಗಳು, ಒಟ್ಟಾರೆ ಕತೆ, ಮಧ್ಯ ಮಧ್ಯ ಬರೋ ಹಾಡುಗಳು, ಜನಾರ್ಧನ ರೆಡ್ಡಿಯನ್ನೂ ಬಿಡದ ಶನಿಮಹಾತ್ಮ, ಈ ಮುಖ ನೋಡು ಇದು ಬೆಂಗಳೂರು, ಇದು ನೋಡು ಕೆಂಪೇಗೌಡ, ಇದು ಕಬ್ಬನ್ ಪಾರ್ಕು ಅನ್ನುತ್ತಾ ಬದಲಾಗುತ್ತಿರೋ ಸನ್ನಿವೇಶದಲ್ಲಿ ಬದಲಾಗಲೇ ಬೇಕಾದ ಅನಿವಾರ್ಯತೆಯನ್ನ ಸಹಜವಾಗೇ ಮೆಟ್ಟಿನಿಂತಿದೆಯಾ ನಾಟಕ ಅನ್ನಿಸಿ , ಅದು ಅಳಿಯದೇ ಉಳಿಯುತ್ತಿರೋ ಪರಿಯ ಬಗ್ಗೆ ಹೆಮ್ಮೆಯನ್ನಿಸ್ತಿತ್ತು. , ಹೊಟ್ಟೆ ನೋಡಿದ್ರೆ ಭಾರತ ಅಂದವನಿಗೆ ಕೆಳಗೆ ನೋಡಿದ್ರೆ ಶ್ರೀಲಂಕಾ ಅನ್ನೋ ಡಬಲ್ ಮೀನಿಂಗ್ ಡೈಲಾಗುಗಳು, ನಿನ್ನಿಂದಲೇ ನಿನ್ನಿಂದಲೇ ಅಂತ ಮಧ್ಯ ಮಧ್ಯ ಬರೋ ಮಾಡರ್ನ್ ಸಿನಿಮಾ ಹಾಡುಗಳು, ಸಾಮಾಜಿಕ ನಾಟಕದ ನಡುವೆ ಬರುವ ಮಹಿಷಾಸುರುನ ಪ್ರಸಂಗದ ಹಳೇ ತಲೆಮಾರಿನ ಶೈಲಿಯ, ಅಚ್ಚಗನ್ನಡದ ಒಂದೇ ಉಸಿರಿನ , ಮಾರುದ್ದ ಡೈಲಾಗುಗಳು , ಹಳೇ ಸೆಟ್ಟುಗಳ ನಡುವೆ ಅದೇ ರಿದಂ ಪ್ಯಾಡನ್ನು ಮ್ಯೂಸಿಕ್ಕಿಗೂ , ತಬಲವಾಗಿಯೂ , ಕೋಗಿಲೆಯಾಗಿಯೂ, ನಾಯಿಯ ಬೌ ಬೌ ಆಗಿಯೂ ಫ್ರೀಕ್ವೆನ್ಸಿ ಬದಲಾಯಿಸಿ ಬಳಸೋ ತಂತ್ರಜ್ಞಾನ .. ಹೀಗೆ ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಅಂತನಿಸುತ್ತಿತ್ತು. ಹೊರಬರುವಾಗ ನಾಟಕದ ಆರಂಭಗೀತೆ ಕನ್ನಡ ನಾಟ್ಯಕಲೆಯು ಬೆಳೆಯಲಿ, ಕುಮಾರೇಶ್ವರ ನಾಟ್ಯಕುಸುಮ ಅರಳಲಿ ಅಂತ ನೆನಪಾಗಿ ೧೯೭೧ರಿಂದ ಇಲ್ಲಿಯವೆರೆಗೆ ಕಲಾಸೇವೆಗಯ್ಯುತ್ತಾ ಬಂದಿರುವ ನಾಟಕ ಕಂಪೆನಿಯನ್ನು ಬೇಷೆನ್ನದೇ ಇರಲು ಮನಸ್ಸಾಗಲಿಲ್ಲ. ಕಾರ್ತವೀರ್ಯಾರ್ಜುನ ಹೀಗೆ ಹಲವು ಪ್ರಸಂಗಗಳ ಯಕ್ಷಗಾನಗಳೂ ಜಾತ್ರೆಯ ಸಮಯದಲ್ಲಿ ನಡೆಯುತ್ತಿದೆ ಅಂತ ಕೇಳಿದೆನಾದ್ರೂ ಅವತ್ತೇ ಹೋಗೋ ಸಮಯವಾಗಲಿಲ್ಲ. ೬:೩೦ ಮತ್ತು ೧೦:೦೦ ರ ಶೋಗಳಲ್ಲಿ ಆರೂವರೆಯ ಶೋಗೆ ಹೋಗಿದ್ದರಿಂದ ಅದು ಮುಗಿಯೋದೆ ಹೊತ್ತಾಗಿ ಮನೆ ಸೇರೋ ಹೊತ್ತಾಗಿತ್ತು.

ಇನ್ನು ಹೆಂಡತಿಯನ್ನು ಹೆಚ್ಚು ಪ್ರೀತಿಸಿರೋರು ಯಾರು ಹೇಳೋ ಪನ್ನಾಲಾಲ್ ಅಂದ್ರೆ ಒಬ್ಬರ ಬಳಿ , ಇವರಲ್ಲಿ ಜಾಸ್ತಿ ಸುಳ್ಳು ಹೇಳೋರು ಯಾರು ಹೇಳೋ ಅಂತ ತರ ತರದ ಪ್ರಶ್ನೆಗಳಿಗೆ ಒಬ್ಬೊಬ್ಬರ ಬಳಿ ಬಂದು ನಿಲ್ಲೋ ಕತ್ತೆ ಪನ್ನಾಲಾಲ್, ರಿಂಗ್ ಓಡಿಸೋ ನಾಯಿ, ಗಿಳಿಗಳದ್ದೊಂದು ಶೋ ಆದ್ರೆ ದೂರದ ಗಣಪತಿ ಕೆರೆ ಬಯಲಲ್ಲಿ ಪ್ರಭಾತ್ ಸರ್ಕಸ್ಸು. ಒಂದೇ ದಿನ ಎಲ್ಲಾ ನೊಡೋದೆಲ್ಲಿ ಸಾಧ್ಯ. ಸರ್ಕಸ್ಸಿನ ಬಗ್ಗೆ ಕೇಳಿದ್ದಾಯಿತು. ಇನ್ನೊಂದು ದಿನ ಹೋಗಬೇಕಷ್ಟೇ ಆಲ್ಲಿಗೆ. ಬಾವಿಯೊಳಗೆ ಜೀವ ಪಣಕ್ಕಿಟ್ಟು ಓಡಿಸುತ್ತಿದ್ದಾರೇನೋ ಎನಿಸುವಂತೆ ಕೈ ಬಿಟ್ಟು, ಕಾಲು ಬಿಟ್ಟು ಬೈಕು ಕಾರು ಓಡಿಸುವವರು, ಮೇಲೊರಿಗೂ ಬಂದು ದುಡ್ಡು ಇಸಿದುಕೊಂಡು ಓಡಿಸುವವರು ಹೀಗೆ ಬಾವಿಯೊಳಗಿನ ಬೈಕಿನದು ಮೈ ನವಿರೇಳಿಸೋ ಸಾಹಸ. ಮುಂಚೆಯೆಲ್ಲಾ ಒಂದು ಜಾಯಿಂಟ್ ವೀಲು, ಒಂದೆರಡು ಸಣ್ಣ ತೊಟ್ಟಿಲುಗಳು, ಕೊಲಂಬಸ್ ಇತ್ಯಾದಿಗಳು ಬರುತ್ತಿದ್ದವು. ಈ ಸಲ ಜಾಯಿಂಟ್ ವೀಲೇ ನಾಲ್ಕು. ಕೋಲಂಬಸ್ನ ಜೊತೆಗೆ ಅವನ ತಮ್ಮ ಸೋಲಂಬಸ್, ಅಕ್ಟೋಪಸ್, ಗ್ಲಿಫಿ, ಚಾಂದಾ ಶೋ ಅಂತ ಹೆಸರೇ ಕೇಳದ ಹಿಂದೆಲ್ಲೂ ಕಂಡಿರದ ಒಂದಿಷ್ಟು ಆಟಗಳು. ವರ್ಷ ಹೋದಂಗೂ ಜನರನ್ನು ಸೆಳೆಯೋಕೆ ಹೊಸ ಹೊಸ ತರದ್ದು ಎಲ್ಲಿಂದ ಕಂಡು ಹಿಡಿತಾರಪ್ಪಾ ಇವ್ರು ಅನಿಸ್ತು ಒಮ್ಮೆ. ಮಕ್ಕಳಾಟದ್ದೂ ಕಮ್ಮಿಯಿಲ್ಲ. ಕಾರು, ಕುದುರೆ, ರೈಲು, ಮಿಕ್ಕಿ ಮೌಸ್ ಜಾರು ಬಂಡಿ, ಹೀಗೆ ಬರೆದಷ್ಟೂ ಇವೆ. ಯಾವ್ಯಾವ ತರದ ಅಂಗಡಿಗಳು ಸಾಗರ ಜಾತ್ರೆ ಮೈದಾನದ ಯಾವ್ಯಾವ ಮೂಲೆಯಲ್ಲಿದ್ವು, ಯಾರ್ಯಾರು ಸಿಕ್ಕಿ ಏನೇನು ಮಾತಾಡಿದ್ರು ಅಂತ ಬರದ್ರೆ ಅದೇ ಒಂದೊಡ್ಡ ಪ್ರಸಂಗವಾಗಿಬಿಡಬಹುದೇನೋ.. ಅದೇ ಹೇಳ್ತಾರಲ್ಲ ಜನ ಮರುಳೋ, ಜಾತ್ರೆ ಮರುಳೋ ಅಂತ.. ಸದ್ಯಕ್ಕೆ ಸುಸ್ತಾಗಿದೆ. ಇನ್ನೊಮ್ಮೆ ಯಾವುದಾದ್ರೂ ಜಾತ್ರೇಲಿ ಸಿಕ್ಕಾಗ್ಲೇ ಮಾತಾಡೋಣಂತೆ ಇದ್ರ ಬಗ್ಗೆ. ಅಲ್ಲೀವರ್ಗೆ ವಿರಾಮ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಸಾಗರದ ಮಾರಿಕಾಂಬ ಜಾತ್ರೆ: ಪ್ರಶಸ್ತಿ ಪಿ.

  1. ಸಾಗರದಲ್ಲೇ ಇದ್ದು ಜಾತ್ರೆಗೆ ಹೋಗದ
    ನನಗೆ ಸಾಕ್ಷಾತ್ ಜಾತ್ರೆಯ ದಶ೯ನವಾಯಿತು

Leave a Reply

Your email address will not be published. Required fields are marked *