ಸಾಂಸ್ಕೃತಿಕ ವೀರ ಮೈಲಾರಲಿಂಗ ಪುಸ್ತಕ ವಿಮರ್ಶೆ: ಪ.ನಾ.ಹಳ್ಳಿ.ಹರೀಶ್ ಕುಮಾರ್

ಪುಸ್ತಕ ವಿಮರ್ಶೆ
ಪುಸ್ತಕದ ಶೀರ್ಷಿಕೆ;- ಸಾಂಸ್ಕೃತಿಕ ವೀರ ಮೈಲಾರಲಿಂಗ
ಲೇಖಕರು:- ಡಾ.ಚಿಕ್ಕಣ್ಣ ಯಣ್ಣೆಕಟ್ಟೆ.
ಪ್ರಕಾಶನ:- ಗಡಿನಾಡ ಜಾನಪದ ಸಂಪರ್ಕಾಧ್ಯಯನ ಕೇಂದ್ರ ಪ್ರತಿಷ್ಠಾನ. ಕಾಳಿದಾಸ ನಗರ. ಸಿರಾ. ತುಮಕೂರು ಜಿಲ್ಲೆ.
ಬೆಲೆ:- 150ರೂ
ಪ್ರಥಮ ಮುದ್ರಣ: 2019
ಪುಟಗಳು: 214

ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ವಿರಚಿತ ಸಾಂಸ್ಕೃತಿಕ ವೀರ ಮೈಲಾರಲಿಂಗ ಕೃತಿಯು ಕ್ಷೇತ್ರ ಕಾರ್ಯಾಧಾರಿತ ಅಧ್ಯಯನದಿಂದ ಸಂಗ್ರಹಿಸಿದ ಪ್ರತ್ಯಕ್ಷ ಸಾಕ್ಷಿಯಾಧಾರಿತ ಮಾಹಿತಿಗಳನ್ನೊಳಗೊಂಡ ರಚನೆಯಾಗಿದ್ದು ನಾಡಿನ ಸಾಂಸ್ಕೃತಿಕ ಹಾಗೂ ಜನಪದ ದೈವ ಮೈಲಾರಲಿಂಗಪ್ಪನ ಐತಿಹ್ಯ ಕುರಿತಾದ ಸಂಪೂರ್ಣ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.

ಸುಮಾರು ಆರು ದೀರ್ಘ ಅಧ್ಯಯನಗಳನ್ನೊಳಗೊಂಡ ಈ ಕೃತಿಯಲ್ಲಿ ಪ್ರತೀ ಅಧ್ಯಾಯವೂ ಉಪಶೀರ್ಷಿಕೆಗಳೊಂದಿಗೆ ಹಂತಹಂತವಾಗಿ ಸಂಪೂರ್ಣ ಮಾಹಿತಿ ಕ್ರೂಡೀಕರಿಸುತ್ತಾ ಸಾಗಿದೆ. ಜನಪದರ ಪ್ರಕಾರ ಮೈಲಾರಲಿಂಗನ ಐತಿಹ್ಯವನ್ನು ಸರ್ಪಣಿ ಬಂಧನ, ತಿರುಪತಿ ತಿಮ್ಮಪ್ಪನೊಂದಿಗಿನ ಏಳುಕೋಟಿ ಸಾಲದ ಪ್ರಸಂಗಗಳ ಮೂಲಕ ಮಾರ್ಮಿಕವಾಗಿ ಒಡಮೂಡಿಸಲು ಪ್ರಯತ್ನಿಸಲಾಗಿದೆ. ಮೈಲಾರಲಿಂಗನ ಚರಿತ್ರೆಯ ಅಧ್ಯಯನದಲ್ಲಿ ಬರುವ ಪ್ರತ್ಯಕ್ಷ ಸಾಕ್ಷಿ ಮಂಡ್ಯಜಿಲ್ಲೆಯ ಮದ್ದೂರು ತಾಲ್ಲೂಕಿನ ಆತಕೂರಿನಲ್ಲಿನ ನಾಯಿಯ ಸಮಾಧಿ ಮತ್ತು ಶಾಸನವು ಅಚ್ಚರಿಯನ್ನುಂಟುಮಾಡುತ್ತದೆ. ಈಗಲೂ ಅದಕ್ಕೆ ಪೂಜೆ ನೆರವೇರಿಸುತ್ತಿರುವುದು ವಿಸ್ಮಯವೆನಿಸುತ್ತದೆ.

ಚರಿತ್ರೆಯನ್ನಷ್ಟೇ ಹೇಳಿ ಸುಮ್ಮನಾಗದೇ ಗೊರವರು, ಗೊರವರ ಧೀಕ್ಷಾ ಪದ್ಧತಿಗಳು, ಅವರ ಶವ ಸಂಸ್ಕಾರಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಮಹಿಳೆಯರಿಗೂ ಗೊರವಿ ಧರ್ಮಧೀಕ್ಷೆ ನೀಡಿದ ವಿಶೇಷವು ಮೈಲಾರಲಿಂಗನ ಒಕ್ಕಲಿನ ಪರಂಪರೆಯದ್ದಾಗಿದೆ.ಮೈಲಾರಲಿಂಗನ ಉತ್ಸವಗಳಲ್ಲಿನ ಕಾರಣಿಕ, ದೋಣಿಸೇವೆ, ಸರ್ಪಣಿ ಪವಾಡ ಮತ್ತು ಹಲ್ಲುಮರಿ ಸೇವೆಗಳನ್ನು ಇಂದಿಗೂ ಆಚರಿಸುತ್ತಿರುವುದು ಲೇಖಕರ ಅಧ್ಯಯನಕ್ಕೆ ಸಾಕಷ್ಟು ಇಂಬು ನೀಡಿವೆ. ಬಹುತೇಕ ಮೈಲಾರಲಿಂಗನ ಧಾರ್ಮಿಕ ಕ್ಷೇತ್ರಗಳಿಗೆ ಮುಖತಃ ಭೇಟಿ ನೀಡಿ, ಪ್ರತ್ಯಕ್ಷ ವರದಿ ಸಂಗ್ರಹಿಸುವಲ್ಲಿ ಡಾ.ಚಿಕ್ಕಣ್ಣ ಯಣ್ಣೆಕಟ್ಟೆಯವರ ಶ್ರಮ ಎದ್ದು ಕಾಣುತ್ತದೆ.

ಮೈಲಾರಲಿಂಗನ ಲಾಂಛನಗಳಾದ ಆಲದಮರ, ನಾಯಿ, ಕವಡೆ, ದೋಣಿ, ಭಂಡಾರ,ಢಮರುಗದ ಕುರಿತು ಪ್ರತಿಯೊಂದನ್ನೂ ಐತಿಹಾಸಿಕ ಕಥಾವಳಿಗಳೊಂದಿಗೆ ವಿವರಿಸಿರುವುದು ಲೇಖಕರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಮಣಿಕಾಸುರ ಮತ್ತು ಮಲ್ಲಾಸುರರೊಂದಿಗಿನ ಭೀಕರ ಯುದ್ಧಗಳಾಗಿರಬಹುದು ಅಥವಾ ಮಾಳವ್ವನೊಂದಿಗಿನ ಸರಸ ಸಲ್ಲಾಪಗಳಾಗಿರಬಹುದು. ಲೇಖಕರು ಎಲ್ಲವನ್ನೂ ರಂಜನೀಯವಾಗಿ ಚಿತ್ರಿಸಿದ್ದಾರೆ.ನಾಡಿನ ಪ್ರಖ್ಯಾತ ಗೊರವ ಕಲಾವಿದರು ಮತ್ತು ಮೈಲಾರಲಿಂಗನ ಮಹಾಕಾವ್ಯ ಹಾಡುಗಾರರ ಸಂಕ್ಷಿಪ್ತ ಪರಿಚಯವನ್ನೂ ಉಲ್ಲೇಖಿಸಲಾಗಿದೆ.ಮೈಲಾರಲಿಂಗನ ಸಮಗ್ರ ಪರಿಚಯವನ್ನು ಶಾಸನ, ಶಾಸ್ತ್ರಗ್ರಂಥ, ಜನಪದರ ಮೂಲಕ ಶೋಧಿಸುವ ಮೂಲಕ ಈ ಗ್ರಂಥವು ಮೈಲಾರಲಿಂಗನ ಕುರಿತಾದ ಇತರೆಲ್ಲಾ ಗ್ರಂಥಗಳಿಗಿಂತಾ ಭಿನ್ನವಾಗಿದೆ.

-ಪ.ನಾ.ಹಳ್ಳಿ.ಹರೀಶ್ ಕುಮಾರ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x